ವಿಶ್ಲೇಷಣೆ
ವಿನಾಯಕ ಕಾಮತ್
ಡೀಲ್ ಕುದುರಿಸುವ ಪರೀಕ್ಷಾರ್ಥಿಗಳು, ಪರೀಕ್ಷಾ ಸಮಯದಲ್ಲಿ ತಮಗೆ ಗೊತ್ತಿರುವ ಕೆಲವೇ ಪ್ರಶ್ನೆಗಳಿಗೆ ಉತ್ತರದ ಗುಂಡು ಸುತ್ತಿ, ಹೆಚ್ಚಿನ
ಪ್ರಶ್ನೆಗಳನ್ನು ಉತ್ತರಿಸದೇ ಹಾಗೆಯೇ ಬಂದಿರುತ್ತಾರೆ. ಉತ್ತರಿಸದೇ ಬಿಟ್ಟ ಪ್ರಶ್ನೆಗಳಿಗೆ ಸರಿಯುತ್ತರಗಳನ್ನು ತುಂಬಿಸುವ ವ್ಯವಸ್ಥೆ ಆಗಿರುತ್ತದೆ.
ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅವ್ಯವಹಾರ! ಎಫ್ಡಿಐ ನೇಮಕದಲ್ಲಿ ಪ್ರತಿಭಾವಂತರಿಗೆ ಮೋಸ. ಸಹಾಯಕ ಪ್ರಾಧ್ಯಾಪಕರ ನೇಮಕ ದಲ್ಲಿ, ಒಂದು ವಿಶ್ವವಿದ್ಯಾಲಯಕ್ಕೇ ಪರೀಕ್ಷಾ ಮುಖ್ಯಸ್ಥರಾಗಿದ್ದವರಿಂದ ಪ್ರಶ್ನೆ ಪತ್ರಿಕೆ ಬಯಲು… ಇವೆಲ್ಲ, ಇತ್ತೀಚೆಗೆ ಬೆಳಕಿಗೆ ಬಂದಿರುವ ಕೆಲ ಪ್ರಕರಣಗಳು.
‘ಸಿಕ್ಕಿ ಬಿದ್ದರೆ ಮಾತ್ರ ಕಳ್ಳ’ನಾಗುವುದರಿಂದ, ಅಕ್ರಮದ ವಾಸನೆ ಇರುವ ಕೆ-ಸೆಟ್ ಮೊದಲಾದ ಎಷ್ಟೋ ಪರೀಕ್ಷೆಗಳೆಲ್ಲ ಈ ಪಟ್ಟಿಯಲ್ಲಿ ಇನ್ನೂ ಬಂದಿಲ್ಲ! ಹಾಗಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅವ್ಯವಹಾರಗಳಿಲ್ಲದಂತೆ ನಡೆಸುವುದು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಇವೆಲ್ಲ ಅವ್ಯವಹಾರಗಳಿಗೆ, ಎರಡು ಮೂಲ ಕಾರಣ ಗಳನ್ನು ಕೊಡಬಹುದು. ಮೊದಲನೇಯದು, ಈ ಪರೀಕ್ಷೆಗಳನ್ನು ರಾಜ್ಯಮಟ್ಟದ ಸಂಸ್ಥೆಗಳು ನಡೆಸುತ್ತಿರುವುದು.
ಎರಡನೇಯದು, ಈ ಪರೀಕ್ಷೆಗಳ್ನು ನಡೆಸುತ್ತಿರುವ, ಮುದ್ರಿತ ಪ್ರಶ್ನೆ ಪತ್ರಿಕೆ ಮತ್ತು ಒಎಮ ಆರ್ ಉತ್ತರ ಪತ್ರಿಕೆಗಳಿರುವ ಅಜ್ಜನ ಕಾಲದ ಪರೀಕ್ಷಾ ವಿಧಾನ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಾಜ್ಯ ಮಟ್ಟದಲ್ಲಿ ನಡೆಸುವುದರಿಂದ, ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವವರಿಂದ ಹಿಡಿದು ಪರೀಕ್ಷಾ ಕೇಂದ್ರದ ಮೇಲ್ವಿ ಚಾರಕರವರೆಗೆ, ಪ್ರತಿಯೊಬ್ಬರೂ ಅವ್ಯವಹಾರಗಳನ್ನು ನಡೆಸುವ ವಿದ್ಯಾರ್ಥಿಗಳ ಹಾಗೂ ಅವ್ಯವಹಾರ ಗಳಿಗೆ ಸಹಾಯಕರಗುವ ಏಜೆಂಟ್ ಗಳ ಸಂಪರ್ಕಕ್ಕೆ ಸಿಗುತ್ತಾರೆ. ಹೀಗಾಗಿ ಪರೀಕ್ಷಾ ಅಕ್ರಮಗಳನ್ನು ಸುಲಭವಾಗಿ ಸಾಧಿಸಬಹುದು. ಇತ್ತೀಚೆಗೆ ನಡೆದ, ಸಹಾಯಕ ಪ್ರಾಧ್ಯಾಪಕರ ನೇಮಕದ ಭೂಗೋಳ ಶಾಸ್ತ್ರದ ಪರೀಕ್ಷೆಯನ್ನೇ ತೆಗೆದುಕೊಂಡರೆ, ಪ್ರಶ್ನೆ ಪತ್ರಿಕೆಗಳನ್ನು ಹೊರ ರಾಜ್ಯದ ಪರಿಣಿತರಿಂದ ಸಿದ್ಧಪಡಿಸಿಕೊಂಡಿದ್ದರೆ, ಭೂಗೋಳಶಾಸ್ತ್ರದ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಸಾಧ್ಯತೆಯೇ ಇರಲಿಲ್ಲ.
ಇಂತಹ ಸಾಮಾನ್ಯ ಜ್ಞಾನವೂ ಇಲ್ಲದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ರಾಜ್ಯದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಿಂದ, ಪ್ರಶ್ನೆ
ಪತ್ರಿಕೆಗಳನ್ನು ಸಿದ್ಧಪಡಿಸಿಕೊಂಡಿದೆ. ಇವರು ನೇರವಾಗಿ ಹುದ್ದೆಯ ಆಕಾಂಕ್ಷಿಗಳ ಸಂಪರ್ಕಕ್ಕೆ ಬರುವವರು. ಮೇಲಾಗಿ, ಪ್ರಶ್ನೆ ಪತ್ರಿಕೆ ಗಳನ್ನು ಅಜ್ಞಾತ ಸ್ಥಳದಲ್ಲಿ ಸಿದ್ಧಪಡಿಸಿಕೊಂಡು, ಸಂಬಂಧಪಟ್ಟ ದಾಖಲೆಗಳನ್ನು ನಾಶ ಪಡಿಸುವ ಕಠಿಣ ಕ್ರಮವನ್ನೂ ಪ್ರಾಧಿಕಾರ ಮಾಡಿದಂತಿಲ್ಲ. ಇಲ್ಲವಾದರೆ, ಪೂರ್ಣ ಪ್ರಶ್ನೆ ಪತ್ರಿಕೆ, ಸಮಿತಿಯಲ್ಲಿದ್ದ ಒಬ್ಬರಿಗೆ ಸಿಗುವ ಸಾಧ್ಯತೆ ಇರಲಿಲ್ಲ. ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿಕೊಳ್ಳುವಲ್ಲಿ, ಪ್ರಾಧಿಕಾರ, ಪರೀಕ್ಷಾ ಪಾವಿತ್ರ್ಯವನ್ನು ಕಾಯ್ದುಕೊಳ್ಳಲು ವಿಫಲವಾಗಿರುವುದು, ಕಣ್ಮುಂದೆ ಇರುವ ಸತ್ಯ.
ಇನ್ನು ಕೆಲವು ವಿಷಯಗಳ ಪ್ರಶ್ನೆ ಪತ್ರಿಕೆಗಳ ಮಟ್ಟವನ್ನು ನೋಡಿದರೆ, ಅದನ್ನು ಸಿದ್ಧಪಡಿಸಿದವರ ಯೋಗ್ಯತೆಯ ಬಗ್ಗೆಯೇ ಅನುಮಾನ ಮೂಡುತ್ತದೆ. ಯಾವುದೋ ಒಂದು ಜಾಲತಾಣದಿಂದ, ನೇರವಾಗಿ ಪ್ರಶ್ನೆಗಳನ್ನು ಇಳಿಸುವುದು; ಪ್ರಶ್ನೆಗಳನ್ನು ಸಿದ್ಧಪಡಿಸಲು, ತಮ್ಮ ಕೈ
ಕೆಳಗಿರುವ ವಿದ್ಯಾರ್ಥಿಗಳ ಸಹಾಯ ಪಡೆಯುವುದು; ತಮಗೆ ಗೊತ್ತಿಲ್ಲದ ಅಧ್ಯಾಯಗಳ ಮೇಲೆ ಪೆಚ್ಚು ಪ್ರಶ್ನೆಗಳನ್ನು ಕೇಳಿರುವುದು ಅಥವಾ ಪ್ರಶ್ನೆಗಳನ್ನೇ ಕೇಳದಿರುವುದು; ತಮಗೆ ಗೊತ್ತಿರುವ ಭಾಗಗಳಿಂದ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದು; ಸರಿಯುತ್ತರವೇ ಇಲ್ಲದ
ಪ್ರಶ್ನೆಗಳು; ಅತ್ಯಂತ ಬೇಜವಾಬ್ದಾರಿಯುತವಾದ ತಾತ್ಕಾಲಿಕ ಉತ್ತರಗಳು, ಇಂತಹ ಎಲ್ಲ ಅಪಸವ್ಯಗಳೂ ಪ್ರಶ್ನೆ ಪತ್ರಿಕೆಗಳಲ್ಲಿ ಆಗಿವೆ.
