Saturday, 14th December 2024

ಆನೆ ಬಂತು ಆನೆ…

ವಿದೇಶವಾಸಿ

dhyapaa@gmail.com

ಗಾತ್ರದಲ್ಲೇನಾದರೂ ಸಣ್ಣದಾಗಿದ್ದರೆ, ಜನ ನಾಯಿ, ಬೆಕ್ಕಿನಂತೆ ಆನೆಯನ್ನೂ ಮನೆಯಲ್ಲಿ ಸಾಕುತ್ತಿದ್ದರು. ಆನೆ ಅದಕ್ಕೆ ಯೋಗ್ಯವೂ ಹೌದು. ಬದಲಾಗಿ, ನಾಯಿಗಿಂತಲೂ ಆನೆಯನ್ನೇ ಹೆಚ್ಚು ಸಾಕುತ್ತಿದ್ದರೇನೋ. ಅರವತ್ತರಿಂದ ಎಪ್ಪತ್ತು ವರ್ಷ, ಬಹುತೇಕ ಮನುಷ್ಯನಷ್ಟೇ ಬದುಕುವ ಆನೆ ಸಾಕುವುದನ್ನೇ ಇಷ್ಟಪಡುತ್ತಿದ್ದರೇನೋ!

ನೀವು ಕುಶನ ಕಥೆ ಕೇಳಿದ್ದೀರಲ್ಲ? ರಾಮಾಯಣದ ರಾಮ-ಸೀತೆಯರ ಪುತ್ರದ್ವಯರಲ್ಲಿ ಒಬ್ಬನಾದ ಕುಶ ಅಲ್ಲ, ಕೊಡಗಿನ ವಿರಾಜಪೇಟೆ ಬಳಿ ಇರುವ ದುಬಾರೆ ಆನೆ ಶಿಬಿರಕ್ಕೆ ಮರಳಿ ಬಂದ ಕುಶನ ಕಥೆ. ಮೈಸೂರಿನ ದಸರಾದ ಆಕರ್ಷಣೆಯಾದ ಜಂಬೂ ಸವಾರಿಗೂ ಗಜವನ್ನು ಪಳಗಿಸುವ ಈ ಶಿಬಿರದವರು ‘ಕುಶ’ ಎಂಬ ಹೆಸರಿನ ಪುಂಡು ಆನೆಯನ್ನು ಪಳಗಿಸುವಲ್ಲಿ ಸೋತಿದ್ದರು. ದುಬಾರೆ ಶಿಬಿರದಲ್ಲಿಯೇ ಹುಟ್ಟಿ, ಅ ಬೆಳೆದಿದ್ದ ಕುಶ ನಾಲ್ಕು ವರ್ಷದ ಹಿಂದೊಮ್ಮೆ ತನ್ನ ಪ್ರೀತಿಯನ್ನು ಅರಸಿಕೊಂಡು ಹೋಗಿತ್ತು.

ಒಂದು ವರ್ಷದ ಬಳಿಕ ಸಿಬ್ಬಂದಿಗಳು ಅದನ್ನು ಮರಳಿ ಶಿಬಿರಕ್ಕೆ ಕರೆತಂದಿದ್ದರು. ‘ಪೀಪಲ್ಸ್ ಫಾರ್ ಅನಿಮಲ್ಸ’ ಎಂಬ ಸಂಸ್ಥೆ ಆನೆಯನ್ನು ಅರಣ್ಯದಲ್ಲಿ ಬಿಡುವಂತೆ ಸರಕಾರವನ್ನು ಒತ್ತಾಯಿಸಿತ್ತು. ಸರಕಾರದ ಆದೇಶದಂತೆ ಅರಣ್ಯಾಧಿಕಾರಿಗಳು ಕಳೆದ ವರ್ಷ, 2021 ರ ಜೂನ್ ಮೊದಲ ವಾರದಲ್ಲಿ ಕುಶನನ್ನು ಲಾರಿಯಲ್ಲಿ ಹೇರಿಕೊಂಡು ಹೋಗಿ, ಸುಮಾರು ನಾಲ್ಕುನೂರು ಕಿಲೋಮೀಟರ್ ದೂರದ ಬಂಡಿಪುರದ ಕಾಡಿನಲ್ಲಿ ಬಿಟ್ಟು ಬಂದಿದ್ದರು.

