Friday, 13th December 2024

ಅಪ್ರತಿಮ ವಿಜ್ಞಾನಿ ಡಾ.ವಾಸುದೇವ ಅತ್ರೆ

ಗುಣಗಾನ

ಜಯಪ್ರಕಾಶ ಪುತ್ತೂರು

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಲ್ಲಿ ಕನ್ನಡಿಗ ಡಾ.ವಾಸುದೇವ ಕಲ್ಕುಂಟೆ ಆತ್ರೆ ಕೂಡ ಒಬ್ಬರು. ಕೆನಡಾದ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ತಾವು
ಹೊಂದಿದ್ದ ಅತ್ಯುನ್ನತ ಹುದ್ದೆಯನ್ನೇ ತೊರೆದು ೧೯೮೦ರಲ್ಲಿ ತಾಯ್ನಾಡಿಗೆ ಮರಳಿದ ಅಪ್ರತಿಮ ವಿಜ್ಞಾನಿ ಡಾ.ಆತ್ರೆ. ಪ್ರತಿಭೆ ಎನ್ನುವುದು ಪ್ರಯತ್ನದ ಮೊಗ್ಗಿನಲ್ಲಡಗಿರುವ ಕಂಪಿ ನಂತೆ. ಪ್ರಯತ್ನ ಫಲಿಸಿ ಮೊಗ್ಗು ಅರಳಿದಾಗ ಕಂಪು ತಾನಾಗೇ ಹರಡಿ ಸುತ್ತಮುತ್ತಲ ಪರಿಸರವನ್ನು ತನ್ಮಯಗೊಳಿಸುತ್ತದೆ.
ಕ್ಷಿಪಣಿ ತಂತ್ರಜ್ಞ, ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅಂದು ದೇಶದ ಉನ್ನತ ಸ್ಥಾನಕ್ಕೇರಿದ್ದು ಅವರಿಗಿದ್ದ ಅಗಾಧ ಪ್ರತಿಭೆ, ಸಾಮರ್ಥ್ಯಗಳಿಂದಾಗಿಯೇ.

ಕಲಾಂ ಅವರು ರಾಷ್ಟ್ರಪತಿಯಾಗುವ ಮುನ್ನ, ತೆರವಾದ ಅವರ ಸ್ಥಾನ ವನ್ನು ತುಂಬಿದ ಮೇಧಾವಿಯೇ ಡಾ. ವಾಸುದೇವ ಆತ್ರೆ ಎಂಬುದು ಹೆಮ್ಮೆಯ ಸಂಗತಿ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಿಲ್ಲೊಂದು ವಿಷಯದಲ್ಲಿ ಕನ್ನಡಿಗರು ಆಗಾಗ ಮಿಂಚುತ್ತಿರುತ್ತಾರೆ. ಕನ್ನಡ ಮಣ್ಣಿನ ಗುಣವೇ ಅಂಥದ್ದು. ಇಲೆಕ್ಟ್ರಾನಿಕ್ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ವಿಭಾಗಕ್ಕೆ ಮಾಂತ್ರಿಕ ಸ್ಪರ್ಶ ನೀಡಿದ ಡಾ. ಆತ್ರೆ ಅವರ ಸಾಧನಾ ಸೂರ್ತಿಯು ಅವರನ್ನು ೧೭ ವರ್ಷಗಳ ಕಾಲ ಕೆನಡಾದಲ್ಲಿ ಸೇವೆ ಸಲ್ಲಿಸುವಂತೆ ಮಾಡಿತು. ಸೂರ್ತಿ ಎಂಬುದು ಅವರ ಕುಟುಂಬದಿಂದಲೇ ದಕ್ಕಿದ ಕೊಡುಗೆ.

ಆತ್ರೆಯವರ ಅಜ್ಜ ಕಲ್ಕುಂಟೆ ಗ್ರಾಮದ ವಿದ್ಯಾವಂತರ ಪೈಕಿ ಮೊದಲ ಪದವೀಧರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಂಥ ವಿದ್ಯಾವಂತ ಅವಿಭಕ್ತ ಕುಟುಂಬದ ಪ್ರೇಮಮಯ ವಾತಾವರಣದಲ್ಲಿ ಡಾ.ಆತ್ರೆಯವರು ಸಹಜ ವಾಗಿಯೇ ವಿಚಾರಶೀಲರಾಗಿ ಬೆಳೆದರು. ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಘೋಷಣೆಯ ಆಶಯವನ್ನು ೩೦ ವರ್ಷಗಳ ಹಿಂದೆಯೇ ಪಾಲಿಸಿದವರು ಆತ್ರೆ. ಅಂದು ತಮ್ಮ ಇಳಿ ವಯಸ್ಸಿನಲ್ಲೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಯಲ್ಲಿ ಗೌರವ ಪ್ರಾಚಾರ್ಯರಾಗಿ, ಯುವ ವಿಜ್ಞಾನಿಗಳು ಮತ್ತು ವಿವಿಧ ತಂತ್ರಜ್ಞಾನ ಯೋಜನೆಗಳಿಗೆ ಮಾರ್ಗದರ್ಶನ ನೀಡಿದಾಗ ಡಾ.ಆತ್ರೆಯವರಿಗೆ ೭೫ ವರ್ಷ ವಯಸ್ಸಾಗಿತ್ತು.

