ವಿಶ್ಲೇಷಣೆ
ರಮಾನಂದ ಶರ್ಮಾ
ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಅವರ ಪಕ್ಷಗಳು ಮಾಡುವ ವೆಚ್ಚಗಳು, ಮತದಾರರಿಗೆ ಒಡ್ಡುವ ಆಮಿಷಗಳು, ಉಚಿತ ಉಡುಗೊರೆ ಗಳು, ಅಗೋಚರ ಹಣದ ಹರಿವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಮತ‘ದಾನ’ವೋ, ಮತ‘ಬೇಟೆ’ಯೋ ಅಥವಾ ಮತ ‘ಖರೀದಿ’ಯೋ ಎಂಬ ಗೊಂದಲ ಕಾಡುತ್ತದೆ! ಚುನಾವಣೆಗಳು ತಮ್ಮ ಪಾವಿತ್ರ್ಯ ಕಳೆದುಕೊಂಡಿರುವುದು ಈಗ ಇತಿಹಾಸ.
ತಿಂಗಳಿಗೆ ೧೦೦ ಯುನಿಟ್‌ನಿಂದ ೨೦೦ ಯುನಿಟ್ ವರೆಗೆ ವಿದ್ಯುತ್ ಉಚಿತ, ೪೦೦ರಿಂದ ೫೦೦ ರುಪಾಯಿಯಲ್ಲಿ ಅಡುಗೆ ಅನಿಲದ ಸಿಲಿಂಡರ್, ಮಹಿಳೆಯರಿಗೆ ೧೫೦೦-೩೦೦೦ ರು.ವರೆಗೆ (ವಿವಿಧ ರಾಜ್ಯಗಳಲ್ಲಿ ವಿವಿಧ ಮೊತ್ತ) ಮಾಸಿಕ ಧನಸಹಾಯ, ಮದುವೆಗೆ ಅರ್ಹರಾದ ಹುಡುಗಿಯರಿಗೆ ೧೦ ಗ್ರಾಂ ಚಿನ್ನ ಮತ್ತು ೧ ಲಕ್ಷ ರು.ವರೆಗೆ ನೆರವು, ರಾಜ್ಯಾದ್ಯಂತ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್/ಸ್ಮಾರ್ಟ್ ಫೋನ್, ಬಡತನ ರೇಖೆಗಿಂತ ಕೆಳಗಿರುವ ಸುಮಾರು ಲಕ್ಷಾಂತರ ಕಾರ್ಮಿಕರಿಗೆ ವಿಮಾ ರಕ್ಷಣೆ, ೧೫ ಲಕ್ಷದವರೆಗೆ ಆರೋಗ್ಯ ವಿಮೆ, ೫ ಲಕ್ಷದವರೆಗೆ ಅಪಘಾತ ವಿಮೆ, ಮನೆ ಕಟ್ಟಲು ಬಡವರಿಗೆ ೫ ಲಕ್ಷದವರೆಗೆ ನೆರವು, ಕಾಲೇಜು ವಿದ್ಯಾರ್ಥಿಗಳಿಗೆ ೫ ಲಕ್ಷದವರೆಗೆ ನೆರವು, ಮೇಲ್ವರ್ಗ
ದವರಿಗಾಗಿ ೧೧೯ ವಸತಿ ಶಾಲೆಗಳು (ತೆಲಂಗಾಣದಲ್ಲಿ), ೨ ಲಕ್ಷದವರೆಗಿನ ಸಾಲ ಮನ್ನಾ, ೫ ಲಕ್ಷದವರೆಗೆ ಬಡ್ಡಿರಹಿತ ಸಾಲ ಇವು ಮುಂದಿನ ತಿಂಗಳು ನಡೆಯಲಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಒಲಿಸಿಕೊಳ್ಳಲು (ಖರೀದಿಸಲು?) ರಾಜಕೀಯ ಪಕ್ಷಗಳು ಘೋಷಿಸಿರುವ ಉಚಿತ ಕೊಡುಗೆಗಳು.
