Wednesday, 11th December 2024

ಚುನಾವಣಾ ಬಾಂಡ್ ರದ್ದಾಯ್ತು, ಮುಂದೇನು ದಾರಿ ?

ಸಕಾಲಿಕ

ಎಸ್.ವೈ.ಖುರೇಶಿ

ಕೇಂದ್ರ ಸರಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್‌ಗಳನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ರದ್ದುಪಡಿಸಿದೆ. ಅದಕ್ಕೆ ಪ್ರಧಾನ ಮಂತ್ರಿಗಳು ಪರೋಕ್ಷವಾಗಿ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಚುನಾವಣಾ ಬಾಂಡ್‌ಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಿ ರುವುದು ಹಾಗೂ ಅದರಿಂದ ಉಂಟಾಗುವ ಪರಿಣಾಮಗಳು ನಿಜಕ್ಕೂ ಗಂಭೀರವಾದ ವಿಷಯ. ಅದನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು.

ಪ್ರಧಾನಿ ಹೇಳಿದ್ದಿಷ್ಟು: ‘ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಚುನಾವಣೆಯಲ್ಲಿ ಕಪ್ಪುಹಣದ ಅಪಾಯಕಾರಿ ಆಟ ನಡೆಯು ತ್ತಿದೆ ಎಂಬ ಬಗ್ಗೆ ದೂರುಗಳಿದ್ದವು. ಅದನ್ನು ಮಟ್ಟಹಾಕಲು ಏನಾದರೂ ಮಾಡಬೇಕು ಎಂಬುದು ನನ್ನ ಉದ್ದೇಶ ವಾಗಿತ್ತು. ನಮ್ಮ ಚುನಾವಣೆಗಳನ್ನು ಕಪ್ಪು ಹಣದಿಂದ ಮುಕ್ತಗೊಳಿಸುವುದು ಹೇಗೆ? ನನ್ನ ಉದ್ದೇಶ ಪ್ರಾಮಾಣಿಕವಾಗಿತ್ತು. ಅದರ ಬಗ್ಗೆ ಚರ್ಚಿಸುವಾಗ ನಮಗೊಂದು ಸಣ್ಣ ದಾರಿ ಹೊಳೆಯಿತು. ಇದೇ ನೂರಕ್ಕೆ ನೂರು ಸರಿಯಾದ ದಾರಿ ಎಂದು ನಾವೆಲ್ಲೂ ಹೇಳಿಲ್ಲ. ಈ ಪ್ರಕ್ರಿಯೆಯಲ್ಲಿ ನಡೆದ ಬೆಳವಣಿಗೆಗಳು ಒಳ್ಳೆಯದೋ ಕೆಟ್ಟದ್ದೋ ಎಂಬುದು ಚರ್ಚೆಯ ವಿಷಯ.

ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಲೋಪಗಳಾಗುವುದಿಲ್ಲ ಎಂದು ನಾನು ಯಾವತ್ತೂ ಹೇಳುವುದಿಲ್ಲ. ಆದರೆ ಇವತ್ತು ನಾವು ದೇಶವನ್ನು ಮತ್ತೆ ಕಪ್ಪು ಹಣದತ್ತ ತಳ್ಳಿದ್ದೇವೆ. ಮುಂದೆ ಇದರ ಬಗ್ಗೆ ಎಲ್ಲರೂ ಪಶ್ಚಾತ್ತಾಪ ಪಡಲಿದ್ದಾರೆ. ಜಾರಿ ನಿರ್ದೇಶನಾ ಲಯದ ತನಿಖೆ ಎದುರಿಸುತ್ತಿರುವ ೨೬ ಕಂಪನಿಗಳ ಪೈಕಿ ೧೬ ಕಂಪನಿಗಳು ಚುನಾವಣಾ ಬಾಂಡ್ ಖರೀದಿಸಿವೆ ಎಂದು ಪ್ರಧಾನಿಯೇ ಹೇಳಿದ್ದಾರೆ. ‘ಈ ೧೬ ಕಂಪನಿಗಳು ಖರೀದಿಸಿದ ಬಾಂಡ್‌ಗಳ ಪೈಕಿ ಶೇ.೩೭ರಷ್ಟು ಹಣ ಬಿಜೆಪಿಗೆ ಹೋಗಿದೆ.

