Wednesday, 11th December 2024

ಅಂಜದ ಗಂಡು ’ಏಕಾಂಗಿ’ ಯಾದದ್ದು ಹೇಗೆ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ವೀರಾಸ್ವಾಮಿಯವರು ಡಾ. ರಾಜ್, ವಿಷ್ಣುವರ್ಧನ್, ಲೋಕೇಶ್, ಅಂಬರೀಷ್‌ರಂಥ ಅನೇಕ ಕಲಾವಿದರಿಗೆ, ನಿರ್ದೇಶಕರಿಗೆ ಅವಕಾಶ ನೀಡಿ ಚಿತ್ರಗಳನ್ನು ನಿರ್ಮಿಸಿಯೇ ಈಶ್ವರಿ ಸಂಸ್ಥೆಯನ್ನು ಕಟ್ಟಿದ್ದರು. ಆದರೆ ರವಿಚಂದ್ರನ್ ಕ್ರಮೇಣ, ‘ಈಶ್ವರಿ ಸಂಸ್ಥೆಯೆಂದರೆ ನಾನೇ’ ಎಂದಷ್ಟೇ ಭಾವಿಸಿದ್ದು ಅವರ ಇಂದಿನ ‘ಏಕಾಂಗಿ’ ಸ್ಥಿತಿಗೆ ಬಲವಾದ ಕಾರಣ.

“ಒಂದು ತಿಂಗಳ ಹಿಂದೆ ನನ್ನ ಮನೆ ಖಾಲಿಮಾಡಿದೆ. ಎಲ್ಲರೂ ಹೇಳಿದ್ರು ‘ದುಡ್ಡು ಕಳೆದುಕೊಂಡ, ಮನೆ ಖಾಲಿಮಾಡ್ದ’ ಅಂತ. ನಾನು ದುಡ್ಡು ಕಳೆದುಕೊಂಡಿದ್ದು ಇವತ್ತಲ್ಲ ರೀ, 30 ವರ್ಷಗಳಿಂದ ಕಳಕೊಂಡೇ ಬಂದಿದ್ದೀನಿ.

ಹಾಗೆ ಕಳೆದುಕೊಂಡಿದ್ದು ನಿಮ್ಮ ಮನಸ್ಸು ಗೆಕೆ, ಅದಕ್ಕಾಗೆ ನಾನು ಎಲ್ಲವನ್ನೂ ಕಳಕೊಂಡಿದ್ದೇನೆ. ನಾನು ಯಾರನ್ನೂ ಗೆಲ್ಲಬೇಕಿಲ್ಲ, ಆದರೀಗ ಮತ್ತೆ ನನ್ನನ್ನು ನಾನು ಗೆಲ್ಲಬೇಕಿದೆ. ನಾನು ದುಡ್ಡಿಗಾಗಿ ಕೆಲಸ ಮಾಡಿದವ ನಲ್ಲ, ನನಗೆ ದುಡ್ಡೂ ಬೇಕಿಲ್ಲ. ದುಡ್ಡು ಬೇಕು ಅಂದ್ರೆ ಮತ್ತದೇ ಸಿನಿಮಾ ಮಾಡೋಕೆ ಅಷ್ಟೇ. ಅದೊಂದಕ್ಕೆ ಇವತ್ತು ಇಲ್ಲಿ ರಿಯಾಲಿಟಿ ಷೋ ತೀರ್ಪು ಗಾರನಾಗಿ) ಬಂದು ಕೂತಿರೋದು. ನಾನು ಸಂಪಾದನೆ ಮಾಡೋದು ರಾಯಲ್ ಆಗಿ ಬದುಕುವುದಕ್ಕಲ್ಲ, ರಾಯಲ್ ಆಗಿ ಸಿನಿಮಾ ಮಾಡೋಕೆ.

