Saturday, 14th December 2024

ದುರಂತದಲ್ಲಿ ಕೊನೆಗೊಂಡ ಈಥರ‍್ ಅರಿವಳಿಕೆ

ಹಿಂದಿರುಗಿ ನೋಡಿದಾಗ

ಶಸ್ತ್ರಚಿಕಿತ್ಸೆ ಮಾಡುವಾಗ, ರೋಗಿಗೆ ಯಾವುದೇ ರೀತಿಯ ನೋವಾಗದಂಥ ಮಾರ್ಗವನ್ನು ಕಂಡು ಹಿಡಿಯುವುದು ಮನುಕುಲದ ಕನಸುಗಳಲ್ಲಿ ಒಂದಾಗಿತ್ತು. ಈ ದಿಶೆಯಲ್ಲಿ ನೈಟ್ರಸ್ ಆಕ್ಸೈಡನ್ನು ಬಳಸಿ ಭಾಗಶಃ ಯಶಸ್ಸನ್ನು ಪಡೆದರು. ಈಥರ್, ವೈದ್ಯ ವಿಜ್ಞಾನಿಗಳ ಕನಸನ್ನು ನನಸಾಗಿಸಿತು. ಈಥರಿನ ಮೂಲ ಹೆಸರು ಸಲ್ಯೂರಿಕ್ ಈಥರ್. ಸಲ್ಯೂರಿಕ್ ಆಸಿಡ್ಡನ್ನು ಆಲ್ಕೋಹಾಲ್ ಜತೆ ಬೆರೆಸಿದಾಗ ಸಲ್ಯೂರಿಕ್ ಈಥರ್ ಉತ್ಪಾದನೆಯಾಗುತ್ತದೆ.

ಸಲ್ಫ್ಯೂರಿಕ್ ಆಸಿಡ್ಡನ್ನು ಅರಬ್ ರಸಾಯನ ಶಾಸ್ತ್ರಜ್ಞ ಜೆಬರ್ ಕ್ರಿ.ಶ.೭೬೦ರಲ್ಲಿ ಉತ್ಪಾದಿಸಿದ. ಆಲ್ಕೋಹಾಲನ್ನು ಮೊದಲು ಯಾರು ಕಂಡುಹಿಡಿದರು ಎನ್ನುವುದು ಗೊತ್ತಿಲ್ಲ. ಕ್ರಿ.ಪೂ. ೬,೦೦೦-೭,೦೦೦ ವರ್ಷಗಳಿಂದಲೂ ಮಾನವ ಜನಾಂಗಕ್ಕೆ  ಲ್ಕೋಹಾಲಿನ ಪರಿಚಯವಿದೆ. ಆದರೆ ಭಟ್ಟಿಯಿಳಿಸುವುದರ ಮೂಲಕ ಶುದ್ಧ ಆಲ್ಕೋ ಹಾಲನ್ನು ತಯಾರಿಸುವ ವಿಧಾನ ವನ್ನು ಮೊದಲ ಬಾರಿಗೆ ರೇಮಂಡ್ ಲುಲ್ಲಿ ಕಂಡುಹಿಡಿದ ಎಂಬುದು ನಿರ್ವಿವಾದವಾಗಿದೆ. ಇದೇ ಲುಲ್ಲಿಯೇ ಈಥರನ್ನು ಕಂಡುಹಿಡಿದನೆಂದು, ಪ್ಯಾರಾಸೆಲ್ಸಸ್ ಕಂಡು ಹಿಡಿದನೆಂದು ಹಾಗೂ ವೆಲೇರಿಯಸ್ ಕಾರ್ಡಸ್ ಕಂಡು ಹಿಡಿದನೆಂದು ಭಿನ್ನ ಕಥೆಗಳಿವೆ.

