ರಾಜಕಾರಣ
ಡಾ.ಜಗದೀಶ ಮಾನೆ
ಪಂಚರಾಜ್ಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ‘ಈ ಚುನಾವಣೆಗಳು ಸೆಮಿಫೈನಲ್ ಇದ್ದಂತೆ; ಇವು ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ. ಎರಡೂ ರಾಷ್ಟ್ರೀಯ ಪಕ್ಷಗಳಿಗಿದು ಪೂರ್ವಭಾವಿ ಪರೀಕ್ಷೆ’ ಎಂದಿದ್ದರು. ಅಂತೆಯೇ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗುವುದು ಪಕ್ಕಾ ಆದಂತಿದೆ. ಕರ್ನಾಟಕವನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಘೋಷಿಸಲಾದ ‘ಗ್ಯಾರಂಟಿ’ ಯೋಜನೆಗಳು ಎಲ್ಲ ರಾಜ್ಯಗಳಲ್ಲೂ ತಮ್ಮ ಕೈಹಿಡಿಯುತ್ತವೆ ಎಂದೇ ಭ್ರಮಿಸಿದ್ದ ಕಾಂಗ್ರೆಸಿಗರಿಗೆ, ತೆಲಂಗಾಣವನ್ನು ಹೊರತುಪಡಿಸಿದರೆ ಮಿಕ್ಕ ರಾಜ್ಯಗಳಲ್ಲಿ ಹೊಮ್ಮಿದ ಫಲಿತಾಂಶ ಕಹಿ ಅನುಭವವನ್ನೇ ನೀಡಿದೆ.
ಈ ಚುನಾವಣೆಗಳಿಗೂ ಮುನ್ನ ಜಾತಿಗಣತಿಯನ್ನು ಮಾಡಿಸಿದ್ದ ಕಾಂಗ್ರೆಸ್ ಪಕ್ಷ, ಆ ಮೂಲಕ ಕದನವನ್ನು ಗೆಲ್ಲುವ ಲೆಕ್ಕಾಚಾರದಲ್ಲಿತ್ತು. ಆದರೆ ಅದರ ಜಾತಿ ಸಮೀಕರಣಗಳು ಕೈಕೊಟ್ಟವು. ತೆಲಂಗಾಣದಲ್ಲೂ ‘ಗ್ಯಾರಂಟಿ’ಗಳಿಂದಾಗಿ ಕಾಂಗ್ರೆಸ್ ಗೆದ್ದಿದೆ ಎನ್ನಲಾಗದು; ಕಾರಣ, ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಕೆ.ಚಂದ್ರಶೇಖರರಾವ್ ಅವರ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ದಬ್ಬಾಳಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ರೋಸತ್ತಿದ್ದ ಅಲ್ಲಿನ ಜನರಿಗೆ ಕಾಂಗ್ರೆಸ್ ಪಕ್ಷವು ಪರ್ಯಾಯ ಆಯ್ಕೆಯಾಗಿ ಕಂಡಿತಷ್ಟೇ. ಇದು ಕೂಡ ಕಾಂಗ್ರೆಸ್‌ನ ಗೆಲುವಿಗೆ ಕಾರಣವಾಯಿತು.
ಆದರೆ ಮತ್ತೊಂದೆಡೆ ಮೋದಿಯವರು ಜಾತಿ ಸಮೀಕರಣ ದಿಂದ ವಿಮುಖರಾಗಿ, ‘ಈ ದೇಶದಲ್ಲಿರುವುದು ಮಹಿಳೆಯರು, ಯುವಕರು, ಬಡವರು ಹಾಗೂ ರೈತರು ಎಂಬ ನಾಲ್ಕೇ ಜಾತಿಗಳು. ಈ ವರ್ಗಗಳು ಸಬಲವಾದರೆ ರಾಷ್ಟ್ರವು ಬಲಿಷ್ಠವಾಗಲು ಸಾಧ್ಯವಾಗುತ್ತದೆ. ಅದನ್ನೇ ಮಾಡಲು ನಾನು ಪಣತೊಟ್ಟಿದ್ದೇನೆ’ ಎಂದು ಘಂಟಾಘೋಷವಾಗಿ ಹೇಳಿದ್ದು ಕಾಂಗ್ರೆಸ್‌ನ ಜಾತಿಗಣತಿಯ ಕಾರ್ಯತಂತ್ರಕ್ಕೆ ತಿರುಗೇಟು ನೀಡಿತು. ಹೀಗಾಗಿ ತೆಲಂಗಾಣ ಹೊರತುಪಡಿಸಿದ ಉತ್ತರದ ೩ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಜಾತಿಗಣತಿ, ಗ್ಯಾರಂಟಿಯ ಟ್ರಂಪ್ ಕಾರ್ಡುಗಳು ವರ್ಕೌಟ್ ಆಗಲಿಲ್ಲ.
ಮೋದಿ ಎಂಬ ಮಹಾ ನಾಯಕನೇ ನಮಗೆ ಬಹುದೊಡ್ಡ ಗ್ಯಾರಂಟಿ ಎಂಬ ಸಂದೇಶ ವನ್ನು ಈ ರಾಜ್ಯಗಳ ಜನರು ನೀಡಿದ್ದಾರೆನ್ನಬೇಕು. ರಾಜಸ್ಥಾನದಲ್ಲಿ ಕಳೆದ ೪ ವರ್ಷಗಳಿಂದ ಸಿಎಂ ಸ್ಥಾನಕ್ಕಾಗಿ ಹಿರಿಯ ಕಾಂಗ್ರೆಸಿಗ ಅಶೋಕ್ ಗೆಹ್ಲೋಥ್ ಮತ್ತು ಯುವ ನಾಯಕ ಸಚಿನ್ ಪೈಲಟ್ ನಡುವೆ ಮುಸುಕಿನ ಗುದ್ದಾಟಗಳು
ನಡೆಯುತ್ತಲೇ ಇದ್ದವು. ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳುವಲ್ಲಿ ಬಿಜೆಪಿ ಸಫಲತೆ ಕಂಡಿದೆ. ಚುನಾವಣೆ ಘೋಷಣೆಯಾಗುವುದಕ್ಕೂ ತಿಂಗಳ ಮೊದಲು ಬಿಜೆಪಿ ನಾಯಕಿ ವಸುಂಧರಾ ರಾಜೆ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ನಡುವೆ ಯಾವುದೋ ಕಾರಣಕ್ಕಾಗಿ ಬಿರುಕು ಮೂಡಿದ್ದುಂಟು.
ವಸುಂಧರಾ ಸಕ್ರಿಯವಾಗಿದ್ದರೆ ಮಾತ್ರವೇ ರಾಜಸ್ಥಾನದಲ್ಲಿ ಚುನಾವಣೆಯನ್ನು ಗೆಲ್ಲಲು ಸಾಧ್ಯ ಎಂದು ಹಿರಿಯ ನಾಯಕರೆಲ್ಲರೂ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿ ಕೊಟ್ಟು ತೇಪೆಹಚ್ಚಿದರು. ಜತೆಗೆ ವಸುಂಧರಾ ಅವರೂ ಚುನಾವಣಾ ಕಾರ್ಯಭಾರದಲ್ಲಿ ಚುರುಕಾಗಿ ತೊಡಗಿಸಿಕೊಂಡು ಮತದಾರರ ಮನ ಗೆದ್ದಿದ್ದರಿಂದಲೇ ಅಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿತೆನ್ನಬೇಕು. ಈ ಯತ್ನದಲ್ಲಿ ಕೊಂಚವೇ ನಿರ್ಲಕ್ಷಿಸಿದ್ದರೂ ಜಯವು ಕಾಂಗ್ರೆಸ್ ಕಡೆಗೆ ವಾಲುತ್ತಿತ್ತು ಎನ್ನುತ್ತಾರೆ ಬಲ್ಲವರು. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣರ ಬಗ್ಗೆ ಬಿಜೆಪಿಯಲ್ಲೇ ಸಾಕಷ್ಟು ಅಸಮಾಧಾನಗಳಿದ್ದವು.
ಸುದೀರ್ಘವಾಗಿ ಆಡಳಿತ ನಡೆಸಿದ ಶಿವರಾಜ್‌ರನ್ನು ಬದಲಿಸದಿದ್ದರೆ ಆಡಳಿತ-ವಿರೋಧಿ ಅಲೆಯಲ್ಲಿ ಕೊಚ್ಚಿಹೋಗಬೇಕಾದೀತು ಎಂದೂ ಕೆಲವರು ಯೋಚಿಸಿದ್ದುಂಟು. ಆದರೆ ಅವರನ್ನು ಬದಿಗೊತ್ತಿ ಚುನಾವಣಾ ಅಖಾಡವನ್ನು ಪ್ರವೇಶಿಸಿದರೆ, ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ಕೆಳಗಿಳಿಸಿ, ಜಗದೀಶ್ ಶೆಟ್ಟರ್‌ರಿಗೆ ಟಿಕೆಟ್ ನಿರಾಕರಿಸಿ, ಸವದಿಯವರನ್ನು ಕೈಬಿಟ್ಟು ಹೊಸಮುಖಗಳನ್ನು ಕಣಕ್ಕಿಳಿಸಿದ್ದಕ್ಕೆ ಒದಗಿದ ಸೋಲು ಮಧ್ಯಪ್ರದೇಶದಲ್ಲೂ ಪುನರಾವರ್ತನೆ ಯಾಗಬಹುದು ಎಂಬ ಎಚ್ಚರವು ಹೈಕಮಾಂಡ್‌ನಲ್ಲಿ ಸುರಿಸಿತು.
ಹೀಗಾಗಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಿತು ಬಿಜೆಪಿ. ಜತೆಗೆ ಚುನಾವಣೆಗೂ ೬ ತಿಂಗಳು ಮೊದಲೇ ಶಿವರಾಜ್ ಅವರು ಜಾರಿಮಾಡಿದ್ದ ‘ಲಾಡ್ಲಿ ಲಕ್ಷ್ಮಿ’ (ಮಹಿಳೆಯರ ಖಾತೆಗೆ ಪ್ರತಿ ತಿಂಗಳೂ ೧,೨೫೦ ರು. ಜಮಾ ಮಾಡುವ ಯೋಜನೆ) ರೀತಿಯ ಕಾರ್ಯಕ್ರಮಗಳು ಹಾಗೂ ಸರಕಾರಿ ಉದ್ಯೋಗ ಗಳಲ್ಲಿ ಮಹಿಳೆಯರಿಗೆ ಶೇ.೩೫ರಷ್ಟು ಮೀಸಲಾತಿ ಘೋಷಿಸಿದ್ದು ಶಿವರಾಜ್ ಅವರ ಕೈಹಿಡಿದವು ಎನ್ನಬೇಕು. ಛತ್ತೀಸ್‌ಗಢದಲ್ಲಿ ಸಿಎಂ ಗದ್ದುಗೆಯಲ್ಲಿ ಆಸೀನ ರಾಗಿದ್ದ ಭೂಪೇಶ್ ಬಘೇಲ್‌ರನ್ನು ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮಟ್ಟದ ಹಿಂದುಳಿದ ನಾಯಕರೆಂಬಂತೆ ಬಿಂಬಿಸುತ್ತಿತ್ತು.
ಆದರೆ ಇವರ ಐದು ವರ್ಷಗಳ ಅಽಕಾರಾವಽಯಲ್ಲಿ ಕೇಳಿ ಬಂದ ಹಗರಣ/ಭ್ರಷ್ಟಾಚಾರ ಪ್ರಕರಣಗಳು ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾದವು. ಇದನ್ನೇ ಅಸವಾಗಿ ಬಳಸಿಕೊಂಡ ಬಿಜೆಪಿ, ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಂಡು ಪಕ್ಷ ಸಂಘಟನೆಗೆ ಮುಂದಾಯಿತು. ಹಿಂದೆ ಮೂರು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಮಣ್‌ಸಿಂಗ್ ಅವರನ್ನು, ತನ್ನ ಚುನಾವಣಾ ಕಾರ್ಯತಂತ್ರದ ಭಾಗವಾಗಿ ಮುನ್ನೆಲೆಗೆ ತಂದಿತು ಬಿಜೆಪಿ. ರಮಣ್ ಸಿಂಗ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದು ತಿಂಗಳ ಕಾಲ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಓಡಾಡಿ ಬೆವರು ಸುರಿಸಿದ ಫಲವಾಗಿ, ಯಾರ ತರ್ಕಕ್ಕೂ ನಿಲುಕದ ರೀತಿಯಲ್ಲಿ ಮತ್ತು ಎಲ್ಲ ಸಮೀಕ್ಷೆಗಳನ್ನೂ ಬುಡಮೇಲು ಮಾಡಿ ಕಮಲಪಕ್ಷವು ಅಲ್ಲಿ ಜಯಭೇರಿ ಬಾರಿಸುವಂತಾಯಿತು.
