Friday, 13th December 2024

ಇತರ ಮುಖಗಳಿಗಿಂತಲೂ ಈಶ್ವರಪ್ಪ ಮೇಲು

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ನಮ್ಮ ದೇಶದ ಸನಾತನ ಧರ್ಮದಲ್ಲಿ ಕುಲಕಸುಬು ಆಧರಿತ ವೃತ್ತಿಯಿಂದ ದೊರೆಯುವ ಗೌರವ ಹೆಮ್ಮೆ ಧನ್ಯತಾ ಭಾವದಲ್ಲಿನ ಜಾತಿ ವ್ಯವಸ್ಥೆಯಿಂದ ವ್ಯಕ್ತಿ ಆಧರಣೀಯ ನಾಗುತ್ತಾನೆ. ಪರಂತು, ಕೇವಲ ಜಾತಿಯಿಂದಲೇ ಪೂಜಿತನಾಗುವುದಿಲ್ಲ. ಒಂದು ಶುಭಕಾರ್ಯ ಕ್ಕಾಗಲಿ ಅಥವಾ ಸಾವು, ಮಣ್ಣು, ತಿಥಿ, ಸಮಾರಾಧನೆ ಕಾರ್ಯಕ್ಕಾಗಲಿ ಎಲ್ಲಾ ಕಸುಬಿನ ವ್ಯಕ್ತಿಗಳ ಸಾಮಾಜಿಕ ಕರ್ತವ್ಯಗಳ ಫಲಗಳು ಸಮ್ಮಿಲನಗೊಂಡು ಆ ಮೂಲಕ ಜಾತಿಗಳು ಮಹತ್ವ ಪಡೆದುಕೊಳ್ಳುತ್ತದೆ.

ಆದರೆ ಜಾತಿಯಿಂದಲೇ ಯಾವ ಅಯೋಗ್ಯನೂ, ಅವಿವೇಕಿಯೂ ಮಹತ್ವ ಪಡೆದುಕೊಳ್ಳುವುದು ಸಮಾಜದಲ್ಲಿ ಅಸಹಜ ಮತ್ತು ಅನೈತಿಕ ವೆನಿಸುತ್ತದೆ. ನೋಡಿ, ಕರ್ನಾಟಕದಲ್ಲಿ ರಾಜಕೀಯವೆಂಬುದು ಜಾತಿಗಳ ಗಾಲಿಗಳ ಮೇಲೆಯೇ ಚಲಿಸುವಂತಾಗಿದೆ. ಜಾತಿಗಳ ಹಂಗಿಲ್ಲದೇ ರಾಜಕೀಯ – ರಾಜಕಾರಣ – ಆಡಳಿತಕ್ಕೆ ಅಸ್ತಿತ್ವವೇ ಇಲ್ಲವೆಂಬಂತೆ ಆಗಿಹೋಗಿದೆ. ಕರೋನಾ ಸೋಂಕು ಇಳಿಮುಖ ವಾಗುತ್ತಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಹಿಂದೆ ಭಯಾನಕ ಜಾತಿ ಲೆಕ್ಕಾಚಾರಗಳು ಒಬ್ಬರಿಂದೊಬ್ಬರಿಗೆ ಹರಡುತ್ತಿದೆ. ಬಿಜೆಪಿಗೆ ನಾಡಿನಲ್ಲಿ ವೀರಶೈವ – ಲಿಂಗಾಯತ ಜಾತಿಯೇ ತೆಂಡೂಲ್ಕರ್ ಸ್ಕೋರಿನಂತೆ ಅನಿವಾರ್ಯ ವಾಗಿದೆ.

