ಹಿತವಚನ
ಧರ್ಮೇದ್ರ ಪ್ರಧಾನ್
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವಲ್ಲಿ ಕುಟುಂಬಿಕರು, ಶಿಕ್ಷಕರು ಮತ್ತು ಸಮಾಜದ ನಿರೀಕ್ಷೆಗಳ ಭಾರವನ್ನು ಹೊರ ಬೇಕಾಗುತ್ತದೆ. ಇದು ಅವರನ್ನು ಮಾನಸಿಕವಾಗಿ ದುರ್ಬಲಗೊಳಿಸುವುದರ ಜತೆಗೆ ದೈಹಿಕ ಶಕ್ತಿಯನ್ನು ಬರಿದು ಮಾಡಿಬಿಡುತ್ತದೆ. ಹೀಗಾಗಿ ಅವರಲ್ಲಿ ಅತಿಯಾದ ಒತ್ತಡ, ಆತಂಕ, ಖಿನ್ನತೆ ಹೆಚ್ಚುತ್ತವೆ. ಆದ್ದರಿಂದ ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮವನ್ನು ಪೋಷಿಸುವುದು ಅಗತ್ಯ.
ತೀವ್ರ ಸ್ಪರ್ಧಾತ್ಮಕ ವಾತಾವರಣದಲ್ಲಿ ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸುವ ಮತ್ತು ದೈಹಿಕ- ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ನಡುವಿನ ಸೂಕ್ಷ್ಮ ಸಮತೋಲನ ಸಾಽಸುವ ವಿಷಯದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅಸಾಧಾರಣ ಸವಾಲು ಎದುರಿಸುತ್ತಾರೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿ ಗಳು ಶೈಕ್ಷಣಿಕ ಒತ್ತಡ ತಡೆದುಕೊಂಡು ಉತ್ತಮ ಸಾಮರ್ಥ್ಯ ತೋರುವ ಉದ್ವೇಗದಲ್ಲಿರುವಾಗ ಒಟ್ಟಾರೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಯೋಗ ಕ್ಷೇಮ ಅವರ ಮೇಲೆ ಪರಿಣಾಮ ಬೀರುತ್ತದೆ. ಪರೀಕ್ಷಾ ಸನ್ನದ್ಧತೆ ಅತ್ಯಂತ ಪ್ರಮುಖವಾದದ್ದು ಎಂಬುದರಲ್ಲಿ ಸಂದೇಹವಿಲ್ಲ. ಎಲ್ಲಕ್ಕಿಂತ ಹೆಚ್ಚಿನದಾಗಿ ಅಧ್ಯಯನ ಮತ್ತು ಆರೋಗ್ಯಕರ ಜೀವನದ ನಡುವಿನ ಸಮತೋಲನ ಕಾಪಾಡುವುದು ಸಹ ಸಮಂಜಸವಾದದ್ದು.
ಇಂದು ಪರೀಕ್ಷೆಯ ‘ಕಾರ್ಯಕ್ಷಮತೆ’ ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳ ಪಾಲಿಗೆ ಮನೋ-ಕೇಂದ್ರಿತವಾಗಿ ಉಳಿದಿದ್ದು, ಶೈಕ್ಷಣಿಕ ಫಲಿತಾಂಶ ಹೊರತು ಪಡಿಸಿ ಬೇರೆ ಏನನ್ನೂ ನೋಡುವುದಿಲ್ಲ. ವಿದ್ಯಾರ್ಥಿಗಳು ಅತಿಯಾದ ಕಲ್ಪನೆಯಲ್ಲಿರುತ್ತಾರೆ. ಇದು ಅವರ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಕುಗ್ಗಿಸುತ್ತದೆ. ಪ್ರತಿ ಮಗುವೂ ಅನನ್ಯವಾದ ಕೊಡುಗೆ ನೀಡಲಿದ್ದು, ಎಲ್ಲರೂ ಶೈಕ್ಷಣಿಕವಾಗಿ ಉತ್ಕೃಷ್ಟವಾಗಲು ಸಾಧ್ಯವಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸಂಗತಿಯೇ. ಪರೀಕ್ಷೆಯ ಫಲಿತಾಂಶವನ್ನು ಆಧರಿಸುವ ಮೂಲಕ ನಾವು ಮಗುವಿನ ಪ್ರತಿಭೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ.
