Friday, 13th December 2024

ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ

ಚರ್ಚಾ ವೇದಿಕೆ

ಸಿಂಚನ ಎಂ.ಕೆ.

ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯನ್ನು ಸಾರಾಸಗಟಾಗಿ ತಳ್ಳಿಹಾಕಿ ದಿಢೀರನೆ ಬದಲಾಯಿಸುವುದು ಅಸಾಧ್ಯವಷ್ಟೇ ಅಲ್ಲ, ಅನಾಹುತಕಾರಿಯೂ ಹೌದು. ಹಾಗಾದಲ್ಲಿ ದೇಶದ ಸಂಪೂರ್ಣ ವ್ಯವಸ್ಥೆಯೇ ಮುರಿದು ಬೀಳುತ್ತದೆ. ಎಲ್ಲ ಅಪೇಕ್ಷಿತ ಸುಧಾರಣೆಗಳೂ ಹಂತಹಂತವಾಗಿ ನಡೆಯಬೇಕಿದೆ. ಇಂದಿಗೂ ಎಷ್ಟೋ ಮಂದಿಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುತ್ತಿರುವುದು ಶಿಕ್ಷಣವೇ.

ಆ ಮಗುವನ್ನು ತರಗತಿಯಲ್ಲಿ ದಡ್ಡನೆಂದೇ ಪರಿಗಣಿಸಲಾಗಿತ್ತು. ‘ನಾವೆಷ್ಟೇ ಯತ್ನಿಸಿ ದರೂ ಇವನಿಗೆ ಬುದ್ಧಿ ಬರುವುದಿಲ್ಲ; ಮೊದಲು ಇವನನ್ನು ಶಾಲೆಯಿಂದ ಹೊರಹಾಕ ಬೇಕು’ ಎಂದು ನಿರ್ಧರಿಸಿದ ಶಿಕ್ಷಕಿ, ‘ಈ ಪ್ರಪಂಚದಲ್ಲೇ ಅತಿದಡ್ಡನಾಗಿರುವ ನಿಮ್ಮ ಮಗನಿಗೆ ಯಾವ ಶಿಕ್ಷಕರೂ ಪಾಠ ಮಾಡಲಾಗುವುದಿಲ್ಲ; ಇನ್ನು ಮುಂದೆ ಯಾವುದೇ ಕಾರಣಕ್ಕೂ ನಮ್ಮ ಶಾಲೆಯಲ್ಲಿ ಅವನನ್ನು ಮುಂದುವರಿಸಲಾಗದು. ನೀವೇ ಅವನಿಗೆ ತರಬೇತಿ ನೀಡಿ’ ಎಂಬರ್ಥದ ಒಕ್ಕಣೆ ಯಿರುವ ಪತ್ರ ಬರೆದು ಮನೆಗೆ ಕಳಿಸಿದರು.

ಪತ್ರ ಸ್ವೀಕರಿಸಿದ ತಾಯಿ, ಕುತೂಹಲಭರಿತನಾಗಿದ್ದ ತನ್ನ ಮಗನನ್ನುದ್ದೇಶಿಸಿ, ‘ಈ ಪ್ರಪಂಚದಲ್ಲೇ ಅತಿಜಾಣನಾಗಿರುವ ನಿಮ್ಮ ಮಗನ ಸಾಮರ್ಥ್ಯಕ್ಕೆ ತಕ್ಕಂತೆ ಪಾಠ ಮಾಡಲು ನಮ್ಮಲ್ಲಿನ ಯಾವ ಶಿಕ್ಷಕರೂ ಸಮರ್ಥರಿಲ್ಲ; ನೀವೇ ಅವನಿಗೆ ತರಬೇತಿ ನೀಡಿ’ ಎಂದು ನಿಮ್ಮ ಶಿಕ್ಷಕಿ ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿಸಿ, ಛಲತೊಟ್ಟು ಸ್ವತಃ ಬೋಧಿಸಿ ಮಗನ ಭವಿಷ್ಯ ರೂಪಿಸಲು ಮುಂದಾ ಗುದಳು. ಆ ದಡ್ಡ ಮಗು ಮತ್ಯಾರೂ ಅಲ್ಲ, ಮುಂದೊಮ್ಮೆ ಅಂಧಕಾರ ನೀಗುವ ಬಲ್ಬ್ ಕಂಡುಹಿಡಿದ ಶ್ರೇಷ್ಠ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್!