ಗಂಗೂಲಿ – ದ್ರಾವಿಡ್ – ಲಕ್ಷ್ಮಣ್‌ರಂತೆ ಗೆಲುವಿಗೆ ಸಾಧ್ಯವಾದಷ್ಟು ಕೊಡುಗೆ ನೀಡಿದರೂ ತೆಂಡೂಲ್ಕರ್ ಅಂಕಗಳೇ ನಿರ್ಣಾಯಕ ವಾಗಿದೆ. ಹೀಗಾಗಿ ಯಡಿಯೂರಪ್ಪನವರ ವೀರಶೈವ – ಲಿಂಗಾಯತ ಜಾತಿಯೇ ಬಿಜೆಪಿ ಗರ್ಭಗುಡಿಗೆ ಪ್ರತಿಷ್ಠಾಪನ ಮೂರ್ತಿಯಾಗಿದ್ದು, ಉಳಿದ ಜಾತಿ ನಾಯಕರೆ ಉಪದೈವಗಳು, ಉತ್ಸವಮೂರ್ತಿ ಗಳು, ನವಗ್ರಹಗಳಂತೆ ನಂತರದ ಸ್ಥಾನದಲ್ಲಿದೆ. ಯಡಿಯೂರಪ್ಪ ನವರನ್ನು
ಹೊರತು ಪಡಿಸಿ ಅದೇ ಜಾತಿಯಲ್ಲಿ ಇನ್ನಾರಿದ್ದಾರೆ ಎಂದು ಹೈಕಮಾಂಡ್ ಪ್ರಶ್ನೆ ಮಾಡಿಕೊಂಡ ಕೂಡಲೇ ಕೇವಲ ಜಾತಿಯ ಪ್ರಮಾಣ ಪತ್ರವೊಂದನ್ನು ನೇತುಹಾಕಿಕೊಂಡು ಹೊಸ ಸೂಟು, ಸಫಾರಿ ಹೊಲಿಸಿಕೊಂಡು ತಯಾರಾಗಿ ನಿಂತಿದ್ದಾರೆ ಕೆಲವರು. ಒಂದು ರಾಜ್ಯದ ಮುಖ್ಯಮಂತ್ರಿ ಯಾಗಿ ಆಡಳಿತ ನಡೆಸಲು ಕೇವಲ ಜಾತಿಯೇ ಮೇರು ಮಾನದಂಡವಾಗುವುದು ಎಷ್ಟು ಸರಿ?.

ಇಷ್ಟಕ್ಕೂ ಯಡಿಯೂರಪ್ಪನವರನ್ನು ನಾಡಿನ ಪ್ರಜೆಗಳು ಗುರುತಿಸಿರುವುದು ಅವರ ಹುಟ್ಟು ಹೋರಾಟ, ಸಾಮಾಜಿಕ ಕಳಕಳಿ, ದೇಶ – ಧರ್ಮ – ರೈತರ ಪರವಾದ ಬದ್ಧತೆ, ಎಲ್ಲಾ ಜಾತಿಗಳನ್ನು ಹತ್ತಿರವಾಗಿಸಿಕೊಂಡ ಅವರಲ್ಲಿನ ಪಕ್ವ ರಾಜಕಾರಣವೇ ಹೊರತು ಕೇವಲ ಅವರ ಜಾತಿಯಿಂದಲ್ಲ. ಆದರೆ ಇಂದು ಅವರನ್ನು ಕೆಳಗಿಳಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಯಮಸಾಹಸ ವೆಂಬಂತೆ
ಹೈಕಮಾಂಡ್‌ಗೆ ಇಲ್ಲಿನ ಪೋಷಕ ನಟರು ತಪ್ಪು ಸಂದೇಶ ವನ್ನು ಬಿತ್ತಿದ್ದಾರೆ. ಇದರಿಂದಾಗಿ ಯಡಿಯೂರಪ್ಪನವರನ್ನು ಕೆಳಗಿಳಿಸಿದರೂ ಅನ್ಯ ಜಾತಿಯ ಸಮರ್ಥ ಮತ್ತು ಲಾಯಕ್ಕು ವ್ಯಕ್ತಿ ಯನ್ನು ಮುಖ್ಯಮಂತ್ರಿಯಾಗಿ ಕೂರಿಸುವುದೇ ಅಸಾಧ್ಯವೆಂಬಂಥ ವಾತಾವರಣವನ್ನು ನಿರ್ಮಿಸಿದ್ದಾರೆ.

ಇದು ಪ್ರಜಾಪ್ರಭುತ್ವದಲ್ಲಿನ ದೋಷ ವಲ್ಲವೇ?. ಸದ್ಯಕ್ಕೆ ಯಡಿಯೂರಪ್ಪನವರನ್ನು ಹೊರತು ಪಡಿಸಿದರೆ ಅವರಷ್ಟೇ ಪಕ್ವವಾಗಿರುವ, ಬಿಜೆಪಿಯ ಮೂಲ ಸಿದ್ಧಾಂತಗಳನ್ನು ಮುನ್ನಡೆಸಿಕೊಂಡು ಹೋಗುವಂಥ ವ್ಯಕ್ತಿ ಇನ್ನಾರಿದ್ದಾರೆಂದು ಕೇಳಿದರೆ ಅದಕ್ಕೆ ಕೆ.ಎಸ್.ಈಶ್ವರಪ್ಪ ಇದ್ದಾರೆಂದರೆ, ಅದರಲ್ಲಿ ಅಲ್ಲಗೆಳೆಯವಂಥದ್ದು, ಆಶ್ಚರ್ಯ ಪಡುವಂಥದ್ದೇನೂ ಇಲ್ಲ. ಏಕೆಂದರೆ ಈಶ್ವರಪ್ಪನವರು ಯಡಿಯೂರಪ್ಪನವರ ಸಮಕಾಲೀನ ನಾಯಕ. ದಶಕಗಳ ಕಾಲದ ಅವರಿಬ್ಬರ ಜೋಡಿ ಬಿಜೆಪಿ ಬೆಳೆಯುವುದರಲ್ಲಿ ಪ್ರಮುಖ ಪಾತ್ರವಹಿಸಿದೆ.