ಪೋಷಕರು, ಶಿಕ್ಷಕರು, ಸ್ನೇಹಿತರು ಮತ್ತು ಕುಟುಂಬ ಮಗುವಿನ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು, ಸೌಹಾರ್ದಯುತ ವಾತಾವರಣ ನಿರ್ಮಿ
ಸಲು ಸಾಮೂಹಿಕವಾಗಿ ಮತ್ತು ಒಟ್ಟಾಗಿ ಕೆಲಸ ಮಾಡಬೇಕು. ಪರೀಕ್ಷೆಯ ಕಾರ್ಯಕ್ಷಮತೆಯು ಸಹಜ ಪ್ರತಿಭೆಯ ಮೇಲಷ್ಟೆ ಅಲ್ಲದೇ ದೈಹಿಕ ಸಹಿಷ್ಣುತೆ ಯನ್ನು ಹೆಚ್ಚಿಸುವ, ಗಮನವನ್ನು ತೀಕ್ಷ್ಣಗೊಳಿಸುವ, ಆರೋಗ್ಯಕರ ದೇಹ, ಮತ್ತು ಚುರುಕಾದ ಮನಸ್ಸಿನಂಥ ಹಲವಾರು ವಿಷಯಗಳ ಮೇಲೆ ಕೇಂದ್ರೀ ಕೃತವಾಗಿದೆ.
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವಲ್ಲಿ ಕುಟುಂಬಿಕರು, ಶಿಕ್ಷಕರು ಮತ್ತು ಸಮಾಜದ ನಿರೀಕ್ಷೆಗಳ ಭಾರವನ್ನು ಹೊರಬೇಕಾಗಿ ಬರುತ್ತದೆ. ಇದು ಅವರನ್ನು ಮಾನಸಿಕವಾಗಿ ದುರ್ಬಲಗೊಳಿಸುವುದರ ಜತೆಗೆ ದೈಹಿಕ ಶಕ್ತಿಯನ್ನು ಬರಿದು ಮಾಡುವ ಪರಿಸ್ಥಿತಿಗೆ ದೂಡುತ್ತದೆ. ಇದು ಅತಿಯಾದ ಒತ್ತಡ, ಆತಂಕ, ಖಿನ್ನತೆ ಮತ್ತು ನಿದ್ರೆಯ ಅಸ್ವಸ್ಥತೆಗಳಂಥ ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುವ ಅಂಶವಾಗಿದೆ
ಎಂದು ವ್ಯಾಖ್ಯಾನಿಸಲಾಗಿದೆ. ಆದ್ದರಿಂದ ಮಾನಸಿಕ ಯೋಗಕ್ಷೇಮವನ್ನು ಪೋಷಿಸುವುದು ಅಗತ್ಯ. ಈ ಸವಾಲುಗಳಿಂದ ಹೊರಬರಲು ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ಕೂಡಿರಬೇಕು, ವ್ಯಾಯಾಮ ಮಾಡಬೇಕು, ಏಕಾಗ್ರತೆಗಾಗಿ ಧ್ಯಾನ ಮಾಡಬೇಕು ಮತ್ತು ಅತ್ಯುತ್ತಮವಾದ ಅಧ್ಯಯನ ವಿಧಾನವನ್ನು ರೂಪಿಸಿಕೊಳ್ಳಬೇಕು.
ಕಾರ್ಯಚಟುವಟಿಕೆಯು ನಿರ್ವಹಿಸಬಹುದಾದ ರೀತಿಯಲ್ಲಿರಬೇಕು, ಸಾಧಿಸಲು ವಾಸ್ತವಿಕ ಮತ್ತು ಶೈಕ್ಷಣಿಕ ಗುರಿಗಳನ್ನು ಹೊಂದಿಸಬೇಕು. ಸಮಾ ಲೋಚನಾ ಸೇವೆಗಳಿಗೆ, ಮಾನಸಿಕ ಆರೋಗ್ಯದ ಬಗೆಗಿನ ಮುಕ್ತ ಸಂವಹನಕ್ಕೆ ಅವಕಾಶ ಕಲ್ಪಿಸುವ ಮೂಲಕ, ಆತಂಕ ಅಥವಾ ಇತರೆ ಕಳವಳಗಳ ಜತೆಗೆ ಹೋರಾಡುವವರಿಗೆ ಬೆಂಬಲದ ವಾತಾವರಣವನ್ನು ನಿರ್ಮಿಸಲು ಸಾಧ್ಯವಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ದೈಹಿಕ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಕುರಿತು ಮುಂದೆ ನೀಡಲಾಗಿರುವ ಸಮಗ್ರ ವಿಧಾನವನ್ನು ಗಮನಿಸಬಹುದು.
ವಿರಾಮ ಮತ್ತು ದೈಹಿಕ ಚಟುವಟಿಕೆ: ದೈಹಿಕ ಆರೋಗ್ಯವು ಒಟ್ಟಾರೆ ಸದೃಢತೆ ಮತ್ತು ಚುರುಕುತನವನ್ನು ನಿರ್ವಹಿಸುವ ಮೂಲಭೂತ ಅಂಶವಾಗಿದೆ. ನಿಯತ ವ್ಯಾಯಾಮವು ಹೃದಯದ ರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ಒತ್ತಡವು ಹಗುರವಾಗುವಂತೆ ಮಾಡುತ್ತದೆ. ಇದು ಅರಿವಿನ
ಸಾಮರ್ಥ್ಯವನ್ನು ಮತ್ತು ಮಾಹಿತಿಯನ್ನು ಮರು ಪಡೆಯುವ ಶಕ್ತಿಯನ್ನು ವೃದ್ಧಿಸುತ್ತದೆ; ಇವೆರಡೂ ಪರೀಕ್ಷೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನಿರ್ಣಾಯಕ ಅಂಶವಾಗಿವೆ. ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಮೇಲೂ ಕಾಳಜಿ ವಹಿಸುವುದು ಆದ್ಯತೆಯ ವಿಚಾರವಾಗಬೇಕು. ಅವರು ಕಸರತ್ತು, ನಡಿಗೆ, ಓಟ ಅಥವಾ ಯೋಗದಂಥ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸಬೇಕು. ಇವು ಒತ್ತಡನ್ನು ಗಣನೀಯ ವಾಗಿ ತಗ್ಗಿಸಿ, ವಿದ್ಯಾರ್ಥಿಗಳ ಮನಸು ಮರು ಪೂರಣಗೊಳ್ಳಲು ನೆರವಾಗುತ್ತವೆ.
ಸಮಾತೋಲಿತ ಆಹಾರ ಮತ್ತು ಪೌಷ್ಟಿಕತೆ: ನಿರಂತರವಾಗಿ ಅಧ್ಯಯನ ಮಾಡುವಲ್ಲಿ ಮತ್ತು ಆರೋಗ್ಯವಾಗಿರುವಲ್ಲಿ ಪೌಷ್ಟಿಕತೆಯು ನಿರ್ಣಾಯಕ ಪಾತ್ರವಹಿಸುತ್ತದೆ. ಆಹಾರವು ನಮ್ಮ ದೇಹ ಮತ್ತು ಮನಸ್ಸನ್ನು ಪೋಷಿಸುವ ಇಂಧನವಾಗಿದೆ. ಗುಣಮಟ್ಟದ ಆಹಾರ ಸ್ವೀಕರಿಸಿದರೆ ಅದು ಒಟ್ಟಾರೆ ಆರೋಗ್ಯ ಮತ್ತು ದೈಹಿಕ ಯೋಗಕ್ಷೇಮದ ರಕ್ಷಣೆಗೆ ಪೂರಕವಾಗುತ್ತದೆ. ಆದರೆ ಸಾಮಾನ್ಯವಾಗಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಆಹಾರ ಸ್ವೀಕರಿಸುವುದಿಲ್ಲ ಅಥವಾ ಮನೆಯಲ್ಲಿ ಸಿದ್ಧಪಡಿಸಿದ ಆಹಾರದ ಬದಲಿಗೆ ಅನಾರೋಗ್ಯಕರ ಆಹಾರಗಳಾದ ಕುರುಕಲು ತಿಂಡಿ, ಚಾಕೋಲೆಟ್, ಶಕ್ತಿವರ್ಧಕ ಪೇಯ ಮತ್ತು ಚಿಪ್ಸ್ ಗಳನ್ನು ತಿನ್ನುತ್ತಾರೆ.
ಕೆಲವೊಮ್ಮೆ ಪರೀಕ್ಷೆಗೆ ಸಿದ್ಧವಾಗಲು ಸಮಯದ ಅಭಾವದ ಕಾರಣ ಆಹಾರ ಸೇವಿಸುವುದಿಲ್ಲ, ಸಮತೋಲಿತ ಆಹಾರವಾದ ಹೆಚ್ಚಿನ ವಿಟಮಿನ್,
ಖನಿಜಗಳು ಮತ್ತು ಫೈಬರ್‌ಗಳು ಮಿದುಳಿನ ಅತ್ಯುತ್ತಮ ಕಾರ್ಯಚಟುವಟಿಕೆಗೆ ಅಗತ್ಯವಾದ ಇಂಧನ ಒದಗಿಸುತ್ತವೆ. ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದನ್ನು ಕೆಲವರು ನಿರ್ಲಕ್ಷಿಸುವುದುಂಟು. ನೀರಿನ ಸೇವನೆ ತುಂಬಾ ಮುಖ್ಯ. ನೀರಿನ ಕೊರತೆಯಾದಲ್ಲಿ ಅದು ಅರಿವಿನ ಸಾಮರ್ಥ್ಯ ಮತ್ತು ಏಕಾಗ್ರತೆಯನ್ನು ಗಣನೀಯವಾಗಿ ದುರ್ಬಲಗೊಳಿಸುತ್ತದೆ.
