Wednesday, 11th December 2024

ಎಲಾನ್‌ ಮಸ್ಕ್‌ಗೆ ಎಲ್ಲವೂ ಆಟವೇ ?!

ಶಿಶಿರ ಕಾಲ

shishirh@gmail.com

ಆತನನ್ನು ಪ್ರಚಂಡ, ಪರಮಹುಚ್ಚ, ದೀಡ್ ಶಾಣ್ಯಾ, ಸೊಕ್ಕಿನ ಮನುಷ್ಯ, ಫೇಕ್, ಬುದ್ಧಿವಂತ, ಮಾಸ್ಟರ್‌ಪೀಸ್ ಎಂದೆಲ್ಲ ಕರೆಯುತ್ತಾರೆ. ನೀವು ಅವನನ್ನು ಟ್ವಿಟರ್‌ನಲ್ಲಿ ಒಂದೇ ದಿನ ಹಿಂಬಾಲಿಸಿದರೂ ಸಾಕು, ‘ಈತ ಏಕಕಾಲದಲ್ಲಿ ಇದೆಲ್ಲವೂ ಹೌದು’ ಎಂದು ನಿಮಗನಿಸಿಬಿಡುತ್ತದೆ. ಆತ ಮತ್ತಾರೂ ಅಲ್ಲ, ಜಗತ್ತಿನ ಅತಿಶ್ರೀಮಂತ ಎಲಾನ್ ಮಸ್ಕ್.

ಆತ ನಮ್ಮ-ನಿಮ್ಮೆಲ್ಲರಂತಲ್ಲ, ನೆಟ್ಟಗಿನ ಅಸಾಮಿಯಂತೂ ಅಲ್ಲವೇ ಅಲ್ಲ. ವಯಸ್ಸು 51. ತನ್ನ ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಹೋಗಿ, ಅಲ್ಲಿ ಸ್ವಂತ ಶ್ರಮದಿಂದ ಇಷ್ಟು ಬೆಳೆದು ನಿಂತವ. ಸ್ಪೇಸ್ ಎಕ್ಸ್, ಟೆಸ್ಲಾ, ಬೋರಿಂಗ್ ಹೀಗೊಂದಿಷ್ಟು ಕಂಪನಿ ಯನ್ನು ಕಟ್ಟಿ ನಿಲ್ಲಿಸಿದವ. ಪೇಪಲ್, ಯೆಲ್ಪ್‌ನಂಥ ಕಂಪನಿ ಹುಟ್ಟುಹಾಕಿ ಆಮೇಲೆ ಅವನ್ನು ಮಾರಿಬಿಟ್ಟವ. ಅವನ ಲೋಕ, ಆಚಾರ-ವಿಚಾರ, ನಂಬಿಕೆ, ಬದುಕು, ಅದನ್ನು ನೋಡುವ ರೀತಿ, ಬದುಕಿನ ಆಸೆ, ಕಾರಣ ಹೀಗೆ ಎಲ್ಲವೂ ವಿಚಿತ್ರ-ವಿಭಿನ್ನ. ಆತನ ಕೆಲವೊಂದು ಹೇಳಿಕೆ ಗಳನ್ನು ಮೊದಲ ಬಾರಿಗೆ ಕೇಳಿದಾಗ ‘ತಮಾಷೆಗಿರಬಹುದು’ ಎಂದೆನಿಸಿದರೂ, ಅವನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಗುತ್ತದೆ.

ಏನು ಬೇಕಾದರೂ ಮಾಡಿಯಾನು ಎಂಬ ಮನುಷ್ಯನೀತ. ಹೇಗೆ ಒಬ್ಬ ಕ್ರಿಮಿನಲ್ ಸಮಾಜದಲ್ಲಿ ಹೊಂದಾಣಿಕೆಯಾಗುವು ದಿಲ್ಲವೋ ಹಾಗೆಯೇ ಒಬ್ಬ ಮಹಾಬುದ್ಧಿವಂತ ಕೂಡ. ಲೆಕ್ಕಮೀರಿದ ಬುದ್ಧಿವಂತಿಕೆಯುಳ್ಳ ವ್ಯಕ್ತಿಯನ್ನು ಸಮಾಜ ಬೇರೆಯದೇ ರೀತಿಯಲ್ಲಿ ಗ್ರಹಿಸುತ್ತದೆ. ‘ಆತ ತುಂಬ ಶಾಣ್ಯಾ, ಆದರೆ ಏನೋ ಸರಿಯಿಲ್ಲ’ ಎಂಬ ಹಣೆಪಟ್ಟಿ ಇಲ್ಲಿ ಸಾಮಾನ್ಯ. ಏಕೆಂದರೆ ಬುದ್ಧಿವಂತಿಕೆಯು ಲೆಕ್ಕದಾಚೆ ಒಂದು ವೈಕಲ್ಯದಂತೆಯೇ ಕಾಣಿಸುತ್ತದೆ. ನಿಜವಾದ ಬುದ್ಧಿವಂತ ಸಮಾಜದಲ್ಲಿ ಸರಿಯಾಗಿ ಅಡ್ಜಸ್ಟ್ ಆಗುವುದಿಲ್ಲ.