ಇವರಷ್ಟೇ ಮಣ್ಣುಹೊತ್ತ ಅನಂತಕುಮಾರ್ ಅವರು ಜಾತಿಕಾರಣ ದಿಂದ ಹಿನ್ನಡೆದರು. ಈಶ್ವರಪ್ಪನವರು ಆರಂಭ ದಿಂದಲೂ ಅಖಿಲ
ಭಾರತ ವಿದ್ಯಾರ್ಥಿ ಪರಿಷತ್ತು, ಸಂಘಪರಿವಾರ ದಿಂದಲೇ ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಂಡವರು. ಈಗಲೂ ಅವರು ಗಣ ವೇಷಧಾರಿಯಾಗಿ ನಿಂತರೆ ಅವರು ಪಕ್ಕಾ ಕೋಮುವಾದಿಯೇ!. ಉತ್ತರ ಕರ್ನಾಟಕವಿರಲಿ, ಮಂಡ್ಯ, ಮೈಸೂರು ಪ್ರಾಂತ್ಯವಿರಲಿ ಅಥವಾ ಕರಾವಳಿ, ಮಲೆನಾಡಿರಲಿ ಬಿಜೆಪಿಯಲ್ಲಿ ಯಡಿಯೂರಪ್ಪನವರಷ್ಟೇ ಈಶ್ವರಪ್ಪನವರ ಪರಿಚಯವಿದೆ.

ಬೆಳಗಾವಿಯಾಗಲಿ, ಬಾದಾಮಿ – ಬಳ್ಳಾರಿಯಾಗಲಿ, ರಾಮನಗರ – ಚಾಮರಾಜನಗರ, ಮಂಡ್ಯವೇ ಆಗಲಿ ಎಡೆಯೂ ಕುರುಬ ಸಮಾಜದ ಮಂದಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಇನ್ನು ಮಂಗಳೂರು ಮಲೆನಾಡಿನಲ್ಲಿ ಬಿಜೆಪಿಗೆ ಭದ್ರ ಸ್ಥಾನವಿರಲು ಕಾರಣ ಅಲ್ಲಿ ಬಲವಾದ ಪ್ರಾಮಾಣಿಕವಾದ ಹಿಂದುತ್ವದ ಆಶಯಗಳಿದ್ದರೆ ಸಾಕು. ಅಲ್ಲಿ ಜಾತಿಗಳ ಭೇದವೇ ಇಲ್ಲ. ಈ ವಿಚಾರದಲ್ಲಿ ಯಡಿಯೂರಪ್ಪ
ನವರನ್ನು ಬಿಟ್ಟರೆ ಈಶ್ವರಪ್ಪನವರೇ ಹೆಚ್ಚು ಪ್ರಚಲಿತ. ಬಿಜೆಪಿ ಹೈಕಮಾಂಡ್ ಪಕ್ಷದ ಯಾವುದೇ ಆಯಕಟ್ಟಿನ ಸ್ಥಾನಗಳಲ್ಲಿ ಸಂಘ ಪರಿವಾರದ ಹಿನ್ನೆಲೆ ಯುಳ್ಳವರನ್ನು ಜಾತಿಭೇದಗಳಿಲ್ಲದೇ ನೇಮಿಸುವುದು ತತ್ತ್ವ, ಸಿದ್ಧಾಂತ.

ಹಾಗೆಯೇ ಈಶ್ವರಪ್ಪನವರು ಯಡಿಯೂರಪ್ಪನವರಿಗಿಂತ ಸಂಘ ಪರಿವಾರದ ಸೆಳೆತವನ್ನು ಜತನದಿಂದ ಕಾಪಾಡಿಕೊಂಡು ಬಂದವರು. ಈಶ್ವರಪ್ಪನವರು ಕೊಂಚ ಮುಂಗೋಪಿ. ಆತುರದ ವ್ಯಕ್ತಿತ್ವ ಹೊಂದಿದ್ದರೂ ಅವರಲ್ಲಿ ಪ್ರಜ್ಞಾ ಪೂರ್ವಕ, ಉದ್ದೇಶಪೂರ್ವಕ ಭ್ರಷ್ಟತನ ಕೆಡುಕು ದುಷ್ಟತನವಿಲ್ಲ. ಬುದ್ಧಿಗೆ ತೋಚಿದ್ದು, ಬಾಯಿಗೆ ಬಂದದ್ದು ಮಾತಾಡಿ ಬಿಡುತ್ತಾರೆಯೇ ಹೊರತು ಡೀಲುಗಳನ್ನು ಬ್ಲ್ಯಾಕ್‌ಮೇಲ್‌ ಗಳನ್ನು ಮಾಡುವಂಥ ಮತಿಹೀನತೆ ಇಲ್ಲವೆಂದೇ ಹೇಳಬಹುದು.