ಎಲ್ಲ ರಾಜ್ಯಗಳಲ್ಲಿ ಇದು ಏಕರೂಪವಾಗಿಲ್ಲ. ಕೆಲವೆಡೆ ಹೆಚ್ಚಿರಬಹುದು, ಮತ್ತೆ ಕೆಲವೆಡೆ ಸ್ವಲ್ಪ ಕಡಿಮೆ ಇರಬಹುದು. ಹಾಗೆಯೇ ಕೊಡುಗೆಯ ಮೊತ್ತಗಳಲ್ಲೂ ಹೆಚ್ಚುಕಡಿಮೆ ಇರಬಹುದು. ಆದರೆ ಪ್ರತಿ ರಾಜ್ಯದಲ್ಲೂ ಉಚಿತ ಕೊಡುಗೆಗಳ ಘೋಷಣೆಗಳ ಮಹಾಪೂರವಿದೆ. ಇದಕ್ಕೆ ಹೊರತಾಗಿ ಸರಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯ ಮರುಜಾರಿ, ಜಾತಿ ಸಮೀಕ್ಷೆ ಭರವಸೆಗಳು ಬೇರೆ. ಉಚಿತ ಕಾಣಿಕೆಗಳ ಹಳಿಯ ಮೇಲೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ರೈಲುಗಳನ್ನು ಓಡಿಸಲು ಸಜ್ಜಾಗಿವೆ. ಮುಂದಿನ ದಿನಗಳಲ್ಲಿ ಇವು ‘ಉಚಿತ’ಗಳ ಬದಲಿಗೆ ನೋಟು ಮುದ್ರಿಸುವ ಯಂತ್ರವನ್ನು ನೀಡಬಹುದು ಎಂಬ ಜೋಕ್ ಕೇಳಿಬರುತ್ತಿದೆ.
೧೯೫೧-೫೨ರಲ್ಲಿ ಈ ದೇಶದಲ್ಲಿ ಮೊದಲ ಚುನಾವಣೆ ನಡೆಯಿತು. ಆಗ ಬಹುಶಃ ಕೆಲವೊಂದು ಅಭ್ಯರ್ಥಿಗಳು ಸ್ವಾತಂತ್ರ್ಯ ಹೋರಾಟದಲ್ಲಿನ ತಮ್ಮ ಮತ್ತು ತಮ್ಮ ಕುಟುಂಬದವರ ಪಾತ್ರವನ್ನು, ತ್ಯಾಗವನ್ನು, ಬ್ರಿಟಿಷರಿಂದ ಅನುಭವಿಸಿದ ಯಾತನೆಯನ್ನು ವೈಭವೀಕರಿಸಿದ್ದಿರಬಹುದು. ೨ ಶತಮಾನಗಳ ಕಾಲ ದೇಶವನ್ನು ಲೂಟಿ ಮಾಡಿದವರನ್ನು ಅಹಿಂಸಾ ತತ್ತ್ವದಡಿಯಲ್ಲಿ ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಒದ್ದೋಡಿಸಿದ್ದು ಹೇಗೆ ಎಂಬುವ ರಂಗು ರಂಗಿನ ರೀಲುಗಳನ್ನು ಅವರು ಬಿಟ್ಟಿರಬಹುದು.
ನೈಜತೆ ಇರುವ ದೃಷ್ಟಾಂತಗಳು, ಉದಾಹರಣೆಗಳು ಈ ಕಥೆಗಳ ಹಿಂದೆ ಮಂಕಾಗಿ ಕಾಣುತಿದ್ದವು, ಅದು ಬೇರೆ ಮಾತು. ತೀರಾ ಇತ್ತೀಚಿನವರೆಗಿನ ಚುನಾವಣೆಯಲ್ಲಿ ರಾಜಕಾರಣಿಗಳು ತಾವು ಉದ್ದೇಶಿಸಿರುವ ಅಭಿವೃದ್ದಿ ಯೋಜನೆಗಳ ಬಗೆಗೆ ಮಾತನಾಡುತ್ತಿದ್ದರು. ಈ ಅಭಿವೃದ್ಧಿ ಘೋಷಣೆಗಳು ಮತ
ಬೇಟೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದವು. ತರಹೇವಾರಿ ಭರವಸೆಗಳು, ಬಾಯಲ್ಲಿ ನೀರೂರಿಸುವ ಕಾರ್ಯಕ್ರಮಗಳು ಮತ್ತು ಅಕಾಶಕ್ಕೆ ಏಣಿ ಹಾಕುವಂಥ ಯೋಜನೆಗಳು ಅಭ್ಯರ್ಥಿ ಗಳ ಬಾಯಿಂದ ಪ್ರವಾಹದ ರೂಪದಲ್ಲಿ ಹರಿದುಬರುತ್ತಿದ್ದವು.