ಮಹಾಬುದ್ಧಿವಂತನ ಕೆಲವೊಂದು ನಡೆ-ನುಡಿಗಳನ್ನು ಸಮಾಜವು ಸರಿಯೆಂದು ತೆಗೆದುಕೊಳ್ಳುವುದಕ್ಕಿಂತ ನ್ಯೂನತೆಯಂತೆ ನೋಡುವುದೇ ಹೆಚ್ಚು. ‘ಬುದ್ಧಿವಂತ ನಿಜ, ಆದರೆ ಸ್ವಲ್ಪ ಎಡವಟ್ಟು. ವಿಚಿತ್ರವಾಗಿ ಆಡುತ್ತಾನೆ’ ಎಂಬಿತ್ಯಾದಿ ಹೊಗಳಿಕೆಯು
ಹುಷಾರಿ ವ್ಯಕ್ತಿಗೆ ಸಾಮಾನ್ಯ. ಇದಕ್ಕೆ ಎಲಾನ್ ಮಸ್ಕ್ ಹೊರತಲ್ಲ. ಏಕೆಂದರೆ ಅವನೊಬ್ಬ ಜೀನಿಯಸ್. ಮೇಲಿಂದ ಹುಂಬ, ಹೀಗೆಯೇ ಎಂದು ಲೆಕ್ಕಕ್ಕೆ ಸಿಗದ ಖತರ್ನಾಕ್. ನಾನು ಎಲಾನ್ ಮಸ್ಕ್ ಹೆಸರನ್ನು ಮೊದಲು ಕೇಳಿದಾಗ, ನಂತರ ಆತನ ಜೀವನಕಥೆ ಓದಿದಾಗ, ಆತ ಈಗಿನಷ್ಟು ಶ್ರೀಮಂತ, ದೊಡ್ಡಜನ ಆಗಿರಲಿಲ್ಲ.

ಆದರೆ ಈಗ 20 ವರ್ಷದ ಹಿಂದೆಯೇ ಆತನ ಬಗ್ಗೆ ಏನೇನೋ ವಿಚಿತ್ರ ಸುದ್ದಿಗಳು ಕ್ಯಾಲಿಫೋರ್ನಿಯಾದ ಕೆಲವು ಟೆಕ್ನಾಲಜಿ
ಪತ್ರಿಕೆಗಳಲ್ಲಿ, ಪಾಡ್‌ಕಾಸ್ಟ್‌ಗಳಲ್ಲಿ ಬರುತ್ತಿದ್ದವು. ಆಗಲೇ ಆತನನ್ನು ‘ಇನ್ನೊಬ್ಬ ಸ್ಟೀವ್ ಜಾಬ್ಸ್, ಮತ್ತೊಬ್ಬ ಬಿಲ್ ಗೇಟ್ಸ್, ಮಗದೊಬ್ಬ ನ್ಯೂಟನ್’ ಎಂದೆಲ್ಲ ಕರೆಯಲಾಗುತ್ತಿತ್ತು. ಒಳ್ಳೆಯದಕ್ಕೋ ಅಥವಾ ಕೆಟ್ಟ ಕಾರಣಕ್ಕೋ ಮಸ್ಕ್ ಸದಾ ಸುದ್ದಿ ಯಲ್ಲಂತೂ ಇರುತ್ತಿದ್ದ.

ಹಾಗೆ ನೋಡಿದರೆ, ಎಲ್ಲ ಕಾಲಕ್ಕೂ ಆತನ ಬಗೆಗಿನ ನೆಗೆಟಿವ್ ಸುದ್ದಿಗಳ ಪ್ರಮಾಣವೇ ಜಾಸ್ತಿ. ಅದಕ್ಕೆ ಕಾರಣವೂ ಇದೆ-
ಅವನೊಬ್ಬ ಶುದ್ಧ ತಿಕ್ಕಲು. ‘ಇಲೆಕ್ಟ್ರಿಕ್ ಕಾರು ದೇಶಾದ್ಯಂತ, ಪ್ರಪಂಚದಾದ್ಯಂತ ಓಡಾಡುವಂತೆ ಮಾಡುತ್ತೇನೆ’ ಎಂದು ಆತ ಮೊದಮೊದಲು ಹೇಳಿದಾಗ, ಅವನನ್ನು ಸೀರಿಯಸ್ ಆಗಿ ತೆಗೆದುಕೊಳ್ಳದವರೇ ಜಾಸ್ತಿ. ಆತ ಮಾಡಿದ್ದ ಪ್ರೋಟೋಟೈಪ್ ಕಾರು, ತಯಾರಿಸಿದ ಮೊದಲ ರೋಡ್‌ಸ್ಟರ್ ಕಾರುಗಳು ಲೆಕ್ಕಮೀರಿ ತುಟ್ಟಿಯಾಗಿದ್ದವು.

