Saturday, 14th December 2024

ಪ್ರತಿ ಮನೆಯೂ ಒಂದೊಂದು ಬ್ಯಾಂಕುಗಳು..

ಅಲೆಮಾರಿಯ ಡೈರಿ

mehandale100@gmail.com

ಒಂದು ಅಂದಾಜಿನ ಪ್ರಕಾರ ಕೇವಲ ಹತ್ತೇ ಬ್ಯಾಂಕುಗಳಲ್ಲಿ ಜಮೆಯಾಗಿರುವ ಈ ಒಂಬೈನೂರು ಕೋಟಿ ರೂ. ಹೊರತಾಗಿಯೂ ಇತರ ಸುತ್ತಮುತ್ತಲ ಸಂಘ/ಸೊಸೈಟಿ/ಪೋಸ್ಟ್ ಆಫೀಸು ಇತ್ಯಾದಿಗಳಲ್ಲಿ ಹೂಡಿಕೆ ಆಗಿರುವ ಮೊತ್ತ ಲೆಕ್ಕಿಸಿದರೆ ಸಮುದಾಯದ ಬಗ್ಗೆ ಇತರರು ಬೆಚ್ಚಿ ಬೀಳುತ್ತಾರೆ.

ಭಾರತದ ಕೊನೆಯ ಹಳ್ಳಿಯ ಬಗ್ಗೆ ಕೇಳಿದ್ದೀರಿ, ಕೊನೆಯ ಚಹ ದುಕಾನ್ ಬಗ್ಗೆ ಕೇಳಿದ್ದೀರಿ.. ಕೊನೆಯ ಬಾರ್ಡರ್ ವಿಲೇಜ್ ಗೊತ್ತಿದೆ. ಕೊನೆಯ ಸೈನಿಕ ಶಾಲೆ ನೋಡಿದ್ದೀರಿ, ಅತ್ಯಂತ ದುರ್ಗಮ ಮತ್ತು ಭಾರತದ ಅತ್ಯಂತ ಎತ್ತರದ ಪೋಸ್ಟ್ ಆಫೀಸು ಇರುವ ಊರೂ ಗೊತ್ತಾ ಗಿದೆ. ಕೊಟ್ಟ ಕೊನೆಯ ಶತ್ರುಗಳ ಸರಹದ್ದಿನ ತುದಿಯನ್ನೆ ತಲೆದಿಂಬಾಗಿಸಿ ಮಲಗಿಸುವ ಹಳ್ಳಿಗಳ ಲಿಸ್ಟೇ ಇದೆ. ಶಾಲೆಯೇ ಇರದ, ನೀರಿರದ, ಆಸ್ಪತ್ರೆ ಎಂದರೇನು, ಬಸ್ ಎಂದರೇನು? ಎಂದು ಗೊತ್ತಿರದ, ದಾರಿಗಳೆ ಇಲ್ಲದ, ಅಂಗಡಿಗಳೂ ಇಲ್ಲದ, ಕೊನೆ ಕೊನೆಗೆ ಮೊನ್ನೆ ಮೊನ್ನೆವರೆಗೂ ಕರೆಂಟು ಬಾರದ, ಸಿಲೆಂಡರ್ ಗೊತ್ತೇ ಇರದ, ಈಗಲೂ ನದಿ ದಾಟಿದರೆ ಮಾತ್ರ ಮನೆ ಎನ್ನುವ ಹತ್ತು ಹಲವು ರೀತಿಯ ಇಲ್ಲಗಳ ಮತ್ತು ಇದೇನಾ ವಿಶೇಷತೆ ಎನ್ನುವ ನೂರಾರು ಹಳ್ಳಿಗಳಿವೆ.

