ಅಭಿಮತ
ಸಂದೀಪ್ ಶರ್ಮಾ ಮೂಟೇರಿ
ಲೋಕಸಭಾ ಚುನಾವಣೆ ಸಂಬಂಧಿತ ಚಟುವಟಿಕೆಗಳು ಕಳೆಗಟ್ಟಿವೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳದ ಜತೆಜತೆಗೆ ಚುನಾವಣಾ ಪ್ರಚಾರ ಕಾರ್ಯದ ಕಾವೂ ಏರುತ್ತಿದೆ. ಇದರ ಭಾಗವೆಂಬಂತೆ, ಅಭ್ಯರ್ಥಿಗಳ ಪರವಾಗಿ ಮತದಾರರಿಗೆ ಹಣವನ್ನು ಹಂಚಲು ಹೊರಟಿದ್ದ ವಾಹನಗಳನ್ನು
ಚುನಾವಣಾ ಆಯೋಗದ ಅಧಿಕಾರಿಗಳು ತಡೆದು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಿರುವ ಬೆಳವಣಿಗೆಗಳೂ ನಡೆಯುತ್ತಿವೆ.
ಹೀಗೆ ಹಣ ಹಂಚುವವರ ಪೈಕಿ ಆ ಪಕ್ಷದವರು, ಈ ಪಕ್ಷದವರು ಎಂಬ ಭೇದವೇನಿಲ್ಲ. ಕೆಲವೊಂದು ವಾಹನಗಳಲ್ಲಿ ಕೋಟ್ಯಂತರ ರುಪಾಯಿ ಸಾಗಿಸು ತ್ತಿರುವುದು ಪತ್ತೆಯಾಗಿದೆ. ಹೀಗೆ ಸಾಗಿಸುತ್ತಿರುವವರ ಉದ್ದೇಶ ಸ್ಪಷ್ಟವೇ ಇರುತ್ತದೆ. ಚುನಾವಣಾ ಆಯೋಗವು ಅಭ್ಯರ್ಥಿಯ ಪ್ರಚಾರದ ವೆಚ್ಚಕ್ಕೆ ಮಿತಿಯನ್ನು ವಿಧಿಸುತ್ತದೆ. ಆದರೆ ಈಗಾಗಲೇ ಕೆಲವೊಂದು ಪ್ರಮುಖ ಅಭ್ಯರ್ಥಿಗಳು ಈ ಮಿತಿಯನ್ನು ಮೀರಿದ್ದಾರೆ. ಅವರು ಆಯೋಜಿಸುವ ಅದ್ದೂರಿ ಸಾರ್ವಜನಿಕ ಸಭೆಗಳು, ಜಾಥಾಗಳು, ಕರಪತ್ರ ಮತ್ತಿತರ ಪ್ರಚಾರ ಸಾಮಗ್ರಿಗಳ ಬಳಕೆ, ಕಾರ್ಯಕರ್ತರ ಅಹೋರಾತ್ರಿ ಪರಿಶ್ರಮ ಇವುಗಳನ್ನೆಲ್ಲ ನೋಡಿ ದರೆ ಇದನ್ನು ಸುಲಭವಾಗಿ ಊಹಿಸಬಹುದು.
