ಸಂಸ್ಮರಣೆ
ಡಾ.ಸತೀಶಕುಮಾರ ಎಸ್.ಹೊಸಮನಿ
ಪ್ರತಿ ವರ್ಷ ಆಗಸ್ಟ್ ೧೨ರಂದು ಗ್ರಂಥಪಾಲಕರ ದಿನವನ್ನು ಆಚರಿಸಲಾಗುತ್ತದೆ. ಇಂದಿನ ಡಿಜಿಟಲ್ ತಂತ್ರ ಜ್ಞಾನದ ಯುಗದಲ್ಲಿಯೂ ಗ್ರಂಥಾಲಯಗಳ ಮಹತ್ವ ಇನ್ನೂ ಉಳಿದುಕೊಂಡಿದೆ ಎಂದರೆ, ‘ಗ್ರಂಥಾಲಯ ವಿಜ್ಞಾನದ ಪಿತಾಮಹ’ ಎಂದೇ ಹೆಸರಾಗಿದ್ದ ಡಾ. ಎಸ್.ಆರ್.ರಂಗನಾಥನ್ ಅವರೇ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು.
ಹೀಗಾಗಿ ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಪ್ರತಿಯೊಂದು ಜೀವಿಗೂ ಬದುಕಲು ಗಾಳಿ-ನೀರು- ಆಹಾರ-ಬೆಳಕು ಮುಖ್ಯ. ಹಾಗೆಯೇ ಮನುಷ್ಯನು ಮನುಷ್ಯತ್ವದೊಂದಿಗೆ ನಡೆದುಕೊಳ್ಳಬೇಕೆಂದರೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದರೆ, ಮನುಷ್ಯನ ವ್ಯಕ್ತಿತ್ವ ಸಕಾರಾತ್ಮಕವಾಗಿ ಬದಲಾಗಿ ಆತನ ಸರ್ವತೋಮುಖ ಬೆಳವಣಿಗೆ ಆಗಬೇಕೆಂದರೆ ಅದು ಪುಸ್ತಕಗಳಿಂದ ಮಾತ್ರ ಸಾಧ್ಯ.
ಯಾವುದೇ ಪುಸ್ತಕದ ಮೌಲ್ಯವನ್ನು ಅರಿಯಬೇಕಾದರೆ, ಅಧ್ಯಯನದ ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯಗಳ ಜತೆ ಜತೆಗೆ ಗ್ರಂಥಪಾಲಕರ ಪಾತ್ರವೂ ಅತಿ ಮಹತ್ವದ್ದಾಗಿರುತ್ತದೆ. ಗ್ರಂಥಾಲಯ ಎಂದರೆ ಜ್ಞಾನದ ಸಾಗರ. ಪುರಾಣೇತಿ ಹಾಸ್ಯ ಕಾಲದಿಂದ ಮೊದಲ್ಗೊಂಡು ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನವನ್ನು ವಿನಿಯೋಗಿಸಿ ಮುಂದಿನ ಪೀಳಿಗೆಗೆಂದು ‘ಗ್ರಂಥಸ್ಥ’ ರೂಪ ದಲ್ಲಿ ಸಂಗ್ರಹಿಸಿಟ್ಟಿರುವ ಜ್ಞಾನದ ಕಣಜವೇ ಗ್ರಂಥಾಲಯ. ಹೀಗಾಗಿ ಇದನ್ನು ಜ್ಞಾನ ದೇಗುಲ ಎಂದು ಕರೆದರೂ ತಪ್ಪಾಗಲಾರದು.
ಆಸಕ್ತರಿಗೆ ಜ್ಞಾನದ ಊಟವನ್ನು ಉಣಬಡಿಸಲು ಸದಾ ಸಿದ್ಧರಿರುವ ಗ್ರಂಥಪಾಲಕರು ಈ ನಿಟ್ಟಿನಲ್ಲಿ ಅಗಾಧ ಶ್ರಮವನ್ನು ವಿನಿಯೋಗಿಸುತ್ತಾರೆ. ಹೀಗಾಗಿ ಭಾರತದಲ್ಲಿ ಗ್ರಂಥಾಲಯದ ಪರಿಕಲ್ಪನೆಗೆ ಚಾಲನೆಯಿತ್ತ ಡಾ. ಎಸ್.ಆರ್. ರಂಗನಾಥನ್ ಅವರನ್ನು ಈ ಸಂದರ್ಭದಲ್ಲಿ ನಾವು ನೆನೆಯಲೇಬೇಕು. ಅಂದಿನ ಮದ್ರಾಸ್ ಪ್ರಾಂತ್ಯದ ‘ಶಿಯಾಳಿ’ ಎಂಬ ಪುಟ್ಟಹಳ್ಳಿಯಲ್ಲಿ ೧೮೯೨ರ ಆಗಸ್ಟ್ ೧೨ರಂದು ಜನಿಸಿದ ರಂಗನಾಥನ್ ಬಾಲ್ಯದಿಂದಲೂ ಶಿಸ್ತಿನ ಸಿಪಾಯಿಯಂತೆ ಬೆಳೆದವರಾದ್ದರಿಂದ ಚುರುಕು ಬುದ್ಧಿಯವರಾಗಿದ್ದರು.
