Friday, 13th December 2024

ಶಿಕ್ಷಣ ಮತ್ತು ವಿದ್ಯಾಭ್ಯಾಸ: ಒಂದು ಅವಲೋಕನ

ದಾಸ್ ಕ್ಯಾಪಿಟಲ್

dascapital1205@gmail.com

ಒಂದು ನಿರ್ದಿಷ್ಟ, ಬದುಕಿನ ತೀರ ಸಮೀಪದ ಗುರಿಗಾಗಿ ಪಡೆಯುವ ತರಬೇತಿಗೆ ಶಿಕ್ಷಣ ಎಂದು ಕರೆದರೆ, ವಿದ್ಯೆಯ ಗುರಿ, ಆತ್ಮವಿಕಾಸ, ವ್ಯಕ್ತಿತ್ವದ ಆವಿಷ್ಕಾರ, ಪೂರ್ಣತೆಯ ಹಂಬಲದ ಪೂರೈಕೆ, ಮನುಷ್ಯ ಮಾನವನಾಗಿ ಬಾಳಿ ಬದುಕಬೇಕೆಂಬ ಆಕಾಂಕ್ಷೆ, ಇದರಿಂದ ಬರುವ ಅಲೌಕಿಕ ತೃಪ್ತಿ, ಆನಂದ, ನೆಮ್ಮದಿ, ಜೀವನ ಸೊಗಸು, ಚೆಲುವು, ಅರಿವಿಗಾಗಿ ಹಂಬಲಿಸಿ ಪಡೆಯುವ ಜ್ಞಾನ, ವಿವೇಕ, ಜೀವನಕ್ಕೆ ಅನಿವಾರ್ಯವಾಗಿ ಬೇಕಾದ ಸಾಂತ್ವನ, ಬೆಳಕು, ಅರ್ಥ ಪುರುಷಾರ್ಥದ ಕಲ್ಪನೆ, ಮಾನವ ಸಂಬಂಧದ ತಿಳಿವಳಿಕೆ, ಜ್ಞಾನಕ್ಕಾಗಿ ಜ್ಞಾನವೆಂಬ ಗುರಿಯ ಎಲ್ಲ ಮುಖದ ಜೀವನ ರಹಸ್ಯಗಳ ಅರಿವು- ಒಟ್ಟಿನಲ್ಲಿ ಬದುಕನ್ನು ಬಾಳನ್ನಾಗಿಸಬಲ್ಲ ಸಹನೀಯವನ್ನಾಗಿಸಬಲ್ಲ, ಪ್ರೇಮಾರ್ಹ ವನ್ನಾಗಿಸಬಲ್ಲ, ಮೌಲ್ಯ ಪ್ರೇಮಗಳನ್ನು ಕಲಿಸಬಲ್ಲ ಕಲೆಯನ್ನು ರಕ್ತಗತ ವಾಗಿಸಬಲ್ಲ ಬೋಧೆಗೆ ವಿದ್ಯಾಭ್ಯಾಸ ಎಂದು ಕರೆಯಲಾಗುತ್ತದೆ.

ಶಿಕ್ಷಣ ಮತ್ತು ವಿದ್ಯಾಭ್ಯಾಸದ ಅರ್ಥ ಸರಿಯಾಗಿ ಗೊತ್ತಿಲ್ಲದಿರುವುದಕ್ಕೆ ಮುಖ್ಯ ಕಾರಣ ಎರಡರ ನಡುವಿನ ಅಂತರವೇ ತಿಳಿಯದಿರುವು ದರಿಂದ! ಶಿಕ್ಷಣಕ್ಕೆ ವ್ಯಾವಹಾರಿಕ, ಪ್ರಕೃತ ಆಯ್ದ ಕ್ಷೇತ್ರವೊಂದರ ನಿರ್ದಿಷ್ಟ ಪ್ರಗತಿಯ ಗುರಿ ಇದ್ದಂತೆ, ವಿದ್ಯೆಗೆ ಹಾಗೊಂದು ಗುರಿಯಿಲ್ಲವೆಂಬುದು ಮುಖ್ಯ ವ್ಯತ್ಯಾಸ. ಉದಾಹರಣೆಗೆ, ಶಿಕ್ಷಣದಲ್ಲಿ ಸೈನಿಕ ಶಿಕ್ಷಣ, ಔದ್ಯೋಗಿಕ ಶಿಕ್ಷಣ, ವಾಣಿಜ್ಯ ಶಿಕ್ಷಣ, ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ, ವೈಮಾನಿಕ ಚಾಲನೆ, ತಂತ್ರಜ್ಞಾನ, ವೈದ್ಯಕೀಯಗಳಲ್ಲಿ ಆಯಾ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪರಿಣಿತಿ ರೀತಿಗೆ ಶಿಕ್ಷಣ ಎನ್ನುವುದು ಈ ಶಬ್ದದ ನಿರುಕ್ತಿಯಲ್ಲಡಗಿದ ಅರ್ಥ.