ಶೇ.೬೩ರಷ್ಟು ಹಣ ಬಿಜೆಪಿಯ ವಿರೋಧ ಪಕ್ಷಗಳಿಗೆ ಹೋಗಿದೆ ಎಂದು ಅವರು ಹೇಳಿದ್ದಾರೆ. ಇದು ಖಂಡಿತ ಅಚ್ಚರಿಯ ಸಂಗತಿ. ಏಕೆಂದರೆ ಚುನಾವಣಾ ಬಾಂಡ್‌ನ ಟೀಕಾಕಾರರು ಹೇಳುತ್ತಿರುವ ಉದ್ದೇಶ ಮತ್ತು ಪರಿಣಾಮ ಇಲ್ಲಿ ಹೊಂದಾಣಿಕೆ ಆಗುವುದಿಲ್ಲ.
ಕೆಲ ದಿನಗಳ ಹಿಂದೆ ಮಾಧ್ಯಮದ ಸಂವಾದವೊಂದರಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಕೂಡ ಇದನ್ನೇ ಹೇಳಿದ್ದರು. ಚುನಾವಣಾ ಬಾಂಡ್‌ಗಳ ರದ್ದತಿಯೊಂದಿಗೆ ಮತ್ತೆ ೨೦೧೮ಕ್ಕಿಂತ ಮುಂಚಿನ ಪರಿಸ್ಥಿತಿಗೆ ಹೋಗಿದ್ದೇವೆ. ಇದು ಒಳ್ಳೆಯ ಬೆಳವಣಿಗೆ ಯಲ್ಲ ಎಂದಿದ್ದರು.

ನನ್ನ ಪ್ರಕಾರ ಅವರಿಬ್ಬರೂ ಹೇಳಿದ್ದು ನೂರಕ್ಕೆ ನೂರು ನಿಜ. ೨೦೧೮ಕ್ಕಿಂತ ಮುಂಚಿನ ಪರಿಸ್ಥಿತಿ ಖಂಡಿತ ಚೆನ್ನಾಗಿರಲಿಲ್ಲ.
ಏಕೆಂದರೆ ಶೇ.೭೦ರಷ್ಟು ರಾಜಕೀಯ ದೇಣಿಗೆ ನಗದು ರೂಪದಲ್ಲಿರುತ್ತಿದ್ದವು. ಅದು ಕಪ್ಪು ಹಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು ಚುನಾವಣಾ ವ್ಯವಸ್ಥೆಗೊಂದು ಶಾಪವಷ್ಟೇ ಆಗಿರಲಿಲ್ಲ, ಇಡೀ ರಾಜಕೀಯ ವ್ಯವಸ್ಥೆಗೇ ಕಪ್ಪುಚುಕ್ಕೆ ಯಾಗಿತ್ತು.

ಮೂಲ ಗೊತ್ತಿಲ್ಲದ ಹಣ ಕ್ರಿಮಿನಲ್‌ಗಳದ್ದು, ಡ್ರಗ್ಸ್ ದೊರೆಗಳದ್ದು, ಭೂಮಾಫಿಯಾಗಳದ್ದು ಅಥವಾ ವಿದೇಶಿ ಹಣ ಕೂಡ ಆಗಿರಬಹುದಿತ್ತು. ಭಾರತೀಯ ಚುನಾವಣಾ ಆಯೋಗ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ನಂತಹ ಸಾಮಾಜಿಕ ಸಂಸ್ಥೆಗಳು ಈ ವಿಷಯದಲ್ಲಿ ಸುಧಾರಣೆಗೆ ಬಹಳ ವರ್ಷಗಳಿಂದ ಆಗ್ರಹಿಸುತ್ತಿದ್ದವು. ಎರಡು ದಶಕಗಳ ಕಾಲ ಈ ಕೂಗನ್ನು ಯಾರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಆದರೆ ಚುನಾವಣಾ ಬಾಂಡ್‌ಗಳ ಯೋಜನೆ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಯಿತು. ಆದರೆ ಆ ಪ್ರಕ್ರಿಯೆಯಲ್ಲಿ ತನಗೆ ತಾನೇ ಇನ್ನೊಂದಷ್ಟು ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿತು.

ಇದರ ಬಗ್ಗೆ ನಾನು ಮೂರು ವರ್ಷದ ಹಿಂದೆಯೇ ಒಂದು ಲೇಖನ ಬರೆದಿದ್ದೆ. ಅದರಲ್ಲಿ, ಚುನಾವಣಾ ಬಾಂಡ್‌ಗಳು ನಗದು ವ್ಯವಹಾರವನ್ನು ನಿರ್ಮೂಲನೆ ಮಾಡಿರುವುದರಿಂದ ಒಂದು ದೊಡ್ಡ ಸಮಸ್ಯೆ ನಿವಾರಣೆಯಾದಂತಾಗಿದೆ. ಆದರೆ ಇನ್ನೊಂದು ‘೩೦ ಸೆಕೆಂಡ್ ಸುಧಾರಣೆ ಇದಕ್ಕೆ ಅಗತ್ಯವಿದೆ. ಅದೇನೆಂದರೆ, ದೇಣಿಗೆ ನೀಡಿದವರು ಮತ್ತು ದೇಣಿಗೆ ಸ್ವೀಕರಿಸಿದವರ ಹೆಸರು ಬಹಿರಂಗಪಡಿಸುವ ಸುಧಾರಣೆ ಜಾರಿಗೆ ಬರಬೇಕು ಎಂದು ಪ್ರತಿಪಾದಿಸಿದ್ದೆ. ಈ ಸರಳವಾದ ಸಲಹೆಯನ್ನು ಸರ್ಕಾರ ಸ್ವೀಕರಿಸಿದ್ದರೆ ಸುಪ್ರೀಂಕೋರ್ಟ್ ತೀರಾ ಈ ಬಾಂಡ್ ಗಳನ್ನೇ ರದ್ದುಪಡಿಸುವ ಹಂತಕ್ಕೆ ಹೋಗುತ್ತಿರಲಿಲ್ಲವೇನೋ.

ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಲಾಭ ಹಾಗೂ ನಷ್ಟಗಳ ಬಗ್ಗೆ ಸುದೀರ್ಘ ಸಮಯದವರೆಗೆ ಚರ್ಚಿಸುತ್ತಾ ಹೋಗಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ನಾವು ಈಗ ಮಾಡಬೇಕಾದ ಕೆಲಸವೇನೆಂದರೆ ಮುಂದೇನು ಮಾಡಬೇಕೆಂಬುದನ್ನು ಯೋಚಿಸು ವುದು. ೨೦೧೮ಕ್ಕಿಂತ ಹಿಂದೆ ಇದ್ದ ಪರಿಸ್ಥಿತಿ ಖಂಡಿತ ಚೆನ್ನಾಗಿರಲಿಲ್ಲ. ಆ ವ್ಯವಸ್ಥೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ನನ್ನ ಪ್ರಕಾರ ಕಳೆದ ಎರಡು ದಶಕಗಳಿಂದ ಸಾಮಾಜಿಕ ಸೇವಾ ಸಂಸ್ಥೆಗಳು ಹಾಗೂ ಚುನಾವಣಾ ಆಯೋಗ ನೀಡಿದ್ದ ಸಲಹೆಗಳನ್ನು ಇನ್ನೊಮ್ಮೆ ಪರಾಮರ್ಶಿಸಿ ಹೊಸ ಪರಿಹಾರಗಳನ್ನು ಸರಕಾರ ಹುಡುಕಬೇಕು.

ನಾನಂತೂ ಈ ವಿಷಯದಲ್ಲಿ ಪ್ರಾಕ್ಟಿಕಲ್ ಆದ ಪರಿಹಾರಗಳನ್ನು ಸೂಚಿಸುತ್ತಲೇ ಬಂದಿದ್ದೇನೆ. ಮೊದಲನೆಯದಾಗಿ, ರಾಷ್ಟ್ರೀಯ
ಚುನಾವಣಾ ನಿಧಿ (ಎನ್‌ಇಎಫ್) ಸ್ಥಾಪಿಸಬೇಕು. ಅದಕ್ಕೆ ಯಾರು ಬೇಕಾದರೂ ದೇಣಿಗೆ ನೀಡಬಹುದು. ಅದನ್ನು ಆಕರ್ಷಕ ವಾಗಿಸಲು ಅಂತಹ ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿ ನೀಡಬಹುದು. ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತರುವಾಗ ಇದ್ದ ಪ್ರಮುಖ ವಾದವೆಂದರೆ, ದೇಣಿಗೆ ನೀಡುವವರು ಯಾರು ಎಂಬುದನ್ನು ಗೌಪ್ಯವಾಗಿಡಬೇಕು. ಇಲ್ಲದಿದ್ದರೆ ಯಾರಿಗೆ ದೇಣಿಗೆ ಬಂದಿಲ್ಲವೋ ಆ ರಾಜಕೀಯ ಪಕ್ಷಗಳು ದೇಣಿಗೆ ನೀಡಿದವರ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಬಹುದು ಎಂಬುದೇ ಆಗಿತ್ತು.

