Friday, 13th December 2024

ನಾಮಫಲಕಗಳೆಲ್ಲ ಇಂಗ್ಲಿಷ್ ಮಯವಾಗಿರುವುದು ಹಾಗೂ ಕನ್ನಡ ಮಾಯವಾಗಿರುವುದರ ಹಿಂದೆ – ಮುಂದೆ !

ಇದೇ ಅಂತರಂಗ ಸುದ್ದಿ

vbhat@me.com

ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಕನ್ನಡ ನಾಮಫಲಕಕ್ಕಾಗಿ ಆಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಅಧ್ಯಕ್ಷ ನಾರಾಯಣ
ಗೌಡರ ಬಂಧನವನ್ನು ನೂರಾರು ಕನ್ನಡ ಸಂಘಟನೆಗಳು ಖಂಡಿಸಿವೆ. ಬಂಧಿತ ಕನ್ನಡ ಹೋರಾಟಗಾರರನ್ನುಬಿಡುಗಡೆಗೊಳಿಸದಿದ್ದರೆ ಬೆಂಗಳೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿವೆ.

ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕನ್ನಡಸಂಘಟನೆಗಳೆಲ್ಲ ಒಂದಾಗಿವೆ. ರಾಜ್ಯದಲ್ಲಿ ಕನ್ನಡ ನಾಮಫಲಕಗಳಿಗೆ ಒತ್ತಾಯಿಸುತ್ತಿರುವ ಈ ಹೋರಾಟ ಸರಿಯಾಗಿದೆ. ಆದರೆ ಕನ್ನಡಸಂಘಟನೆಗಳು ಕಾನೂನನ್ನು ಕೈಗೆ ಎತ್ತಿಕೊಳ್ಳದೇ, ಹಿಂಸಾ ಚಾರಕ್ಕಿಳಿಯದೇ, ಒಂದು ಸಂಯಮ ಮತ್ತು ಶಿಸ್ತಿನ ನೆಲೆಯಲ್ಲಿ ಈ
ಹೋರಾಟವನ್ನುಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಇದು ಎಲ್ಲರ ಆಶಯ ಮತ್ತು ಆಗ್ರಹ. ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ, ಆಂಗ್ಲ ಫಲಕಗಳೇ ರಾರಾಜಿಸುತ್ತಿವೆ. ಇಂಗ್ಲಿಷ್‌ನಲ್ಲಿ ದೊಡ್ಡಕ್ಷರಗಳಲ್ಲಿ ಬೋರ್ಡ್ ಬರೆಯಿಸುವುದು, ಅದರ ಕೆಳಗೆ ತೀರಾ ಸಣ್ಣಕ್ಷರಗಳಲ್ಲಿ ಕನ್ನಡದಲ್ಲಿ ಬರೆಯಿಸುವುದು ಸಾಮಾನ್ಯಾವಾಗಿಬಿಟ್ಟಿದೆ.

