Tuesday, 17th September 2024

ಈನಾಡುಗೆ 50ರ ಸಂಭ್ರಮ

ಸಾಧನೆ-ಸೊಬಗು

ವಿ.ಹನುಮಂತಪ್ಪ

ಪ್ರಾದೇಶಿಕ ಭಾಷಾ ಪತ್ರಿಕೆಗಳ ಪಾಲಿನ ಪ್ರಭಂಜನದಂತೆ ಜನ್ಮತಳೆದ ‘ಈನಾಡು’ವಿನ ಯಶೋಗಾಥೆ ಒಂದು ರೋಚಕ ಇತಿಹಾಸದಂತೆ ದಾಖಲಾಗಿದೆ. ಆ ದಿನಗಳಲ್ಲಿ ಲಭ್ಯವಿದ್ದ ಕೆಲವು ತೆಲುಗು ದಿನಪತ್ರಿಕೆಗಳು ತುಂಬಾ ವಿಳಂಬವಾಗಿ ಓದುಗರ ಕೈಸೇರುತ್ತಿದ್ದವು. ಆ ಪತ್ರಿಕೆಗಳಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಸುದ್ದಿಗಳಿಗಷ್ಟೇ ಆದ್ಯತೆ ಇರು ತ್ತಿತ್ತು; ಪ್ರಾದೇಶಿಕ, ಸ್ಥಳೀಯ ಸುದ್ದಿಗಳು ಅಪರೂಪವೆಂಬಂತೆ ಅವಕಾಶ ಪಡೆಯುತ್ತಿದ್ದವು.

ತೆಲುಗು ಪತ್ರಿಕಾರಂಗದ ಈ ಸ್ಥಿತಿಯನ್ನು ಮನಗಂಡ ರೈತ ಕುಟುಂಬದ ರಾಮೋಜಿರಾವ್ ಎಂಬ ಬಿಎಸ್ಸಿ ಪದವೀಧರ ಯುವಕ ಒಂದು ಸಾಹಸಕ್ಕೆ  ಹಾಕುವ ಧೈರ್ಯ ತೋರಿದ. ಅದು ೧೯೭೪ರ ಸಂದರ್ಭ. ವಿಶಾಖಪಟ್ಟಣದ ಹೊರವಲಯದಲ್ಲಿರುವ ಸೀತಮ್ಮಧಾರ ಎಂಬ ಪ್ರದೇಶದಲ್ಲಿ ದಿನಪತ್ರಿಕೆ ಯೊಂದು ಚಿಗುರೊಡೆಯಿತು. ಅಂದು ಆಗಸ್ಟ್ ೧೦ರ ಸಂದರ್ಭ. ಪತ್ರಿಕೆಯ ಮುದ್ರಣಕ್ಕೆ ಅಣಿಮಾಡಿಕೊಳ್ಳಲಾಯಿತು. ಬಿಡುಗಡೆ ಸಂದರ್ಭಕ್ಕೆ ವಿಐಪಿಗಳಾರೂ ಇರಲಿಲ್ಲ.

ಪ್ರಿಂಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಕಾರ್ಮಿಕನೇ ಸ್ವಿಚ್ ಆನ್ ಮಾಡಿ ಪತ್ರಿಕೆಯ ಮುದ್ರಣಕ್ಕೆ ನಾಂದಿ ಹಾಡಿದ. ಆಗಸ್ಟ್ ೧೭ರ ಸಂಚಿಕೆ ಮಾರುಕಟ್ಟೆಗೆ ಸಿದ್ಧವಾಯಿತು. ಆರಂಭದ ಮುದ್ರಣ ಸಂಖ್ಯೆ ನಾಲ್ಕು ಸಾವಿರವಷ್ಟೇ. ನಂತರದ್ದು ಇತಿಹಾಸ… ಸೂರ್ಯೋದಯಕ್ಕೆ ಮುನ್ನವೇ ಪತ್ರಿಕೆ ಎಲ್ಲರ ಮನೆಯಲ್ಲಿರಬೇಕು ಎಂದು ಸಂಕಲ್ಪಿಸಿದ್ದರು ಅದರ ಸಂಪಾದಕ ಮತ್ತು ಮಾಲೀಕರಾದ ರಾಮೋಜಿರಾವ್. ಸೂರ್ಯೋದಯರ ನಂತರ, ‘ಈನಾಡು’ ಪತ್ರಿಕೆ ಹಂಚುವ ಪೇಪರ್‌ಬಾಯ್ ಬೀದಿಗಳಲ್ಲಿ ಕಾಣಿಸಬಾರದು ಎಂಬುದು ಅವರ ಮನೋಭೀಷ್ಟೆಯಾಗಿತ್ತು. ಈ ಮೂಲಕ ಪತ್ರಿಕಾ ವಿತರಣೆಯ ವ್ಯವಸ್ಥೆಯಲ್ಲೂ ಕಾಳಜಿ ವಹಿಸಲಾಯಿತು. ಆವರೆಗೆ ಅಥವಾ ಈಗಲೂ ಅನೇಕ ಕಡೆಗಳಲ್ಲಿ ರೂಢಿಯಲ್ಲಿರುವ ಬಸ್, ರೈಲು, ಅಂಚೆ
ಮೂಲಕವಷ್ಟೇ ಪತ್ರಿಕೆಯನ್ನು ತಲುಪಿಸುವ ಪದ್ಧತಿಗೆ ಸಂಪೂರ್ಣವಾಗಿ ಭಿನ್ನವೆನಿಸುವ ಪ್ರಯತ್ನವನ್ನು ಅನುಷ್ಠಾನಗೊಳಿಸಿದುದರ ಕಾರಣಕ್ಕಾಗಿಯೇ ‘ಈನಾಡು’ ಪತ್ರಿಕೆ ಆವರೆಗೆ ಚಾಲ್ತಿಯಲ್ಲಿದ್ದ ಪತ್ರಿಕೆಗಳ ಪ್ರಸಾರವನ್ನು ಅಲ್ಪಾವಧಿಯಲ್ಲೇ ಹಿಂದಿಕ್ಕಿ ಪ್ರಚಂಡ ಜನಪ್ರಿಯತೆಯನ್ನು ದಕ್ಕಿಸಿಕೊಳ್ಳಲು ಸಾಧ್ಯವಾಯಿತು.

ತಮ್ಮೆದುರು ನಡೆಯುವ ಘಟನೆಗಳು ಬೆಳ್ಳಂಬೆಳಗ್ಗೆಯೇ ಸಚಿತ್ರವಾಗಿ ಪ್ರಕಟವಾಗುವುದನ್ನು ಗಮನಿಸಿದ ಓದುಗರು ‘ಈನಾಡು’ ಪತ್ರಿಕೆಗೆ ಫಿದಾ ಆಗುವಂತಾಯಿತು. ಸ್ಥಳೀಯ ಸುದ್ದಿಗಳಿಗೆ ಅಗ್ರಪೀಠ ದೊರಕಿದ್ದು ಕೂಡ ಪತ್ರಿಕೆಯು ಮನೆಮಾತಾಗುವಲ್ಲಿ ತನ್ನದೇ ಆದ ಕೊಡುಗೆ ನೀಡಿತು. ಹೀಗಾಗಿ ಕೆಲವೇ ವರ್ಷಗಳಲ್ಲಿ ‘ಈನಾಡು’ ಪ್ರಸಾರವು ಲಕ್ಷಗಳ ಸಂಖ್ಯೆಯನ್ನು ಮೀರುವಂತಾಗಿ, ಅದು ಪ್ರಾದೇಶಿಕ ಭಾಷಾ ಪತ್ರಿಕೆಗಳ ಇತಿಹಾಸದಲ್ಲೊಂದು ಮೈಲಿಗಲ್ಲು ಎನಿಸಿಕೊಂಡಿತು.

ದೈನಿಕ ಧಾರಾವಾಹಿಗಳ ಪ್ರಕಟಣೆಗೆ ‘ಈನಾಡು’ ಪತ್ರಿಕೆಯೇ ನಾಂದಿಹಾಡಿತು. ಹೆಚ್ಚುಪಾಲು ಸುದ್ದಿಸಂಸ್ಥೆಯ ಸುದ್ದಿಗಳಿಗೇ ಅವಲಂಬಿತವಾಗಿದ್ದ ಆಗಿನ ಪತ್ರಿಕೆಗಳ ಧೋರಣೆಗೆ ಬದಲಾಗಿ ಎಲ್ಲಾ ಕಡೆ ಸ್ವಂತ ಸುದ್ದಿಗಾರರು/ವರದಿಗಾರರನ್ನು ಹೊಂದುವ ಮೂಲಕ ಸುದ್ದಿಸಂಗ್ರಹ ಮತ್ತು ತಾಜಾವಾರ್ತೆಗಳ ಪ್ರಕಟಣೆಗೆ ಮುಂದಾಗಿದ್ದೇ ಪತ್ರಿಕೆಯ ಯಶಸ್ಸಿನ ಪ್ರಮುಖ ಅಂಶವೆನಿಸಿತು. ಪತ್ರಿಕೆಯಲ್ಲಿ ವಿಶೇಷ ಅಂಕಣ ಪುಟಗಳನ್ನು ಆರಂಭಿಸಲಾಯಿತು. ಮಹಿಳೆಯರಿಗಾಗಿ ‘ವಸುಂಧರ’, ಕ್ರೀಡಾಪ್ರೇಮಿಗಳಿಗಾಗಿ ‘ಚಾಂಪಿಯನ್’, ಕೃಷಿಕರಿಗಾಗಿ ‘ಅನ್ನದಾತ’, ವಿದ್ಯಾರ್ಥಿಗಳಿಗಾಗಿ ‘ಪ್ರತಿಭಾ’, ಮಕ್ಕಳಿಗಾಗಿ ‘ಹಾಯ್ ಬುಜ್ಜಿ’, ಆರೋಗ್ಯ ಪುಟವಾಗಿ ‘ಸುಖೀಭವ’, ಯುವಕರಿಗೆ ‘ಈತರಂ’, ಆರ್ಥಿಕ ವಿಷಯಗಳ ‘ಸಿರಿ’ ಹೀಗೆ ವಾರವಿಡೀ ಈ ವಿಶೇಷ ಅಂಕಣ ಪುಟಗಳು ಓದುಗರ ಮನತಣಿಸುವಲ್ಲಿ ಯಶಸ್ವಿಯಾದವು.

ಪತ್ರಿಕೆಗಳ ಸಾಪ್ತಾಹಿಕ ಪುರಾವಣಿಯು ಪತ್ರಿಕೆಯ ಗಾತ್ರದಲ್ಲೇ ಪ್ರಕಟವಾಗುವುದು ವಾಡಿಕೆ. ಆದರೆ ‘ಈನಾಡು’ ತನ್ನ ವಾರದ ಪುರವಣಿಯನ್ನು ನಿಯತಕಾಲಿಕೆಗಳ ಆಕಾರದಲ್ಲಿ ೩೨ ಪುಟಗಳ ಸಂಚಿಕೆಯಾಗಿ ರೆಗ್ಯುಲರ್ ಪತ್ರಿಕೆಯ ಜತೆಗೆ ನೀಡುವುದನ್ನು ಪ್ರಾರಂಭಿಸಿತು. ಇವೆಲ್ಲಕ್ಕೂ ಮುಕುಟಪ್ರಾಯ ವಾದುದೆಂದರೆ ಮಿನಿ ಎಡಿಷನ್‌ಗಳ ಅವತಾರ! ಜಿಲ್ಲಾ ಆವೃತ್ತಿಗಳಿಗೆ ‘ಈನಾಡು’ ಹಾಕಿದ ಶ್ರೀಕಾರವನ್ನೇ ನಂತರ ಇತರ ಪತ್ರಿಕೆಗಳು  (ಕನ್ನಡದ ಪತ್ರಿಕೆಗಳೂ) ಅನುಸರಿಸುವಂತಾಯಿತು. ಆಯಾ ಜಿಲ್ಲೆಗೆ ಸೀಮಿತವಾದ ಸುದ್ದಿ-ಸ್ಟೋರಿಗಳನ್ನು ವಿಶೇಷವಾಗಿ ಬಣ್ಣದ ಪುಟಗಳಲ್ಲಿ ಮುದ್ರಿಸಿ ಓದುಗರಿಗೆ ತಲುಪಿಸುತ್ತಿದ್ದುದು ಒಂದು ಕ್ರಾಂತಿಕಾರಿ ಹೆಜ್ಜೆ ಎನ್ನಬಹುದಾಗಿದೆ.

ಇದು ಆಯಾ ಜಿಲ್ಲೆಯ ಪ್ರಜೆಗಳಿಗೆ ಒಂದು ‘ಮಿನಿ’ ವಿಶ್ವಕೋಶವಿದ್ದಂತೆ. ಸುದ್ದಿ, ರಾಜಕೀಯ, ವಿಜ್ಞಾನ, ಸಿನಿಮಾ, ಅಪರಾಧ ಜಗತ್ತು, ಸೇವಾರಂಗ, ಕ್ರೀಡೆ, ಕೃಷಿ ಹೀಗೆ ‘ಮಿನಿ’ಯಲ್ಲಿ ಪ್ರಕಟವಾಗದ ಕ್ಷೇತ್ರಬರಹಗಳೇ ಇಲ್ಲ. ದಿನದಿಂದ ದಿನಕ್ಕೆ ವಿಕಸನಗೊಂಡಂತೆ ‘ಮಿನಿ’ ಸಂಚಿಕೆಗಳು ಹೊಸ ಹೊಸ ಆಲೋಚನೆಗಳಿಗೆ ದ್ವಾರಗಳನ್ನು ತೆರೆದುಕೊಂಡವು. ‘ಈನಾಡು’ ಪತ್ರಿಕೆಗೆ ಇದೀಗ ೫೦ರ ಸಂಭ್ರಮ. ಪತ್ರಿಕೆಯಾಗಿ ಅಸಾಧಾರಣ ಪ್ರಗತಿ ಕಂಡಿರುವುದರ ಜತೆಗೆ ಪತ್ರಕರ್ತರಿಗೆ ತರಬೇತಿ ನೀಡಲಿಕ್ಕೆಂದೇ ‘ಈನಾಡು ಜರ್ನಲಿಸಂ ಸ್ಕೂಲ್’ ಆರಂಭಿಸಲಾಗಿದೆ. ವರದಿಗಾರರಿಗೆ ಕೈಪಿಡಿಯಾಗಿ ‘ಸಮೀಕ್ಷಾ’ ಎಂಬ ಖಾಸಗಿ ಪ್ರಸಾರದ ಪತ್ರಿಕೆಯನ್ನು ಒದಗಿಸಲಾಗಿದ್ದು ಅದು ವರದಿಗಾರರ ಕಾರ್ಯನಿರ್ವಹಣೆಯ ಕೈಗನ್ನಡಿಯಾಗಿ ಪ್ರೇರಣೆ ನೀಡುತ್ತಿದೆ. ಸಾಮಾಜಿಕ ಸೇವಾ
ಚಟುವಟಿಕೆಗಳಲ್ಲೂ ತನ್ನ ಛಾಪು ಒತ್ತಿರುವ ‘ಈನಾಡು’ ಪತ್ರಿಕೆ, ಪಾನನಿಷೇಧ ಚಳವಳಿಯಲ್ಲೂ ಪ್ರಮುಖ ಪಾತ್ರ ವಹಿಸಿದೆ.

ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ‘ಸೂರ್ಯ’ ಹೆಸರಿನಲ್ಲಿ ನಿರಾಶ್ರಿತರಿಗೆ ಸೂರನ್ನು ನಿರ್ಮಿಸಿಕೊಟ್ಟಿದೆ. ಚಂಡಮಾರುತ, ಭೂಕಂಪಪೀಡಿತರಿಗೆ ಸಹಾಯಹಸ್ತ ನೀಡುವಲ್ಲೂ ಮುಂಚೂಣಿಯಲ್ಲಿದೆ. ಪತ್ರಿಕಾರಂಗಕ್ಕಾದ ಅನ್ಯಾಯದ ವಿರುದ್ಧದ ಹೋರಾಟಗಳಲ್ಲೂ ಮತ್ತು ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸುವಲ್ಲೂ ‘ಈನಾಡು’ ಅಕ್ಷರಾಯುಧವಾಗಿ ಅಗ್ರಗಣ್ಯ ನಿಲುವನ್ನು ತೋರ್ಪಡಿಸಿದೆ. ಆಂಧ್ರ ವಿಸ್ವವಿದ್ಯಾಲಯದಲ್ಲಿ ‘ಈನಾಡು’ ಪ್ರಮಾಣೀಕೃತ ಪತ್ರಿಕೆಯಾಗಿ ಬೋಧಿಸಡುತ್ತಿದೆ.

ಪತ್ರಿಕೆಯ ಸಂಸ್ಥಾಪಕ ರಾಮೋಜಿರಾವ್ ಅವರ ನಿರಂತರ ಪ್ರಯತ್ನ, ದಣಿವರಿಯದ ದುಡಿಮೆ, ಬದ್ಧತೆ ಇವೆಲ್ಲದರಿಂದಾಗಿಯೇ ‘ಈನಾಡು’ ಇಂದಿಗೂ
ಪ್ರಾದೇಶಿಕ ಭಾಷಾ ಪತ್ರಿಕೆಗಳ ಸಾಲಿನಲ್ಲಿ ಅಗ್ರಗಣ್ಯತೆಯನ್ನು ಮೆರೆಯಲು ಸಾಧ್ಯವಾಗಿದೆ ಎನ್ನಬಹುದು. ಬೆಂಗಳೂರು, ಚೆನ್ನೈ ಸೇರಿದಂತೆ ೨೧ ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದ್ದು ಪ್ರಸ್ತುತ ೨೦ ಲಕ್ಷಕ್ಕೂ ಹೆಚ್ಚು ಪ್ರಸಾರದ ದಾಖಲೆಯನ್ನು ಹೊಂದಿರುವ ‘ಈನಾಡು’ ಓದುಗರ ಸಂಖ್ಯೆಯು ಒಂದೂವರೆ ಕೋಟಿಯನ್ನು ಮುಟ್ಟಿದೆ ಎಂಬುದು ಕೂಡ ಗಮನಾರ್ಹ. ಇದು ಎಷ್ಟೋ ಪತ್ರಿಕೆಗಳ ಪಾಲಿಗೆ ಅನುಕರಣೀಯ ಸಾಧನೆಯೂ ಹೌದು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *