Friday, 13th December 2024

ವಿಷಸರ್ಪ, ವಿಷಕನ್ಯೆ, ವಿಷಾದಗಳಲ್ಲೇ ಮುಗಿದು ಹೋಯಿತಾ ಚುನಾವಣೆ ?!

ನೂರೆಂಟು ವಿಶ್ವ

vbhat@me.com

26 ಫೆಬ್ರವರಿ 2008 !

ಅಂದು ಅಮೆರಿಕದ ಸ್ಟಾರ್ ಬಕ್ಸ್ ಕಾಫಿ ಮಳಿಗೆಯಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಅಮೆರಿಕದ ಇತಿಹಾಸದಲ್ಲಿ ಆ ದಿನವನ್ನು ‘ಅತ್ಯಂತ ದುಬಾರಿ ಕಾಫಿ ಬ್ರೇಕ್’ ಎಂದು ಕರೆಯುವುದುಂಟು. ಆದರೆ ಅದಕ್ಕಿಂತ ಮುಖ್ಯವಾಗಿ, ಆ ದಿನವನ್ನು
ಒಂದು ಸಂಸ್ಥೆಯು ತನ್ನ ಸಿಬ್ಬಂದಿ ತರಬೇತಿಗಾಗಿ ಕೈಗೊಂಡ ಅತ್ಯಂತ ಸೃಜನಶೀಲ ಕ್ರಮ ಎಂದೂ ಬಣ್ಣಿಸುವುದುಂಟು.

ಒಂದು ಬೃಹತ್ ದೊಡ್ಡ ಸಂಸ್ಥೆಯ ವ್ಯಾಪಾರ ಹಠಾತ್ ಇಳಿಮುಖವಾದಾಗ, ಅದನ್ನು ಎತ್ತರಿಸಲು ಅದರ ನಾಯಕನಾದವನು ಯಾವ ರೀತಿ ಮುಂದಾಗ ಬಹುದು ಎಂಬುದನ್ನು ಸಾಬೀತು ಮಾಡಲು ಮುಂದಾದ ದಿನ ಎಂದೂ ಈಗಲೂ ಆ ದಿನವನ್ನು ನೆನಪಿಸಿಕೊಳ್ಳುವುದುಂಟು. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾಯಕನಾದವನು ಎಂಥ ದಿಟ್ಟತನ ಮೆರೆಯಬೇಕು, ಯಾರಿಂದಲೂ ಸಾಧ್ಯವಾಗದ ಗಟ್ಟಿ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಬೇಕು, ಪರಿಣಾಮ ಏನೇ ಆದರೂ ಪರವಾಗಿಲ್ಲ, ನಾನು ಮಾತ್ರ ನನ್ನ ಯೋಚನೆಯಿಂದ ವಿಮುಖ ನಾಗುವುದಿಲ್ಲ , ನನ್ನ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂಬ ಅಚಲ ನಂಬಿಕೆಯನ್ನು ಪ್ರೋತ್ಸಾಹಿಸು ವವರೆಲ್ಲ ಆ ದಿನವನ್ನು ಮರೆಯುವುದಿಲ್ಲ. ಅದೇನೇ ಇರಲಿ, ಆ ದಿನ ಇನ್ನೂ ಹಲವು ಸಂಗತಿಗಳಿಗಾಗಿ ಅತ್ಯಂತ ಮಹತ್ವದ ದಿನ ಎಂದು ಕರೆಯಿಸಿಕೊಂಡಿದೆ.

‘ಸ್ಟಾರ್ ಬಕ್ಸ್’ ಕಾಫಿ ಮಳಿಗೆಯಲ್ಲಿ ಎಲ್ಲವೂ ಸರಿ ಇರಲಿಲ್ಲ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆಲಸಕ್ಕೆ ರಾಜೀ ನಾಮೆ ನೀಡಿದ್ದ. ಆತನ ಜತೆಯಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದವರು ಕೆಲಸ ತೊರೆದಿದ್ದರು. ಇದರಿಂದ ಸಹಜವಾಗಿ ಷೇರು ದಾರರು ಅಸಮಾಧಾನ ಗೊಂಡಿದ್ದರು. ಇದರಿಂದ ಸಂಸ್ಥೆಯ ಆರ್ಥಿಕ ಬೆಳವಣಿಗೆ ಕುಂಠಿತವಾಗಬಹುದು ಎಂದು ಅವರೆಲ್ಲ ಆತಂಕಗೊಂಡಿದ್ದರು. ದೇಶದೆಡೆ ಇರುವ ಮಳಿಗೆಗಳಲ್ಲಿ ಕಾಫಿಯನ್ನು ಮಾಡುವ ವಿಧಾನ ಗ್ರಾಹಕರಿಗೆ ಸಂಪೂರ್ಣ ತೃಪ್ತಿ ನೀಡುತ್ತಿಲ್ಲವೇನೋ ಎಂಬ ಭಯ ಕೂಡ ಸಂಸ್ಥೆಯ ಮುಖ್ಯಸ್ಥರನ್ನು ಕಾಡುತ್ತಿತ್ತು.