ಇನ್ನು ಕೆಲವೆಡೆ ಕನ್ನಡವನ್ನು ನಾಮಫಲಕಗಳಲ್ಲಿ ಕೈಬಿಟ್ಟಿzರೆ. ಬೆಂಗಳೂರಿನ ಬೀದಿಗಳಲ್ಲಿ ಓಡಾಡುವಾಗ, ನಾವು ನ್ಯೂಯಾರ್ಕಿನ, ಲಂಡನ್‌ನ ಇದ್ದೇವಾ ಎಂಬ ಸಂದೇಹ ಬಂದರೆ ಆಶ್ಚರ್ಯವಿಲ್ಲ. ಕಾಟಾಚಾರಕ್ಕೆ ಕನ್ನಡ ಎನ್ನುವಂತಾಗಿರುವುದು ಸುಳ್ಳಲ್ಲ. ಫಲಕಗಳಲ್ಲಿ ಕನ್ನಡ ಪ್ರಧಾನವಾಗಿರಬೇಕು ಎಂಬ ನಿಯಮ,
ಉಲ್ಲಂಘನೆಯ ಆಚರಣೆಯಾಗುತ್ತಿದೆ. ಹೊಟೇಲುಗಳಲ್ಲಿರುವ ಮೆನು ಸಹ ಕನ್ನಡದಲ್ಲಿರಬೇಕು ಎಂಬ ಸೂಚನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿದ್ದರೂ,
ಯಾರೂ ಅದನ್ನು ಪಾಲಿಸುತ್ತಿಲ್ಲ. ಚಂದ್ರಶೇಖರ ಪಾಟೀಲರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ, ಆಂಗ್ಲ ಫಲಕಗಳ ವಿರುದ್ಧ ಸಮರ ಸಾರಿದ್ದರು. ಅದಾದ ಬಳಿಕ, ಕೆಲವು ಸಂಘಟನೆಗಳು ಅಲ್ಲಲ್ಲಿ ಹೋರಾಟ ನಡೆಸಿದ್ದರೂ ಚಳವಳಿ ಇಷ್ಟು ಉಗ್ರರೂಪ ತಾಳಿರಲಿಲ್ಲ ಮತ್ತು ಈ ಕುರಿತು ಯಾರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಆದರೆ ನಾರಾಯಣ ಗೌಡರು ಈ ಹೋರಾಟಕ್ಕೆ ಮತ್ತೊಮ್ಮೆ ಕಾವು ನೀಡಿದ್ದಾರೆ. ಅವರಿಗೆ ಮತ್ತು ಅವರ ಜತೆಗೆ ಕೈಜೋಡಿಸಿರುವ ಇತರ ಕನ್ನಡ ಸಂಘಟನೆಗಳಿಗೆ ಸಮಸ್ತ ಕನ್ನಡಿಗರು ಬೆಂಬಲ ನೀಡುವುದು ಕರ್ತವ್ಯ. ಅದು ಅವರದ್ದೊಂದೇ ಹೋರಾಟವಲ್ಲ ಮತ್ತು ಇದರಲ್ಲಿ ಅವರ ಹಿತಾಸಕ್ತಿ ಏನೂ ಇಲ್ಲ. ಈ ಕಾರಣದಿಂದ ಈ ಹೋರಾಟ ಯಶಸ್ಸುಗೊಳಿಸುವುದರಲ್ಲಿ ಕನ್ನಡದ ಹಿತಾಸಕ್ತಿಯಿದೆ. ಜಗತ್ತಿನ ಯಾವ ದೇಶಕ್ಕೆ ಹೋದರೂ, ಅಲ್ಲಿನ ಸ್ಥಳೀಯ ಭಾಷೆಯೇ ನಾಮಫಲಕಗಳಲ್ಲಿ ರಾರಾಜಿಸುತ್ತವೆ. ಇಂಗ್ಲಿಷಿನ ತವರೂರಾದ ಲಂಡನ್‌ನಿಂದ ಕೇವಲ ಒಂದು ತಾಸಿನ ವಿಮಾನ ಪ್ರಯಾಣದ ದೂರದಲ್ಲಿರುವ ಪ್ಯಾರಿಸ್, ಜರ್ಮನಿಯಲ್ಲಿ
ಆಂಗ್ಲ-ಲಕಗಳನ್ನು ಕಾಣಲು ಸಾಧ್ಯವಿಲ್ಲ. ಭಾರತದಿಂದ ಅರ್ಧ ಗಂಟೆಯಷ್ಟು ಸಮಯದ ಅಂತರದಲ್ಲಿರುವ ಕಝಕಸ್ತಾನ, ಕಿರಗಿಜಸ್ತಾನ, ಉಜಬೆಕಿಸ್ತಾನದಲ್ಲೂ ಆಂಗ್ಲ ಫಲಕಗಳಿಲ್ಲ.

ಬೇರೆ ದೇಶಗಳಿಂದ ಬರುವ ಪ್ರವಾಸಿಗರಿಗೆ ಕಷ್ಟವಾದರೂ ಸರಿಯೇ, ಈ ದೇಶಗಳಲ್ಲಿ ತಮ್ಮ ಭಾಷೆಯನ್ನು ಬಿಟ್ಟರೆ, ಸಂಪರ್ಕ ಭಾಷೆಯಾಗಿ ಇಂಗ್ಲಿಷಿಗೆ ಮಾನ್ಯತೆ ನೀಡಿಲ್ಲ. ಸ್ಥಳೀಯ ಭಾಷೆ ಗೊತ್ತಿಲ್ಲದಿದ್ದರೆ, ಈ ದೇಶಗಳಲ್ಲಿ ವ್ಯವಹರಿಸುವುದು ಕಷ್ಟವೇ. ಆದರೂ ಅವರು ತಮ್ಮ ಭಾಷಾ ಪ್ರೀತಿಯಲ್ಲಿ ರಾಜಿ ಮಾಡಿಕೊಂಡಿಲ್ಲ. ಎಟಿಎಂಗೆ ಹೋಗಿ ಹಣ ತೆಗೆಯುವಾಗ ಸ್ಥಳೀಯ ಕಝಕ್ ಮತ್ತು ರಷ್ಯನ್ ಗೊತ್ತಿದರೆ ಮಾತ್ರ ಸಲೀಸು. ಕಾರಣ ಕಂಪ್ಯೂಟರ್ ಪರದೆ ಮೇಲೆ ಇಂಗ್ಲಿಷ್ ಆಯ್ಕೆಯೇ ಇಲ್ಲ.