‘ನದಿಯೇ ಇಲ್ಲದಿದ್ದರೂ ಸೇತುವೆ, ಕನಿಷ್ಠ ಶಾಲೆ ಇಲ್ಲದ ಊರಿನಲ್ಲಿ ಕಾಲೇಜು, ಸಮುದ್ರ ಇಲ್ಲದಿದ್ದರೂ ಸಾರ್ವಕಾಲಿಕ ಬಂದರು ನಿರ್ಮಾಣದ ಭರವಸೆ,
ಪಶುಗಳು ಇಲ್ಲದ ಹಳ್ಳಿಯಲ್ಲಿ ಪಶುವೈದ್ಯ ಆಸ್ಪತ್ರೆಗೆ ಯೋಜನೆ ತಯಾರಿಸುತ್ತಾರೆ ನಮ್ಮ ರಾಜಕಾರಣಿಗಳು’ ಎಂದು ಖ್ಯಾತ ಪತ್ರಕರ್ತ, ನಾಟಕಕಾರ, ರಾಜಕಾರಣಿ ಚೋ ರಾಮಸ್ವಾಮಿ ತಮಾಷೆ ಮಾಡುತ್ತಿದ್ದರು. ‘ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇರುವ ರಾಜಕಾರಣಿಗಳು, ಅದರ ವಾಸನೆ ತಟ್ಟಿದೊಡನೆ ಅಡಿಗಲ್ಲು ಸಮಾರಂಭ, ಟೇಪು ಕತ್ತರಿಸುವ ಕಾರ್ಯಕ್ರಮಕ್ಕೆ ಸಜ್ಜಾಗುತ್ತಾರೆ.
ಸಾಮಾನ್ಯವಾಗಿ ಒಂದು ಯೋಜನೆಗೆ ಅಡಿಗಲ್ಲು ಹಾಕುವ, ಕಾರ್ಯಕ್ರಮಕ್ಕೆ ಟೇಪು ಕತ್ತರಿಸುವ ಪೂರ್ವದಲ್ಲಿ ಹಲವಾರು ಕ್ಲಿಯರೆನ್ಸ್‌ಗಳು ಮತ್ತು ಸುದೀರ್ಘ ಪ್ರಕ್ರಿಯೆಗಳಿರುತ್ತವೆ; ಅವನ್ನು ಬದಿಗೆ ಸರಿಸಿ ಕ್ಷಿಪ್ರಮಾರ್ಗದಲ್ಲಿ ಅನುಮತಿ ದೊರಕಿಸಿಕೊಂಡು ಇವಕ್ಕೆ ಚಾಲನೆ ನೀಡುತ್ತಾರೆ’ ಎಂಬ ಚೋ ರಾಮಸ್ವಾಮಿ ಅವರ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ‘ಚುನಾವಣೆಗಳನ್ನು ಗೆಲ್ಲಲ್ಲೆಂದೇ ಯೋಜನೆಗಳನ್ನು ರೂಪಿಸಿ, ಅಡಿಗಲ್ಲುಗಳನ್ನು ಹಾಕಿ, ಆಮೇಲೆ ಅವನ್ನು ಮರೆಯುತ್ತಾರೆ’ ಎಂದು ರಾಜಕೀಯ ವಿಶ್ಲೇಷಕರು ಕುಹಕವಾಡುವುದರಲ್ಲಿ ಅರ್ಥವಿದೆ. ಇದರಲ್ಲಿ ಯಾವುದಾದರೂ ಅನುಷ್ಠಾನವಾಗಬಹುದೇ ಎಂಬುದು ಇಲ್ಲಿ ಮುಖ್ಯ ವಾಗುವುದಿಲ್ಲ; ಅಂಥ ಯೋಜನೆಗಳ ಹೆಸರಲ್ಲಿ ಆ ಭಾಗದ ಜನರಲ್ಲಿ ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಕನಸುಗಳನ್ನು ಬಿತ್ತಿ
ಮತ ಪಡೆಯುವುದು ಇದರ ಹಿಂದಿನ ಗೌಪ್ಯ ಅಜೆಂಡಾ ಆಗಿರುತ್ತದೆ.
