ಹಂಪಿ ಏಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ತೀರ ಇತ್ತೀಚೆಗೆ ನನಗೆ ದೊರಕಿರುವ ಅಧಿಕೃತ ದಾಖಲೆಯ ಪ್ರಕಾರ, ವಾಟಾಳ್ ನಾಗರಾಜ್ ಅಧ್ಯಕ್ಷ ರಾಗಿರುವ ಕರ್ನಾಟಕ ರಾಜ್ಯೋತ್ಸವ ಸಮಿತಿಯು 2015ರಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ಮುಂದೆ ಐತಿಹಾಸಿಕ ಅದ್ದೂರಿ ರಾಜ್ಯೋತ್ಸವದ ಆಚರಣೆಗಾಗಿ ಎಪ್ಪತ್ತೈದು ಲಕ್ಷ (75ಲಕ್ಷ) ರುಪಾಯಿಗಳನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರಕ್ಕೆ ಮಾಡಿರುವ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸರಕಾರದಿಂದ ನಲವತ್ತು ಲಕ್ಷ ರುಪಾಯಿ (40ಲಕ್ಷ) ಬಿಡುಗಡೆ ಮಾಡಿದ್ದಾರೆ.
ಒಂದು ಸಂಘಟನೆ ಹೀಗೆ ಸರಕಾರದಿಂದ ಹಣ ಕೇಳುವುದು ಸರಿಯೇ? ಸರಕಾರವೇ ರಾಜ್ಯೋತ್ಸವ ಆಚರಿಸುತ್ತಿರುವಾಗ ಹೀಗೆ ಹಣ
ನೀಡಿರುವುದು ಸರಿಯೇ? ಸಾರ್ವಜನಿಕರು ಇದಕ್ಕೆ ಸ್ಪಂದಿಸುವ ಅಗತ್ಯವಿದೆ (2015ರ ನಂತರವೂ ಸರಕಾರವು ಹೀಗೆ ಹಣ ಬಿಡುಗಡೆ ಮಾಡಿರುವುದರ ಸೂಚನೆಗಳು ನನಗೆ ದೊರಕಿವೆ). ನಾವು ಪ್ರಾಮಾಣಿಕ ಕನ್ನಡ ಕಾರ್ಯಕರ್ತರ ಜತೆ ಸೇರಿ ‘ಕನ್ನಡ ಶಕ್ತಿಕೇಂದ್ರ’ ಸಂಘಟನೆ ಸ್ಥಾಪಿಸಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಅದರ ಶಾಖೆಗಳನ್ನು ಕಟ್ಟಿ ಗೋಕಾಕ್ ಚಳವಳಿ ಇತ್ಯಾದಿ ಚಳವಳಿಗಳನ್ನು ಶಿಸ್ತುಬದ್ಧವಾಗಿ ಮಾಡಿದೆವು. ಕನ್ನಡ ಶಕ್ತಿಕೇಂದ್ರವು ಹಲವು ಉಪಯುಕ್ತ, ಉತ್ಸಾಹ ತುಂಬುವ, ಮಾಹಿತಿ ಪೂರ್ಣ ಕೃತಿಗಳನ್ನು ಪ್ರಕಟಿಸಿತು; ಹಲವು ಪ್ರತಿಮೆಗಳನ್ನು ಸ್ಥಾಪಿಸಲು ನಿಮಿತ್ತ ವಾಯಿತು.
ನೂರಾರು ಸಭೆ ನಡೆಸಿ, ತಜ್ಞರ ಸಭೆಗಳನ್ನೂ ವಿಚಾರಗೋಷ್ಠಿಗಳನ್ನೂ ಏರ್ಪಡಿಸಿ ಕೇಂದ್ರ ಮಂತ್ರಿಗಳನ್ನು, ಪ್ರಧಾನಿಗಳನ್ನು ಭೇಟಿ ಮಾಡಿತು. ಹಂಪಿ ವಿಶ್ವವಿದ್ಯಾಲಯ ಸ್ಥಾಪನೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಕನ್ನಡ ದೂರದರ್ಶನ, ಕೃಷ್ಣಾ-ಕಾವೇರಿ ನದಿನೀರಿನ ಹೋರಾಟ ಇತ್ಯಾದಿಗಳ ಬಗ್ಗೆ ಸಂಘಟಿಸಿ ಬಹುಕಾಲ ಯಶಸ್ವಿಯಾಯಿತು.