ರಾಷ್ಟ್ರ ಮಟ್ಟದ ಪರಿಣತರಿಂದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿಕೊಂಡಿದ್ದರೆ, ಸಹಾಯಕ ಪ್ರಾಧ್ಯಾಪಕರಂತಹ ದೊಡ್ಡ ಹುದ್ದೆಯ ಪ್ರಶ್ನೆ ಪತ್ರಿಕೆಗಿರಬೇಕಾದ ಘನತೆ ಪರೀಕ್ಷೆಯಲ್ಲಿರುತ್ತಿತ್ತು. ಜತೆಗೆ, ಅವ್ಯವಹಾರಗಳಿಗೂ ಆಸ್ಪದವಿರುತ್ತಿರಲಿಲ್ಲ. ಇನ್ನು ಎರಡನೇ ಕಾರಣಕ್ಕೆ ಬರುವುದಾದರೆ, ಪ್ರಸ್ತುತ ನಡೆಯುತ್ತಿರುವ ಪರೀಕ್ಷಾ ವಿಧಾನದಲ್ಲಿರುವ ನ್ಯೂನತೆಗಳೇ, ಎಲ್ಲ ರೀತಿಯ ಅವ್ಯವಹಾರಗಳಿಗೆ ದಾರಿಯಾಗಿದೆ. ಮುದ್ರಿತ ಪ್ರಶ್ನೆ ಪತ್ರಿಕೆಗಳನ್ನು, ಎಷ್ಟೇ ಗೌಪ್ಯವಾಗಿ ಮುದ್ರಿಸಿ, ಎಷ್ಟೇ ಗೌಪ್ಯತೆಯಿಂದ ಪರೀಕ್ಷಾ ಕೇಂದ್ರದವರೆಗೆ ಸಾಗಿಸಿದರೂ, ಡಿಟಿಪಿ,
ಮುದ್ರಣ, ಪ್ಯಾಕಿಂಗ್ ಸಂದರ್ಭಗಳಲ್ಲಿ, ಪ್ರಶ್ನೆ ಪತ್ರಿಕೆ ಹಲವರ ಸಂಪರ್ಕಕ್ಕೆ ಬಂದೇ ಬರುತ್ತದೆ.
ಮುದ್ರಿತ ಪ್ರಶ್ನೆ ಪತ್ರಿಕೆ ಯನ್ನು, ರಾಜ್ಯಾದ್ಯಂತ ವ್ಯಾಪಿಸಿರುವ ಪರೀಕ್ಷಾ ಕೇಂದ್ರಗಳಿಗೆ, ಪರೀಕ್ಷೆಯ ಕೆಲ ದಿನಗಳ ಮೊದಲೇ ಸಾಗಿಸ ಬೇಕಾಗುತ್ತದೆ. ಎಷ್ಟೇ ಭದ್ರವಾದ ಖಜಾನೆಯಲ್ಲಿಟ್ಟರೂ, ಪ್ರಶ್ನೆ ಪತ್ರಿಕೆಗಳನ್ನು ಎಗರಿಸುವ ಭೂಪರಿರುತ್ತಾರೆ. ಪರೀಕ್ಷಾ ಕೇಂದ್ರಗಳನ್ನೇ ಅವ್ಯವಹಾರದ ಅಡ್ಡೆಯಾಗಿಸುತ್ತಾರೆ. ಇದು ಪ್ರಶ್ನೆ ಪತ್ರಿಕೆಯನ್ನು ಎಗರಿಸಿ ಮಾಡುವ ಮೋಸವಾಯಿತು. ಆದರೆ, ಹೀಗೆ ಪ್ರಶ್ನೆ ಪತ್ರಿಕೆ ಯನ್ನು ಸೋರಿಕೆ ಮಾಡಿ, ಮಾಡುವ ಅವ್ಯವಹಾರದ ಮಾದರಿ ಹಳೆಯದಾಯಿತು.
