ಶ್ವೇತಪತ್ರ
shwethabc@gmail.com
ಒಮ್ಮೆ ಸಂತನೊಬ್ಬ ಒಬ್ಬ ಶ್ರೀಮಂತನ ಮನೆಯ ಬಾಗಿಲು ಬಡಿಯುತ್ತಾನೆ. ಆತ ಭಿಕ್ಷಕ್ಕಾಗಿ ಬಂದಿರುತ್ತಾನೆ. ಒಂದು ದಿನದ ಊಟದ ಹೊರತಾಗಿ ಆತನಿಗೆ
ಇನ್ನೇನೂ ಬೇಡವಾಗಿರುತ್ತದೆ. ಸಂತನನ್ನು ಕಂಡ ಕೂಡಲೇ ಶ್ರೀಮಂತ ಜೋರಾಗಿ ‘ನೀನಾರೆಂದು ಇಲ್ಲಿ ಯಾರಿಗೂ ತಿಳಿದಿಲ್ಲ; ನೀ ಯಾಕೆ ಇಲ್ಲಿಗೆ ಬಂದೆ?’ ಎಂದು ಕೂಗಾಡುತ್ತಾನೆ. ಈ ಮಾತುಗಳನ್ನು ಕೇಳಿಸಿಕೊಂಡ ಸಂತ ಮುಗುಳು ನಗುತ್ತಾ ಉತ್ತರಿಸುತ್ತಾನೆ: ‘ನನಗೆ ನಾನು ಯಾರೆಂದು ತಿಳಿದಿದೆ!’. ಇದೆಂಥ ವಿಪರ್ಯಾಸವಲ್ಲವೇ? ನಮ್ಮಲ್ಲನೇಕರಿಗೆ ನಾವ್ಯಾರೆಂದು ಬೇರೆಯವರಿಗೆ ತಿಳಿಯಬೇಕೆಂಬ ಇನ್ನಿಲ್ಲದ ಹಂಬಲ.
ಆದರೆ ನಮಗೇ ನಾವ್ಯಾರೆಂದು ತಿಳಿದಿರುವುದಿಲ್ಲ. ತಿಳಿದುಕೊಳ್ಳುವ ಆಶಯವಿದ್ದರೂ ಮನಸ್ಸಿನ ಬಗ್ಗೆ ನಮಗೆ ಮರೆವು. ಈ ಮರೆವು ನಮ್ಮ ನಿಜ ಸ್ವಭಾವದ ಕುರಿತಾಗಿಯೂ, ನಮ್ಮ ಅಧಿಕೃತತೆಯ ಬಗ್ಗೆಯೂ ಆಗಿರುತ್ತದೆ. ಕೆಲವೊಮ್ಮೆ ನಮಗೆ ನಮ್ಮದೇ ಆದ ಬೇಜಾರು, ದುಃಖಗಳು ಇರುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ಅನೇಕ ಕಾರಣಗಳನ್ನು ನಾವು ಹುಡುಕುತ್ತಿರುತ್ತೇವೆ. ಆದರೆ ನಮ್ಮನ್ನು ನಾವು ಅರಿಯದಿರುವುದೇ ನಿಜವಾದ ದುಃಖ. ತಾನಾರೆಂದು ತಿಳಿಯದೆಯೇ ವ್ಯಕ್ತಿ ಹೇಗೆ ಖುಷಿಯಾಗಿರಬಲ್ಲ? ಈ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ನಮ್ಮ ಅಜ್ಞಾನದಿಂದ ಅನೇಕ ಸಮಸ್ಯೆಗಳನ್ನು ಆಹ್ವಾನಿಸಿರುತ್ತೇವೆ.
ನಮ್ಮನ್ನು ನಾವು ಅರಿಯಬೇಕಾದರೆ ನಮ್ಮೊಳಗಿನ ಅದಮ್ಯ ಚೇತನವನ್ನರಿಯಬೇಕು. ನಮ್ಮೊಳಗಿನ ಏನೂ ಅಲ್ಲದ ಒಂದು ಸ್ಥಿತಿಯೊಳಗೆ ನಾವು ಸಾಗಬೇಕು. ಈ ಸ್ಥಿತಿಯು ನಮ್ಮ ದೇಹ ಮನಸ್ಸುಗಳ ಸಂತೋಷಗಳನ್ನು ಮೀರಬೇಕು. ಆಗ ಅಲ್ಲೊಂದು ಶುದ್ಧ ಪ್ರe ಮೂಡುತ್ತದೆ. ಈ ಪ್ರeಯೇ ಬದುಕಿಗೆ ಬೇಕಾದ ಪ್ರೇರಣೆ. ಸಂಭ್ರಮದ ಮನಸ್ಥಿತಿ ಬದುಕಿಗೆ ಅರ್ಥವನ್ನು ತುಂಬುವ ನಿಜ ಸಂಗತಿ. ಇಲ್ಲಿ ನಾವೆಲ್ಲ ಕಲಿಯಬೇಕಿರುವ ಮೂಲಭೂತ ವಿಷಯವೇ ಜೀವಿಸುವುದು. ಮೊದಲಿಗೆ ನಮ್ಮ ಬದುಕು ಅದು ನಮ್ಮದು, ಇನ್ಯಾರದ್ದೋ ಅಲ್ಲ.