ಕುವೆಂಪು, ಕಾರಂತ, ಶಂಬಾ, ಕರೀಂಖಾನ್, ದೇಜಗೌ ಇವರೇ ಮೊದಲಾದವರು ಶಕ್ತಿಕೇಂದ್ರಕ್ಕೆ ಸಲಹೆಗಾರರಾಗಿದ್ದರು. ಕನ್ನಡ
ಶಕ್ತಿಕೇಂದ್ರವು ಸದಸ್ಯರಿಗೆ ವಾರ್ಷಿಕ ಚಂದಾ 100 ರುಪಾಯಿಗಳು, ಅಜೀವ ಸದಸ್ಯತ್ವಕ್ಕೆ 250 ರುಪಾಯಿಗಳು ನಿಗದಿ ಮಾಡಿದ್ದಿತು. ಇಪ್ಪತ್ತು ವರ್ಷ ನಿರಂತರವಾಗಿ ಕನ್ನಡ – ಕನ್ನಡಿಗ – ಕರ್ನಾಟಕಗಳ ಉಳಿವು, ಬೆಳವಣಿಗೆಗಾಗಿ ಶ್ರಮಿಸಿದ ಸಾಹಿತಿಗಳ ಕಲಾವಿದರ ಬಳಗವಾಗಲಿ, ಕನ್ನಡ ಶಕ್ತಿಕೇಂದ್ರವಾಗಲಿ ಎಂದೂ ಕರ್ನಾಟಕ ಸರಕಾರದಿಂದ ಧನ ಯಾಚಿಸಲಿಲ್ಲ. ಅವುಗಳ ಪ್ರಾಮಾಣಿಕತೆ ಪ್ರಶ್ನಾತೀತ ವಾಗಿದ್ದಿತು.
ಅವು ಅತ್ಯಂತ ಶಿಸ್ತುಬದ್ಧ, ಪ್ರಾಮಾಣಿಕ ಕಾರ್ಯಕರ್ತರಿಂದ ಕೂಡಿದುದರಿಂದ ಅವು ನಡೆಸಿದ ಚಳವಳಿಗಳು ಎಂದೂ ಪ್ರದರ್ಶಕ ಗಳಾಗಿ ತಮಾಷೆಯ ಆಯಾಮ ಪಡೆದುಕೊಳ್ಳಲಿಲ್ಲ. ಅವು ಮಾಡುವ ತಮ್ಮ ಕೆಲಸಗಳನ್ನು ನಿರ್ವಹಿಸಿ ಮುಂದೆ ಅನಿವಾರ್ಯ ವಾಗಿ ತಟಸ್ಥವಾಗಬೇಕಾಯಿತು. (ವಿವರಗಳಿಗೆ ನೋಡಿ : ರಾ.ನಂ. ಚಂದ್ರಶೇಖರ ಅವರ ಕೃತಿ ‘ಸಾಹಿತಿಗಳ ಕಲಾದರ ಬಳಗ – ಕನ್ನಡ ಚಳವಳಿ’, ‘ಕನ್ನಡ ಶಕ್ತಿ-1998’). ಇದು. ಕನ್ನಡ – ಕನ್ನಡಿಗ – ಕರ್ನಾಟಕ ಎಂಬ ಸಿದ್ಧಾಂತಕ್ಕೆ ಬೇಕಿರುವ ನಿಸ್ವಾರ್ಥ ಪ್ರತಿ-ಲಾಪೇಕ್ಷೆ ಗಳಿಲ್ಲದ ನಿರ್ಮಲ ಸ್ವಚ್ಛ ಉಚ್ಚ ಕಚ್ಚಾ ಕನ್ನಡ ಮನಸ್ಸುಗಳು.
ಕನ್ನಡತಾಯಿ ಭುವನೇಶ್ವರಿ ದೇವಿಗೆ ಬೇಕಿರುವುದೇ ಇಂಥ ಕನ್ನಡ ಸುಪುತ್ರರು. ‘ಕನ್ನಡದ ಹಬ್ಬಕ್ಕೆ ಕನ್ನಡದ ವಿಜೃಂಭಣೆಗೆ ಕನ್ನಡ ಜಾಗೃತಿಗೆ ಸರಕಾರದಿಂದ ವಸೂಲಿ ಮಾಡಿಕೊಂಡು ಆಚರಿಸುವ ಹೀನಾಯ ಸ್ಥಿತಿ ಕನ್ನಡಿಗರಿಗಿಲ್ಲ, ಅಂಥ ಲಕ್ಷಾಂತರ ರುಪಾಯಿ
ಹಣ ನಮಗೆ ಬೇಕಿಲ್ಲ. ನಾವುಗಳೇ ಕೈಯಿಂದ ಹಣವನ್ನು ಹಾಕಿಕೊಂಡು ಕನ್ನಡವನ್ನು ಕಟ್ಟುವ ಕಾರ್ಯ ಮಾಡೋಣ’.
ಹೀಗೆ ಹೇಳುವ ಪ್ರಾಮಾಣಿಕತೆ ಉದಾರತೆ ನಿಸ್ವಾರ್ಥತೆ ಮುಗ್ಧತೆ ಜತೆಗೆ ಧೈರ್ಯ, ಗುಂಡಿಗೆ, ತಾಕತ್ತು, ಮೀಟರು ಇಂದು ಯಾವ ಕನ್ನಡಪರ ಹೋರಾಟಗಾರರಿಗಿದೆ ಎಂಬುದು ಕುತೂಹಲಕಾರಿ ವಿಚಾರ.