ಹಾಗಾದರೆ, ಚುನಾವಣಾ ಆಯೋಗವು ವಿಧಿಸಿರುವ ಈ ಮಿತಿಯ ಕಥೆಯೇನು? ಚುನಾವಣೆಯು ಮುಕ್ತವಾಗಿ, ನ್ಯಾಯಸಮ್ಮತವಾಗಿ ಹಾಗೂ ಪಾರದರ್ಶಕ ವಾಗಿ ನಡೆಯಬೇಕು ಎಂಬುದು ಚುನಾವಣಾ ಆಯೋಗದ ಮತ್ತು ಪ್ರಜ್ಞಾವಂತ ಮತದಾರರ ಆಶಯ. ಇಲ್ಲಿ ನೆಮ್ಮದಿಯ ಆಡಳಿತದ ಭರವಸೆ ಹೊರತು ಪಡಿಸಿ ಇನ್ನಾವುದೇ ಬಗೆಯ ಆಮಿಷಗಳಿಗೆ ಆಸ್ಪದವಿರಬಾರದು. ಆದರೆ ಪ್ರಸ್ತುತ ನಡೆಯುತ್ತಿರುವುದು ಮಾತ್ರ ಇದಕ್ಕೆ ವಿರುದ್ಧವಾದುದು. ಯಾವಾಗ
ಚುನಾವಣೆಗಳು ಪ್ರತಿಷ್ಠೆಯ ಪ್ರಶ್ನೆಯಾದವೋ, ಅಂದಿನಿಂದ ಚುನಾವಣಾ ಕಣಕ್ಕೆ ಹಣದ ಪ್ರವೇಶವೂ ಆಗಿದೆ. ಹೀಗಾಗಿ ಇದು ನಿನ್ನೆ-ಮೊನ್ನೆ ಅಮರಿ ಕೊಂಡಿರುವ ಪಿಡುಗಲ್ಲ. ಆದರೆ, ಮತದಾರರಿಗೆ ಹೀಗೆ ಹಣ ಹಂಚುವ ಭ್ರಷ್ಟವ್ಯೂಹದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು, ಸ್ಥಳೀಯ ರಾಜಕಾರಣಿಗಳು ಪಾಲ್ಗೊಂಡಿರುವುದು ಸ್ಪಷ್ಟಗೋಚರವಿದ್ದರೂ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಾದ ವ್ಯವಸ್ಥೆಯು ಕಣ್ಣು ಮುಚ್ಚಿಕೊಂಡಿದೆ ಯೇನೋ ಎನಿಸುತ್ತದೆ.
ಯಾಕೆಂದರೆ, ಹೀಗೆ ಸಿಕ್ಕಿಬೀಳುವ ಹಣಕ್ಕೆ ಜವಾಬ್ದಾರರು ಯಾರು? ಎಂಬ ಪ್ರಶ್ನೆಗೆ ಉತ್ತರವೇ ಸಿಗುವುದಿಲ್ಲ. ಚುನಾವಣೆಯ ನಂತರವಾದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದೂ ಜನಸಾಮಾನ್ಯರಿಗೆ ಗೊತ್ತಾಗುವುದಿಲ್ಲ. ಇದು ಅವ್ಯವಸ್ಥೆಯ ಒಂದು ಮುಖವಾದರೆ, ಮತ್ತೊಂದೆಡೆ ಕೆಲ ಮತದಾರರು ಕೂಡ ಚುನಾವಣಾ ಪ್ರಚಾರಕ್ಕೆಂದು ಬಂದವರ ಮುಂದೆ ಹಣಕ್ಕಾಗಿ ಕೈಚಾಚುವುದು ಕಾಣಬರುತ್ತದೆ. ಈ ಭ್ರಷ್ಟ ವ್ಯವಸ್ಥೆಗೆ ಮತದಾರರು ಬಗ್ಗುವುದು, ಒಗ್ಗಿಕೊಳ್ಳುವುದು ಒಳ್ಳೆಯ ಬೆಳವಣಿಗೆಯೇನಲ್ಲ.
ಏಕೆಂದರೆ, ಭ್ರಷ್ಟತೆಗೆ ಹಸಿರು ನಿಶಾನೆ ತೋರಿದರೆ ಅದು ಸೋಗಲಾಡಿ ವ್ಯವಸ್ಥೆಯ ಲಕ್ಷಣವೆನಿಸಿಕೊಳ್ಳುತ್ತದೆ. ಕುರುಡು ಕಾಂಚಾಣದ ಈ ಕುಣಿತದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಜತೆಗೇ ಹೆಜ್ಜೆ ಹಾಕುತ್ತಿರುವುದರಿಂದಾಗಿ ಮತದಾರರಿಗೆ ಸೂಕ್ತ ಮತ್ತು ಪ್ರಾಮಾಣಿಕ ಅಭ್ಯರ್ಥಿಯ ಆಯ್ಕೆಗೆ ಆಸ್ಪದವೇ ಇಲ್ಲದಂತಾ ಗಿದೆ. ಇದೊಂದು ದುರಂತವೇ ಸರಿ. ಚುನಾವಣಾ ಆಯೋಗವು ಇನ್ನಾದರೂ ಈ ಕುಣಿತವನ್ನು ತಹಬಂದಿಗೆ ತಂದು, ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಇಂಬುಕೊಡುವುದೆಂದು ಸಹೃದಯಿಗಳು ನಿರೀಕ್ಷಿಸಬಹುದೇ?
(ಲೇಖಕರು ಸಿವಿಲ್ ಎಂಜಿನಿಯರ್)