ಇದರಿಂದ ಅನ್ಯ ದೇಶೀಯರಿಗೆ ಅನಾನುಕೂಲವಾದರೂ ಸರಿ, ಆದರೆ ತಮ್ಮ ಭಾಷೆಯನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ. ಭಾಷೆಯ ವಿಷಯದಲ್ಲಿ ಇಸ್ರೇಲಿಗಳು ವಿಶ್ವಕ್ಕೇ ಮಾದರಿ. ಒಬ್ಬ ಯಹೂದಿ ಮತ್ತೊಬ್ಬನ ಜತೆ ವ್ಯವಹರಿಸುವುದು ಹೀಬ್ರೂ ಭಾಷೆಯ. ವಾಟ್ಸಾಪ್ ಸಂದೇಶ ಕಳಿಸುವುದೂ ಆ ಭಾಷೆಯ. ಹಾಗೆಂದು ಆ ಇಬ್ಬರೂ ಇಂಗ್ಲಿಷಿನಲ್ಲಿ ಚೆನ್ನಾಗಿ ವ್ಯವಹರಿಸಬಲ್ಲರು. ಭಾಷೆ ವಿಷಯದಲ್ಲಿ ಅವರಂಥ ಜಿಗುಟರು ಯಾರೂ ಇಲ್ಲ. ಈ ಕಾರಣದಿಂದ ಒಂದು ಕಾಲಕ್ಕೆ ಸತ್ತು ಹೋದ ಹೀಬ್ರೂ ಭಾಷೆಗೆ ಅವರು ಮರುಜೀವ ನೀಡಿದ್ದಾರೆ. ಭಾಷೆಯನ್ನು ಸಾಯಿಸಿ, ತಾವು ಬದುಕಿದ್ದೂ ಪ್ರಯೋ ಜನವಿಲ್ಲ ಎಂಬುದನ್ನು ಯಹೂದಿಯರು ಅರಿತುಕೊಂಡಿದ್ದಾರೆ.

ಹೀಗಾಗಿ ಹೀಬ್ರೂಗೆ ಅಗ್ರತಾಂಬೂಲ. ಇಸ್ರೇಲಿಗೆ ಯಾವುದೇ ಬಹುರಾಷ್ಟ್ರೀಯ ಕಂಪನಿಗಳು ಬರಬಹುದು, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು, ಆದರೆ ಅವು ಹೀಬ್ರೂ ಭಾಷೆಯಲ್ಲಿ ತಮ್ಮ ಹೆಸರನ್ನು ಬರೆಯಬೇಕು, ಉತ್ಪನ್ನಗಳ ಹೆಸರನ್ನು ಹೀಬ್ರೂ ಭಾಷೆಯಲ್ಲಿ ನಮೂದಿಸಬೇಕು ಮತ್ತು ಇದಕ್ಕೆ ಒಪ್ಪಿದರೆ ಮಾತ್ರ ದೇಶದೊಳಗೆ ಕಾಲಿಡಬೇಕು ಎಂಬ ಕಟ್ಟುನಿಟ್ಟಿನ ನಿಯಮವನ್ನು ಹಾಕಿಯೇ ಒಳಗೆ ಸೇರಿಸಿಕೊಳ್ಳುತ್ತದೆ. ಪೆಪ್ಸಿ, ಕೋಲಾ, ಗೂಗಲ್, ಕಾಲ್ಗೇಟ್, ಮೈಕ್ರೋಸಾಫ್ಟ್ ನಂಥ ಕಂಪನಿಗಳು ಹೀಬ್ರೂ ಕಲಿತು ಇಸ್ರೇಲಿನೊಳಗೆ ಕಾಲಿಡುವಂತಾಗಿದೆ.

ಅದು ಜಗತ್ತಿನ ಎಷ್ಟೇ ಬಲಾಢ್ಯ ಕಂಪೆನಿಯಾಗಿರಲಿ, ಮೊದಲು ಹೀಬ್ರೂ ಕಲಿತು ಬನ್ನಿ ಎಂದು ಇಸ್ರೇಲ್ ಖಡಾಖಡಿ ಹೇಳುತ್ತದೆ. ಈ ವಿಷಯದಲ್ಲಿ ರಾಜಿ
ಪ್ರಶ್ನೆಯೇ ಇಲ್ಲ. ನಾಳೆ ‘ವಿಶ್ವವಾಣಿ’, ಇಸ್ರೇಲ್ ಆವೃತ್ತಿ ಆರಂಭಿಸಲು ಬಯಸಿದರೆ, ಆ ದೇಶ ಅನುಮತಿ ನೀಡುತ್ತದೆ. ಆದರೆ ವಿಶ್ವವಾಣಿ ಹೀಬ್ರೂ ಭಾಷೆಯಲ್ಲಿರ ಬೇಕಷ್ಟೇ. ಈ ನಿಯಮ ವಿಶ್ವವಾಣಿಗೊಂದೇ ಅಲ್ಲ. ರೀಡರ್ಸ್ ಡೈಜೆನಂಥ ಜಗತ್ತಿನ ಪ್ರತಿಷ್ಠಿತ ಪತ್ರಿಕೆ ಇಸ್ರೇಲಿನಲ್ಲಿ ಹೀಬ್ರೂ ಆವೃತ್ತಿ ಮೂಲಕ ಪ್ರವೇಶ ಪಡೆ
ದಿದೆ. ಇದು ಎಲ್ಲ ಪತ್ರಿಕೆಗಳಿಗೂ ಅನ್ವಯ. ನೀವು ಇಸ್ರೇಲಿನ ಟೆಲ್ ಅವಿವ್‌ನಲ್ಲಿರುವ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಗೆ ಹೋದರೆ ಅಲ್ಲಿನ ತೊಂಬತ್ತರಷ್ಟು ಪುಸ್ತಕಗಳು ಹೀಬ್ರೂ ಭಾಷೆಯಲ್ಲಿರುವುದನ್ನು ಕಾಣಬಹುದು.

ಒಂದು ಮೂಲೆಯಲ್ಲಿ ಹತ್ತಾರು ಇಂಗ್ಲಿಷ್ ಪುಸ್ತಕಗಳು ಕಾಣಿಸುತ್ತವೆ. ತಮ್ಮ ದೇಶದಲ್ಲಿ ಇಂಗ್ಲಿಷ್ ಜಾಗ ಯಾವುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
ಹಾಗಂತ ಆ ದೇಶ ಜಗತ್ತಿನಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಇಂಗ್ಲಿಷ್ ಭಾಷೆಗೆ ತನ್ನನ್ನು ಮಾರಿಕೊಂಡಿಲ್ಲ. ಅವರಿಗೆ ಇಂಗ್ಲಿಷ್ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ತಮ್ಮ ಮಾತೃಭಾಷೆ ಮೇಲೆ ಅಪರಿಮಿತ ಅಭಿಮಾನ, ಉತ್ಕಟ ಪ್ರೀತಿ. ಭಾಷೆಯನ್ನು ಜೀವಂತವಾಗಿಡಲು ಅದೊಂದೇ ಮಾರ್ಗ
ಎಂಬುದನ್ನು ಅವರು ಕಲಿತುಕೊಂಡಿದ್ದಾರೆ. ಜಗತ್ತಿನಾದ್ಯಂತ ಸುಮಾರು ತೊಂಬತ್ತು ಲಕ್ಷ ಇಸ್ರೇಲಿಗಳಿದ್ದಾರೆ.

ಹೀಬ್ರೂ ಮಾತಾಡುವವರ ಸಂಖ್ಯೆಯೂ ಅಷ್ಟೇ, ತೊಂಬತ್ತು ಲಕ್ಷ. ಇಬ್ಬರು ಯಹೂದಿಗಳು ಭೇಟಿಯಾದರೆ, ಅವರ ಮಧ್ಯೆ ಇಂಗ್ಲಿಷ್ ಇಣುಕುವುದಿಲ್ಲ. ಅವರಿಗೆ ಅದು ಅಸ್ತಿತ್ವದ ಪ್ರಶ್ನೆ. ಹೀಗಾಗಿ ತಮ್ಮ ದೇಶದಲ್ಲಿ ಅವರು ಹೀಬ್ರೂ ಫಲಕಗಳಿಗೆ ಪ್ರಾಧಾನ್ಯ ನೀಡಿದ್ದಾರೆ. ಇಸ್ರೇಲ್ ಬಿಟ್ಟರೆ ಅತಿ ಹೆಚ್ಚು ಹೀಬ್ರೂ ಭಾಷಿಕರಿರುವುದು ಅಮೆರಿಕದಲ್ಲಿ. ಅಲ್ಲೂ ಅವರು ತಮ್ಮ ಭಾಷೆಯನ್ನು ಜೀವಂತವಾಗಿಟ್ಟಿದ್ದಾರೆ. ಎಲ್ಲಿ ಅವಕಾಶ ಸಿಗುವುದೋ ಅಲ್ಲ ಹೀಬ್ರೂವನ್ನು ತೋರಿಸುತ್ತಾರೆ. ಒಬ್ಬ ಹೀಬ್ರೂ ಯಾವ ದೇಶಕ್ಕೆ ಹೋಗಲಿ, ಅಲ್ಲಿಗೆ ಅವನ ಸಂಸಾರ ಹಿಂಬಾಲಿಸದಿರಬಹುದು, ಆದರೆ ಹೀಬ್ರೂ ಮಾತ್ರ ಹಿಂಬಾಲಿಸುತ್ತದೆ.

ಇಸ್ರೇಲ್ ಮತ್ತು ಹೀಬ್ರೂಗೆ ಹೋಲಿಸಿದರೆ, ಕರ್ನಾಟಕ ಮತ್ತು ಕನ್ನಡ ದೊಡ್ಡದು. ಆದರೆ ಹೀಬ್ರೂ ಭಾಷೆಗೆ ಯಾವ ಅಪಾಯವೂ ಇಲ್ಲ. ಈ ಮಾತನ್ನು ಕನ್ನಡದ ವಿಷಯದಲ್ಲಿ ಹೇಳುವಂತಿಲ್ಲ. ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುತ್ತಿದ್ದೇವೆ. ಇಂಗ್ಲೀಷಿನಲ್ಲಿ ಮಾತಾಡಲು ಕನ್ನಡಿಗರು ಪೈಪೋಟಿ ನಡೆಸಿzರೆ.
‘ನನ್ನ ಕನ್ನಡ ಸರಿಯಿಲ್ಲ, ಹೀಗಾಗಿ ಇಂಗ್ಲೀಷಿನಲ್ಲಿ ಮಾತಾಡುತ್ತೇನೆ’ ಎಂದು ಹೇಳುವುದರಲ್ಲಿ ಕನ್ನಡಿಗರು ಆನಂದವನ್ನು ಕಾಣುತ್ತಿದ್ದಾರೆ. ಕನ್ನಡ ಬರುವುದೆಂದು ಗೊತ್ತಿದ್ದರೂ, ಇಬ್ಬರು ಕನ್ನಡಿಗರು ಇಂಗ್ಲಿಷಿನಲ್ಲಿ ಮಾತನ್ನು ಆರಂಭಿಸುತ್ತಾರೆ. ಕನ್ನಡಿಗರ ಮಾತೃಭಾಷೆಯಲ್ಲಿ ಇಂಗ್ಲಿಷ್ ಪದಗಳ ಕಲಬೆರಕೆ ಜಾಸ್ತಿಯಾಗಿದೆ. ಕನ್ನಡ ಭಾಷೆಯ ಮಹತ್ವದ ಕುರಿತು ಮಾತಾಡಿದರೆ, ‘ನಮ್ಮನ್ನು ಕನ್ನಡದ ಕಂಬಕ್ಕೆ ಕಟ್ಟಿ ಹಾಕಿ ತುಳಿಯುತ್ತೀರಾ? ಇಂಗ್ಲಿಷ್ ಕಲಿತವರೆಲ್ಲ ಫಾರಿನ್‌ನಲ್ಲಿ ಮಜಾ ಮಾಡುತ್ತಿzರೆ, ಕನ್ನಡ ಕಲಿತವರುಹಳ್ಳಿಯಲ್ಲಿದ್ದಾರೆ.

ಹೀಗಾಗಿ ನಮಗೂ ಇಂಗ್ಲಿಷ್ ಬೇಕು’ ಎಂದು ಸ್ವತಃ ಕನ್ನಡಿಗರೇ ಹೇಳುತ್ತಿರುವುದು ಬರಲಿರುವ ದಿನಗಳು ಕನ್ನಡಕ್ಕೆ ಅದೆಷ್ಟು ಮಾರಕವಾಗಿ ಪರಿಣಮಿಸಬಹುದು
ಎಂಬುದರ ಸುಳಿವು ನೀಡುತ್ತಿದೆ. ಇವೆಲ್ಲವುಗಳ ಒಟ್ಟೂ ಪರಿಣಾಮ ಬೆಂಗಳೂರಿನಲ್ಲಿ ನಾಮಫಲಕಗಳೆಲ್ಲ ಇಂಗ್ಲಿಷ್ ಮಯವಾಗಿರುವುದು ಮತ್ತು ನಾಮಫಲಕಗಳಲ್ಲಿ ಕನ್ನಡಮಾಯವಾಗಿರುವುದು! ಹೀಗಾಗಿ ಇದು ಕೇವಲ ನಾಮಫಲಕಗಳ ಸಮಸ್ಯೆಯೊಂದೇ ಅಲ್ಲ. ಕನ್ನಡಕ್ಕೆ ಬಂದೆರಗುತ್ತಿರುವ ಅಪಾಯದಮುನ್ಸೂಚನೆ. ಇದಕ್ಕೆ ಅನ್ಯ ಭಾಷಿಕರನ್ನು ದೂರಿ ಫಲವಿಲ್ಲ. ಕನ್ನಡದ ಈ ಸ್ಥಿತಿಗೆ ಯಾರನ್ನಾದರೂ ಬೊಟ್ಟು ಮಾಡಿ ತೋರಿಸುವುದಾದರೆ, ಅದು ಕನ್ನಡಿಗರನ್ನೇ. ಕನ್ನಡಕ್ಕೆ ಮೊದಲು ‘ನಾಮ’ ಇಟ್ಟವರೇ ಇಂಗ್ಲಿಷ್ ವ್ಯಾಮೋಹಿ ಕನ್ನಡಿಗರು. ಈ ಮನಃಸ್ಥಿತಿ ನಾಮಫಲಕಗಳಲ್ಲಿ ಪ್ರತಿಬಿಂಬಿತವಾಗಿದೆ ಅಷ್ಟೇ.

ಕರ್ನಾಟಕದಲ್ಲಿ ಇರುವುದು ಇಂಗ್ಲಿಷ್ ಸರಕಾರವಲ್ಲ. ವಾರನ್ ಹೇಸ್ಟಿಂಗ್ ಅದರ ಮುಖ್ಯಮಂತ್ರಿಯೂ ಅಲ್ಲ. ಆದರೂ ಕನ್ನಡದ ವಿಷಯದಲ್ಲಿ ಎಲ್ಲ ಸರಕಾರಗಳದೂ ಅಸಡ್ಡೆ. ಕರ್ನಾಟಕಕ್ಕೆ ಕಾಲಿಡುವ ಕಂಪೆನಿಗಳೆಲ್ಲ ‘ಕನ್ನಡ’ದಲ್ಲಿ ವ್ಯವಹರಿಸಬೇಕು ಎಂದು ಕಿವಿ ಹಿಂಡಿ ಸ್ವಾಗತಿಸಲುಏನು ಸಮಸ್ಯೆ? ತಮ್ಮ ಉತ್ಪನ್ನಗಳ ಮೇಲೆ
ಕನ್ನಡ ಭಾಷೆಯಲ್ಲಿಯೇ ಬರೆಯಬೇಕು ಎಂದು ವಿದೇಶಿ ಕಂಪನಿಗಳಿಗೆ ಹೇಳಿದರೆ, ಅವುಖಂಡಿತವಾಗಿಯೂ ಅದನ್ನು ಪಾಲಿಸುತ್ತವೆ. ಅವರಿಗೆ ಭಾಷೆಗಿಂತ ಹಣ ಮಾಡುವುದು ಮುಖ್ಯ. ಆದರೆ ನಮ್ಮ ಸರಕಾರಗಳು ಹಾಗೆಹೇಳುವುದಿಲ್ಲ. ಹೇಳಿದರೂ, ಆ ನಿಯಮ ಜಾರಿಯಾಗುತ್ತಿದೆಯಾ ಎಂದು ಗಮನಿಸುವುದಿಲ್ಲ.

ಸರಕಾರಕ್ಕೆ ಪುರುಸೊತ್ತಿಲ್ಲ ಅಂದರೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಿಬಿಎಂಪಿ ಏನು ಮಾಡುತ್ತಿವೆಯೋ ಗೊತ್ತಿಲ್ಲ. ಅದೇನೇ ಇರಲಿ, ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಏಳು ಕೋಟಿ ಕನ್ನಡಿಗರ ಅಸ್ಮಿತೆಯ ಮತ್ತು ಅಸ್ತಿತ್ವದ ಪ್ರಶ್ನೆ. ಕನ್ನಡಕ್ಕಾಗಿ ಹೋರಾಡುವ ಸಂಘಟನೆಗಳ
ಕಾರ್ಯಕರ್ತರನ್ನು ಸರಕಾರ ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು. ಅವರೇನು ವೈರಿಗಳಲ್ಲ. ಅವರ ಅಂತರ್ಗತ ಭಾವನೆಗಳನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಇಸ್ರೇಲ್ ಮಾದರಿಯನ್ನು ಕೃಷಿಗೆ ಮಾತ್ರ ಅಲ್ಲ, ಕನ್ನಡ ಭಾಷೆಗೂ ಅನ್ವಯಿಸಬೇಕು.

ಬದುಕು ಬದಲಿಸಿದ ೧೫೦೦ ರುಪಾಯಿ ಪಾಟೀಲ ಪುಟ್ಟಪ್ಪ(ಪಾಪು)ನವರು ಅಮೆರಿಕದಿಂದ ಮರಳಿದ ಬಳಿಕ, ಕರ್ನಾಟಕದ ಇದ್ದು ಕನ್ನಡ ಪತ್ರಿಕೋದ್ಯಮದಲ್ಲಿ
ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿದರು. ಆದರೆ ಅವರ ಮುಂದೆ ಇದ್ದ ದಾರಿಗಳೆಲ್ಲವೂ ಬಂದ್ ಆಗಿದ್ದವು. ಕಾರಣ ಏನೇಮಾಡುವುದಿದ್ದರೂ ಹಣಕಾಸಿನ ನೆರವು ಬೇಕಿತ್ತು. ಅದು ಪಾಪು ಅವರಲ್ಲಿ ಇರಲಿಲ್ಲ. ಆ ದಿನಗಳಲ್ಲಿ :ಸಂಯುಕ್ತ ಕರ್ನಾಟಕ’ದ ಮೊಹರೆ ಹನುಮಂತರಾಯರು, ‘ಪಾಪು ಅವರಿಗೆ, ನೀವೊಂದು ವಾರಪತ್ರಿಕೆಯನ್ನೇಕೆ ಆರಂಭಿಸಬಾರದು? ಈ ದಿನಗಳಲ್ಲಿ ವಾರಪತ್ರಿಕೆಗೆ ಬೇಡಿಕೆ ಇದೆ.