ಬೆಂಗಳೂರಿನಲ್ಲಿ ೧೯೩೯ರಲ್ಲಿ ಜನಿಸಿದ ಆತ್ರೆಯವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದವರು ತಂದೆ ಕೆ.ಎನ್. ರಂಗಸ್ವಾಮಿ. ಅವರು ನಾಡಿನ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮೈಸೂರಿನಲ್ಲಿ ನೆಲೆಸಿದ್ದರು. ಆ ಸಮಯದಲ್ಲಿ ಆತ್ರೆ ಅಲ್ಲಿನ ಸೇಂಟ್ ಜೋಸೆ- ಶಾಲೆಯಲ್ಲಿ ತಮ್ಮ
ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಆತ್ರೆ, ನಂತರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ- ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ತರುವಾಯ ೧೯೬೭ರಲ್ಲಿ ಕೆನಡಾದ ವಾಟರ್‌ಲೂ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಯನ್ನು ಬಗಲಿಗೆ ಏರಿಸಿಕೊಂಡರು. ಮುಂದೆ ಒಂದು ವರ್ಷ ಕೆನಡಾದ ಎನ್‌ಆರ್‌ಸಿಯಲ್ಲಿ ಸಂಶೋಧನೆಯಲ್ಲಿ ತೊಡಗಿ, ಬಳಿಕ ೧೯೮೦ರವರೆಗೂ ಹೆಲಿಫೆಕ್ಸ್‌ನ ನೋವಾಸ್ಕಾಟಿಯಾ ತಾಂತ್ರಿಕ ವಿಶ್ವವಿದ್ಯಾಲ ಯಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟರು. ಹಾಗಿದ್ದರೂ ಕನ್ನಡನಾಡಿನ ಸಂಪರ್ಕವನ್ನು ಎಂದೂ ಕಡಿದುಕೊಂಡಿರಲಿಲ್ಲ. ಕೆನಡಾದಲ್ಲಿದ್ದಂತೆಯೇ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದು.

೧೯೮೦ರಲ್ಲಿ ತಾಯ್ನಾಡಿಗೆ ಮರಳಿದರು ಡಾ.ಆತ್ರೆ. ಅವರು ವಿದೇಶಿ ನೆಲ ಬಿಟ್ಟು ಭಾರತಕ್ಕೆ ಮರಳುವಲ್ಲಿ, ಇತ್ತೀಚೆಗೆ ಮರಣ ಹೊಂದಿದ ವಿಜ್ಞಾನಿ ಡಾ.ಅರುಣಾಚಲಂ ಅವರ ಪ್ರಭಾವವೂ ಇತ್ತು. ತಾಯ್ನಾಡು ಸೇರಿದ ಮೇಲೆ ಡಾ.ಆತ್ರೆ ಕೊಚ್ಚಿಯ ನೇವಲ್ ಫಿಸಿಕಲ್ ಆಂಡ್ ಓಷಿಯಾನೋಗ್ರಫಿ
ಪ್ರಯೋಗಾಲಯದಲ್ಲಿ ವಿಜ್ಞಾನಿಯಾಗಿ ರಾಷ್ಟ್ರಸೇವೆಗೆ ಅನುವಾಗುವ ಮೂಲಕ ಡಿಆರ್‌ಡಿಒ ಪ್ರವೇಶಿಸಿದರು. ಡಾ.ಆತ್ರೆಯವರ ಸತತ ಪರಿಶ್ರಮವೇ ಅವರು ಕೆಲವೇ ವರ್ಷ ಗಳಲ್ಲಿ ಅದೇ ಸಂಸ್ಥೆಯ ನಿರ್ದೇಶಕರಾಗುವವರೆಗೆ ಬೆಳೆಸಿತು.