ಹಾಗೆ ನೋಡಿದರೆ ಯಡಿಯೂರಪ್ಪ ನವರೇ ಪರಮ ಮುಂಗೋಪಿಯಾಗಿದ್ದು ಒಮ್ಮೆ ಕೆಜೆಪಿ ಕಟ್ಟಿ ಪಕ್ಷದ ಹೊಸಿಲು ದಾಟಿದರು. ಇನ್ನು
ಜಾತಿಯ ವಿಚಾರಕ್ಕೆ ಬಂದರೆ ಈಶ್ವರಪ್ಪನವರಲ್ಲಿ ಸ್ವಜಾತಿ ವ್ಯಾಮೋಹ ಸ್ವಜಾತಿ ದಾಸೋಹವಂತೂ ಗಾಬರಿ ಪಡುವಷ್ಟು ಇದ್ದಂತಿಲ್ಲ. ಹಿಂದೆ ರಾಯಣ್ಣ ಬ್ರಿಗೇಡ್ ಮೂಲಕ ಕುರುಬರ ಸಂಘಟನೆಗೆ ಇಳಿದರೂ ಅದು ಏರ್ಪಟ್ಟಿದ್ದು ಇತರ ಜಾತಿಗಳ ಮೇಲಾಟದ ಪ್ರಚೋದನೆ
ಯಿಂದ. ಅಂದು ರಾಯಣ್ಣ ಬ್ರಿಗೇಡ್ ಆರಂಭಿಸಿದರೂ ಅದು ಮನೆಯ ಮಗನೊಬ್ಬ ಮನೆಗಾಗಿ ದುಡಿಯ ಲಾರಂಭಿಸಿದಂತೆ ಅದರಿಂದ ಬಿಜೆಪಿಗೇ ಹೆಚ್ಚು ಲಾಭವಾಗುವಂಥ ಪ್ರಯತ್ನವಾಗಿತ್ತು. ಆದರೆ ಪಕ್ಷದ ಹಿರಿಯರ ಕೋರಿಕೆ ಯಂತೆ ಅಷ್ಟೇ ನಯವಾಗಿ ಬ್ರಿಗೇಡನ್ನು ಡ್ರಾಪ್ ಮಾಡಿ ಪಕ್ಷನಿಷ್ಠೆ ಮೆರೆದವರು. ಈಗಲೂ ಅಷ್ಟೆ ಹೈಕಮಾಂಡ್ ಅವರನ್ನು ನಿರ್ಲಕ್ಷಿಸಿದರೂ ಅವರು ಅದರಿಂದ ಕೆರಳಿ ಮತ್ತೊಂದು ಪಕ್ಷ ಸೇರುವ ಅಥವಾ ಮತ್ತೊಂದು ಪಕ್ಷ ಕಟ್ಟುವಷ್ಟು ದ್ರೋಹಿಯಲ್ಲ.

ಇನ್ನು ಮುಖ್ಯಮಂತ್ರಿಯಾಗಲು ತಂತ್ರಗಾರಿಕೆ, ನೈಪುಣ್ಯತೆ ಇರಬೇಕು, ಅದು ಈಶ್ವರಪ್ಪನವರಿಗೆ ಇಲ್ಲ ಎಂಬ ವಾದವಿದೆ. ಈ ಹಿಂದೆ ಕೇವಲ ಒಂದು ಕುಟುಂಬದ ‘ಥ್ರಿಲ್ ಗಾಗಿ’ ದಿಢೀರ್ ಮುಖ್ಯಮಂತ್ರಿ ಯಾದ, ಮುಖ್ಯಮಂತ್ರಿ ಸ್ಥಾನದಲ್ಲಿ ವಿಲಾಸಿಯಾಗಿ ತೂರಾಡುತ್ತಿದ್ದ, ಮನೆಯಲ್ಲಿ ಕೂತು ಅಧರ್ಮದಲ್ಲಿ ಒಬ್ಬರನ್ನು ಮುಖ್ಯಮಂತ್ರಿಯಾಗಿಸಿದ, ಕೇವಲ ಜಾತಿಯ ಸ್ವಾಮೀಜಿಗಳಿಂದ ಆಯ್ಕೆಯಾದ ನಾಲಾ ಯಕ್ಕು ಮುಖ ಗಳಿಗಿಂತಲೂ ಈಶ್ವರಪ್ಪನವರು ನೂರುಪಾಲು ಮೇಲು. ಈಗಾಗಲೇ ಈಶ್ವರಪ್ಪನವರಿಗೆ 73 ವಯಸ್ಸು ಸಮೀಪಿಸುತ್ತಿದೆ.