ಅಗತ್ಯ ಪ್ರಮಾಣದ ನಿದ್ರೆ: ಪರೀಕ್ಷಾ ಸಮಯದಲ್ಲಿ ಗುಣ ಮಟ್ಟದ ನಿದ್ರೆಯು ಅತ್ಯಂತ ಮುಖ್ಯವಾದದ್ದು. ನಿದ್ರೆಯು ಅರಿವಿನ ಕ್ರಿಯೆ, ಸ್ಮರಣೆ ಮತ್ತು ಭಾವನಾತ್ಮಕತೆಯ ಪುನಶ್ಚೇತನದ ನಡುವೆ ಸಂಬಂಧವನ್ನು ಹೊಂದಿದೆ. ಹಾಗಾಗಿ ವಿದ್ಯಾರ್ಥಿಗಳು ಹಾಸಿಗೆಗೆ ತೆರಳುವ ಮುನ್ನ ಸೂಕ್ತ ಪ್ರಮಾಣದ ನಿದ್ರಾ ವಿಧಾನವನ್ನು ಯೋಜಿಸಬೇಕು. ವಿದ್ಯಾರ್ಥಿಗಳು ರಾತ್ರಿವೇಳೆಯಲ್ಲಿ ನಿದ್ರೆ ಮಾಡುವುದರಿಂದ ಉತ್ತಮವಾಗಿ ನೆನಪು ಮಾಡಿಕೊಳ್ಳಲು ಮತ್ತು ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆಯು ಬೇಕೇ ಬೇಕು.
ಪೂರಕ ಮತ್ತು ಉತ್ತೇಜನಕಾರಿ ಪರಿಸರ: ವಿದ್ಯಾರ್ಥಿಗಳು ತಮ್ಮ ಆತಂಕದ ಬಗ್ಗೆ ಚರ್ಚಿಸುವಂತಾಗಲು, ಪಾಲಕರು ಹಾಗೂ ಶಿಕ್ಷಕರ ಬೆಂಬಲ ಪಡೆ ಯುವಂತಾಗಲು ನಾವು ಸೂಕ್ತ ವಾತಾವರಣವನ್ನು ನಿರ್ಮಿಸಬೇಕು. ಆತಂಕ, ಉದ್ವೇಗವನ್ನು ನಿರ್ವಹಿಸಲು ಸೂಕ್ತ ಸಮಾಲೋಚಕರ ಸೇವೆ ಒದಗಿಸು ವುದು ಅಥವಾ ಮಾನಸಿಕ ಆರೋಗ್ಯದ ಸವಾಲುಗಳನ್ನು ನಿರ್ವಹಿಸಲು ನೆರವಾಗುವುದು ಪರಮೋಚ್ಚ ಸಾಂಸ್ಥಿಕ ಆದ್ಯತೆಯಾಗಿದೆ. ಪರೀಕ್ಷೆಗಳ
ಒತ್ತಡದ ಕುರಿತಾಗಿ ವಿದ್ಯಾರ್ಥಿಗಳು ಮುಕ್ತ ಸಂವಹನಕ್ಕೆ ಒಡ್ಡಿಕೊಳ್ಳುವುದನ್ನು ಪ್ರೋತ್ಸಾಹಿಸಬೇಕು ಮತ್ತು ಮಾನಸಿಕವಾಗಿ ಒತ್ತಡದಲ್ಲಿ ಸಿಲುಕಿಕೊಳ್ಳದೆ ಅದನ್ನು ಅವರು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ನೆರವಾಗಬೇಕು.
ವ್ಯಾಯಾಮ ಮತ್ತು ಧ್ಯಾನದ ಅಭ್ಯಾಸಗಳು: ಪರೀಕ್ಷಾ ಒತ್ತಡವನ್ನು ನಿಭಾಯಿಸಲು ಧ್ಯಾನ ರಹಸ್ಯವಾದ ಅಸ್ತ್ರ. ವಿದ್ಯಾರ್ಥಿಗಳು ಧ್ಯಾನದ ಅಸಾಧಾ ರಣ ಅಭ್ಯಾಸಗಳನ್ನು, ಆಳವಾದ ಉಸಿರಾಟ ಅಥವಾ ಯೋಗಾಭ್ಯಾಸವನ್ನು ರೂಢಿಸಿಕೊಂಡರೆ ಮನಸ್ಸು ಶಾಂತವಾಗುತ್ತದೆ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಮತ್ತು ಉದ್ವೇಗ ತಗ್ಗುತ್ತದೆ. ಇಂಥ ಅಭ್ಯಾಸಗಳು ಒತ್ತಡ ನಿವಾರಣೆಗೆ ಮತ್ತು ಮಾನಸಿಕ ಯೋಗಕ್ಷೇಮದ ವೃದ್ಧಿಗೆ ನೆರವಾಗುತ್ತವೆ.