ಅಷ್ಟೇಕೆ, ಊರ ಜನರೆಲ್ಲ ಸೇರಿ ಇತರರ ಸಹಾಯದಿಂದ ಸ್ಥಾಪಿಸಿರುವ ಪುಸ್ತಕದ ಹಳ್ಳಿಗಳೂ ಇವೆ. ಇಲ್ಲಿ ಯಾರ ಮನೆ ಜಗುಲಿ, ಕಟ್ಟೆ ಕಪಾಟು, ಊರ ಸಂದಿಗೊಂದಿಗಳಲ್ಲೆ ಬುಕ್ಕೋ ಬುಕ್ಕು. ಆದರೆ ನಮ್ಮೂರಲ್ಲಿ ಬಡವರೇ ಜಾಸ್ತಿ, ನಮ್ಮೂರಲ್ಲ ಪಾಪದ ಜನ, ನಮ್ಮೂರಲ್ಲ ಜನಕ್ಕಿಂತ ದನವೇ ಜಾಸ್ತಿ ಎಂಬೆ ವಿಶೇಷಣಗಳ ನಡುವೆ, ನಮ್ಮೂರಲ್ಲಿ ಇದ್ದಬದ್ದವರೆಲ್ಲ ಬರೀ ದುಡ್ಡಿದ್ದವರೇ ಎಂದಿದ್ದು ಎದರೂ ಕೇಳಿದ್ದೀರಾ..? ನಮ್ಮೂರ ಪ್ರತಿಯೊಬ್ಬರೂ ಕೋಟ್ಯಧೀಶರೇ, ನಮ್ಮೂರ ಪ್ರತಿಯೊಬ್ಬ ಮನುಷ್ಯನೂ ವಿದೇಶದಲ್ಲಿರುವವವನೇ, ನಮ್ಮೂರ ಎಲ್ಲ ಬ್ಯಾಂಕುಗಳಲ್ಲೂ ಭಾರತದ ರಿಸರ್ವ್ ಬ್ಯಾಂಕ್ ಕಣ್ಣಿಡುವಷ್ಟು ದುಡ್ಡಿದೆ ಎಂದೆಲ್ಲ ಕೇಳಿದ್ದೀರಾ..? ಇಲ್ಲವಾದರೆ ಈ ಮಧಾಪರಕ್ಕೆ ಬನ್ನಿ.

ಈ ಊರು ಜಗತ್ತಿನಲ್ಲಿ ಯಾವ ಸ್ಥಾನ ಪಡೆಯುತ್ತದೋ ಇಲ್ಲವೋ ಗೊತ್ತಿಲ್ಲ. ಅದರೆ ಸದ್ಯಕ್ಕೆ ಭಾರತದಲ್ಲಿ ಮಾತ್ರ ಇದು ಅತ್ಯಂತ ಶ್ರೀಮಂತ ಹಳ್ಳಿ. ಡೌಟೇ ಬೇಡ. ಬರೋಬ್ಬರಿ ಹತ್ತು ಸಾವಿರ ಕೋಟಿ ಬರೀ ಬ್ಯಾಂಕುಗಳಲ್ಲಿ ಸುಖಾಸುಮ್ಮನೆ ಬಿದ್ದು ಕೊಳೆಯು ತ್ತಿರುವಷ್ಟು ದುಡ್ಡು ಈ ಹಳ್ಳಿಯಲ್ಲಿದೆ. ಏನಿಲ್ಲದಿದ್ದರೂ ಊರಲ್ಲಿ ಕರೆಂಟು ಹೋಗದ ಬ್ಯಾಂಕುಗಳಿವೆ. ಮನೆಗಳಿಗೆ ಇಲ್ಲದಿದ್ದರೂ ಪರವಾಗಿಲ್ಲ ದೇಶದ ಅತ್ಯಂತ ಆಧುನಿಕ ತಂತ್ರಜ್ಞಾನದ ಸುರಕ್ಷಾ ನಿಯಮಗಳನ್ನು ಅಳವಡಿಸಿಕೊಂಡಿದೆ. ಲೆಕ್ಕ ತಪ್ಪಿ ಸೆಕ್ಯೂರಿಟಿ ಗಳಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ದುಡ್ಡಿರುವ ಈ ಜನಗಳ ಈ ಹಳ್ಳಿಯಲ್ಲಿ ಈ ದುಡ್ಡಿರುವ ಜನರಾರೂ ಮಾತಾಡುವುದಿಲ್ಲ. ಅವರ ದುಡ್ಡಿಗೆ ಮಾತ್ರ ಅವರ ಹಳ್ಳಿ. ಅವರ ವ್ಯವಸ್ಥೆ ಮಾತ್ರ ಈ ಹಳ್ಳಿ. ಬಾಕಿ ಉಳಿದಂತೆ ಏನೇ ಕಾರೋಬಾರುಗಳಿದ್ದರೂ ಇವರೆಲ್ಲ ದುಡ್ಡಿಡಲು ಮಾತ್ರ ಈ ಹಳ್ಳಿ. ಉಳಿದೆಲ್ಲ ಇಂಗ್ಲೆಂಡು, ಅಮೇರಿಕೆ, ಕೆನಡಾ, ಆಸ್ಟ್ರೇಲಿಯಾದಲ್ಲಿದ್ದು ಊರ ಮೇಲೆ ನಿಗಾ ಇರಿಸಿಕೊಂಡು ಬದುಕುತಿದ್ದಾರೆ ಜನ.

ಗುಜರಾತಿನ ಸಣ್ಣ ಊರಾದ ಈ ಮಧಾಪರ ಇವತ್ತು ಭಾರತದ ಅತ್ಯಂತ ಶ್ರೀಮಂತ ಹಳ್ಳಿ. ಹತ್ತಾರು ಸಾವಿರ ಕೋಟಿ ಮಿಗಿಲು ಡೆಪಾಸಿಟ್ ಮತ್ತು ಹಣದ ವಹಿವಾಟಿನ ಈ ಊರಿನಲ್ಲಿರುವ ಪ್ರತಿ ಮನೆಗೊಬ್ಬ ಹೆಚ್ಚು ಕಮ್ಮಿ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಅದರಾಚೆಗೆ ಅಲ್ಲ ವಹಿವಾಟು ಇತ್ಯಾದಿ ನಂತರವೂ ಈ ಊರಿನಲ್ಲಿ ಹಣವನ್ನು ತಂದಿರಿಸುತ್ತಾರೆ. ಬೇಕಿದ್ದ ಖರ್ಚಿಗೆ ಹಣ ನೀಡುತ್ತಾರೆ. ಕೈಲಾದ ಮಟ್ಟಿಗೆ ಊರಿಗೆ ಏನೆ ಬೇಕೋ ಅದನ್ನೆಲ್ಲ ಮಾಡುತ್ತಾರೆ.

ಉಳಿದಂತೆ ತಮ್ಮ ಊರಿನ ಬಲವರ್ಧನೆಗಾಗಿ ಕಚ್ ಮಧಾಪರ ಎಂಬ ಸೊಸೈಟಿಯನ್ನು ಸ್ಥಾಪಿಸಿಕೊಂಡಿದ್ದು ಆ ಮೂಲಕ
ಮಧಾಪರದಲ್ಲಿ ಬೇಕಾಗಿರುವ ವ್ಯವಸ್ಥೆಯನ್ನೆಲ್ಲ ನಿರ್ವಹಿಸುತ್ತಿದ್ದಾರೆ. ನಾನು ಹಿಂದೊಮ್ಮೆ ಗುಜರಾತಿನ್ ವಾವ್‌ಗಳ ಬಗ್ಗೆ
ಬರೆದಿದ್ದು ನಿಮಗೆ ನೆನಪಿರಬಹುದು. ಇವತ್ತಿಗೂ ಗುಜರಾತಿನ ಅತ್ಯಂತ ಚೆಂದ ಮತ್ತು ಅಪರೂಪದ ಶಿಲ್ಪ ನೈಪುಣ್ಯ ಇರುವ
ಹಳೆಯ ಚಾರಿತ್ರಿಕ ಮತ್ತು ಐತಿಹಾಸಿಕ ಸ್ಥಳಗಳೆಂದರೆ, ಬಾವಿಗಳು. ಬಹುಶಃ ಗುಜರಾತಿನಲ್ಲಿ ಅರಮನೆಗಳ ನಂತರ ಅತ್ಯಂತ
ಚೆಂದದ ಮತ್ತು ಚಾರಿತ್ರಿಕವಾಗುವಂತೆ ನಿರ್ಮಿಸಿರುವ ನಿರ್ಮಾಣಗಳೆಂದರೆ ಅಪರೂಪದ ಅದ್ಭುತ ಶಿಲಾ ನೈಪುಣ್ಯದ ಬಾವಿಗಳು.

ಆ ಸಂತತಿಯ ಶಿಲ್ಪಿಗಳ ಮತ್ತು ನಿರ್ಮಾಣದ ಕಾಮಗಾರಿಗಳ ಪೈಕಿ ಕೆಲವು ಕುಟುಂಬಗಳು ಇತ್ತ ಬಂದು ನೆಲೆಸಿದಾಗ ರೂಪ ಗೊಂಡಿದ್ದೇ ಮಧಾಪರ ಗ್ರಾಮ. ಗುರ್ಜರ್ ಕ್ಷತ್ರಿಯರ ಮೂಲ ನೆಲೆಯಾದ ‘ರಣ್ ಆಫ್ ಕಚ್’ ಎಂದೇ ಹೆಸರು ಮಾಡಿರುವ ಕಚ್ ಜಿಲ್ಲೆ ಈ ನೆಲೆಯಲ್ಲಿ ಮೊದಲಿಗೆ ಆಳ್ವಿಕೆಗೆ ಬಂದಿದ್ದು ರಾಜ ಸೋಲಂಕಿ ಕುಟುಂಬ. ಅವರ ತಲೆಮಾರಿನ ಮಧಕಂಜಿ ಸೋಲಂಕಿ ಈ ಊರನ್ನು ಮೊದಲಾಗಿ ಕಟ್ಟಿ ಬೆಳೆಸಿದ ಕಾರಣ ಮಧಾಪರ ಆಗಿ ಬದಲಾದ ಈ ಹಳ್ಳಿಯಲ್ಲಿ ಈಗಲೂ ಹಳೆಯ ಪಳೆಯುಳಿಕೆ ಗಳಿವೆ.

ಮೂಲ ಕಚ್ ಜಿಲ್ಲೆಯ ಬುಜ್‌ನಿಂದ ಕೇವಲ ಮೂರು ಕಿ.ಮೀ. ದೂರದ ಈ ಶ್ರೀಮಂತ ಹಳ್ಳಿಯಲ್ಲಿ, ಜನರ ಶ್ರೀಮಂತಿಕೆಯ ಪರಿಣಾಮವಾಗಿ ವಿವಿಧ ಸೇವೆಗಾಗಿ ಬಂದು ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಮತ್ತು ಅವರು ಅರ್ಥಿಕವಾಗಿ ಬಲಾಢ್ಯ ವಾಗಿರುವ ಕಾರಣ ಇದರ ಜನಸಂಖ್ಯೆ, ಹಳ್ಳಿ ಎನ್ನುವ ಡೆಫಿನಿಶನ್ ದಾಟುವಂತೆ ಒಂದು ಲಕ್ಷಕ್ಕೂ ಮೀರುತ್ತಿದೆ. ಇಲ್ಲಿನ ಜುನಾ ವಾಸ್ ಪ್ರದೇಶ ಮೊದಲ ಹಳೆಯ ನಿವಾಸವಾಗಿದ್ದರೆ ನಂತರದಲ್ಲಿ ಇದು ನವೋವಾಸ್ ಆಗಿ ಬದಲಾಗಿದೆ.

ಪುರಾತನ ಶೈಲಿಯ ಪಳೆಯುಳಿಕೆಗಳನ್ನು ಉಳಿಸಿಕೊಂಡಿರುವ ಮಧಾಪರ ಈಗಲೂ ಆಧುನಿಕ ವ್ಯವಸ್ಥೆಗಳ ಶ್ರೀಮಂತ ಹಳ್ಳಿ.
ಊರ ಜತೆಗೆ ಬೆಳೆದು ಬದುಕಿರುವ ಎರಡು ದೊಡ್ಡ ಸರೋವರರೂಪಿ ಕೆರೆಗಳು ಮರುಭೂಮಿಯ ಮಗ್ಗುಲಲ್ಲಿ ಇದ್ದರೂ ಹಸಿರು ಉಕ್ಕಿಸುವಲ್ಲಿ ಸಫಲವಾಗುತ್ತಿವೆ. ಈ ಎರಡೂ ಸರೋವರದ ಕತೆಗಳ ಇತಿಹಾಸವೂ ಮಜವಾಗಿದೆ. ಮೊದಲಿಗೆ ಊರ ಜನಕ್ಕಿರಲಿ ಎಂದು ಜನಸಾಗರ್ ಅನ್ನು ಕೆಲವೇ ದಶಕಗಳ ಮೊದಲಿಗೆ ಜಗಮಲ್ ಭೀಮಾ ರಾಠೋಡ್ ನಿರ್ಮಿಸಿದ. ಅದಕ್ಕೆ ಮೊದಲಿಗೆ ಜನಸಾಗರ್ ಹೆಸರಿನಿಂದ ಅವರನ್ನು ಗುರುತಿಸತೊಡಗಿದರಲ್ಲ, ಅ ಮತ್ತೊಂದು ನಿರ್ಮಾಣ ಕಾರ್ಯ ಆರಂಭವಾಯಿತು.

ಕರಸನ್ ಭೀಮಜಿ ರಾಠೋಡ್ ಅದಕ್ಕಿಂತ ದೊಡ್ಡ ಗಾತ್ರದ ಸರೋವರದ ನಿರ್ಮಾಣಕ್ಕೆ ಇಳಿದು ಅದನ್ನೂ ಊರಿಗಾಗಿ ನಿರ್ಮಿಸಿ ಟ್ಟರು ನೋಡಿ, ‘ಭೀಮಜಿ ಕೊಳ’ ಎಂದೇ ಅದಕ್ಕೂ ಸಹೋದರನ ಹೆಸರು ಇರಿಸಲಾಯಿತು. ಆದರೆ ಮೂಲತಃ ಈ ಪ್ರದೇಶದ ಕೊನೆಯ ರಾಜನಾಗಿದ್ದ ಮೇಘರಾಜ್‌ಜೀ ನಿರ್ಮಿಸಿದ್ದ ಸರೋವರ ಈಗಲೂ ‘ಮೇಘರಾಜ ಕೊಳ’ ಎಂದೇ ಇದ್ದರೂ
ಈ ಸಹೋದರರ ಕಾಂಪಿಟೇಷನ್ ಎದುರಿಗೆ ಊರಿಗೆ ಎರಡು ದೊಡ್ಡ ನೀರಿನ ಸರೋವರ ಚೆಕ್ ಡ್ಯಾಮ್‌ಗಳು. ಶಾಶ್ವತ ನೀರ
ಸಮಸ್ಯೆಯೇನೋ ಪರಿಹಾರವಾಗಿತ್ತು, ಆದರೆ ಐತಿಹಾಸಿಕ ಮೇಘರಾಜ್ ಕೊಳ ಹಿಂದಕ್ಕೆ ಸರಿಯಿತು.

ಎಂದಿನಂತೆ ಗುಜರಾತಿನ ಪಟೇಲ್ ಸಮುದಾಯ ಇಲ್ಲೂ ಹಿಡಿತ ಸಾಧಿಸಿದ್ದರೆ ಇತರೆ ವರ್ಗಗಳ ಜನಾಂಗ ಕಡಿಮೆಯೇ. ಆದರೆ ಹಣದ ವ್ಯವಹಾರ ಮತ್ತು ಹಿಡಿತ ಎಲ್ಲವನ್ನು ಮರೆಸುತ್ತದೆ. ಹಾಗಾಗಿ ಮಧಾಪರದಲ್ಲಿ ಉಳಿದ ಊರುಗಳಿಗೆ ತಟ್ಟುವ ಬಿಸಿ ತಟ್ಟುತ್ತಿಲ್ಲ. ಊರಿನಲ್ಲಿದ್ದ ಎಲ್ಲ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಕಾರಣ ದೇವಸ್ಥಾನಗಳು ಒಂದಕ್ಕಿಂತ ಒಂದು ಚೆಂದವಾಗಿ ಅರಳಿವೆ. ಇಲ್ಲಿನ ಪ್ರಸಿದ್ಧ ಸ್ವಾಮಿ ನಾರಾಯಣ ಮಂದಿರಗಳ ಸರಣಿ ಇಲ್ಲೂ ಮುಂದುವರಿದಿದ್ದು, ಎಂದಿನಂತೆ ಗುಜರಾತಿ ಚಹದ ಘಮ ಇಲ್ಲ ಹೋದಲ್ಲಿ ಬಂದಲ್ಲಿ ಕರೆಯುತ್ತದೆ.

ಹಲವು ಚೌಕಿಗಳಲ್ಲಿ ಶುಂಠಿ ಕುಟ್ಟುತ್ತಲೇ ಇರುವ ಈ ಗುಜರಾತಿನ ಚಹದ ಚಿಕ್ಕಚಿಕ್ಕ ಚೌಕಿ ಅಂಗಡಿಗಳಲ್ಲಿ ಆಮೋದವೇ ಬೇರೆ. ಕೂತಲ್ಲಿ ನಿಂತಲ್ಲಿ ಇಲ್ಲ ಅಂತಾರಾಷ್ಟ್ರೀಯ ರಾಜಕೀಯದಿಂದ ಲೋಕಲ್ ಪಟೇಲ್ ಗಳವರೆಗೂ ಜಡ್ಜ್‌ಮೆಂಟ್ ನಡೆಯು ತ್ತಿರುತ್ತದೆ. ಹೆಚ್ಚಿನ ಚರ್ಚೆ ನಡೆಯುವುದೇ ಕಟ್ಟಡ ಕಾಮಗಾರಿ ಕಾಂಟ್ರಾಕ್ಟುಗಳ ಮೇಲೆ. ಕಾರಣ ಇಲ್ಲಿಂದ ಹೊರಬಿದ್ದು  ಕಳೆದೆರಡು ತಲೆ ಮಾರಿನಿಂದ ಹೊರದೇಶಗಳಾದ ಅಬುದಾಭಿಯಿಂದ ಇಂಗ್ಲೆಂಡ್, ಅಸ್ಟ್ರೇಲಿಯಾ, ಅಫ್ರಿಕಾ ದೇಶಗಳು ಮತ್ತು ಯುರೋಪ್ ಇಲ್ಲ ಸೇರಿಕೊಂಡಿರುವ ಇವರೆಲ್ಲರೂ ಮುಖ್ಯವಾಗಿ ಆಯ್ದುಕೊಂಡಿರುವುದೇ ಕನ್ಸ್‌ಟ್ರಕ್ಷನ್ ಕಂಪನಿಗಳನ್ನು ನಡೆಸುವ ಉದ್ಯೋಗ.

ಅದರಲ್ಲೂ ಭಾರತೀಯ ಎಂಜಿನಿಯರ್‌ಗಳಿಗೆ ಇರುವ ಬೇಡಿಕೆ ಬೇರೆಲ್ಲೂ ಇಲ್ಲ ಎನ್ನುವುದನ್ನೂ ಇವರು ಪದೇಪದೆ ಸಾಬೀತು ಮಾಡುತ್ತಾರಲ್ಲದೆ ಒಂದು ಅಂದಾಜಿನ ಪ್ರಕಾರ ಕೇವಲ ಹತ್ತೇ ಬ್ಯಾಂಕುಗಳಲ್ಲಿ ಜಮೆಯಾಗಿರುವ ಈ ಒಂಬೈನೂರು ಕೋಟಿ ರೂ.
ಹೊರತಾಗಿಯೂ ಇತರ ಸುತ್ತಮುತ್ತಲ ಸಂಘ/ಸೊಸೈಟಿ/ ಪೋಸ್ಟ್ ಆಫೀಸು ಇತ್ಯಾದಿಗಳಲ್ಲಿ ಹೂಡಿಕೆ ಆಗಿರುವ ಮೊತ್ತ
ಲೆಕ್ಕಿಸಿದರೆ ಸಮುದಾಯದ ಬಗ್ಗೆ ಇತರರು ಬೆಚ್ಚಿ ಬೀಳುತ್ತಾರೆ ಎನ್ನುತ್ತದೆ ವರದಿಯೊಂದು. ಆ ರೇಂಜಿನಲ್ಲಿ ಇಲ್ಲಿನ ಜನರನ್ನೂ
ಎಂಜಿನಿಯರ್‌ಗಳನ್ನು ಕರೆದೊಯ್ದು ನಾಡು ಕಟ್ಟುತ್ತಿರುವ ಗುಜ್ಜುಭಾಯಿ ಪಟೇಲ್‌ರ ಹಳ್ಳಿಯ ಪರ್ ಕೆಪಿಟಾ ಇನ್‌ಕಮ್ಮು
ಏನಿಲ್ಲವೆಂದರೂ ಕನಿಷ್ಠ ಹದಿನೈದು ಲಕ್ಷ ಇದೆ.

ಊರಲ್ಲಿರುವ ಯಾವನೊಬ್ಬನೂ ಖಾಲಿಬಿದ್ದು ಗಳಿಸುವ ಮಾತೇ ಇಲ್ಲ. ಶೇ.೭೦ಕ್ಕೂ ಹೆಚ್ಚು ಜನರ ಕುಟುಂಬದ ಸದಸ್ಯರು ವಿದೇಶದಲ್ಲಿ ಕಾಮಗಾರಿಗೆ ಇಳಿದಿರುವುದರಿಂದ ಅವರಿಗೆ ಬ್ಯಾಕ್‌ಅಪ್ ಕೊಡುವ ಕೆಲಸಕ್ಕೇ ಅರ್ಧ ಊರ ಜನ ಸಾಕಾಗುವುದಿಲ್ಲ.
ಜತೆಗೆ ಅಲ್ಲಿಗೆ ಕಳಿಸುವ ಬದಲಾಗಿ ಇ ಮಾನವ ಶಕ್ತಿಯನ್ನು ಕಾಯ್ದಿರಿಸಿಕೊಂಡು ಕೆಲಸ ತೆಗೆದುಕೊಳ್ಳುತ್ತಾ ಉಳಿದೆಲ್ಲ ಆನ್
ಲೈನ್‌ನಲ್ಲೇ ನಿರ್ವಹಿಸುವುದರಿಂದ ಇಲ್ಲ ಆಯಾ ಕುಟುಂಬಗಳೆ ನಡೆಸುವ ಆಫೀಸುಗಳೆ ಊರ ತುಂಬ.

ಹೀಗಾಗಿ ಎದ್ದು ಬಿದ್ದರೂ ಊರ ಜನ ಮತ್ತು ಆಯಾ ಸಂಬಂಧಿತರು ನಿರಂತರ ವಿದೇಶಿ ಸಂಪರ್ಕದಲ್ಲಿರುವವರೇ. ಸರಕಾರ ಏನಾದರೂ ಮಾಡಿತಾ ಇಲ್ಲವಾ ಎಂಬುದರ ಬಗ್ಗೆ ಇವರಿಗಿಲ್ಲ ಗೊಡವೆ. ತಾವುತಾವೇ ಬೇಕಾಗಿದ್ದನ್ನು ಮಾಡಿಕೊಂಡು ಮನೆ ಕಾಮಗಾರಿ ಎಂದು ಇರುವ ಮಧಾಪರ ಗ್ರಾಮ, ರಾಜಕೋಟದಿಂದ ಕೃಷ್ಣನ ನಗರಿಗೆ ತೆರಳಿ, ಅಲ್ಲಿಂದ ಫೋರ್ ಬಂದರ್ ಕಡೆಗೆ ಚಲಿಸುವ ಉಮೇದಿನಲ್ಲಿದ್ದಾಗ, ಇತ್ತ ಬುಜ್ ಕಡೆ ಹಾಯುವ ಮೊದಲು ಈ ಚಹ ಎಂಬ ವ್ಯಾಮೋಹಕ್ಕೆ ಸಿಕ್ಕಿ ಇಳಿದಾಗ ಅನಿರೀಕ್ಷಿತವಾಗಿ ಎಡವಿ ನಿಂತಾಗ ದಕ್ಕಿದ ಹಳ್ಳಿ.

ಉಳಿದಂತೆ ಎಂದಿನಂತೆ ಮಾಮೂಲಿನ ಊರಾದರೂ ಶ್ರೀಮಂತಿಕೆಯ ಲೆಕ್ಕದಲ್ಲಿ ಜಾಗತಿಕ ದಾಖಲೆಗೆ ಸೆಡ್ಡು ಹೊಡೆಯು ತ್ತಿರುವುದರಿಂದ, ಒಬ್ಬೊಬ್ಬರ ಡೆಪಾಸಿಟ್ಟುಗಳೇ ಒಂದೊಂದು ಬ್ಯಾಂಕಿನ ವಹಿವಾಟಿನಷ್ಟಿರುವುದರಿಂದ ಇದೆಲ್ಲ ನಿಮಗೂ ಗೊತ್ತಿರಲಿ ಎಂದು ಬರೆಯಬೇಕಾಯಿತು.