ಇನ್ನೆರಡು ವರ್ಷ ಕಳೆದರೆ ಬಿಜೆಪಿಯಲ್ಲಿ ವಯೋಸಹಜ ನಿವೃತ್ತಿ ಆವರಿಸುತ್ತದೆ. ಆದ್ದರಿಂದ ಯಡಿಯೂರಪ್ಪ ನವರಷ್ಟೇ ಹಿರಿಯರಾದ ಈಶ್ವರಪ್ಪನವರನ್ನು ಮುಖ್ಯಮಂತ್ರಿಯಾಗಿ ಕೂರಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಂತ್ರವನ್ನು ಕೇಂದ್ರ ಬಿಜೆಪಿ ಮತ್ತು ಸಂಘ ಪರಿವಾರ ಅವರಿಗೆ ಬೋಧಿಸಿ, ಅವರೊಂದಿಗೆ ಸರಿಯಾದ ಕಾರ್ಯದರ್ಶಿಗಳು, ಯೋಗ್ಯ ಸಲಹೆಗಾರರು, ಆಪ್ತ ಸಹಾಯಕರು, ನುರಿತ ಬುದ್ಧಿವಂತ ಐಎಎಸ್ – ಕೆಎಎಸ್ ಅಧಿಕಾರಿಗಳನ್ನು ಕೂರಿಸಿ ಸ್ವಚ್ಛ ಮಂತ್ರಿಮಂಡಲವನ್ನು ನೀಡಿದರೆ ಈಶ್ವರಪ್ಪ ನವರು ಖಂಡಿತಾ ರಾಜ್ಯಕ್ಕೆ ಒಳ್ಳೆಯ ಮಾದರಿ ಮುಖ್ಯಮಂತ್ರಿಯಾಗಬಹುದಾದ ಅವಕಾಶವಿದೆ.

ಬೇಕಿದ್ದರೆ ಆದರ್ಶ ಆಡಳಿತ ನೀಡುವಂತೆ ಅವಕಾಶ ನೀಡಿ ಎಪ್ಪತ್ತೈದು ದಾಟಿದರೂ ಇನ್ನೂ ಎರಡು ಮೂರುವರ್ಷ ಮುಂದುವರಿಸಿ ನೋಡಬಹುದು. ಎಲ್ಲಕ್ಕಿಂತ ಮಿಗಿಲಾಗಿ ಅವರೊಬ್ಬ ಹಿಂದುಳಿದ ಜಾತಿಯವರಾಗಿರುವುದರಿಂದ ಪಕ್ಷಕ್ಕೆ ಜಾತಿಯತೆ ಕಳಂಕ
ಅಂಟುವುದಿಲ್ಲ. ಪಕ್ಷ ನಿಷ್ಠೆಯ ವಿಚಾರಕ್ಕೆ ಬಂದರೆ ಈಶ್ವರಪ್ಪನವರು ಸಾಕ್ಷಾತ್ ಕರ್ಣನಾಗಿ ನಿಲ್ಲುತ್ತಾರೆ. ಇನ್ನು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ಇಬ್ಬರ ಮಧ್ಯೆ ಮೇಲಾಟಗಳಿದ್ದು, ಒಂದೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೂ
ಮುಂದೆ ಇತರ ಜಾತಿಗಳ ನಾಯಕರು ಸುಮ್ಮನೆ ಕೂರುವುದಿಲ್ಲ. ಆದ್ದರಿಂದ ಕುರುಬ ಸಮಾಜದ ಈಶ್ವರಪ್ಪನವರಿಗೆ ಹೆಚ್ಚು ಅನುಕೂಲವಾಗುತ್ತದೆ.