ಚುನಾವಣಾ ನಿಧಿ ಸ್ಥಾಪಿಸಿದರೆ ಅದಕ್ಕೆ ನೀಡುವ ದೇಣಿಗೆಯ ವಿಷಯದಲ್ಲಿ ಈ ಸಮಸ್ಯೆಯೇ ಇರುವುದಿಲ್ಲ. ಚುನಾವಣಾ ನಿಧಿಗೆ ಎರಡು ರೀತಿಯಲ್ಲಿ ದೇಣಿಗೆ ಸ್ವೀಕರಿಸಬಹುದು ಎಂದು ನಾನು ಸಲಹೆ ನೀಡಿದ್ದೆ. ಒಂದು, ಸರಕಾರವೇ ತನ್ನ ಬೊಕ್ಕಸದಿಂದ ಅನುದಾನ ನೀಡುವುದು. ಎರಡು, ಕಾರ್ಪೊರೇಟ್ ಕಂಪನಿಗಳು ಹಾಗೂ ಇನ್ನಿತರ ದಾನಿಗಳು ದೇಣಿಗೆ ನೀಡುವುದು. ನಾನು ಕಟ್ಟಿದ ತೆರಿಗೆ ಹಣವು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಬಳಕೆಯಾಗುತ್ತಿದೆ ಎಂದು ಸಾಕಷ್ಟು ಜನರು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇರುವುದರಿಂದ ಮೊದಲನೇ ಆಯ್ಕೆಯನ್ನು ಕೈಬಿಡಬಹುದು. ಆದರೆ, ಕಂಪನಿಗಳು ಹಾಗೂ ಜನರು ಚುನಾವಣಾ ನಿಽಗೆ ದೇಣಿಗೆ ನೀಡುವ ವಿಧಾನ ಸರಿಯಾಗಿದೆ. ಅದಕ್ಕೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯಿಂದ ದೇಣಿಗೆ ನೀಡಲು ಅವಕಾಶ ನೀಡುವ ಬಗ್ಗೆಯೂ ಚಿಂತನೆ ನಡೆಸಬಹುದು.

ಹೀಗೆ ಚುನಾವಣಾ ನಿಧಿಗೆ ಸ್ವೀಕರಿಸಿದ ಹಣವನ್ನು ರಾಜಕೀಯ ಪಕ್ಷಗಳಿಗೆ ಅವು ಹಿಂದಿನ ಚುನಾವಣೆಯಲ್ಲಿ ತೋರಿದ ಪ್ರದರ್ಶನ ದಂತಹ ಮಾನದಂಡಗಳನ್ನು ಅನುಸರಿಸಿ ಹಂಚಿಕೆ ಮಾಡಬಹುದು. ಒಂದು ರಾಜಕೀಯ ಪಕ್ಷ ಪಡೆದ ಪ್ರತಿ ಒಂದು ಮತಕ್ಕೆ ೧೦೦
ರುಪಾಯಿಯಂತೆ ನಿಽ ಹಂಚಿಕೆ ಮಾಡಿದರೆ ಎಲ್ಲ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಸಾಕಾಗುವಷ್ಟು ಹಣ ಎಲ್ಲಾ ರಾಜಕೀಯ ಪಕ್ಷಗಳಿಗೂ ಸಿಗುತ್ತದೆ ಎಂದು ನಾನು ಹೇಳಿದ್ದೆ.