ಇಲೆಕ್ಟ್ರಿಕ್ ಕಾರು ಹೊಸ ಐಡಿಯಾವೇನಾಗಿರಲಿಲ್ಲ. ಪೆಟ್ರೋಲ್ ಕಾರಿಗಿಂತ ಮೊದಲೇ, ಇವತ್ತಿಗೆ 200 ವರ್ಷ ಹಿಂದೆಯೇ ಇಲೆಕ್ಟ್ರಿಕ್ ಕಾರಿನ ತಯಾರಿಕೆ ಸಾಧ್ಯವಾಗಿತ್ತು. ಅಲ್ಲಿಂದಿಲ್ಲಿಯವರೆಗೂ ಅದೆಷ್ಟೋ ಘಟಾನುಘಟಿ ಕಾರು ತಯಾರಿಕಾ ಕಂಪನಿ ಗಳು ಇಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡಲು ಮುಂದೆಬಂದು ಸೋತಿದ್ದವು, ಮಣ್ಣುಕಚ್ಚಿದ್ದವು. ಇಲೆಕ್ಟ್ರಿಕ್ ಕಾರಿನ ದೊಡ್ಡ ಸಮಸ್ಯೆಯೆಂದರೆ, ಅದನ್ನು ಲಾಂಗ್ ಡ್ರೈವ್‌ಗೆ ಬಳಸುವಂತಿರಲಿಲ್ಲ. ಇಲ್ಲಿಯವರೆಗೆ ಬ್ಯಾಟರಿ ತಂತ್ರಜ್ಞಾನ ಅಷ್ಟೊಂದು ಸುಧಾರಿಸಿರಲಿಲ್ಲ.

ಕಾರು ಕಂಪನಿಗಳಿಗೆ ಇಲೆಕ್ಟ್ರಿಕ್ ಕಾರೆಂದರೆ ‘ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೋಗಿ ಬೀಳುವುದು’ ಎಂದೇ ಆಗಿತ್ತು. ಎಲ್ಲೋ
ಅಲ್ಲಿಲ್ಲಿ ಕೆಲವು ಹೈಬ್ರಿಡ್ ಕಾರುಗಳಿದ್ದವು. ಕೆಲ ಐರೋಪ್ಯ ದೇಶಗಳಲ್ಲಿ ಚಿಕ್ಕಪುಟ್ಟ ಇಲೆಕ್ಟ್ರಿಕ್ ಕಾರುಗಳಿದ್ದರೂ ಅವು ಮನೆಯಿಂದ 10-20 ಮೈಲಿಯಾಚೆ ಹೋಗುತ್ತಿರಲಿಲ್ಲ. ಹಾಗಿರುವಾಗ, ಇಲೆಕ್ಟ್ರಿಕ್ ಕಾರ್ ಎಂದರೆ ಎಲ್ಲರೂ ನಕ್ಕಿದ್ದರು. ಇನ್ನು ಸ್ಪೇಸ್ ಎಕ್ಸ್ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಾಗ ಕೂಡ ಅಷ್ಟೇ, ಇದೇ ಎಲಾನ್ ಮಸ್ಕ್ ತಾನು ಭೂಮಿ ಮೇಲೆ ಸಾಯುವುದಿಲ್ಲ ಎಂದು ಹೇಳಿ ಎಲ್ಲರ ಗಮನ ಸೆಳೆದಿದ್ದ.

‘ನಾನು ಮಂಗಳ ಗ್ರಹದಲ್ಲಿ ವಸಾಹತು ಸ್ಥಾಪಿಸುತ್ತೇನೆ, ಅಲ್ಲಿ ತುಂಬ ಚಳಿ; ಮಂಗಳದ ಧ್ರುವಗಳಲ್ಲಿ ಅಣುಬಾಂಬ್ ಸಿಡಿಸಿದರೆ ಅಲ್ಲಿನ ವಾತಾವರಣ ಮನುಷ್ಯರಿಗೆ ವಾಸಯೋಗ್ಯವಾಗುತ್ತದೆ. ನಾನು ಏಲಿಯನ್ ಅಲ್ಲ, ಆದರೆ ಮೊದಲು ಏಲಿಯನ್ ಆಗಿದ್ದೆ’- ಇದೆಲ್ಲ, ಹೀಗೆಲ್ಲ ಹೇಳುವ ಮಸ್ಕ್ ಅನ್ನು ಎಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು ಎನ್ನುವ ಪ್ರಶ್ನೆ ಮೂಡುತ್ತಿತ್ತು. ಈಗೊಂದು ೫ ವರ್ಷದ ಹಿಂದಿರಬೇಕು, ಒಂದು ದಿನ ಬೆಳಗ್ಗೆ ಎದ್ದು ಆತ ತನ್ನ ಟೆಸ್ಲಾ ಕಂಪನಿ ದಿವಾಳಿ ಘೋಷಿಸಿಕೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದ.

ಇದನ್ನು ನೋಡಿದ ಅದೆಷ್ಟೋ ಹೂಡಿಕೆದಾರರು ಎದೆಬಡಿದುಕೊಂಡು ಸಾಯುವುದೊಂದು ಬಾಕಿ. ಅಂದು ಏಪ್ರಿಲ್ 1- ಇದು
ಏಪ್ರಿಲ್ ಫೂಲ್ ತಮಾಷೆ ಎಂದು ಹೇಳಿದಾಗಲೇ ಅವರಿಗೆಲ್ಲ ಸಮಾಧಾನವಾಗಿದ್ದು. ‘ಇಲೆಕ್ಟ್ರಾನಿಕ್ಸ್ ಅನ್ನು ಬಳಸಿ ನಾನು
ಡ್ರ್ಯಾಗನ್ ಅನ್ನು ತಯಾರಿಸುತ್ತೇನೆ. ಮುಂದೊಂದು ದಿನ ನಾನು ತಯಾರಿಸುವ ಕೃತಕ ಬುದ್ಧಿಮತ್ತೆಯು ಇಡೀ ಜಗತ್ತನ್ನಾಳುವ ಸರ್ವಾಧಿಕಾರಿಯಾಗುತ್ತದೆ’- ಇವೆಲ್ಲ ಎಲಾನ್ ಮಸ್ಕ್‌ನ ಸ್ಯಾಂಪಲ್ ಮಾತುಗಳು.