ಕಂಪನಿ ಷೇರುಗಳ ಬೆಲೆ ಶೇ.೪೨ರಷ್ಟು ಕುಸಿದಿತ್ತು. ದೇಶಾದ್ಯಂತ ಐದು ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಮನೆಗೆ ಕಳಿಸಿತ್ತು. ಅವೆಲ್ಲಕ್ಕಿಂತ ಮುಖ್ಯವಾಗಿ, ಹಾಟ್ ಬ್ರೇಕ್ ಫಾಸ್ಟ್ ಪರಿಮಳ (aroma) , ಕಾಫಿ ಪರಿಮಳದೊಂದಿಗೆ ಮಿಶ್ರವಾಗಿ ನಿಜವಾದ ಕಾಫಿಯ ಸ್ವಾದದ ಅನುಭವ ಗ್ರಾಹಕರಿಗೆ ಸಿಗುತ್ತಿರಲಿಲ್ಲ. ಆದರೆ ಈ ಸಂಗತಿಗಳನ್ನು ಸ್ಟಾರ್ ಬಕ್ಸ್‌ನಲ್ಲಿ ಕೆಲಸ
ಮಾಡುವ ಸಿಬ್ಬಂದಿ ಅನುಭವಕ್ಕೆ ಬರುತ್ತಿರಲಿಲ್ಲ. ಈ ಎಲ್ಲ ಅನುಮಾನ, ಗೊಂದಲ, ಆತಂಕವನ್ನು ಪರಿಹರಿಸಲು ಒಂದು
ಕ್ರಮವನ್ನು ಕೈಗೊಳ್ಳಲೇಬೇಕಿತ್ತು. ಆದರೆ ಅದ್ಯಾವ ಕ್ರಮ ಎಂಬ ಕುರಿತು ಸಂಸ್ಥೆಯ ಉನ್ನತ ಹುದ್ದೆಯಲ್ಲಿರುವವರೆಲ್ಲ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು.

ಇಡೀ ಸಿಬ್ಬಂದಿವರ್ಗಕ್ಕೆ ಮತ್ತು ಗ್ರಾಹಕರಿಗೆ ಒಂದು ಸಕಾರಾತ್ಮಕ (ಪಾಸಿಟಿವ್) ಸಂದೇಶವನ್ನು ನೀಡುವುದು ಅಗತ್ಯವಾಗಿತ್ತು.
ಆ ದಿನ ಸಾಯಂಕಾಲ ಸರಿಯಾಗಿ ಐದು ಗಂಟೆಗೆ, ಅಮೆರಿಕದಲ್ಲಿರುವ ಸುಮಾರು 7100 ಸ್ಟಾರ್ ಬಕ್ಸ್ ಮಳಿಗೆಗಳನ್ನು
ಮುಚ್ಚಲು ನಿರ್ಧರಿಸಲಾಯಿತು. ಆ ಎಲ್ಲ ಮಳಿಗೆಗಳ ಬಾಗಿಲಿಗೆ ಒಂದು ಪ್ರಕಟಣೆಯನ್ನು ಅಂಟಿಸಲಾಗಿತ್ತು – ‘ನಾವು ಕಾಫಿ (ಎಸ್ಪ್ರೆಸ್ಸೋ) ಮಾಡುವ ವಿಧಾನವನ್ನು ಇನ್ನಷ್ಟು ಸುಧಾರಿಸಿಕೊಳ್ಳಲು, ಆ ಕ್ರಮವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು
ಮೂರೂವರೆ ತಾಸು ಬಿಡುವು ತೆಗೆದುಕೊಳ್ಳುತ್ತಿದ್ದೇವೆ.