ಇದನ್ನೇ Training ಎಂದೂ ಕರೆಯಬಹುದು. ಒಂದರ ರೀತಿಯ ಶಿಕ್ಷಣ ಇನ್ನೊಂದು ಕ್ಷೇತ್ರಕ್ಕೆ ಅನ್ವಯವಾಗುವುದಿಲ್ಲ. ಕಾಲ ಬದಲಾದಂತೆ, ಸಂದರ್ಭ ಬೇರೆಯಾದಂತೆ ಇಲ್ಲ ಶಿಕ್ಷಣದ ಪದ್ಧತಿಯೂ, ಪರಿಣಿತಿಯ ಸಾಧನೆ, ಸಲಕರಣೆ, ಉಪಕರಣಗಳ
ಬಳಕೆಯ ರೀತಿಗಳಲ್ಲಿಯೂ ಬದಲಾವಣೆ ಅನಿವಾರ್ಯ. ಅಂದರೆ ಕಾಲಕಾಲಕ್ಕೆ ಅಪ್ರಸ್ತುತವಾಗುತ್ತವೆ; ಹೊಸ ರೂಪ
ಪಡೆಯು ತ್ತವೆ. ಅದರೆ, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಶಿಕ್ಷಣದ ಆರಂಭದ ಕೆಲವು ವರ್ಷಗಳಲ್ಲಿ ಈ ಔಪಚಾರಿಕ ಶಿಕ್ಷಣ ವಿದ್ಯಾಭ್ಯಾಸದ ಮೌಲ್ಯಗಳನ್ನು ಹೊಂದಿತ್ತು.

1990ರವರೆಗೂ ಹಾಗೂ ಸರಿಹೊತ್ತಿನವರೆಗೂ ಅಂಥ ಮೌಲ್ಯಗಳನ್ನು ಪ್ರತಿನಿಽಸುವ ಶಿಕ್ಷಣದ ಪರಿಕಲ್ಪನೆಗಳು ಸಾಮಾಜಿಕ ವಾಗಿ ಅಲ್ಲಲ್ಲಿವೆ. ಆದರೆ ಯಾವಾಗ ಕಾರ್ಪೊರೇಟ್ ಪ್ರಪಂಚ ಶಿಕ್ಷಣಕ್ಕೆ ಕಾಲಿಟ್ಟಿತೋ ಅಂದಿನಿಂದ ಶಿಕ್ಷಣವು ವ್ಯಾವಹಾರಿಕವಾಗಿ ಬಿಟ್ಟಿತು. ಸ್ವಾತಂತ್ರ್ಯೋತ್ತರ ಶಿಕ್ಷಣದ ಧ್ಯೇಯದ ಕುರಿತು ಯೋಚಿಸಿದರೆ ತಕ್ಷಣ ದೊಡ್ಡದಾದ ಕಛೇರಿಯಲ್ಲಿ ಹೆಚ್ಚು ಸಂಬಳದ ಉನ್ನತ ಹುದ್ದೆಯ ಕಲ್ಪನೆ ಹುಟ್ಟಿಕೊಂಡುತ್ತದೆ. ಶಿಕ್ಷಣದ ಹಲವು ಉದ್ದೇಶಗಳಲ್ಲಿ ಇದು ಒಂದು ಭಾಗವೇ ಹೊರತು ಇದೇ ಪ್ರಧಾನವಲ್ಲ.