ಹೀಗಾಗಿ ಕುರುಬ ವರ್ಗದ ಈಶ್ವರಪ್ಪನವರು ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿನ ಮೂರನೇ ದೊಡ್ಡ ಜಾತಿಯಾದ ಕುರುಬ
ಸಮುದಾಯವು ಬಿಸಿ ಕಜ್ಜಾಯದ ಪಾಕದಂತೆ ಬಿಜೆಪಿ ಯೊಂದಿಗೆ ಗಟ್ಟಿಯಾಗಿ ನಿಲ್ಲುತ್ತದೆ. ಜತೆಗೆ ಇನ್ನಿತರ ಜಾತಿಗಳಿಗೂ ಕುರುಬ ಸಮಾಜದ ಮೇಲೆ ಪೂರ್ವಗ್ರಹ ಮತ್ತು ಅಸೂಯೆಗಳಿಲ್ಲ. ಇನ್ನು ಬ್ರಾಹ್ಮಣರ ವಿಷಯಕ್ಕೆ ಇತರ ಮುಖಗಳಿಗಿಂತಲೂ ಈಶ್ವರಪ್ಪ
ಮೇಲು ಬಂದರೆ ದೇಶ ಧರ್ಮ ಅಭಿವೃದ್ಧಿ ಮತ್ತು ಬಿಜೆಪಿ ಮೂಲ ಸಿದ್ಧಾಂತವನ್ನು ಗೌರವಿಸಿ ಒಳ್ಳೆಯ ಆಡಳಿತ ನೀಡಿದರೆ ಕುರುಬ ನಾಗಲಿ ದಲಿತನಾಗಲಿ ಗೌರವಿಸಿ ಮತ್ತೇ ಮತ ನೀಡುತ್ತಾರೆ ಹೊರತು ದಿನೇಶ್ ಗುಂಡುರಾವ್ ಒಬ್ಬ ಬ್ರಾಹ್ಮಣನೆಂಬ ಒಂದೇ ಕಾರಣಕ್ಕೆ ಯಾವ ಬ್ರಾಹ್ಮಣರೂ ಮರುಳಾಗಿ ತಬ್ಬಿಕೊಳ್ಳುವಷ್ಟು ಸ್ವಜಾತಿ ಅಂಧಾಭಿಮಾನಿಗಳಲ್ಲ.

ಇಷ್ಟಕ್ಕೂ ಪ್ರಧಾನಿ ಮೋದಿಯವರು ಮೂರುಬಾರಿ, ಹನ್ನೆರಡು ವರ್ಷಗಳ ಗುಜರಾತಿನ ಯಶಸ್ವಿ ಮುಖ್ಯಮಂತ್ರಿಯಾಗಿ ಮತ್ತು ಇದೀಗ ಎರಡನೇ ಬಾರಿ ಪ್ರಧಾನಿಯಾಗಿ ವಿಶ್ವವೇ ಗೌರವಿಸಲ್ಪಡುತ್ತಿರುವುದು ಅವರಿಗೆ ಹಿಂದುಳಿದ ಗಾಣಿಗ ಸಮಾಜದವರು ಮಾತ್ರವೇ ಮತನೀಡಿ ಗೆಲ್ಲಿಸಿದ್ದರಿಂದಲ್ಲ. ನಮ್ಮ ರಾಜ್ಯದಲ್ಲಿ ಜಾತಿಗಳ ಲೆಕ್ಕಚಾರಗಳು ಅಸಹ್ಯ ಹುಟ್ಟಿಸುವಂತ್ತಿರಬಹುದು. ಆದರೆ ಮೋದಿಯವರು
ಅಲ್ಪಸಂಖ್ಯಾತ ಜಾತಿಯಾದ ಗಾಣಿಗ ಸಮುದಾಯದವರಾದರೂ ಇಂದು ಹೆಚ್ಚಾಗಿ ಪ್ರೀತಿಸುತ್ತಿರುವವರು ದೇಶದ ಬ್ರಾಹ್ಮಣರು, ಜೈನರು, ಇವರೊಂದಿಗೆ ಸುಶಿಕ್ಷಿತ ದಲಿತರು, ನಿತ್ಯ ಕರ್ಮಚಾರಿಗಳು, ಜಾತಿಗಳ ಭೀತಿಗಳಿಲ್ಲದ ದೇಶದ ಭವಿಷ್ಯ ಮತ್ತು ಸ್ವಾಭಿಮಾನದ ಚಿಂತನೆ ಗಳುಳ್ಳ ಜಾತ್ಯಾತೀತ ಮತದಾರರು.