೧೯೦೯ರಲ್ಲಿ ಮದ್ರಾಸ್‌ನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಅನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಸ್ನಾತಕೋತ್ತರ ಪದವಿ ಮುಗಿಸಿದ ಇವರು ನಂತರ ಅಧ್ಯಾಪನ ಶಾಸದಲ್ಲಿ ಎಲ್.ಟಿ. ಪರೀಕ್ಷೆಯಲ್ಲಿ ಕೂಡ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ನಂತರ ಮದ್ರಾಸ್‌ನ ಸರಕಾರಿ ಕಾಲೇಜಿನಲ್ಲಿ ಹಾಗೂ ಪ್ರೆಸಿಡೆನ್ಸಿ
ಕಾಲೇಜಿನಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ತರುವಾಯದಲ್ಲಿ ಮಂಗಳೂರು ಸರಕಾರಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ವೃತ್ತಿಯನ್ನು ಮುಂದುವರಿಸಿದ್ದರು.
ನಂತರ ಇವರಿಗೆ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಪ್ರಥಮ ಗ್ರಂಥಪಾಲಕರಾಗಿ ನೇಮಕವಾಗುವ ಅವಕಾಶ ಒದಗಿತು. ಅಲ್ಲಿ ಇವರು ತೋರಿದ ಶಿಸ್ತು, ಕ್ರಿಯಾ ಶೀಲ ನಡೆಯಿಂದಾಗಿ ೧೯೨೪ರಲ್ಲಿ ಇವರನ್ನು ಲಂಡನ್ನಿನ ಬ್ರಿಟಿಷ್ ವಸ್ತುಸಂಗ್ರಹಾಲಯದ ಗ್ರಂಥ ಭಂಡಾರದಲ್ಲಿ ನಡೆಯುವ ಗ್ರಂಥ ಪರಿಚಲನೆ, ಆಡಳಿತ ಪರಿಶೀಲನೆ ಮೊದಲಾದ ವಿಷಯಗಳ ಅಧ್ಯಯನಕ್ಕೆಂದು ಇಂಗ್ಲೆಂಡ್‌ಗೆ ಕಳಿಸಲಾಯಿತು. ಈ ವಿಷಯಗಳಲ್ಲಿ ಆಸಕ್ತಿ ಬೆಳೆದ ಪರಿಣಾಮ ಉನ್ನತ ಶಿಕ್ಷಣ
ಪಡೆಯಲೆಂದು ಅವರು ಅಲ್ಲಿಯೇ ಉಳಿದುಕೊಂಡರು. ತಮ್ಮ ಗುರು ಬರ್ವಿಕ್ ಸೇಯರ್ಸ್ ಅವರ ಮಾರ್ಗದರ್ಶನದಲ್ಲಿ ಗ್ರಂಥಾಲಯ ವಿಜ್ಞಾನದ ವಿಷ ಯದಲ್ಲಿ ಹೆಚ್ಚಿನ ಪರಿಣತಿ ಸಾಧಿಸಿದರು. ಮಾತ್ರವಲ್ಲದೆ, ಅಲ್ಲಿನ ಶಾಲಾ- ಕಾಲೇಜು ಗಳಲ್ಲಿನ ಗ್ರಂಥಾ ಲಯಗಳ ನಿರ್ವಹಣಾ ಶೈಲಿಯನ್ನು ಗಮನಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರರಾದರು.