ಕಳೆದ ವಾರ, ಬರೊಬ್ಬರಿ ಮುನ್ನೂರ ಎಪ್ಪತ್ತೆರಡು ದಿನದ ನಂತರ ಕುಶ ದುಬಾರೆ ಶಿಬಿರಕ್ಕೆ ಹಿಂತಿರುಗಿ ಬಂದಿದ್ದಾನೆ. ಹಾಗೆ ಬರುವುದಕ್ಕೂ ಮೊದಲು ಕರ್ನಾಟಕದ ಕಾಡಿನಲ್ಲಿ, ಕೇರಳದ ಗಡಿಯಲ್ಲಿ ಸುಮಾರು ಮೂರೂವರೆ ಸಾವಿರ ಕಿಲೋಮೀಟರ್ ಅಲೆದಾಡಿ ಬಂದಿದ್ದಾನೆ. ಇನ್ನೂ ಒಂದು ವಿಶೇಷ ಸಂಗತಿಯೆಂದರೆ, ಕಾಡಿನಲ್ಲಿ ತನಗೆ ಪರಿಚಯವಾದ ಒಂದು ಗಂಡು, ಮೂರು ಹೆಣ್ಣು ಆನೆಯನ್ನೂ ತನ್ನ ಜತೆ ಯಲ್ಲಿ ಕರೆತಂದಿದ್ದಾನೆ.

ಇದಕ್ಕೂ ಮೊದಲು, ಎರಡು ವರ್ಷಗಳ ಹಿಂದೆ, ಚೀನಾದ ಕಾಡಿನಲ್ಲಿ ಹದಿನಾಲ್ಕು ಆನೆಗಳ ಗುಂಪೊಂದು ಅಲೆದದ್ದು ವಿಶ್ವದಾದ್ಯಂತ ಸುದ್ದಿಯಾಗಿತ್ತು. ಸುಮಾರು ಒಂದೂವರೆ ವರ್ಷ ಅಲೆದು ತಮ್ಮ ಮೂಲ ಸ್ಥಾನದ ಕಡೆ ಬಂದ ಆನೆಗಳು ಸಾಕಷ್ಟು ಗುಬ್ಬಿಸಿದ್ದವು. ಆ ಆನೆ ಗಳು ಸಂಚರಿಸುತ್ತಿದ್ದ ಮಾರ್ಗದ ಅಕ್ಕಪಕ್ಕದಲ್ಲಿರುವ ಸುಮಾರು ಒಂದೂವರೆ ಲಕ್ಷ ಜನರನ್ನು ತೆರವುಗೊಳಿಸಲಾಗಿತ್ತು. ಸುಮಾರು ಇಪ್ಪತ್ತೈದು ಸಾವಿರದ ಸಂಖ್ಯೆಯಲ್ಲಿ ಪೊಲೀಸರು, ಅರಣ್ಯಾಧಿಕಾರಿಗಳು, ಸೇನಾಪಡೆಯವರನ್ನು ಆಯೋಜಿಸಲಾಗಿತ್ತು. ಅವುಗಳ ಮೇಲೆ ನಿಗಾ ಇಡಲು ಒಂದು ಸಾವಿರ ಡ್ರೋನ್ ಬಳಸಲಾಗಿತ್ತು.

ಅವುಗಳ ಆಹಾರಕ್ಕೆಂದು ಸುಮಾರು ಎರಡು ನೂರು ಟನ್ ಅನಾನಸ್, ಬಾಳೆ, ಜೋಳವನ್ನು ಒದಗಿಸಲಾಗಿತ್ತು. ಆ ಆನೆಗಳಿಗೆ ತಾವಿರುವ ಜಾಗದ ಆಹಾರ ಒಗ್ಗದೇ ಬೇರೆ ಹುಡುಕಾಟದಲ್ಲಿ ಹೊರಟಿದ್ದವೆಂಬ ಕಾರಣಕ್ಕೆ ಇದೆಲ್ಲ ಅನಿವಾರ್ಯವಾಗಿತ್ತು. ಆದರೂ ಆ ಹಿಂಡು ಹಿಂತಿ ರುಗಿ ಬರುವಷ್ಟರಲ್ಲಿ ಸುಮಾರು ಒಂದು ಮಿಲಿಯನ್ ಡಾಲರ್‌ನಷ್ಟು ನಷ್ಟ ಮಾಡಿತ್ತು.

ಅದಕ್ಕೆ ಹೋಲಿಸಿದರೆ ಕುಶನ ಕಥೆಯಲ್ಲಿ ಆರ್ಥಿಕವಾಗಿ ಯಾವ ನಷ್ಟವೂ ಆಗಿಲ್ಲ, ಜನರಿಗೆ ಯಾವ ತೊಂದರೆಯೂ ಆಗಿಲ್ಲ. ಭಾವನಾತ್ಮಕ ವಾಗಿಯೂ ಕುಶ ಜನರ ಮನ ಗೆಲ್ಲುತ್ತಾನೆ. ಇರಲಿ, ಆನೆಗಳು ಅಲೆಯುವುದು ಹೊಸತೇನೂ ಅಲ್ಲ. ಅದರಲ್ಲೂ ಅಡವಿಯಲ್ಲಿಯೇ ಇರುವ ಆನೆಗಳ ನ್ನಂತೂ ಕೇಳುವುದೇ ಬೇಡ. ಅದೊಂದು ಅದ್ಭುತ ಅಲೆಮಾರಿ ಜೀವನ. ಕೆಲವು ವರ್ಷದ ಹಿಂದೆ ಆಫ್ರಿಕಾ ಖಂಡದ ಆನೆಗಳ ಅಲೆಮಾರಿ ಜೀವನದ ಒಂದು ಸಾಕ್ಷ್ಯಚಿತ್ರ ನೋಡಿದ್ದೆ. ಸುಮಾರು ಇಪ್ಪತ್ತು-ಇಪ್ಪತ್ತೈದರಷ್ಟಿರುವ ಆನೆಗಳ ಒಂದು ವರ್ಷದ ತಿರುಗಾಟದ ಚಿತ್ರ ಅದು. ಆನೆಗಳು ವಾಸಿಸುವ ಸ್ಥಾನದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಕಡಿಮೆಯಾಗುತ್ತಾ, ಕ್ರಮೇಣ ಬತ್ತಿ ಹೋಗುತ್ತದೆ. ಆ ಸಂದರ್ಭದಲ್ಲಿ ಆನೆಯ ಹಿಂಡು ನೀರಿಗಾಗಿ ನೂರಾರು ಕಿಲೋಮೀಟರ್ ದೂರ ಪ್ರಯಾಣ ಮಾಡುತ್ತವೆ.

ಮಳೆ ಆರಂಭವಾಗುವಾಗ ಮರಳಿ ತಮ್ಮ ಸ್ಥಾನವನ್ನು ಸೇರಿಕೊಳ್ಳುತ್ತವೆ. ಕಾರಣಾಂತರಗಳಿಂದ ನೀರಿಗಾಗಿ ಹೋಗುವಾಗ ಕ್ರಮಿಸಿದ ದಾರಿ ಬಿಟ್ಟು ಬೇರೆಯದೇ ದಾರಿ ಹಿಡಿದು ತಮ್ಮ ಜಾಗಕ್ಕೆ ಮರಳುತ್ತವೆ. ಇದು ನಿರಂತರ ನಡೆಯುತ್ತಿರುತ್ತದೆ. ಆನೆಗೆ ಇದು ಹೇಗೆ ಸಾಧ್ಯ ಎಂದರೆ, ಅದರಲ್ಲಿರುವ ಅಗಾಧ ನೆನಪಿನ ಶಕ್ತಿಯಿಂದಾಗಿ. ಅಧ್ಭುತ  ನಪಿನ ಶಕ್ತಿಯುಳ್ಳ ಮನುಷ್ಯರನ್ನೂ ಆನೆಗೆ (elephant memory) ಹೋಲಿಸುವುದಿದೆ.

ಅದರ ಸ್ಥಾನದಿಂದ ಕಣ್ಣು ಕಟ್ಟಿ ಕರೆದೊಯ್ದು ಬಿಟ್ಟು ಬಂದರೂ ಹಿಂತಿರುಗಿ ಬರಬಲ್ಲ ಸಾಮರ್ಥ್ಯವಿರುವ ಪ್ರಾಣಿಗಳು ಎಂದರೆ ಶ್ವಾನ ಮತ್ತು ಆನೆ. ನಾಯಿ ಯಾದರೋ ಸರಿ, ಸಣ್ಣ ಪ್ರಾಣಿ, ಓಡಿ ಬರಬಹುದು. ಆದರೆ ತಿನ್ನಲು ಪ್ರತಿನಿತ್ಯ ಸರಾಸರಿ ನೂರ ಐವತ್ತು ಕಿಲೋ ಆಹಾರ ಹುಡುಕಿಕೊಂಡು, ಹದಿನೈದರಿಂದ ಇಪ್ಪತ್ತು ಕಿಲೋಮೀಟರ್ ನಷ್ಟು ಹಾದಿ ಕ್ರಮಿಸಬಲ್ಲ ಆನೆಯೂ ಹಿಂತಿರುಗಿ ಬರುತ್ತದೆ ಎಂದರೆ ಅದು ದೈವದತ್ತ.

ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳ ಪೈಕಿ ಆನೆಯ ಮೆದುಳು ದೊಡ್ಡದು. ಇರಬೇಕಾದದ್ದೇ, ಅಷ್ಟೇ ದೊಡ್ಡದಾದ ದೇಹವೂ ಇದೆಯಲ್ಲ! ಅದರೊಂದಿಗೆ, ಆನೆಗಳು ಎನ್ಸೆ ಫಾಲೈಸೇಶನ್ ಅಂಶವನ್ನೂ ಹೊಂದಿವೆ. ಎನ್ಸೆಫಾಲೈಸೇ ಶನ್ ಅಥವಾ ಉಕಿ ಎಂದರೆ ಪ್ರಾಣಿಯ ದೇಹದ ತೂಕ ಮತ್ತು ಮೆದುಳಿನ ತೂಕದ ಪ್ರಮಾಣವನ್ನು ಹೇಳುವ ಸಾಧನ ಅಥವಾ ಮಾಪನ. ಸಾಮಾನ್ಯ ಮನುಷ್ಯರ ಇಕ್ಯೂ ೭.೪ ರಿಂದ
೭.೮ ರ ವರೆಗೆ ಇರುತ್ತದೆ. ಡಾಲಿನ್‌ಗಳು ೫.೩ ಇಕ್ಯೂ ಹೊಂದಿರುತ್ತವೆ. ಆನೆಗಳ ಇಕ್ಯೂ ೧.೮೭ ಇದ್ದು, ಮನುಷ್ಯನೊಂದಿಗೆ ಸಾಮ್ಯತೆ ಹೊಂದಿರುವ ಚಿಂಪಾಂಜಿಯ ಇಕ್ಯೂ ಕೂಡ ಅದೇ ಪ್ರಮಾಣದಲ್ಲಿದೆ. ‘ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳಲ್ಲಿ, ಮನುಷ್ಯ ತನ್ನ ಗಾತ್ರಕ್ಕೆ ಅನುಗುಣವಾಗಿ, ಅತಿ ದೊಡ್ಡ ಮೆದುಳನ್ನು ಹೊಂದಿದ್ದಾನೆ’ ಎಂದು ಅರಿಸ್ಟಾಟಲ್ ಶತಮಾನಗಳ ಹಿಂದೆಯೇ ಹೇಳಿದ್ದಾನೆ.

ಮನುಷ್ಯ ಮತ್ತು ಆನೆಯ ಮೆದುಳು ಅನೇಕ ಅಂಶಗಳಲ್ಲಿ ಒಂದನ್ನೊಂದು ಹೋಲುತ್ತವೆ. ಆದರೆ ಹಿಪೊಕ್ಯಾಂಪಸ್ ಮತ್ತು ಸೆರೆಬ್ರಲ್ ಕಾರ್ಟೆಕ್ಸ್ ಎಂಬ ಎರಡು ಧಾತುಗಳಿಂದಾಗಿ ಆನೆಗಳು ಮನುಷ್ಯರಿಗಿಂತ ಭಿನ್ನವಾಗಿವೆ. ಇವು ಸ್ಮರಣಶಕ್ತಿ, ಇಚ್ಛಾಶಕ್ತಿ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಹಕರಿಸುವ ಧಾತುಗಳು. ಆನೆ ತನ್ನ ಅನುಭವಗಳನ್ನು ಮೆದುಳಿನಲ್ಲಿ ಸಂಗ್ರಹಿಸಿ, ನೆನಪುಗಳನ್ನಾಗಿ ಬಂಧಿಸಿಟ್ಟುಕೊಳ್ಳುತ್ತದೆ.
ಇದು ಭವಿಷ್ಯದಲ್ಲಿ ಕಾಣಿಸಿಕೊಳ್ಳಬಹುದಾದ ಅನೇಕ ಅಪಾಯಕಾರಿ ಸಂದರ್ಭಗಳನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

ಉದಾಹರಣೆಗೆ, ಒಂದು ವೇಳೆ ಆನೆಯ ಬಾಲ್ಯದಲ್ಲಿ, ಒಂದು ಪ್ರದೇಶದಲ್ಲಿ ಬರಗಾಲ ಬಂದು, ಬದುಕಿ ಉಳಿದಿದ್ದರೆ, ಮುಂದೊಂದು ದಿನ ಅದೇ ಪ್ರದೇಶದಲ್ಲಿ ಬರಗಾಲದ ಅಪಾಯವನ್ನು, ಮುನ್ಸೂಚನೆಯನ್ನು ಆನೆ ಮುಂಚಿತವಾಗಿ ಗ್ರಹಿಸುತ್ತದೆ. ಒಂದು ಪ್ರದೇಶದಲ್ಲಿ ಹುಲಿ, ಸಿಂಹದಂಥ ಪ್ರಾಣಿಗಳು ಬೇಟೆಯಾಡಲು ಬಂದದ್ದನ್ನು, ಮಾನವನಿಂದ ಒದಗಿಬಂದ ಆಪತ್ತನ್ನು ಅದು ನೆನಪಿನಲ್ಲಿಡುತ್ತದೆ. ಆನೆ ಬಹುತೇಕ ವಾಗಿ ಮನುಷ್ಯರಂತೆ ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ. ಹೆಚ್ಚು ವಯಸ್ಸಾದ ಆನೆ ಗುಂಪಿನಲ್ಲಿ ಇದ್ದಷ್ಟೂ ಆ ಕುಲ ಹೆಚ್ಚು ಬದುಕಿ ಉಳಿಯುವುದು ಇದೇ ಕಾರಣಕ್ಕೆ. ಇದು ಮನುಷ್ಯ ಮತ್ತು ಆನೆಯಲ್ಲಿರುವ ಅತಿ ದೊಡ್ಡ ವ್ಯತ್ಯಾಸ ಎಂದರೆ ತಪ್ಪಾಗ ಲಾರದು.

ನಾವು ನಮ್ಮ ಬಾಲ್ಯದಲ್ಲಿ, ಅದರಲ್ಲೂ ಹತ್ತು ಹನ್ನೆರಡು ವರ್ಷದ ಒಳಗೆ ನೋಡಿದ ಬಹುತೇಕ ಸ್ಥಳಗಳನ್ನು, ಜನರನ್ನು, ಸಂಬಂಽಗಳನ್ನೂ ಮರೆಯುತ್ತೇವೆ. ನಮ್ಮ ಬಾಲ್ಯದಲ್ಲಿ ಎತ್ತಿ ಆಡಿಸಿದವರು ಇಪ್ಪತ್ತು ವರ್ಷಗಳ ನಂತರ ಭೇಟಿಯಾಗಿ ತನ್ನ ಪರಿಚಯವಿದೆಯೇ ಎಂದು ಕೇಳಿದರೆ ಆಕಾಶ ನೋಡುತ್ತೇವೆ. ಇದು ಬಾಲ್ಯದ ನೆನಪುಗಳೇ ಗಟ್ಟಿ ಎನ್ನುವ ಮನುಷ್ಯನ ಪರಿಸ್ಥಿತಿ. ಹಾಗಾದರೆ ಎರಡೂವರೆ  ಪೆಟಾ ಬೈಟ್ ಸಾಮರ್ಥ್ಯದ (ಸುಮಾರು ನಾಲ್ಕು ಸಾವಿರ ಐಫೋನ್‌ನ ಮೆಮೊರಿ) ಮನುಷ್ಯನ ನೆನಪು ಯಾವ ಮಣ್ಣಂಗಟ್ಟೆ? ಆದರೆ ಆನೆಗಳು ಅದೇ ವಯಸ್ಸಿನಲ್ಲಿ, ಅಥವಾ ಅದಕ್ಕಿಂತಲೂ ಸಣ್ಣ ವಯಸ್ಸಿನಲ್ಲಿ ಕಂಡ ಸ್ಥಳವನ್ನು, ತಮ್ಮ ಕುಲದವರನ್ನು, ಇತರ ವನ್ಯ ಸಂಕುಲವನ್ನು, ಅಷ್ಟೇ ಏಕೆ, ತಮ್ಮ ಪ್ರೀತಿಯ ಮನುಷ್ಯನನ್ನು ನಲವತ್ತರಿಂದ ಐವತ್ತು ವರ್ಷದ ನಂತರ ನೋಡಿದರೂ ಗುರುತು ಹಿಡಿಯುತ್ತವೆ. ಒಂದು ಹಿಂಡಿನಲ್ಲಿರುವ ಆನೆ ಕಳೆದು ಹೋಗದಿರಲು, ಒಂದೊಮ್ಮೆ ಬೇರೆಯಾದರೂ ಮರಳಿ ಕೂಡಿಕೊಳ್ಳುವುದು ಇದೇ ಕಾರಣಕ್ಕೆ.

ಸದ್ಯ ಭೂಮಿಯಮೇಲೆ ಕಾಣುವ ಅತಿ ದೊಡ್ಡ ಪ್ರಾಣಿ ಆನೆ. ಆದರೂ ನಿರುಪದ್ರವಿ. ಅದಕ್ಕೆ ಆಹಾರದ ಕೊರತೆಯಾದ ವಿನಃ ಯಾರ ತೋಟಕ್ಕೂ ನುಗ್ಗುವುದಿಲ್ಲ, ಅದನ್ನು ಕೆಣಕಿದ ಶಿವಾಯ್ ಯಾರ ತಂಟೆಗೂ ಹೋಗುವುದಿಲ್ಲ. ದೇವಸ್ಥಾನಗಳಲ್ಲಿ ಭಕ್ತರ ಉರುಳು ಸೇವೆ ಮುಗಿಯುವವರೆಗೆ ಕಾದು, ನಂತರ ಮುನ್ನಡೆಯುವ ಆನೆಗಳೇ ಇದಕ್ಕೆ ಸಾಕ್ಷಿ. ಮೈಸೂರಿನ ದಸರಾ, ಕೇರಳದ ಗಜೋತ್ಸವಗಳಲ್ಲಿ
ಸಾವಿರಾರು ಸಂಖ್ಯೆಯ ಜನ ಸೇರುವುದೂ ಇದೇ ಭರವಸೆಯಿಂದ. ಹಾವಿಗೆ ಬೆಚ್ಚುವ ಮನುಷ್ಯ ಆನೆಯ ಹತ್ತಿರ ಹೋಗಲು ಹೆದರುವುದಿಲ್ಲ. ಇಲಿ ಯನ್ನು ಕಂಡರೆ ಹೆದರುವ ಮಗು ಆನೆಯನ್ನು ಕಂಡಾಗ ಅಳುವುದಿಲ್ಲ. ಅದು ಒಬ್ಬರಮೇಲೆಇನ್ನೊಬ್ಬರು ಇಟ್ಟಿರುವ ಭರವಸೆ.

ಆನೆಗೆ ನೂರಾರು ಗುಣ, ವಿಶೇಷತೆಗಳಿದ್ದರೂ ಇಲ್ಲಿ ಅದು ಅಪ್ರಸ್ತುತ. ಆದರೆ, ತನ್ನನ್ನು ಪಾಲಿಸಿ ದವರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳುವ ತನ್ನನ್ನು ಪ್ರೀತಿಸಿದವರನ್ನು ದುಪ್ಪಟ್ಟು ಪ್ರೀತಿಸುವ ಗುಣಗಳಿರುವ ಪ್ರಾಣಿಗಳ ಸಾಲಿನಲ್ಲಿ ನಾಯಿ, ಹಸುವಿನ ಜತೆ ನಿಲ್ಲಬಹುದಾದ ಪ್ರಾಣಿ ಆನೆ ಎಂದರೆ ಸುಳ್ಳಾಗಲಿಕ್ಕಿಲ್ಲ. ನನಗೆ ಎಷ್ಟೋ ಸಾರಿ ಅನಿಸಿ ದ್ದಿದೆ, ಗಾತ್ರದನಾದರೂ ಸಣ್ಣದಾಗಿದ್ದರೆ, ಜನ
ನಾಯಿ, ಬೆಕ್ಕಿನಂತೆ ಆನೆಯನ್ನೂ ಮನೆಯಲ್ಲಿ ಸಾಕುತ್ತಿದ್ದರು. ಆನೆ ಅದಕ್ಕೆ ಯೋಗ್ಯವೂ ಹೌದು.

ಬದಲಾಗಿ, ನಾಯಿಗಿಂತಲೂ ಆನೆಯನ್ನೇ ಹೆಚ್ಚು ಸಾಕುತ್ತಿದ್ದರೇನೋ. ಹನ್ನೆರಡರಿಂದ ಹದಿನೈದು ವರ್ಷ ಬದುಕುವ ನಾಯಿಗಿಂತಲೂ ಅರವತ್ತರಿಂದ ಎಪ್ಪತ್ತು ವರ್ಷ, ಅಂದರೆ ಬಹುತೇಕ ಮನುಷ್ಯನಷ್ಟೇ ಬದುಕುವ ಆನೆ ಸಾಕುವುದನ್ನೇ ಇಷ್ಟಪಡುತ್ತಿದ್ದರೇನೋ!
ಅದಕ್ಕಿರುವ ಗಾತ್ರ, ಶಕ್ತಿಯನ್ನು ಪರಿಗಣಿಸಿದರೆ, ಆನೆ ಕಾಡಿನಲ್ಲಿರುವ ಅತ್ಯಂತ ಸೌಮ್ಯ ಪ್ರಾಣಿ ಎಂದೇ ಹೇಳಬಹುದು. ‘ಬಲ ಇರುವುದು
ತೋಳಿನಲ್ಲಲ್ಲ, ತಲೆಯಲ್ಲಿ’, ‘ಶಕ್ತಿಗಿಂತ ಯುಕ್ತಿ ಮೇಲು’ ಎಂಬಿತ್ಯಾದಿ ಮಾತಿದೆ. ಎರಡರಲ್ಲೂ ಶಕ್ತಿಯುತವಾದ ಆನೆ? ದುರದೃಷ್ಟವಶಾತ್, ಇಂದು ಆನೆಗೆ ಅಪಾಯ, ಆತಂಕ ಏನಾದರೂ ಇದ್ದರೆ ಅದೂ ಮನುಷ್ಯನಿಂದಲೇ.

ಅರಣ್ಯನಾಶ, ಕಳ್ಳ ಬೇಟೆಯಂತಹ ಅಪಾಯವನ್ನು ಆನೆಗಳಿಗೆ ಒದಗಿಸಿಕೊಟ್ಟ ಕೀರ್ತಿ ಏನಿದ್ದರೂ ಮನುಷ್ಯನಿಗೇ ಸಲ್ಲ ಬೇಕು. ಎರಡು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಘಟನೆ ಯಾರೂ ಮರೆಯುವಂತಿಲ್ಲ. ಮದ್ದುಗುಂಡು ಸೇರಿಸಿಟ್ಟ ಅನಾನಸ್ ಹಣ್ಣು ತಿನ್ನಲು ಹೋಗಿ, ಅದು ಬಾಯಲ್ಲಿ ಸ್ಫೋಗೊಂಡಾಗ, ಗರ್ಭ ಹೊತ್ತ, ಕಂಗೆಟ್ಟ ಆನೆ ಕೂಗುತ್ತ ಊರತುಂಬ ಓಡಾಡಿದರೂ, ಯಾರಿಗೂ ಹಾನಿ ಮಾಡದೇ,
ಕೊನೆಗೆ ಉರಿ ತಣಿಸಿಕೊಳ್ಳಲು ನದಿಯ ನೀರಿನಲ್ಲಿ ಮುಖ ಅದ್ದಿ ನಿಂತು ಅಲ್ಲಿಯೇ ಪ್ರಾಣ ಬಿಟ್ಟಿತ್ತು.

ಮನುಷ್ಯ ತನ್ನ ಪುರುಷತ್ವವನ್ನು ಕಳೆದು ಕೊಂದ, ಕಳೆದುಕೊಂಡ ನೂರಾರು ಘಟನೆಗಳಲ್ಲಿ ಅದೂ ಒಂದು. ಖಂಡಿತವಾಗಿಯೂ ಆನೆಗಳು ಮನುಷ್ಯ ನಿಂದ ಅತ್ಯುತ್ತಮವಾದದ್ದನ್ನು ಪಡೆಯಲು ಅರ್ಹವೂ, ಯೋಗ್ಯವೂ ಆಗಿವೆ. ಒಂದಂತೂ ಸತ್ಯ, ನಾವು ಅವುಗಳನ್ನು ನಡೆಸಿ ಕೊಂಡ ರೀತಿಯನ್ನು ಅವು ಎಂದಿಗೂ ಮರೆಯುವುದಿಲ್ಲ. ಅವುಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ನಮ್ಮ ಕೈಯಲ್ಲಿದೆ.

Only the weak are cruel. Gentleness can only be expected from the strong !