ಆದರೆ ಅಲ್ಪಸಂಖ್ಯರನ್ನು ಮತ್ತು ಮುಗ್ಧ ದಲಿತ ಸಮುದಾಯದವರನ್ನು ದಾರಿತಪ್ಪಿಸಿ ತಮ್ಮ ವೋಟ್ ಬ್ಯಾಂಕನ್ನು ಕಟ್ಟಿಕೊಂಡಿರುವ ಪಿತೃಪಕ್ಷಗಳು ಗೋಡೆಯನ್ನು ನಿರ್ಮಿಸಿ ಕೂಡಿಹಾಕಿಕೊಂಡಿದ್ದಾರಷ್ಟೇ. ಇನ್ನು ಕಾಂಗ್ರೆಸ್‌ನಲ್ಲೇ ನೋಡಿ, ರಾಹುಲ್‌ಗಾಂಧಿ ಸರಿಯಾಗಿ ಯಾವ ಜಾತಿ ಯಾವ ಉಪಜಾತಿಯೆಂದೇ ಯಾರಿಗೂ ಬೇಕಿಲ್ಲ. ಅವರೆಷ್ಟೇ ‘ಬುದ್ಧಿವಂತರಾಗಲಿ ಮುತ್ಸದ್ದಿಯಾಗಲಿ’ ಅವರನ್ನು ಜಾತಿಯಿಂದ ಗುರುತಿಸಿ ಗೌರವಿಸುವ ಪರಿಪಾಠ ಆ ಪಕ್ಷದಲ್ಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪರಂಥ ದಲಿತ ನಾಯಕರಾಗಲಿ,
ಬ್ರಾಹ್ಮಣ ನಾಯಕರಾಗಲಿ ಅವರನ್ನು ತಲೆಯ ಮೇಲೆ ಹೊತ್ತು ನಡೆದು ಉಘೇಉಘೇ ಎನ್ನುತ್ತಾರೆ. ಆದರೆ ನಮ್ಮ ನಾಡಿನಲ್ಲಿ ಕೇವಲ ಜಾತಿ ಕಾರಣಕ್ಕೆ ಬೆಲ್ಲದ, ನಿರಾಣಿಯಂಥವರ ಹೆಸರು ಮುಖ್ಯಮಂತ್ರಿ ಪದವಿಗೆ ಹರಿದಾಡುತ್ತಿದೆಯೆಂದರೆ ಈಶ್ವರಪ್ಪನವರೇನು ಕರೆದಾಗ
ಬಂದು ತಲೆಯ ಮೇಲೆ ಸೆರಗು ಹಾಕಿಕೊಂಡು ಅರಿಶಿಣ ಕುಂಕುಮ ಸ್ವೀಕರಿಸಿ ಹೊರಡುವ ಮುತ್ತೈದೆಯೇ? ಇಂಥ ಹಿರಿಯ ಮೂಲ ಬಿಜೆಪಿ ನಾಯಕರಿಗೆ ಕೊಟ್ಟ ಸ್ಥಾನವೇನು ಗೌರವವೇನು?. ಚಾಮರಾಜನಗರದ ಬುಡಕಟ್ಟು ಜನಾಂಗಕ್ಕೆ ಈ ಬೆಲ್ಲದ ನಿರಾಣಿ ತರದವರ ಹೆಸರೇ ತಿಳಿದಿರುವುದಿಲ್ಲ.

ಇನ್ನು ಪ್ರಹ್ಲಾದ ಜೋಶಿಯವರ ವಿಷಯಕ್ಕೆ ಬಂದರೆ ಮದ್ದೂರು ಮಂಡ್ಯದ ಗ್ರಾಮೀಣ ಒಕ್ಕಲಿಗ ಸಮಾಜಕ್ಕೆ ಜಾತಿ ಪೊರೆ ಅಡ್ಡಬರುತ್ತದೆ.
ಜೋಶಿಯವರು ಮುಖ್ಯಮಂತ್ರಿಯಾಗಬೇಕಾದರೆ ಮೊದಲು ವಿಧಾನಸಭೆ ಪ್ರವೇಶಿಸಿ ರಸ್ತೆಗಿಳಿದು ನಾಡಿನ ಜಿಲ್ಲೆ ತಾಲೂಕುಗಳಲ್ಲಿ ಪಾದಯಾತ್ರೆ ಮಾಡಿ ತೋರಿಸಬೇಕಿದೆ. ಇನ್ನು ಶ್ರೀರಾಮುಲು ವಿಚಾರಕ್ಕೆ ಬಂದರೆ ಇರುವಷ್ಟರಲ್ಲಿ ಅವರೊಬ್ಬರಿಗೆ ರಾಜ್ಯದ ಮೂಲೆಮೂಲೆ ಯನ್ನು ತಲುಪಬಹುದಾದ ಸಾಮರ್ಥ್ಯವಿದೆ. ಆದರೆ ಅವರನ್ನು ಆ ಮಟ್ಟಕ್ಕೆ ಬೆಳೆಯಲು ಬಿಡದೆ ಮಟ್ಟಹಾಕಿ ಕೂರಿಸಲಾಗಿದೆ.
ಇನ್ನು ಒಳ್ಳೆಯ ಸಂಸದೀಯ ಪಟು ಎನಿಸಿದ್ದ ಮಾಧುಸ್ವಾಮಿಯವರು ತಮ್ಮ ಉದ್ವೇಗದ ಮಾತುಗಳಿಂದ ಇರುವ ಗೌರವವನ್ನು ಹಾಳು ಮಾಡಿಕೊಂಡಿದ್ದಾರೆ.