ದಿನಕ್ಕೊಂದರಂತೆ ಇಂಥ ತಲೆಬುಡವಿಲ್ಲದ ಮಾತು, ಐಡಿಯಾ ಹೇಳುತ್ತಿದ್ದ ಮಸ್ಕ್ ಒಬ್ಬ ದೊಡ್ಡ ಮೋಸಗಾರ, ಪೋಕಳೆ ಎಂಬಿತ್ಯಾದಿಯಾಗಿ ನಂಬಿಕೊಂಡ ದೊಡ್ಡವರ್ಗದ ಮಧ್ಯೆ ಆತನ ಕಂಪನಿಗಳು ಬೆಳೆಯುತ್ತಲೇ ಇದ್ದವು. ಸಿಲಿಕಾನ್ ವ್ಯಾಲಿಯ ಕಂಪನಿಗಳಲ್ಲಿ ಹಣ ತೊಡಗಿಸುತ್ತಿದ್ದ ಶ್ರೀಮಂತರು, ಸಾಹಸೋದ್ಯಮ ಬಂಡವಾಳಗಾರರು, ಆತನ ಅಂಡೆಪಿರ್ಕಿ ಬಾಹ್ಯ ವ್ಯವಹಾರಗಳು, ಸೋಷಿಯಲ್ ಮೀಡಿಯಾ ಡ್ರಾಮಾಗಳ ಮಧ್ಯೆ ಆತನ ಮೇಲಿನ ನಂಬಿಕೆ ಕಳೆದುಕೊಳ್ಳಲಿಲ್ಲ ಎಂದೇ ಹೇಳಬೇಕು. ಏಕೆಂದರೆ ಆತನ ಇತಿಹಾಸ ಅಂಥದ್ದು. ಆಡಾಡುತ್ತಲೇ ಆತ ಮುಟ್ಟಿದ್ದೆಲ್ಲ ಚಿನ್ನ. ಹಾಗಾಗಿಯೇ ಇನ್ನಷ್ಟು ಬಂಡವಾಳ ಹರಿದುಬರತೊಡಗಿತು.

ಎಲಾನ್ ಮಸ್ಕ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲಿ. ನಂತರ ಕೆನಡಾಕ್ಕೆ ಅಣ್ಣನ ಜತೆ ವಲಸೆ ಬಂದು ಅಲ್ಲಿನ ಪೌರತ್ವ ಪಡೆದು,
ನಂತರದಲ್ಲಿ ಅಮೆರಿಕಕ್ಕೆ ಬಂದವನು. ಆಗ ಇಂಟರ್‌ನೆಟ್ ಎಂದರೆ ಎಲ್ಲಿಲ್ಲದ ಅವಕಾಶವೆನ್ನುವ ಸಮಯ. ಅಣ್ಣನ ಜತೆ,
ಇನ್ನೊಬ್ಬ ಸ್ನೇಹಿತನ ಜತೆ ಒಂದು ಚಿಕ್ಕ ಆಫೀಸ್‌ನಲ್ಲಿ ‘ಎಕ್ಸ್ ಡಾಟ್ ಕಾಮ್’ ಎನ್ನುವ ವೆಬ್‌ಸೈಟ್ ಅಭಿವೃದ್ಧಿಪಡಿಸಿ, ಅದನ್ನು ನಂತರ ಮಾರಾಟಮಾಡಿ ಒಂದಿಷ್ಟು ಮಿಲಿಯನ್ ಹಣವನ್ನು ಮಾಡಿದ್ದ ಮಸ್ಕ್. ಆ ವೆಬ್‌ಸೈಟ್ ನಂತರದಲ್ಲಿ ‘ಪೇಪಾಲ್’ ಎನ್ನುವ ಮರುನಾಮಕರಣ ಪಡೆದು ಇಂದಿಗೂ ಅತಿದೊಡ್ಡ ಪ್ರಮಾಣದ, ಇಂಟರ್‌ನೆಟ್ ಮೂಲಕ ಹಣಪಾವತಿ, ವ್ಯವಹಾರ ಮಾಡುವ ಕಂಪನಿಯಾಗಿದೆ.

