Tuesday, 12th November 2024

ಬೆಂಗಳೂರಿಗೆ ಬಂದ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ

ಶಶಾಂಕಣ

ಶಶಿಧರ ಹಾಲಾಡಿ

ಎಲಾನ್ ಮಸ್ಕ್ ಅವರ ಉದ್ಯಮ ಸಾಹಸಗಳಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದದ್ದು ಮತ್ತು ಅವರನ್ನು ವಿಶ್ವದ ನಂಬರ್ 1
ಶ್ರೀಮಂತನ ಸ್ಥಾನದಲ್ಲಿ ಕುಳ್ಳಿರಿಸಿದ್ದು ಟೆಸ್ಲಾ ವಿದ್ಯುತ್ ಚಾಲಿತ ಕಾರು. 2003ರಲ್ಲಿ ಈ ರೀತಿಯ ಒಂದು ಕಾರನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತೇನೆ ಎಂದು ಅವರು ಘೋಷಿಸಿದಾಗ ಟೀಕಾಕಾರರು ಅಪಹಾಸ್ಯ ಮಾಡಿದ್ದರು. ಬ್ಯಾಟರಿ ಚಾಲಿತ ಕಾರು ಯಶಸ್ಸು ಗಳಿಸಬಲ್ಲದು ಎಂದು ಆಗ ಯಾರೂ ಊಹಿಸಿರಲಿಲ್ಲ.

ಪರಿಸರ ಸ್ನೇಹಿ ವಿದ್ಯುತ್ ಕಾರು ಎಂದು ಪ್ರಸಿದ್ಧವಾಗಿರುವ ಟೆಸ್ಲಾ ಕಾರು ಈ ವರ್ಷ ನಮ್ಮ ದೇಶದ ಕಾರು ಪ್ರೇಮಿಗಳಿಗೆ
ದೊರೆಯುತ್ತದೆ ಎಂದು ಟೆಸ್ಲಾ ಸಂಸ್ಥೆಯ ಮಾಲಿಕ ಎಲಾನ್ ಮಸ್ಕ್ ಹೇಳಿದಾಗ, ಅದೊಂದು ರೀತಿಯ ಸಂಚಲನ ಮೂಡಿತ್ತು. ಇದಕ್ಕೆ ಸಂವಾದಿಯಾಗಿ, ಕೇಂದ್ರ ಸಚಿವರು ಸಹ 2021ರಲ್ಲಿ ಟೆಸ್ಲಾ ಕಾರು ಭಾರತದಲ್ಲಿ ಲಭ್ಯವಾಗುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ರು. ಈಗ ನಮ್ಮ ರಾಜ್ಯದಲ್ಲೇ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆ ನೋಂದಣಿಯಾಗಿದೆ ಎಂಬ ಸುದ್ದಿ ಇನ್ನಷ್ಟು ಬೆರಗು ಮೂಡಿಸಿದೆ.

ಟೆಸ್ಲಾ ಸಂಸ್ಥೆಯ ರಿಸರ್ಚ್ ಮತ್ತು ಅಭಿವೃದ್ಧಿ ವಿಭಾಗವು ಇಲ್ಲಿ ಕಾರ್ಯಾರಂಭ ಮಾಡಲಿದೆ. ಜನವರಿ 8 ರಂದು ಬೆಂಗಳೂರಿನಲ್ಲಿ ಟೆಸ್ಲಾ ಸಹವರ್ತಿ ಸಂಸ್ಥೆಯು ನೋಂದಣಿಯಾಗಿದ್ದು, ಅಮೆರಿಕದ ಈ ಸಂಸ್ಥೆಯನ್ನು ಸ್ವಾಗತಿಸುವುದಾಗಿ ಮುಖ್ಯಮಂತ್ರಿ
ಹೇಳಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಟೆಸ್ಲಾ ಘಟಕವನ್ನು ಆರಂಭಿಸಲು ಸ್ಥಳಾವಕಾಶ ಮಾಡಿಕೊಡುವ ಸುದ್ದಿಯೂ ಚಾಲ್ತಿಯಲ್ಲಿದೆ.