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ವನ್ನು ಗಮನಿಸಿದರೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಯು ಸರಿಯಾಗಿ ಪಾಠ ಕಲಿತಂತಿದೆ. ಎಲ್ಲರಿಗೂ ಗೊತ್ತಿರುವಂತೆ ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಬಹಳಷ್ಟು ಹಿರಿಯರನ್ನು ಮನೆಗೆ ಕಳಿಸಿತ್ತು/ಟಿಕೆಟ್ ನಿರಾಕರಿಸಿತ್ತು. ಇದರಿಂದಾಗಿ ಮುನಿದ ಕೆಲ ಹಿರಿಯ ನಾಯಕರು ಬೆಂಬಲಿಗ ರೊಟ್ಟಿಗೆ ಬೇರೆ ಪಕ್ಷವನ್ನು ಸೇರಿದ್ದರು. ಪ್ರಯೋಗಾರ್ಥವಾಗಿ ಹೊಸಮುಖಗಳಿಗೆ ಟಿಕೆಟ್
ಕೊಟ್ಟಿದ್ದ ಬಿಜೆಪಿಯು ಚುನಾವಣೆಯಲ್ಲಿ ಸೋಲುಣ್ಣ ಬೇಕಾಯಿತು. ಈ -ಲಿತಾಂಶದಿಂದ ಪಾಠ ಕಲಿತ ಬಿಜೆಪಿ, ಪಂಚರಾಜ್ಯ ಚುನಾವಣೆಗಳಲ್ಲಿ ಆ ತಪ್ಪನ್ನು ಮಾಡಲಿಲ್ಲ.
ಹೀಗಾಗಿ ಮೂರು ರಾಜ್ಯಗಳಲ್ಲಿ ಅದು ಗೆಲ್ಲುವುದಕ್ಕೆ ಸಾಧ್ಯವಾಯಿತು. ಮತ್ತೊಂದೆಡೆ, ಕರ್ನಾಟಕದಲ್ಲಿ ದಕ್ಕಿದ ಗೆಲುವಿನಿಂದ ಬೀಗಲು ಶುರುಮಾಡಿದ್ದ ಕಾಂಗ್ರೆಸ್ ಹೈಕಮಾಂಡ್, ‘ಇಂಡಿಯ’ ಮೈತ್ರಿಕೂಟದ ತನ್ನ ಮಿತ್ರಪಕ್ಷಗಳ ಜತೆ ವರ್ತಿಸುತ್ತಿದ್ದ ರೀತಿಯೂ ಬಹಳಷ್ಟು ಬದಲಾಗಿತ್ತು ಎನ್ನಲಾಗುತ್ತದೆ. ಇದರಿಂದ ಬೇಸತ್ತ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ಕಾಂಗ್ರೆಸ್ ಪಕ್ಷದ ವಿರುದ್ಧ ಬಹಿರಂಗವಾಗೇ ಗುಡುಗುವಂತಾಯಿತು ಎನ್ನಲಾಗುತ್ತದೆ. ಒಟ್ಟಿನಲ್ಲಿ, ಪಂಚರಾಜ್ಯ ಚುನಾವಣೆಯು ಕಾಂಗ್ರೆಸ್‌ನ ಅಹಂಕಾರದ ಹೆಡೆಮುರಿ ಕಟ್ಟಿತು ಎನ್ನಬೇಕು.
(ಲೇಖಕರು ರಾಜ್ಯಶಾಸ್ತ್ರದ ಅಧ್ಯಾಪಕರು)