ಮೇಲಿನ ಪತ್ರವನ್ನು (2018ರ ಫೆಬ್ರವರಿ 10ರಂದು) ಪತ್ರಿಕೆಗಳಲ್ಲಿ ಬಹಿರಂಗವಾಗಿ ಬರೆದವರು ಕನ್ನಡದ ಕಟ್ಟಾಳು ಸತ್ಯ ವಸ್ತುನಿಷ್ಠ ಸಂಶೋಧಕರು ಹೋರಾಟಗಾರು ನಡೆದಾಡುವ ಶಾಸನ ನಾಡೋಜ ಡಾ.ಎಂ.ಚಿದಾನಂದ ಮೂರ್ತಿಯವರು. ಚಿಮೂ ಅವರಿಗೆ ಇಂದಿನ ಆಧುನಿಕ ಹೊಟ್ಟೆಪಾಡಿನ ವಸೂಲಿಗಾರರು ತೋರಿಕೆ ಕನ್ನಡಿಗರ ಕುರಿತು ಒಂದು ಸಣ್ಣ ಅಸಹ್ಯ ಭಾವವಿತ್ತು. ಏಕೆಂದರೆ ಸ್ವಂತ ದುಡಿಮೆಯ ಒಂದು ಪಾಲನ್ನು ಕನ್ನಡಪರ ಕೆಲಸಗಳಿಗೆ ಕನ್ನಡವನ್ನು ಕಟ್ಟುವ ಹೊಣೆಗಾರಿಕೆ ಯುತ ಕೈಂಕರ್ಯಗಳಿಗೆ ಮೀಸಲಿರಿಸಿ ತಮ್ಮ ಸಮಕಾಲೀನ ಸಾಹಿತಿಗಳನ್ನು ಬರಹಗಾರರನ್ನು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಕನ್ನಡ ಶಕ್ತಿಕೇಂದ್ರವನ್ನು ಸ್ಥಾಪಿಸಿ ಕನ್ನಡಿಗರ ಮತ್ತು ನಾಡಿನ ಘನತೆಯನ್ನು ಉತ್ತುಂಗಕ್ಕೆ ಏರಿಸಿದ್ದರು.
ಎಂಬತ್ತರ ದಶಕದವರೆಗೂ ಕನ್ನಡಪರ ಹೋರಾಟ ರಸ್ತೆಗೆ ಬಂತೆಂದರೆ ಸರಕಾರಗಳೇ ಕಳವಳಗೊಳ್ಳುತ್ತಿದ್ದವು. ತೊಂಬತ್ತರಾಚೆಗೆ ಕನ್ನಡ ಹೋರಾಟವು ಕೆಲವರ ಗುಂಪುಗಾರಿಕೆ ಜಾತೀವಾದ ದರ್ಪ ದಾಂದಲೆ ಶೋಕಿಗಳಿಂದ ಕನ್ನಡಿಗರೇ ಅಸಹ್ಯದಿಂದ
ಅನುಮಾನದಿಂದ ನೋಡುವಂತಾಗಿ ಕನ್ನಡ ಕನ್ನಡಿಗರ ಘನತೆಗೇ ಪೆಟ್ಟಾಗಿರುವುದು ಸುಳ್ಳಲ್ಲ. ಇಷ್ಟೆಲ್ಲಾ ಇಲ್ಲಿ ಹೇಳಲು ಇರುವ ಕಾರಣ ಮುಂದಿನ ತಿಂಗಳು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರನ್ನು ನೇಮಿಸುವು ಪ್ರಕ್ರಿಯೆ ನಡೆಯುತ್ತಿದೆ.
ಇದಕ್ಕಾಗಿ ನೇರವಾಗಿ ಕನ್ನಡ ಭಾಷೆಯ ಮೇದಾವಿಗಳು ವಿದ್ವಾಂಸರು ಪಂಡಿತರು ಕವಿಗಳು ಸಾಹಿತಿಗಳನ್ನು ಒಂದೆಡೆ ಆಹ್ವಾನಿಸಿ
ಕನ್ನಡ ನಾಡುನುಡಿ ಸಂಸ್ಕೃತಿ ಸಂಸ್ಕಾರ ಶಾಸ್ತ್ರೀಯತೆಗೆ ಅನುಗುಣವಾಗಿ ಚರ್ಚಿಸಿ ಸಮುದ್ರ ಮಥನದ ಅಮೃತದಂಥ ಯೋಗ್ಯ ವ್ಯಕ್ತಿಯನ್ನು ಸಾಹಿತ್ಯ ಪರಿಷತ್ತಿನ ಗಾದಿಗೆ ಸರ್ವಾನುಮತದಿಂದ ಆಯ್ಕೆ ಮಾಡುವುದು ಸರ್ವಶ್ರೇಷ್ಠವಾಗಿರುತ್ತದೆ. ಏಕೆಂದರೆ ಕನ್ನಡಿಗರು ಭಾಷೆಯನ್ನು ಕೇವಲ ಸಂಹವನದಂತೆ ಕಾಣುವುದಿಲ್ಲ.