ಉತ್ತಮ ಕಾಫಿ ಮಾಡುವುದು ಚಮತ್ಕಾರವಲ್ಲ. ಅದಕ್ಕೆ ಪರಿಣತರ ತರಬೇತಿ ಮತ್ತು ನಿರಂತರ ಅಭ್ಯಾಸ ಅತ್ಯಗತ್ಯ. ನಮಗೆ ಕರಗತವಾಗಿರುವ ಕಾಫಿ ಮಾಡುವ ಕಲೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳಲು, ಕಾಲಕಾಲಕ್ಕೆ ಹೆಚ್ಚಾಗುತ್ತಿರುವ ಗ್ರಾಹಕರ ಸಂತೃಪ್ತಿಯ ಮಟ್ಟಕ್ಕೆ ಅನುಗುಣವಾದ ಅನುಭವ ನೀಡುವುದು ಈ ಕ್ರಮದ ಹಿಂದಿನ ಉದ್ದೇಶ. ಗ್ರಾಹಕರು ಸಹಕರಿಸಬೇಕು.’
ಮುಂದಿನ ಮೂರೂವರೆ ಗಂಟೆ ಅವಧಿಯಲ್ಲಿ ಅಮೆರಿಕದೆಡೆ ಇರುವ ಸ್ಟಾರ್ ಬಕ್ಸ್ ಮಳಿಗೆಗಳಲ್ಲಿರುವ ಒಂದು ಲಕ್ಷ ಅರವತ್ತು ಸಾವಿರ ಮಂದಿ ಅತ್ಯುತ್ತಮ ಸ್ವಾದದ ಎಸ್ಪ್ರೆಸ್ಸೋ ತಯಾರಿಸುವುದು ಹೇಗೆ ಎಂಬ ತರಬೇತಿ ಪಡೆದರು. ಈ ಅವಧಿಯಲ್ಲಿ ಅವರೆಲ್ಲರಿಗೆ ಸ್ಟಾರ್ ಬಕ್ಸ್ ಧ್ಯೇಯವೇನು, ಗ್ರಾಹಕ ಸಂತೃಪ್ತಿಯ ಗರಿಷ್ಠ ಮಟ್ಟವನ್ನು ತಲುಪುವುದು ಹೇಗೆ, ಗ್ರಾಹಕ ಸೇವೆ ಯನ್ನು ಇನ್ನಷ್ಟು ಸುಧಾರಿಸುವುದು ಹೇಗೆ, ಉಳಿದವುಗಳಿಗಿಂತ ಸ್ಟಾರ್ ಬಕ್ಸ್ ಹೇಗೆ ಭಿನ್ನ ಎಂದು ತಿಳಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ವಿಡಿಯೋ ಕಾನರೆನ್ಸಿಂಗ್ ಮೂಲಕ ಸಂಸ್ಥೆಯ ಮುಖ್ಯಸ್ಥ ಹೊವಾರ್ಡ್ ಶುಲ್ಜ ಎಲ್ಲ ಸಿಬ್ಬಂದಿಯೊಂದಿಗೆ ಮಾತಾಡುವ ಅವಕಾಶವನ್ನು ಕಲ್ಪಿಸಲಾಯಿತು. ಅಂದರೆ ಅವರೆಲ್ಲ ಅದ್ಭುತ ಕಾಫಿಯನ್ನು ಮಾಡುವುದರ ಜತೆಗೆ ಸ್ಟಾರ್ ಬಕ್ಸ್ ಅನ್ನು ಅದ್ಭುತವನ್ನಾಗಿ ಮಾಡುವುದು ಹೇಗೆ ಎಂಬ ತರಬೇತಿ ಮತ್ತು ಸಂಕಲ್ಪವನ್ನು ಪಡೆದರು.

ಇದು ನಿಜಕ್ಕೂ ಗ್ರೇಟ್ ತಾನೇ? ಆದರೆ ಇದರಿಂದ ಏನಾಯಿತು ಗೊತ್ತಾ? ಒಂದೇ ದಿನದಲ್ಲಿ ಕಾಫಿ ಮಾರಾಟಕ್ಕಾದ ವ್ಯತ್ಯಯ ಮತ್ತು ಸಿಬ್ಬಂದಿ ಸಂಬಳ ಸೇರಿಸಿ, ಸಂಸ್ಥೆಗೆ ಅರವತ್ತು ಲಕ್ಷ ಡಾಲರ್ ಹಾನಿಯಾಯಿತು. ಸಿಬ್ಬಂದಿಗೆ ತರಬೇತಿ ಕೊಟ್ಟಿದ್ದರಿಂದ ದೇಶಾದ್ಯಂತ ಸ್ಟಾರ್ ಬಕ್ಸ್ ಬಾಗಿಲು ಮುಚ್ಚಿತು. ಕಾಫಿ ಸೇವಿಸಲು ಆಸೆ ಪಟ್ಟು ಬಂದ ಗ್ರಾಹಕರು, ಕೆಲಕಾಲ ರಿಲ್ಯಾಕ್ಸ್ ಆಗುವ ಆಶಯದಿಂದ ಬಂದವರು ಮುಚ್ಚಿದ ಬಾಗಿಲು ನೋಡಿ ನಿರಾಸೆಯಿಂದ ವಾಪಸ್ ತೆರಳಿದರು.

ಇದು ಸ್ಟಾರ್ ಬಕ್ಸ್ ಬ್ರ್ಯಾಂಡ್ ಬಗ್ಗೆ ನಕಾರಾತ್ಮಕ ಭಾವನೆ ಮೂಡುವಂತೆ ಮಾಡಿತು. ಅಷ್ಟಕ್ಕೂ ಇಷ್ಟೆಲ್ಲ ಆಗಿದ್ದು ಸಿಬ್ಬಂದಿಗೆ ತರಬೇತಿ ನೀಡುವುದಕ್ಕಾಗಿ. ನೀವು ಸಂಸ್ಥೆಯ ಮುಖ್ಯಸ್ಥರಾಗಿದ್ದಿದ್ದರೆ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಿರಾ? ಸಾಧ್ಯವೇ ಇಲ್ಲ. ಶುರುವಾಯಿತು ಜನರ ಟೀಕೆ, ಪ್ರತಿಕ್ರಿಯೆಗಳ ಸುರಿಮಳೆ. ಸಿಬ್ಬಂದಿಗೆ ತರಬೇತಿ ನೀಡುವ ನೆಪದಲ್ಲಿ ಮಳಿಗೆಗಳನ್ನು
ಮುಚ್ಚಿದ್ದರಿಂದ ಸ್ಟಾರ್ ಬಕ್ಸ್ ತನ್ನಲ್ಲಿರುವ ತಪ್ಪುಗಳನ್ನು ಒಪ್ಪಿಕೊಂಡಂತಾಗಿದೆ, ಇಷ್ಟು ದಿನಗಳ ಕಾಲ ಗ್ರಾಹಕರಿಗೆ ಮೋಸ
ಮಾಡಿದ್ದೇವೆ ಎಂಬುದನ್ನು ಈ ಮೂಲಕ ಸ್ಟಾರ್ ಬಕ್ಸ್ ಒಪ್ಪಿಕೊಂಡಂತಾಗಿದೆ, ಸ್ಟಾರ್ ಬಕ್ಸ್ ಇಡೀ ಅಂಗರಚನೆಯಲ್ಲಿ
ಪ್ರಮಾದ ವಿರುವುದು ಇಡೀ ಜಗತ್ತಿಗೆ ಬಹಿರಂಗವಾದಂತಾಗಿದೆ, ಇಷ್ಟು ದಿನಗಳ ಕಾಲ ಗ್ರಾಹಕರು ನೀಡಿದ ಹಣಕ್ಕೆ ಕಡಿಮೆ
ಮಟ್ಟದ ಸೇವೆ ನೀಡಿದ ಸ್ಟಾರ್ ಬಕ್ಸ್‌ಗೆ ದಂಡ ವಿಧಿಸಬೇಕು, ಇದು ಗ್ರಾಹಕರಿಗೆ ಮಾಡಿದ ಅಪಚಾರ, ಮೋಸ ಎಂಬ ಟೀಕೆಗಳು ಕೇಳಿ ಬಂದವು.

ಟಿವಿ, ಪತ್ರಿಕೆಗಳಲ್ಲಿ ಈ ಅಂಶಗಳೇ ಪ್ರಧಾನವಾಗಿ ವರದಿಯಾದವು. ಈ ಮಧ್ಯೆ ಪ್ರತಿಸ್ಪರ್ಧಿಗಳಾದ ‘ಡಂಕಿನ್ ಡೋನಟ್’ ಆ ದಿನ ತಾನು ಮಾರಾಟ ಮಾಡುವ ಕಾಫಿ ಬೆಲೆಯಲ್ಲಿ ಅರ್ಧದಷ್ಟು ಕಡಿತ ಮಾಡಿತು. ಲಾಸ್‌ಏಂಜೆಲಿಸ್ ಮೂಲದ ‘ಕಾಫಿ ಕ್ಲಾಟ್ಚ್’, ಆ ದಿನ ಯಾರೇ ಬಂದರೂ ಉಚಿತ ಕಾಫಿ ನೀಡಿತು. ಸ್ಟಾರ್ ಬಕ್ಸ್ ನಿರೀಕ್ಷಿಸದಷ್ಟು ನಕಾರಾತ್ಮಕ ಪ್ರತಿಕ್ರಿಯೆಗಳು ಮೂಡಿ ಬಂದವು. ಈ ಎಲ್ಲ ಸಂಗತಿಗಳು ನಿರೀಕ್ಷಿತವಾಗಿತ್ತು. ಅದೆಂಥ ನಕಾರಾತ್ಮಕ ಪ್ರತಿಕ್ರಿಯೆ ಬಂದರೂ, ಅವನ್ನು ಎದುರಿಸಲು ಸ್ಟಾರ್ ಬಕ್ಸ್ ಸಿದ್ಧವಾಗಿತ್ತು. ಆದರೆ ಒಟ್ಟಾರೆ ವ್ಯಕ್ತವಾದ ಅಭಿಪ್ರಾಯವನ್ನು ಗಮನಿಸಿದರೆ, ಈ ಪ್ರಯೋಗ ಒಂದು ‘ಮಹಾನ್ ಪ್ರಮಾದ’ ಎಂದೇ ಎಲ್ಲರೂ ಅಂದುಕೊಂಡರು.

ಆದರೆ ಒಬ್ಬ ವ್ಯಕ್ತಿ ಮಾತ್ರ ತನ್ನ ನಿರ್ಧಾರ ನೂರಕ್ಕೆ ನೂರು ಸರಿಯಾಗಿದೆ ಎಂದುಕೊಂಡ. ಆತನೇ ಸ್ಟಾರ್ ಬಾಕ್ಸ್ ಮುಖ್ಯಸ್ಥ ಹೊವಾರ್ಡ್ ಶುಲ್ಜ! ತನ್ನ ಸಿಬ್ಬಂದಿ ತರಬೇತಿ ಮೇಲೆ ಖರ್ಚು ಮಾಡುವ ಹಣ ವ್ಯರ್ಥವಲ್ಲ ಎಂಬುದು ಆತನ ಅಚಲ ನಂಬಿಕೆ ಯಾಗಿತ್ತು. ದೇಶದೆಡೆ ಇರುವ ಮಳಿಗೆಗಳಲ್ಲಿರುವ ತನ್ನೆಲ್ಲ ಸಿಬ್ಬಂದಿಯನ್ನು ಇದಕ್ಕಿಂತ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ
ಹಣದಲ್ಲಿ ತರಬೇತಿಗೊಳಿಸುವುದು ಸಾಧ್ಯವೇ ಇಲ್ಲ, ಹೀಗಾಗಿ ಈ ಕ್ರಮ ಅಸಾಮಾನ್ಯ ಫಲಿತಾಂಶವನ್ನು ನೀಡುವುದರಲ್ಲಿ
ಸಂದೇಹವೇ ಇಲ್ಲ ಎಂದು ಆತ ನಂಬಿದ್ದ.

ಸಿಬ್ಬಂದಿ ತರಬೇತಿಗಾಗಿ ದೇಶದೆಡೆ ಇರುವ ಮಳಿಗೆಗಳನ್ನೇ ಮುಚ್ಚಿಬಿಡುವುದು ಅಪಾಯಕಾರಿ ಯೋಚನೆ ಎಂದು ಅನೇಕರು ಭಾವಿಸಿದ್ದಕ್ಕೆ ವ್ಯತಿರಿಕ್ತವಾಗಿ ಹೊವಾರ್ಡ್ ಶುಲ್ಜ ಯೋಚಿಸಿದ್ದ. ಉಳಿದ ಸಂದರ್ಭಗಳಲ್ಲಿ ಸಿಬ್ಬಂದಿ ತರಬೇತಿ ಪಡೆಯುವುದು
ಗ್ರಾಹಕರಿಗೆ ಗೊತ್ತೇ ಆಗುವುದಿಲ್ಲ, ಆದರೆ ಈಗ ಇಡೀ ದೇಶಕ್ಕೆ ಗೊತ್ತಾಗುವಂತಾಯಿತು. ಇದು ಸ್ಟಾರ್ ಬಕ್ಸ್ ಗ್ರಾಹಕಮುಖಿ
ಎಂಬ ಅಭಿಪ್ರಾಯವನ್ನು ನೀಡುತ್ತದೆ ಎಂದು ಆತ ಬಲವಾಗಿ ನಂಬಿದ್ದ. ಹೀಗಾಗಿ ಜನರೇನು ಹೇಳುತ್ತಾರೆ, ಪ್ರತಿಸ್ಪರ್ಧಿಗಳು
ಪರಿಸ್ಥಿತಿಯ ಲಾಭವನ್ನು ಹೇಗೆ ಪಡೆಯಬಹುದು, ಇದರಿಂದ ಸಂಸ್ಥೆಗೆ ಎಷ್ಟು ಹಾನಿಯಾಗುತ್ತದೆ ಇತ್ಯಾದಿ ಸಂಗತಿಗಳ ಬಗ್ಗೆ
ಆತ ತಲೆ ಕೆಡಿಸಿಕೊಳ್ಳಲೇ ಇಲ್ಲ.