ಶಿಕ್ಷಣದ ಸಾರ್ವಕಾಲಿಕ ಉದ್ದೇಶವೇನೆಂದರೆ, ಮಾನವನ ಅಂತರಂಗ ಮತ್ತು ಬಹಿರಂಗಗಳನ್ನು ಸಮೃದ್ಧಗೊಳಿಸುವುದು.
ಸ್ವಾತಂತ್ರ್ಯೋತ್ತರ ಶಿಕ್ಷಣದ ಬಗ್ಗೆ ೧೮೯೭ರಲ್ಲಿ ವಿವೇಕಾನಂದರು ಆಡಿದ ಒಂದು ಮಾತಿದು:  The Universities have not produced one original man. They are merely an examining body. ಜೀವನ ನಿರ್ವಹಣೆಗೆ ಬೇಕಾದ ಪ್ರಶಸ್ತಿ ಪತ್ರವನ್ನು ನೀಡುವ ಶಿಕ್ಷಣ ಪದ್ಧತಿಯಲ್ಲಿ ಮಾನವನ ಆಂತರಂಗಿಕ ಆಕೃತಿಗಳನ್ನು ಅಪೇಕ್ಷಿತ ಎನ್ನಬಹುದಾದ ಅಥವಾ ಒಟ್ಟೂ ಬದುಕನ್ನು ಸಮಗ್ರವಾಗಿ ಔನ್ನತ್ಯಕ್ಕೊಳಿಸುವ ಉದ್ದೇಶ ಸಾಫಲ್ಯವನ್ನು ಕಾಣುವುದಿಲ್ಲ. ಕಲಿಯುವುದು ಕೇವಲ ಹೊಟ್ಟೆ ಪಾಡಿಗಾಗಿ ಎಂದು ಭಾವಿಸಿದರೆ ಸ್ವಾತಂತ್ರ್ಯೋತ್ತರ ಶಿಕ್ಷಣ ಪದ್ಧತಿಯು ಸಾಕಷ್ಟು ಪ್ರಮಾಣದಲ್ಲಿ ಯಶಸ್ಸನ್ನೂ, ಔಪಚಾರಿಕ ಹಿನ್ನೆಲೆಯಲ್ಲಿ ಯಶಸ್ಸನ್ನೂ ಪಡೆದಿದೆ. ಆದ್ದರಿಂದ ಈ ಶಿಕ್ಷಣ ಕ್ರಮದಲ್ಲಿ ಮುಖ್ಯವಾಗಿ ವ್ಯಕ್ತಿಯ ಯಶಸ್ಸನ್ನು ಸಮುದಾಯ ನಿರ್ಧರಿಸುತ್ತದೆ. ಆದರೆ, ಸಾರ್ಥಕ್ಯವನ್ನು ವ್ಯಕ್ತಿಯೇ ನಿರ್ಧರಿಸುತ್ತಾನೆ.

ಏನೇ ಇದ್ದರೂ ಶಿಕ್ಷಣಕ್ಕೆ ಮತ್ತೊಂದು ಮುಖವೂ ಇದೆಯೆಂಬುದು ಸ್ಪಷ್ಟ. ಶಿಕ್ಷಿತರ ಅಪರಾಧಿ ಪ್ರವೃತ್ತಿ ಹೆಚ್ಚಿದೆ. ವೈದಿಕ
ಪಾಠಶಾಲೆಗಳು, ವಿವಿಧ ಮತ ಸಮುದಾಯಗಳು ನೀಡುವ ಶಿಕ್ಷಣದ ನೆಲೆಗಳು, ಮದರಸಾಗಳು ವ್ಯವಸ್ಥಿತವಾದ ರೀತಿಯಲ್ಲಿ
ಅಕ್ಷರದ ಮೂಲಕ ನೀಡುವ ಕ್ರಮ ಒಂದು ಬಗೆಯದ್ದಾದರೆ, ಅಕ್ಷರದ ತಿಳಿವಳಿಕೆಯಿಲ್ಲದೆ ನೀಡುವ ಜನಪದೀಯ ಶಿಕ್ಷಣ
ಇನ್ನೊಂದು ಬಗೆಯದ್ದು. ಇಂಥ ಪರಿಸ್ಥಿತಿಯಲ್ಲಿ ಭಾರತಕ್ಕೆ ಆಗಮಿಸಿದ್ದು ಯುರೋಪ್ ಮಾದರಿಯ ಶಿಕ್ಷಣ ಪದ್ಧತಿ. ಇದುವೇ ಮೆಕಾಲೆ ಇಂಗ್ಲಿಷ್ ಶಿಕ್ಷಣ ಪದ್ಧತಿ. ಇದು ಪರಿಣಾಮಕಾರಿಯಾಗಿ ಭಾರತದಲ್ಲಿ ನೆಲೆಯೂರಿತು.

ನೆಲೆಯೂರಿಸಿಕೊಂಡೆವು. ಕಾರಣವೇನೆಂದರೆ, ಇದರ ಅನುಷ್ಠಾನಕ್ಕೆ ಸಾಮಾಜಿಕವಾಗಿ ಸೂಕ್ತವಾದ ವೇದಿಕೆ ಅದಾಗಲೇ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿತ್ತು. ಒಂದು: ಜಾತಿಯ ಹಿನ್ನಲೆಯಲ್ಲಿ ಹುಟ್ಟಿದ ನ್ಯಾಯಿಕ ಪರಿಕಲ್ಪನೆಗಳು. ಇನ್ನೊಂದು: ಇಂಗ್ಲಿಷ್ ಶಿಕ್ಷಣ ಪದ್ಧತಿ ಪೂರ್ಣಪ್ರಮಾಣದಲ್ಲಿ ಸೆಕ್ಯುಲರ್ ಆಗಿರುವುದರಿಂದ. ಆದ್ದರಿಂದ ಸುಧಾರಣಾವಾದಿಗಳು, ಪ್ರಗತಿಪರರು, ಶಿಕ್ಷಣ ದಿಂದ ಶೋಷಣೆಗೊಳಪಟ್ಟವರು ಇದನ್ನು ಸ್ವಾಗತಿಸಿದರು.

ಇಂಗ್ಲಿಷ್ ಶಿಕ್ಷಣ ಪದ್ದತಿಯೇ ನಿಜವಾದ ಪ್ರಗತಿಪರ ಎಂದು ನಂಬಿದವರು ಆಗಲೂ ಇದ್ದರು. ಈಗಂತೂ ಬಿಡಿ, ಅದರದ್ದೇ ಖಾನ್ ದಾನ್ ಬೆಳೆದುಬಿಟ್ಟಿದೆ. ಕನ್ನಡದಂಥ ದೇಶೀಯ ಭಾಷೆಗಳು ಅಸ್ತಿತ್ವವನ್ನು ಕಳೆದುಕೊಂಡು ಬಿಟ್ಟಿದೆ! ಇದು ದೇಶೀಯ ಭಾಷೆ ಗಳ ದುರಂತ! ಯಾವುದೇ ಶಿಕ್ಷಣ ಪದ್ಧತಿಗಾಗಲೀ ಇಂಗ್ಲಿಷ್ ಶಿಕ್ಷಣಕ್ಕೆ ಪರ್ಯಾಯ ಪದ್ಧತಿಯನ್ನು ಸೃಜಿಸಲು ಸಾಧ್ಯವಾಗಲೇ ಇಲ್ಲವೆಂಬುದು ಗಮನಾರ್ಹ ವಿಚಾರ.

ಮುಂಬರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೇಶೀಯ ಭಾಷೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಇದು ಸ್ವಾಗತಾರ್ಹ. ಸಾಮ್ರಾಜ್ಯಶಾಹಿ ಭಾಷೆಗೆ ದೇಶೀಯ ಭಾಷೆಗಳನ್ನು ಕೊಲ್ಲುವ ಸಾಮರ್ಥ್ಯ ಇರುತ್ತದೆ. ಅದರಲ್ಲೂ ಇಂಗ್ಲಿಷ್ ಶಿಕ್ಷಣ ಪದ್ಧತಿ ಈಗಾಗಲೇ ವ್ಯಾಪಿಸಿರುವುದರಿಂದ ಕೊಂಚಮಟ್ಟಿಗಾದರೂ ದೇಶೀಯ ಭಾಷೆಗಳನ್ನು ಕಾಪಿಟ್ಟುಕೊಳ್ಳುವ ಎಚ್ಚರವನ್ನು ಪ್ರಭುತ್ವವೇ ಹೊಂದಿರುವುದರಿಂದ ಈ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ಯನ್ನು ನಾವು ಸ್ವಾಗತಿಸಬೇಕಾಗಿದೆ.

ಅಂದಮಾತ್ರಕ್ಕೆ ಅದರಲ್ಲಿ ಲೋಪದೋಷಗಳು, ನ್ಯೂನತೆಗಳು ಇಲ್ಲವೆಂದಲ್ಲ. ಮೊದಲು ಶಿಕ್ಷಣ, ಆನಂತರ ಸಾಕ್ಷರತೆ ಎಂಬ ಪರಿಕಲ್ಪನೆಯ ಮೇಲೆ ಶಿಕ್ಷಣ ನೀತಿ ರೂಪಿಸಬೇಕು. ಒಂದು ನಿದರ್ಶನ ಹೇಳುತ್ತೇನೆ: ಒಂದೊಮ್ಮೆ ನಮ್ಮ ಕಾರು ಕೆಟ್ಟು ಹೋಯಿತು ಎಂದುಕೊಳ್ಳಿ. ನನ್ನೂರ ಇರುವ ಒಬ್ಬಾತ ಅಕ್ಷರಜ್ಞಾನವೇ ಇಲ್ಲದವನು ಬಂದು ಅದನ್ನು ರಿಪೇರಿ ಮಾಡುತ್ತಾನೆ. ಆಗ ಅವನಲ್ಲಿ ಹತ್ತಾರು ಸಲ ಚೌಕಾಶಿ ಮಾಡಿ ಕೊನೆಗೂ ಅವನು ಹೇಳಿದ್ದಕ್ಕಿಂತ ಕಡಿಮೆ ಹಣವನ್ನೇ ಕೊಡುತ್ತೇವೆ. ಅದೇ ರಿಪೇರಿ ಕೆಲಸವನ್ನು ಒಬ್ಬ ಮೆಕ್ಯಾನಿಕಲ್ ಬಂದು ಮಾಡಿದರೆ ಅವನು ಹೇಳಿದಷ್ಟು ಹಣವನ್ನು ಮರುಮಾತಿಲ್ಲದೇ ಕೊಟ್ಟು ಬಿಡುತ್ತೇವೆ.

ಮೆಕ್ಯಾನಿಕಲ್ ಆದವನಿಗೆ ತನ್ನ ಶ್ರಮದ ಪ್ರತಿಫಲವನ್ನು ಕೇಳುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಕಾರಣ, ಅವನ ಸಾಕ್ಷರತೆಗೆ ಪ್ರಮಾಣಪತ್ರವಿದೆ. ಆದರೆ ಕೇವಲ ಶಿಕ್ಷಣ ಪಡೆದ ನಮ್ಮೂರಿನಂಥವನಿಗೆ ಅಂಥ ಹಕ್ಕನ್ನು ಸಂವಿಧಾನ ಕೊಡಲಿಲ್ಲ. ಅಂಥ
ಕಲಿಕೆಗೆ ಸಾಕ್ಷರತೆಯ ಪ್ರಮಾಣಪತ್ರವನ್ನು ಸಾಂವಿಧಾನಿಕವಾಗಿ ಕೊಡುವಂತಿದ್ದರೆ ಉದ್ಯೋಗದಲ್ಲಿ ಸಮಾನಾವಕಾಶಗಳನ್ನು
ಸೃಷ್ಟಿಸಬಹುದು. ಆಗ ಇಂಗ್ಲಿಷ್ ಕಲಿಯದಿದ್ದರೂ ಉದ್ಯೋಗ ಸೃಷ್ಟಿಯಾಗುತ್ತದೆ.

ಎಲ್ಲಕ್ಕಿಂತ ಮೊದಲು ಆಗಬೇಕಾದ್ದು, ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಎಂಬ ಭ್ರಮೆಯಿಂದ ನಾವು ಕಳಚಿಕೊಳ್ಳುವುದು. ಜಾಗತೀಕರಣದಿಂದ ಹೊರಬರಲು ಸಾಧ್ಯವೇ ಇಲ್ಲ ಎಂಬ ಹುಚ್ಚು ಬಿಡದಿದ್ದರೆ ಬಡವರಿಗೆ ಬದುಕಿನ ಭದ್ರತೆಯ ಆತಂಕ ಇದ್ದೇ ಇರುತ್ತದೆ. ಪರಮಾಧಿಕಾರವುಳ್ಳ ಯಾವುದೇ ಸರಕಾರಕ್ಕೂ ಜಾಗತೀಕರಣದಿಂದ ಹೊರಬರಲು ಸಾಧ್ಯವಿದೆ. ಸಂಪೂರ್ಣ ಹೊರಬರಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಅದರ ಮೇಲೆಯೇ ಡಿಪೆಂಡ್ ಆಗುವುದು ದೇಶದ ಅಭಿವೃದ್ಧಿಗೆ ಪೂರಕವಲ್ಲ.

ಉದ್ಯೋಗಕ್ಕೆ ಇಂಗ್ಲಿಷ್ ಕಲಿಯಬೇಕು ಎಂಬ ವಾದವೇ ಹಾಸ್ಯಾಸ್ಪದ. ಯಾಕೆಂದರೆ, ಉತ್ಪಾದನೆ ಹೆಚ್ಚುವುದು ಬೇಡಿಕೆ ಹುಟ್ಟಿಕೊಂಡಾಗ ಮಾತ್ರ. ಬೇಡಿಕೆ ಹೆಚ್ಚಾದಂತೆ ಉತ್ಪಾದನೆ ಹೆಚ್ಚಬೇಕು. ಆಗ ಸಹಜವಾಗೇ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಜಾಗತೀಕರಣದ ಪ್ರಭಾವ, ಪರಿಣಾಮ ಅನುಭವಿಸುವುದು ಪ್ರಧಾನವಾಗಿ ಬಡರಾಷ್ಟ್ರಗಳೇ ಹೊರತು ಶ್ರೀಮಂತ ರಾಷ್ಟ್ರಗಳಲ್ಲ.

ಯಾಕೆಂದರೆ, ತನ್ನಲ್ಲಿ ಉತ್ಪಾದನೆಯಾದ ಸರಕುಗಳನ್ನು ಅಮೆರಿಕದಂಥ ರಾಷ್ಟ್ರಗಳು ಹೊತ್ತು ಹಾಕುವುದು ಒಂದೋ, ಬಡರಾಷ್ಟ್ರಗಳ ಮೇಲೆ, ಇಲ್ಲ ಅತ್ಯಧಿಕ ಜನಸಂಖ್ಯೆಯುಳ್ಳ ಭಾರತ, ಚೀನಾದಂಥ ರಾಷ್ಟ್ರಗಳ ಮೇಲೆ. ತನ್ನ ದೇಶದಲ್ಲಿ ಉಂಟಾದ ಆರ್ಥಿಕ ಕುಸಿತವನ್ನು ಅಮೆರಿಕ ನೀಗಿಸಿಕೊಂಡದ್ದು ಜಾಗತೀಕರಣದ ಮೂಲಕವೇ! ಆಗ ಚೀನಾ, ಭಾರತದಂಥ ರಾಷ್ಟ್ರಗಳು ಅಮೆರಿಕದ ಜಾಗತೀಕರಣದ ಮೋಹಕ್ಕೆ ಒಳಗಾಗಿ ಕೊಳ್ಳುಬಾಕ ಸಂಸ್ಕೃತಿಗೆ ಮೊರೆ ಹೋಗಲೇ ಬೇಕಾಯಿತು. ಈ ಜಾಗತೀಕರಣವನ್ನು ಈಗ ಚೀನಾ ಎಗ್ಗಿಲ್ಲದೆ ಮುಂದುವರೆಸಿದೆ.

ಇದರಿಂದ ಭಾರತದ ಸಾಂಸ್ಕೃತಿಕ ನೆಲೆಗಳು ನಾಶವಾಗುತ್ತ ಬಂದವು. ಪುಣ್ಯವೆಂದರೆ, ಈಗ ನಮಗೆ ಮನವರಿಕೆಯಾಗಿದೆ.
ಈ ಜಾಗತೀಕರಣದ ಕಪಿಮುಷ್ಟಿಗೆ ಸಿಲುಕಿದ ರಾಷ್ಟ್ರವೊಂದರ ಜೀವನಶೈಲಿಯೇ ಬದಲಾಗಿ ಹೋಗುತ್ತದೆ. ಮುಖ್ಯವಾಗಿ, ಭಾರತದಲ್ಲಿ 1991ರ ಅನಂತರದ ವರ್ಷಗಳಲ್ಲಿ ಎಲ್ಲ ರಂಗಗಳಲ್ಲಿಯೂ ಆಗುತ್ತಿರುವ ಸಾಂಸ್ಕೃತಿಕ ಪಲ್ಲಟ ಗಳನ್ನು
ಸೂಕ್ಷ್ಮವಾಗಿ ಗಮನಿಸಬೇಕು. ನಾನು ನಮಸ್ಕರಿಸುವಾಗ ಎರಡು ಕೈಗಳನ್ನು ಜೋಡಿಸಿ ತಲೆತಗ್ಗಿಸಿ ಮುಗಿಯುತ್ತೇನೆ.

ಆದರೆ ಹಾಯ್ ಎನ್ನುವಾಗ ಸುಮ್ಮನೆ ಕೈಯತ್ತಿ ಅಡಿಸುತ್ತೇನೆ. ಕ್ರಮೇಣ ನಾನು ಬದಲಾದ ಬದುಕಿನ ಶೈಲಿಗೆ ಬೇಕಾದಂತೆ ಬಟ್ಟೆಗಳನ್ನು, ಕಾರ್ಪೊರೇಟ್ ಪ್ರಪಂಚದ ಉತ್ಪನ್ನಗಳನ್ನು ಜಾಹೀರಾತುಗಳ ಮೂಲಕ ಖರೀದಿಸುತ್ತ ಬದುಕಲು ಆರಂಭಿಸು ತ್ತೇನೆ. ಬದುಕನ್ನು ಕಟ್ಟಿಕೊಳ್ಳುವುದು ಅಂತ ಹಿರಿಯರು ಬಾಳಿ ಬದುಕಿದ ಮಾರ್ಗವನ್ನು ತ್ಯಜಿಸುತ್ತೇನೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದೇನೆಂದರೆ, ಅಮೆರಿಕ ತನ್ನ ಆರ್ಥಿಕ ಮುಗ್ಗಟ್ಟನ್ನು ಎದುರಿಸುವ ಹಂತಕ್ಕೆ ತಲುಪಿದ್ದು 1929ರಲ್ಲಿ. ಅನಂತರದ ಹತ್ತು ವರ್ಷ ಗಳಲ್ಲಿ ಅಮೆರಿಕ ಅದನ್ನು ಸಮತೋಲನಕ್ಕೆ ತಂದುಕೊಳ್ಳಲು ಹರಸಾಹಸ ಪಟ್ಟಿದ್ದು ಈಗ ಚರಿತ್ರೆ! ಆದರೆ ಭಾರತಕ್ಕೆ ಇದಿನ್ನೂ ಸಾಧ್ಯವಾಗಿಲ್ಲ.