ಸಾಕ್ಷಾತ್ ಭುವನೇಶ್ವರಿದೇಯ ಸ್ವರೂಪದಲ್ಲಿ ಕಾಣುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಒಂದು ಪವಿತ್ರವಾದ ಕನ್ನಡದ ಗರ್ಭಗುಡಿ ಇದ್ದಂತೆ. ಅಲ್ಲಿ ಮುಖ್ಯಸ್ಥನಾಗಿ ಕೂರುವುದೆಂದರೆ ಭುವನೇಶ್ವರಿದೇವಿಯನ್ನು ಒಲಿಸಿಕೊಂಡು ಪೂಜಿಸುವ ಪತ್ರ
ಅರ್ಚಕನಂತಿರಬೇಕು. ಯಾವುದೇ ಒಂದು ಮಠಕ್ಕೆ ಉತ್ತರಾಧಿಕಾರಿ ಮಠಾಧೀಶರನ್ನು ನೇಮಿಸಬೇಕಾದರೆ ವೇದ ಮಂತ್ರ ಉಪನಿಷತ್ತು ಧ್ಯಾನ ಯೋಗ ಅಲೌಕಿಕತೆಯಲ್ಲಿ ಸಿದ್ಧಿಯನ್ನು ಪಡೆದಿರುವವರನ್ನೇ ನೇಮಿಸಲಾಗುತ್ತದೆಯಲ್ಲವೇ.
ಹಾಗೆಯೇ ಸಾಹಿತ್ಯ ಪರಿಷತ್ತು ಎಂಬುದು ಕನ್ನಡ ಭಾಷೆ ಸಂಸ್ಕೃತಿಯ ಮೂಲ ಸ್ಥಾನವಿದ್ದಂತೆ. ಅಂಥ ನೆಲೆಗೆ ಅಧ್ಯಕ್ಷನಾಗಿ ನೇಮಕವಾಗುವುದು ಸಾಹಿತ್ಯ ಪಾಂಡಿತ್ಯ ಅರಿವು ಹರಿನಂಥ ನಿರಂತರ ಸಾಹಿತ್ಯಿಕ ಕೃತಿ ತಿಳಿವಳಿಕೆ ಜ್ಞಾನಗಳಿಂದ ಕೂಡಿದ್ದು, ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಆತ ಉತ್ತರ ಎಂಬಂತ್ತಿರಬೇಕು. ಸಾಂಸ್ಕೃತಿಕ ರಾಯಭಾರಿಯಾಗಿರಬೇಕು. ಆತ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಪ್ರತೀಕವಾಗಿರಬೇಕು. ಇಡೀ ಕನ್ನಡಿಗರು ಆತನ ಯೋಗ್ಯತೆಯನ್ನು ಮನಗಂಡು ಆರಾಧಿಸುವಂತಿರಬೇಕು.
ಇಂಥ ಮಾನದಂಡವನ್ನು ಇರಿಸಿಕೊಂಡೇ ಅಂದು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದು. ಅದರೀಗ ಅಂಥ ಪವಿತ್ರವಾದ ಕಸಾಪ ಅಧ್ಯಕ್ಷಗಿರಿಗೆ ಚುನಾವಣೆಯನ್ನು ನಡೆಸುತ್ತಿರುವುದು ದುರದೃಷ್ಟಕರ.
ಏಕೆಂದರೆ ಈಗಾಗಲೇ ಚುನಾವಣಾ ಪದ್ಧತಿಯಿಂದಾಗಿ ರಾಜಕೀಯವೆಂಬುದು ದೇಶದ ಶಾಸಕಾಂಗವನ್ನು ಕುಲಗೆಡಿಸಿ
ದೇಶದ ದಿಕ್ಕನ್ನೇ ಹಾಳುಮಾಡುತ್ತಿದೆ. ಇನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಲು ಚುನಾವಣಾ ಪದ್ಧತಿಯ ನೀತಿಗಳನ್ನು ಅನುಸರಿಸಿ ಪರಿಷತ್ತಿಗೆ ಅಧ್ಯಕ್ಷರನ್ನು ಆಯ್ಕೆಮಾಡುವುದು ಸಿಂಧುವಲ್ಲ.
ಏಕೆಂದರೆ ಇಲ್ಲಿಯವರೆಗೂ ಕನ್ನಡ ಸಾಹಿತ್ಯದ ಸೇವೆ ಮಾಡಿಕೊಂಡು ಬಂದ ಹಿರಿಯರ ಒಂದು ತಲೆಮಾರಿನ ಎಲ್ಲಾ ಸಾಹಿತಿಗಳೂ ನಮ್ಮನ್ನು ಅಗಲಿದ್ದಾರೆ. ಎಸ್.ಎಲ್ ಭೈರಪ್ಪನವರು ದೊಡ್ಡರಂಗೇಗೌಡರಂಥ ಬೆರಳೆಣಿಕೆಯಷ್ಟು ಸಾತಿಗಳನ್ನು ಹೊರತು
ಪಡಿಸಿದರೆ ಕನ್ನಡಿಗರು ಹೆಮ್ಮೆಪಟ್ಟು ಹೆಸರೇಳುವ ಹೊಸ ತಲೆಮಾರಿನ ಯಾವ ಸಾಹಿತಿಗಳೂ ಕಾಣಸಿಗುತ್ತಿಲ್ಲ. ಇನ್ನು ಕಸಾಪಗೆ ಅಧ್ಯಕ್ಷರನ್ನು ನೇಮಿಸಲು ಚುನಾವಣೆಯೊಂದೇ ಮಾನದಂಡವಾದರೆ, ಅದರಿಂದ ಅಯೋಗ್ಯರೇ ಆಯ್ಕೆಯಾಗುವ ಅಪಾಯವಿದೆ.