ವೆಲೇರಿಯಸ್ ಕಾರ್ಡಸ್ ಪ್ರಶ್ಯಾ ದೇಶದ ಸಸ್ಯವಿಜ್ಞಾನಿಯಾಗಿದ್ದ. ೧೫೪೦ರಲ್ಲಿ ಸಲ್ಫ್ಯೂರಿಕ್ ಆಸಿಡ್ಡನ್ನು ಸಾರ ವರ್ಧಿತ ವೈನ್ ಜತೆ ಬಟ್ಟಿಯಿಳಿಸಿ ಸಲ್ಫ್ಯೂರಿಕ್ ಈಥರನ್ನು ಉತ್ಪಾದಿಸಿದ. ಆದರೆ ಜರ್ಮನ್ ರಸಾಯನ ತಜ್ಞ ವಿಲ್ಹೆಲ್ಮ್ ಗಾಡ್ರೀ ಫ್ರೋಬೆನ್, ಈಥರ್ ತಯಾಸುವ ಪ್ರಮಾಣಬದ್ಧ ವಿಧಾನವನ್ನು ವರ್ಣಿಸುವುದರ ಜತೆಯಲ್ಲಿ ಆ ರಾಸಾಯನಿಕಕ್ಕೆ ‘ಈಥರ್’ ಎಂದು ೧೭೩೫ರಲ್ಲಿ ನಾಮಕರಣ ಮಾಡಿದ. ಇದೊಂದು ಗ್ರೀಕ್ ಶಬ್ದ.

‘ಪ್ರಜ್ವಲವಾಗಿ ಉರಿಯುವುದು’ ಎಂದರ್ಥ. ಈಥರ್ ವೈದ್ಯಕೀಯ ಕ್ಷೇತ್ರಕ್ಕಿಂತ ರಸಾಯನ ವಿಜ್ಞಾನ ಹಾಗೂ ಭೌತವಿಜ್ಞಾನಗಳ ಬೆಳವಣಿಗೆಗೆ ದೊಡ್ಡ ಪ್ರಮಾಣ ದಲ್ಲಿ ನೆರವಾಯಿತು. ಏಕೆಂದರೆ ಅಂದು ಪರಿಚಯವಿದ್ದ ರಾಸಾಯನಿಕಗಳಲ್ಲಿ ತ್ವರಿತವಾಗಿ ಬಾಷ್ಪಶೀಲ ಅಥವ ಆವಿಯಾಗುವ ಗುಣವು ಈಥರಿಗೆ ಮಾತ್ರವಿತ್ತು. ಹಾಗಾಗಿ ವಿಜ್ಞಾನಿಗಳು ಒಂದು ವಸ್ತುವು ದ್ರವಸ್ಥಿತಿಯಿಂದ ಅನಿಲ ಸ್ಥಿತಿಗೆ ಬದಲಾಗುವ ರೀತಿ ನೀತಿಗಳನ್ನು ಅಧ್ಯಯನ ಮಾಡಲು ಈಥರಿನ ಮೇಲೆ ಪ್ರಯೋಗ ನಡೆಸಿದರು.

ಫ್ರೆಂಚ್ ರಸಾಯನ ವಿಜ್ಞಾನಿ ಆಂಟಾಯಿನ್ ಲವಾಸೀರ್, ಈಥರ್ ಮಾನವ ಶರೀರ ಉಷ್ಣತೆಯಲ್ಲಿ ಆವಿಯಾಗುತ್ತದೆ ಹಾಗೂ ಶರೀರದ ಒಳಗೆ ಅನಿಲ ರೂಪದಲ್ಲಿ ಮಾತ್ರ ಇರಲು ಸಾಧ್ಯ ಎಂದು ನುಡಿದ. ವಿಲಿಯಂ ಕುಲ್ಲೆನ್ ಎಂಬ ಸ್ಕಾಟಿಶ್ ವೈದ್ಯನು ೧೭೭೩ರಲ್ಲಿ ಈಥರ್ ಆವಿಯನ್ನು ಆಘ್ರಾಣಿಸುವು ದರ ಮೂಲಕ ತಲೆ ನೋವನ್ನು ಕಡಿಮೆ ಮಾಡಬಹುದೆನ್ನುವುದನ್ನು ತೋರಿಸಿ ಕೊಟ್ಟ. ಬರ್ಮಿಂಗ್ ಹ್ಯಾಮಿನ ರಿಚರ್ಡ್ ಪಿಯರ್ಸನ್ ಎಂಬ ವೈದ್ಯನು ೧೭೯೫ರಲ್ಲಿ ಥಾಮಸ್ ಬೆಡ್ಡೋ ಸನಿಗೆ ಒಂದು ಪತ್ರ ಬರೆದು, ತಾನು ಈಥರ್ ಆವಿಯನ್ನು ನೀಡುವುದರ ಮೂಲಕ ಗಂಟಲು ಮತ್ತು ಉಸಿರಾಟದ ಸಮಸ್ಯೆಗಳನ್ನು ‘ಗುಣಪಡಿಸಿದುದಾಗಿ’ ಅದರಲ್ಲಿ ವಿವರಿಸಿದ.

ವಿಲಿಯಂ ಥಾರ್ನ್ಟನ್, ಎರಸ್ಮಸ್ ಡಾರ್ವಿನ್, ಜಾನ್ ಕಾಲಿನ್ಸ್ ವಾರೆನ್ ಮುಂತಾದವರೂ ಪಿಯರ್ಸನ್ನನ್ನು ಅನುಮೋದಿಸಿದರು. ಅನೇಕ ವೈದ್ಯರು ಈಥರನ್ನು ಉಬ್ಬಸರೋಧಕವಾಗಿ ಅಸ್ತಮ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾರಂಭಿಸಿದರು. ೧೮೦೦. ಹಂಫ್ರಿ ಡೇವಿ ನೈಟ್ರಸ್ ಆಕ್ಸೈಡನ್ನು ‘ನಗೆಯ ಅನಿಲ’ವನ್ನಾಗಿ ಬಳಸುವ ಬಗ್ಗೆ ವಿವರಿಸಿದ. ೧೮೧೮ರಲ್ಲಿ ಮೈಕೇಲ್ -ರಡೆ ನಗೆಯ ಅನಿಲವನ್ನಾಗಿ ನೈಟ್ರಸ್ ಆಕ್ಸೈಡನ್ನು ಬಳಸುವುದರ ಜತೆಯಲ್ಲಿ ಈಥರನ್ನೂ ಬಳಸಬಹುದೆಂದು ಹೇಳಿದ. ಜತೆಗೆ ನೈಟ್ರಸ್ ಆಕ್ಸೈಡ್ ಅನಿಲ. ತಯಾರಿಸುವುದು, ಸಂಗ್ರಹಿಸುವುದು ಹಾಗೂ ಬಳಸುವುದೂ ಕಷ್ಟ. ಅದರ ಬದಲು ಈಥರ್ ಹೆಚ್ಚು ಉಪಯುಕ್ತ. ಈಥರ್ ದ್ರವ. ಇದನ್ನು ತಯಾರಿಸಿ, ಸಂಗ್ರಹಿಸಿ ಹಾಗೂ ಬಳಸುವುದು ಸುಲುಭ ಎಂದು ವಿವರಿಸಿದ. ಆಗ ನೈಟ್ರಸ್ ಆಕ್ಸೈಡಿಗಿಂತ ಈಥರ್ ಜನಪ್ರಿಯವಾಯಿತು.
ಸ್ಕಾಟ್ಲಂಡಿನ ಜನರು ಮದ್ಯಪಾನವನ್ನು ಕಡಿಮೆ ಮಾಡಿ, ಈಥರ್ ಪಾನವನ್ನು ಹೊಸದಾಗಿ ಆರಂಭಿಸಿದರು.