ಆ ಮಹಾತಾಯಿ ಅಂದಿಟ್ಟ ದಿಟ್ಟಹೆಜ್ಜೆಯಿಂದ ಒಬ್ಬ ದಡ್ಡ ಹುಡುಗ ಶ್ರೇಷ್ಠ ವಿಜ್ಞಾನಿಯಾದ. ಕೋಟಿ ಹಣ ಕಳೆದುಕೊಂಡರೂ ಮತ್ತೆ ಸಂಪಾದಿಸಬಹುದು, ಆಸ್ತಿ-ಪಾಸ್ತಿ ನಷ್ಟವಾದರೂ ಮತ್ತೆ ಗಳಿಸಬಹುದು. ಪರೀಕ್ಷೆಯಲ್ಲಿ ಫೇಲಾದರೂ ಮತ್ತೆ ಕಟ್ಟಿ ಪಾಸಾಗ ಬಹುದು. ಆದರೆ ಒಂದು ಬಾರಿ ಆತ್ಮವಿಶ್ವಾಸದ ಸೌಧ ಮುರಿದುಬಿದ್ದರೆ ಕಟ್ಟಿಕೊಳ್ಳುವುದು ಕಷ್ಟ. ಕೆಲವೊಮ್ಮೆ ಜೀವನ ಪರ್ಯಂತ ಸಾಧ್ಯವಾಗದಿರಬಹುದು.

ವ್ಯವಸ್ಥಿತ ಬಂಧನವೇ?!
ವಿದ್ಯಾರ್ಥಿ ದೆಸೆಯಲ್ಲಿದ್ದಾಗ ‘ಈ ಪರೀಕ್ಷೆಗಳು ಮುಗಿದರೆ ಸಾಕು’ ಅಂದುಕೊಳ್ಳುತ್ತಿದ್ದೆವು; ಆದರೆ ಶಾಲಾ-ಕಾಲೇಜಿನ ಪರೀಕ್ಷೆ
ಮುಗಿದ ಮೇಲೆ ಬದುಕಲ್ಲಿ ಪ್ರತಿದಿನವೂ ಪರೀಕ್ಷೆ ಇರುತ್ತದೆ ಎಂಬುದು ಅಂದಿಗೆ ನಮಗರ್ಥವೇ ಆಗಿರಲಿಲ್ಲ. ಈಗ, ತಂದೆಯೊಬ್ಬ ಮಗನನ್ನು ಅವನಿಚ್ಛೆಗೆ ವಿರುದ್ಧವಾಗಿ ಗದ್ದೆಯಲ್ಲಿ ಕೆಲಸ ಮಾಡಿಸಿದರೂ, ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾನೂನಿನಡಿ ತಂದೆಯನ್ನು ಶಿಕ್ಷಿಸಬಹುದು. ತನ್ನ ವಿದ್ಯಾರ್ಥಿಯನ್ನು ಸರಿದಾರಿಗೆ ತರಲು ಶಿಕ್ಷಕ ಅವನಿಗೀಗ ಪೆಟ್ಟು ಕೊಡುವಂತಿಲ್ಲ.