ಮನಸ್ಸು ಮಾಡಿದರೆ ನೀವೊಂದೇ ಆ ವಾರಪತ್ರಿಕೆಯನ್ನು ಬರೆದುತುಂಬಿಸಬಲ್ಲಿರಿ’ಎಂದು ಹೇಳಿದರು. ಇದು ಪಾಪು ಅವರಿಗೆ ಭಾರಿ ಆತ್ಮವಿಶ್ವಾಸವನ್ನು ಮೂಡಿಸಿತು. ಆಗ ಅವರು ಆ ನಿಟ್ಟಿನಲ್ಲಿ ಪ್ರಯತ್ನವನ್ನುಆರಂಭಿಸಿದರು. ಆ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಒಂದು ಮುದ್ರಣಾಲಯ ಮುಚ್ಚಿದೆ ಮತ್ತು ಅದು ಬಾಡಿಗೆಗೆ ಸಿಗುತ್ತದೆ ಎಂಬ ವಿಷಯ ಪಾಪು ಅವರಿಗೆ ಗೊತ್ತಾಯಿತು. ಆ ಮುದ್ರಣಾಲಯವನ್ನು ಪಡೆಯಲು ಒಂದೂವರೆ ಸಾವಿರ ರುಪಾಯಿ ಠೇವಣಿ ಇಡಬೇಕೆಂದೂ, ಪ್ರತಿ ತಿಂಗಳು ಮುನ್ನೂರೈವತ್ತು ರುಪಾಯಿ ಬಾಡಿಗೆ ಕೊಡಬೇಕೆಂದೂ ಅದರ ಮಾಲೀಕರು ಹೇಳಿದರು.

ಇದಕ್ಕಾಗಿ ಪಾಪು ಅವರಿಗೆ ಒಂದು ತಿಂಗಳು ಗಡುವು ನೀಡಿದರು. ಆ ದಿನಗಳಲ್ಲಿ ಒಂದೂವರೆ ಸಾವಿರ ರುಪಾಯಿ ಹೊಂದಿಸುವುದು ಸುಲಭದ ಮಾತಾಗಿರಲಿಲ್ಲ. ಹತ್ತಾರು ಕಡೆಗಳಲ್ಲಿ ಪ್ರಯತ್ನಿಸಿದರೂ, ಒಂದೂವರೆ ಸಾವಿರ ರುಪಾಯಿ ಸಂಗ್ರಹಿಸಲು ಪಾಪು ಅವರಿಗೆ ಆಗಲಿಲ್ಲ. ಸಹಾಯ ಯಾಚನೆಗಾಗಿ ಅವರ ಮುಂದೆ ಅನೇಕರ ಹೆಸರುಗಳು ಸುಳಿದು ಹೋದವು. ಆದರೆ ಸ್ನೇಹಿತರ ಮುಂದೆ ಹಣಕ್ಕಾಗಿ ಕೈಯೊಡ್ಡಬೇಕಲ್ಲ ಎಂದು ಅವರಿಗೆ ಹಿಂಸೆ ಆಗುತ್ತಿತ್ತು. ಅಲ್ಲಿಗೆ ಅವರು ಸುಮ್ಮನೆ ಕುಳಿತು ಬಿಡುತ್ತಿದ್ದರು.