ಇದರ ಫಲವಾಗಿ ಸಣ್ಣ ಪುಟ್ಟ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಬೇಕಾಯಿತು. ಇಂಗ್ಲೆಂಡಿನಲ್ಲಿ ಈಥರನ್ನು, ಜಿನ್ ಜತೆಯಲ್ಲಿ ಕಲಬೆರಕೆ ಮಾಡಿದರು. ಇದನ್ನು ದೀರ್ಘಕಾಲ ಸೇವಿಸುವವರಲ್ಲಿ ‘ದಿ ಬ್ಲೂಸ್’ ಎಂಬ ಹೊಸಕಾಯಿಲೆ ಆರಂಭವಾಯಿತು. ರಷ್ಯಾದ ಝಾರ್, ವೋಡ್ಕ ಮಾರಾಟವನ್ನು ನಿರ್ಬಂಧಿಸಿ ಈಥರ್ ಮಾರಾಟವನ್ನು ಸರ್ವತ್ರ ಗೊಳಿಸಿದ. ಐರ್ಲೆಂಡಿನಲ್ಲಿ ಈಥರ್ ಪಾನವು ಕುಪ್ರಸಿದ್ಧವಾಗಿ ನಾನಾ ಅನಾರೋಗ್ಯಗಳಿಗೆ ಕಾರಣವಾಗುತ್ತಿದ್ದ ಕಾರಣ, ಈಥರ್ ಮಾರಾಟವನ್ನೇ ನಿರ್ಬಂಧಿಸಬೇಕಾಯಿತು. ಈಥರನ್ನು ನೋವು ನಿವಾರಕವಾಗಿ ಬಳಸಬಹುದೆಂದು ಜಗತ್ತಿಗೆ ತೋರಿಸಿಕೊಟ್ಟವನು ಡಾ.ಕ್ರಾಫರ್ಡ್ ವಿಲಿಯಮ್ಸನ್
ಲಾಂಗ್. ಅಮೆರಿಕದ ಜೆಫರ್ಸನ್ ಎಂಬ ನಗರದ ವಾಸಿಯಾದ ಈತನು ವೈದ್ಯ ಹಾಗೂ ಔಷಧ ವಿಜ್ಞಾನಿಯೂ ಆಗಿದ್ದ.

ಲಾಂಗ್ ಒಂದು ನಗೆಯ ಅನಿಲಕೂಟಕ್ಕೆ ಹೋಗಿದ್ದ. ಅಲ್ಲಿ ನಗೆಯ ಅನಿಲದ ಸರಬರಾಜು ಕಡಿಮೆಯಾಯಿತು. ಆಗ ಯಾರೋ ಈಥರನ್ನು ತಂದುಕೊಟ್ಟರು. ಈಥರನ್ನು ಸೇವಿಸಿದ ಜನರು ಹುಚ್ಚೆದ್ದು ಕುಣಿಯುತ್ತಿದ್ದರು. ಆಗ ಒಬ್ಬನು ಜಾರಿಬಿದ್ದ. ಬಲವಾದ ಮೂಗೇಟು ಬಿತ್ತು. ಅವನು ತನಗೇನೂ ಆಗಿಲ್ಲವೆಂದು ಭಾವಿಸಿ ಕುಣಿಯುವುದರಲ್ಲಿ ಮಗ್ನನಾದ. ಅವನಿಗೆ ನೋವಿನ ಅನುಭವವು ಆಗದಿರಲು ಈಥರ್ ಕಾರಣವೆಂದು ತರ್ಕಿಸಿದ ಲಾಂಗ್. ಜೇಮ್ಸ್ ವೆನಬಲ್ ಎಂಬ ರೋಗಿಯ ಕುತ್ತಿಗೆಯ ಹಿಂಭಾಗದಲ್ಲಿ ೨ ಗಡ್ಡೆಗಳಿದ್ದವು. ಅವನಿಗೆ ಅವನ್ನು ತೆಗೆಸಬೇಕೆಂದು ಆಸೆ.

ಆದರೆ ನೋವಿಗೆ ಹೆದರಿಕೊಂಡಿದ್ದ. ಲಾಂಗ್, ಜೇಮ್ಸ್ ವೆನಬಲ್‌ನನ್ನು ಚಿಕಿತ್ಸಾಲಯಕ್ಕೆ ಕರೆಯಿಸಿ ಗೆಳೆಯನೊಬ್ಬನ ನೆರವು ಪಡೆದ. ಒಂದು ಮಡಚಿದ ಬಟ್ಟೆಯ ಮೇಲೆ ಈಥರನ್ನು ಸುರಿದ. ಅದು ಆವಿಯಾಗಲಾರಂಭಿಸಿತು. ಅದನ್ನು ವೆನಬಲ್ ಮುಖಕ್ಕೆ ಹಿಡಿಯುವಂತೆ ಹೇಳಿದ. ಅದನ್ನು ಸೇವಿಸುತ್ತಿರುವಂತೆಯೇ ಕಣ್ಣು ಮುಚ್ಚಿ ಮತ್ತಿನಲೋಕ ಪ್ರವೇಶಿಸಿದ. ಆಗ ಲಾಂಗ್ ಎರಡೂ ಗಡ್ಡೆಗಳನ್ನು ಸರಾಗವಾಗಿ ಛೇದಿಸಿದ. ಗಾಯಕ್ಕೆ ಹೊಲಿಗೆ ಹಾಕಿ ಶಸಚಿಕಿತ್ಸೆ ಮುಗಿಸಿದ. ಜೇಮ್ಸ್ ವೆನಬಲ್‌ಗೆ ಕಿಂಚಿತ್ತೂ ನೋವಾಗಲಿಲ್ಲ.

ಲಾಂಗ್ ಹೀಗೆ ಇನ್ನೂ ಹಲವರಿಗೆ ಶಸಚಿಕಿತ್ಸೆ ಮಾಡಿ ತನ್ನ ದಿನಚರಿಯಲ್ಲಿ ‘ಜೇಮ್ಸ್ ವೆನಬಲ್, ೧೮೪೨. ಈಥರ್ ಮತ್ತು ಗಂತಿ ಛೇದನ ೨’ ಎಂದು ಬರೆದ. ಆದರೂ ಅದನ್ನು ಸಹೋದ್ಯೋಗಿಗಳಿಗಾಗಲಿ, ವೈದ್ಯಕೀಯ ಸಂಘಗಳಿಗಾಗಲಿ ತಿಳಿಸಲಿಲ್ಲ. ಯಾವುದೇ ತಜ್ಞಪ್ರಬಂಧವನ್ನು ಬರೆಯಲಿಲ್ಲ. ಅಂದಮೇಲೆ ಈ ಮಹತ್ ಸುದ್ಧಿಯನ್ನು ಪ್ರಕಟಿಸುವುದು ದೂರವೇ ಉಳಿಯಿತು. ಈ ಕಾರಣದಿಂದ ಅರಿವಳಿಕೆ ಕಂಡುಹಿಡಿದ ಕೀರ್ತಿ ಈತನಿಗೆ ದಕ್ಕಲಿಲ್ಲ. ೧೯೪೨. ವಿಲಿಯಂ ಥಾಮಸ್ ಗ್ರೀನ್ ಮಾರ್ಟನ್ ಎಂಬ ೨೩ರ ಯುವಕ ಒಂದಷ್ಟು ವ್ಯಾಪಾರ ಮಾಡಲು ಬಾಲ್ಟಿ ಮೋರ್, ಸಿನ್ಸಿನಾಟಿ, ಸೈಂಟ್ ಲೂಯಿಸ್ ನಗರಗಳಲ್ಲಿ ಯತ್ನಿಸಿದ್ದ. ಇವನು ನಕಲಿ ಶಿ-ರಸು ಪತ್ರವನ್ನು ಸೃಜಿಸಿ ಅದರ ನೆರವಿನಿಂದ ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಲವಾಗಿ ಪಡೆದು ಮಾರುತ್ತಿದ್ದ. ಕೈ ತುಂಬಾ ಹಣವು
ಸಿಗುತ್ತಿದ್ದಂತೆ ಆ ನಗರದಿಂದ ಪರಾರಿಯಾಗುತ್ತಿದ್ದ.

ಬಾಲ್ಟಿ ಮೋರ್‌ನಲ್ಲಿ ಹೊಸದಾಗಿ ಆರಂಭವಾದ ದಂತವೈದ್ಯಕೀಯ ವಿದ್ಯಾಲಯಕ್ಕೆ ಸೇರಿಕೊಂಡ. ಆದರೆ ಡಿಪ್ಲೋಮ ಗಳಿಸುವ ಮೊದಲೇ ವಿದ್ಯಾಲಯವನ್ನು ಬಿಟ್ಟ. ಈ ವೇಳೆಗೆ ಹೋರೇಸ್ ವೆಲ್ ಗೌರವಾನ್ವಿತ ದಂತವೈದ್ಯನಾಗಿ ಬಾಸ್ಟನ್‌ನಲ್ಲಿ ಹೆಸರಾಗಿದ್ದ. ಕೃತಕ ಹಲ್ಲುಗಳನ್ನು ಕಟ್ಟುವಲ್ಲಿ ಪರಿಣಿತನಾಗಿದ್ದ ವೆಲ್ಸ್ ಬಳಿ ಶಿಷ್ಯವೃತ್ತಿಯನ್ನಾರಂಭಿಸಿದ. ಹೋರೇಸ್ ವೆಲ್ಸ್, ನೈಟ್ರಸ್ ಆಕ್ಸೈಡನ್ನು ಬಳಸಿ ನೋವಿಲ್ಲದೆ ಹುಳುಕು ಹಲ್ಲನ್ನು ತೆಗೆಯುವುದಾಗಿ ಬಾಸ್ಟನ್ನಿನ ಮಸಾಚುಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರ ಸಮ್ಮುಖ ಪ್ರದರ್ಶನ ಏರ್ಪಡಿಸಿದ. ಈ ವೇಳೆ ಮಾರ್ಟನ್ ನೆರವಾದ.

ಆದರೆ ವೆಲ್ಸ್‌ನಿಗೆ ನೈಟ್ರಸ್ ಆಕ್ಸೈಡ್ ನೀಡುವ ಕಲೆ ಕರಗತವಾಗಿರಲಿಲ್ಲ. ಹಾಗಾಗಿ ರೋಗಿ ನೋವಿನಿಂದ ಬೊಬ್ಬೆ ಹೊಡೆದ. ವೈದ್ಯವಲಯವು ವೆಲ್ಸ್‌ನನ್ನು ಮೋಸಗಾರ ಎಂದು ಅವಹೇಳನ ಮಾಡಿತು. ಮಾರ್ಟನ್, ಚಾರ್ಲ್ಸ್ ಥಾಮಸ್ ಜಾಕ್ಸನ್ ಎಂಬ ರಸಾನ ಹಾಗೂ ಭೂಗರ್ಭ ವಿಜ್ಞಾನಿಯನ್ನು ಭೇಟಿಯಾದ.
ಆತ ನೈಟ್ರಸ್ ಆಕ್ಸೈಡ್ ಬದಲು ಈಥರನ್ನು ಬಳಸುವಂತೆ ಸೂಚಿಸಿದ. ಮಾರ್ಟನ್ ತನ್ನ ಮೇಲೆಯೇ ಈಥರನ್ನು ಪ್ರಯೋಗಿಸಿಕೊಂಡ. ನೋವು ಕಡಿಮೆಯಾಗಲಿಲ್ಲ. ಮತ್ತೆ ಜಾಕ್ಸನ್ನನ್ನು ಭೇಟಿಯಾದ. ಆಗ ಜಾಕ್ಸನ್ ವ್ಯಾಪಾರೀ ಮಟ್ಟದ ಈಥರನ್ನು ಬಳಸುವ ಬದಲು ಪರಿಶುದ್ಧವಾದ ಬರ್ನೆಟ್ ಈಥರ್ ಬಳಸುವಂತೆ ಸೂಚಿಸಿದ. ಈಥರನ್ನು ಚೀಲದ ಮೂಲಕ ನೀಡುವ ಬದಲು ಹೊಸ ವಿಧಾನವನ್ನು ಸೂಚಿಸಿದ.

ಒಂದು ಗಾಜಿನ ಫ್ಲಾಸ್ಕಿನ ಒಂದು ಬಾಯನ್ನು ಗಾಜಿನ ಕೊಳ ವೆಯ ಮೂಲಕ ಈಥರ್ ಬಾಟಲಿಗೆ ಸೇರಿಸಿದ. ಮತ್ತೊಂದು ಅಗಲ ಬಾಯಿಯ ಮೂಲಕ ಈಥರ್ ಅನಿಲವನ್ನು ಉಸಿರಾಡಲು ಅನುಕೂಲ ಮಾಡಿದ. ಮುಂದೆ ಇದು ಮಾರ್ಟನ್ಸ್ ಇನ್ಹೇಲರ್ ಎಂದು ಹೆಸರಾಯಿತು. ಮಾರ್ಟನ್ ಬಾಸ್ಟನ್ನಿನ ಮಸಾಚುಸೆಟ್ಸ್‌ ನಲ್ಲಿರುವ ಜನ ರಲ್ ಆಸ್ಪತ್ರೆಗೆ ಬಂದ. ಅಲ್ಲಿನ ಮುಖ್ಯವೈದ್ಯ ಜಾನ್ ಕಾಲಿನ್ಸ್ ವಾರನ್‌ರನ್ನು ಭೇಟಿಯಾಗಿ ತಾನು ರೂಪಿಸಿರುವ ವಿಧಾನ ದಿಂದ ನೋವುರಹಿತ ಶಸಚಿಕಿತ್ಸೆ ಮಾಡಬಹುದೆಂದ. ಎಡ್ವರ್ಡ್ ಗಿಲ್ಬರ್ಟ್ ಏಬಟ್ ಎಂಬ ರೋಗಿಯ ಕುತ್ತಿಗೆ ಯಲ್ಲಿದ್ದ ಗಡ್ಡೆಯನ್ನು ನೋವುರಹಿತವಾಗಿ ಛೇದಿಸಿ ತೆಗೆಯಲು ಹೆನ್ರಿ ಜೇಕಬ್ ಬೀಗ್ಲೊ ಎಂಬ ಶಸ್ತ್ರವೈದ್ಯ ಮುಂದಾದ. ಮಾರ್ಟನ್ ತನ್ನ ಸಾಧನದ ಬಾಯಿಯನ್ನು ಏಬಟ್ ಬಳಿಗೆ ತಂದ. ದೀರ್ಘವಾಗಿ ಉಸಿರಾಡುವಂತೆ ಹೇಳಿದ. ೩-೪ ನಿಮಿಷಗಳಲ್ಲಿ ಏಬಟ್ ನಿದ್ರೆ ಮಾಡುವವನಂತೆ ಮಲಗಿದ. ಮಾರ್ಟನ್ ತನ್ನ ಸ್ಕ್ಯಾಲ್ಪೆಲ್ ಮೂಲಕ ಗಡ್ಡೆಯ ಮೇಲೆ ಛೇದನ ಮಾಡಿದ. ಏಬಟ್ ಪ್ರತಿಕ್ರಿಯಿಸಲಿಲ್ಲ. ಬೀಗ್ಲೋ ಗಡ್ಡೆಯನ್ನು ಯಶಸ್ವಿಯಾಗಿ ಛೇದಿಸಿ ಹೊಲಿಗೆ ಹಾಕಿದ.