ರಾಜಕೀಯ ಪಕ್ಷಕ್ಕೆ ಬಂದ ಮತಗಳ ಲೆಕ್ಕವನ್ನು ತಿರುಚುವುದಕ್ಕಂತೂ ಸಾಧ್ಯವಿಲ್ಲ. ಅದನ್ನು ಚುನಾವಣಾ ಆಯೋಗವೇ ಪ್ರಕಟಿಸುತ್ತದೆ. ಹೀಗಾಗಿ ಅವುಗಳ ಆಧಾರದ ಮೇಲೆ ನಿಧಿಯನ್ನು ಹಂಚಿಕೆ ಮಾಡುವುದು ಸರಿಯಾದ ಮಾರ್ಗವಾಗುತ್ತದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ೬೦ ಕೋಟಿ ಮತ ಚಲಾವಣೆಯಾಗಿದೆ. ಪ್ರತಿ ಮತಕ್ಕೆ ೧೦೦ ರುಪಾಯಿಯಂತೆ ಲೆಕ್ಕ ಹಾಕಿದರೆ ೬೦೦೦ ಕೋಟಿ ರು. ಆಗುತ್ತದೆ. ಇಷ್ಟು ಹಣ ಸಾಲದೇ? ನನ್ನ ಪ್ರಕಾರ ಸಾಕು. ಕಳೆದ ಐದು ವರ್ಷಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸಂಗ್ರಹಿಸಿದ ನಿಽಯನ್ನು ಸೇರಿಸಿದರೆ ಹೆಚ್ಚುಕಮ್ಮಿ ಇಷ್ಟೇ ಹಣವಾಗುತ್ತದೆ. ಈ ಯೋಜನೆ ಪ್ರಾಮಾಣಿಕವಾಗಿದೆ. ಇದರಲ್ಲಿ ಸುಲಿಗೆಯಿಲ್ಲ. ಲಂಚವಿಲ್ಲ. ಕ್ವಿಡ್ ಪ್ರೊ ಕೋ (ದೇಣಿಗೆ ನೀಡಿ ಪ್ರತ್ಯುಪಕಾರ ಮಾಡಿಸಿಕೊಳ್ಳುವುದು) ಇಲ್ಲ. ಈ ವ್ಯವಸ್ಥೆ ಅನುಸರಿಸಿದರೆ ಎಲ್ಲಾ ರೀತಿಯ ಖಾಸಗಿ ದೇಣಿಗೆಯನ್ನೂ ನಿಷೇಧಿಸಬಹುದು. ರಾಜಕೀಯ ಪಕ್ಷಗಳ ಲೆಕ್ಕದ ಪುಸ್ತಕಗಳನ್ನು ಮಹಾಲೇಖಪಾಲರಿಂದ (ಸಿಎಜಿ) ಆಡಿಟ್ ಮಾಡಿಸಬಹುದು.

ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ಬಯಸುವ ಮತ್ತು ಬೇರೆ ಪಕ್ಷಗಳ ಸಿಟ್ಟಿಗೆ ಗುರಿಯಾಗುವ ಭೀತಿ ಇಲ್ಲದಿರುವ
ದಾನಿಗಳು ಇದ್ದರೆ ಈಗಲೂ ಅವರಿಗೆ ದೇಣಿಗೆ ನೀಡುವುದಕ್ಕೆ ಅವಕಾಶ ನೀಡಬಹುದು. ಆದರೆ ಆ ದೇಣಿಗೆ ಕಡ್ಡಾಯವಾಗಿ ಚೆಕ್‌ನಲ್ಲಿರಬೇಕು ಮತ್ತು ಚುನಾವಣಾ ಆಯೋಗಕ್ಕೆ ಅದರ ಬಗ್ಗೆ ಮಾಹಿತಿ ನೀಡಬೇಕು ಎಂಬ ನಿಯಮವಿರಬೇಕು. ಈ ವ್ಯವಸ್ಥೆಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬುದರ ವಿವರವನ್ನು ಅನೇಕರು ಕೇಳಿದ್ದಾರೆ. ಹೊಸ ರಾಜಕೀಯ ಪಕ್ಷಗಳು ಬಂದಾಗ ಅವುಗಳಿಗೆ ಮೊದಲ ದೇಣಿಗೆ ಹೇಗೆ ಸಿಗುತ್ತದೆ? ಸ್ವತಂತ್ರವಾಗಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹಣ ಎಲ್ಲಿಂದ ಬರುತ್ತದೆ? ಇಂತಹ ವಿಷಯಗಳನ್ನು ಒಂದು ಸಲ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಗಂಭೀರವಾಗಿ ಹೊರಟ ಮೇಲೆ ಚರ್ಚೆ ಮಾಡಬಹುದು.

ಸ್ಟಾಕ್‌ಹೋಮ್‌ನಲ್ಲಿರುವ ಇಂಟರ್‌ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಅಂಡ್ ಎಲೆಕ್ಟೋರಲ್ ಅಸಿಸ್ಟೆನ್ಸ್ ಎಂಬ ಸಂಸ್ಥೆ ೨೦೧೨ರಲ್ಲಿ ಜಗತ್ತಿನಾದ್ಯಂತ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಇರುವ ವ್ಯವಸ್ಥೆ ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಅಧ್ಯಯನವೊಂದನ್ನು ನಡೆಸಿತ್ತು. ಅಧ್ಯಯನಕ್ಕೆ ಗುರಿಪಡಿಸಿದ ೧೮೦ ದೇಶಗಳ ಪೈಕಿ ೭೧ ದೇಶಗಳಲ್ಲಿ ರಾಜಕೀಯ
ಪಕ್ಷಗಳಿಗೆ ಅವು ಪಡೆದ ಮತಕ್ಕೆ ಅನುಗುಣವಾಗಿ ದೇಣಿಗೆ ನೀಡಲು ಸರಕಾರದ್ದೇ ಆದ ಸ್ವತಂತ್ರ ಚುನಾವಣಾ ನಿಧಿ ಇರುವುದು ಕಂಡುಬಂದಿತ್ತು. ಯುರೋಪ್‌ನ ಶೇ.೮೬ರಷ್ಟು ದೇಶಗಳಲ್ಲಿ, ಆಫ್ರಿಕಾದ ಶೇ.೭೧ರಷ್ಟು ದೇಶಗಳಲ್ಲಿ, ಅಮೆರಿಕ ಖಂಡದ ಶೇ.೬೩ ದೇಶಗಳಲ್ಲಿ ಹಾಗೂ ಏಷ್ಯಾದ ಶೇ.೫೮ರಷ್ಟು ದೇಶಗಳಲ್ಲಿ ಈ ವ್ಯವಸ್ಥೆಯಿದೆ. ಹೀಗಾಗಿ ಭಾರತದಲ್ಲಿ ಈ ವ್ಯವಸ್ಥೆ ಜಾರಿಗೆ ತರುವುದು ಏಕೆ ಸಾಧ್ಯವಿಲ್ಲ ಎಂಬುದು ನನಗೆ ತಿಳಿಯುತ್ತಿಲ್ಲ.

ಚುನಾವಣೆಯಲ್ಲಿ ನಡೆಯುವ ಕಪ್ಪು ಹಣದ ಕಳ್ಳಾಟಕ್ಕೆ ಬ್ರೇಕ್ ಹಾಕಬೇಕು ಎಂಬ ಚಿಂತನೆ ಬಹಳ ದೀರ್ಘ ಕಾಲದಿಂದ ಹಾಗೇ
ಉಳಿದಿದೆ. ಅದನ್ನು ಜಾರಿಗೊಳಿಸಲು ಈಗ ಕಾಲ ಪಕ್ವವಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸರಕಾರಕ್ಕೆ ಈ ಹಿಂದೆ ನೀಡಿದ ಎಲ್ಲಾ ಪ್ರಸ್ತಾವನೆಗಳನ್ನೂ ಇನ್ನೊಮ್ಮೆ ಪರಾಮರ್ಶೆ ನಡೆಸಬೇಕೆಂದು ನಾನು ಪ್ರಧಾನಿಗೆ ಮನವಿ ಮಾಡುತ್ತೇನೆ. ಚುನಾವಣಾ ಆಯೋಗ ಕೇಳುತ್ತಿರುವ ಸುಧಾರಣೆಗಳು ಏನು? ಹಣಕ್ಕೆ ಸಂಬಂಧಿಸಿದ ಸುಧಾರಣೆಯ ಪ್ರಸ್ತಾಪಗಳನ್ನು ಮಾತ್ರ
ಹೇಳುತ್ತೇನೆ.