ಒಂದು ತಿಂಗಳಿಂದ ನನ್ನನ್ನು ಬದಲಾಯಿಸಿಕೊಳ್ಳಬೇಕು ಅನ್ನಿಸಿತು. ಸಿನಿಮಾ ಸೋತಿದ್ದಕ್ಕೆ ನನಗೆ ಬೇಸರವಿಲ್ಲ, ಆದರೆ ನಿಮ್ಮನ್ನು ಮೆಚ್ಚಿಸಲಿಕ್ಕೆ ಆಗಲಿಲ್ಲವೆಂಬುದು ಹೆಚ್ಚು ಬೇಸರ ತಂದಿದೆ. ನನ್ನಲ್ಲಿ ಕೆಲಸಕ್ಕಿದ್ದ ಹುಡುಗರು ಇಂದು ತಮ್ಮ ಸಿನಿಮಾ ದಲ್ಲಿ ನಟಿಸಲು ನನಗೇ ಒಂದೂವರೆ ಕೋಟಿ ರುಪಾಯಿ ಕೊಡುವಷ್ಟು ಬೆಳೆದಿದ್ದಾರೆ. ನನಗೆ ಜೀವನದಲ್ಲಿ ಭಯವೆಂಬುದಿರಲಿಲ್ಲ; ಆದರೀಗ ನನಗೆ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಭಯ ಬಂದಿದೆ, ಅವರಿಗಾಗಿ ಏನೂ ಮಾಡಲಾಗಲಿಲ್ಲ. ಅಂದು ಕಂಠೀರವ ಸ್ಟುಡಿಯೋದಲ್ಲಿ ಒಂದು ಎಕರೆಗೆ ೧೦ ಸಾವಿರ ರುಪಾಯಿ ಇದ್ದ ಕಾಲದಲ್ಲಿ ಸಾಕಷ್ಟು ಖರೀದಿಸಬಹುದಾಗಿತ್ತು.

ಆದರೆ ಅಭಿಮಾನಿಗಳಿಗೆ ಬೇಕಿರುವುದು ಈ ನನ್ನ ಮುಖ, ನನ್ನ ಮನಸ್ಸು, ನನ್ನ ಚಿತ್ರಗಳು. ಅದನ್ನು ನೋಡಿ ನನ್ನನ್ನು ಪ್ರೀತಿಸಿ, ಜೀವನ ಪೂರ್ತಿ ನಿಮ್ಮ ಕಾಲಡಿಯಲ್ಲಿ ಬಿದ್ದಿರುತ್ತೇನೆ…”. ಇಂಥ ಮಾತುಗಳನ್ನಾಡಿದ್ದು ಕನ್ನಡ ಸಿನಿಮಾದ ದಿಕ್ಕನ್ನೇ ಬದಲಿಸಿದ ಕನಸುಗಾರ ರವಿಚಂದ್ರನ್. ಸಾಮಾನ್ಯವಾಗಿ ಅವರು ಆಡುವುದು ತೂಕದ ಮಾತುಗಳನ್ನೇ; ಆದರೆ ಮೊನ್ನೆ ಖಾಸಗಿ ವಾಹಿನಿ
ಯೊಂದರ ವೇದಿಕೆಯಲ್ಲಿ ಮೇಲಿನಂತೆ ಮಾತನಾಡಿ ಹೃದಯದೊಳಗಿದ್ದ ತೂಕವನ್ನು ಇಳಿಸಿಕೊಂಡಿದ್ದಾರೆ.

ಅವರ ಈ ಮಾತುಗಳು ಕನ್ನಡ ಚಿತ್ರರಂಗದವರಲ್ಲಿ, ಅಭಿಮಾನಿಗಳಲ್ಲಿ ಆಶ್ಚರ್ಯದೊಂದಿಗೆ ಮರುಕವನ್ನೂ ಹುಟ್ಟಿಸಿವೆ. ಅಸಲಿಗೆ ರವಿಚಂದ್ರನ್ ಹೀಗೆ ದಯನೀಯವಾಗಿ ಅಸಹಾಯಕರಾಗಿ ಮಾತುಗಳನ್ನಾಡುವ ವ್ಯಕ್ತಿಯೇ ಆಗಿರಲಿಲ್ಲ. ಏಕೆಂದರೆ ಅವರ ಸಿನಿಮಾ ಬದುಕೇ ಹಾಗಿತ್ತು. ಅವರ ತಂದೆ ಎನ್. ವೀರಾಸ್ವಾಮಿ ಆ ಕಾಲದ ‘ನಾಗರಹಾವು’, ‘ನಾ ನಿನ್ನ ಮರೆಯ ಲಾರೆ’ಯಂಥ ಮೈಲುಗಲ್ಲಿನ ಚಿತ್ರಗಳನ್ನು ನಿರ್ಮಿಸಿದವರು ಮತ್ತು ‘ಬೂತಯ್ಯನ ಮಗ ಅಯ್ಯು’, ‘ನಾರದ ವಿಜಯ’, ‘ಭೂಲೋಕದಲ್ಲಿ ಯಮರಾಜ’ದಂಥ ಚಿತ್ರಗಳ ಸಹ-ನಿರ್ಮಾಪಕರಾಗಿದ್ದವರು. ಅಂಥವರು ತಮ್ಮ ಮಗನಿಗಾಗಿಯೇ ಚಿತ್ರ ನಿರ್ಮಿಸಬಹುದಾಗಿತ್ತು. ಆದರೆ ರವಿಚಂದ್ರನ್ ಮೊದಲು ಚಿತ್ರರಂಗದಲ್ಲಿ ಬೆರೆತು ಪುಟ್ಟ ಪಾತ್ರಗಳಲ್ಲಿ, ಖಳ ನಾಯಕನಾಗಿ ಅಭಿನಯಿಸಿದ ನಂತರವಷ್ಟೇ ‘ನಾನೇ ರಾಜ’ದಲ್ಲಿ ನಾಯಕನಾಗಿ ಪರಿಚಯಿಸಲ್ಪಟ್ಟರು.

ಆದರೆ ರವಿಚಂದ್ರನ್ ತಮ್ಮಲ್ಲಿದ್ದ ಅಗಾಧ ಪ್ರತಿಭೆ, ಕ್ರಿಯಾಶೀಲತೆ, ಅಪ್ರತಿಮ ತಂತ್ರಜ್ಞಾನವನ್ನು ‘ಪ್ರೇಮಲೋಕ’ದಲ್ಲಿ ನಿರೂಪಿಸಿದರ, ಆಗಲೇ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ನೋಡಲಾರಂಭಿಸಿತು. ‘ಪ್ರೇಮಲೋಕ’ದಲ್ಲಿ ಅವರು ಟೈಟಲ್ ಕಾರ್ಡ್ ತೋರಿಸಿರುವ ಪರಿಯೇ ಅವರಲ್ಲಿನ ವಿಭಿನ್ನತೆಗೆ ಸಾಕ್ಷಿ. ‘ರಣಧೀರ’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಹಡಗು ಮುಳುಗುವುದನ್ನು ತೋರಿಸುವ ದೃಶ್ಯಗಳನ್ನು ಚಿತ್ರೀಕರಿಸಲು ವಾರಗಳ ಕಾಲ ನೀರಿನ ನಿಂತಿದ್ದರಿಂದಾಗಿ ಛಾಯಾಗ್ರಾಹಕ
ಆರ್. ಮಧುಸೂದನ್ ಅವರ ಕಾಲುಗಳು ಹಳಸಿ ಗಾಯವಾಗಿತ್ತಂತೆ.

ಇದು ಶತಾಯಗತಾಯ ಉತ್ತಮ ಸಿನಿಮಾ ಕಟ್ಟಿಕೊಡಬೇಕು ಎಂಬ ರವಿಚಂದ್ರನ್‌ರ ‘ಹಠವಾದಿ’ತನಕ್ಕೆ ದ್ಯೋತಕ. ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆ ಅಷ್ಟೊಂದು ಇಲ್ಲದ ಕಾಲದಲ್ಲಿ ಮಧುಸೂದನ್, ಕಬೀರ್ ಲಾಲ್, ಜಿ.ಎಸ್.ವಿ. ಸೀತಾರಾಂರಂಥ ಛಾಯಾಗ್ರಾಹಕರನ್ನು ಕಟ್ಟಿಕೊಂಡು ತೆರೆಯಮೇಲೆ ಮಾಯಾಲೋಕ ಸೃಷ್ಟಿಸುತ್ತಿದ್ದರು ರವಿಚಂದ್ರನ್. ‘ಚಿನ್ನ’ ಚಿತ್ರದಲ್ಲಿನ
‘ನನ್ನವಳು ನನ್ನವಳು’ ಎಂಬ ಮಾಯಾಗೀತೆ ಇದಕ್ಕೊಂದು ಉದಾಹರಣೆ. 35 ಎಂಎಂ ಚಿತ್ರಗಳಿಗೇ ಬಹುತೇಕ ಸೀಮಿತ ವಾಗಿದ್ದ ಕನ್ನಡ ಚಿತ್ರರಂಗಕ್ಕೆ ಸಾಲುಸಾಲು ಸಿನಿಮಾಸ್ಕೋಪ್ ಚಿತ್ರಗಳನ್ನೇ ಕೊಟ್ಟ ರವಿಚಂದ್ರನ್ ‘ಕಲಾವಿದ’ ಚಿತ್ರದ ಮೂಲಕ ಡಿಜಿಟಲ್ ಸೌಂಡ್‌ಟ್ರ್ಯಾಕ್ ತಂತ್ರಜ್ಞಾನವನ್ನು ಕನ್ನಡಕ್ಕೆ ತಂದರು.

ಜೂಹಿ ಚಾವ್ಲಾ, ಖುಷ್ಬೂ, ಮೀನಾ, ಬಿಂದಿಯಾ, ರೋಜಾ, ಭಾನುಪ್ರಿಯಾ, ಕಸ್ತೂರಿ, ಗೌತಮಿ, ರಮ್ಯಾಕೃಷ್ಣರಂಥ ಅಂದಿನ ದುಬಾರಿ ನಾಯಕಿಯರನ್ನು, ಖಳನಾಯಕರನ್ನು, ಸಾಹಸ ನಿರ್ದೇಶಕರನ್ನು ಕನ್ನಡಕ್ಕೆ ತಂದರು. ತಾಂತ್ರಿಕ ಶ್ರೀಮಂತಿಕೆಯ ಚಿತ್ರಗಳ ಮೂಲಕ ದೊಡ್ಡ ಕ್ರೇಜ್ ಸೃಷ್ಟಿಸಿ ‘ಕ್ರೇಜಿಸ್ಟಾರ್’ ಎನಿಸಿಕೊಂಡರು. ಭಾರತೀಯ ಚಿತ್ರರಂಗದಲ್ಲಿನ ಮೊದಲ ‘ಪ್ಯಾನ್ ಇಂಡಿಯಾ’ ಚಿತ್ರ ಬಹುಶಃ ‘ಶಾಂತಿ ಕ್ರಾಂತಿ’ಯೇ ಇರಬೇಕು. ಅದು ಈಶ್ವರಿ ಸಂಸ್ಥೆಯನ್ನು ನಷ್ಟಕ್ಕೆ ದೂಡಿದಾಗ
ರವಿಚಂದ್ರನ್ ಕಥೆ ಮುಗಿಯಿತು ಎಂದೇ ಭಾವಿಸಲಾಗಿತ್ತು.

ಆದರೆ ತಮಿಳಿನ ಪಿ. ವಾಸು ಅವರ ‘ಚಿನ್ನತಂಬಿ’ ಚಿತ್ರವನ್ನು ಡಿ.ರಾಜೇಂದ್ರಬಾಬು ನಿರ್ದೇಶನದಲ್ಲಿ ‘ರಾಮಚಾರಿ’ಯಾಗಿ ರಿಮೇಕ್ ಮಾಡಿದ್ದೇ ಮಾಡಿದ್ದು ಅಲ್ಲಿಂದ ಮುಟ್ಟಿzಲ್ಲ ಚಿನ್ನವಾಗತೊಡಗಿತು. ಈ ಮಧ್ಯೆ, ತಮ್ಮ ಚಿತ್ರಗಳಿಂದ ಲಾಭಮಾಡುತ್ತಿದ್ದ
ಲಹರಿ ಮತ್ತು ಆಕಾಶ್ ಆಡಿಯೋ ಕಂಪನಿಯನ್ನು ಬಿಟ್ಟು ‘ಈಶ್ವರಿ ಆಡಿಯೋ’ ಸ್ಥಾಪಿಸಿ ಉತ್ತಮ ಹಿತೈಷಿಗಳನ್ನು ಕಳೆದು ಕೊಂಡರು ರವಿಚಂದ್ರನ್. ‘ಸಿಪಾಯಿ’ ಚಿತ್ರದ ಮೂಲಕ ತೆಲುಗಿನ ಮೆಗಾಸ್ಟಾರ್ ಚಿರಂಜೀವಿಯನ್ನು ಕರೆತಂದ ರವಿಚಂದ್ರನ್, ‘ಚಿರಂಜೀವಿ ಪಾತ್ರದ ಬೀಳ್ಕೊಡುಗೆಯೊಂದಿಗೆ ಮುಗಿಯಬೇಕಿದ್ದ ಚಿತ್ರಕಥೆಯಲ್ಲಿ ದಿಢೀರ್ ಬದಲಾವಣೆ ತಂದು ಆ ಪಾತ್ರವನ್ನು ಕ್ಲೈಮ್ಯಾಕ್ಸ್‌ನಲ್ಲಿ ಸಾಯಿಸುವುದರೊಂದಿಗೆ ತಮ್ಮೊಳಗಿನ ಅಹಂ ತೋರಿದರು’ ಎಂಬ ಅಪವಾದಕ್ಕೂ ಗುರಿಯಾದರು.

ಆದರೆ ಚಿರಂಜೀವಿಯವರ ಸ್ನೇಹಕ್ಕೆ ಹಣದ ಬೆಲೆಕಟ್ಟದ ರವಿಚಂದ್ರನ್ ದೇವನಹಳ್ಳಿಯಲ್ಲಿ 15 ಎಕರೆಗೂ ದೊಡ್ಡ ಜಮೀನು
ಬರೆದುಕೊಟ್ಟು ‘ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ’ ತೋರಿಸಿದ್ದರು. ಚಿರಂಜೀವಿ ಕುಟುಂಬ ಬೆಂಗಳೂರಿಗೆ ಬಂದಾಗ ಉಳಿದುಕೊಳ್ಳುವ ಆ ಫಾರ್ಮ್ಹೌಸ್‌ನ ಇಂದಿನ ಬೆಲೆ ರವಿಚಂದ್ರನ್ ಅವರ ಒಟ್ಟು ಸಿನಿಮಾಗಳ ಬಜೆಟ್‌ಗೆ ಸಮನಾಗುತ್ತದೆಂದು
ಹೇಳಲಾಗುತ್ತದೆ.

ಆದರೆ ಗೀತಸಾಹಿತಿ ಮತ್ತು ಸಂಗೀತ ನಿರ್ದೇಶಕ ಹಂಸಲೇಖರನ್ನು ಅದ್ಯಾವ ನಿಗೂಢ ಕಾರಣಗಳಿಗೆ ರವಿಚಂದ್ರನ್ ದೂರವಿಟ್ಟರೋ ಗೊತ್ತಿಲ್ಲ, ಅಲ್ಲಿಂದ ಅವರ ತಪ್ಪುಹೆಜ್ಜೆಗಳು ಶುರುವಾದವು. ಬರಿಯ ಹಾಡುಗಳಿಂದಲೇ ಚಿತ್ರಗಳನ್ನು ಗೆಲ್ಲಿಸುವ ಮೂಲಕ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ರವಿಚಂದ್ರನ್, ಹಂಸಲೇಖರ ಜಾಗದಲ್ಲಿ ಮತ್ತೊಬ್ಬ ಸಂಗೀತ ನಿರ್ದೇಶಕರನ್ನು ಪ್ರತಿಷ್ಠಾಪಿಸುವ ಹಠ-ಛಲವನ್ನು ತೋರಲೇ ಇಲ್ಲ. ಅಂಥ ಸಂದರ್ಭದಲ್ಲಿ ಇಳಯರಾಜ, ಎಂ.ಎಂ. ಕೀರವಾಣಿ, ರಾಜ್‌ಕೋಟಿ ಯಂಥ ಖ್ಯಾತ ಸಂಗೀತ ನಿರ್ದೇಶಕರನ್ನು ಕರೆತಂದು ತಮ್ಮ ವೈಭವವನ್ನು ಮುಂದುವರಿಸಿದ್ದಿದ್ದರೆ ಅವರ ಸಿನಿಮಾ ಬದುಕಿಗೆ ಹೊಸ ಆಯಾಮ ದೊರಕಿಬಿಡುತಿತ್ತು.

ಅಂಥ ಸಂಗೀತವನ್ನು ‘ಅಪ್‌ಡೇಟ್’ ಮಾಡಿಕೊಳ್ಳದೆ, ಹಂಸಲೇಖರಿಂದ ದೂರವಾಗಿದ್ದ ಎಲ್.ಎನ್. ಶಾಸಿಯಂಥವರ ಸಹಾಯ ಪಡೆದು ತಾವೇ ಲೇಖನಿ-ಗಿಟಾರ್ ಹಿಡಿದು ಸಾಹಿತ್ಯ- ಸಂಗೀತಕ್ಕಿಳಿದಿದ್ದು ರವಿಚಂದ್ರನ್ ಮಾಡಿಕೊಂಡ ಎಡವಟ್ಟು. ಒಂದು ರೀತಿಯಲ್ಲಿದು, ಅಡುಗೆ ಭಟ್ಟರು ಕೈಕೊಟ್ಟಾಗ ಅವರಿಗಿಂತ ರುಚಿಯಾಗಿ ತಯಾರಿಸುವ ಅಡುಗೆಯವರನ್ನು ಕರೆಸದೆ ತಾವೇ ಸೌಟು ಹಿಡಿದು ಅಡುಗೆಗೆ ನಿಂತಂತಿತ್ತು. ರವಿಚಂದ್ರನ್ ರಚಿಸುತ್ತಿದ್ದ ಪ್ರಾಸವಿಲ್ಲದ ಸಾಹಿತ್ಯ, ಆಕರ್ಷಣೆಯಿಲ್ಲದ ಸಂಗೀತ, ಅವರನ್ನು ಜನ ನಿರ್ಲಕ್ಷಿಸುವುದಕ್ಕೆ ಮೊದಲ ಕಾರಣವಾಗಿತ್ತು.

ರವಿಚಂದ್ರನ್ ಕಂಡುಕೊಳ್ಳದ ಸೂಕ್ಷ್ಮ ವಿಚಾರವೆಂದರೆ, ವೀರಾಸ್ವಾಮಿಯವರು ಡಾ. ರಾಜ್, ವಿಷ್ಣುವರ್ಧನ್, ಲೋಕೇಶ್, ಅಂಬರೀಷ್‌ರಂಥ ಅನೇಕ ಕಲಾವಿದರಿಗೆ, ನಿರ್ದೇಶಕರಿಗೆ ಅವಕಾಶ ನೀಡಿ ಚಿತ್ರಗಳನ್ನು ನಿರ್ಮಿಸಿಯೇ ಈಶ್ವರಿ ಸಂಸ್ಥೆಯನ್ನು ಕಟ್ಟಿದ್ದರು. ಆದರೆ ರವಿಚಂದ್ರನ್ ಕ್ರಮೇಣ, ‘ಈಶ್ವರಿ ಸಂಸ್ಥೆಯೆಂದರೆ ನಾನೇ’ ಎಂದಷ್ಟೇ ಭಾವಿಸಿದ್ದು ಅವರ ಇಂದಿನ ಸ್ಥಿತಿಗೆ ಬಲವಾದ ಕಾರಣ. ಇದರಿಂದ ಎಲ್ಲ ಗೆಲುವುಗಳಂತೆಯೇ ಎಲ್ಲ ಸೋಲುಗಳ ಹೊಣೆಯನ್ನೂ ಅವರೊಬ್ಬರೇ ಹೊರಬೇಕಾ ಯಿತು.

ಇಂಥ ವಿಚಾರದಲ್ಲಿ ‘ಅಪ್ಪು’ ಪುನೀತ್ ರಾಜ್ ಕುಮಾರ್ ಅವರ ಚಿಂತನೆ, ಪ್ರಬುದ್ಧತೆ ಎಲ್ಲರಿಗೂ ಮಾದರಿ. ಅವರ ತಾಯಿ ಪಾರ್ವತಮ್ಮನವರು ತಮ್ಮ ಸಂಸ್ಥೆಯಲ್ಲಿ ತಮ್ಮವರದ್ದೇ ಚಿತ್ರಗಳನ್ನು ನಿರ್ಮಿಸಿ, ದೊರೆ-ಭಗವಾನ್, ಎಂ.ಎಸ್. ರಾಜಶೇಖರ್‌ರಂಥ ನಿರ್ದೇಶಕರನ್ನೇ ಅವಲಂಬಿಸಿದ್ದರು. ಆದರೆ ಅಪ್ಪು ಅವರು ತಮಗೆ ದೊಡ್ಡ ಬೇಡಿಕೆಯಿದ್ದು ಚಿತ್ರವೊಂದಕ್ಕೆ ೧೫ ಕೋಟಿಯಷ್ಟು ಸಂಭಾವನೆ ಪಡೆಯುತ್ತಿದ್ದರೂ ‘ಪಿ.ಆರ್.ಕೆ’ ಸಂಸ್ಥೆ ಹುಟ್ಟುಹಾಕಿ, ಪ್ರತಿಭೆ ತೋರಿಸಲು ಇತರರಿಗೂ ಅವಕಾಶ ನೀಡುವಂಥ ವಿಶಾಲ ಮನೋಭಾವ ತೋರಿ, ತಮಗೆ ಸಂಬಂಧವೇ ಇರದ ಅನ್ಯರಿಗೂ ಚಿತ್ರಗಳನ್ನು ನಿರ್ಮಿಸಿ, ಗಳಿಕೆಯ ಬಹುಪಾಲನ್ನು ನೊಂದವರಿಗೆ ವಿನಿಯೋಗಿಸಲು ಆರಂಭಿಸಿದ್ದರು.

ತನ್ಮೂಲಕ ತಮ್ಮ ಸಂಸ್ಥೆಯನ್ನು ತಾವೊಬ್ಬರೇ ಸುತ್ತಿಕೊಳ್ಳದೆ, ಇತರರಿಗೂ ವೇದಿಕೆಯಾಗಿಸಿದ್ದರು. ಹಾಗೆಯೇ ರವಿಚಂದ್ರನ್ ಅವರೂ ತಮ್ಮ ಉತ್ತುಂಗ ಕಾಲದಲ್ಲಿ ಇತರ ಕಲಾವಿದರ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿ, ಸಂಸ್ಥೆಯನ್ನು ವಿಸ್ತರಿಸಿ, ಬಂದ ಹಣವನ್ನು ‘ಕ್ರಮಬದ್ಧವಾಗಿ’ ಕಾಪಾಡಿಕೊಳ್ಳಬಹುದಾಗಿತ್ತು. ರಾಕ್‌ಲೈನ್ ವೆಂಕಟೇಶ್ ಅವರನ್ನೇ ನೋಡಿ; ಅವರು ರವಿಚಂದ್ರನ್ ರಂತೆ ಚಿನ್ನದ ಚಮಚದೊಂದಿಗೆ ಹುಟ್ಟಿದವರಲ್ಲ.

ಒದೆಸಿಕೊಳ್ಳುವ ಫೈಟರ್ ಆಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ಸಹೋದ್ಯೋಗಿಗಳಾದ ಗೋವಿಂದು, ಜೆ.ಜೆ. ಕೃಷ್ಣ. ಓಂಪ್ರಕಾಶ್ ಅವರ ಜತೆಗೂಡಿ ಮೊದಲಿಗೆ ‘ಆಶಾವಾದಿಗಳು’ ಎಂಬ ಜನಪ್ರಿಯ ಧಾರಾವಾಹಿ ಆರಂಭಿಸಿದ ಅವರಿಂದು
ಸಲ್ಮಾನ್ ಖಾನ್, ರಜನಿಕಾಂತ್‌ರಂಥ ಘಟಾನುಘಟಿಗಳ ಚಿತ್ರಗಳನ್ನು ನಿರ್ಮಿಸುವಷ್ಟು ಬುದ್ಧಿವಂತ ನಿರ್ಮಾಪಕರೆನಿಸಿಲ್ಲವೇ? ತಾವೂ ಬೆಳೆದು ಉದ್ಯಮವನ್ನೂ ಬೆಳೆಸಿದ ಕಾರಣದಿಂದಲೇ ಅಲ್ಲವೇ ರಾಮು ಎಂಟರ್‌ಪ್ರೈಸಸ್, ಚಿನ್ನಿ ಫಿಲ್ಮ್ಸ್, ಹೊಂಬಾಳೆ ಫಿಲ್ಮ್ಸ್ ಲಾಭದಾಯಕ ಸಂಸ್ಥೆಗಳಾಗಿ ಹೊರಹೊಮ್ಮಿದ್ದು? ರವಿಚಂದ್ರನ್ ಬಲಿಷ್ಠ ವ್ಯಕ್ತಿತ್ವದವರು.

ಅವರ ಚಿತ್ರಗಳು ಸೋತಿರಬಹುದು, ಆದರೆ ಅವರೊಳಗಿನ ತಂತ್ರಜ್ಞ ಮಾತ್ರ ಸತ್ತಿಲ್ಲ. ಮಣಿರತ್ನಂ, ರಾಮ್ ಗೋಪಾಲ್ ವರ್ಮ, ರಾಜಮೌಳಿಯಂತೆ ಕಾಲಕ್ಕೆ ತಕ್ಕಂತೆ ನಿರ್ದೇಶನದಲ್ಲಿ ‘ಅಪ್‌ಡೇಟ್’ ಆಗಿ ಕ್ಯಾಮರಾ ಹಿಂದೆ ನಿಂತು ತಮ್ಮ ಗತ ವೈಭವವನ್ನು ಮತ್ತೊಮ್ಮೆ ಸೃಷ್ಟಿಸುವ ಸಾಮರ್ಥ್ಯ ಖಂಡಿತ ಅವರಲ್ಲಿದೆ. ಹಾಗಂತ ಅದ್ದೂರಿ ಚಿತ್ರಗಳನ್ನೇ ನಿರ್ಮಿಸಬೇಕಿಲ್ಲ. ಈಗಿನ ಜನ ಎಂಥದನ್ನು ಸ್ವೀಕರಿಸುತ್ತಾರೆಂಬುದನ್ನು ರಿಷಬ್-ರಕ್ಷಿತ್ ಶೆಟ್ಟರ ತಂಡ ತೋರಿಸಿಕೊಟ್ಟಿದೆ.

ಒಂದು ಕೋಟಿ ರುಪಾಯಿ ಬಂಡವಾಳ ಹಾಕಿ ಚಿತ್ರಮಂದಿರ, ಒಟಿಟಿ, ಸೆಟಲೈಟು, ಆಡಿಯೋ, ಡಬ್ಬಿಂಗ್ ಹಕ್ಕುಗಳು, ಸಬ್ಸಿಡಿ ಎಂದೆಲ್ಲ ೩-೪ ಕೋಟಿ ಗಳಿಸಿಕೊಳ್ಳುವ ಹೊಸಬರ ತಂಡವೇ ಇಂದು ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿವೆ. ಅಂಥವರಿಗೆ
ಈಶ್ವರಿ ಸಂಸ್ಥೆಯ ಬಾಗಿಲು ತೆರೆಯಲಿ. ಮಕ್ಕಳಿಗೆ ಆಸ್ತಿಯನ್ನು ಎಲ್ಲ ಅಪ್ಪಂದಿರೂ ಮಾಡುತ್ತಾರೆ. ಆದರೆ ವೀರಾಸ್ವಾಮಿ ಯವರಿಗೆ ರವಿಚಂದ್ರನ್ ಸಾಧಿಸಿ ತೋರಿಸಿದಂತೆ, ಅಂಥ ಹೊರಗಿನ ಪ್ರತಿಭೆಗಳೂ ತಮ್ಮ ಪ್ರತಿಭೆ ತೋರಿಸಲು ರವಿಚಂದ್ರನ್
ನೆರವಾಗಲಿ. ರವಿಯವರೇ ಹೇಳಿಕೊಂಡಂತೆ ಜನ ಮತ್ತೆ ಮುಗಿಬಿದ್ದು ಚಿತ್ರಮಂದಿರಕ್ಕೆ ಬರುವಂಥ ಚಿತ್ರ ಮಾಡುವ ಪ್ರತಿಭೆ ಮತ್ತು ಛಲ ರವಿ ಯವರಲ್ಲಿದೆ. ಆ ದಿನಗಳನ್ನು ಅವರು ಖಂಡಿತ ಸೃಷ್ಟಿಸಬಲ್ಲರು. ಹೀಗಾಗಿ ಅವರು ಸುಮ್ಮನೆ ಕೊರಗಿ
ಆರೋಗ್ಯ ಹಾಳುಮಾಡಿಕೊಳ್ಳುವುದು ಬೇಡ. ಅವರಂಥ ‘ದೊಡ್ಡೆಜಮಾನ್ರು’ ಅವಶ್ಯಕತೆ ಚಿತ್ರರಂಗಕ್ಕೆ ಖಂಡಿತ ಇದೆ.