ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೇಮಕಗೊಂಡ ಕನ್ನಡಿಗ ಉದ್ಯೋಗಿಗಳ ಮಾಹಿತಿಯನ್ನು ಆಯಾ ಸಂಸ್ಥೆಗಳ ಅವರಣದಲ್ಲಿ ನೋಟೀಸು ಬೋರ್ಡ್‌ನಲ್ಲಿ ಪ್ರಚುರ ಪಡಿಸಬೇಕೆನ್ನುವ ಸೂಚನೆಯನ್ನು ಸರಕಾರ ಮಾಡಿದ ಮಾಹಿತಿ ಇರುವದಿಲ್ಲ. ಹಾಗೆಯೇ ಕನ್ನಡಿಗರಿಗೆ ಮೀಸಲಾತಿ ಅನುಷ್ಠಾನ ಹೇಗೆ ನಡೆಯುತ್ತಿದೆ ಎನ್ನುವ ಬಗೆಗೂ ವಿಚಾರಿಸಿದ ಮಾತೂ ಕೇಳಿ ಬರುತ್ತಿಲ್ಲ ಎನ್ನಲಾಗುತ್ತದೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಅದ್ಯತೆ ಎಂಬುವ ಕೂಗಿಗೆ ರಾಜ್ಯದಲ್ಲಿ ಸುದೀರ್ಘ ಇತಿಹಾಸ ಇದೆ. ಈ ಕೂಗು ತಾರಕಕ್ಕೇರಿದಾಗ ೮೦
ರ ದಶಕದಲ್ಲಿ ರಾಮಕೃಷ್ಣ ಹೆಗಡೆ ಸರಕಾರವು ಈ ಸಮಸ್ಯೆಯನ್ನು ಅಮೂಲಾಗ್ರವಾಗಿ ಅಭ್ಯಸಿಸಿ, ಈ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಶಿಫಾರಸ್ಸು ಮಾಡುವಂತೆ ೧೯೮೩ ರಲ್ಲಿ ಡಾ.ಸರೋಜಿನಿ ಮಹಿಷಿಯರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿಯು ೧೯೮೪ರಲ್ಲಿ ಪ್ರಾಥಮಿಕ ಮತ್ತು ೧೯೮೬ ರಲ್ಲಿ ಅಂತಿಮ ವರದಿಯನ್ನು ಸಲ್ಲಿಸಿದ್ದು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವುದರಬಗೆಗೆ ೫೮ ಶಿಫಾರಸ್ಸುಗಳನ್ನು ಮಾಡಿತ್ತು. ಈ ವರದಿಯ ಪ್ರಕಾರ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಿಗೆ ಶೇ. ೧೦೦ ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ನಿಗದಿ ಪಡಿಸಿದ್ದರೆ, ಕೇಂದ್ರ ಸರಕಾರದ ಮತ್ತು ಸಾರ್ವಜನಿಕ ರಂಗದ ಕಚೇರಿಗಳಲ್ಲಿ ಬಿ ಮತ್ತು ಎಲ್ಲಾ ವರ್ಗದ ಕನಿಷ್ಟ ಶೇ.೮೦ ಮತ್ತು ೬೫ ರಷ್ಟು ಹುzಗಳನ್ನು ಕನ್ನಡಿಗರಿಗೆ
ಮೀಸಲಿಡಬೇಕು.
ಎಲ್ಲಾ ಉದ್ದಿಮೆಗಳಲ್ಲಿ ಸ್ಥಳೀಯರನ್ನು ಅದ್ಯತೆಯ ಮೇಲೆ ನೇಮಿಸಿಕೊಳ್ಳಬೇಕು. ಸಾರ್ವಜನಿಕರಂಗದ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.೧೦೦ ರಷ್ಟು
ಮೀಸಲಾತಿ ಇರಬೇಕು. ಖಾಸಗಿ ವಲಯದ ಎಲ್ಲಾ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು ಇವು ಡಾ.ಸರೋಜಿನಿ ಮಹಿಷಿಯವರ ವರದಿ
ಮುಖ್ಯಾಂಶಗಳು. ಈ ವರದಿಯನ್ನು ಡಾ.ಮಹಿಷಿಯರು ನೀಡಿ ೩೮ ವರ್ಷಗಳಾಗಿವೆ. ಈ ವರದಿಯಲ್ಲಿನ ಶಿಫಾರಸ್ಸುಗಳ ಬಗೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ವಾಸ್ತವದಲ್ಲಿ ಅವರ ಜೀವಿತ ಕಾಲದಲ್ಲಿ ಈ ವರದಿ ಜಾರಿಯಾಗಬೇಕಾಗಿತ್ತು.