ಒಂದು, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಇರುವ ಖರ್ಚಿನ ಮಿತಿಯ ರೀತಿಯಲ್ಲೇ ರಾಜಕೀಯ ಪಕ್ಷಗಳು ಮಾಡುವ ಖರ್ಚಿಗೂ ಒಂದು ಗರಿಷ್ಠ ಮಿತಿ ನಿಗದಿಪಡಿಸಬೇಕು. ಮತ್ತು ಅದನ್ನು ಚುನಾವಣೆಯ ಬಳಿಕ ಕಡ್ಡಾಯವಾಗಿ ಆಡಿಟ್ ಮಾಡಿಸ ಬೇಕು. ಎರಡು, ರಾಷ್ಟ್ರೀಯ ಚುನಾವಣಾ ನಿಧಿ ಸ್ಥಾಪಿಸಬೇಕು. ಅದಕ್ಕೆ ಯಾರು ಬೇಕಾದರೂ ತೆರಿಗೆರಹಿತವಾಗಿ ದೇಣಿಗೆ ನೀಡ ಬಹುದು. ಮೂರು, ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಹಾಗೂ ಪಾರದರ್ಶಕತೆ ಕಡ್ಡಾಯವಾಗಿ ಇರಬೇಕೆಂಬ ನಿಯಮ ತರಬೇಕು. ಮತ್ತು ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಅಡಿ ತರಬೇಕು. ನಾಲ್ಕು, ಹಣದ
ದುರ್ಬಳಕೆ ಮಾಡಿಕೊಂಡ ಬಗ್ಗೆ ಖಚಿತ ಸಾಕ್ಷಿ ಲಭಿಸಿದ ಕ್ಷೇತ್ರಗಳಲ್ಲಿ ಚುನಾವಣೆಯನ್ನು ರದ್ದುಪಡಿಸುವ ಅಧಿಕಾರವನ್ನು ಕಾನೂನುಬದ್ಧವಾಗಿ ಚುನಾವಣಾ ಆಯೋಗಕ್ಕೆ ನೀಡಬೇಕು.

ಐದು, ಕೋರ್ಟ್‌ಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ವಿಚಾರಣೆಗೆ ಬಾಕಿಯಿರುವ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸ ದಂತೆ ಡಿಬಾರ್ ಮಾಡಬೇಕು. ಆರು, ೧೦ ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸದೆಯೇ ತೆರಿಗೆ ವಿನಾಯ್ತಿಯ ಲಾಭ ಪಡೆಯು ತ್ತಿರುವ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಪಡಿಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಬೇಕು. ಏಳು, ಹಣ ಕೊಟ್ಟು ಸುದ್ದಿ ಪ್ರಕಟಿಸುವುದನ್ನು ಚುನಾವಣಾ ಅಪರಾಧ ಎಂದು ಪರಿಗಣಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಬೇಕು.

ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ ೧೦೦ರ ಅಡಿಯಲ್ಲಿ ‘ಭ್ರಷ್ಟಾಚಾರ ಹಾಗೂ ಸೆಕ್ಷನ್ ೧೨೩(೨) ಅಡಿಯಲ್ಲಿ ‘ಅನಪೇಕ್ಷಿತ ಪ್ರಭಾವ
ಬೀರುವುದು ಎಂದು ಪರಿಗಣಿಸಿ ಇದನ್ನು ಮಾಡಬಹುದು. ಪ್ರಧಾನ ಮಂತ್ರಿಗಳೇ ಹೇಳಿದ ಒಂದು ಮಾತಿನಿಂದ ಈ ಲೇಖನ ಮುಗಿಸುತ್ತೇನೆ: ‘ಭ್ರಷ್ಟಾಚಾರದ ವಿರುದ್ಧ ನಮಗಿರುವ ಎಲ್ಲಾ ಶಕ್ತಿಯನ್ನೂ ಬಳಸಿ ಹೋರಾಡಬೇಕು. ಇದು ನನ್ನ ವೈಯಕ್ತಿಕ ಬದ್ಧತೆ. ಈ ಬದ್ಧತೆಗೆ ನಾವೆಲ್ಲರೂ ಶಕ್ತಿಮೀರಿ ಕೈಜೋಡಿಸೋಣ.

(ಲೇಖಕರು : ಭಾರತೀಯ ಚುನಾವಣಾ ಆಯೋಗದ
ನಿವೃತ್ತ ಮುಖ್ಯ ಚುನಾವಣಾ ಆಯುಕ್ತರು)