ಒಂದು ವಿದೇಶಿ ಕಾರು ತಯಾರಿಕಾ ಸಂಸ್ಥೆಯು ನಮ್ಮ ದೇಶವನ್ನು ಪ್ರವೇಶಿಸಿದಾಗ ಈ ಪರಿಯ ಹೈಪ್, ಬೆರಗು, ಅಚ್ಚರಿ, ಉತ್ಸಾಹ, ಪ್ರಚಾರ, ಸಂಚಲನೆ ಏಕೆ? ಇದನ್ನೇ ಎಲಾನ್ ಮಸ್ಕ್ ಪವಾಡ ಎನ್ನಬಹುದು. ಅಮೆರಿಕದಲ್ಲಿ ಟೆಸ್ಲಾ ಸಂಸ್ಥೆಯು ಕಳೆದ ನಾಲ್ಕಾರು
ವರ್ಷಗಳಲ್ಲಿ ಒಂದು ರೀತಿಯ ಪವಾಡವನ್ನೇ ಮಾಡಿದ್ದು, ಜಗತ್ತಿನ ಎಲ್ಲಾ ಕಾರು ತಯಾರಿಕಾ ಸಂಸ್ಥೆಗಳನ್ನು ಹಿಂದಿಕ್ಕಿ ಮೊದಲನೆಯ ಸ್ಥಾನಕ್ಕೆ ಏರಿದೆ.

ಮಾತ್ರವಲ್ಲ, 7.1.2021ರಂದು ನಡೆದ ಮೌಲ್ಯ ಮಾಪನದಂತೆ, ಎಲಾನ್ ಮಸ್ಕ್ ಜಗತ್ತಿನ ನಂ.1 ಶ್ರೀಮಂತ ಎನಿಸಲು, ಟೆಸ್ಲಾ ಶೇರು ಗಳ ಮೌಲ್ಯವೂ ಕಾರಣವಾಯಿತು. ಇತರ ಎಲ್ಲಾ ಪ್ರಖ್ಯಾತ ಕಾರು ತಯಾರಿಕಾ ಸಂಸ್ಥೆಗಳನ್ನು ಹಿಂದಿಕ್ಕಿದ ಟೆಸ್ಲಾ ಸಾಧನೆ ಯ ಹಿನ್ನೆಲೆಯಲ್ಲಿ, ಟೆಸ್ಲಾ ಶೇರುಗಳ ಬೆಲೆಯು 2020ರಲ್ಲಿ ಶೇ.7.03 ಬೆಳವಣಿಗೆ ಕಂಡಿತು. ಆ ಶೇರುಗಳ ಮಾರುಕಟ್ಟೆ ಬೆಲೆಯ ಆಧಾರ ದಿಂದ ಎಲಾನ್ ಮಸ್ಕ್ ಜಗತ್ತಿನ ಅತಿ ದೊಡ್ಡ ಶ್ರೀಮಂತ ಎನಿಸಿದರು. ಈ ಪಟ್ಟವು ಕೆಲವೇ ದಿನಗಳ ಮಟ್ಟಿಗೆ ಅವರ ಬಳಿ ಉಳಿದರೂ, ಆ ಒಂದು ಸಾಧನೆಯ ಶಿಖರವೇರುವ ಮೂಲಕ, ಅವರು ಜಗತ್ತಿಗೆ ಜಗತ್ತೇ ಬೆರಗಾಗುವಂತೆ ಮಾಡಿದ್ದು ಮಾತ್ರ ನಿಜ.
ಎಲಾನ್ ಮಸ್ಕ್ ಎಂದರೇ ಹಾಗೆ! ಜಗತ್ತು ಇದುವರೆಗೆ ನಾನಾ ಮಜಲುಗಳ ಯಶಸ್ವಿ ವ್ಯಕ್ತಿಗಳನ್ನು ಕಂಡಿದೆ.

ಆದರೆ ಮಸ್ಕ್ ತಲುಪಿದ ಮಟ್ಟ, ಅವರು ಕಂಡ ಕನಸುಗಳು, ಅವರ ಕಾರ್ಯ ವೈಖರಿ, ವಿಕ್ಷಿಪ್ತ ಎನಿಸಬಹುದಾದ ಕೆಲವು ನಡೆನುಡಿಗಳು ಇವೆಲ್ಲಕ್ಕೂ ಮಸ್ಕ್ ಮಾತ್ರ ಸಾಟಿ. ಸ್ಪೇಸ್ ಎಕ್ಸ್ ಸಂಸ್ಥೆ ಕಟ್ಟಿ ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಹಾರಿಸಿರುವ ಇವರು,
ಮಂಗಳ ಗ್ರಹದಲ್ಲಿ ಮುಂದೊಂದು ದಿನ ಮನುಷ್ಯ ವಾಸಿಸುತ್ತಾನೆ ಎಂದು ಕನಸು ಕಂಡಿದ್ದು, ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ 50 ವರ್ಷ ವಯಸ್ಸಿನ ಎಲಾನ್ ಮಸ್ಕ್ (ಜನನ 28.6.1971), ಈಗಾಗಲೇ ತಮ್ಮ ಜೀವನದಲ್ಲಿ ಸಾಧಿಸಿದ್ದು ಅಪಾರ.

ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತಿರುವ ಮಸ್ಕ್, ಯಶಸ್ಸನ್ನು ಅರಸುತ್ತಾ ಓಡುತ್ತಿರುವ ಜನಸಮೂಹಕ್ಕೆ ಸ್ಫೂರ್ತಿ ತುಂಬಬಲ್ಲಂತಹ ವ್ಯಕ್ತಿ. ‘ಕನಸೊಂದನ್ನು ಕಾಣು, ಅದನ್ನು ನನಸು ಮಾಡಿಕೊಳ್ಳುವ ತನಕ ಅದಕ್ಕಾಗಿ ಶ್ರಮಪಡು, ಯಶಸ್ಸು ನಿನ್ನದಾಗುತ್ತದೆ’ ಎಂಬ ಹೇಳಿಕೆಯನ್ನು ಅಕ್ಷರಶಃ ಕಾರ್ಯಗತಗೊಳಿಸಿದವರಲ್ಲಿ ಮಸ್ಕ್ ಪ್ರಮುಖರು. ವಿರಾಮ, ನಿದ್ರೆ,
ಸಂಸಾರ ಸುಖ ಇವೆಲ್ಲವನ್ನೂ ಎರಡನೆಯ ಸ್ಥಾನಕ್ಕೆ ಇಳಿಸಿ, ಯಶಸ್ಸನ್ನು ಪಡೆಯಬೇಕಾದರೆ ಏನು ಮಾಡಬೇಕೋ ಅದನ್ನು ಮಾಡುತ್ತಾ ಹೋಗುತ್ತಿರುವ ಮಸ್ಕ್ ಅವರ ಡಿಕ್ಷನರಿಯಲ್ಲಿ, ಅಸಾಧ್ಯ ಎಂಬ ಪದವೇ ಇಲ್ಲ.

ಇವರು ಕೈ ಹಾಕಿದ್ದೆಲ್ಲಾ ಚಿನ್ನವಾಗುತ್ತದೆ ಎಂಬುದಕ್ಕಿಂತ, ಯಾವ ಕ್ಷೇತ್ರದಲ್ಲಿ ಕೈ ಹಾಕಿದರೆ ಚಿನ್ನವನ್ನು ಹೊರತೆಗೆಯಬಹುದು ಎಂದು ಗುರುತಿಸುವಲ್ಲಿ ಮಸ್ಕ್ ನಿಸ್ಸೀಮರು. ಇವರು ಕಾಣುವ ಕನಸುಗಳು ಎಂದರೆ ಸಾಮಾನ್ಯರು ಕಾಣುವ ಕನಸುಗಳಲ್ಲ, ತುಸು ವಿಕ್ಷಿಪ್ತರು ಕಾಣುವ ಕನಸುಗಳು ಎಂದೇ ಹೇಳಬಹುದು. ಇಲ್ಲವಾದರೆ, ಬಾಹ್ಯಾಕಾಶ ನೌಕೆಯಲ್ಲಿ ಪ್ರವಾಸಿಗರನ್ನು ಕಳಿಸುವ ಸಾಹಸ ಇವರಿಂದ ಆಗುತ್ತಿರಲಿಲ್ಲ. ಮುಂದೊಂದು ದಿನ ತಾನು ಗಳಿಸಿಸದ ಎಲ್ಲವನ್ನೂ ಮಂಗಳ ಗ್ರಹ ಯಾನಕ್ಕೆ ಸುರಿಯು ವುದಾಗಿ ಹೇಳಿರುವ ಮಸ್ಕ್, ಮನುಷ್ಯನ ಮುಂದಿನ ನೆಲೆಯೇ ಮಂಗಳ ಗ್ರಹ ಎಂದು ಸಾರಿದ್ದಾರೆ!

ಇಂತಹ ಕನಸುಗಳನ್ನು ಕಂಡು, ಅದನ್ನು ನನಸು ಮಾಡಿಕೊಳ್ಳುವ ಛಾತಿ ಇದೆಯಲ್ಲಾ, ಅದು ಮಸ್ಕ್ ಅವರ ವಿಶೇಷ. ಹಾಗೆ ನೋಡಹೋದರೆ, ಮಸ್ಕ್ ಅವರದು ಸುಖದ ಸುಪ್ಪತ್ತಿಗೆಯ ಜೀವನ ಎನಿಸಿರಲಿಲ್ಲ. ದೂರದ ದಕ್ಷಿಣ ಆಫ್ರಿಕಾದಲ್ಲಿ 1971ರಲ್ಲಿ ಜನಿಸಿದ ಮಸ್ಕ್ ಅವರು, ಬಾಲ್ಯದಲ್ಲಿ ಸಾಕಷ್ಟು ಬೇಗುದಿ, ಸಂಕಷ್ಟ ಗಳನ್ನು ಎದುರಿಸಿದರು. ಅವರ ಹೆತ್ತವರು ವಿಚ್ಛೇದನ ಗೊಂಡದ್ದರಿಂದ, ತಂದೆಯ ಜತೆಯಲ್ಲಿದ್ದುಕೊಂಡು, ವಿದ್ಯಾಭ್ಯಾಸ ಮುಂದುವರಿಸಿದರು. ಆದರೆ, ತರಗತಿ ಗಳಲ್ಲಿ ಅವರೊಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂಬ ಪಟ್ಟ ಗಳಿಸಲಿಲ್ಲ.

ಪಠ್ಯದ ಚಟುವಟಿಕೆಗಳಿಗಿಂತ, ಪಠ್ಯದ ಹೊರಗಿನ ಚಟುವಟಿಕೆಯಲ್ಲೇ ಗುರುತಿಸಿ ಕೊಂಡವರು. ಕಂಪ್ಯೂಟರ್ ಮತ್ತು ಇಂಟರ್ನೆಟ್‌ಗೆ ಇರುವ ಭವಿಷ್ಯವನ್ನು ಆಗಲೇ ಗುರುತಿಸಿ, ಆ ಕ್ಷೇತ್ರದಲ್ಲಿ ಸ್ವಅಧ್ಯಯನ ನಡೆಸಿ, ಪರಿಣತಿ ಸಾಧಿಸಿದ ವಿದ್ಯಾರ್ಥಿ
ಎನಿಸಿದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ, ವಿಡಿಯೋ ಗೇಮ್ ಒಂದನ್ನು ರೂಪಿಸಿ, ಅದನ್ನು ಮಾರಾಟ ಮಾಡಿ ಹಣ ಗಳಿಸಿದ ಭೂಪ ಇವರು!

ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡು ಎಂದು ತಂದೆ ತಾಕೀತು ಮಾಡಿದ್ದರು. ಆದರೆ ಮಸ್ಕ್ ಅದಾಗಲೇ ತನ್ನ ಜೀವನ ಎತ್ತ ಸಾಗಬೇಕು ಎಂದು ನಿರ್ಧರಿಸಿದ್ದರು. ‘ಈ ಜಗತ್ತಿನ ಬೇರಾವುದೇ ದೇಶಕ್ಕಿಂತಲೂ ಅಮೆರಿಕ ದಲ್ಲಿ ಮಾತ್ರ ಯಾವುದಾದರೂ ಬೃಹತ್ ಸಾಧನೆ ಮಾಡಲು ಸಾಧ್ಯ’ ಎಂದ ಮಸ್ಕ್, 1989ರಲ್ಲಿ ಕೆನಡಾ ದೇಶಕ್ಕೆ ಹೋದರು. ಅಲ್ಲಿಂದ
ಅಮೆರಿಕ ಸೇರುವುದು ಸುಲಭ ಎಂಬ ಉದ್ದೇಶದಿಂದ. ಕೆನಡಾದಲ್ಲಿ ಹಾಸ್ಟೆಲ್‌ಗಳಲ್ಲಿ ಕೆಲವು ಕಾಲವಿದ್ದು, ನಂತರ ತನ್ನ ಸಂಬಂಧಿ ಕಸಿನ್ ಜತೆ ವಾಸಿಸುತ್ತಲೇ, ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ವಿದ್ಯಾಭ್ಯಾಸ ಮುಂದು ವರಿಸಿದರು.

1997ರಲ್ಲಿ ಪದವಿ ಮುಗಿಸಿ, ಸಿಲಿಕಾನ್ ವ್ಯಾಲಿಯಲ್ಲಿ ಹೊಸ ಉದ್ಯಮಗಳಲ್ಲಿ ಕೆಲಸ ಆರಂಭಿಸಿದರು. ಮಸ್ಕ್ ಅವರ ಮೊದಲ ಯಶಸ್ಸು ಜಿಪ್2 ಎಂಬ ಸಾಫ್ಟ್ವೇರ್‌ನಿಂದ. ತಮ್ಮಲ್ಲಿದ್ದ ಒಂದೇ ಕಂಪ್ಯೂಟರ್ ಬಳಸಿ, ರಾತ್ರಿಯಿಡೀ ಕೋಡಿಂಗ್ ಮಾಡಿ, ಅಭಿವೃದ್ಧಿ ಪಡಿಸಿದ ‘ಜಿಪ್2’ ಆಗಿನ ದಿನಗಳಲ್ಲಿ ವಿಶಿಷ್ಟ. ವೃತ್ತ ಪತ್ರಿಕೆಗಳ ಪ್ರಕಾಶನ ಮತ್ತು ಮಾರಾಟಕ್ಕೆ ಸಹಕರಿಸುವ ಆ ಸಾಫ್ಟ್ ವೇರನ್ನು ಕೊಂಪಾಕ್ ಎಂಬ ಸಂಸ್ಥೆಯು 1999ರಲ್ಲಿ 307 ಮಿಲಿಯ ಡಾಲರ್‌ಗೆ ಖರೀದಿಸಿತು. ಇದರಲ್ಲಿ 22 ಮಿಲಿಯ ಡಾಲರ್ ಮಸ್ಕ್ ಅವರಿಗೆ ದೊರಕಿತು.

2000ದ ಹೊತ್ತಿಗೆ ‘ಪೇಪಾಲ್’ ಸಂಸ್ಥೆಯನ್ನು ಅಭಿವೃದ್ಧಿಪಡಿಸಿ, ‘ಇಬೇ’ ಸಂಸ್ಥೆಗೆ ಮಾರಿದರು. ಇದರಲ್ಲಿ ಅವರಿಗೆ ದೊರೆತ ಹಣ 165 ಮಿಲಿಯನ್ ಡಾಲರ್. ಮಸ್ಕ್ ಅವರ ಬಹುದೊಡ್ಡ ಕನಸು ನನಸಾದ ಕ್ಷಣವೆಂದರೆ ‘ಸ್ಪೇಸ್ ಎಕ್ಸ್’ ಸಂಸ್ಥೆಯ ಮೂಲಕ ರಾಕೆಟ್ ಉಡಾಯಿಸಿ, ಜನರನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದು. ಈ ಕ್ಷೇತ್ರದಲ್ಲಿ ಅವರಿಗೆ ಅಪಾರವಾದ ಆರ್ಥಿಕ ಲಾಭ ಇನ್ನೂ
ದೊರಕಿಲ್ಲ. ಆದರೆ, ಮುಂದೊಂದು ದಿನ ಮಂಗಳ ಗ್ರಹದಲ್ಲಿ ಮನುಷ್ಯನು ವಾಸಿಸುತ್ತಾನೆ ಎಂದು ಸಾರಿರುವ ಮಸ್ಕ್, ಆ ನಿಟ್ಟಿನಲ್ಲಿ ತನ್ನ ಸಾಹಸಗಳನ್ನು ಮುಂದುವರಿಸಿದ್ದಾರೆ.

ನಾಸಾ ಸಂಸ್ಥೆಯ ಜತೆ ಕೈಜೋಡಿಸಿ ಮತ್ತು ತಾನೇ ಪ್ರತ್ಯೇಕ ವಾಗಿ, ರಾಕೆಟ್ ತಂತ್ರಜ್ಞಾನದಲ್ಲಿ ಹಲವು ಸಂಶೋಧನೆ ಗಳನ್ನು
ಕೈಗೊಂಡಿದ್ದಾರೆ. ಮುಂದಿನ ದಶಕದ ಹೊತ್ತಿಗೆ ಮಂಗಳ ಗ್ರಹದಲ್ಲಿ ಮಾನವ ವಾಸಿಸುತ್ತಾನೆ ಎಂದಿರುವ ಮಸ್ಕ್, 2040ರ ಸಮಯದಲ್ಲಿ ಸುಮಾರು 80000 ಮನುಷ್ಯರು ಮಂಗಳ ಗ್ರಹದಲ್ಲಿ ಬಿಡಾರ ಹೂಡುತ್ತಾರೆ ಎಂದಿದ್ದಾರೆ. 2022ರಲ್ಲಿ ಮಾನವ ರಹಿತ ಬಾಹ್ಯಾಕಾಶ ನೌಕೆಯು ಮಂಗಳನತ್ತ ಚಲಿಸಲಿದ್ದು, 20204ರಲ್ಲಿ ಮಾನವಸಹಿತ ಬಾಹ್ಯಾಕಾಶ ಯಾನ ಮಂಗಳನತ್ತ ಸಾಗಲಿದೆ ಎಂದಿದ್ದಾರೆ.

ಎಲಾನ್ ಮಸ್ಕ್ ಅವರ ಉದ್ಯಮ ಸಾಹಸಗಳಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದದ್ದು ಮತ್ತು ಅವರನ್ನು ವಿಶ್ವದ ನಂಬರ್ 1 ಶ್ರೀಮಂತನ ಸ್ಥಾನದಲ್ಲಿ ಕುಳ್ಳಿರಿಸಿದ್ದು ಟೆಸ್ಲಾ ವಿದ್ಯುತ್ ಚಾಲಿತ ಕಾರು. 2003ರಲ್ಲಿ ಈ ರೀತಿಯ ಒಂದು ಕಾರನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತೇನೆ ಎಂದು ಅವರು ಘೋಷಿಸಿದಾಗ ಟೀಕಾಕಾರರು ಅಪಹಾಸ್ಯ ಮಾಡಿದ್ದರು. ಬ್ಯಾಟರಿ ಚಾಲಿತ ಕಾರು ಯಶಸ್ಸು ಗಳಿಸಬಲ್ಲದು ಎಂದು ಆಗ ಯಾರೂ ಊಹಿಸಿರಲಿಲ್ಲ.

2008ರಲ್ಲಿ ಟೆಸ್ಲಾ ಸಂಸ್ಥೆಯು ಮೊದಲ ಎಲೆಕ್ಟ್ರಿಕ್ ಸ್ಪೋಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತು. ಟೆಸ್ಲಾ ಕಾರು
ಅಭಿಯಾನದ ಮೊದಲ ಯಶಸ್ಸು ದೊರೆತದ್ದು 2012ರಲ್ಲಿ, ಮಾಡೆಲ್ ಎಸ್ ಸೆಡಾನ್ ಕಾರಿನ ಮೂಲಕ. ನಂತರ ಬಂದ ಟೆಸ್ಲಾ ಕಾರುಗಳು ಹೆಚ್ಚು ಸೌಲಭ್ಯಗಳನ್ನು ಹೊಂದಿದ್ದವು. ತ್ವರಿತವಾಗಿ ಚಾರ್ಜ್ ಆಗುವುದು, ವೇಗದ ಚಲನೆ, ಅತ್ಯಾಧುನಿಕ ತಂತ್ರಜ್ಞಾನ ಈ ಕಾರುಗಳ ವಿಶೇಷತೆ. ಚಾಲಕ ರಹಿತ ವಿದ್ಯುತ್ ಚಾಲಿತ ಕಾರುಗಳು ಸಹ ಮಸ್ಕ್ ಅವರ ಅಭಿಯಾನದಲ್ಲಿ ಸೇರಿವೆ.

2020ರ ಒಂದೇ ವರ್ಷದಲ್ಲಿ, ಕೋವಿಡ್ ಹಿನ್ನಡೆಯ ನಡುವೆಯೂ, 500000 ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳು ಮಾರಾಟ ಗೊಂಡಿವೆ. ಟೆಸ್ಲಾ ಶೇರುಗಳ ಬೆಲೆಯು ಇನ್ನಿಲ್ಲದಂತೆ ಮೇಲೇರಿದ್ದು ಸಹ 2020ರಲ್ಲೇ. ಕಾರು ಮಾರುಕಟ್ಟೆಯಲ್ಲಿ ಮುಂದಿನ ದಶಕಗಳು ವಿದ್ಯುತ್ ಚಾಲಿತ ಕಾರುಗಳದ್ದೇ ಪಾರಮ್ಯ ಎಂಬುದು ಖಚಿತ ವಾಗಿರುವಾಗ, ಟೆಸ್ಲಾ ಕಾರುಗಳು ಇನ್ನಷ್ಟು ಯಶಸ್ಸು ಗಳಿಸುವುದರಲ್ಲಿ ಅನುಮಾನವಿಲ್ಲ.

ಬೆಂಗಳೂರಿನಲ್ಲಿ ಮಸ್ಕ್ ಅವರ ಒಡೆತನದ ಟೆಸ್ಲಾ ಸಹವರ್ತಿ ಸಂಸ್ಥೆಯು ಈಗ ತನ್ನ ಹೆಜ್ಜೆಯನ್ನು ಊರಿದೆ. ಸುಮಾರು 60 ಲಕ್ಷ ರುಪಾಯಿ ಬೆಲೆ ಬಾಳುವ ದುಬಾರಿ ಟೆಸ್ಲಾ ವಿದ್ಯುತ್ ಚಾಲಿತ ಕಾರನ್ನು ಭಾರತದ ಸಿರಿವಂತ ಗ್ರಾಹಕರಿಗೆ ಈ ವರ್ಷ ಪರಿಚಯಿಸುವು ದಾಗಿ ಮಸ್ಕ್ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ತನ್ನ ಒಡೆತನದ ಸಂಸ್ಥೆಯು ನೋಂದಣಿಯಾದ ಸಂತಸದಲ್ಲಿ ನಿನ್ನ ಮಸ್ಕ್ ಟ್ವೀಟ್ ಮಾಡಿದ್ದಾರೆ ‘as promised ವಾಗ್ದಾನ ಮಾಡಿದಂತೆ ತಾನು ಭಾರತದಲ್ಲಿ ಹೆಜ್ಜೆ ಯೂರಿದ್ದೇನೆ ಎಂದು. ನಮ್ಮ ದೇಶದ ಬಹುಪಾಲು
ಜನರು ದುಬಾರಿ ಟೆಸ್ಲಾ ಕಾರನ್ನು ಖರೀದಿಸಲು ಶಕ್ತರಲ್ಲ, ಆದರೆ ಶ್ರೀಮಂತರು ಟೆಸ್ಲಾ ಕಾರು ಖರೀದಿಸಲಿ ಎಂಬುದೇ ತನ್ನ ಆಶಯ ಎಂದಿದ್ದಾರೆ.

ಜತೆಗೆ, ವಿದ್ಯುತ್ ಚಾಲಿತ ಕಾರುಗಳ ತಯಾರಿ ಮತ್ತು ಮಾರಾಟಕ್ಕೆ ನಮ್ಮ ಸರಕಾರವು ನೀಡುತ್ತಿರುವ ಸಹಾಯಧನವನ್ನು ಸದುಪ ಯೋಗ ಮಾಡಿಕೊಳ್ಳುವುದರಲ್ಲಿ ಅವರು ಉತ್ಸುಕರು. ಅಮೆರಿಕದಲ್ಲೂ, ಅವರ ವಿವಿಧ ಉದ್ಯಮಗಳು ಸರಕಾರದ ಸಹಾಯಧನ ವನ್ನು ಪಡೆಯುವಲ್ಲಿ, ರಿಯಾಯತಿಗಳನ್ನು ಪಡೆಯುವಲ್ಲಿ ಸದಾ ಮುಂದು. ವಾತಾವರಣವನ್ನು ಶುದ್ಧವಾಗಿಡುವ ವಿದ್ಯುತ್ ಚಾಲಿತ ಕಾರುಗಳೇ ಮುಂದಿನ ಆಶಾಕಿರಣಗಳು ಎಂದು ನಂಬಿರುವ ಮಸ್ಕ್, ಭಾರತದ ಬಹುದೊಡ್ಡ ಕಾರು ಮಾರುಕಟ್ಟೆಯಲ್ಲಿ ಯಾವ ರೀತಿ ಸಫಲರಾಗುವರೋ ಕಾದು ನೋಡ ಬೇಕಷ್ಟೆ.

ಈ ನಡುವೆ ಎಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆಯ ಭಾರತ ಪ್ರವೇಶವನ್ನು ಟೀಕಿಸುವವರೂ ಇದ್ದಾರೆ. ಅಮೆರಿಕದ ಐಷಾರಾಮಿ ಕಾರು ತಯಾರಿಸುವ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಕಾಲೂರಿದರೆ ನಾವೇಕೆ ಸಂಭ್ರಮಿಸಬೇಕು ಎಂದು ಮೂಗು ಮುರಿಯು
ತ್ತಿರುವವರೂ ನಮ್ಮಲ್ಲಿದ್ದಾರೆ. ಅಂತಹದೊಂದು ಮನಸ್ಥಿತಿಯನ್ನು ಕಂಡು ಕನಿಕರ ಮೂಡುತ್ತದೆ. ಸದ್ಯದ ಸ್ಥಿತಿಯಲ್ಲಿ ಅಮೆರಿಕದ ನಂಬರ್ ಕಾರು ತಯಾರಿಕಾ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಚಟುವಟಿಕೆ ಆರಂಭಿಸುತ್ತಿದೆ ಎಂದರೆ ಅದು ಒಂದು ವಿಶೇಷ
ವಿದ್ಯಮಾನ. ಕೋವಿಡ್ ವಿಧಿಸಿದ ಸಂಕಷ್ಟ, ಆರ್ಥಿಕ ಹಿಂಜರಿತ, ನಮ್ಮ ದೇಶದ ಕೆಲವು ಆಂತರಿಕ ಸಮಸ್ಯೆಗಳು ಇವೆಲ್ಲವುಗಳ ಹಿನ್ನೆಲೆಯಲ್ಲಿ ಟೆಸ್ಲಾ ನಮ್ಮ ರಾಜ್ಯಕ್ಕೆ ಕಾಲಿರಿಸಿರುವುದನ್ನು ನೋಡಬೇಕಾಗುತ್ತದೆ.

ಇತರ ವಿದೇಶಿ ಸಂಸ್ಥೆಗಳಂತೆ, ಚೀನಾದ ಮೊಬೈಲ್ ಸಂಸ್ಥೆಗಳ ರೀತಿ ಟೆಸ್ಲಾ ಸಹ ಇಲ್ಲಿ ವ್ಯಾಪಾರವನ್ನು ಬೆಳೆಸಿಕೊಂಡು, ಲಾಭ ಗಳಿಸುವ ವಿದೇಶಿ ಸಂಸ್ಥೆಯಾಗಿ ರೂಪುಗೊಳ್ಳುತ್ತದೋ, ಇಲ್ಲವೋ ಬೇರೆ ವಿಚಾರ. ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿರುವ, ಚಾಲಕ ರಹಿತವಾಗಿಯೂ ಚಲಿಸುವ ತಾಕತ್ತುಳ್ಳ ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳು ನಮ್ಮ ರಸ್ತೆಯಲ್ಲಿ ಓಡಾಡತೊಡಗಿದರೆ, ಅವು ಇತರ ಉದ್ದಿಮೆಗಳಿಗೆ ಸೂರ್ತಿ ಎನಿಸುತ್ತವೆ. ಆ ಮೂಲಕ ನಮ್ಮವರು ಸಹ ಅಂತಹ ಸಾಹಸಿ ಉದ್ದಿಮೆಗಳನ್ನು ಮುಂದೆ ಆರಂಭಿಸಬಹುದಲ್ಲವೆ!

ಟೆಸ್ಲಾ ಮತ್ತು ಎಲಾನ್ ಮಸ್ಕ್ ಅವರ ಯಶಸ್ಸು, ನಮ್ಮ ದೇಶದ ಆರ್ಥಿಕ ಸುಸ್ಥಿತಿಯನ್ನು ಬಿಂಬಿಸುವುದರ ಜತೆ, ನಮ್ಮಲ್ಲಿನ ಅಸಂಖ್ಯ ಯುವಜನರಲ್ಲಿ ಸೂರ್ತಿ ತುಂಬ ಬಹುದಲ್ಲವೆ! ಈ ರೀತಿ ಯೋಚಿಸಿದಾಗ, ಟೆಸ್ಲಾ ಸಂಸ್ಥೆಯು ಬೆಂಗಳೂರು ಪ್ರವೇಶ
ಬಹು ಮಹತ್ವದ್ದು. ಟೆಸ್ಲಾ ಘಟಕ ಸ್ಥಾಪನೆಯ ಮೂಲಕ ಎಲಾನ್ ಮಸ್ಕ್ ರಂಥ ಯಶಸ್ವಿ ಸಾಹಸೋದ್ಯಮಿಯು ತನ್ನ ಸಂಸ್ಥೆಯ ಶಾಖೆಯನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿರುವುದು, ಈ ಶತಮಾನದ ಪ್ರಮುಖ ವಿದ್ಯಮಾನಗಳಲ್ಲಿ ಒಂದು ಎಂದು ಗುರುತಿಸಲ್ಪಡುತ್ತದೆ ಎಂದೇ ನನ್ನ ಅಭಿಮತ.