ಒಂದು ದಿನ ಅವರು ತಮ್ಮ ಸ್ನೇಹಿತನ ಆಫೀಸಿಗೆ ಹೋದರು. ಅವರ ಸ್ನೇಹಿತರು ಆಫೀಸಿನಿಂದ ಹೊರಗೆ ಹೋಗುವ ಧಾವಂತ ದಲ್ಲಿದ್ದರು. ಪಾಪು ಅವರನ್ನು ನೋಡುತ್ತಲೇ, ‘ಬನ್ನಿ, ಬನ್ನಿ, ಒಟ್ಟಿಗೆ ಊಟ ಮಾಡೋಣ. ನೀವು ಆಗಮಿಸಿದ್ದು ಸಂತೋಷವಾಯಿತು. ನನ್ನ ಕಾರ್ಯಕ್ರಮವನ್ನು ಮುಂದೂಡುತ್ತೇನೆ’ ಎಂದು
ಹೇಳಿದರು. ಆದರೆ ಅವರಿಗಿಂತ ಪಾಪು ಅವರೇ ಅವಸರದಲ್ಲಿದ್ದರು. ‘ನೋಡಿ, ನಾನೊಂದು ವಾರಪತ್ರಿಕೆ ಆರಂಭಿಸಬೇಕು ಎಂದು ನಿರ್ಧರಿಸಿದ್ದೇನೆ. ಅದನ್ನು ಮುದ್ರಿಸಲು ಮುದ್ರಣಾಲಯವೊಂ ದನ್ನು ಗೊತ್ತುಮಾಡಿದ್ದೇನೆ. ಅದಕ್ಕಾಗಿ ನನಗೆ ಈಗ ಒಂದೂವರೆ ಸಾವಿರ ರುಪಾಯಿ ಅಗತ್ಯವಿದೆ. ಆ ಹಣವನ್ನು ನಾನು ನಿಮಗೆ
ವಾಪಸ್ ಮಾಡುತ್ತೇನೆ, ಆದರೆ ಯಾವಾಗ ಎಂಬುದನ್ನು ಹೇಳಲಾರೆ. ನೀವು ಕೊಡುವ ಆ ಹಣ ವಾಪಸ್ ಬರುವುದಿಲ್ಲ, ಗಂಗಾ ನದಿಗೆ ಚೆಲ್ಲುತ್ತಿದ್ದೇನೆ ಎಂಬ ಭಾವನೆಯಿಂದ ಕೊಡಿ’ ಎಂದು ಬೇಡಿಕೊಂಡರು.

ಅವರಿಗೆ ಏನನಿಸಿತೋ ಏನೋ? ತಕ್ಷಣ ಒಳಗೆ ಹೋಗಿ ಒಂದೂವರೆ ಸಾವಿರ ರುಪಾಯಿ ತಂದು, ‘ಪಾಟೀಲ ಪುಟ್ಟಪ್ಪನವರೇ, ನನಗೆ ನಿಮ್ಮ ಸಾಮರ್ಥ್ಯ ಏನೆಂಬುದು ಚೆನ್ನಾಗಿ ಗೊತ್ತಿದೆ. ಖಂಡಿತ ನೀವು ಯಶಸ್ವಿ ಆಗುತ್ತೀರಿ. ನಿಮ್ಮ ಸೇವೆಯನ್ನು ಮಾಡುವ ಅವಕಾಶವನ್ನು ನನಗೆಕೊಟ್ಟಿದ್ದೀರಲ್ಲ, ಅದು ನನ್ನ ಭಾಗ್ಯ’ ಎಂದು ಹೇಳಿದರು. ಆ ಕ್ಷಣ ಪಾಪು ತಮ್ಮ ಕಣ್ಣು-ಕಿವಿಗಳನ್ನು ನಂಬಲಿಲ್ಲ. ಅಂದ ಹಾಗೆ ಪಾಪು ಸ್ನೇಹಿತರ ಹೆಸರು ವಿ.ಕೆ.ಪಾಟೀಲರು. ಅವರು ಹುಬ್ಬಳ್ಳಿಯಲ್ಲಿ ಖ್ಯಾತ ತೆರಿಗೆ ಸಲಹೆಗಾರರಾಗಿದ್ದರು.

ಆ ದಿನಗಳಲ್ಲಿ ಪಾಪು ಪತ್ರಿಕೋದ್ಯಮದಲ್ಲಿ ಹೆಸರು ಮಾಡಿರಲಿಲ್ಲ. ಆದರೆ ಈ ಹುಡುಗ ಮುಂದೊಂದು ದಿನ ಉತ್ತಮ ಸಾಧನೆ ಮಾಡಬಹುದುಎಂಬ ವಿಶ್ವಾಸ ಪಾಟೀಲರಿಗಿತ್ತು. ‘ಒಂದು ವೇಳೆ ವಿ.ಕೆ.ಪಾಟೀಲರು ನನಗೆ ಆ ದಿನ ಒಂದೂವರೆ ಸಾವಿರ ರುಪಾಯಿ ಕೊಡದಿದ್ದರೆ, ಪ್ರಾಯಶಃ ನಾನು ಸ್ವಂತ ಪತ್ರಿಕೆ ಮಾಡುವ ಸಾಹಸಕ್ಕೆ ಮುಂದಾಗುತ್ತಿರಲಿಲ್ಲವೇನೋ? ನನ್ನ ಪತ್ರಿಕೋದ್ಯಮ ಬದುಕಿಗೆ ಬುನಾದಿ ಹಾಕಿಕೊಟ್ಟ ಅವರುಪ್ರಾತಃ ಸ್ಮರಣೀಯರು, ಪೂಜಾರ್ಹರು’ ಎಂದು ಪಾಟೀಲ ಪುಟ್ಟಪ್ಪನವರು ಅವರನ್ನು ಅನೇಕ ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದಾರೆ