ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಭಾಷಣ ಕೇಸರಿಯಾದ ನಾನು ಬರವಣಿಗೆಗೆ ಬಂದದ್ದೇ ವಿಶ್ವೇಶ್ವರ ಭಟ್ಟರ ಬಲವಂತಕ್ಕೆ. ಇದೇನಿದು, ಇವನು ತನ್ನನ್ನು ತಾನೇ ಭಾಷಣ ಕೇಸರಿ ಅಂದುಕೊಂಡ ನಲ್ಲ? ಎಂದು ಹುಬ್ಬೇರಿಸಿ ಕೋಪಿಸಿಕೊಳ್ಳಬೇಡಿ. ಅದು ಭಾಷಣಕೇಸರಿ ಅಲ್ಲ, ಭಾಷಣಕ್ಕೇ ಸರಿ, ಬರೆಯಲು ಬರುವುದಿಲ್ಲ ಎಂದು ತೀರ್ಮಾನಿಸಿ ಕೊಂಡ ವನನ್ನು ಬರಹಕ್ಕೆ ಎಳೆದು ತಂದವರು ಭಟ್ಟರು ಎಂದು ಹೇಳಿದ್ದಷ್ಟೆ ಮಾರಾಯ್ರೆ.
ಒಲ್ಲೆ ಒಲ್ಲೆ ಎನ್ನುತ್ತಲೆ ಬರೆಬರೆದು ಬರೊಬ್ಬರಿ ನೂರಾ ಎಂಭತ್ತು ಲೇಖನಗಳಾದವು. ಮೂವತ್ತು ಪುಸ್ತಕಗಳನ್ನು ಹೊರತರಲು ಮೂವತ್ತು ಲೇಖನಗಳಾಗುವು ದನ್ನೇ ಕಾಯುವವರು, ಅಪರೂಪದ ಪ್ರಕಾಶಕರಾದ ಸಾವಣ್ಣ ಪಬ್ಲಿಷರ‍್ಸ್‌ನ ಸಹೃದಯಿ ಸ್ನೇಹಜೀವಿ ಜಮೀಲ್ ಸಾಹೇಬರು. ನನಗೆ ಗೊತ್ತಿರುವ ಆತ್ಮೀಯ ರಾದವರು ಕರ್ನಾಟಕದ ಇಬ್ಬರೇ ಇಬ್ಬರು ಪ್ರಕಾಶಕರು. ಈ ಜಮೀಲ್ ಸಾಹೇಬರು ಹಾಗೂ ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಶ್ರೀ ಸುಬ್ರಹ್ಮಣ್ಯ ಅವರು. ಅವರನ್ನು ಪ್ರೀತಿಯಿಂದ ಸುಬ್ಬಣ್ಣ, ಸುಬ್ಬು ಅವರೇ ಎಂದೇ ಕರೆಯುತ್ತೇನೆ. ಹುಬ್ಬಳ್ಳಿಗೆ ಹೋದರೆ ಸುಬ್ರಹ್ಮಣ್ಯರನ್ನು ಭೇಟಿಯಾಗದೇ, ಸಾಹಿತ್ಯ ಭಂಡಾರಕ್ಕೆ ಹೋಗದೇ ಇರಲಾಗುವುದಿಲ್ಲ.
ಹೋದರೆ, ನಾಲ್ಕೈದು ಪುಸ್ತಕಗಳನ್ನು ನಾನು ಖರೀದಿಸಿದರೆ, ಹತ್ತು ಹನ್ನೆರೆಡು ಪುಸ್ತಕಗಳನ್ನು ಗಂಟು ಕಟ್ಟಿ, ಪ್ಯಾಕ್ ಮಾಡಿ, ಓದುವ ಪ್ರೀತಿಗಾಗಿ ಎಂದು ಉಚಿತವಾಗಿ ಕೊಡುವ ಸುಬ್ರಹ್ಮಣ್ಯರ ಗ್ರಂಥ ಋಣ ನನ್ನ ಮೇಲೆ ದಿನೇ ದಿನೇ ಹೆಚ್ಚುತ್ತಲಿದೆ. ಹಾಗೆಯೇ, ಸಾವಣ್ಣದ ಜಮೀಲ್ ಸಾಹೇಬರೂ ಕೂಡಾ, ನನ್ನ ಪುಸ್ತಕಗಳ ಪಾರ್ಸೆಲ್ ಜತಗೆ, ತಮ್ಮ ಪ್ರಕಾಶನದ ಪ್ರಕಟಣೆಗಳನ್ನೆಲ್ಲ ನನ್ನ ಪಾರ್ಸೆಲ್ ಬಾಕ್ಸಿನಲ್ಲಿ ಸುತ್ತಲೂ ಇಟ್ಟಿರುತ್ತಾರೆ. ಓದುಗ ರನ್ನು, ಓದುವಿಕೆಯನ್ನು ಪ್ರೋತ್ಸಾಹಿಸುತ್ತಿರುವ ಇಂಥ ಮಹನೀಯರೇ ಕನ್ನಡದ ಕಟ್ಟಾಳುಗಳಾಗಲಿ, ಭಾಷಣ ಮಾಡುವ ನಾವುಗಳು ಅಲ್ಲವೇ ಅಲ್ಲ ಎನಿಸುತ್ತಿರುತ್ತದೆ ಇವರ ಈ ಔದಾರ್ಯವನ್ನು ಕಂಡಾಗ.
ಹಾಗೆ ಇತ್ತೀಚೆಗೆ ಹುಬ್ಬಳ್ಳಿಗೆ ಹೋದಾಗ, ಸ್ನೇಹಿತ ಸುಬ್ರಹ್ಮಣ್ಯರು ಕೆಲವು ಪುಸ್ತಕಗಳ ಜತ ಡಿ.ವಿ.ಜಿ ಯವರ 1950 ರಲ್ಲಿ ಕಾವ್ಯಾಲಯ ಪ್ರಕಾಶನದಿಂದ ಪ್ರಕಟವಾಗಿ ಈಗ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿಯಿಂದ ಇದೇ ವರ್ಷ 2021 ರಲ್ಲಿ ಮೊದಲ ಮುದ್ರಣವಾದ ಸಾಹಿತ್ಯ ಶಕ್ತಿ ಎಂಬ ಡಿ.ವಿ.ಜಿ ಮಾಡಿದ ಹನ್ನೆರೆಡು ಉಪನ್ಯಾಸಗಳು ಎಂಬ ಪುಸ್ತಕ ಕೊಟ್ಟಿದ್ದರು. ಓದುತ್ತಾ ಹೋದಂತೆ ಬರಹ, ಭಾಷಣಗಳು ಹೇಗಿಬೇಕು ಎಂಬುದಕ್ಕೆ 1950ನೇ ಇಸವಿಯ ಆ ಪುಸ್ತಕ ಇಂದಿಗೂ ಮಾದರಿ, ಕೈಗನ್ನಡಿ ಎನಿಸಿಬಿಟ್ಟಿತು. ಅಲ್ಲಿನ ಲೇಖನಗಳಲ್ಲಿ ಅದೇನು ಕನ್ನಡ ಪದಗಳ ವಿಜೃಂಭಣೆ, ಅದೆಷ್ಟು ನಿಖರವಾದ ಜ್ಞಾನ ಆ ಹಿರಿಯರದು ಎನಿಸಿಬಿಟ್ಟಿತು. ಇವರು ಹೇಳಿರುವ ಕನ್ನಡ ಪದಗಳನ್ನು ಉಚ್ಚರಿಸಲೂ ನಮಗೆ ಬರುತ್ತಿಲ್ಲ. ಆ ಯೋಗ್ಯತೆಯೂ ಇಲ್ಲ ಎನಿಸಿಬಿಟ್ಟಿತು.
ಹನ್ನೆರಡು ಉಪನ್ಯಾಸಗಳ ಈ ಪುಸ್ತಕ, ಐವತ್ತು ಪುಸ್ತಕಗಳ ಅನೇಕ ಗ್ರಂಥಗಳ, ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಬಗೆಗೂ ಓದುಗ, ಕೇಳುಗರಲ್ಲಿ ಆಸಕ್ತಿ ಹುಟ್ಟಿಸುವ ಅಪರೂಪದ ವಾಗ್ಮಿತೆಗೆ ಉದಾಹರಣೆ. ‘ಐತರೇಯ ಶೃತಿ’ಯ ಈ ವಾಕ್ಯ ‘ಮಾತು ನನ್ನ ಮನಸ್ಸಿನಲ್ಲಿ ನೆಲೆಸಿರತಕ್ಕದ್ದು; ಮನಸ್ಸು ನನ್ನ ಮಾತಿನಲ್ಲಿ ನೆಲೆಸಿರತಕ್ಕದ್ದು’ ಎಂಬ ಉಕ್ತಿಗೆ ಇಲ್ಲಿನ ಉಪನ್ಯಾಸಗಳಿವೆ. ಸಾಹಿತ್ಯ, ಕಾವ್ಯಗಳ ಆಸಕ್ತಿ ಇದೊಂದು ಯಜ್ಞದ ತರಹ ಇರಬೇಕೆಂದು ತೈತ್ತೀರಿಯ ಶೃತಿಯ ವಾಕ್ಯಗಳ ಉಲ್ಲೇಖ ಇದನ್ನು ಸಾರಸ್ವತ ಯಜ್ಞ ಎಂದು ವರ್ಣಿಸಿರುವುದಂತೂ ಮಾತನಾಡುವವರೆಲ್ಲರೂ ತಿಳಿದಿರಲೇಬೇಕಾದ ಪರಮ ಸತ್ಯ, ಬಾಯಿಗೆ ಬಂದಂತೆ ಮಾತನಾಡುವ ನಾವುಗಳು ಈ ಶ್ಲೋಕ ವನ್ನು ಇದರ ಅರ್ಥವನ್ನು ಕಲ್ಪನೆಯಲ್ಲೂ ಊಹಿಸಲಾರೆವು
ಚಿತ್ತಿಃಸ್ರುಕ್ | ಚಿತ್ತಮಾಜ್ಯಮ್ | ವಾಗ್ವೇದಿಃ | ಆಧಿತಂ ಬರ್ಹಿಃ | ಕೇತೋಗ್ನಿಃ | ವಿಜ್ಞಾನ ಮಗ್ನಿಃ | ವಾಕ್ಪರ್ಹೋತಾ | ಮನ ಉಪವಕ್ತಾ | ಪ್ರಾಣೋ ಹವಿಃ | ಸಾಮಾಧ್ವರ್ಯುಃ ||
(ಮಾತನಾಡುವಾಗ, ವಿಕಾರವಲ್ಲದ ಅಂತಃಕರಣವೇ ಸವುಟು; ಆಕಾರ ತಳೆದ ಅಂತಃಕರಣವೇ ಆಜ್ಯಃ | ವಾಕ್ಕೇಯಜ್ಞ ವೇದಿಕೆ: ನುಡಿಯುವ ಮಾತೇ ಧರ್ಬೆ: ಕೇವಲ ಜ್ಞಾನವೇ ಅಗ್ನಿ ; (ಆಹವನೀಯ); ಉದ್ದೇಶ ಮಿಶ್ರಿತ ಜ್ಞಾನವೇ ಇನ್ನೊಂದು ಅಗ್ನಿ (ಗಾರ್ಹಪತ್ಯ): ವಾಕ್ಯ ಶಕ್ತಿಯುಳ್ಳವನೇ ಮಂತ್ರ ಹೇಳುವ ಹೋತೃ: ಮನಸ್ಸೇ ಸರಿ ನೋಡುವ ಉಪವಕ್ತ: ಪ್ರಾಣವೇ ಹವಿಸ್ಸು : ಗಾನವೇ ಪುರೋಹಿತ’ ಈ ವಿಧವಾದದ್ದನ್ನು ಸಾರಸ್ವತ ಯಜ್ಞ ಎಂದು ಕರೆಯುತ್ತಾರೆ)
ಇದನ್ನು ಓದಿ ನನಗೆ ರೋಮಾಂಚನವಾಗಿ ಹೋಯಿತು. ಇದನ್ನು ಅರಿತು ಹೀಗೆ ಮಾತನಾಡುವವರು ಯಾರಾದರೂ ಇದ್ದಾರೆಯೇ? ನಮ್ಮ ಅಸೆಂಬ್ಲಿಗಳಲ್ಲಿ ನಮ್ಮ ರಾಜಕಾರಣಿಗಳ ಮಾತು, ಜಗಳ, ರೋಷ, ದರ್ಪ, ಭುಜ ತಟ್ಟಿಕೊಳ್ಳುವುದು, ಬಟ್ಟೆಯನ್ನೆ ಬಿಚ್ಚಿ ಹೆಗಲಿಗೆ ಹಾಕಿಕೊಳ್ಳುವುದು, ಅಂಗಿಯನ್ನೆ ಕಳಚಿ ತೂರುವುದು ಆಹಾ. ಎಂಥ ಈ ನೆಲದ ಮೇಲೆ ಎಂಥ ಜನರು ಹುಟ್ಟಿದ್ದೇವೆ ಎನಿಸಿಬಿಡುತ್ತದೆ.
ಇನ್ನು ಕೆಲವು ಪ್ರಗತಿಪರ, ಬುದ್ಧಿಜೀವಿಗಳೆನಿಸಿಕೊಂಡವರ ಸಾಹಿತ್ಯ, ಕಾವ್ಯಗಳಂತೂ ಶಾಸ್ತ್ರ, ಪುರಾಣ, ಧರ್ಮ ದೇವರುಗಳನ್ನು ಜರಿಯುವುದೇ ನಿಂದಿಸುವುದೇ ಅವಹೇಳನಗೈಯ್ಯುವುದೇ, ಅವರನ್ನು ಬುದ್ಧಿವಂತರೆಂದು ಹೇಳಿಕೊಳ್ಳುವ ಅಳತೆ ಗೋಲಾಗಿಬಿಟ್ಟಿದೆ. ಹೀಗೆ ಬೈದ, ಬೈಯ್ಯುವ ಬುದ್ಧಿವಂತಿಕೆಗೆ ನಮ್ಮ ಸರಕಾರ ಗಳು ಪ್ರಶಸ್ತಿಗಳನ್ನು ಕೊಟ್ಟು ಆಯಕಟ್ಟಿನ ಸ್ಥಳಗಳಲ್ಲಿ ಎತ್ತರದಲ್ಲಿ ಕೂರಿಸುತ್ತವೆ ಆದರೆ, ಇಲ್ಲಿ ಶ್ರೀಯುತ ಡಿ.ವಿ.ಜಿ ಬರೆಯುವುದನ್ನು ಓದಿರಿ, ಸಾಹಿತ್ಯ ಶಕ್ತಿ ಎಂದರೆ ‘ಶಾಸ್ತ್ರದ ಆಸಕ್ತಿ’ ಎಂದು ಯಾರೂ ಅರ್ಥ ಮಾಡಲಾರರು ವಿಜ್ಞಾನಾದಿ ಶಾಸ್ತ್ರಗಳು ನಮ್ಮ ದೇಶದಲ್ಲಿ ಅಭಿವೃದ್ಧಿಪಡೆಯ ಬೇಕೆಂದು ಆಸೆಪಟ್ಟು ಕೊಂಡಿರುವವರಲ್ಲಿ ನಾನೂ ಒಬ್ಬ.
ಆದರೆ, ಶಾಸ್ತ್ರವು ಸಾಹಿತ್ಯವನ್ನು ಬಿಟ್ಟಾಗ ಒಣಗಿದ ಮರುಭೂಮಿ ಯಾದೀತು. ವಿತಂಡವಾದಕ್ಕೆ ದಾರಿ ಮಾಡೀತು’ ಎಂದಿದ್ದಾರೆ. ಶಾಸ್ತ್ರ-ಕಾವ್ಯಗಳೆರೆಡೂ ಜತ ಜತಯಲ್ಲಿ ಇರಬೇಕಾದವು. ನಮ್ಮ ಎರಡು ಕಣ್ಣುಗಳಂತೆ, ನಮ್ಮ ಎರಡು ಕಾಲುಗಳಂತೆ, ಅವು ಅನ್ಯೋನ್ಯ ಸಹಕಾರಿಗಳು ಎರಡೂ ಸ್ನೇಹದಿಂದ ಒಟ್ಟಿಗೆ
ನಡೆದಾಗ ಮನುಷ್ಯ ಜೀವನದ ಉತ್ಕರ್ಷ, ಮನನೀಯ, ಸತ್ಯವಾದ ಮಾತುಗಳು. ಇಂದು ಏನು ಬರೆದರೂ ಅದು ಸಾಹಿತ್ಯ ಎಂದೇ ತಿಳಿದಿದ್ದಾರೆ. ಹೀಗಾಗಿ ಯಾರೂ ಯಾರು ಬರೆದಿದ್ದನ್ನೂ ಓದುತ್ತಿಲ್ಲ, ತಾವೇ ಬರೆದು ತಾವೇ ಓದಿಕೊಳ್ಳುತ್ತಿದ್ದಾರೆ.
‘ಜೇನು ತುಪ್ಪ ಬಾಯಿಗೆ ಸಿಹಿಯಾದಂತೆ ರಕ್ತಕ್ಕೆ ಶುದ್ಧಕಾರಿ. ಅದರಂತೆ ಸಾಹಿತ್ಯ ರಸ ಮನಸ್ಸಿಗೆ ಇಂಪಾದಂತೆ ಜೀವಕ್ಕೆ ಸಂಸ್ಕಾರಕಾರಿಯೂ ಆಗುತ್ತದೆ. ಭಕ್ಷ್ಯವೇ ಔಷಧವೂ ಆಗುವಂಥ ವಿಶೇಷ ಅದರದು, ನಾಲಿಗೆಗೆ ದೊರೆಯುವುದು ಶುಚಿಯಾದರೆ, ಮೇಲಕ್ಕೆ ಕಾಣಿಸದೇ ಜೀವದೊಳಕ್ಕೆ ಇಳಿಯುವುದು ಸತ್ವ. ಸಾಹಿತ್ಯ ವೆಂದರೆ ಅದು ಎದೆಯನ್ನು ಅಲುಗಿಸುವಂಥಹ ಮಾತು. ಯಾವ ವಾಕ್ಯವನ್ನು ಓದಿದರೆ, ಅಥವಾ ಕೇಳಿದರೆ, ನಮ್ಮ ಹೃದಯದಲ್ಲಿ ಒಂದಾನೊಂದು ಚಲನೆಯ ಅನುಭವ ಉಂಟಾಗುತ್ತದೆಯೋ, ಆ ವಾಕ್ಯವೇ ಸಾಹಿತ್ಯ.
ಸಾಹಿತ್ಯದ ಸಾರಭಾಗ ಕಾವ್ಯ, ಮನಸ್ಸಿಗೆ ಒಂದು ಹಿತ, ಒಂದು ರಮಣೀಯವಾದ ವಿಕಾರವನ್ನುಂಟಾಗಿಸಿ ಆ ಮೂಲಕ ಬುದ್ಧಿಯನ್ನು ಅರಳಿಸಬಲ್ಲ ವಾಕ್ಯ ಸಮೂಹವೇ ಕಾವ್ಯ. ಜೀವದ ಕೊಳೆ ಕಶ್ಮಲಗಳನ್ನು ತೊಳೆಯಬಲ್ಲ ತೀರ್ಥವೆಂದರೆ ಕಾವ್ಯತೀರ್ಥ. ಕಾವ್ಯವೆಂದರೆ ಕಥೆ, ಕಾದಂಬರಿ, ನಾಟಕ, ಹಾಡು, ಪದ್ಯ ಇವೇ ಮೊದಲಾದ ಮನಃ ಪರಿವರ್ತಕ ಪ್ರಭಾವವುಳ್ಳ ಸಾಹಿತ್ಯ. ಸ್ವಾತಂತ್ರ್ಯ ಸಿಕ್ಕ ಹೊಸದರಲ್ಲಿ ಅನೇಕ ಕವಿ, ಸಾಹಿತಿಗಳೂ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆಗ
ಅವರು ಓಟು ಕೇಳುವ ರೀತಿಯೂ ಕಾವ್ಯಾತ್ಮವಾಗಿತ್ತಂತೆ.
‘ನನ್ನಗೆದಿಸಲು ನಿಮಗೆ ಸಕಲ ಸಂಪತ್ತು ಇನ್ಯಾರು ಗೆದ್ದರೂ ತಪ್ಪದು ನಿಮಗೆ ವಿಪತ್ತು’ ಹೀಗೆ ಮಾತನಾಡಿದರೆ ಅದು ವಿನಯವೆ? ಘನತೆಯೆ? ಆದರೆ ಇಂಥ ಮಾತಿಲ್ಲದೇ ಪ್ರಜಾರಾಜಕೀಯದಲ್ಲಿ ಜಯ ದುರ್ಲಭ. ಇನ್ನು ಕನ್ನಡದ ಮಧ್ಯೆ ಇಂಗ್ಲೀಷ್ ತುರುಕುವ, ತನಗೆ ಕನ್ನಡ ಬಾರದು ಇಂಗ್ಲೀಷೇ ಬರುತ್ತದೆ ಎಂದು
ತೋರಿಸಿಕೊಳ್ಳುವುದೇ ಒಂದು ದೊಡ್ಡತನ. ಇದು 1947-50 ರಿಂದಲೇ ಆರಂಭವಾಗಿತ್ತು ಎಂಬುದನ್ನು ಶ್ರೀ ಡಿ.ವಿ.ಜಿ ಯವರು ಒಂದು ಹಾಸ್ಯ ಪ್ರಸಂಗದ ಮೂಲಕ ಬಹು ಚೆನ್ನಾಗಿ ವಿವರಿಸಿದ್ದಾರೆ. ಒಬ್ಬ ಡಾಕ್ಟರ ಬಳಿ ಒಬ್ಬ ವ್ಯಕ್ತಿ ಬಂದ, ಡಾಕ್ಟರೆದುರಿಗೆ ತನಗೆ ಇಂಗ್ಲೀಷ್ ಬರುತ್ತದೆ ಎಂದು ತೋರಿಸಿಕೊಳ್ಳೊ ಹಮ್ಮು, ಆದರೆ ಡಾಕ್ಟರಾಗಿದ್ದರೂ ಡಿ.ವಿ.ಜಿ ಸ್ನೇಹಿತರಿಗೆ ಕನ್ನಡದ ಬಗ್ಗೆ ವಿಶೇಷ ಅಭಿಮಾನ, ಬಂದ ವ್ಯಕ್ತಿ ‘ಡಾಕ್ಟರ್ ಸರ್, ನನ್ನ ವೈಫ್ಗೆ ನಿನ್ನೆ ನೈಟು ಫಿವರ್ ಬಂದು, ಫೋರ್-ಫೈವ್ ಟೈಮ್ಸ್ ವಾಮಿಟ್ ಆಯಿತು. ತಾವು ಸ್ವಲ್ಪ, ಎಕ್ಸಾಮಿನ್ ಮಾಡಿ ಪ್ರಾಪರ್, ಅಪ್ರೋಪ್ರಿಯೇಟ್ ಮೆಡಿಸಿನ್ಸ್ ಕೊಡಬೇಕು’ ಎಂದನಂತೆ.
ಅದಕ್ಕೆ ಆ ಡಾಕ್ಟರ್ ಸ್ನೇಹಿತರು ‘ಓಕೆ, ಆಕೆ ಕಮ್ ಮಾಡಿದರೆ, ನಾನು ಇಲ್ಲಿ ಸಿಟ್ ಮಾಡಿಸಿ, ಸೀ ಮಾಡಿ, ಮೆಡಿಸಿನ್ ಕೊಡುತ್ತೇನೆ’ ಎಂದರಂತೆ. ಇಂದಿಗೂ ಇಂಥವರಿದ್ದಾರೆ. ಹಳ್ಳಿಗಾಡಿನಲ್ಲಿ ಹುಟ್ಟಿ ಬಂದು ಬಿ.ಎ ನೋ, ಎಂ.ಎ ನೋ ಮಾಡಿಕೊಂಡರೆ ಸಾಕು, ಮಾತನಾಡುವಾಗ, ಭಾಷಣ ಮಾಡುವಾಗ ಈಗಲೂ ಅನೇಕ ಲೆಕ್ಚರರ್ ಗಳು, ಪ್ರೊಫೆಸರ್‌ಗಳು ಮಾತು ಮರೆತಾಗ ‘ವಾಟ್ ಯು ಸೇಇನ್ ಯುವರ್ ಕನ್ನಡ’ ಎಂದು ಪ್ರೇಕ್ಷಕರನ್ನೇ ಕೇಳುತ್ತಾರೆ. ಅದು ನಮ್ಮ ಅಂದರೆ, ಪ್ರೇಕ್ಷಕರ ಕನ್ನಡವಂತೆ, ತಾವು ಮೋಟ ಗಾನ ಹಳ್ಳಿಯಿಂದ ಬಂದಿದ್ದರೂ, ಮ್ಯಾಂಚೆಸ್ಟರ್‌ನಿಂದ ಬಂದವರಂತೆ ಆಡುತ್ತಿರುತ್ತಾರೆ.
ಒಟ್ಟಿನಲ್ಲಿ ಡಿ.ವಿ.ಜಿ ಯವರ ಹನ್ನೆರೆಡು ಉಪನ್ಯಾಸಗಳ ಪುಸ್ತಕ ಸಾಹಿತ್ಯ ಶಕ್ತಿ ಓದಲು ಬರುವ ಪ್ರತಿಯೊಬ್ಬ ಕನ್ನಡಿಗನೂ ಓದುವಂಥ ಕೃತಿ. ನಾನು ಇದನ್ನು ಆಗಾಗ ಓದುತ್ತಲೇ ಇರುತ್ತೇನೆ. ಈಗೊಂದೊರೆಡು ವರ್ಷಗಳ ಹಿಂದೆ ಅರ್ಥ ವಾಗದ ಕೆಲವು ಅಧ್ಯಾಯಗಳು, ನನ್ನ ಪ್ರವಾಸ, ಬೇರೆಯವರ ಪುಸ್ತಕ ಓದುವಿಕೆ, ನಾನೇ ಲೇಖನ ಬರೆಯಬೇಕಾಗಿರುವ ಅಂಕಣಗಳಿಗಾಗಿ, ಇದನ್ನು ಆಗಾಗ ಓದಿದರೆ ಹಿಂದೆ ಅರ್ಥವಾಗದ ಕೆಲವು ಸಾಲುಗಳು ಈಗ ಬೇಗ ಅರ್ಥವಾಗುತ್ತಿವೆ ಎಂದರೆ, ನಮ್ಮ ಅನುಭವವೂ ನಮ್ಮ ಮೆದುಳಿಗೆ ಚೈತನ್ಯ ತುಂಬಿ ಅವರ ಅನುಭವಗಳಿಗೆ ಹತ್ತಿರವಾಗಿ ಈ ಜ್ಞಾನ ಬರುತ್ತದೆ ಎನಿಸುತ್ತಿದೆ.
ಓದು ಬೇರೆ, ಜ್ಞಾನ ಬೇರೆ ಎಂಬ ಸತ್ಯದ ಅರಿವಾಗುವಂತಹ ಇಂತಹ ಪುಸ್ತಕಗಳನ್ನು, ಡಿ.ವಿ.ಜಿ ಯಂಥವರ ಪುಸ್ತಕಗಳನ್ನು ಓದಿದಾಗ ಅವರಂಥಾಗದಿದ್ದರೂ
ಅವರನ್ನು ಅರ್ಥ ಮಾಡಿಕೊಳ್ಳಲಾರಂಭಿಸಿದೆವಲ್ಲ ಎಂಬ ಧನ್ಯತೆ ಉಂಟಾಗುತ್ತದೆ, ಅವರ ಆತ್ಮಗಳೂ ಕೂಡಾ ಈಗ ಎಲ್ಲೇ ಇರಲಿ, ನಾನು ಬರೆದದ್ದೂ ಸಾರ್ಥಕವಾಯಿತು ಎಂದು ಹಿಗ್ಗು ತ್ತವೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂಬ ಮಾತಿಗೂ ಅರ್ಥ ಇದೆ ಇರಬಹುದೇನೋ ಎನಿಸುತ್ತದೆ ಕೂಡಾ.