ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಅದೊಂದು ಕಾಲವಿತ್ತು, ಹೆಣ್ಣು ನೋಡುವ ಶಾಸ್ತ್ರದ ಕಾಲ. ಇವತ್ತು ನಮ್ಮ ಅಣ್ಣಗೆ ಕನ್ಯೆ ಬರ್ತದೆ, ನಮ್ಮ ಮಾವಗೆ ಹೆಣ್ಣು ಬರುತ್ತದೆ ಎಂದು ಓಣಿಯಲ್ಲೆಲ್ಲಾ ನಾವು ಹುಡುಗರು ಕೂಗಾಡಿ, ಸಂಭ್ರಮಪಡುತ್ತಿದ್ವಿ. ನಮ್ಮ ಈ ಸಂಭ್ರಮಕ್ಕೆ ಕಾರಣವೇನೆಂದರೆ, ವರನ ಕಡೆಯವರು ಹೆಣ್ಣು ನೋಡಿ ಹೋದ ಕೂಡಲೇ ಅವರಿಗಾಗಿ ಮಾಡಿದ್ದ ಚಕ್ಕುಲಿ, ಬೇಸನ್ ಉಂಡೆ, ಗಿಲಗಂಚಿ (ಕರ್ಚಿಕಾಯಿ) ಹುರಿದ ಅವಲಕ್ಕಿ, ಇಲ್ಲವೆ ಮಾಡಿದ ಉಪ್ಪಿಟ್ಟು ಸಿಗುತ್ತಿತ್ತು.
ದಾವಣಗೆರೆಯ ಕಡೆ ವರ ಬಂದಿತೆಂದರೆ, ಗಿರುಟ್ಟ, ನರ್ಗೀಸ್, ಮಿರ್ಚಿ ಬೋಂಡಾ ಸಿಗುತ್ತಿತ್ತು. ಬೆಂಗಳೂರು ಕಡೆ ವರ ಬಂದಿತೆಂದರೆ, ಉಪ್ಪಿಟ್ಟು, ಉಪ್ಪು, ಖಾರ, ಹುಳಿ ಹಾಕಿ ಹುರಿದ ಗೋಡಂಬಿ, ಖೀರು, ಬದಾಮಿ ಹಾಲುಇಲ್ಲವೇ ಕಾಫಿ. ರಾಯಚೂರು ಕಡೆ ವರ ಬಂದಿತೆಂದರೆ ಚುರುಮುರಿ, ಮಿರ್ಚಿ, ಚಹಾ ಹೀಗೆ ತಿಂಡಿಗಳ ವರ್ಗೀಕರಣದ ಮೇಲೆ ವರನ ಊರಿನ ಊಹೆ ಮಾಡುತ್ತಿದ್ದೆವು.
ಆಗೆಲ್ಲ ಅಂಬಾಸಿಡರ್ ಕಾರಲ್ಲಿ ಬೀಗರು ಬಂದರೆಂದರೆ, ತಮ್ಮದೇ ಕಾರಲ್ಲಿ ಬಂದಾರಂತೆ, ಭಾರಿ ಶ್ರೀಮಂತರಿರಬೇಕೆಂದು
ಊಹಿಸುತ್ತಿದ್ದೆವು. ನಮ್ಮ ಓಣಿಯ ದೇವಮ್ಮ, ಜಾನಮ್ಮ, ರಾಧಕ್ಕ, ಸೀತಮ್ಮ, ಶ್ರೀಲತಮ್ಮರೆಲ್ಲ ಹಾರ್ಮೋನಿಯಂ ಬಾರಿಸುತ್ತಾ ವರನ ಮುಂದೆ ಒಂದು ಹಾಡು ಹೇಳಬೇಕಿತ್ತು. ಪೇಪರ್ ಓದಬೇಕಿತ್ತು. ಎಲ್ಲರಿಗೂ ನಡೆಯುತ್ತಾ ಬಂದು, ಬಗ್ಗಿ, ಬಗ್ಗಿ ನಮಸ್ಕಾರ ಮಾಡಬೇಕಿತ್ತು. ಜಾನಮ್ಮನ ಪರಮನೆಂಟ್ ಹಾಡು ಹಾರ್ಮೋನಿಯಂ ಮೇಲೆ ಎಂದರೆ, ‘ಲಂಬೋದರ ಲಕುಮಿಕರ’ ದೇವಮ್ಮನದು ಖಾಯಂಸೂರಿನ ಹಾಡು ‘ದಯಮಾಡೋ ರಂಗ ದಯಮಾಡೋ, ದಯಮಾಡೋ ರಂಗ ಈ ದಾಸನ ಮೇಲೆ’ ಎಂಬುದಾಗಿತ್ತು.
ವರನ ಕಡೆಯ ಸೋದರ ಮಾವನೋ, ಮೊದಲ ಅಳಿಯನೋ, ಇಲ್ಲಾ ಆ ತಂಡದ ಜತೆಗೆ ಬಂದ ಆ ಊರಿನ ಅವರ ಓಣಿಯ,
ಬಡಾವಣೆ ಮಿತ್ರರಲ್ಲಿ ಯಾರಾದರೂ ಹಾಸ್ಯಪ್ರಜ್ಞೆಯವರಿದ್ದರೆ, ಅವರು ದೇವಮ್ಮನಿಗೆ ದಾಸನ ಮೇಲೆ, ಅಲ್ಲಮ್ಮ ನೀನು ಹೆಣ್ಣು ಮಗಳು, ದಾಸಿಯ ಮೇಲೆ ಎಂದು ಹಾಡಬೇಕು ಎಂದು ಚಟಾಕಿ ಹಾರಿಸಿ ಅಲ್ಲಿ ನಗೆಯ ವಾತಾವರಣ ತರುತ್ತಿದ್ದರು. ಆದರೆ, ಹಾಡಿದ ಕನ್ಯೆ ನಗುವಂತಿರಲಿಲ್ಲ, ನಾಚಿಕೊಳ್ಳಬೇಕಷ್ಟೆ, ಒಂದು ವೇಳೆ ಆಕೆಯೂ ಗೊಳ್ಳಂತ ನಕ್ಕರೆ, ಹುಡುಗಿಗೆ ತಿಳಿವಳಿಕೆಯಿಲ್ಲ,
ಮಂದಿಯೊಳಗೆ ನಕ್ಕು ಬಿಡ್ತಾಳೆ ಎಂದು ಅಪಖ್ಯಾತಿ ಬರುತ್ತಿತ್ತು.
ಒಂದು ವೇಳೆ ನಗದೆ ನಾನು ಕಲಿತ ಈ ಹಾಡಿನಾಗ ದಾಸನ ಮೇಲೆ ಅಂತ ಅದರಿ, ಎಂದು ಉತ್ತರ ಕೊಟ್ಟರೆ, ಹುಡುಗಿ ತಪ್ಪು ಒಪ್ಪಿಕೊಳ್ಳುವುದಿಲ್ಲ ಎದುರುತ್ತರ ಕೊಡುತ್ತಾಳೆ ಎಂಬ ಟೀಕೆ ಬರುತ್ತಿತ್ತು. ತಿಂಗಳಲ್ಲಿ ಮೂರು ನಾಲ್ಕು ವರ ಪರೀಕ್ಷೆ ಇದ್ದೇ ಇರುತ್ತಿದ್ದವು. ವರ ಬರುವ ಮನೆಯವರು ಹೂವು, ಹಣ್ಣು ಹಿಡಿದುಕೊಂಡು ಬಂದರೆ, ಉಪ್ಪಿಟ್ಟಿನ ರವಾ ಹುರಿಯುವ ವಾಸನೆ ಬಂದರೆ, ಇಂದು ಸಂಜೆ ವರ ಬರುತ್ತದೆ ಎಂದು ನಮಗೆ ತಿಳಿದುಬಿಡುತ್ತಿತ್ತು. ಆ ಕಾಲವೂ ಹಾಗಿತ್ತು.
ಆಗಿನ ಜನರು ಹಾಗಿದ್ದರು. ತಮ್ಮ ಮನೆಯ ಮಟ್ಟಿಗೆ ತಮ್ಮ ಪೂರ್ತಿಗೆ ತಿಂಡಿ ಮಾಡಿಕೊಳ್ಳುವವರಲ್ಲ. ಇಡೀ ಓಣಿಯ ಮಕ್ಕಳ ಲೆಕ್ಕ ಹಿಡಿದೇ ಮಾಡುತ್ತಿದ್ದರು. ಈ ತಿಂಡಿಯ ಆಸೆಗೆ ನನ್ನ ಗೆಳೆಯರಲ್ಲಿ ಒಬ್ಬನಾದ ರಾಮ ಎನ್ನುವವನು ಇವರಿಗೆ ಮದುವೇನೆ ಆಗಬಾರದೆಲೆ ಎಪ್ಪ, ಬರೀ ಹಿಂಗ ವರಗಳು ಬರುತ್ತಿರಬೇಕು, ನಮಗ ಬಗೆಬಗೆಯ ಪಳಾರ ಸಿಗುತ್ತವೆ ಎಂದು ಬಯಸುತ್ತಿದ್ದ, ಅರಸುತ್ತಿದ್ದ. ಪಾಪ, ಆ ಹೆಣ್ಣು ಹೆತ್ತ ತಂದೆ – ತಾಯಿಗಳು ನಮಗೆ ತಿಂಡಿ ಕೊಡುತ್ತಾ, ಅಕ್ಕಗೆ ಬೇಗ ಇದೇ ವರ, ಗಟ್ಟಿಯಾಗಲಿ
ಅಂತ ಅನ್ನಿರೋ ಎಂದು ಬೇಡಿಕೊಳ್ಳುತ್ತಿದ್ದರು.
ರಾಮ ಆಗ ಹೀಗೆ ಅವರಿಗೆ ತಿರುಮಂತ್ರ ಹಾಕುತ್ತಿದ್ದ. ಆಗ ಪಾಪ, ಆ ದಂಪತಿಗಳು ಹಾಗನ್ನಬೇಡೋ ರಾಮ, ಬೇಗ ಲಗ್ನ ಆದರೆ,
ನಿನಗ ಅಂಗಿ – ಚಡ್ಡಿ ಹೊಲಿಸಿ ಕೊಡ್ತೀನಿ. ಆಗ ರಾಮ, ನಾನು ಚಡ್ಡಿ ಒಲ್ಲೆ, ನನಗೆ ಬೆಲ್ಬಾಟಂ ಪ್ಯಾಂಟ್ ಬೇಕು, ಅಂದರೇನೆ ನಾನು ಮದುವೆ ಆಗಲಿ ಅನ್ನಾವ ಎಂದು ಅವನ ಬಾಯಿಂದ ನುಡಿಸಿ, ಅವನ ತಲೆ ಸವರಿ ಮುದ್ದಿಸಿ ಕಳಿಸುತ್ತಿದ್ದರು.
ಎಂಥ ಕಾಲವದು. ನಾನು ಹೇಳುತ್ತಿರುವುದು 1970-80ರ ದಶಕದ್ದು. ನನಗಾಗ 12-13ರ ಪ್ರಾಯ. ಗಂಗಾವತಿಯ ರಾಯರ ಓಣಿಯಲ್ಲಿ ಎಲ್ಲಾ ಬ್ರಾಹ್ಮಣರ ಮನೆಗಳೇ ಇದ್ದರೂ ನಡುವೆ ಕೆಲವು ಶೆಟ್ಟರ ಮನೆಗಳಿದ್ದವು. ನಮ್ಮ ಬಹುಪಾಲು ಆಟವೆಲ್ಲಾ ಅವರ ಮನೆಗಳಲ್ಲೇ. ನಾವು ಬ್ರಾಹ್ಮಣರು ದೇವರ ಸಮಾನ ಎಂದು ಅವರು ಭಾವಿಸಿ, ದಾನ, ದಕ್ಷಿಣೆ, ನಮಗೆ ಅಗ್ರಸ್ಥಾನ ಕೊಡು ತ್ತಿದ್ದರೆ, ನಾವು ಇಷ್ಟು ಶ್ರೀಮಂತರು, ನಮ್ಮನ್ನೆಷ್ಟು ಗೌರವಿಸುತ್ತಾರಲ್ಲ ಎಂದು ಅವರನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದೆವು.
ನಮಗೆ ಉಪನಯನ ಆಗುವವರೆಗೂ ನಾವು ಅವರ ಮನೆಯಲ್ಲಿಯೇ ಊಟ, ತಿಂಡಿ, ಅವರ ಹಾಸಿಗೆಯ ಮೇಲೆಯೆ ಹೊರಳಾಡುವುದು, ಲಗಾಟಿ ಹೊಡೆಯುವುದು, ಅವರ ಮನೆಯಲ್ಲಿಯೇ ಸ್ನಾನ, ಅವರ ಜತೆಗೆ ಒಡನಾಟ, ಓಡಾಟ ಎಲ್ಲವೂ.
ಉಪನಯನವಾಯಿತೆಂದರೆ, ನಮ್ಮ ಮಧ್ಯೆ ದೊಡ್ಡ ಗೋಡೆ ಎದ್ದುಬಿಡುತ್ತಿತ್ತು. ಪ್ರತಿಯೊಂದು ಹಬ್ಬವೂ, ಪ್ರತಿಯೊಂದು ಮಾಸವೂ ಆಗ ವರ್ಣರಂಜಿತವೇ.
ಪ್ರತಿದಿನವೂ ಉಲ್ಲಾಸದಿಂದ ಹೊಸದರ ನಿರೀಕ್ಷೆಯಲ್ಲಿ ಹಾಸಿಗೆಯಿಂದ ಏಳುತ್ತಿದ್ದೆವು. ಸಮಯದ ಪರಿವೇ ಇಲ್ಲದೆ ಆಟ, ನೋಟ, ಓಡಾಟ ಕಂಡದ್ದೆಲ್ಲವೂ ಆಗ ಕೌತುಕವೇ. ಆಗೆಲ್ಲಾ ಹುಡುಗಿಯರು ಲಂಗ – ಧಾವಣಿ, ಕಾಲಿಗೆ ಬೆಳ್ಳಿ ಗೆಜ್ಜೆ, ಎರಡು ಜಡೆ, ಮುಖ ತೊಳೆದು ಕುಟಿಕುರಾ ಪೌಡರ್ ಹಚ್ಚಿದರೆ, ಅದೇ ದೊಡ್ಡ ಅಲಂಕಾರ. ಇನ್ನು ಗಂಡು ಹುಡುಗರದು ಅಂಗಿ – ಚಡ್ಡಿ, ಬೆಳಿಗ್ಗೆ ಎದ್ದಾಗ ಮುಖ ತೊಳೆದದ್ದು ಬಿಟ್ಟರೆ, ಮತ್ತೆ ಮುಖಕ್ಕೆ ನೀರಿಲ್ಲ.
ಪೌಡರ್ ಹಚ್ಚಿದರಂತೂ ಅವನನ್ನು ಎಲ್ಲರೂ ಹುಡುಗಿ ಎಂದೇ ಛೇಡಿಸುತ್ತಿದ್ದೆವು. ಬೀಡಿ, ಸಿಗರೇಟ್, ಜರ್ದಾ ಗೊತ್ತೇ ಇಲ್ಲ.
ಲಗೋರಿ, ಬುಗುರಿ, ಚಿನ್ನಿದಾಂಡು ಗೋಲಿ ಆಟಗಳೇ ಹೊತ್ತು ಕಳೆಯುವ ಆಟಗಳು. ಹೆಣ್ಣು ಹುಡುಗಿಯರದು ಗೊಟಗುಣಿ, ಚೌಕಾಬಾರ, ಜೋಕಾಲಿ, ಹಗ್ಗದಾಟ (ಸ್ಕಿಪ್ಪಿಂಗ್) ಇಷ್ಟೆ.
12-14ನೇ ವರ್ಷಕ್ಕೆ ಹುಡುಗಿಯರು ದೊಡ್ಡವರಾಗುತ್ತಿದ್ದರು. ಆಗ ಎಂಟು ದಿನಗಳು ಓಣಿಯಲ್ಲಿ ಸಂಭ್ರಮ. ಇದು ಶೆಟ್ಟರು ಮತ್ತು ಲಿಂಗಾಯತರ ಮನೆಗಳಲ್ಲಿ ಆಗ ತುಂಬಾ ಚಾಲ್ತಿಯಲ್ಲಿದ್ದ ಸಂಭ್ರಮ. ಹುಡುಗಿಯ ತಲೆಯ ಮೇಲೆ ಬಿಂದಿಗೆ ಹೊರಿಸಿ, ಗಂಗೆ ಪೂಜೆಗೆ ಭಾಗೆ ಕರೆದೊಯ್ಯುವುದು ನಿತ್ಯ ಸಂಜೆ ಪಾರ್ಟ್ ಹಾಕುವ ಕಾರ್ಯಕ್ರಮ. ಅಂದರೆ, ಪುರಾಣದ ಘಟನೆಗಳ ಸನ್ನಿವೇಶ
ಗಳನ್ನು ಆ ಹುಡುಗಿಗೆ ಮುಖ್ಯವೇಷ ಹಾಕಿ ಇತರರಿಗೆ ಸಣ್ಣ ಸಣ್ಣ ಪಾತ್ರಗಳ ವೇಷ ಹಾಕಿ ಮನೆಯಲ್ಲೇ ನಿರ್ಮಿಸಿದ ಪುಟ್ಟ
ವೇದಿಕೆಯ ಮೇಲೆ ಅವರನ್ನು ನಿಲ್ಲಿಸಿ ಅಕ್ಕಾ – ಪಕ್ಕಾ ಪೆಟ್ರೋಮ್ಯಾಕ್ಸ್ ಹಚ್ಚಿಡುವರು.
ಸುಮ್ಮನೇ ಆ ಪಾತ್ರಗಳು ನಿಲ್ಲಬೇಕಷ್ಟೆ. ಅದು 2-3 ಗಂಟೆಗಳ ಕಾಲ. ಹಾಗೆ ನಾನೊಮ್ಮೆ ಹರಿಶ್ಚಂದ್ರ – ಭಾನುಮತಿಯಾಗಿ ಇಬ್ಬರು ಹುಡುಗಿಯರ ಜತೆಯಲ್ಲಿ ಹರಿಶ್ಚಂದ್ರನಾಗಿ ಅವಳ ಗೆಳತಿ ಭಾನುಮತಿಯಾಗಿ ನಿಂತುಕೊಂಡು ಕೈಯಲ್ಲಿನ ಬೆಳ್ಳಿ ತಂಬಿಗೆಯಿಂದ
ವಿಶ್ವಾಮಿತ್ರನಿಗೆ ಸಮಸ್ತ ರಾಜ್ಯವನ್ನೂ ದಾನ ಮಾಡುವ ಸನ್ನಿವೇಶದ ಸ್ಥಿರ ದೃಶ್ಯವದು. ನಾನು ಗಡ್ಡ – ಮೀಸೆ ಹಚ್ಚಿಕೊಂಡು ವಿಶ್ವಾಮಿತ್ರನಾಗಿ, ಮೊಣಕಾಲು ಊರಿ ಕುಳಿತು, ಬೊಗಸೆ ಒಡ್ಡಿ ದಾನ ಸ್ವೀಕರಿಸುವ ದೃಶ್ಯ. ನಾ ಒಡ್ಡಿದ ಬೊಗಸೆಯಲ್ಲಿ ಬೆಳ್ಳಿ ತಂಬಿಗೆಯಿಂದ ನೀರು ಬೀಳುತ್ತಿವೆ ಎಂಬಂತೆ ನನ್ನ ಬೊಗಸೆಗೂ ಆ ತಂಬಿಗೆಯ ಬಾಯಿಯ ಒಳಗಿನಿಂದಲೂ ಒಂದು ಮಲ್ಲಿಗೆ ಹೂವಿನ ಮಾಲೆ ಇಳಿಬಿಟ್ಟು ನೀರು ಬಿದ್ದಂತೆ ಮಾಡುತ್ತಿದ್ದರು.
ಬಳ್ಳಾರಿ ಕಡೆ ಯಾವುದೋ ಹಳ್ಳಿಯಿಂದ ಹೀಗೆ ಮೇಕಪ್ ಮಾಡಿ ವೇಷ ಹಾಕುವ ಜನ ಬಂದು ಏಳುದಿನಗಳ ಕಾಲ ಶೆಟ್ಟರ ಮನೆ ಗಳಲ್ಲಿಯೇ ವಾಸಿಸುತ್ತಿದ್ದರು. ದಿನವೂ ಒಂದೊಂದು ಸ್ಥಿರ ದೃಶ್ಯಗಳನ್ನು ಹಾಕಿಸಿ ನಿಲ್ಲಿಸುತ್ತಿದ್ದರು. ಹಾಗೆ ಶ್ರೀನಿವಾಸ ಕಲ್ಯಾಣ, ಪಾರ್ವತಿ ಪರಮೇಶ್ವರ ಗಣಪತಿ ವೇಷ ಹಾಕಿ ನಿಲ್ಲಿಸುತ್ತಿದ್ದರು. ಹೀಗೆ ನಾವು ನಿಂತ ಮೂರು ತಾಸುಗಳ ಅವಧಿಯಲ್ಲಿ ಆ ಹುಡುಗಿಯ ಸಮಾಜದವರು, ಬಂಧುಗಳು, ಓಣಿಯ ಜನ ಕ್ಯೂ ನಿಂತು ಒಳಬಂದು ನಮ್ಮನ್ನು ನೋಡಿ ಹೋಗುತ್ತಿದ್ದರು.
ಆರತಿಯನ್ನೂ ಬೆಳಗುತ್ತಿದ್ದರು. ಹಾಗೆ ನೋಡಿ ಹೋಗುವವರಿಗೆಲ್ಲ ತಿಂಡಿಯ ಪೊಟ್ಟಣ, ಅರಿಶಿಣ – ಕುಂಕುಮ, ರವಿಕೆಯ
ಖಣ, ಸೀರೆ ಕೊಟ್ಟದ್ದೂ ಉಂಟು. ಮೈನೆರೆತು ನಿಂತ ಹುಡುಗಿಯ ಜತೆಗೆ ನಮಗೂ ಬಂದವರೆಲ್ಲಾ ಆರತಿ ಬೆಳಗುತ್ತಿದ್ದರು. ಒಂದು ವಾರಗಳ ಕಾಲ ಹೀಗೆಯೇ ಕಳೆದು ಹೋಗುತ್ತಿತ್ತು. ಕೆಲವೊಮ್ಮೆ ವೇಷ ಮುಗಿದ ಮಲಗಿದ ಕೂಡಲೇ ನನಗೆ ಜ್ವರಬಂದವೆಂದರೆ, ವೇಷದ ಸಹಜತೆಗೆ ದೃಷ್ಟಿಯಾಗಿದೆ ಎಂದು ತಿಳಿದು ನಿಂಬೆಹಣ್ಣು, ಒಣಮೆಣಸಿನಕಾಯಿ ಇವುಗಳ ದೃಷ್ಟಿ ತೆಗೆದು ಕೆಂಡಕ್ಕೆ ಹಾಕಿ,
ಅವು ಚಟಪಟ ಚಟಪಟ ಸಿಡಿದರೆ, ನೋಡಿ ಎಷ್ಟು ಜನರ ಕಣ್ಣು ತಗುಲಿದೆ ಎನ್ನುತ್ತಿದ್ದರು.
ಈ ರೀತಿಯೇ ವೇಷ ಹಾಕಿ ನಿಲ್ಲುವ ಮನೆಗೆ ಅವರ ಸಮಾಜ ಬಾಂಧವರು, ಹಿತೈಷಿಗಳು ತಟ್ಟೆಯ ತುಂಬ ಬಗೆಬಗೆಯ ತಿಂಡಿ ಮಾಡಿಕೊಂಡು ಅವುಗಳನ್ನು ಆಕರ್ಷಕವಾಗಿ ತಟ್ಟೆಯಲ್ಲಿ ಜೋಡಿಸಿಕೊಂಡು ಬ್ಯಾಂಡ್ ಮೇಳದೊಂದಿಗೆ ಅವರ ಮನೆಗೆ ಬರುತ್ತಿದ್ದರು. ಇದಕ್ಕೆ ಒಸಗೆ ತರುವುದು ಎನ್ನುವುದು ಎನ್ನುತ್ತಾರೆ ಈ ಕಡೆ. ಈಗಲೂ ನನಗೆ ಸಂಜೆಯ ಹೊತ್ತು ಬೀಸುವ ಗಾಳಿಯ ಜೊತೆಗೆ ದೂರದಲ್ಲೆಲ್ಲೋ ಬ್ಯಾಂಡ್ ಶಬ್ದ ಕೇಳಿದರೆ, ಐವತ್ತು ವರ್ಷಗಳ ಹಿಂದಿನ ಆ ಒಸಗೆಯ ದಿನಗಳೇ ಕಣ್ಮುಂದೆ ಬಂದು ನಿಲ್ಲುತ್ತವೆ.
ಮತ್ತೇ ಬಂದಾವೇ ಆ ದಿನಗಳು? ಏನು ಕೊಟ್ಟರೆ ಸಿಕ್ಕಾವೆ ಆ ದಿನಗಳು? ಎನಿಸುತ್ತದೆ. ಹಗಲುಗಳು ಕಣ್ಕುಕ್ಕುವಂತಿದ್ದವು. ಇರುಳು ಗಳು ವರ್ಣರಂಜಿತವಾಗಿರುತ್ತಿದ್ದವು. ಇವೆಲ್ಲಾ ಶ್ರೀಮಂತ ಶೆಟ್ಟರ ಮನೆಗಳ ಸಂಭ್ರಮಗಳು. ಬಾಲ್ಯ, ಯೌವ್ವನಗಳ ಸದ್ವಿನಿಯೋಗ ಮಾಡಿಕೊಂಡ ನಾವೇ ಪುಣ್ಯವಂತರು ಎನಿಸುತ್ತದೆ. ಈಗ ಎಲ್ಲವೂ ಮುಚ್ಚುಮರೆಯಿಲ್ಲದೇ, ಬಟಾಬಯಲಾಗಿ, ಕುತೂಹಲ, ಕನಸುಗಳೇ ಬತ್ತಿಹೋಗಿ, ಎಲ್ಲವೂ ಬೆರಳ ತುದಿಯಲ್ಲಿದ್ದರೂ ಏನೋ ಕಳೆದುಕೊಂಡಿದ್ದೇವೆ ಎನಿಸುತ್ತವೆ.
ಹೀಗೆ ನಮ್ಮ ಜತೆಗೆ ಆಡಿದವರು, ನಮ್ಮ ಮುಂದೆಯೇ ಮೈನೆರೆದು ಮದುವೆಗಾಗಿ ಸಂಗೀತ ಕಲಿತು, ಅದನ್ನು ನೋಡಲು ಬಂದ
ಗಂಡಸಿನ ಮುಂದೆ ಒದರಿ, ಗರಿಗೆದರಿ ಕುಣಿದು, ಅವನನ್ನು ಮದುವೆಯಾಗಿ ಕಣ್ಣು, ಮನಗಳಿಂದ ದೂರವಾದರೂ ನೆನಪೆಂಬ ಮಡಕೆಯಲ್ಲಿ ಹಾಲುಜೇನಾಗಿ ಕುಳಿತಿದ್ದಾರೆ. ದಿನಗಳು ಉರುಳಿದಂತೆಲ್ಲಾ, ವರ್ಷಗಳು ಗತಿಸಿದಂತೆಲ್ಲಾ ಹರೆಯಕ್ಕೆ ಹುರುಪು ನೀಡಿದವರೆಲ್ಲ, ಈಗ ನೆನಪುಗಳಿಂದಾಗಿ ಮುಪ್ಪಿಗೂ ಮುದ ನೀಡುತ್ತಿದ್ದಾರೆ.
ನೆನಪೆಂಬುದು ನೇಣಾಗದೆ, ನೆರಳಾಗುವಂತಾಗಿದೆ. ಆದರೆ ಇಂದಿನ ಮನರಂಜನೆ ಹೆಸರಿನ ಹಿಂದಿನ ಪರಿಕರಗಳೆಲ್ಲ ಮುದ ನೀಡುವ ಬದಲಿಗೆ ಮನೋ ವ್ಯಾಧಿ ತರುತ್ತಲಿವೆ. ನಾಳೆ ಬರಲಿರುವ ಹೊಸ ವರ್ಷ ಹಿಗ್ಗುವಂತಿರದೇ, ಮತ್ತೇನು ಕಾದಿದೆಯೋ ಎಂದು ಭಯ ಪಡುವಂತಾಗಿದೆ. ಈ ವರ್ಷವಂತೂ 2020 ಛೀ, ಥೂ ಮತ್ತೆಂದೂ ಬರದಿರು ಎನಿಸಿಕೊಂಡೇ ಹೋಗುತ್ತಿದೆ. ಆಗೆಲ್ಲಾ ನಮ್ಮ ನಾಳೆಗಳು ಕನಸುಗಳಾಗಿದ್ದವು. ಈಗ ದುಃಸ್ವಪ್ನಗಳಾಗುತ್ತಿವೆ.
ಮನಃಶಾಂತಿಗೆ ನಾವು ಮನುಷ್ಯರನ್ನು ಅರಸುತ್ತಿಲ್ಲ. ಮದ್ಯವನ್ನು ಆಶಿಸುತ್ತಿದ್ಧೇವೆ. ಹೀಗಾಗಿ ಹೊಸವರ್ಷದ ದಿನ ನಾವು ಬೇಗ ಏಳುತ್ತಿಲ್ಲ. ರಾತ್ರಿಯ ನಶೆಗೆ ಬಿದ್ದಲ್ಲೇ ಬಿದ್ದಿರುತ್ತೇವೆ. ಹೀಗಾದಾಗ ಹೊಸವರ್ಷ ಬಂತು ಎಂದು ಹೇಳುವ ಬದಲಿಗೆ ಹಳೆಯ ವರ್ಷವೇ ಮುಂದುವರಿಯಿತು ಎಂಬುದೇ ಸೂಕ್ತ.