೨೦೧೫ ರಲ್ಲಿ ಅವರು ನಿದನರಾಗಿದ್ದು, ತಮ್ಮ ವರದಿಯ ಬಗೆಗೆ ಯಾವುದೇ ಕ್ರಮ ತೆಗೆದುಕೊಳ್ಳದ ಬಗೆಗೆ ತುಂಬಾ ನೊಂದಿದ್ದರು. ಫೆಬ್ರವರಿ ೨೦೧೭ರಲ್ಲಿ ಈ ವರದಿಯನ್ನು ಪರಿಷ್ಕರಿಸಿದ್ದನ್ನು ಬಿಟ್ಟರೆ ಈ ವರದಿಯ ನಿಟ್ಟಿನಲ್ಲಿ ಈ ವರೆಗಿನ ಎ ಸರಕಾರಗಳು ಮೌನ ವಹಿಸಿದಂತೆ ಕಾಣುತ್ತದೆ. ಇನ್ನೂ ಈ ವರದಿ ವಿಧಾನಸೌಧದ ಕೊಠಡಿಯೊಂದರಲ್ಲಿ ಭದ್ರವಾಗಿದ್ದು ಸರಕಾರದ ಕೃಪೆಗೆ ಶಬರಿಯಂತೆ ಕಾಯುತ್ತಿದೆ. ಸರಕಾರವು ಇದನ್ನು ಸದನದಲ್ಲಿ ಮಂಡಿಸಿ
ಕಾಯಿದೆ ರೂಪಿಸಲು ಏಕೆ ಹಿಂದೇಟು ಹಾಕುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ.
ಮಣ್ಣಿನ ಮಕ್ಕಳಿಗೆ ಉದ್ಯೋಗ ದಲ್ಲಿ ಅದ್ಯತೆ ನೀಡುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳು ಕಾನೂನು ರೂಪಿಸಿರುವಾಗ ೩೮ ವರ್ಷಗಳಿಂದ ಕರ್ನಾಟಕದಲ್ಲಿ ಅಡಳಿತ ನಡೆಸುತ್ತಿರುವ ಸರಕಾರಗಳು ಈ ವಿಷಯದಲ್ಲಿ ಇಚ್ಚಾಶಕ್ತಿ ತೋರಿಸದಿರುವುದು ಕನ್ನಡಿಗರಿಗೆ ಅಚ್ಚರಿ ಮೂಡಿಸಿದ. ಈ ನಿಟ್ಟಿನಲ್ಲಿ ಸರಕಾರ ದೃಢ ನಿರ್ಧಾರ ತೆಗೆದುಕೊಳ್ಳದಿರುವ ಹಿಂದಿನ ಕಾರಣಗಳೇನು ಎಂದು ತಿಳಿಯುತ್ತಿಲ್ಲ. ತಮಿಳು ನಾಡಿನಲ್ಲಿ ಈ ಕಾರ್ಯ ಕಾನೂನಿನ ಬೆಂಬಲವಿಲ್ಲದೆ ಸ್ವಇಚ್ಚೆಯಿಂದ ನಡೆಯುತ್ತದೆಯಂತೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ಸಮಸ್ಯೆ ಯ ಇತ್ಯರ್ಥಕ್ಕಿರುವ ಮಹಾಜನ್ ವರದಿಗೆ ಒದಗಿದ ಗತಿಯೇ ಡಾ.ಸರೋಜಿನಿ ಮಹಿಷಿ ವರದಿಗೂ ಬಂದಿರುವುದು ಒಂದು ಮಹಾ ದುರಂತ.