ಸೋರಿಕೆಯಾದ ಪ್ರಶ್ನೆ ಪತ್ರಿಕೆ ಕೆಲ ನಿಮಿಷಗಳಲ್ಲಿ ವೈರಲ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದು ಅಪಾಯಕಾರಿ ವಿಧಾನವಾಗುವು ದರಿಂದ, ಈ ವಿಧಾನದಲ್ಲಿ ಅವ್ಯವಹಾರಗಳಗುವ ಸಾಧ್ಯತೆ ಕಡಿಮೆ ಯಾಗಿರಬಹುದು. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು, ಬಹು
ಆಯ್ಕೆಯ ಪ್ರಶ್ನೆಗಳಿಗೆ, ಒಎಮಆರ್ ಉತ್ತರಪತ್ರಿಕೆಯ ಮುಖಾಂತರ ಮಾಡುವ ವಿಧಾನವು ಅವ್ಯವಹಾರಕ್ಕೆ ಸು-ರಂಗವಾಗಿ ಮಾರ್ಪಟ್ಟಿದೆ.
ಡೀಲ್ ಕುದುರಿಸುವ ಪರೀಕ್ಷಾರ್ಥಿಗಳು, ಪರೀಕ್ಷಾ ಸಮಯದಲ್ಲಿ ತಮಗೆ ಗೊತ್ತಿರುವ ಕೆಲವೇ ಪ್ರಶ್ನೆಗಳಿಗೆ ಉತ್ತರದ ಗುಂಡು ಸುತ್ತಿ, ಹೆಚ್ಚಿನ ಪ್ರಶ್ನೆಗಳನ್ನು ಉತ್ತರಿಸದೇ ಹಾಗೆಯೇ ಬಂದಿರುತ್ತಾರೆ. ನಂತರದಲ್ಲಿ ಉತ್ತರಿಸದೇ ಬಿಟ್ಟ ಪ್ರಶ್ನೆಗಳಿಗೆ ಸರಿಯುತ್ತರಗಳನ್ನು ತುಂಬಿಸುವ ವ್ಯವಸ್ಥೆ ಮೊದಲೇ ಆಗಿರುತ್ತದೆ. ಇದು ಪರೀಕ್ಷಾ ಕೇಂದ್ರದಲ್ಲಿಯೂ ಆಗಬಹುದು ಅಥವಾ ಒಎಮಆರ್ ಸ್ಕ್ಯಾನ್ ಆಗುವ ಸ್ವಲ್ಪ ಮೊದಲೂ ಆಗಬಹುದು. ಹೇಗೆ ಎಲ್ಲಿ ನಡೆಯುತ್ತದೆ ಎಂಬುದು, ಅವ್ಯವಹಾರದಲ್ಲಿ ಯಾರು ತೊಡಗಿದ್ದಾರೆ ಎಂಬುದರ ಮೇಲೆ ನಿಂತಿರುತ್ತದೆ.
ಇತ್ತೀಚೆಗೆ ಹೊರಬಂದ ಪಿಎಸ್‌ಐ ನೇಮಕ ಅವ್ಯವಹಾರದಲ್ಲಿ ನಡೆದದ್ದೂ ಇದೇ! ಅಭ್ಯರ್ಥಿಯು ಪಡೆದ ಅಂಕಕ್ಕೂ, ಆತನ ಕಾರ್ಬನ್
ಪ್ರತಿಯ ಮೇಲಿದ್ದ ಅಂಕಕ್ಕೂ ತಾಳ-ಮೇಳವೇ ಇರಲಿಲ್ಲ. ಕೆಲ ಚಾಣಾಕ್ಷ ಏಜೆಂಟ್‌ಗಳು, ಈ ರೀತಿ ಸಿಕ್ಕಿ ಹಾಕಿಕೊಳ್ಳದಂತೆ, ಡೀಲ್ ಕುದುರಿಸಿದ ಅಭ್ಯರ್ಥಿಗಳಿಂದ, ಕಾರ್ಬನ್ ಪ್ರತಿಯನ್ನೂ, ಅವರು ಪರೀಕ್ಷೆಗೆ ಬಳಸಿದ ಪೆನ್ನನ್ನೂ ಸಹ ತಮ್ಮ ವಶಕ್ಕೆ ಪಡೆಯುವುದಿದೆ ಯಂತೆ! ಪ್ರಶ್ನೆ ಪತ್ರಿಕೆ ಮತ್ತು ಒಎಮಆರ್ ಉತ್ತರ ಪತ್ರಿಕೆಗಳನ್ನು ದೂರವಿಟ್ಟು, ಆಲೈನ್ ಪರೀಕ್ಷೆ ನಡೆಸಿದ್ದೇ ಆದರೆ, ಈ ಮಾದರಿಯ
ಅವ್ಯವಹಾರಕ್ಕೂ ಕಡಿವಾಣ ಬೀಳುತ್ತದೆ.