ಆ ಬಳಿಕ ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹೆಗಾರರಾಗುವ ಮೂಲಕ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸ್ಥಾನವನ್ನು ವಹಿಸಿಕೊಂಡರು. ಜತೆಗೆ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯ (ಡಿಆರ್‌ಡಿಒ) ಪ್ರಧಾನ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕರ ಸ್ಥಾನವು ಅವರಿಗೆ ಒಲಿ
ಯಿತು. ಆಮೇಲೆ ೧೯೯೯ರಲ್ಲಿ ಸಂಸ್ಥೆಯ ಕಾರ್ಯದರ್ಶಿಯ ಉಚ್ಚ ಸ್ಥಾನವನ್ನು ಅಲಂಕರಿಸುವ ಅವಕಾಶ ಒದಗಿಬಂತು. ಆತ್ರೆಯವರು ತಮ್ಮ ದಕ್ಷತೆ ಯನ್ನು ಪ್ರಮಾಣೀಕರಿಸಿ ತೋರಿಸಿದ್ದರಿಂದಲೇ ಅವರನ್ನು ಮುಂದೆ ದೇಶದ ಎಲ್ಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳ
ಮಹಾನಿರ್ದೇಶಕರಾಗಿ ನೇಮಿಸಲಾಯಿತು.

ಡಾ.ಆತ್ರೆಯವರು ತಾವು ನಿರ್ವಹಿಸಿದ ಒಂದೊಂದು ಹುದ್ದೆಯಲ್ಲೂ ಪಾರದರ್ಶಕ ಸೇವೆ, ಅಪೂರ್ವ ಕೊಡುಗೆ ನೀಡಿದರು. ನೌಕಾದಳಕ್ಕೆ ಜಲ ತಂತ್ರಜ್ಞಾನದ ಅಭಿವೃದ್ಧಿಗಾಗಿ ಟ್ರಾನ್ಸ್‌ಡ್ಯೂಸರ್ ಹಾಗೂ ಸೋನಾರ್ ಸೂಟ್‌ಗಳನ್ನು ಅವರು ವಿನ್ಯಾಸಗೊಳಿಸಿದರು. ಸಾಗರದಲ್ಲಿನ ಸಂಶೋಧನೆಗಾಗಿ
‘ಸಾಗರ ಧ್ವನಿ’ ಎಂಬ ನೌಕೆಯನ್ನು ಸಜ್ಜುಗೊಳಿಸಿದರು. ಇವೆಲ್ಲವೂ ಅವರ ಮಹತ್ವದ ಸಾಧನೆಗಳು. ದೇಶದ ಭೂಸೇನೆ ಹಾಗೂ ನೌಕಾಪಡೆಗೆ ಅತ್ಯಾಧು ನಿಕ ಇಲೆಕ್ಟ್ರಾನಿಕ್ ಸಮರ ತಂತ್ರಜ್ಞಾನವನ್ನು ದೊರಕಿಸಿಕೊಟ್ಟಿದ್ದು ಆತ್ರೆಯವರ ಜೀವಮಾನ ಸಾಧನೆಯ ವಿಶಿಷ್ಟ ಮೈಲುಗಲ್ಲು. ಸತತ ಸಾಧನಾ ಮುಖಿಯಾದ ಡಾ.ಆತ್ರೆ ಎಂದೂ ಯಾವುದೇ ಪ್ರತಿಫಲವನ್ನು ಅಪೇಕ್ಷಿಸಿದವರಲ್ಲ.