ಹೇಗೆಂದರೆ, ಈಗ ದರಿದ್ರ ರಾಜಕಾರಣದ ಪ್ರಭಾವದಿಂದಾಗಿ ಎಲ್ಲಾ ಕ್ಷೇತ್ರಗಳೂ ತನ್ನ ಮೌಲ್ಯಗಳನ್ನು ಕಳೆದುಕೊಂಡಿದೆ. ಸಾಹಿತಿಗಳ ವರ್ಗಗಳಲ್ಲೇ ಎಡ ಬಲ ಎಡಬಿಡಂಗಿಗಳೆಂಬುದಿದೆ. ಯಾವ ಪಕ್ಷಗಳು ಅಧಿಕಾರದಲ್ಲಿರುತ್ತದೆಯೋ ಆ ಪಕ್ಷಗಳಿಗೆ ಬಕೀಟು ಹಿಡಿಯುವ ಗಂಜಿಗಿರಾಕಿಗಳು ಸಮಯಸಾಧಕತೆ ಸಾಧಿಸಿ ಉಪಕೃತಿಗಳಾಗುತ್ತಾರೆ. ಇನ್ನು ಅಕಾಡೆಮಿ ಪ್ರಾಧಿಕಾರ
ಮಂಡಳಿಗಳಿಗೆ ‘ಜಾತಿಪ್ರತಿಭೆ’ಗಳನ್ನು ಬಳಸಿ ಸ್ವಜಾತಿ ಸ್ವಾಮೀಜಿಗಳಿಂದ ರಾಜಕಾರಣಿಗಳಿಂದ ಶಿಪಾರಸ್ಸು ಮಾಡಿಸಿಕೊಂಡು ಅಯೋಗ್ಯರೆಲ್ಲಾ ಆಯಾಕಟ್ಟಿನ ಪದಗಳಲ್ಲಿ ಬಂದು ಕೂರುವುದು ಸಾಮಾನ್ಯವಾಗಿಬಿಟ್ಟಿದೆ.
ಇಂಥವರಿಗೆ ಪಾಂಡಿತ್ಯ ಸಾಧನೆಗಳಿಗಿಂತ ಜಾತಿ ಮತ್ತು ರಾಜಕೀಯ ಶಿಫಾರಸ್ಸುಗಳೇ ಮಾನದಂಡವಾಗಿಬಿಟ್ಟಿದೆ. ಆಯಾ ಪಕ್ಷಗಳ
ಅಧಿಕಾರದಲ್ಲಿ ಇವರುಗಳ ಸ್ಥಾನಗಳು ಬದಲಾಗುತ್ತದಷ್ಟೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಗಾದಿಗೆ ಈಗ ನಡೆಯುತ್ತಿರುವ ಚುನಾವಣೆಗೆ ಕಾಣಿಸಿಕೊಂಡಿರುವ ಹೆಸರುಗಳನ್ನು ಅದೆಷ್ಟು ಕನ್ನಡಿಗರು ಕೇಳಿದ್ದಾರೆ. ಇವರುಗಳು ಅದೆಷ್ಟು ಕನ್ನಡ ಸಾಹಿತ್ಯ ಕೃತಿಗಳನ್ನು ಮಾಡಿದ್ದಾರೆ, ಅದೆಷ್ಟು ಕವನ ಕಥೆ ಕಾದಂಬರಿಗಳನ್ನು ಪ್ರಕಟಿಸಿ ಮನೆಮಾತಾಗಿದ್ದಾರೆ, ಐತಿಹಾಸಿಕ ಪರಿಷತ್ತಿಗೆ ಅಧ್ಯಕ್ಷರಾಗಲು ಇವರಿಗೇನೇನು ಅರ್ಹತೆಗಳಿವೆ, ಕನ್ನಡ ಪರಂಪರೆಯೇನು, ನಾಡಿನ ಇತಿಹಾಸವೇನು, ನಾಡಿನ ಭಷ್ಯದ ಕುರಿತ ಇವರುಗಳ ದೃಷ್ಠಿಕೋನಗಳೇನು ಎಂಬುದನ್ನು ಪ್ರಜ್ಞಾವಂತ ಕನ್ನಡಿಗರು ಪ್ರಶ್ನಿಸಲೇ ಬೇಕಿದೆ.
ನೋಡಿ, ಯಾವುದೇ ವ್ಯಾಪಾರ ವ್ಯವಹಾರ ಮಾಡಿಕೊಂಡು ಸ್ಥಿತಿವಂತರಾಗಿರುತ್ತಾರೆ. ಸ್ಥಳೀಯ ಚುನಾವಣೆಗಳಿಗೆ ಸ್ಪರ್ಧಿಸಲು ಜನಪ್ರಿಯತೆಯ ಕೊರತೆಯುಂಟಾಗಿರುತ್ತದೆ. ಯಾವುದೋ ಒಂದು ಸಂದರ್ಭದಲ್ಲಿ ಸ್ಥಳೀಯರೊಂದಿಗೆ ಯಾವುದೋ ಒಂದು ವಿಷಯಕ್ಕೆ ಹೋರಾಟದಲ್ಲಿ ಕಾಣಿಸಿಕೊಂಡಿರುತ್ತಾರೆ. ಕೆಲ ಕಾರ್ಯಕ್ರಮಗಳಿಗೆ ಸಹಾಯ ಮಾಡಿ ಮುಖ್ಯಅತಿಥಿಯಾಗಿ
ಪಾಲ್ಗೊಂಡಿರುತ್ತಾರೆ. ಹೀಗಾಗಿ ದುಬಾರಿ ಕಾರು ಬಿಳಿ ಅಂಗಿ ಪ್ಯಾಂಟು ಬಿಳಿಚಪ್ಪಲಿ ಶೂ ಧರಿಸುವುದನ್ನು ರೂಢಿ ಮಾಡಿ ಕೊಂಡಿರುತ್ತಾರೆ.
ಕಾರಿನ ಡ್ಯಾಶ್‌ಬೋರ್ಡಿನ ಮೇಲೆ ಕನ್ನಡ ಧ್ವಜ ಶಾಲು ಹಾಸಿಕೊಂಡಿರುತ್ತಾರೆ. ಕೊನೆಗೆ ತಾನೊಬ್ಬ ಕನ್ನಡ ಹೋರಾಟಗಾರ ಸಮಾಜಸೇವಕ ಎಂಬ ಮುಂಗಡ ಪಾವತಿಯೊಂದಿಗೆ ಜಾತಿನಾಯಕರಿಂದ ಮಠಾಧೀಶರಿಂದ ಕೃತಾರ್ತರಾಗಿ ಕಣಕ್ಕಿಳಿದು ಗೆದ್ದು ಉನ್ನತವಾದ ಸಂಸ್ಥೆಗೆ ತಗಲಾಕಿಕೊಂಡು ಶೋಕಿಮಾಡುತ್ತಾರೆ. ಇಂಥವರನ್ನು ಕೂರಿಸಿಕೊಂಡು ಸರಿಯಾಗಿ ಕನ್ನಡದ ವ್ಯಾಕರಣ ವ್ಯಂಜನಗಳ ಬಗ್ಗೆ ಕೇಳಿದರೆ ಇವರ ಕನ್ನಡ ಸಾಹಿತ್ಯದ ಜ್ಞಾನ ಸೋಟಗೊಳ್ಳುತ್ತದೆ. ಕನಿಷ್ಠ ಇಂಥ ಚುನಾವಣೆಗಳ ಪ್ರಕ್ರಿಯೆ
ಗಳಿಗೆ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತದೆ.
ದುರಂತವೆಂದರೆ ಅಂಥ ಚುನಾವಣೆಗೆ ಸ್ಪರ್ಧಿಸುವ ಆಕೃತಿಗಳಿಗೆ ಯಾವ ತರಬೇತಿಗಳೂ ಯೋಗ್ಯತೆಗಳೂ ಇರುವುದಿಲ್ಲ. ಇಂಥವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಬಂದು ಕೂತು ಒಳ್ಳೆಯ ಕನ್ನಡ ಕಾರ್ಯಗಳನ್ನು ಮಾಡುತ್ತಾರೆಯೇ ಎಂದು ನಿರೀಕ್ಷಿಸಿದರೆ, ರಾಜಕೀಯ ಪಕ್ಷಗಳ ಅಣತಿಯಂತೆ ಕುಣಿಯುವುದು, ಕೆಲವು ತಿಕ್ಕಲು ಸಾಹಿತಿಗಳನ್ನು ಮೆರೆಸುವುದು, ಸಂಸ್ಕೃತಿಯೇ ಬೇರೆ ಕನ್ನಡವೇ ಬೇರೆ ಎಂಬ ಅವಿವೇಕತನ ತೋರುವುದು, ಈ ನೆಲದ ಧರ್ಮ ಸಂಸ್ಕೃತಿ ಸಂಸ್ಕಾರ ನಂಬಿಕೆ ವೈಚಾರಿಕತೆಯನ್ನು
ಅವಮಾನಿಸುವ ಕೆಲಸಗಳನ್ನು ಮಾಡುವುದು, ಕೆಲಸಕ್ಕೆ ಬಾರದ ಪುಸ್ತಕಗಳನ್ನು ಹೊರತರುವುದು, ಎಂಥ ಹೇಳಿಕೆ ಕೊಟ್ಟರೆ ಯಾವ ಪಕ್ಷದ ದೊಣ್ಣೆನಾಯಕನಿಗೆ ಅನುಕೂಲ, ಎಂಥ ಹೇಳಿಕೆ ಕೊಟ್ಟರೆ ಯಾವ ಸಂಘಟನೆಗೆ ಮಜಾ ಸಿಗುತ್ತದೆ.