Read E-Paper click here

ಆದರೆ, ಇಂದಿನ ಶಿಕ್ಷಣ ಪದ್ಧತಿಯನುಸಾರ, ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ೪ ಗೋಡೆ ಮಧ್ಯೆ ಅವರನ್ನು ಕೂಡಿಹಾಕಿ ಶಿಕ್ಷಕರು ಇಂತಿಷ್ಟು ನಿಮಿಷಗಳಿಗೊಂದು ತರಗತಿ ಎಂದು ನಾಲ್ಕಾರು ತರಗತಿಗಳನ್ನು ಹೇರುತ್ತಾ, ಅವರ ಸ್ವಾತಂತ್ರ್ಯ, ಭಾವನೆಗಳಿಗೆ ಬೆಲೆ ಕೊಡದೆಯೇ ನಿರಂತರ ಪಾಠ ಮಾಡುತ್ತಿರಬಹುದು. ಇದನ್ನು ಏನೆಂದು ಅರ್ಥಮಾಡಿಕೊಳ್ಳಬೇಕು? ವಿದ್ಯಾಭ್ಯಾಸವಾದ ಮೇಲೆ ಹೇಗಿದ್ದರೂ ಕಂಪನಿ/ಕಾರ್ಖಾನೆಗೆ ಸೇರಿ ನಿಯತವಾಗಿ ನಿರ್ದಿಷ್ಟ ಅವಧಿಯವರೆಗೆ ಕೆಲಸ ಮಾಡಬೇಕು; ಪ್ರಪಂಚದ ಭವ್ಯ
ಆರ್ಥಿಕ ಕ್ಷೇತ್ರದ ಚಕ್ರಗಳು ನಿರಂತರ ಚಲಿಸುವಂತೆ ನೋಡಿಕೊಳ್ಳುವುದೇ ನಮ್ಮ ಕಾಯಕವಾಗಿರುವಾಗ, ಚಿಕ್ಕಂದಿನಿಂದಲೇ
ಅದಕ್ಕೆ ತರಬೇತಿ ನೀಡಲೆಂದು ರಚಿಸಲಾಗಿರುವ ವ್ಯವಸ್ಥಿತ ಬಂಧನವೆಂದೇ?! ಮನುಷ್ಯ ಸಹಜವಾದ ಮಾನಸಿಕ ಸ್ವಾತಂತ್ರ್ಯಕ್ಕೆ
ಮಾರಕವಾಗುವಂತಿರುವ ಪ್ರಸಕ್ತ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಲೋಚನೆಯನ್ನೇ ಮಾಡದಿರುವುದು ವಿಚಿತ್ರವಲ್ಲವೇ?
ಪ್ರತಿಷ್ಠೆಯ ಸಂಗತಿ ಶಿಕ್ಷಣವನ್ನು ಪ್ರತಿಷ್ಠೆಯಾಗಿ ಕಾಣುತ್ತಿರುವವರು, ವಿದ್ಯಾರ್ಥಿಗಳು ಗಳಿಸಬೇಕಾದ ಅಂಕ ೯೮, ೯೯ ಎಂದು ಅಘೋಷಿತವಾಗಿ ಬದಲಾವಣೆ ಮಾಡುತ್ತಿದ್ದರೆ, ಇಷ್ಟಾಗಿಯೂ ಇನ್ನೂ ೧-೨ ಅಂಕ ಕಡಿಮೆಯಾಗಿದ್ದೇಕೆ ಎಂದು ಯೋಚಿಸು ವವರಿಗೇನೂ ನಮ್ಮಲ್ಲಿ ಕಮ್ಮಿಯಿಲ್ಲ.

ಮಾನವ ಭಾವನಾಜೀವಿಯೇ ವಿನಾ ‘ಯಂತ್ರ ಮಾನವ’ನಲ್ಲ! ವಿದ್ಯಾರ್ಥಿಯೊಬ್ಬ ವೈಯಕ್ತಿಕ ಅಥವಾ ಸಾಮಾಜಿಕ ಸಮಸ್ಯೆ ಯೊಂದರ ಕಾರಣಕ್ಕೋ, ಶಿಕ್ಷಣದಲ್ಲಿನ ಅನಾಸಕ್ತಿ ಅಥವಾ ಒತ್ತಡಗಳ ಕಾರಣಕ್ಕೋ ವಿದ್ಯಾಭ್ಯಾಸ ನಿಲ್ಲಿಸಿಬಿಟ್ಟರೆ ಅವನ ಕಥೆ ಮುಗಿದಂತೆಯೇ! ಎಷ್ಟೋ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ, ‘ವಿದ್ಯಾಭ್ಯಾಸದ ಅವದಿಯಲ್ಲಿ ಒಂದು ವರ್ಷವೂ ಮಧ್ಯೆ ಅಂತರವಿರಬಾರದು’ ಎಂಬುದು ಮೊದಲ ಷರತ್ತಾಗಿರುತ್ತದೆ.

