ಅನಿಸಿಕೆ
ಸಂದೀಪ್ ಶರ್ಮಾ ಮೂಟೇರಿ
ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದಾಗ ಮತದಾರರು ಮತ್ತೊಮ್ಮೆ ಮೋದಿಯವರ ನೇತೃತ್ವದಲ್ಲಿ ಸರಕಾರ ವನ್ನು ನಡೆಸಲು ಆಶೀರ್ವದಿಸಿದ್ದಾರೆ. ಈ ಫಲಿತಾಂಶವು ನಿಸ್ಸಂಶಯವಾಗಿ ದೇಶದ ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ಐತಿಹಾಸಿಕ ಗೆಲುವು. ಬಿಜೆಪಿಯು ಕೊಂಚ ಸರಳ ಬಹುಮತದಿಂದ ವಂಚಿತರಾಗಿದ್ದಕ್ಕೆ ವಿರೋಧ ಪಕ್ಷಗಳು ಇವಿಎಮ್ ನೀಡಿದ ಫಲಿತಾಂಶವನ್ನು ಅನಿವಾರ್ಯವಿಲ್ಲದೆ ಒಪ್ಪಿಕೊಳ್ಳಬೇಕಿದೆ. ಇಲ್ಲದಿದ್ದರೆ ಈವಿಎಮ್ ಮೇಲೆಯೇ ಗೂಬೆ ಕೂರಿಸಿ ನಗೆಪಾಟಲಿಗೆ ಈಡಾಗುತ್ತಿದ್ದರು. ಈ ಫಲಿತಾಂಶವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ದೇಶದ ಪ್ರಜೆಗಳು ಮತ್ತು ಪಕ್ಷಗಳಿಗೆ ಇದು ಹಲವಾರು ಒಳನೋಟಗಳನ್ನು ನೀಡುತ್ತದೆ.
ಜಾಹೀರಾತುಗಳ ಮೂಲಕ ಪಕ್ಷಗಳು ಬಿಂಬಿಸುವ ‘ಅಭಿವೃದ್ಧಿ’ ಚಿತ್ರಣಕ್ಕೆ ಜನ ಬೆಂಬಲಿಸದೆ ವಿರೋಧ ಪಕ್ಷ ಕಾಂಗ್ರೆಸ್ ಹಸಿ ಹಸಿ ಸುಳ್ಳು ಹೇಳಿಕೊಂಡು ಬಂದ ಹಿನ್ನೆಲೆಯಲ್ಲಿ ಮತದಾನವಾಗಿರುವುದು ವಿಪರ್ಯಾಸ. ಇಲ್ಲಿನ ಮೊದಲ ಪಾಠ, ‘ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ’. ಈ ಫಲಿತಾಂಶದ ಇನ್ನೊಂದು ವಿಶೇಷ ಅಂಶವೆಂದರೆ, ಕಣದಲ್ಲಿರುವ ಅಭ್ಯರ್ಥಿ ಎಂತಹವರು ಎನ್ನುವುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಜನ ಮತದಾನ ಮಾಡಿದಂತಿದೆ. ಅಂದರೆ, ಪಕ್ಷದ ಒಬ್ಬಿಬ್ಬರು ನಾಯಕರನ್ನೇ ಕೇಂದ್ರಬಿಂದುವಾಗಿಸಿ ಚುನಾವಣೆ ಎದುರಿಸಿದರೂ ಸ್ಥಳೀಯ ಅಭ್ಯರ್ಥಿ ಅರ್ಹನಾಗಿಲ್ಲದಿದ್ದರೆ ಮತದಾರರು ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸುತ್ತಾರೆ ಎಂಬ ಸಂದೇಶ ಕೆಲವಾದರೂ ಕ್ಷೇತ್ರಗಳಲ್ಲಿ ದಾಖಲಾಗಿದೆ.
ಹಾಗಾಗಿ, ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ, ಅವರ ಜಾತಿ, ಹಣಬಲ, ತೋಳ್ಬಲಕ್ಕಿಂತ ಹೆಚ್ಚಾಗಿ ಶಾಸನಸಭೆಗೆ ಹೋಗಲು ಇರಬೇಕಾದ ಅರ್ಹತೆಯತ್ತಲೂ ಗಮನಹರಿಸಬೇಕಾಗುತ್ತದೆ. ನಾಯಕರ ನಾಮಬಲ ಮಾತ್ರದಿಂದ ಒಂದು ಚುನಾವಣೆಯನ್ನೇನೋ ಗೆಲ್ಲಬಹುದು, ಆದರೆ, ಮತ್ತೆ ಮತ್ತೆ ಅದೇ ಅಭ್ಯರ್ಥಿಯನ್ನು ಆ ಒಂದೇ ಕಾರಣಕ್ಕಾಗಿ ಜನ ಗೆಲ್ಲಿಸಲಾರರು. ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಿದವರಲ್ಲಿ
ಕೆಳವರ್ಗದವರು, ಆರ್ಥಿಕವಾಗಿ ಹಿಂದುಳಿದವರು, ಯುವಜನ, ಗೃಹಿಣಿಯರು ಮತ್ತು ಅಲ್ಪಸಂಖ್ಯಾತರ ಪಾತ್ರ ಹೆಚ್ಚಿನದು. ಯಾಕೆಂದರೆ, ಸಾಮಾನ್ಯ ವಾಗಿ ಈ ಸಮೂಹದ ಜನರ ದೈನಂದಿನ ಬದುಕಿನ ಮೇಲೆ ಸರಕಾರದ ಕಾರ್ಯಕ್ರಮಗಳು ಅತಿ ಹೆಚ್ಚು ಪ್ರಭಾವ ಬೀರುತ್ತವೆ. ವಸ್ತುಸ್ಥಿತಿ ಅವರ ಗ್ರಹಿಕೆಗೆ ತ್ವರಿತವಾಗಿ ನಿಲುಕುತ್ತದೆ. ಅದಕ್ಕೆ ಅನುಗುಣವಾಗಿ ಮತ ನೀಡುವುದು ಸಹಜ ವಿದ್ಯಮಾನ.
ಈ ದಿಸೆಯಲ್ಲಿ, ಪ್ರಸಕ್ತ ಚುನಾವಣಾ ಫಲಿತಾಂಶವು ಕಾಂಗ್ರೆಸ್ ತಮ್ಮ ಭಾಷಣಗಳಲ್ಲಿ ಖಟಾಖಟ್ ಹಣವನ್ನು ನೀಡುತ್ತೇವೆ ಎಂದು ಪೊಳ್ಳು ಆಶ್ವಾಸನೆ ಯನ್ನು ಬಿಂಬಿಸಿ ಮತವನ್ನು ಸೆಳೆವುದರಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಲು ಸಶಕ್ತವಾಯಿತಷ್ಟೆ. ವಿದೇಶಿ ನೆಲದಲ್ಲಿ ಭಾರತದ ಕುರಿತು ಒಳ್ಳೆಯ ಚಿತ್ರಣ ಮೂಡುತ್ತಿದೆ, ದೇಶದ ಅಭಿವೃದ್ಧಿ ಕಂಡುಬಂದರೂ ತೆರೆಮರೆಯಲ್ಲಿ ವಿರುದ್ಧವಾಗಿ ಕೆಲಸ ಮಾಡುವ ವಿರೋಧ ಪಕ್ಷಗಳ ಅಸಲಿ ಆಟಗಳು ಮುಂದಿನ ಚುನಾವಣೆಗೆ ಪರಿಣಾಮ ಬೀರದೇ ಇರುವುದಿಲ್ಲ. ಪ್ರಾಪಂಚಿಕವಾಗಿ ಮೋದಿ ವರ್ಚಸ್ಸು ಗೆದ್ದಿದ್ದರು ಕಾಂಗ್ರೆಸ್ಸಿನ ಅಸಲೀ ಬಣ್ಣ ಮತದಾರರಿಗೆ ಗೊತ್ತಿದ್ದರೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ವರ್ತಿಸುತ್ತಿರುವುದು ವಿಪರ್ಯಾಸದ ಸಂಗತಿ.
ಈಗ ಭಾರತದ ದಕ್ಷಿಣ ಭಾಗದಲ್ಲಿ ಬಿಜೆಪಿ ಪ್ರಬಲ ಅಸ್ತಿತ್ವವನ್ನು ಹೊಂದುತ್ತಿರುವುದು ನಿಸ್ಸಂಶಯ. ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಬಲದಿಂದ ಸರಕಾರ ರಚಿಸಿದ್ದರೂ ಅದನ್ನು ಪ್ಯಾನ್ ಇಂಡಿಯಾ ಪಕ್ಷವನ್ನಾಗಿ ಪರಿವರ್ತಿಸಿದ ಕೀರ್ತಿ ಮೋದಿಯವರಿಗೆ ಸಲ್ಲಬೇಕು. ಆದಾಗ್ಯೂ, ಈ ಚುನಾವಣೆಯು ಪ್ರಾದೇಶಿಕ ಸಂಘಟನೆಗಳ ಪುನರುಜ್ಜೀವನದ ಬಗ್ಗೆ ಬಲವಾದ ಸಂಕೇತಗಳನ್ನು ನೀಡಿದೆ. ಉದಾಹರಣೆಗೆ, ಮತದಾರರು ಪ್ರಧಾನಿ ಮೋದಿಯನ್ನು ನಂಬಿದ್ದರೂ ಬಿಜೆಪಿಗೆ ಪ್ರಬಲ ಸ್ಥಳೀಯ ಮುಖ ಬೇಕು ಎಂಬ ಸಂದೇಶವನ್ನು ಬಿಹಾರ ರಾಜ್ಯ ನೀಡಿದೆ. ಸ್ಥಳೀಯ ಮಟ್ಟದಲ್ಲಿ ಪ್ರಬಲ ನಾಯಕತ್ವದ ರೇಖೆಯನ್ನು ರಚಿಸುವುದು ಇತರ ರಾಜ್ಯಗಳಲ್ಲಿ ಲಾಭಾಂಶವನ್ನು ನೀಡಿದೆ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಇದನ್ನು ಪುನರಾವರ್ತಿಸಲು ಇದು ಸಕಾಲವಾಗಿದೆ.
ಬಿಜೆಪಿ ಕೇಂದ್ರ ನಾಯಕತ್ವವು ಸಿದ್ಧಾಂತದೊಂದಿಗೆ ಹೊಂದಿಕೊಂಡಿರುವ ಮತ್ತು ಸಾಮರ್ಥ್ಯವಿರುವ ಯುವಕರನ್ನು ಬೆಳೆಸಬೇಕು. ಅನೇಕ ಜನರು ಸಮರ್ಥರಾಗಿದ್ದಾರೆ ಮತ್ತು ರಾಜಕೀಯಕ್ಕೆ ಪ್ರವೇಶಿಸಲು ಬಯಸುತ್ತಾರೆ ಆದರೆ ಅಗತ್ಯವಿರುವ ವಿಧಾನಗಳು ಮತ್ತು ಸಂಪರ್ಕಗಳಿಲ್ಲದ ಕಾರಣ ಜನರಿಗೆ ಸಾಧ್ಯವಾಗುತ್ತಿಲ್ಲ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಭಾವ ಬೀರಿವೆ ಎಂದು ಭಾವಿಸಲಾಗುವ ಗ್ಯಾರಂಟಿ ಯೋಜನೆಗಳು ಈಗಿನ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಮತ್ತೆ ಚರ್ಚಾವೇದಿಕೆ ಏರಿವೆ. ರಾಜ್ಯ ಸರಕಾರ ಕೊಡಮಾಡಿದ ಐದೂ ಜನಪ್ರಿಯ ಯೊಜನೆಗಳ ಫಲಾನುಭವಿಗಳು ಈ ಬಾರಿಯ ಚುನಾವಣೆಯಲ್ಲಿ ‘ಕೈ’ ಹಿಡಿಯುವ ಬದಲು ‘ಕೈ’ಯಲ್ಲಿ ಸೋಲನ್ನು ಇಟ್ಟರು ಎಂಬುದು ಮತದಾರರ ಮೇಲೆ ಹೊರಿಸ ಲಾಗುತ್ತಿರುವ ಗಂಭೀರ ಆರೋಪ.
ಪ್ರತಿಫಲಾಕಾಂಕ್ಷೆಯಿಂದ ಒಡ್ಡುವ ಆಮಿಷಗಳಿಗೂ ಜನಕಲ್ಯಾಣ ಕಾರ್ಯಕ್ರಮಗಳಿಗೂ ಇರುವ ವ್ಯತ್ಯಾಸವೇ ಮಸುಕಾದಂತಾಗಿದೆ. ಈ ನಿಟ್ಟಿನಲ್ಲಿ ಇನ್ನಾದರೂ ಕಾಂಗ್ರೆಸ್ ಮತ್ತು ಇನ್ನಿತರ ವಿರೋಧ ಪಕ್ಷಗಳು ವೃತ್ತಿಪರ ರೂಪದಲ್ಲಿ ಬಿಜೆಪಿಯನ್ನು ಎದುರಿಸಲು ಸನ್ನದ್ಧರಾಗುತ್ತಾರೆಯೇ ಎಂಬುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಣಬೇಕಿದೆ.
(ಲೇಖಕರು: ಸಿವಿಲ್ ಎಂಜಿನಿಯರ್ ಹಾಗೂ ಹವ್ಯಾಸಿ ಬರಹಗಾರ)