ಆತನ ಮುಂದೆ ಇದ್ದ ಒಂದೇ ಸವಾಲೆಂದರೆ, ಈ ಹೊಸ ಮ್ಯಾಜಿಕ್ ಗ್ರಾಹಕರನ್ನು ಸೆಳೆಯಲು ಎಷ್ಟು ದಿನ ಹಿಡಿಯಬಹುದು ಎಂಬುದಾಗಿತ್ತು, ಅಷ್ಟೇ. ತನ್ನ ಮುಂದೆ ನಡೆಯುವ ವಿದ್ಯಮಾನಗಳನ್ನು ಶಾಂತಚಿತ್ತನಾಗಿ ಶುಲ್ಜ್ ಗಮನಿಸುತ್ತಿದ್ದ. ಒಂದು ತಿಂಗಳು ಕಳೆಯಿತು. ಫಲಿತಾಂಶ ಅದ್ಭುತವಾಗಿತ್ತು. ಕಾಫಿ ಸ್ವಾದ ಸುಧಾರಿಸಿತ್ತು. ಸಿಬ್ಬಂದಿ ನಡೆವಳಿಕೆಯಲ್ಲಿ ಗಣನೀಯ ಬದಲಾವಣೆ ಆಗಿತ್ತು. ಇಡೀ ಮಳಿಗೆ ಮತ್ತಷ್ಟು ಅಚ್ಚುಕಟ್ಟಾಗಿ ತನ್ನಷ್ಟಕ್ಕೆ ಆಕರ್ಷಕವಾಗಿತ್ತು. ಸ್ಟಾರ್ ಬಕ್ಸ್‌ನ ಇಡೀ ಅನುಭವದ ಬಗ್ಗೆ ಗ್ರಾಹಕ ಸಂತೃಪ್ತಿ ಹಿಂದೆಂದಿಗಿಂತ ಗರಿಷ್ಠವಾಗಿತ್ತು.

ಸಿಬ್ಬಂದಿ ಬದ್ಧತೆ, ನೈತಿಕ ಸ್ಥೈರ್ಯ ಆಗಸಕ್ಕೆ ನೆಗೆದಿತ್ತು. ನಾಯಕ ತೆಗೆದುಕೊಳ್ಳುವ ಯಾವ ನಿರ್ಧಾರವನ್ನಾದರೂ ತಾವು ಶಿರಸಾವಹಿಸಿ ಪಾಲಿಸುತ್ತೇವೆ ಎಂಬ ಸಂದೇಶ ಸಿಬ್ಬಂದಿ ವಲಯದಿಂದ ತೂರಿಬಂದಿತು. ಇವೆಲ್ಲಕ್ಕಿಂತ ಮುಖ್ಯವಾಗಿ, ಆರು ತಿಂಗಳಲ್ಲಿ ಸಂಸ್ಥೆಯ ವಹಿವಾಟು ಶೇ.28 ರಷ್ಟು ಜಾಸ್ತಿಯಾಯಿತು. ಷೇರು ಬೆಲೆ ಸಹಜವಾಗಿ ಏರಿಕೆ ಕಂಡಿತು. ಸ್ಟಾರ್ ಬಕ್ಸ್ ಗ್ರಾಹಕ ಸಂವೇದಿ ಎಂಬ ಅಭಿಪ್ರಾಯ ಮತ್ತಷ್ಟು ಗಟ್ಟಿಯಾಯಿತು. ಹೊವಾರ್ಡ್ ಶುಲ್ಜ ಕ್ರಮದ ಬಗ್ಗೆ ಸರ್ವತ್ರ ಪ್ರಶಂಸೆಗಳು ಕೇಳಿಬಂದವು.

ಷೇರುದಾರರು ಫುಲ್ ಖುಷ್! ಇಂಥ ಕಠಿಣ ಮತ್ತು ದಿಟ್ಟ ನಿರ್ಧಾರವನ್ನು ಅಲ್ಲಿ ತನಕ ಯಾರೂ ತೆಗೆದುಕೊಂಡಿರಲಿಲ್ಲ. ಇದನ್ನು ‘ಶುಲ್ಜ ಕ್ರಮ’ ಎಂದು ಎಲ್ಲರೂ ಹೊಗಳಲಾರಂಭಿಸಿದರು. ಜಗತ್ತಿನ ಮ್ಯಾನೇಜ್ಮೆಂಟ್ ಕೋರ್ಸುಗಳ ಪಠ್ಯಗಳಲ್ಲಿ ಶುಲ್ಜ ಹೆಸರು
ಸೇರಿ ಹೋಯಿತು. ‘ನಾನು ಶುಲ್ಜ ಆಗಿದ್ದರೆ ಏನು ಮಾಡುತ್ತಿದ್ದೆ?’ ಮಾದರಿಯ ವಿಷಯದ ಬಗ್ಗೆ ಇಂದಿಗೂ ಚರ್ಚೆಗಳಾಗುತ್ತವೆ.
ಅದಾಗಿ ಹತ್ತು ವರ್ಷಗಳ ಬಳಿಕ…ಒಂದು ವಿಲಕ್ಷಣ ಪ್ರಸಂಗ ನಡೆಯಿತು. ಫಿಲಡೆಲಿಯಾದ ಸ್ಟಾರ್ ಬಕ್ಸ್ ಮಳಿಗೆಯೊಂದರಲ್ಲಿ ಜನಾಂಗೀಯ ತಾರತಮ್ಯ ಆರೋಪ ಕೇಳಿ ಬಂದಿತು.

ಒಂದು ಮಳಿಗೆಯದ ಪ್ರಸಂಗ, ಇಡೀ ದೇಶದ ಮಳಿಗೆಗಳ ಮೇಲೆ ಕಪ್ಪುಚುಕ್ಕೆ ಮೂಡುವಂತಾಯಿತು. 29 ಮೇ 2018 ರಂದು ಸ್ಟಾರ್ ಬಕ್ಸ್ ಮತ್ತೊಮ್ಮೆ ಅದೇ ನಿರ್ಧಾರವನ್ನು ತೆಗೆದುಕೊಂಡಿತು ! ಅಮೆರಿಕದಲ್ಲಿರುವ ಎಂಟು ಸಾವಿರ ಕಾಫಿ ಮಳಿಗೆಗಳನ್ನು ಒಂದು ದಿನದ ಸಲುವಾಗಿ ಮುಚ್ಚಿ 1,75,000 ಸಿಬ್ಬಂದಿಗೆ ತರಬೇತಿ ನೀಡಲು ನಿರ್ಧರಿಸಿತು. ‘ಸಿಬ್ಬಂದಿಯೇ ನಮ್ಮ ಆಸ್ತಿ’ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಯಾರೂ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗುವುದಿಲ್ಲ. ಟಾರ್ಗೆಟ್ ಮುಟ್ಟ ಬೇಕು, ದೈನಂದಿನ ಕಾರ್ಯಕ್ರಮ ಅಸ್ತವ್ಯಸ್ತವಾಗುತ್ತದೆ, ತಿಂಗಳ ಕೊನೆ… ಹೀಗೆ ಏನಾದರೂ ನೆಪ ಹೇಳಿ ಸಿಬ್ಬಂದಿ ತರಬೇತಿ ಕಾರ್ಯಾಗಾರವನ್ನು ಮುಂದೂಡುತ್ತಾರೆ.

ಕಟ್ಟಕಡೆಯ ಆದ್ಯತೆಯಾಗಿ ಪರಿಗಣಿಸುತ್ತಾರೆ. ಆದರೆ ಆ ಕ್ರಮದಿಂದ ನೂರಕ್ಕೂ ಅಧಿಕ ಲಕ್ಷ ಡಾಲರ್ ನಷ್ಟವಾಗುವುದೆಂದು ಗೊತ್ತಿದ್ದರೂ ಶುಲ್ಜ್ ದೇಶವ್ಯಾಪಿ ಎಲ್ಲ ಮಳಿಗೆಗಳನ್ನು ಮುಚ್ಚಲು ನಿರ್ಧರಿಸಿ, ಸಿಬ್ಬಂದಿಗೆ ತರಬೇತಿ ನೀಡಲು ನಿರ್ಧರಿಸಿದ.
ಹತ್ತು ವರ್ಷಗಳ ಹಿಂದೆ ಏರ್ಪಡಿಸಿದ್ದ ತರಬೇತಿಗೂ, ಇದಕ್ಕೂ ವ್ಯತ್ಯಾಸವಿತ್ತು. ಆದರೆ ಈ ಸಲದ ಕ್ರಮಕ್ಕೆ ಅಮೆರಿಕದೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಜನಾಂಗೀಯ ತಾರತಮ್ಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಅಮೆರಿಕಕ್ಕೊಂದೇ ಅಲ್ಲ, ಇಡೀ ವಿಶ್ವಕ್ಕೆ ನೀಡುವಲ್ಲಿ ಸ್ಟಾರ್ ಬಕ್ಸ್ ಯಶಸ್ವಿಯಾಯಿತು.

ಸಹಜವಾಗಿ, ಇದು ಸಾರ್ವಜನಿಕರಲ್ಲಿ ಸ್ಟಾರ್ ಬಕ್ಸ್ ಬಗ್ಗೆ ಉತ್ತಮ ಭಾವನೆ ಮೂಡಲು ಕಾರಣವಾಯಿತು. ಒಂದು ದಿನದ ತರಬೇತಿ ವೆಚ್ಚ ಮತ್ತು ಸಿಬ್ಬಂದಿ ಸಂಬಳಕ್ಕಿಂತ ಮಿಗಿಲಾದ, ಯಾರೂ ಬೆಲೆ ಕಟ್ಟಲಾಗದ, ಬ್ರ್ಯಾಂಡ್ ವ್ಯಾಲ್ಯೂ ಮತ್ತು ಗುಡ್ ವಿಲ್ ಅನ್ನು ಸ್ಟಾರ್ ಬಕ್ಸ್ ಗಳಿಸಿತು. ಇದರಿಂದ ಇಡೀ ಸಿಬ್ಬಂದಿ ಸಮೂಹದ ನೈತಿಕತೆ ನೂರ್ಮಡಿಯಾಯಿತು. ಸ್ಟಾರ್ ಬಕ್ಸ್ ಅಂದ್ರೆ ಬರೀ ಕಾಫಿ, ಸ್ಯಾಂಡ್‌ವಿಚ್, ಬಿಸ್ಕತ್ ಮಾರಾಟ ಮಾಡುವ ಮಳಿಗೆಯಲ್ಲ, ಮಾನವೀಯ ಸಂಬಂಧ, ಮೌಲ್ಯಗಳಿಗೆ ಮಹತ್ವ ನೀಡುವ ಸಂಸ್ಥೆ ಎಂಬ ಉದಾತ್ತ ಭಾವನೆ ಬೇರೂರುವಂತೆ ಮಾಡಿತು.

ಹಾಂ.. ಗೊತ್ತಿರಲಿ, ಅಂದ ಹಾಗೆ ಸ್ಟಾರ್ ಬಕ್ಸ್ ವಾರ್ಷಿಕ  ಆದಾಯ ಮೂವತ್ತೆರಡು ಶತಕೋಟಿ ಡಾಲರ್!

If your actions inspire others to dream more, learn more, do more, and become more, then You Are A Leader ಎಂಬ ಮಾತಿದೆ. ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಹೊಸ್ತಿಲಲ್ಲಿ ನಿಂತು ಸ್ನೇಹಿತರಾದ ಪ್ರಕಾಶ ಅಯ್ಯರ್ ಹೇಳಿದ ಈ ಪ್ರಸಂಗವನ್ನು ಹೇಳುವುದಕ್ಕಿಂತ ನನ್ನಲ್ಲಿ ಮತ್ಯಾವ ಪ್ರಸ್ತುತ, ಸೂಕ್ತ, ಸಮಂಜಸ ಮತ್ತು ಸೂರ್ತಿದಾಯಕ ಸಂಗತಿಗಳಿರಲಿಲ್ಲ.

ನಮ್ಮ ರಾಜಕೀಯ ನಾಯಕರನ್ನಂತೂ ತೆಗಳುವುದರಲ್ಲಿ ಅರ್ಥವೇ ಇಲ್ಲ. ಅದರಿಂದ ಏನೂ ಆಗುವುದೂ ಇಲ್ಲ. ಅಸಲಿಗೆ ಅವರ ದಪ್ಪ ಚರ್ಮಕ್ಕೆ ತಟ್ಟುವುದೂ ಇಲ್ಲ. ನಾವು ಇನ್ನೂ ಉಚಿತ ಅಕ್ಕಿ, ವಿದ್ಯುತ್, ಹಾಲು, ಬಸ್ ಪ್ರಯಾಣ, ಅಡುಗೆ ಅನಿಲ ಸಿಲಿಂಡರ್ ಕೊಡುವುದುದರ ಇದ್ದೇವೆ. ಆದರೆ ಯಾವ ನಾಯಕನಿಗೂ Leadership is unlocking people’s potential to become better ಎಂಬ ಮಾತಿನ ತಾತ್ಪರ್ಯ, ಅರ್ಥ ಆದಂತಿಲ್ಲ. ಚುನಾವಣಾ ಕಣದಲ್ಲಿರುವ ಒಬ್ಬನಲ್ಲೂ ಹೊವಾರ್ಡ್ ಶುಲ್ಜನಲ್ಲಿದ್ದಂಥ ನಾಯಕತ್ವ ಗುಣ ಕಾಣುತ್ತಿಲ್ಲ. ಈ ನಾಯಕರು ಜನರಲ್ಲಿ ಯಾವ ಸ್ಫೂರ್ತಿ ತುಂಬಬಲ್ಲರು? ಹೀಗಾಗಿ ವಿಷಸರ್ಪ, ವಿಷಕನ್ಯೆ, ವಿಷಾದಗಳ ಚುನಾವಣೆ ಮುಗಿದು ಹೋಗುತ್ತಿದೆ. ಜೈ ಬಜರಂಗ ಬಲಿ!