ಈ ಎರಡೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಒಂದೇ ಸರಳ ದಾರಿಯೆಂದರೆ, ಈ ಪರೀಕ್ಷೆಗಳನ್ನು ನಡೆಸಲು ರಾಷ್ಟ್ರಮಟ್ಟದ ಪರೀಕ್ಷಾ ಪ್ರಾಧಿಕಾರವಾದ ‘ಎನ್‌ಟಿಎ’ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ)ಯನ್ನು ಪರೀಕ್ಷಾ ಪ್ರಾಧಿಕಾರವಾಗಿ ನೇಮಿಸುವುದು. ಎನ್‌ಟಿಎ, ರಾಷ್ಟ್ರಮಟ್ಟದ ಮುಖ್ಯ ಪರೀಕ್ಷೆಗಳಾದ, ನೀಟ್, ಜೆಇಇ, ಗೇಟ್, ನೆಟ್ ಮುಂತಾದವುಗಳನ್ನು, ಅತ್ಯಂತ ಯಶಸ್ವಿಯಾಗಿ ಆನ್‌ಲೈನ್ ಮಾದರಿಯಲ್ಲಿ ನಡೆಸುತ್ತಿದೆ.
ಕಳೆದ ಕೆಲ ವರ್ಷಗಳಿಂದ, ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳಿಗೆ, ಏಕಕಾಲದಲ್ಲಿ ಪರೀಕ್ಷೆಗಳನ್ನು ಅದು ನಡೆಸಿದೆ. ಆದರೂ, ಅಲ್ಲಿ ಒಮ್ಮೆಯೂ ಅವ್ಯವಹಾರದ ವಾಸನೆಯೂ ಸುಳಿದಿಲ್ಲ. ಎನ್‌ಟಿಎ ಯಾರಿಂದ ಹೇಗೆ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿಕೊಳ್ಳುತ್ತದೆ ಎಂಬುದೂ ನಿಗೂಢ. ರಾಷ್ಟ್ರ ಮಟ್ಟದ ಶ್ರೇಷ್ಠ ತಜ್ಞರನ್ನು (ಹೆಚ್ಚಾಗಿ ಐಐಟಿಗಳ ಪ್ರೊಫೆಸರ್‌ಗಳು) ಕೆಲ ವಾರಗಳ ಕಾಲ ಅeತ ಸ್ಥಳದಲ್ಲಿಟ್ಟು, ಅವರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲದಂತೆ ಮಾಡಿ, ಅವರಿಂದ ಪ್ರಶ್ನೆಗಳನ್ನು ಪಡೆಯುತ್ತದೆ, ಹಾಗೂ ಪ್ರಶ್ನೆ ಪತ್ರಿಕೆ ಸಿದ್ಧಗೊಂಡ ಸ್ಥಳದಿಂದ ಒಂದಕ್ಷರದ ದಾಖಲೆಯನ್ನೂ ಹೊರಬಿಡುವುದಿಲ್ಲ ಎಂಬ ಪ್ರತೀತಿ ಇದೆ.
ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರಿಗೂ, ಆನ್ಲ್ನ್ ನಲ್ಲಿ ಪರೀಕ್ಷೆ ಮುಗಿಯುವವರೆಗೆ ಯಾವ ಪ್ರಶ್ನೆಗಳು ಬರುತ್ತವೆ, ಎಂಬುದು ತಿಳಿದಿರುವುದಿಲ್ಲ. ಹೆಚ್ಚಾಗಿ, ಅಂತಿಮ ಹಂತದ ಪ್ರಶ್ನೆಗಳನ್ನು ನಿರ್ಧರಿಸುವುದು, ಕಂಪ್ಯೂಟರ್ ತಂತ್ರಾಂಶವಾಗಿರುತ್ತದೆ. ಹೀಗಾಗಿ, ಅಂತಿಮ ಪ್ರಶ್ನೆ ಪತ್ರಿಕೆ
ತೆರೆದುಕೊಳ್ಳುವುದೇ, ಪರೀಕ್ಷೆ ಪ್ರಾರಂಭವಾದ ಮೇಲೆ. ಇಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಸಂಭವವೇ ಇರುವುದಿಲ್ಲ. ಪ್ರಶ್ನೆಗಳನ್ನು ಸಿದ್ಧಪಡಿಸುವವರು ತಜ್ಞರಾಗಿರುವುದರಿಂದ, ಪ್ರಶ್ನೆ ಪತ್ರಿಕೆಯ ಗುಣಮಟ್ಟವೂ ಶ್ರೇಷ್ಠವಾಗಿಯೇ ಇರುತ್ತದೆ.
ರಾಜ್ಯಮಟ್ಟದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ದಾಗ ಆಗುವ ಯಾವ ಅಪಸವ್ಯಗಳಿಗೂ ಇಲ್ಲಿ ಅವಕಾಶವಿರುವುದಿಲ್ಲ. ಆನ್‌ಲೈನ್ ಪರೀಕ್ಷೆ ಎದುರಿಸುವ ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಹಾಕಿದ ಫೋಟೋ ಮತ್ತು ಸಹಿ ತಾಳೆಯಾದರೆ ಮಾತ್ರ, ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಹೀಗಾಗಿ, ಒಬ್ಬನ ಹೆಸರಲ್ಲಿ ಮತ್ತೊಬ್ಬ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ. ಆನ್‌ಲೈನ್ ಮಾದರಿಯಲ್ಲಿ, ಸುಲಭವಾಗಿ ಪ್ರಶ್ನೆ ಮತ್ತು ಉತ್ತರದ ಆಯ್ಕೆಗಳನ್ನು ಬೇರೆ-ಬೇರೆ ಕ್ರಮದಲ್ಲಿರಿಸುವುದು ಸಾಧ್ಯವಾಗುವುದರಿಂದ, ಪ್ರತಿಯೊಬ್ಬ ಅಭ್ಯರ್ಥಿಗೆ ಸಿಗುವ ಪ್ರಶ್ನೆ ಪತ್ರಿಕೆಯೂ ತನ್ನದೇ ಮಾದರಿಯಲ್ಲಿರುತ್ತದೆ. ಜತೆಗೆ, ಪರೀಕ್ಷೆ ಬರೆಯುವ ಪ್ರತಿಯೊಬ್ಬನ ಚಲನವಲನಗಳು, ಸಿಸಿ-ಟೀವಿಗಳ ಮೂಲಕ ಬೇರೆ-ಬೇರೆ ಹಂತದಲ್ಲಿ ಪರಿವೀಕ್ಷಣೆಯಲ್ಲಿರುತ್ತವೆ. ಅವೆಲ್ಲ ದಾಖಲಾಗುತ್ತಿರುತ್ತವೆ.
ಹೀಗಿರುವಾಗ, ಪರೀಕ್ಷಾಕೇಂದ್ರದಲ್ಲಿ ಯಾವ ರೀತಿಯ ಅವ್ಯವಹಾರಗಳಿಗೂ ಆಸ್ಪದವಿರುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ, ಒಮ್ಮೆ ಪರೀಕ್ಷೆ ಮುಗಿಯಿತೆಂದರೆ, ಅಭ್ಯರ್ಥಿ ದಾಖಲಿಸಿದ ಉತ್ತರಗಳನ್ನು ಬದಲಾಯಿಸಲು, ಯಾರಿಂದಲೂ ಸಾಧ್ಯವಾಗುವುದಿಲ್ಲ. ಸಂಪೂರ್ಣ ಪ್ರಕ್ರಿಯೆ ಆನ್ಲೈನ್ ನಲ್ಲಿ ನಡೆಯುವುದರಿಂದ, ಫಲಿತಾಂಶವನ್ನೂ ಬೇಗನೆ ಕೊಡುವುದು ಸಾಧ್ಯವಾಗುತ್ತದೆ.