ನಮ್ಮ ದೇಶದ ವಿಪುಲ ಮಾನವ ಸಂಪನ್ಮೂಲವು ವಿನಾಕಾರಣ ವ್ಯರ್ಥವಾಗುವುದನ್ನು ಅವರು ಸಹಿಸುತ್ತಿರಲಿಲ್ಲ. ‘ಸಮಾಜದಲ್ಲಿ ಕರ್ತವ್ಯನಿಷ್ಠೆ ಬೆಳೆದರೆ
ಅತ್ಯಾಧುನಿಕ ತಂತ್ರಜ್ಞಾನಕ್ಕಾಗಿ ನಾವು ವಿದೇಶಿಯರ ಮೊರೆ ಹೋಗಬೇಕಾಗಿಲ್ಲ’ ಎಂಬುದು ಅವರ ಅಭಿಮತವಾಗಿತ್ತು. ಪ್ರೊ.ಮೆನನ್, ಪ್ರೊ.ರಾಜಾ ರಾಮಣ್ಣ, ಡಾ.ಅಬ್ದುಲ್ ಕಲಾಂರಂಥ ಪ್ರಸಿದ್ಧರು ಮತ್ತು ಪ್ರತಿಭಾವಂತರೊಂದಿಗೆ ಆತ್ರೆಯವರಿಗೆ ನಿರಂತರ ಒಡನಾಟವಿತ್ತು. ವಿಭಿನ್ನ ವೈಜ್ಞಾನಿಕ
ಸಂಘಟನೆಗಳ ಪದಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರ ಜತೆಗೆ, ದೇಶ-ವಿದೇಶಗಳಲ್ಲಿ ಹಲವು ವೈಜ್ಞಾನಿಕ ಉಪನ್ಯಾಸ ಗಳನ್ನು ನೀಡಿದ, ವಿವಿಧ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ, ಪದವಿಪೂರ್ವ ಹಾಗೂ ಪದವಿ ತರಗತಿಗಳ ಪಠ್ಯ ಪುಸ್ತಕಗಳನ್ನು ಸಂಪಾದಿಸಿದ ಹಿರಿಮೆ ಆತ್ರೆ ಅವರದ್ದು.
ಡಾ.ಆತ್ರೆ ಒಬ್ಬ ಅಪ್ರತಿಮ ವಿಜ್ಞಾನಿ ಎಂದುಬಿಟ್ಟರೆ ಅವರ ಪೂರ್ಣ ಪರಿಚಯವಾಗುವುದಿಲ್ಲ. ಅವರ ವ್ಯಕ್ತಿತ್ವದ ಒಟ್ಟು ಚಿತ್ರಣ ಸಿಗಬೇಕಾದರೆ ಅವರ ಪ್ರವೃತ್ತಿಗಳತ್ತಲೂ ನೋಟ ಹರಿಸಬೇಕಾಗುತ್ತದೆ. ಅಮಿತ ಕನ್ನಡ ಪ್ರೇಮಿಯಾಗಿರುವ ಆತ್ರೆಯವರಲ್ಲಿ ಕನ್ನಡ ಪುಸ್ತಕಗಳ ದೊಡ್ಡ ಭಂಡಾರವೇ ಇದೆ.

ಖ್ಯಾತ ಕವಿ ಜಿ.ಪಿ. ರಾಜರತ್ನಂ ಅವರ ಪ್ರಭಾವಕ್ಕೊಳಗಾಗಿದ್ದ ಆತ್ರೆಯವರಿಗೆ ತ.ರಾ.ಸು., ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್.ಎಲ್.ಭೈರಪ್ಪ ನವರ ಕೃತಿಗಳೆಂದರೆ ಅಚ್ಚುಮೆಚ್ಚು. ಶಾಸೀಯ ಸಂಗೀತದಲ್ಲೂ ವಿಶೇಷ ಆಸಕ್ತಿ ಹೊಂದಿರುವ ಆತ್ರೆಯವರಲ್ಲಿ ಸಂಗೀತ ಸಂಬಂಧಿತ ಪುಸ್ತಕಗಳ
ಸಂಗ್ರಹವೇ ಇದೆ. ಒಟ್ಟಿನಲ್ಲಿ, ವಿಜ್ಞಾನಿಯಾಗಿದ್ದುಕೊಂಡು ಸಾಹಿತ್ಯ, ಸಂಗೀತ ಮತ್ತು ಕನ್ನಡ ಪ್ರೇಮವನ್ನು ಉಸಿರಾಗಿಸಿಕೊಂಡವರು ಡಾ.ಆತ್ರೆ.

ಡಿಆರ್‌ಡಿಒ ವರ್ಷದ ವಿಜ್ಞಾನಿ, ತಾಂತ್ರಿಕ ನಾಯಕತ್ವ ಪುರಸ್ಕಾರ, ಐಇಟಿಇ ರಾಮಲಾಲ್ ವಾಧ್ವಾ ಚಿನ್ನದ ಪದಕ, ೨೦೦೦ದಲ್ಲಿ ಪದ್ಮಭೂಷಣ ಹಾಗೂ ಆ ಬಳಿಕ ಪದ್ಮವಿಭೂಷಣದಂಥ ಪುರಸ್ಕಾರ ಸೇರಿ ಅನೇಕ ಪ್ರಶಸ್ತಿಗಳು ಆತ್ರೆಯವರ ಮಡಿಲು ಸೇರಿರುವುದು ಅವರ ಅಪೂರ್ವ ವ್ಯಕ್ತಿತ್ವಕ್ಕೆ ಸಾಕ್ಷಿ.

(ಲೇಖಕರು ಮಾಜಿ ಪ್ರಧಾನ ಸಾರ್ವಜನಿಕ ಸಂಪರ್ಕಾಽಕಾರಿ ಎಡಿಎ ಮತ್ತು ಡಿಆರ್‌ಡಿಒ)