ಪ್ರಶಸ್ತಿ ಪುರಸ್ಕಾರಗಳಿಗೆ ಬಿರುದು ಬಹುಮಾನಗಳಿಗೆ ವರದಿ ಸಮಿತಿಗಳಿಗೆ ಸಮ್ಮೇಳನಗಳಿಗೆ ಯಾರ‍್ಯಾರನ್ನು ಸೂಚಿಸಬೇಕು ಗಿಟ್ಟಿಸಬೇಕು ಎಂಬುದೆಲ್ಲಾ ಅಪಮೌಲ್ಯಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದೇ ಇವರ ಸಾಧನೆಗಳಾಗಿ ಹೋಗುತ್ತದೆ. ಈಗಾಗಲೇ ಆಲೂರು ವೆಂಕಟರಾಯರು ಮಾಸ್ತಿಅಯ್ಯಂಗಾರ್ ಅ.ನ.ಕೃಷ್ಣರಾಯರು ಡಾ.ಚಿಮೂ ಎಸ್.ಎಲ್.ಭೈರಪ್ಪ ಎಲ್‌ಎಸ್
ಶೇಷಗಿರಿರಾವ್ ಸೂರ್ಯನಾಥಕಾಮತರಂಥ ಅನೇಕರನ್ನು ಜಾತಿ ಪಂಥಗಳ ಕಾರಣಗಳಿಂದಾಗಿ ಸಾರಸತ್ವ ಲೋಕದಲ್ಲಿ
ಪ್ರತ್ಯೇಕಿಸಿಕೊಂಡೇ ಬರಲಾಗಿದೆ.
ಇಲ್ಲಿಯವರೆಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದವರ ಒಂದು ಪರ್ವ ಮುಗಿದಿದೆ. ಹಾಲಿ ಅಧ್ಯಕ್ಷರಾದ ಮನು ಬಳಿಗಾರ್ ಅವರು ಕೆಎಎಸ್ ಅಽಕಾರಿಗಳಾಗಿದ್ದರಿಂದ ಅವರಲ್ಲಿ ನಾಡಿನ ಬಗ್ಗೆ ಶ್ರೇಷ್ಠ ಮಟ್ಟದ ಜ್ಞಾನವಿದ್ದು ಕಳಂಕ ರಹಿತವಾಗಿ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಸುದ್ದಿವಾಹಿನಿಗಳಲ್ಲಿ ಮಾಯವಾದ ಮುಖಗಳೆಲ್ಲಾ, ತಾನು ಕನ್ನಡದ ಹೋರಾಟ ಗಾರ ಎಂದು ಹೇಳಿಕೊಂಡವರೆಲ್ಲಾ ಪರಿಷತ್ತಿನ ಗಾದಿ ಹಿಡಿಯುವುದನ್ನು ಕನ್ನಡಿಗರು ಮೌನಸಮ್ಮತಿಸಬೇಕೇ? ಅಸಲಿಗೆ ಸಾಹಿತ್ಯ
ಪರಿಷತ್ತಿಗೆ ಬೇಕಿರುವುದು ಹೋರಾಟಗಾರರಲ್ಲ.
ಬೇಕಿರುವುದು ಭಾಷೆ ಸಾಹಿತ್ಯ ಪಾಂಡಿತ್ಯವುಳ್ಳವರು. ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ಕನ್ನಡವನ್ನು ಬೆಳೆಸಬೇಕಾದ ದೂರ ದೃಷ್ಠಿ ದೂರಾಲೋಚನೆಗಳುಳ್ಳ ಸರಸ್ವತಿ ಪುತ್ರರು. ಪ್ರೇರಣಾದಾಯಕ ಪ್ರಾಮಾಣಿಕವಾದ ಕನ್ನಡದ ಕೆಲಸಗಳೂ, ಅದಕ್ಕೆ ಇಚ್ಛಾಶಕ್ತಿಯುಳ್ಳ ಸಮರ್ಥ ಮೇಧಾವಿಗಳು. ಸಾಮಾನ್ಯ ಕನ್ನಡಿಗರನ್ನೂ ಪರಿಷತ್ತಿನ ಮಟ್ಟಕ್ಕೆ ಸ್ಪಂದಿಸಿಕೊಂಡು ಕನ್ನಡ ಮಹತ್ವವನ್ನು ಮನಗಾಣಿಸುವುದು, ಕನ್ನಡವನ್ನು ಕಡೆಗಣಿಸುವ ಕ್ಷೇತ್ರಗಳಲ್ಲಿ ಕನ್ನಡದ ಮಹತ್ವ ಅವಶ್ಯಕತೆಯ ಅರಿವನ್ನು ಮೂಡಿಸಿ ಕನ್ನಡ ಸಂಸ್ಕೃತಿಯ ಅನುಷ್ಠಾನಗೊಳಿಸುವ ಪ್ರಯತ್ನ ಮಾಡುವುದು.