ಒತ್ತಡದ ಬದುಕು
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ಭವಿಷ್ಯದ ವಿದ್ಯಾಭ್ಯಾಸಕ್ಕೆ ದಿಕ್ಸೂಚಿಗಳೇನೋ ನಿಜ; ಆದರೆ ಇವುಗಳಲ್ಲಿ ಫೇಲಾದರೆ ಆತ್ಮಹತ್ಯೆಯೇ ಗತಿ ಎಂಬಂಥ ಒತ್ತಡದಾಯಕ ಮತ್ತು ನಕಾರಾತ್ಮಕ ಬೆಳವಣಿಗೆ ನಮ್ಮ ಸಮಾಜದಲ್ಲಿ  ಆಗುತ್ತಿರುವು ದೇಕೆ? ಮಾನವ ಜೀವನದ ಸತ್ಯಾಸತ್ಯತೆ ಅನ್ವೇಷಿಸಲು, ಅಧ್ಯಾತ್ಮಿಕ ಜೀವನದ ಅಗ್ನಿಪಥದಲ್ಲಿ ಸಾಗಲು, ವೇದ, ಯೋಗ, ಶಾಸ್ತ್ರ, ಕ್ಷಾತ್ರ ಮುಂತಾದ ಮಾರ್ಗಗಳಿಂದ ಉತ್ತಮವಾಗಿ ಬದುಕಲು ಜಗತ್ತಿಗೇ ಬೆಳಕು ಮತ್ತು ಅಭಯವನ್ನು ನೀಡಿದ ನಮ್ಮ ತಾಯ್ನಾಡಿ ನಲ್ಲಿಂದು ಶಿಕ್ಷಣ ವ್ಯವಸ್ಥೆಯ ಒತ್ತಡದಿಂದಾಗಿ ಭವಿಷ್ಯದ ತೇಜಸ್ವೀ ಮಕ್ಕಳೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದುಃಖವನ್ನು ಎದುರಿಸುವುದು ಹೇಗೆ? ಐಐಟಿಯಂಥ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ರ‍್ಯಾಂಕ್ ವಿದ್ಯಾರ್ಥಿಗಳೇ ಆತ್ಮಹತ್ಯೆ ಮಾಡಿಕೊಳ್ಳು ತ್ತಿರುವುದು ಯಾವುದರ ದ್ಯೋತಕ?

ಅತಿರೇಕದ ಸ್ಪರ್ಧೆಯೇಕೆ?
ಅತಿರೇಕದ ಸ್ಪರ್ಧೆಯೆಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ‘ಅನ್ಯರ ಸೋಲೇ ನನ್ನ ಗೆಲುವು, ಅನ್ಯರ ದುಃ
ಖವೇ ನನ್ನ ಸುಖ’ ಎಂಬುದು ಇಂದಿನ ಸ್ಪರ್ಧಾಜಗತ್ತಿನ ವಿಜಯಮಂತ್ರವಾಗಿಬಿಟ್ಟಿದೆ. ವ್ಯಕ್ತಿಯೊಬ್ಬ ನಡೆದುಕೊಂಡು ಹೋಗು ತ್ತಿರುವ ಮತ್ತೊಬ್ಬನನ್ನು ನೋಡಿ ಅವನೊಂದಿಗೆ ಸ್ಪರ್ಧೆಗಿಳಿದು ಮತ್ತಷ್ಟು ವೇಗವಾಗಿ ನಡೆಯಬಹುದು. ಆದರೆ ಸ್ಪರ್ಧಾ ಮನೋಭಾವದಿಂದ ಅವನ ಜೀವನ ಅಷ್ಟಕ್ಕೇ ಸೀಮಿತಗೊಂಡುಬಿಡಬಹುದು. ಯಾರಿಗೆ ಗೊತ್ತು, ಆ ವ್ಯಕ್ತಿ ಸ್ಪರ್ಧಾ ತೀತವಾಗಿ ತನ್ನ ಜೀವನದ ಎಲ್ಲಾ ಸ್ತರಗಳಲ್ಲೂ ವಿಕಾಸ ಹೊಂದುತ್ತಾ ಮುನ್ನುಗ್ಗಿದ್ದಿದ್ದರೆ ಒಂದು ದಿನ ಹಾರಬಹುದಿತ್ತೋ ಏನೋ!