ಸೇಯರ್ಸ್‌ರ ಮಾರ್ಗದರ್ಶನ ದಂತೆ ಕ್ರೋಮಿಡನ್ ಸಾರ್ವಜನಿಕ ಗ್ರಂಥಾಲಯ ಮಂಡಲದಲ್ಲಿ ಸೇವೆಗೆ ತೊಡಗಿದರು. ಈ ಎಲ್ಲಾ ಉಪಕ್ರಮಗಳಿಂದ ದಕ್ಕಿಸಿ
ಕೊಂಡ ಅನುಭವ ಮತ್ತು ಜ್ಞಾನವನ್ನು ರಂಗನಾಥನ್ ಅವರು ಭಾರತದ ಗ್ರಂಥಾಲಯ ವಲಯಕ್ಕೆ ಧಾರೆಯೆರೆದರು. ಪರಿಣಾಮ, ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯು ವಂತಾಯಿತು. ಪ್ರಾಚೀನ ಕಾಲದಲ್ಲಿ ಬರಹಗಾರರು ಕಲ್ಲು, ಗಿಡದ ತೊಗಟೆ, ತಾಡವೋಲೆ ಇತ್ಯಾದಿಗಳನ್ನು ಮಾಧ್ಯಮ ವಾಗಿ ಬಳಸುತ್ತಿದ್ದರು. ಕಾಲಾನುಕ್ರಮದಲ್ಲಿ ಗ್ರಂಥಗಳನ್ನು ಸಂಗ್ರಹಿಸುವ, ಕೂಡಿಡುವ, ಪ್ರತಿ ಮಾಡುವ ಕಾರ್ಯಗಳು ಅನೂಚಾನವಾಗಿ ಮತ್ತು ಅವ್ಯಾಹತವಾಗಿ ನಡೆದು ಬಂದವು. ಆದರೆ ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕ ವಾಗಿ ಓರಣಗೊಳಿಸಿದ ಕೀರ್ತಿ ಡಾ. ರಂಗನಾಥನ್ ಅವರಿಗೆ ಸಲ್ಲಬೇಕು.
ಗ್ರಂಥಾಲಯ ವಿಜ್ಞಾನವನ್ನು ಭಾರತದಾ ದ್ಯಂತ ಬೆಳೆಸಿ ಪ್ರಚಾರ ಮಾಡುವಲ್ಲಿ ಅವರೇ ಮೊದಲಿಗರು. ದೇಶದ ಗ್ರಂಥಾಲಯ ಕ್ಷೇತ್ರದಲ್ಲಿ ಅವರಷ್ಟು ಕೃಷಿ ಮಾಡಿದ
ವರು ಮತ್ತೊಬ್ಬರಿಲ್ಲ. ಹಳ್ಳಿಯಿಂದ ದಿಲ್ಲಿಯವರೆಗೆ ಗ್ರಂಥಾಲಯದ ಮೂಲತತ್ತ್ವಗಳ ತೋರಣವನ್ನು ತೂಗಿಬಿಡುವಲ್ಲಿ ಅವರು ತೋರಿದ ನಿಷ್ಠೆ ಮತ್ತು ಶ್ರಮ ಅಪಾರವಾದುದು. ಸ್ನಾತಕೋತ್ತರ ಮಟ್ಟದ ಗ್ರಂಥಾಲಯ ವಿಜ್ಞಾನವನ್ನು ಕಲಿಸುವ ವ್ಯವಸ್ಥೆ ಮಾಡುವಲ್ಲಿ ಅವರ ಪಾತ್ರ ಬಹಳಷ್ಟಿದೆ. ಭಾರತದ ಗ್ರಂಥಪಾಲಕರ ಮತ್ತು ಗ್ರಂಥಾಲಯ ವಿಜ್ಞಾನದ ಪ್ರಾಧ್ಯಾಪಕರ ವೇತನ ಶ್ರೇಣಿಯನ್ನು ಎತ್ತರಿಸುವಲ್ಲಿ ಮತ್ತು ಇತರರಿಗೆ ಸಿಗುವ ಸೌಲಭ್ಯಗಳನ್ನು ಈ ವೃತ್ತಿಗೂ ದೊರಕಿಸಿ
ಕೊಡುವಲ್ಲಿ ಅವರದು ಪ್ರಮುಖ ಪಾತ್ರವಾಗಿದೆ.
ಅವರ ಅವಿರತ ಸೇವೆಯಿಂದಾಗಿ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಪ್ರಪಂಚದಲ್ಲಿಯೇ ಅವರ ಹೆಸರು ಚಿರಸ್ಥಾಯಿಯಾಗಿದೆ. ಗ್ರಂಥಾಲಯದ ಕುರಿತು ಹಾಗೂ ಗ್ರಂಥಾಲಯ ವಿಜ್ಞಾನ ವನ್ನು ಕುರಿತು ೬೦ಕ್ಕೂ ಹೆಚ್ಚು ಮಹತ್ವದ ಗ್ರಂಥಗಳು, ೨೫೦೦ಕ್ಕೂ ಹೆಚ್ಚು ಲೇಖನಗಳನ್ನು ಬರೆದು ಪ್ರಕಟಿಸಿದ ಹೆಗ್ಗಳಿಕೆ ರಂಗನಾಥನ್ ಅವರದ್ದು. ಅವುಗಳಲ್ಲಿ, ‘ಗ್ರಂಥಾಲಯದ ಪಂಚ ಸೂತ್ರಗಳು’, ‘ರಾಮಾನುಜನ್- ದ ಮ್ಯಾನ್ ಆಂಡ್ ಮೆಥ ಮೆಟಿಷಿಯನ್’, ‘ಕ್ಲಾಸಿಫೈಡ್ ಕ್ಯಾಟಲಾಗ್’, ‘ಡಿಕ್ಷನರಿ ಕ್ಯಾಟ ಲಾಗ್’, ‘ಲೈಬ್ರರಿ ಅಡ್ಮಿನಿಸ್ಟ್ರೇಷನ್’, ‘ಇಂಡಿಯನ್ ಲೈಬ್ರರಿ ಮ್ಯಾನಿ-ಸ್ಟೊ’, ‘ಲೈಬ್ರರಿ ಮ್ಯಾನುವಲ್ ಫಾರ್ ಲೈಬ್ರರಿ ಅಥಾರಿಟೀಸ್’, ‘ಲೈಬ್ರರಿಯನ್ಸ್ ಆಂಡ್ ಲೈಬ್ರರಿ ವರ್ಕರ‍್ಸ್’, ‘ಕ್ಲಾಸಿಫಿಕೇಷನ್-ಕಮ್ಯುನಿಕೇಷನ್’, ‘ಕಂಪ್ಯಾರಿಟಿವ್ ಸ್ಟಡಿ ಆಫ್ ಫೈವ್ ಕ್ಯಾಟಲಾಗ್ಸ್’ ಮುಂತಾದವು ಸೇರಿವೆ. ಈ ಕೃತಿಗಳು ಅವರಿಗಿದ್ದ ಆಳವಾದ ವಿದ್ವತ್ತನ್ನು ಮತ್ತು ಅನುಭವವನ್ನು ಎತ್ತಿ ತೋರಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.
ರಂಗನಾಥನ್ ಅವರಿಗೆ ೧೯೩೫ರಲ್ಲಿ ಬ್ರಿಟಿಷ್ ಸರಕಾರವು ‘ರಾವ್ ಸಾಹೇಬ್’ ಬಿರುದು, ದೆಹಲಿ ವಿಶ್ವವಿದ್ಯಾಲಯವು ೧೯೪೮ರಲ್ಲಿ ಪಿಎಚ್‌ಡಿ, ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯವು ೧೯೬೪ರಲ್ಲಿ ಡಿ.ಲಿಟ್ ಪದವಿಯನ್ನು ನೀಡಿದರೆ, ಭಾರತ ಸರಕಾರವು ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೭೦ರಲ್ಲಿ ಅಮೆರಿಕದ ‘ಮಾರ್ಗರೇಟ್ ಮಾನ್’ ಪಾರಿ ತೋಷಕವನ್ನು ಪಡೆದ ಪ್ರಥಮ ಭಾರತೀಯ ರಿವರು. ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ಕಾನೂನು ೧೯೬೫ರಲ್ಲಿ ಸರಕಾರ ದಿಂದ ಸ್ವೀಕೃತವಾಗಿ ೧೯೬೬ರಲ್ಲಿ ಕಾರ್ಯ ರೂಪಕ್ಕೆ ಬರುವಂತಾಗುವುದಕ್ಕೆ ಇವರೇ ಕಾರಣ ಕರ್ತರು.
ರಂಗನಾಥನ್‌ರ ಅದ್ವಿತೀಯ ಸೇವೆ ಪರಿಗಣಿಸಿ ಸರಕಾರವು ೨೦೦೭ರಿಂದ, ಅವರ ಜನ್ಮದಿನವಾದ ಆಗಸ್ಟ್ ೧೨ನ್ನು ಗ್ರಂಥ ಪಾಲಕರ ದಿನವಾಗಿ ಆಚರಿಸ ಬೇಕೆಂದು ಆದೇಶ ಹೊರಡಿಸಿದೆ. ಲಂಡನ್‌ನಲ್ಲಿದ್ದಾಗ ತಮ್ಮ ಗುರು ಸೇಯರ್ಸ್ ಸಹಾಯ ದಿಂದ ವರ್ಗೀಕರಣ ಪದ್ಧತಿಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಆಳವಾಗಿ ಅಭ್ಯಾಸ ಮಾಡಿದರು ರಂಗನಾಥನ್. ಆದರೆ, ಅಲ್ಲಿಯ ಹಲವಾರು ಪದ್ಧತಿಗಳು ನಮ್ಮ ದೇಶದಲ್ಲಿ ಅನ್ವಯವಾಗುವುದಿಲ್ಲ ಎಂದು ಅರಿತ ಅವರು ಹಡಗಿನಲ್ಲಿ ಭಾರತಕ್ಕೆ ಬರುವಾಗಲೇ ‘ದ್ವಿಬಿಂದು ವರ್ಗೀಕರಣ ಪದ್ಧತಿ’ಯ ರೂಪರೇಷೆ ಹಾಕಿದರು. ನಂತರ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಾಲಯದ ಗ್ರಂಥಗಳನ್ನು ವರ್ಗೀಕರಿಸಲಾರಂಭಿಸಿದರು.
ಮದ್ರಾಸ್ ಗ್ರಂಥಾಲಯ ಸಂಗ್ರಹದಿಂದ ‘ದ್ವಿಬಿಂದು’ ಪ್ರಥಮ ಮುದ್ರಣ ಕಂಡು ಮುಂದೆ ಜಗದ್ವಿಖ್ಯಾತವಾಯಿತು. ಈಗ ಏಳನೇ ಆವೃತ್ತಿ ಪರಿಷ್ಕೃತಗೊಂಡು ಡಾ. ಎಂ.ಎ. ಗೋಪಿ ನಾಥರವರು ೧೯೮೭ರಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯ ವತಿಯಿಂದ ಡಾ. ಬಿ.ಎ. ಶಾರದಾ ಅವರು ೨೦೧೦ರಲ್ಲಿ ಇದರ ಕನ್ನಡ ಅನುವಾದವನ್ನು ಮಾಡಿದ್ದಾರೆ. ದ್ವಿಬಿಂದು ಪದ್ಧತಿ ಪ್ರಕಟವಾದಾಗ ಜಗತ್ತಿನ ಅನೇಕ ಕಡೆಯಿಂದ ಬೇಡಿಕೆ ಬಂತು. ಈ ಗ್ರಂಥ ಜಗತ್ತಿನ
ಅನೇಕ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ವಿಭಾಗದಲ್ಲಿನ ಪಠ್ಯಪುಸ್ತಕವೆಂದು ಅಂಗೀಕರಿಸಲ್ಪಟ್ಟಿದೆ.
ಗ್ರಂಥಾಲಯದ ಮಹತ್ವ ಮತ್ತು ಉಪಯೋಗವನ್ನು ಅರಿಯಬೇಕೆಂದರೆ ಗ್ರಂಥಪಾಲಕರಿಗೆ ತರಬೇತಿ ಮುಖ್ಯ ಎಂಬ ಕಾರಣಕ್ಕೆ ತರಬೇತಿ ಕೇಂದ್ರವೊಂದನ್ನು ಭಾರತದಲ್ಲಿ ಪ್ರಾರಂಭಿಸಲಾಯಿತು. ಇಲ್ಲಿಗೆ ಇಬ್ಬರು ವಿದೇಶಿ ಗ್ರಂಥಪಾಲಕರು ಬಂದರೂ ಕೆಲವೇ ತಿಂಗಳಲ್ಲಿ ತಮ್ಮ ದೇಶಕ್ಕೆ ಮರಳಿದರು. ಹೀಗಾಗಿ ನಮ್ಮ ದೇಶದ ಪ್ರತಿಭೆಯಾದ ರಂಗನಾಥನ್ ಅವರನ್ನು ಮೂರನೇ ಗ್ರಂಥಪಾಲಕರಾಗಿ ನೇಮಿಸಲಾಯಿತು. ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದ ದಕ್ಷಿಣ ಭಾರತದ ಶಿಕ್ಷಕರ ಸಂಘದ ವಾರ್ಷಿಕ ಸಮ್ಮೇಳನದ ಸಂದರ್ಭದಲ್ಲಿ ಗ್ರಂಥಾಲಯ ವಿಜ್ಞಾನದ ಬಗ್ಗೆ ಭಾಷಣ ಮಾಡಿದ್ದು ರಂಗ ನಾಥನ್ ಅವರ ಪ್ರತಿಭೆಗೆ ಸಂದ ಗೌರವ. ಮುಂದೆ ಇವರ ಪರಿಶ್ರಮದ ಫಲವಾಗಿ ಡಿಪ್ಲೊಮಾ ಕೋರ್ಸ್ ಆರಂಭವಾಯಿತು.
ರಂಗನಾಥನ್ ಅವರು ೧೯೪೫ರಲ್ಲಿ ವೃತ್ತಿಯಿಂದ ನಿವೃತ್ತ ರಾದರೂ, ಬನಾರಸ್ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿದ್ದ ಡಾ. ರಾಧಾಕೃಷ್ಣನ್ ಅವರು ರಂಗನಾಥನ್‌ರ ಕ್ರಿಯಾಶೀಲತೆ ಯನ್ನು ಮೆಚ್ಚಿ ತಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಪುನರುತ್ಥಾನಕ್ಕೆ ಸಹಕರಿಸುವಂತೆ ವಿನಂತಿಸಿಕೊಂಡರು. ಅಲ್ಲಿ ಇವರು ಆಧುನಿಕ ಪದ್ಧತಿಯನ್ನು ಅಳವಡಿಸಿ ನೆಟ್ಟ ಸಸಿಗಳೇ ಇಂದು ದೊಡ್ಡ ಮರಗಳಾಗಿ ಬೆಳೆದಿವೆ ಎಂದರೆ ತಪ್ಪಾಗಲಾರದು. ಮುಂದೆ ಕಾಶಿಯಲ್ಲಿ ಒಂದು ಲಕ್ಷ
ಗ್ರಂಥಗಳನ್ನು ವರ್ಗೀಕರಿಸಿದ್ದು ಇವರ ಮಹತ್ತರ ಸಾಧನೆ. ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮಾರಿಸ್ ಗ್ವಾಯರ್ ತಮ್ಮ ವಿದ್ಯಾಪೀಠದ ಗ್ರಂಥಾಲಯವನ್ನು ನವೀಕರಿಸಬೇಕು ಎಂದು ಕೇಳಿಕೊಂಡ ಮೇರೆಗೆ ರಂಗನಾಥನ್ ಅವರು ಅಲ್ಲಿಯೂ ಗ್ರಂಥಾಲಯಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಂತರ ೨ ವರ್ಷದ ಲೈಬ್ರರಿ ಸೈನ್ಸ್ ಕೋರ್ಸ್ ಪ್ರಾರಂಭ ಮಾಡಿದರು.
೧೯೬೧ರಿಂದ, ಬೆಂಗಳೂರಿನ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಆಶ್ರಯದ ಪ್ರಲೇಖನ ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕ ರಾಗಿ ಕೆಲಸ ಮಾಡಹತ್ತಿದರು. ಅಲ್ಲದೆ, ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ, ಜಪಾನ್ ಇತ್ಯಾದಿ ದೇಶಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಇಡೀ ಜಗತ್ತಿಗೆ
ಮಾದರಿಯಾದರು. ಈ ಎಲ್ಲ ಸಾಧನೆಗಳ ಫಲವಾಗಿ ‘ಭಾರತದ ಗ್ರಂಥಾಲಯ ಪಿತಾಮಹ’ ಎನಿಸಿಕೊಂಡರು. ನಂತರ ಇವರು ಸಾರ್ವಜನಿಕ ಗ್ರಂಥಾಲಯಗಳು, ಮಕ್ಕಳ ಗ್ರಂಥಾಲಯ, ಸಂಚಾರಿ ಗ್ರಂಥಾಲಯ, ಪಂಚಾಯಿತಿ ಗ್ರಂಥಾಲಯಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಅನನ್ಯ ವಾದುದು. ಡಾ. ರಂಗನಾಥನ್ ಅವರ ಇಂಥ ಅನುಪಮ ಸಾಧನೆಯನ್ನು ಗುರುತಿಸಿ ಅವರಿಗೆ ಗೌರವ ಸಮರ್ಪಣೆ ಮಾಡೋಣ. ಈ ದಿನವು ಸಾರ್ಥಕ್ಯ ಪಡೆಯುವಂತಾಗಲು ಗ್ರಂಥಾಲಯಗಳನ್ನು ಪ್ರೀತಿಸೋಣ, ಬೆಳೆಸೋಣ.