ಡಾ.ಕೆ.ಸುಧಾಕರ್ ಅವರು ಮುಖ್ಯಮಂತ್ರಿಯಾಗಿ ಆಡಳಿತದ ಚೊಕ್ಕಾಣಿ ಹಿಡಿಯಲು ಯೋಗ್ಯರಂತೆ ಕಂಡುಬಂದರೂ ಸದ್ಯಕ್ಕೆ ಅವರು
ವಲಸಿಗರು. ಡಾ.ಅಶ್ವತ್ಥ ನಾರಾಯಣ, ಆರ್.ಅಶೋಕ್ ಅವರು ಉತ್ತರ ಕರ್ನಾಟಕ ದಲ್ಲಿ ಮತಗಳನ್ನು ಬಾಚಿಕೊಳ್ಳುವಷ್ಟು ಹಿಟ್ ಕೊಟ್ಟವರಲ್ಲ, ಹಿಟ್ ಆದವರಲ್ಲ. ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ನಾಡಿನ ಇತಿಹಾಸದಲ್ಲಿ ಪ್ರಪ್ರಥಮ ದಲಿತ ಮುಖ್ಯಮಂತ್ರಿ ಯನ್ನಾಗಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.

ಅದೂ ಓಕೆ. ಆದರೆ ಅವರು ಮೂಲ ಬಿಜೆಪಿಯವರಲ್ಲದಾಗಿದ್ದು, ಈ ವಿಚಾರದಲ್ಲಿ ಈಶ್ವರಪ್ಪನವರೇ ಹಿರಿತನ – ಮೂಲ ಸರದಿಯಲ್ಲಿ ಮುಂದಿದ್ದಾರೆ. ಹೀಗೆ ಇವರೆಲ್ಲರನ್ನೂ ತೂಗಿ ನೋಡಿದರೆ ಈಶ್ವರಪ್ಪನವರೇ ಯಡಿಯೂರಪ್ಪನವರ ಉತ್ತರದಾಯಿತ್ವಕ್ಕೆ ಸಮರ್ಥ ನಾಯಕರಾಗಬಲ್ಲರು. ಆದ್ದರಿಂದ ಯಡಿಯೂರಪ್ಪನವರನ್ನು ಬದಲಾಯಿಸೇ ತೀರಬೇಕೆಂದರೆ ಅವರನ್ನು ಗೌರವನೀಯವಾಗಿ ವಿಶ್ವಾಸನೀ ಯವಾಗಿ ಕಂಡು ಪಕ್ಷದಲ್ಲಿ ಅವರಿಗೆ ಕೊನೆಯವರೆಗೂ ಭೀಷ್ಮನಂತೆ ಕಂಡು ಈಶ್ವರಪ್ಪನವರಿಗೆ ನೆರಳಾಗಿ ನಿಲ್ಲಿಸಿ ವಿಜಯೇಂದ್ರ ನನ್ನಾಗಿಸಿ ದರೆ ಪಕ್ಷಕ್ಕೆ ಗೌರವ ಹೆಚ್ಚುತ್ತದೆ.

ಜತೆಗೆ ಪಕ್ಷಕ್ಕೆ ನಿಷ್ಠರಾಗಿ ಮಣ್ಣುಹೊತ್ತರೆ ಅವರಿಗೆ ತಕ್ಕ ಸ್ಥಾನಮಾನ ದೊರಕುತ್ತದೆಂಬ ಸಂದೇಶ ಮತ್ತು ನಂಬಿಕೆ ಕಾರ್ಯಕರ್ತರಲ್ಲಿ ಮೂಡುತ್ತದೆ. ದುರಂತವೆಂದರೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವಾಗ ಅವರನ್ನು ಸರ್ವ ಜನಾಂಗವನ್ನು ಸೆಳೆಯಬಲ್ಲ ನಾಯಕನ್ನಾಗಿ ನೋಡಿತು. ಆದರೆ ಅವರನ್ನು ಕೆಳಗಿಳಿಸುವಾಗ ಕೇವಲ ಒಂದು ಜಾತಿಯ ಕಾರಣದಿಂದ
ಬೆದರುತ್ತಿರುವುದನ್ನು ನೋಡಿದರೆ ಬಿಜೆಪಿಯ ಜಾತಿರಹಿತ ಆಡಳಿತ ವ್ಯವಸ್ಥೆ ಅನುಷ್ಠಾನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಇದನ್ನೂ ಮೀರಿ ಈಶ್ವರಪ್ಪನವರಿಗೆ ಇಂಥ ಅವಕಾಶ ಸಿಗದಿದ್ದರೆ ಅದು ಚಿತ್ರರಂಗದಲ್ಲಿ ಟಿ.ಎನ್.ಬಾಲಣ್ಣ, ನರಸಿಂಹರಾಜು, ಕೆ.ಎಸ್. ಅಶ್ವಥ್ ಅವರಂತೆ ಪರಿಣಾಮಕಾರಿಯಾದ ಪೋಷಕನಟರ ಪಾತ್ರವೇ ಗತಿ.