ಚುನಾವಣಾ ಪ್ರಕ್ರಿಯೆಯನ್ನು ಘೋಷಿಸಿದ ನಂತರ ಸರಕಾರವು ಮತದಾರರನ್ನು ಓಲೈಸಲು ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದು, ಯಾವುದೇ ಯೋಜನೆಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಬಾರದು, ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು, ಅಡಿಗಲ್ಲು ಹಾಕಬಾರದು, ಟೇಪು ಕತ್ತರಿಸಬಾರದು ಎನ್ನುವ ನಿರ್ಬಂಧಗಳನ್ನು ಚುನಾವಣಾ ನೀತಿಸಂಹಿತೆ ದೃಷ್ಟಿಯಲ್ಲಿ ಹೇರಲಾಗುತ್ತದೆ. ಆದರೆ ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಪ್ರಕಟಿಸುವವರೆಗೆ, ರಂಗೋಲಿಯ ಕೆಳಗೆ ನುಸುಳುವ ಸರಕಾರಗಳು ಮತ್ತು ರಾಜಕಾರಣಿಗಳಿಂದ,
ಮತದಾರ-ಸ್ನೇಹಿ ಹೊಸ ಯೋಜನೆಗಳು ಮತ್ತು ಮಹತ್ವದ ತೀರ್ಮಾನಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ!
ವಿಪರ್ಯಾಸವೆಂದರೆ, ಇತ್ತೀಚೆಗೆ ಅಭಿವೃದ್ಧಿ ಯೋಜನೆಗಳು ಚುನಾವಣೆಯಲ್ಲಿ ಮತಗಳಿಸುವ ದಾಳಗಳಾಗಿ ಉಳಿದಿಲ್ಲ, ಅವು ಸವಕಲು ನಾಣ್ಯಗಳಾಗಿವೆ. ಬದಲಿಗೆ ಮೀಸಲಾತಿ, ಮೀಸಲಾತಿ ಹೆಚ್ಚಳ, ಹಳೆ ಪಿಂಚಣಿ ವ್ಯವಸ್ಥೆಯ ಮರುಜಾರಿ ಹಾಗೂ ಕರ್ನಾಟಕದ ರೀತಿಯ ಗ್ಯಾರಂಟಿಗಳು ಅವುಗಳ ಸ್ಥಾನವನ್ನು ಆಕ್ರಮಿಸುತ್ತಿವೆ. ಕರ್ನಾಟಕದ ಗ್ಯಾರಂಟಿ ಯೋಜನೆ ಗಳನ್ನು ಮನಸ್ವೀ ಟೀಕಿಸಿದವರೂ, ‘ಅನ್ಯಥಾ ಶರಣಂ ನಾಸ್ತಿ’ ಎಂದು ಅವಕ್ಕೇ ಶರಣಾಗುತ್ತಿರುವುದು ವಿಪರ್ಯಾಸ. ಗ್ಯಾರಂಟಿ ಯೋಜನೆಗಳಿಂದ ದೇಶದ ಆರ್ಥಿಕ ಸ್ಥಿತಿ ಹದಗೆಡು ತ್ತದೆ, ಅಭಿವೃದ್ಧಿ ಕುಂಠಿತವಾಗುತ್ತದೆ, ದೇಶವು ಪಾಕಿಸ್ತಾನ ಮತ್ತು ಶ್ರೀಲಂಕಾಗಳ ಹಾದಿ ಹಿಡಿಯುತ್ತದೆ ಎಂದು ಬೊಬ್ಬೆ ಹೊಡೆದವರೆಲ್ಲ ಈ ಗ್ಯಾರಂಟಿಗಳಿಗೆ ಸದ್ದಿಲ್ಲದೇ ಚಂದಾದಾರರಾಗಿದ್ದಾರೆ.