ಸಮಯ ನಿರ್ವಹಣೆ: ಅಂತಿಮ ಕ್ಷಣದ ಗಡಿಬಿಡಿಯನ್ನು ತಗ್ಗಿಸಲು ವಿದ್ಯಾರ್ಥಿಗಳು ಅಧ್ಯಯನ ವಿಧಾನದ ಕಾರ್ಯ ತಂತ್ರಗಳನ್ನು ಅಳವಡಿಸಿಕೊಳ್ಳ ಬೇಕು. ವಿದ್ಯುನ್ಮಾನ ಮಾಧ್ಯಮದ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ವಿದ್ಯಾರ್ಥಿಗಳ ಏಕಾಗ್ರತೆ ತಗ್ಗುತ್ತಿದೆ. ಪ್ರಸ್ತುತ ಸಮಯದಲ್ಲಿ ವಿದ್ಯು ನ್ಮಾನ ಮಾಧ್ಯಮ ಅಗತ್ಯ ಎಂಬುದೇನೋ ಸರಿ. ಆದರೆ ವಿದ್ಯಾರ್ಥಿಗಳು ಈ ವಿಷಯದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಪರೀಕ್ಷಾ ತಯಾರಿಗಾಗಿ ಗುಣಮಟ್ಟದ ಸಮಯವನ್ನು ನಿಗದಿಪಡಿಸಲು ಬಹುಶಃ ‘ಡಿಜಿಟಲ್ ಡಿಟಾಕ್ಸ್’ ಅಗತ್ಯವಾಗಿದೆ.
ಅಂತಿಮವಾಗಿ, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಪೋಷಿಸುವುದು ಅವರ ಒಟ್ಟಾರೆ ಯಶಸ್ಸಿನ ಅವಿಭಾಜ್ಯ ಅಂಗ ಎನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ನೋಡಿಕೊಂಡರೆ ಅದು ಶೈಕ್ಷಣಿಕ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿ ಯಾಗಬಲ್ಲದು. ಪರೀಕ್ಷಾ ಕೊಠಡಿ ಆಚೆಗೆ ಅವರು ಎದುರಿಸಬಹುದಾದ ಸವಾಲುಗಳಿಗೆ ಅವರನ್ನು ಸನ್ನದ್ಧಗೊಳಿಸಬಲ್ಲದು. ಆರೋಗ್ಯಕ್ಕೆ ಆದ್ಯತೆ ನೀಡು ವುದು, ದೈಹಿಕ ವ್ಯಾಯಾಮ ಹಾಗೂ ಧ್ಯಾನ, ಡಿಜಿಟಲ್ ಡಿಟಾಕ್ಸ್, ಮಾನಸಿಕ ಯೋಗಕ್ಷೇಮ, ಗುಣಮಟ್ಟದ ನಿದ್ರೆ, ಆರೋಗ್ಯಕರ ನಿಯಮವನ್ನು ಅನುಸರಿಸುವುದು ವಿದ್ಯಾರ್ಥಿಗಳ ಹೆಜ್ಜೆಯಾಗಬೇಕು. ಹೀಗೆ ಅವರು ಪರೀಕ್ಷಾ ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರೆ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತದೆ. ‘ವಿಕಸಿತ ಭಾರತ ೨೦೪೭’ರ ಗುರಿಗಳನ್ನು ಸಾಕಾರಗೊಳಿಸಲು ಬದ್ಧರಾಗಿರುವ, ಆತ್ಮವಿಶ್ವಾಸ ಹಾಗೂ ಭವ್ಯಭವಿಷ್ಯವನ್ನು ನೋಡುವ ಯುವ ಸಮೂಹ ಹೊರಹೊಮ್ಮಲು ಅದು ಕಾರಣವಾಗುತ್ತದೆ.
(ಲೇಖಕರು ಕೇಂದ್ರದ ಕೌಶಲಾಭಿವೃದ್ಧಿ
ಮತ್ತು ಉದ್ಯಮಶೀಲತೆ ಖಾತೆಯ ಸಚಿವರು)