Wednesday, 9th October 2024

ಶೈಕ್ಷಣಿಕ ವರ್ಷ ಸವಾಲುಗಳ ನಡುವೆ ಸುಗಮವಾಗಿ ಸಾಗಲಿ

ಅಭಿಮತ

ಭಾರತಿ ಎ.ಕೊಪ್ಪ

ಕರೋನಾ ಕರಿನೆರಳಿನ ಸುದೀರ್ಘ ರಜೆಯ ಬಳಿಕ ಶಾಲಾ-ಕಾಲೇಜುಗಳಲ್ಲಿ ಮರಳಿ ಮಕ್ಕಳ ಕಲರವ ಆರಂಭವಾಗಿದೆ. ಶೇ.100 ರ ಹಾಜರಾತಿಯಲ್ಲಿ ಮಕ್ಕಳು ಭೌತಿಕ ತರಗತಿಗೆ ಹಾಜರಾಗುತ್ತಿಲ್ಲವಾದರೂ, ದಿನೇ ದಿನೇ ಹಾಜರಾತಿಯ ಶೇಕಡ ಪ್ರಮಾಣ ಏರುಗತಿಯಲ್ಲಿ ಸಾಗುತ್ತಾ 6 ನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿ ಗಳು ಶಾಲೆಯತ್ತ ಮುಖ ಮಾಡಿರುವುದು ಶಿಕ್ಷಣ ಕ್ಷೇತ್ರಕ್ಕೆ ಸಂತಸದ ವಿಚಾರವೇ ಆಗಿದೆ.

ಸುದೀರ್ಘ ಕಾಲ ಮನೆಯ ಕುಳಿತಿದ್ದ ಮಕ್ಕಳಿಗೆ ಶಾಲೆಗೆ ಹಾಜರಾಗುವ ಸಂಭ್ರಮ ಒಂದೆಡೆಯಾದರೆ, ಮಕ್ಕಳ ಆಗಮನಕ್ಕೆ ಕಾಯುತ್ತಿದ್ದ ಶಿಕ್ಷಕರಿಗೆ ಭೌತಿಕ ತರಗತಿಯ ಆರಂಭ ನವೋಸ ನೀಡಿದೆ ಎಂದರೆ ತಪ್ಪಾಗಲಾರದು. ಕಲಿಕೆಯ ವಿಷಯ ಬರೀ ತಿಳುವಳಿಕೆಯ ಮಟ್ಟದಲ್ಲಿ ಉಳಿಯದೇ ಹೆಚ್ಚು ಅರ್ಥಪೂರ್ಣ ಮಾಡ ಬಲ್ಲ ಮನುಷ್ಯನೊಬ್ಬ ಬೇಕು.ಆತನೇ ಗುರು ಎಂದು ಪಿ.ಲಂಕೇಶ್ ಅವರು ಹೇಳಿದಂತೆ ಯಾವುದೇ ವಿಷಯವನ್ನು ಅರ್ಥಪೂರ್ಣವಾಗಿ ವಿದ್ಯಾರ್ಥಿಗೆ ತಿಳಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಅಗತ್ಯ.

ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಅಂಶಗಳನ್ನು ಅರ್ಥಪೂರ್ಣವಾಗಿ ತಲುಪಿಸುವಲ್ಲಿ ಶಿಕ್ಷಕರ ಮುಂದೆ ಬಹಳ ದೊಡ್ಡ ಸವಾಲಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಡಿಮೆ ಕಲಿಕಾ ದಿನಗಳು ಲಭ್ಯವಾದ ಕಾರಣ ಶೇ.30ರಷ್ಟು ಪಠ್ಯವನ್ನು ಕಡಿತಗೊಳಿಸಲಾಗಿತ್ತು. ಅದಲ್ಲದೆ ಮುಖಾಮುಖಿ ತರಗತಿಗಳು ನಡೆದ ದಿನಗಳೂ ಕಡಿಮೆ ಇತ್ತು. ಹಾಗಾಗಿ ಮಕ್ಕಳಲ್ಲಿ ಹಿಂದಿನ ತರಗತಿಯ ಒಂದಿಷ್ಟು ಕಲಿಕಾಂಶಗಳು ದೃಢಗೊಂಡಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯಾಂಶವನ್ನು ಕಲಿಸುವಾಗ ಸೇತುಬಂಧ ಮಾಡಿ, ಹಿಂದಿನ ತರಗತಿಯ ಕಲಿಕೆಯ ಪುನರ್ ಮನನ ಮಾಡಿದ್ದರೂ, ಹೊಸ ಕಲಿಕಾಂಶಗಳನ್ನು ಕಲಿಯುವಾಗ, ಹಿಂದಿನ ತರಗತಿಯ ಕಲಿಕಾ ಕೊರತೆ ಬಹಳವಾಗಿ ಕಾಣುತ್ತದೆ.

ಹಾಗಾಗಿ ವಿದ್ಯಾರ್ಥಿಗಳಿಗೆ ಪಾಠಾಂಶಗಳನ್ನು ಸುಲಭವಾಗಿ ತಲುಪಿಸುವುದು ಸವಾಲಿನ ವಿಷಯವಾಗಿದೆ. ಕಲಿಕಾ ಚಟುವಟಿಕೆಗಳಲ್ಲಿ ಸರಳೀಕೃತ ವಿಧಾನ, ಪೂರಕ ಕಲಿಕೋಪಕರಣ ಬಳಕೆ, ನಾವೀನ್ಯಯುತ ಚಟುವಟಿಕೆಗಳ ಮೂಲಕ ಕಲಿಕಾ ಕೊರತೆಯನ್ನು ನೀಗಿಸಿ, ಸವಾಲುಗಳನ್ನು ಸರಿದೂಗಿಸಬೇಕಿದೆ. ಕೇವಲ ಪಾಠಾಂಶದ ವಿಚಾರ ಮಾತ್ರವಲ್ಲದೆ, ಸಹಪಠ್ಯ ಚಟುವಟಿಕೆಗಳೂ ಕೂಡಾ ಕಲಿಕಾ ಪಯಣದಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತವೆ. ದೀರ್ಘಕಾಲದ ರಜೆಯಲ್ಲಿ ಮನೆಯ ಪರಿಸರಕ್ಕೆ ಹೊಂದಿಕೊಂಡಿದ್ದ ಮಕ್ಕಳ ಮನಸ್ಸು ಮತ್ತು ಅವರ ಕಾರ್ಯಚಟುವಟಿಕೆಗಳನ್ನು ಕಲಿಕಾ ವಾತಾವರಣಕ್ಕೆ ಪ್ರೇರೇಪಿಸುವುದು ಕೂಡ ಒಂದು ಸವಾಲೇ ಸರಿ. ಮಕ್ಕಳು ಸಣ್ಣಪುಟ್ಟ ವೇದಿಕೆಗಳಲ್ಲೂ ಕೂಡ ನಿಂತು ಮಾತನಾಡದೇ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಒಂದೂವರೆ ವರ್ಷಗಳೇ ಕಳೆಯಿತು.

ಅಂತಹ ಮಕ್ಕಳ ಮನಸ್ಸನ್ನು ,ಕಾರ್ಯಚಟುವಟಿಕೆಗಳನ್ನು ಸಾಂಸ್ಕೃತಿಕ ವೇದಿಕೆಯತ್ತವೂ ಪ್ರೇರೇಪಿಸಬೇಕಿದೆ. ತರಗತಿಯ ಕೊಠಡಿಗಳಲ್ಲಿ ಆಗಾಗ್ಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದರ ಮೂಲಕ ಮೊದಲಿನ ಲಯ ಕಂಡುಕೊಳ್ಳಲು ಪ್ರಯತ್ನಿಸಬೇಕಿದೆ. ಆಟವು ಮಾನವನ ವಿಕಾಸದ ಅತ್ಯುನ್ನತ ಹಂತ ಎಂಬ ಪ್ರೊಬೆಲ್‌ರ ನುಡಿಯಂತೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಆಟಗಳು ಬಹಳ ಮುಖ್ಯ. ಸುದೀರ್ಘ ಸಮಯ ಮನೆಯೊಳಗೆ ಬಂಧಿಯಾಗಿದ್ದ ಮಕ್ಕಳು
ಆಟವಾಡುವ ಅವಕಾಶದಿಂದ ವಂಚಿತರಾಗಿzರೆ. ಮನೆಯ ಬಂಧನದಿಂದ ಅವರ ದೇಹ ಮತ್ತು ಮನಸ್ಸು ಜಿಡ್ಡುಗಟ್ಟಿದೆ. ಆ ಮಕ್ಕಳನ್ನು ಶಾಲಾ ಭೌತಿಕ ತರಗತಿ ಯಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಳ್ಳಲು ಶಿಕ್ಷಕರು ಆಟಗಳಿಗೂ ಪ್ರೇರೇಪಿಸಬೇಕು.

ಶಾಲೆ ಆರಂಭವಾದರೂ, ಶೈಕ್ಷಣಿಕ ವರ್ಷ ವಿಳಂಬವಾಗಿದೆ. ಪಠ್ಯಕ್ರಮ ಪೂರ್ಣಗೊಳಿಸಿ, ಮೌಲ್ಯಮಾಪನ ಮಾಡುವುದು, ಪಬ್ಲಿಕ್ ಪರೀಕ್ಷೆ ಗೆ ಒಳಪಡುವ ಮಕ್ಕಳಿಗೆ ಪರೀಕ್ಷಾ ತಯಾರಿ ನಡೆಸುವುದು, ಎಲ್ಲಾ ಒತ್ತಡಗಳು ಶಿಕ್ಷಕರ ಪಾಲಿಗೆ ಸದಾ ಇದ್ದೇ ಇರುತ್ತದೆ. ಈ ಒತ್ತಡಗಳನ್ನು ಮೀರಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ, ಯೋಗ, ಆಟಗಳು, ಗ್ರಂಥಾಲಯ ಪುಸ್ತಕ ಓದು ಇವೆಲ್ಲಕ್ಕೂ ಸಮಯದ ಹೊಂದಾಣಿಕೆ ಮಾಡಿಕೊಂಡಾಗ ಮಾತ್ರ ದೀರ್ಘಕಾಲ ನಿಸ್ತೇಜರಾಗಿದ್ದ ಮಕ್ಕಳು ಹೊಸ ತೇಜಸ್ಸು ಪಡೆಯುವಂತಾಗುತ್ತದೆ.