‘ಇದು ಮೋಸವಲ್ಲ. ಜಗತ್ತಿನ ಪ್ರಪ್ರಥಮ ನೋವುರಹಿತ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ’ ಎಂದು ಘೋಷಿಸಿದ. ಮಾರ್ಟನ್ ತನ್ನ ಪ್ರಯೋಗದಲ್ಲಿ
ಯಶಸ್ವಿಯಾಗಿದ್ದ. ಜಾಕ್ಸನ್ ಬಂದು ಮಾರ್ಟನ್ ಗಳಿಸಿದ ಹಣದಲ್ಲಿ ತನ್ನದೂ ಪಾಲಿದೆಯೆಂದ. ಮಾರ್ಟನ್ ತನ್ನ ಗಳಿಕೆಯಲ್ಲಿ ಶೇ. ೧೦ರಷ್ಟು ನೀಡಿದ. ಮಾರ್ಟನ್ ಪ್ರಾಮಾಣಿಕ ವ್ಯಕ್ತಿಯಲ್ಲ. ಹಾಗಾಗಿ ಈಥರನ್ನು ಯಶಸ್ವೀ ಅರಿವಳಿಕೆಯಾಗಿ ಬಳಸಿದ ಕೀರ್ತಿ ಸಂಪೂರ್ಣ ತನಗೇ ದಕ್ಕಬೇಕೆಂದು ಷಡ್ಯಂತ್ರಗಳನ್ನಾರಂಭಿಸಿದ. ವೆಲ್ಸ್ ಮತ್ತು ಜಾಕ್ಸನ್‌ರನ್ನು ದೂರವಿಟ್ಟ. ಈಥರಿಗೆ ಕಿತ್ತಳೆತೈಲವನ್ನು ಬೆರೆಸಿ ಆ ಸುವಾಸನಾಯುಕ್ತ ದ್ರವಕ್ಕೆ ಲೆಥಿಯಾನ್ ಎಂದು ಹೆಸರಿಟ್ಟ. ಅಂದಿನ ಯುರೋಪಿ ನಲ್ಲಿ ಮನುಕುಲಕ್ಕೆ ಉಪಯುಕ್ತ ಸಂಶೋಧನೆ ಮಾಡುವವರಿಗೆ ದೊಡ್ಡ ಮೊತ್ತದ ಬಹುಮಾನ ಕೊಡುವ ಪದ್ಧತಿಯಿತ್ತು. ಹಾಗಾಗಿ ಅಮೆರಿಕದ ಕಾಂಗ್ರೆಸ್ ತನಗೆ ಹಣ ನೀಡಬೇಕೆಂದು ಒತ್ತಾಯಿಸಿದ. ಜಾಕ್ಸನ್ ಮತ್ತು ವೆಲ್ಸ್, ಈ ಸಂಶೋಧನೆಯಲ್ಲಿ ತಮ್ಮ ಪಾಲಿರುವುದನ್ನು ಸಾಬೀತುಪಡಿಸಿ, ಬಹುಮಾನವನ್ನು ಮಾರ್ಟನ್ನಿಗೆ ಕೊಡಬಾರದು ಎಂದು ಒತ್ತಡ ಹಾಕಿದರು.

ಜತೆಗೆ ‘ಲೆಥಿಯಾನ್’ ಮೋಸವನ್ನು ಬಹಿರಂಗಪಡಿಸಿದರು. ವೆಲ್ಸ್ ಮಿತಿಮೀರಿ ಕ್ಲೋರೋಫಾರಂ ಸೇವಿಸಿ, ತನ್ನ ತೊಡೆಯ ರಕ್ತನಾಳ ಛೇದಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಜಾಕ್ಸನ್ನನಿಗೆ ಅರಿವಳಿಕೆ ಕಂಡುಹಿಡಿದ ಕೀರ್ತಿ ಕೊನೆ ಗೂ ದೊರೆಯದೆ, ಮತಿಭ್ರಮಣೆಗೊಂಡು ಸತ್ತ. ಮಾರ್ಟನ್ ಅರಿವಳಿಕೆಯನ್ನು ಕಂಡುಹಿಡಿದ ಕೀರ್ತಿಗೆ ಪಾತ್ರನಾದರೂ ಬಹುಮಾನದ ಹಣ ದೊರೆಯಲಿಲ್ಲವೆಂದು ಕೊರಗಿ ಬಿಡಿಗಾಸಿಲ್ಲದೆ ಸತ್ತುಹೋದ. ಹೀಗೆ ಈಥರ್ ಕಥೆಯು ದುರಂತದಲ್ಲಿ ಮುಗಿಯಿತು. ಹಾರ್ವರ್ಡ್ ಮೆಡಿಕಲ್ ಪ್ರೊಫೆಸರ್ ಅಲಿವರ್ ವೆಂಡಲ್ ಹೋಮ್ಸ್ ಸೀನಿಯರ್, ಗ್ರೀಕ್ ಭಾಷೆಯ ‘ಸಂವೇದನೆಯ ಅನುಪಸ್ಥಿತಿ’ ಎಂಬ ಅರ್ಥದ ‘ಅನೆಸ್ತೀಸಿಯ’ ಎಂಬ ಪದವನ್ನು ಬಳಕೆಗೆ ತಂದ. ಕನ್ನಡದಲ್ಲಿ ಇದನ್ನೇ ‘ಅರಿವಳಿಕೆ’ ಎನ್ನುತ್ತಿದ್ದೇವೆ.