ಅಲ್ಲಿಂದ ಮುಂದೆ ಆತ ತನ್ನಲ್ಲಿರುವ ಹಣವನ್ನು ಸರಿಯಾಗಿ ದುಡಿಸಿಕೊಂಡ ಮತ್ತು ಹತ್ತಾರು ಕಂಪನಿಗಳಲ್ಲಿ ಹಣ ತೊಡಗಿಸಿದ. ನಂತರದಲ್ಲಿ ಸ್ಪೇಸ್ ಎಕ್ಸ್, ಟೆಸ್ಲಾ ಮೊದಲಾದ ಕಂಪನಿಗಳಲ್ಲಿ ತೊಡಗಿಸಿ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬೆಳೆಸ ತೊಡಗಿದ. ಎಲಾನ್ ಮಸ್ಕ್ ಅನ್ನು ಜಗತ್ತಿನ ಅತಿಶ್ರೀಮಂತನನ್ನಾಗಿಸಿದ್ದು ಟೆಸ್ಲಾ ಕಂಪನಿಯ ಷೇರುಗಳು. ಕೋವಿಡ್ ನಂತರ ದಲ್ಲಿ ಜಗತ್ತಿನ ಬಹುತೇಕ ಕಂಪನಿಗಳ ಷೇರು, ಮಾರುಕಟ್ಟೆ ದಿನದಿಂದ ದಿನಕ್ಕೆ ಕಾರಣವೇ ಇಲ್ಲದೆ ಮೇಲಕ್ಕೇರುತ್ತಿದ್ದವು. ಅದೆಲ್ಲ ಷೇರುಗಳಲ್ಲಿ ಟೆಸ್ಲಾ ಷೇರು ದಿನದಿಂದ ದಿನಕ್ಕೆ ಮೇಲಕ್ಕೇರುತ್ತಲೇ ಹೋಯಿತು.

ಕಾರಣವೇನೆಂದು ಗಟ್ಟಿಯಾಗಿ ಕೇಳಿದರೆ ಯಾರಿಗೂ ಉತ್ತರ ಗೊತ್ತಿಲ್ಲ. ಅದೇ ವೇಳೆಗೆ ಅಮೆರಿಕದ ಸರಕಾರ ಆರ್ಥಿಕ ಸಂಕಷ್ಟದ ಕಾರಣಕ್ಕೆ ಜನರಿಗೆ ಪುಗಸಟ್ಟೆ ಹಣ ನೀಡಲು ಶುರುಮಾಡಿತ್ತು. ಇದರಲ್ಲಿ ಅತಿಹೆಚ್ಚು ಹಣ ರೀಟೇಲ್ ಷೇರುಖರೀದಿಗೆ ಬಳಕೆಯಾಗತೊಡಗಿತು. ಷೇರು ಮಾರುಕಟ್ಟೆಯೆಂದರೆ ಏನೆಂದು ಗೊತ್ತಿಲ್ಲದವರು ಕೂಡ ಟೆಸ್ಲಾ ಷೇರು ಖರೀದಿಸತೊಡಗಿ ದರು.

ಟೆಸ್ಲಾ ಷೇರಿನ ಬೆಲೆ 300 ಡಾಲರ್ ಆಸುಪಾಸಿನಲ್ಲೇ ಕೆಲವರ್ಷ ಇತ್ತು. ಯಾವತ್ತು ಈ ರೀಟೇಲ್ ಹಣ ತೊಡಗಿಸುವವರು ಟೆಸ್ಲಾ ಖರೀದಿಸಲು ಶುರುಮಾಡಿದರೋ, ಅದರ ಬೆಲೆ ಒಂದು ಷೇರಿಗೆ 1200 ಡಾಲರ್‌ವರೆಗೆ ತಲುಪಿತು. ಟೆಸ್ಲಾದಲ್ಲಿ ಹಣ ಹಾಕಿದರೆ ದುಪ್ಪಟ್ಟಾಗುತ್ತದೆ ಎನ್ನುವ ಸುದ್ದಿ ಇನ್ನಷ್ಟು ಜನರು ಇದರಲ್ಲಿ ತೊಡಗಿಸುವಂತೆ ಮಾಡಿತು. 1 ಷೇರನ್ನು 5 ಷೇರಾಗಿ
ವಿಂಗಡಿಸಲಾಯಿತು. ಇದಾದ ನಂತರ ಕೂಡ ಟೆಸ್ಲಾ ಷೇರು ಏರುತ್ತಲೇ ಹೋಯಿತು. ‘ಹುಚ್ಚಿ ಮದುವೆಯಲ್ಲಿ ಉಂಡವನೇ ಜಾಣ’ ಎಂಬಂತೆ, ನೋಡನೋಡುತ್ತಲೇ ಟೆಸ್ಲಾ ಷೇರಿನ ಬೆಲೆ 10 ಪಟ್ಟು ಜಾಸ್ತಿಯಾಗಿತ್ತು.

‘ಜನ ಮರುಳೋ ಜಾತ್ರೆ ಮರುಳೋ’ ಎಂಬಂತೆ ಇದ್ದಕ್ಕಿದ್ದಂತೆ ಟೆಸ್ಲಾ ಕಂಪನಿಯ ಆದಾಯ, ಬೆಲೆ ಕೂಡ 10 ಪಟ್ಟು ಜಾಸ್ತಿಯಾಯಿತು. ಅಂತೆಯೇ ಅದರ ಷೇರನ್ನು ಯಥೇಚ್ಛವಾಗಿ ಹೊಂದಿದ್ದ ಎಲಾನ್ ಮಸ್ಕ್ ಕೂಡ ಶ್ರೀಮಂತನಾಗುತ್ತಲೇ ಹೋದ. ಹೀಗೆ ಅಯಾಚಿತವಾಗಿ ಹರಿದುಬಂದ ಹಣವನ್ನು ಟೆಸ್ಲಾ ತನ್ನ ಕಾರು ತಯಾರಿಕೆಗೆ ಬಳಸಿಕೊಂಡಿತು. ಒಟ್ಟಾರೆ, ಅಕಾರಣವಾಗಿ ಷೇರು ಮಾರುಕಟ್ಟೆಯು ಎಲಾನ್ ಮಸ್ಕ್‌ನನ್ನು ಜಗತ್ತಿನ ಅತಿಶ್ರೀಮಂತನನ್ನಾಗಿಸಿತು.

ಇವೆಲ್ಲದರ ನಡುವೆ ಟೆಸ್ಲಾ ಕಂಪನಿ ಮತ್ತು ಷೇರಿನ ಬಗ್ಗೆ ಎಲಾನ್ ತನ್ನ ಟ್ವಿಟರ್ ಖಾತೆಯಲ್ಲಿ ಯಥೇಚ್ಛವಾಗಿ ಹೇಳಿಕೊಳ್ಳುತ್ತಿದ್ದ. ಕೊನೆಕೊನೆಗೆ ಹೇಗಾಯಿತೆಂದರೆ, ಆತ ಏನು ಹೇಳಿದರೂ ಆ ಕಾರಣಕ್ಕೆ ಮಾರನೆಯ ದಿನ ಟೆಸ್ಲಾ ಷೇರು ಇನ್ನೊಂದಿಷ್ಟು ಮೇಲೇರುತ್ತಿತ್ತು. ಆ ಸಮಯದಲ್ಲಿ ಟ್ವಿಟರ್ ಕಂಪನಿ ಆತನ ಅಕೌಂಟಿಗೆ ಒಂದಿಷ್ಟು ಲಗಾಮುಹಾಕಲು ಮುಂದಾಯಿತು ಎನ್ನುವ ಸುದ್ದಿಯಿದೆ. ಬಹುಶಃ ಇದೇ ಕಾರಣಕ್ಕೋ ಏನೋ, ‘ಟ್ವಿಟರ್ ಸರಿಯಿಲ್ಲ.

ಇದೊಂದು ಕೆಟ್ಟ ವ್ಯವಸ್ಥೆಯ ಅಡಿಯಾಳಾಗಿದೆ’ ಎಂದೆಲ್ಲ ಟ್ವಿಟರ್‌ನಲ್ಲಿ ಕುಳಿತೇ ಅದರ ವಿರುದ್ಧ ಮಾತಾಡಲು ಶುರುಮಾಡಿದ್ದ ಎಲಾನ್ ಮಸ್ಕ್. ಒಂದು ಮುಂಜಾನೆ ಆತ ಇದ್ದಕ್ಕಿದ್ದ ಹಾಗೆ, ‘ನಾನು ಟ್ವಿಟರ್ ಖರೀದಿಸಿದರೆ ಹೇಗೆ ಎಂದು ವಿಚಾರ ಮಾಡು ತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ. ಅದು ಮಿಲಿಯನ್ ಲೆಕ್ಕದಲ್ಲಿ ರೀಟ್ವೀಟ್ ಆಯಿತು. ಆತನ ಮಂಗಾಟಗಳನ್ನು ನೋಡಿ ಕೊಂಡೇ ಬಂದಿದ್ದ ಟ್ವಿಟರ್ ಜಗತ್ತು, ಇದು ಕೂಡ ಒಂದು ಗಿಮಿಕ್ ಎಂದೇ ಅಂದುಕೊಂಡಿತ್ತು.

ಆತ ಟ್ವಿಟರ್‌ನಲ್ಲಿ, ‘ನಾನು ಟ್ವಿಟರ್ ಖರೀದಿಸಿದರೆ ಹೇಗೆ?’ ಎಂದು ಕೇಳಿದಾಗ, ಅದಕ್ಕೆ ಬರೋಬ್ಬರಿ 20 ಮಿಲಿಯನ್ ಮಂದಿ ‘ನೀನೇ ಖರೀದಿಸಬೇಕು’ ಎಂದು ತೀರ್ಪು ಕೊಟ್ಟಿದ್ದರು. ಇದೆಲ್ಲ ತಮಾಷೆ ಎಂದೇ ಎಲ್ಲರೂ ಅಂದುಕೊಂಡಿರುವಾಗ, ಒಂದು ದಿನ ತಾನು ಟ್ವಿಟರ್ ಅನ್ನು ಖರೀದಿಸುವುದು ಶತಸ್ಸಿದ್ಧ ಎಂದು ಟ್ವಿಟರ್‌ನಲ್ಲೇ ಘೋಷಿಸಿಬಿಟ್ಟ ಎಲಾನ್! ಅದಾಗಲೇ ಟೆಸ್ಲಾದ ಷೇರುಬೆಲೆಯಿಂದಾಗಿ ಜಗತ್ತಿನ ಅತಿಶ್ರೀಮಂತನ ಪಟ್ಟ ಎಲಾನ್ ಮಸ್ಕ್‌ನ ಪಾಲಾಗಿ ಆಗಿತ್ತು.

ಇದರಿಂದ ಆತನ ಹುಚ್ಚುಚ್ಚು ಮಾತುಗಳಿಗೆ ಇನ್ನಷ್ಟು ಬೆಲೆ ಬಂದಿತ್ತು. ಒಂದು ದಿನ ಆಡಾಡುತ್ತ ಹೋಗಿ ಟ್ವಿಟರ್ ಖರೀದಿಸುವ ತನ್ನ ಇರಾದೆಯನ್ನು ಎಲಾನ್ ಮಸ್ಕ್ ಟ್ವಿಟರ್ ಕಂಪನಿಯ ಮುಂದಿರಿಸಿದ್ದ. ಟ್ವಿಟರ್ ಅನ್ನು ಪಬ್ಲಿಕ್ ಕಂಪನಿಯಿಂದ ಪ್ರೈವೇಟ್ ಕಂಪನಿಯಾಗಿಸುವುದಾಗಿ ಘೋಷಿಸಿಬಿಟ್ಟಿದ್ದ. ಇದೆಲ್ಲ ಘೋಷಣೆ, ವ್ಯವಹಾರಗಳನ್ನು ಆತ ಟ್ವಿಟರ್‌ನಲ್ಲಿ- ತನ್ನ ಖಾತೆಯಲ್ಲಿಯೇ ಮಾಡಿದ್ದು.

ಅದೇ ಸಮಯದಲ್ಲಿ ಟ್ವಿಟರ್‌ನ ಸುಮಾರು ಶೇ. 10ರಷ್ಟು ಷೇರನ್ನು ಕೂಡ ಆತ ಖರೀದಿಸಿಯಾಗಿತ್ತು. ನೋಡನೋಡುತ್ತಲೇ, ತಮಾಷೆಯಂತಿದ್ದ ಟ್ವಿಟರ್ ಖರೀದಿ ಸತ್ಯವಾಗಬಹುದೇನೋ ಎನಿಸತೊಡಗಿತು. ಯಾವಾಗ ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸುತ್ತಾನೆ ಎಂಬ ಸುದ್ದಿ ಹೊರಬಿತ್ತೋ, ಆಗ ಟ್ವಿಟರ್‌ನ ಷೇರುಬೆಲೆ ಸ್ವಲ್ಪ ಸುಧಾರಿಸಿಕೊಂಡಿತು.

ಅದಾದ ಮೇಲೆ ಟ್ವಿಟರ್ ಕಂಪನಿಯಲ್ಲಿ ಕೆಲವೊಂದು ವಿವರಣೆಗಳನ್ನು ಕೇಳಿದ್ದಾನೆ, ಅದಕ್ಕೆ ಟ್ವಿಟರ್ ಕಂಪನಿ ಸರಿಯಾಗಿ ಉತ್ತರಿ ಸಿಲ್ಲ. ಅದಕ್ಕೆ ಎಲಾನ್ ಒಂದಿಷ್ಟು ಕೋಪಗೊಂಡಿದ್ದು ಎಲ್ಲ ನಡೆಯಿತು. ಪರಾಗ್ ಅಗರ್‌ವಾಲ್ ಆ ಸಮಯದಲ್ಲಿ ಟ್ವಿಟರ್‌ನ ಸಿಇಒ ಆಗಿ ನೇಮಕಗೊಂಡಿದ್ದ. ಆತ ಎಲಾನ್ ಮಸ್ಕ್ ವಿರುದ್ಧ ಸರಣಿ ಟ್ವೀಟ್ ಮಾಡಿ ಅವಮಾನಿಸಿದ್ದೂ ಆಯಿತು. ಟ್ವಿಟರ್ ಯಾವತ್ತೂ, ಮೊದಲಿನಿಂದಲೂ ಫೇಸ್‌ಬುಕ್ ನಂತೆ ಲಾಭ ಮಾಡಿಕೊಂಡು ಬಂದ ಕಂಪನಿಯಲ್ಲ.

ಇಂದಿಗೂ ಫೇಸ್‌ಬುಕ್‌ನಷ್ಟು ಟ್ವಿಟರ್ ಜನಸಾಮಾನ್ಯರಿಗೆ ಆಪ್ತವಾಗುವುದಿಲ್ಲ. ಅದನ್ನು ಬಳಸುವ ವರ್ಗವೇ ಬೇರೆ. ಟ್ವಿಟರ್ ಬಳಕೆದಾರರ ಸಂಖ್ಯೆ ಕೂಡ ಕಡಿಮೆ. ಟ್ವಿಟರ್ ಏನಿದ್ದರೂ ದೊಡ್ಡ ದೊಡ್ಡ ಜನರ ವಿಚಾರಗಳನ್ನು ಎಲ್ಲರಿಗೂ ಹೇಳುವ ಮಾಧ್ಯಮವಾಗಿಯೇ ಇದೆ. ಹೀಗಿರುವಾಗ ಮತ್ತು ಮೊದಲೇ ನಷ್ಟದಲ್ಲಿದ್ದ ಟ್ವಿಟರ್ ಅದಾಗಲೇ ಫೇಕ್ ಅಕೌಂಟ್ ಗಳಿಂದ ತುಂಬಿಹೋಗಿತ್ತು. ಟ್ವಿಟರ್‌ನ ಸುಮಾರು ಶೇ.20ರಷ್ಟು ಬಳಕೆದಾರರು ಮನುಷ್ಯರಲ್ಲ, ಕಂಪ್ಯೂಟರ್ ಮೂಲಕ ಮಾಡಿಕೊಂಡ ಸುಳ್ಳುಖಾತೆಗಳು ಎನ್ನುವುದು ಎಲಾನ್ ಮಸ್ಕ್‌ನ ದೂರಾಗಿತ್ತು. ಅದು ಸುಳ್ಳು ಎಂದು ಟ್ವಿಟರ್ ಕಂಪನಿ ವಾದಿಸಿತು.

ಹೀಗೆ ಟ್ವಿಟರ್ ಮತ್ತು ಎಲಾನ್ ಮಸ್ಕ್ ನಡುವೆ ಜಟಾಪಟಿ ಶುರುವಾಗಿ ವ್ಯವಹಾರ ಮುರಿದುಬಿತ್ತು. ಪರಾಗ್ ಅಗರ್‌ವಾಲ್ ಮೊದಲಾದವರಿಗೆ ಟ್ವಿಟರ್ ಅನ್ನು ನಷ್ಟದಿಂದ ಹೊರತರುವುದು ಜಪ್ಪಯ್ಯ ಎಂದರೂ ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಮತ್ತು ಇಷ್ಟೊಂದು ಪ್ರಮಾಣದಲ್ಲಿ ಫೇಕ್ ಅಕೌಂಟ್ ಹೊಂದಿದ್ದ ಕಾರಣಕ್ಕೆ ತಾನು ಟ್ವಿಟರ್ ಅನ್ನು ಖರೀದಿಸುವುದಿಲ್ಲ ಎಂದು
ಎಲಾನ್ ಮಸ್ಕ್ ಟ್ವಿಟರ್‌ನಲ್ಲೇ ಜಗಜ್ಜಾಹೀರಾಗಿ ಘೋಷಿಸಿಬಿಟ್ಟ.

ಇದರಿಂದಾಗಿ ಟ್ವಿಟರ್ ಯಥೇಚ್ಛ ನಷ್ಟ ಅನುಭವಿಸಬೇಕಾಯಿತು. ‘ನನಗಾದ ನಷ್ಟಕ್ಕೆಲ್ಲ ಎಲಾನ್ ಮಸ್ಕ್ ಕಾರಣ, ಅದನ್ನು ಆತ ೧೦ ಬಿಲಿಯನ್ ಡಾಲರ್ ಕೊಟ್ಟು ಸರಿಮಾಡಿಕೊಳ್ಳಬೇಕು’ ಎಂದು ಟ್ವಿಟರ್ ಕೇಸ್ ಜಡಿಯಿತು. ಈ ಕೇಸ್ ನಡೆಯುತ್ತಿರು ವಾಗಲೇ ಎಲಾನ್ ತಾನು ಟ್ವಿಟರ್ ಅನ್ನು ಖರೀದಿಸುವುದಾಗಿ ಇನ್ನೊಮ್ಮೆ ಘೋಷಿಸಿದ. ಇದಾದ ಮೇಲೆ 44 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಿದ್ದಾಗಿದೆ. ಅಂಕುಶವಿಲ್ಲದ ಸೋಷಿಯಲ್ ಮೀಡಿಯಾದ ಅವಶ್ಯಕತೆ ಜಗತ್ತಿಗಿದೆ; ಆ ಕಾರಣಕ್ಕೆ ತಾನು ಖರೀದಿಸಿರುವುದಾಗಿ ಎಲಾನ್ ಹೇಳಿಕೊಂಡಿದ್ದಾನೆ.

ಅದು ಹೌದು ಎಂದೇ ನಂಬೋಣ. ಖರೀದಿಸಿದ ಮಾರನೆಯ ದಿನವೇ ‘ಪಿಂಕ್‌ಸ್ಲಿಪ್’ ಕೊಟ್ಟು ಅರ್ಧದಷ್ಟು ಕೆಲಸದವರನ್ನು
ಮನೆಗೆ ಕಳಿಸಿದ್ದಾನೆ ಎಲಾನ್. ಆತನ ವ್ಯವಹಾರವೇ ಹಾಗೆ. ಒಂದು ಕಂಪನಿಯನ್ನು ಖರೀದಿಸಿದಾಕ್ಷಣ ಅದರಲ್ಲಿ ಎಲ್ಲ
ದೊಡ್ಡತಲೆಗಳನ್ನು ಮನೆಗೆ ಕಳಿಸಿ, ಮತ್ತೆ ಬುಡದಿಂದ ಬೆಳೆಸಿಕೊಂಡು ಹೋಗುತ್ತಾನೆ. ಇದೆಲ್ಲದರಿಂದ ಒಂದು ಮುಕ್ತ, ಸ್ವತಂತ್ರ, ವಿಷಯ ನಿಯಂತ್ರಿಸದ ಸೋಷಿಯಲ್ ಮೀಡಿಯಾ ಹುಟ್ಟಬಹುದೇ? ನಂಬಿಕೆಯಿದೆ, ಕಾಯಬೇಕಿದೆ.