ಯುವ ಸಮೂಹದಲ್ಲಿ ಸಾಹಿತ್ಯಿಕ ಚಟುವಟಿಕೆಗಳ ಕಾರ್ಯಕ್ರಮಗಳನ್ನು ರೂಪಿಸಿ ಮುಂದಿನ ತಲೆಮಾರಿಗೆ ಕನ್ನಡ ಸಾಹಿತ್ಯ ಕೃಷಿಯನ್ನು ಬೆಳೆಸುವುದು ಇದೆಲ್ಲಾ ಹೊಣೆಗಾರಿಕೆ ಸರಕಾರಗಳಿಗಿಂತ ಸಾಹಿತ್ಯ ಪರಿಷತ್ತಿಗೆ ಬೆಟ್ಟದಷ್ಟಿದೆ. ಆದ್ದರಿಂದ ಕನ್ನಡದ ಸಾಂಸ್ಕೃತಿಕ ಸಂಸ್ಥೆಯಾದ ಪರಿಷತ್ತಿಗೆ ರಾಜಕೀಯದ ಚುನಾವಣೆಗಳಂತೆ ಸಿಕ್ಕಸಿಕ್ಕವರೆಲ್ಲಾ ಸ್ಪರ್ಧಿಸಿ ಆಯ್ಕೆಯಾಗುವಂಥ ಅನರ್ಥ ಪದ್ಧತಿಯನ್ನು ಕೈಬಿಟ್ಟು ಕನ್ನಡ ಸಾಹಿತ್ಯ ಗದ್ಯ ಕಾವ್ಯ ಸಂಶೋಧನೆಗಳಲ್ಲಿ ಮಂಚೂಣಿಯಲ್ಲಿರುವ ಜನಪರಿಚಿತರಾದ ನಾಲ್ವರು ಮೇದಾವಿಗಳನ್ನು ಗುರುತಿಸಿ ಅವರಲ್ಲಿ ಒಬ್ಬರನ್ನು ಸಾರ್ವಜನಿಕವಾಗಿ ಆಯ್ಕೆಮಾಡುವುದು ಉತ್ತಮ.
ಅಂಥವರು ಸಾಮಾನ್ಯರಲ್ಲಿ ಶಾಲಾ ಶಿಕ್ಷಕರಾಗಲಿ, ಹಿರಿಯ ಪತ್ರಕರ್ತರಾಗಲಿ, ಕನ್ನಡ ಅರ್ಚಕರಾದ ಹಿರೇಮಗಳೂರು ಕಣ್ಣನ್, ಗಂಗಾವತಿ ಪ್ರಾಣೇಶ್, ಎಂಎಸ್ ನರಸಿಂಹಮೂರ್ತಿ, ಜಯಂತ ಕಾಯ್ಕಿಣಿ, ಟಿ.ಎನ್.ಸೀತಾರಂ, ಪ್ರೊ.ಕೃಷ್ಣೇಗೌಡರು, ಸಿನಿಮಾ ಕ್ಷೇತ್ರದ ಹಂಸಲೇಖ ಕೆ.ಕಲ್ಯಾಣ್, ವಿ.ಮನೋಹರ್, ಸುಧಾಮೂರ್ತಿಯವರಂಥ ಕನ್ನಡದ ಮೇಲಿನ ಮಮತೆ ಮಮಕಾರ ಸಾಹಿತ್ಯ ಜ್ಞಾನವುಳ್ಳ ಮಹಾನುಭಾವರಿದ್ದಾರೆ.
ಅವರಲ್ಲೇ ಒಬ್ಬರನ್ನು ಕನ್ನಡದ ಪೀಠದಲ್ಲಿ ಕೂರಿಸಿದರೆ ತಮ್ಮ ಸಾಧನೆ ಚಿಂತನೆಗಳಿಂದ ಪರಿಷತ್ತಿಗೆ ಒಳ್ಳೆಯ ಆಯಾಮವನ್ನು ನೀಡಬಲ್ಲರು. ಅಷ್ಟೇ ಏಕೆ ತುಮಕೂರು ವಿಶ್ವವಿದ್ಯಾಲಯದ ಡಾ.ಡಿ.ವಿ.ಪರಮಶಿವಮೂರ್ತಿಗಳಂಥ ಕನ್ನಡ ಶಾಸ್ತ್ರೀಯ ಪಂಡಿತರು ಅನೇಕ ಕ್ರಿಯಾಶೀಲ ಮಂದಿ ನಮಗೆ ಸಿಗುತ್ತಾರೆ. ಸರಕಾರ ಅವರಿಗೆ ವಿಶೇಷ ಕರ್ತವ್ಯದ ನಿಮಿತ್ತ ಪರಿಷತ್ತಿನ ಜವಾಬ್ದಾರಿ ಯನ್ನು ನೀಡಬಹುದಲ್ಲವೇ. ಸಾವಿರಾರು ವರ್ಷಗಳ ಇತಿಹಾಸವಿರುವ ದಶಕಗಳ ಕಾಲ ಹೋರಾಡಿ ಶಾಸ್ತ್ರೀಯ ಭಾಷೆ ಸ್ಥಾನ ಮಾನ ಗಳಿಸಿಕೊಂಡಿರುವ ಕನ್ನಡದ ತೇರನ್ನು ಎಳೆಯಲು ಸಾಹಿತ್ಯಿಕ ಬರಗೆಟ್ಟವರಂತೆ ಚುನಾವಣೆ ನಡೆಸಿ ಪರಿಷತ್ತಿನ ಗಾದಿಕೆ ನಾಲಾಯಕ್ಕು ವೈಟ್ ಅಂಡ್ ವೈಟ್ ಗಿರಾಕಿಗಳನ್ನು ಕೂರಿಸುವುದು ಎಂಥ ಅಪಚಾರ, ಅವಿವೇಕತನವಲ್ಲವೇ?.