ವಿಪರ್ಯಾಸದ ಸಂಗತಿ 
ಫಲವತ್ತಾದ ಭೂಮಿ, ಜಲ, ಜ್ಞಾನ ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಉದ್ಯೋಗಕ್ಕಾಗಿ
ಇಷ್ಟೊಂದು ಅಲೆದಾಟ, ಪರದಾಟ, ಹೊಡೆದಾಟ, ಹೋರಾಟಗಳಾಗುತ್ತಿರುವುದು ನಿಜಕ್ಕೂ ವಿಪರ್ಯಾಸ! ಈಗಲಾದರೂ ಹಲ
ವಾರು ಪರೀಕ್ಷೆ, ಸಂದರ್ಶನ ಮುಂತಾದ ಪ್ರಕ್ರಿಯೆಗಳ ಮೂಲಕ ಉದ್ಯೋಗಿಗಳ ನೇಮಕ ನಡೆಯುವಂತಾಗಿ ಭ್ರಷ್ಟಾಚಾರ
ನಿಧಾನವಾಗಿ ತಗ್ಗುತ್ತಿದೆ. ಆದರೆ ಹಿಂದೆಲ್ಲಾ ಕೆಲಸ ಹುಡುಕಲು ಕಚೇರಿಗಳಿಗೆ ಅಲೆಯುತ್ತಿದ್ದ ಯುವಕ-ಯುವತಿಯರು ಸಂದರ್ಶನ ದಲ್ಲಿ ಉತ್ತೀರ್ಣರಾಗುತ್ತೇವೋ ಇಲ್ಲವೋ ಎಂದು ಯೋಚಿಸುತ್ತಿರಲಿಲ್ಲ; ಬದಲಿಗೆ, ಈ ಕೆಲಸ ಗಿಟ್ಟಿಸಿಕೊಳ್ಳಲು ಯಾವ
ರಾಜಕಾರಣಿ/ಪ್ರಭಾವಿ ವ್ಯಕ್ತಿಯಿಂದ ಶಿಫಾರಸು ಮಾಡಿಸುವುದು ಎಂದು ಚಿಂತಿಸುತ್ತಿದ್ದರು.

ವಾಸ್ತವದಲ್ಲಿ ನಮಗೆ ಸಮಸ್ಯೆಯಾಗುತ್ತಿರುವುದು ನಿರುದ್ಯೋಗದ ಹೆಚ್ಚಳವೋ ಅಥವಾ ಉದ್ಯೋಗಕ್ಕೆ ಅನರ್ಹರಾದ, ಕೌಶಲ ರಹಿತ ವಿದ್ಯಾರ್ಥಿಗಳ ಹೆಚ್ಚಳವೋ? ನಮ್ಮಲ್ಲಿರುವ ಶಿಕ್ಷಣ ಸಂಸ್ಥೆಗಳು ಎಷ್ಟು ಬೇಕಾದರೂ ಡಿಗ್ರಿ ಕೊಡುತ್ತವೆ, ಆದರೆ ಉದ್ಯೋಗದ ಗ್ಯಾರಂಟಿ ಕೊಡುವುದಿಲ್ಲ. ಇದಕ್ಕಿರುವ ಮೂಲಭೂತ ಕಾರಣವೆಂದರೆ, ನಮ್ಮಲ್ಲಿ ಒಂದು ಕಾಲದಲ್ಲಿದ್ದ ಗುರುಕುಲ ಪದ್ಧತಿಯಂಥ ಶ್ರೇಷ್ಠ ಶಿಕ್ಷಣ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ, ಯೋಜನಾಬದ್ಧವಾಗಿ ಧ್ವಂಸ ಮಾಡಿ ‘ಕೌಶಲರಹಿತ’ ಪಡೆಯನ್ನು ನಿರ್ಮಿಸಲು ಬ್ರಿಟಿಷರು ಜಾರಿಗೊಳಿಸಿದ ‘ಮೆಕಾಲೆ ಶಿಕ್ಷಣ ಪದ್ಧತಿ’.

ಕೆಲ ದಿನಗಳ ಹಿಂದೆ ಹೊರಬಂದಿರುವ ‘ಇಂಡಿಯಾ ಸ್ಕಿಲ್ ರಿಪೋರ್ಟ್-೨೦೨೩’ರ ಪ್ರಕಾರ, ನಮ್ಮ ದೇಶದ ಶೇ.೫೦ರಷ್ಟು
ವಿದ್ಯಾರ್ಥಿ ಗಳಲ್ಲಿ ಉದ್ಯೋಗಕ್ಕೆ ಅವಶ್ಯವಾದ ಕೌಶಲವಿಲ್ಲ. ಪ್ರತಿಷ್ಠಿತ ಐಐಟಿ ಸೇರಿದಂತೆ ಉತ್ತಮ ಖಾಸಗಿ ಕಾಲೇಜುಗಳಲ್ಲಿ
ಓದಿದ ವಿದ್ಯಾರ್ಥಿಗಳೇನೋ ‘ಕ್ಯಾಂಪಸ್ ಸೆಲೆಕ್ಷನ್’ನಲ್ಲಿ ಆಯ್ಕೆಯಾಗಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ದಕ್ಕಿಸಿಕೊ
ಳ್ಳುತ್ತಾರೆ. ಆದರೆ ಇನ್ನುಳಿದ ವಿದ್ಯಾರ್ಥಿಗಳು ಕಾಲೇಜಿನ ನಂತರವೂ ಉದ್ಯೋಗ ಸಿಗದೆ, ಅಗತ್ಯವಿರುವ ಕೌಶಲ ತರಬೇತಿ ಪಡೆಯಲು ಕಾಲೇಜಿಗಿಂತ ಹೆಚ್ಚು ಫೀಸ್ ಖರ್ಚುಮಾಡಿ ಅಲೆದಾಡುತ್ತಿರುತ್ತಾರೆ. ಅಂದಹಾಗೆ, ಭಾರತದಂಥ ದೊಡ್ಡ  ದೇಶದಲ್ಲಿ ಲಭ್ಯವಿರುವುದು ೨೩ ಐಐಟಿಗಳ ೧೬,೦೦೦ ಸೀಟುಗಳು ಮಾತ್ರ.

ಭ್ರಮೆಯೋ ವಾಸ್ತವವೋ?
ಸರಕಾರಿ ನೌಕರಿ ಪಡೆಯುವುದು ನಮ್ಮ ದೇಶದ ಬಡ ಅಥವಾ ಮಧ್ಯಮ ವರ್ಗದ ಕುಟುಂಬಗಳ ಏಕಮೇವ ಗುರಿಯಾಗಿರುತ್ತದೆ. ಇದಕ್ಕಾಗಿ ೧ ವರ್ಷ, ೨ ವರ್ಷ… ೧೦ ವರ್ಷ ಓದುತ್ತಾರೆ. ಅಬ್ಬಬ್ಬಾ! ಒಂದು ಸರಕಾರಿ ನೌಕರಿ ಪಡೆಯಲು ಎಷ್ಟೊಂದು ಸಮಯ, ಮಾನವ ಸಂಪನ್ಮೂಲ ವ್ಯರ್ಥವಾಗುತ್ತದೆ?! ಐಎಎಸ್ ನಂಥ ದೊಡ್ಡ ಪರೀಕ್ಷೆಗೆ ಓದುವವರಿಗಾದರೂ, ಅವರು ಅಷ್ಟೊಂದು ಆಳವಾಗಿ ಓದಿ ಸಂಪಾದಿಸಿದ ಜ್ಞಾನ ಉಪಯುಕ್ತವಾಗುತ್ತದೆ; ಆದರೆ ‘ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳ’ ವಿಧಾನದ ಪರೀಕ್ಷೆಗಳಿಗೆ ಅಷ್ಟೊಂದು ವರ್ಷಗಳ ಕಾಲ ಓದಿದವರಿಗೆ ಆಳವಾದ ಜ್ಞಾನವಿಲ್ಲದೆ ಯಂತ್ರಗಳಂತೆ ಮಾಹಿತಿ ಮಾತ್ರ ಇರುತ್ತದೆ.

ಉದ್ಯೋಗ ಪಡೆದುಕೊಂಡವರೇನೋ ಬದುಕಿದರು, ಪಡೆದುಕೊಳ್ಳಲಾಗದವರ ಕಥೆ? ಕೇವಲ ೧೦೦ರಿಂದ ೨೦೦ರಷ್ಟು ಖಾಲಿಯಿ
ರುವ ಹುದ್ದೆಗಳಿಗೆ ಲಕ್ಷಾಂತರ ಅರ್ಜಿಗಳು ಬಂದಿರುತ್ತವೆ. ಮೊದಲೇ ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ, ಆದ್ದರಿಂದಲೇ
ಇಷ್ಟೊಂದು ಸ್ಪರ್ಧೆ, ಜಟಾಪಟಿ ಎಲ್ಲವೂ. ಅತಿಕಡಿಮೆ ಗ್ರೇಡ್‌ನ ಸರಕಾರಿ ಹುದ್ದೆಗಳಿಗೆ ಮಾಸ್ಟರ‍್ಸ್, ಪಿಎಚ್‌ಡಿ ಓದಿರುವ ವಿದ್ಯಾ
ರ್ಥಿಗಳೂ ಅರ್ಜಿ ಸಲ್ಲಿಸುತ್ತಿರುವುದು ಈಗ ಸರ್ವೇಸಾಮಾನ್ಯ!

ಆದ್ದರಿಂದ, ನಿಮ್ಮನ್ನು ನೀವು ದೀರ್ಘಕಾಲ ಬಂಧನದಲ್ಲಿರಿಸಿಕೊಂಡು ನಿರ್ದಿಷ್ಟ ವಿಷಯಗಳನ್ನು ಅಧ್ಯಯನ ಮಾಡಬೇಕಾದ ಅವಶ್ಯಕತೆಯಿರುವ ಸರಕಾರಿ ಕೆಲಸ ಪಡೆಯಲು ನಿಮಗೆ ಸಾಧ್ಯವೇ, ನಿಮ್ಮ ಕೌಟುಂಬಿಕ-ಸಾಮಾಜಿಕ ವಾತಾವರಣ ಅದಕ್ಕೆ ಪೂರಕವೇ? ಈ ಎಲ್ಲಾ ವೈಯಕ್ತಿಕ ವಿಚಾರಗಳನ್ನು ಉದ್ಯೋಗಾಕಾಂಕ್ಷಿಗಳು ವಿಶ್ವಾಸಾರ್ಹರ ಬಳಿ ಚರ್ಚಿಸಿ, ಮೌಲ್ಯಮಾಪನ ಮಾಡಿಸಿಕೊಂಡು ಮುಂದಿನ ಹೆಜ್ಜೆ ಇಡುವುದು ಒಳಿತು. ಅದನ್ನು ಬಿಟ್ಟು ಫೇಲಾಗಿ ಫೇಲಾಗಿ ಸಮಯ ವ್ಯರ್ಥಮಾಡುತ್ತಾ ಹೋದರೆ ಪ್ರಯೋಜನವೇನು? ಟ್ಯೂಷನ್ ಸೆಂಟರ್‌ಗಳೇನೋ ಫೀಸ್‌ನ ಹಣದಲ್ಲಿ ಜೀವನ ನಡೆಸುತ್ತವೆ, ಆದರೆ ಉದ್ಯೋಗಾ ಕಾಂಕ್ಷಿಗಳೇನು ಮಾಡಬೇಕು?

ಕೃತಕ ಬುದ್ಧಿಮತ್ತೆಯ ಕ್ರಾಂತಿ
ಪ್ರಸ್ತುತ ನಿಸ್ಸಂಶಯವಾಗಿಯೂ ವಿಜ್ಞಾನ-ತಂತ್ರಜ್ಞಾನಗಳದ್ದೇ ಹೆಚ್ಚು ದರ್ಬಾರು ನಡೆಯುತ್ತಿರುವುದು ನಿಸ್ಸಂಶಯ. ಅದರಲ್ಲೂ
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಮಹಾಕ್ರಾಂತಿಯನ್ನೇ ಮಾಡಬಹುದಾದ ಎಲ್ಲಾ
ಮುನ್ಸೂಚನೆಗಳೂ ಕಂಡುಬರುತ್ತಿವೆ. ಈ ತಂತ್ರಜ್ಞಾನದಿಂದಾಗಿ, ಹೆಚ್ಚು ನೆನಪಿಟ್ಟುಕೊಂಡು ಅಂಕಗಳಿಸುವ ಅಥವಾ
ಬುದ್ಧಿವಂತನೆಂದು ತೋರ್ಪಡಿಸಿಕೊಳ್ಳುವ ಯಾರಿಗೂ ಬೆಲೆ ಇರುವುದಿಲ್ಲ, ಇನ್ನೇನಿದ್ದರೂ ಆಳವಾದ ಜ್ಞಾನ ಹೊಂದಿರುವವ ರಿಗೇ ಬೆಲೆ!

ಹಾಗಂತ, ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯನ್ನು ಸಾರಾಸಗಟಾಗಿ ತಳ್ಳಿಹಾಕಿ, ದಿಢೀರನೆ ಆಮೂಲಾಗ್ರ ಬದಲಾವಣೆ ಮಾಡುವುದು
ಅಸಾಧ್ಯವಷ್ಟೇ ಅಲ್ಲ, ಅನಾಹುತಕಾರಿಯೂ ಹೌದು. ಹಾಗೆ ಮಾಡಿದ್ದೇ ಆದಲ್ಲಿ ದೇಶದ ಸಂಪೂರ್ಣ ವ್ಯವಸ್ಥೆಯೇ ಮುರಿದು
ಬೀಳುತ್ತದೆ. ಎಲ್ಲ ಅಪೇಕ್ಷಿತ ಸುಧಾರಣೆಗಳೂ ಹಂತಹಂತವಾಗಿ ನಡೆಯಬೇಕಿದೆ. ಇಂದಿಗೂ ನಮ್ಮಂಥ ಅಸಂಖ್ಯಾತ ಜನರಿಗೆ
ಒಳ್ಳೆಯ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುತ್ತಿರುವುದು ಶಿಕ್ಷಣವೇ.

ಆದರೆ ಅತ್ಯುತ್ತಮವಾಗಿದ್ದ ನಮ್ಮ ಮೂಲ ಶಿಕ್ಷಣ ಪದ್ಧತಿಯು ಮೊಘಲರು, ಬ್ರಿಟಿಷರಂಥ ಆಕ್ರಮಣಕಾರರ ಕೈಯಲ್ಲಿ ಸಿಲುಕಿ ಸಾಕಷ್ಟು ಹಾಳಾಗಿದೆ. ಹೀಗೆ ವಿವಿಧ ನೆಲೆಗಟ್ಟಿನಲ್ಲಿ ಧಕ್ಕೆಗೊಂಡಿರುವ ನಮ್ಮ ದೇಶದ ಅಸ್ಮಿತೆಯ ಮರುಸ್ಥಾಪನೆಗೆ ನಾವೆಲ್ಲ ಜತೆಯಾಗಿ ಹೋರಾಡಬೇಕಿದೆ. ನನ್ನ ತಿಳಿವಳಿಕೆ, ಅನುಭವದ ಆಧಾರದ ಮೇಲೆ ಮಂಡಿಸಿರುವ ಈ ಅಭಿಪ್ರಾಯ ಸರಣಿಗೆ ಮತ್ತಷ್ಟು ಮಗದಷ್ಟು ಯುವಧ್ವನಿಗಳು ಸೇರುವಂತಾಗಲಿ, ಬರೆಯುವಂತಾಗಲಿ, ಚರ್ಚಿಸುವಂತಾಗಲಿ. ಪರಿಹಾರ ಕಂಡು ಕೊಳ್ಳಲು ಸಾಗಬೇಕಾದ ಈ ಸುದೀರ್ಘ ಅಗ್ನಿಪಥದಲ್ಲಿ ಧೈರ್ಯದಿಂದ ಮುನ್ನಡೆಯೋಣ.