ಇವನ್ನು ವಿರೋಧಿಸಿದ ರಾಜಕೀಯ ಪಕ್ಷಗಳು ಇನ್ನೊಂದು ರೀತಿಯಲ್ಲಿ ಹಾಗೂ ಮತ್ತೊಂದು ಹೆಸರಲ್ಲಿ ಈ ಗ್ಯಾರಂಟಿಗಳನ್ನು ಬಳಸಿಕೊಳ್ಳುತ್ತಿವೆ. ಈ ಉಚಿತ ಕೊಡುಗೆಗಳು ಎಲ್ಲಾ ಮತದಾರರಿಗೆ ದೊರಕದಿದ್ದರೂ, ಬಹುತೇಕರು ಇದರ ಲಾಭ ಪಡೆಯುವುದು ಸಾಧ್ಯವಿದೆ; ಹೀಗಾಗಿ ಪಕ್ಷಗಳ ಬೇಳೆ ಬೇಯುತ್ತದೆ ಮತ್ತು ಚುನಾವಣಾ ಫಲಿತಾಂಶವೂ ತಿರುಗುತ್ತದೆ ಎಂಬುದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ.
ತಮಿಳುನಾಡಿನಲ್ಲಿ ಇಂಥ ‘ಉಚಿತ’ಗಳನ್ನು ಜಾರಿಗೆ ತಂದ ಮೇಲೆ ಕರ್ನಾಟಕದಲ್ಲಿ ತಮಿಳುಭಾಷಿಕ ವಲಸಿಗ ಕಾರ್ಮಿಕರು ಕಡಿಮೆಯಾಗಿದ್ದಾರೆ ಎಂದು ಹಲವು ರಾಜಕೀಯ ವಿಶ್ಲೇಷಣೆಗಳು ಸೂಚಿಸಿರುವುದರಲ್ಲಿ ಅರ್ಥವಿದೆ. ತೆರಿಗೆದಾರನ ಬೆವರಿನ ಹಣವನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ
ಸಾಧನೆಗೆ ಬಳಸಿಕೊಳ್ಳುವ ‘ತಮಿಳುನಾಡಿನ ಪ್ರಯೋಗ’ ಇತ್ತೀಚೆಗೆ ದೇಶಾದ್ಯಂತ ಹರಡುತ್ತಿರುವುದು ಅಚ್ಚರಿ ಉಂಟು ಮಾಡಿದೆ ಹಾಗೂ ಇದು ಹೀಗೆಯೇ ಬೆಳೆದು ಮುಂದೆ ಯಾವ ಮಟ್ಟಕ್ಕೆ ಹೋಗಬಹುದು ಎಂಬ ದಿಗ್ಭ್ರಮೆಯನ್ನೂ ಮೂಡಿಸಿದೆ. ಹಿಂದೆಲ್ಲಾ ಚುನಾವಣೆಯಲ್ಲಿ ಮತ ಪಡೆಯುವುದು ಒಂದು ಕೌಶಲವಾಗಿತ್ತು. ಅತ್ಯುತ್ತಮ ಮಾತುಗಾರರು, ಆಕರ್ಷಕ ವ್ಯಕ್ತಿತ್ವ ಇದ್ದವರು, ತತ್ತ್ವ-ಆದರ್ಶಗಳ ಹೆಸರಿನಲ್ಲಿ, ಒಂದು ನಿಶ್ಚಿತ ಕಾರ್ಯಕ್ರಮದ ಆಧಾರದ ಮೇಲೆ, ಅರ್ಹತೆ ಮತ್ತು ಜನಪ್ರಿಯತೆಯ ಬಲವನ್ನಿಟ್ಟುಕೊಂಡು ಚುನಾವಣೆಯಲ್ಲಿ ಹೋರಾಡುತ್ತಿದ್ದರು ಹಾಗೂ ಗೆದ್ದು ಬೀಗುತ್ತಿದ್ದರು.
ಈಗ ಇವೆಲ್ಲ ನೇಪಥ್ಯಕ್ಕೆ ಸರಿದಿವೆ, ಚುನಾವಣೆ ನೋಟುಮಯ ವಾಗಿದೆ. ‘ವೋಟಿಗೊಂದು ನೋಟು’ ಅಗೋಚರ ಸೂತ್ರಧಾರಿಯಾಗಿ ಕೆಲಸ ಮಾಡುವ ದೂರುಗಳಿವೆ. ಇದರೊಂದಿಗೆ ಹೆಚ್ಚುವರಿ ಮೀಸಲಾತಿ ಮತ್ತು ಸಾಲ ಮನ್ನಾದ ಘೋಷಣೆಗಳೂ ಚುನಾವಣೆಯನ್ನು ಗೆಲ್ಲುವ ಅಸ್ತ್ರಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎನ್ನಬಹುದು. ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಅವರ ಪಕ್ಷಗಳು ಮಾಡುವ ವೆಚ್ಚಗಳು, ಮತದಾರರಿಗೆ ಒಡ್ಡುವ ಆಮಿಷಗಳು, ಉಚಿತ ಉಡುಗೊರೆಗಳು, ಅಗೋಚರ ಹಣದ ಹರಿವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಮತ‘ದಾನ’ವೋ, ಮತ‘ಬೇಟೆ’ಯೋ ಅಥವಾ ಮತ‘ಖರೀದಿ’ಯೋ ಎಂಬ ಗೊಂದಲ ಕಾಡುತ್ತದೆ! ಚುನಾವಣೆಗಳು ತಮ್ಮ ಪಾವಿತ್ರ್ಯ ಕಳೆದುಕೊಂಡಿರುವುದು ಈಗ ಇತಿಹಾಸ.
ಆದರೆ ಅದು ಈ ಮಟ್ಟದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಂಡಿರುವುದನ್ನು ಕಂಡು ಪ್ರಜ್ಞಾವಂತರಷ್ಟೇ ಏಕೆ, ರಾಜಕೀಯದ ಆಂತರ್ಯ, ತಂತ್ರಗಾರಿಕೆ ಮತ್ತು ಒಳಸುಳಿಗಳನ್ನು ಅರಿಯದ ಜನಸಾಮಾನ್ಯರೂ ಬೆಚ್ಚಿ ಬೀಳುತ್ತಿದ್ದಾರೆ. ದಿನದ ೨೪ ಗಂಟೆಯೂ ನಾವು ಒಂದಲ್ಲಾ ಒಂದು ರೀತಿಯಲ್ಲಿ, ಯಾವುದಾದರೊಂದು ತೆರಿಗೆಯನ್ನು ಸರಕಾರಕ್ಕೆ ನೀಡುತ್ತಿರುವಾಗ, ಅದರಲ್ಲಿ ಕೊಂಚ ಭಾಗವಾದರೂ ನಮಗೆ ಹಿಂದಿರುಗಿ ಬರಲಿ ಎನ್ನುವ ಚಿಂತನೆಯು, ಈ ಉಚಿತ ಕೊಡುಗೆಗಳನ್ನು ಸ್ವೀಕರಿಸುವುದರ ಹಿಂದೆ ಇದೆ ಎನ್ನುವ ಫಲಾನುಭವಿಗಳ ತರ್ಕದಲ್ಲಿ ಸತ್ಯವಿಲ್ಲದಿಲ್ಲ!
(ಲೇಖಕರು ಬ್ಯಾಂಕಿಂಗ್ ಕ್ಷೇತ್ರದ ಪರಿಣತರು)