ಒಂದು ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ೬೦,೩೦೦ ಕ್ಕೂ ಹೆಚ್ಚು ಖಾಸಗಿ ಕಂಪನಿಗಳು, ೬೭,೦೦೦ ನೊಂದಾಯಿತ ಐಟಿ ಕಂಪನಿಗಳು, ೯೦೦ ಐಟಿ ಕಂಪನಿಗಳು ಇವೆ. ಮತ್ತು ೧೬ ಟೆಕ್ ಪಾರ್ಕ್‌ಗಳು, ನೂರಾರು ಬಹುರಾಷ್ಟ್ರೀಯ ಕಂಪನಿಗಳು, ಸಾವಿರಾರು ಸಣ್ಣ, ಮಧ್ಯಮ ಮತ್ತು ಬೃಹತ್ ಗಾತ್ರದ ಉಧ್ಯಮಗಳು ಇವೆ. ಇವುಗಳಲ್ಲಿ ಕನ್ನಡ ಭಾಷಿಕ ಉದ್ಯೋಗಿಗಳ ಸಂಖ್ಯೆಯನ್ನು ಕೇಳಿದರೆ ಇದು ಇದು ಕರ್ನಾಟಕವೇ, ಇಲ್ಲಿ ಕನ್ನಡಪರ ಸರಕಾರ ಇದೆಯೇ, ಕನ್ನಡಿಗರ ಸ್ವಾಭಿಮಾನ, ಸ್ವಂತಿಕೆ ದೀರ್ಘ ರಜೆಯ ಮೇಲೆ ಇದೆಯೇ ಎನ್ನುವ ಸಂಶಯ ಕಾಡುತ್ತದೆ.
ಐಟಿ ಕಂಪನಿ ಗಳಲ್ಲಿ ಚಹಾ ನೀಡುವ ಹುಡುಗರು ಕೂಡಾ ಉತ್ತರದವರೇ ಎಂದು ಸದನದಲ್ಲಿ ರಾಜ್ಯದ ಮಂತ್ರಿಗಳೊಬ್ಬರು ಹೇಳಿದ್ದರು. ಕೇಂದ್ರ ಮತ್ತು ಸಾರ್ವಜನಿಕರಂಗದ ಕಚೇರಿಗಳಲ್ಲಿ ಕನ್ನಡ ನಾಪತ್ತೆ ಯಾಗಿರುವದು ಹಳೆಯ ಕಥೆಯಾದರೆ, ಈಗ ಕನ್ನಡಿಗರು ನಾಪತ್ತೆ ಎನ್ನುವುದು ಈಗಿನ ವ್ಯಥೆ.
ಬ್ಯಾಂಕುಗಳಲ್ಲಿ, ರೈಲು ಇಲಾಖೆಯಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಗಳಿಗಾಗಿ ಹೋರಾಟ ದಶಕಗಳಿಂದ ನಡೆಯು ತ್ತಲೇ ಇದೆ.ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಕನ್ನಡಿಗರನ್ನು ದುರ್ಬೀನ್ ಹಚ್ಚಿ ನೋಡಬೇಕೆನ್ನುವ ಟೀಕೆ ಕೇಳಿ ಬರುತ್ತದೆ.
ಇವೆಲ್ಲವೂ ಇಲ್ಲಿನ ಭೂಮಿ, ನೀರು, ವಿದ್ಯುತ್ ಮತ್ತು ಇನ್ನಿತರ ಸೌಲಭ್ಯಗಳನ್ನು ಬಳಸಿಕೊಳ್ಳುತ್ತವೆ. ರಾಜ್ಯಕ್ಕೆ ಉದ್ಯಮಗಳನ್ನು ಕರೆತರಲು ಮತ್ತು ಉದ್ಯಮಗಳು ನೆಲೆಗೊಳ್ಳಲು ರಾಜ್ಯ ಸರಕಾರವು ಕೆಲವು ಉದ್ಯಮಗಳಿಗೆ ಹಲವು ರಿಯಾಯಿತಿಗಳನ್ನೂ ನೀಡಿದೆ ಯಂತೆ. ಆದರೂ ಕನ್ನಡಿಗರಿಗೆ ಉದ್ಯೋಗ ನೀಡುವ ದೃಷ್ಟಿಯಲ್ಲಿ ಯಾರೂ ಬದ್ಧತೆ ತೋರಿಸಿಲ್ಲ ಮತ್ತು ಮೀನಾಮೇಷ ಎಣಿಸುತ್ತವೆ ಎಂಬುದು ಕನ್ನಡಿಗರ ಕೊರಗಿಗೆ ಮತ್ತು ಅಕ್ರೋಶಕ್ಕೆ ಕಾರಣ ವಾಗಿದೆಯಂತೆ.
ಈ ನಿಟ್ಟಿನಲ್ಲಿ ಇನ್ನೂ ದೃಢ ಹೆಜ್ಜೆ ಇಡಲು ರಾಜ್ಯ ಸರಕಾರವು ಹಿಂದೆ ಮುಂದೆ ನೋಡುತ್ತಿರುವಾಗ ಪ್ರಕರಣ ಒಂದರ ವಿಚಾರಣೆ ಸಮಯದಲ್ಲಿ ನ್ಯಾಯ ಮೂರ್ತಿ ಎನ್ .ವಿ.ಅಂಜಾರಿಯಾ ಮತ್ತು ನ್ಯಾ.ಕೃಷ್ಣ ದೀಕ್ಷಿತರಿದ್ದ ವಿಭಾಗೀಯ ಪೀಠ ಕನ್ನಡಿಗರಿಗೆ ಶೇ. ೮೦ ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದು ಕನ್ನಡಿಗರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಹಾಗೆಯೇ ಕನ್ನಡಿಗರ ಭೂಮಿ, ನೀರು ಪಡೆದು ಅವರಿಗೆ ಉದ್ಯೋಗ ನೀಡದಿದ್ದರೆ ಹೇಗೆ? ಬರಿ ಸಿ,ಡಿ ದರ್ಜೆಯ ನೌಕರಿಗಷ್ಟೇ ಅವರನ್ನು ಪರಿಗಣಿಸಿದರೆ ಸಾಕೆ? ಎಲ್ಲ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳ ಬೇಕು ಎಂದಿದೆ. ಈ ನಿರ್ದೇಶನ ಸಂಬಂಧ ಕಕ್ಷಿಧಾರರಿಗೆ ಮಾತ್ರ ಅನ್ವಯಿಸದೇ ಕನ್ನಡಿಗರಿಗೆ ಉದ್ಯೋಗ ನಿರಾಕರಿಸುವ ಎಲ್ಲರಿಗೂ ಪಾಠವಾಗಬೇಕು ಎನ್ನಲಾಗುತ್ತಿದೆ.
ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೇಮಕಗೊಂಡ ಕನ್ನಡಿಗ ಉದ್ಯೋಗಿಗಳ ಮಾಹಿತಿಯನ್ನು ಆಯಾ ಸಂಸ್ಥೆಗಳ ಅವರಣದಲ್ಲಿ ನೋಟೀಸು ಬೋರ್ಡ್ ನಲ್ಲಿ ಪ್ರಚುರ ಪಡಿಸಬೇಕೆನ್ನುವ ಸೂಚನೆಯನ್ನು ಸರಕಾರ ಮಾಡಿದ ಮಾಹಿತಿ ಇರುವದಿಲ್ಲ. ಹಾಗೆಯೇ ಕನ್ನಡಿಗರಿಗೆ ಮೀಸಲಾತಿ ಅನುಷ್ಠಾನ ಹೇಗೆ ನಡೆಯುತ್ತಿದೆ ಎನ್ನುವ ಬಗೆಗೂ ವಿಚಾರಿಸಿದ ಮಾತೂ ಕೇಳಿ ಬರುತ್ತಿಲ್ಲ ಎನ್ನಲಾಗುತ್ತದೆ. ಕೆಲವು ಸಂಸ್ಥೆಗಳು ಮಾಹಿತಿಯನ್ನು ನೀಡುತ್ತಿವೆ ಯಾದರೂ ಅವುಗಳನ್ನು ಸರಕಾರ ಪರಾಮರ್ಷಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಉದಾಹರಣೆ ಇಲ್ಲವೆನ್ನಲಾಗುತ್ತದೆ.
ಕೆಳದರ್ಜೆ ಹುದ್ದೆಗಳನ್ನು ಪರಭಾಷಿಕರಿಗೆ ನೀಡದಿದ್ದರೂ ಅದನ್ನು ಪ್ರಶ್ನಿ ಸಿದ ಬಗೆಗೆ ಮಾಹಿತಿ ಇಲ್ಲವಂತೆ. ಕನ್ನಡಿಗರ ಬಹು ವರ್ಷಗಳ ಬೇಡಿಕೆಯನ್ನು ನ್ಯಾಯಾಲಯ ನೇರ ಮಾತಿನಲ್ಲಿ ಸಮರ್ಥಿಸಿರುವುದು ಕನ್ನಡ ಮತ್ತು ಕನ್ನಡಿಗರಿಗೆ ದೊರಕಿದ ಜಯ ಎನ್ನಬಹುದು. ಡಾ.ಮಹಿಷಿ ವರದಿ ಅನುಷ್ಠಾನ ವಾದರೆ ಅದನ್ನು ವಿರೋಧಿಸುವ ಮನಸ್ಥಿತಿ ಇರುವವರಿಗೆ ನ್ಯಾಯಾಲಯದ ಈ ಸೂಚನೆ ಕನ್ನಡ ಮತ್ತು ಕನ್ನಡಿಗರನ್ನು ನಿರ್ಲಕ್ಷಿಸುವ ಉದ್ಯೋಗದಾತ ರಿಗೆ ಎಚ್ಚರಿಕೆ ಘಂಟೆಯನ್ನು ಬಾರಿಸಿದಂತಾಗಿದೆ.
ಅಭಿವೃದ್ದಿಯಲ್ಲಿ ಮಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಎಲ್ಲಾ ರಂಗಗಳಲ್ಲಿ ನಿರಂತರ ಉದ್ಯೋಗ ಸೃಷ್ಟಿಯಾಗುತ್ತಿದ್ದು ಇದರ ಫಲ ಕನ್ನಡಿಗರಿಗೆ
ದೊರಕುತ್ತಿಲ್ಲ ಎನ್ನುವ ಕೂಗು ಲಾಗಾಯ್ತನಿಂದ ಇದೆ. ಉದ್ಯೋಗದಾತರಲ್ಲಿ ಹೊರಗಿನಿಂದ ಬಂದವರು ಮತ್ತು ವಲಸಿಗರು ಗಮನಾರ್ಹ ಸಂಖ್ಯೆಯಲ್ಲಿ ದ್ದಾರೆ ಎನ್ನುವುದು ಸತ್ಯವಾದರೂ, ಇಲ್ಲಿನ ಭೂಮಿ, ನೀರು ಮತ್ತು ಇನ್ನಿತರ ಸೌಕರ್ಯಗಳನ್ನು ಮತ್ತು ಕರ್ನಾಟಕ ಸರಕಾರ ನೀಡುವ ವಿನಾಯಿತಿ ಯನ್ನು ಬಳಸುವಾಗ ಸ್ಥಳೀಯ ಭಾವನೆಗಳಿಗೆ ಸ್ಪಂದಿ ಸುವುದೂ ಅಷ್ಟೇ ಮುಖ್ಯ. ಕೇವಲ ತಮ್ಮ ಹೂಡಿಕೆಯನ್ನು ಮುಂದುವರಿಸಿಕೊಂಡು ಸ್ಥಳೀಯ ರನ್ನು ಉಧ್ಯೋಗ ನೀಡುವಿಕೆಯಲ್ಲಿ ಕಡೆಗಣಿಸುವುದು ಯಾವ ಮಾನದಂಡದಲ್ಲೂ ಒಪ್ಪಲಾಗದು. ಮಣ್ಣಿನ ಮಕ್ಕಳ ಪರಿಕಲ್ಪನೆಗೆ ಸುದೀರ್ಘ ಇತಿಹಾಸ ಇದೆ. ೬೦ ರ ದಶಕದಲ್ಲಿ ಮುಂಬೈಯಲ್ಲಿ ಬಾಳ ಥಾಕ್ರೆ ನೇತ್ರತ್ವದಲ್ಲಿ ಶಿವಸೇನೆ ದಕ್ಷಿಣದವರ ವಿರುದ್ಧ ಭಾರೀ ಅಂದೋಲ ನಡೆಸಿತ್ತು.
ಕ್ರಮೇಣ ಇದು ದೇಶಾದ್ಯಂತ ಕಾಳ್ಗಿಚ್ಚಿನಂತೆ ವ್ಯಾಪಸಿದ್ದು ಹಲವು ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಮಣ್ಣಿನ ಮಕ್ಕಳಿಗೆ ಉದ್ಯೋಗ ಮೀಸಲಿಡುವ ವಿಚಾರದಲ್ಲಿ ದೃಢವಾದ ಕ್ರಮ ತೆಗೆದುಕೊಳ್ಳುತ್ತಿವೆ. ನ್ಯಾಯಾಲಯವು ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಅಧ್ಯತೆ ನೀಡಬೇಕು ಎನ್ನುವು ದನ್ನು ಒತ್ತಿ ಹೇಳುತ್ತಾ ಕೇವಲ ಸಿ ಮತ್ತು ಡಿ ಹುದ್ದೆಗಳಿಗೆ ಮಾತ್ರ ಮೀಸಲಿಡಬೇಕೇ ಎನ್ನುವ ಅಥಪೂರ್ಣ ಪ್ರಶ್ನೆಯನ್ನು ಎತ್ತಿದೆ ಮತ್ತು ಇದನ್ನು ಮೇಲಿನ ಹುದ್ದೆಗಳಿಗೆ ಏಕೆ ಅನ್ವಯಿಸ ಬಾರದು ಎನ್ನುವುದನ್ನು ಕೇಳಿದೆ. ಸರ್ಕಾರ ನ್ಯಾಯಾಲಯದ ಈ ಪ್ರಶ್ನೆಯನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ ಮತ್ತು ನ್ಯಾಯಾಲಯದ ಸಲಹೆ-ಸೂಚನೆಯನ್ನು ಈ ವರದಿಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಇನ್ನಾದರೂ ಸರಕಾರವು ಡಾ.ಸರೋಜಿನಿ ಮಹಿಷಿ ವರದಿಯ ಅನುಷ್ಟಾನದ ಬಗೆಗೆ ಗಂಭೀರವಾಗಿ ಕ್ರಮತೆಗೆದುಕೊಳ್ಳಬಹುದು ಎಂದು ಆಶಿಸಲಾಗುತ್ತಿದೆ. ಡಾ.ಸರೋಜಿನಿ ಮಹಿಷಿ ವರದಿ ಸಲ್ಲಿಸಲ್ಪಟ್ಟು ೩೮ ವರ್ಷ ಗಳಾದರೂ ಅದರ ಅನುಷ್ಠಾನದ ಮಾತು ಹೋಗಲಿ, ಅದರ ಅಧ್ಯಯನ ಕೂಡಾ ಅದಂತೆ ಕಾಣುವುದಿಲ್ಲ.
ಸ್ಥಳೀಯರಿಗೆ ಉಧ್ಯೋಗ ಎನ್ನುವ ಕೂಗು ಸ್ವಲ್ಪ ಮೇಲಕ್ಕೇರಿದಾಗ ಈ ವರದಿ ಚರ್ಚೆಗೆ ಬಂದು ಒಂದೆರಡು ದಿನ ಸುದ್ದಿ ಮಾಡಿ ಅ ನಿಂತುಹೋಗುತ್ತದೆ.
ಬೇರೆ ರಾಜ್ಯಗಳಲ್ಲಿ ಸ್ಥಳೀಯ ಭಾಷೆ ಗೊತ್ತಿರದಿದ್ದರೆ, ಸ್ಥಳೀಯರಾಗಿರದಿದ್ದರೆ ಉದ್ಯೋಗ ಕಷ್ಟಸಾದ್ಯ. ಎಲ್ಲಾ ರಾಜ್ಯಗಳು ಮಣ್ಣಿನ ಮಕ್ಕಳ ಹಿತ ಕಾಯುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳುವಾಗ ಕರ್ನಾಟಕ ಇಂತಹ ಕ್ರಮ ತೆಗೆದುಕೊಂಡರೆ ಇದರಲ್ಲಿ ಏನೂ ವಿಶೇಷ ಕಾಣದು.
(ಲೇಖಕರು: ಅರ್ಥಿಕ ಮತ್ತು ರಾಜಕೀಯ
ವಿಶ್ಲೇಷಕರು)