ಹಾಗಾಗಿ ಬೇರೆಯವರು ಅದನ್ನು ನೆಗೆಟಿವ್ ಆಗಿ ಪ್ರಭಾವಿಸದಂತೆ, ನಿರ್ದೇಶಿಸದಂತೆ ನೋಡಿಕೊಳ್ಳಬೇಕಿದೆ. ನಮ್ಮ ಬದುಕನ್ನು ನಿರ್ದೇಶಿಸುವುದಕ್ಕೆ ಇನ್ಯಾರೋ ಅದರೊಳಗೆ ಪ್ರವೇಶಿಸಿದರೆ ಕಳೆದುಹೋಗುವುದು ನಮ್ಮದೇ ಬದುಕು. ಹೊರಗಿನ ಪ್ರಾಬಲ್ಯ ಹಾಗೂ ನಮ್ಮೊಳಗಿನ ಜೀವಂತಿಕೆ ಇವೆರಡೂ ಸಂಧಿಸಲು ಸಾಧ್ಯ ವಿಲ್ಲ. ಹಾಗಂತ ಪ್ರತಿಯೊಂದನ್ನೂ ನಾವು ವಿರೋಧಿಸಬೇಕಿಲ್ಲ, ಅದು ನಮಗೆ ಹೆಚ್ಚಿನ ಸಹಾಯವನ್ನೇನೂ ಮಾಡುವುದಿಲ್ಲ.
ನಮ್ಮಲ್ಲಿ ಎರಡು ರೀತಿಯ ಜನರಿರುತ್ತಾರೆ. ಮೊದಲನೆಯ ವರು ವಿಧೇಯರು, ಎಲ್ಲರಿಗೂ ಅತಿಶೀಘ್ರ ಶರಣಾಗುವವರು.
ಅವರಲ್ಲಿ ಸ್ವತಂತ್ರ ಆತ್ಮವೇ ಇರುವುದಿಲ್ಲ, ಅವರಲ್ಲೊಂದು ಪರಿಪಕ್ವತೆಯೂ ಕಂಡುಬರುವುದಿಲ್ಲ. ಸದಾ ತಾವೇನು ಮಾಡಬೇಕು ಮಾಡಬಾರದು ಎಂಬುದನ್ನು ಹೇಳುವ ಪಿತೃರೂಪಿ ವ್ಯಕ್ತಿಗಳನ್ನು ಅವರು ಎದುರು ನೋಡುತ್ತಿರುತ್ತಾರೆ. ಇಂಥವರಿಗೆ ತಮ್ಮ ಇರುವಿಕೆಯನ್ನೇ ನಂಬಲು ಕಷ್ಟ ಸಾಧ್ಯ. ಆದರೆ ಇಂಥವರೇ ಈ ಜಗತ್ತಿನ ಅತಿಹೆಚ್ಚು ಭಾಗವಾಗಿರುವುದು. ಮತ್ತೊಂದು ರೀತಿಯ ಜನರು ಸಮಾಜವನ್ನು, ಅದರೊಳಗಿನ ಮೌಲ್ಯವನ್ನು ಧಿಕ್ಕರಿ ಸುವ ಬಂಡಾಯದ ಸ್ವಭಾವದವರು. ಇವರು ಸಮಾಜದ ಪರವೂ ಅಲ್ಲ ವಿರುದ್ಧವೂ ಅಲ್ಲ; ತಮ್ಮ ಗ್ರಹಿಕೆಗೆ ಅನುಸಾರವಾಗಿ ಬದುಕನ್ನು ನಡೆಸುವವರು. ಅವರದ್ದೇ ಬೆಳಕಿನ ಪ್ರಪಂಚ.
ಇವರು ಬಹಳ ವಿನಮ್ರ ಸ್ವಭಾವದವರಾದರೂ, ಕಾಣುವುದು ಕಠಿಣವಾಗಿ. ‘ಸಮಾಜದ ಕಣ್ಣಿಗೆ ನಾವು ತಪ್ಪೆನಿಸಬಹುದು, ಆದರೆ ನಮ್ಮಷ್ಟಕ್ಕೆ ನಮ್ಮನ್ನು ಬಿಟ್ಟುಬಿಡಿ’ ಎನ್ನುತ್ತಾರೆ ಇವರು. ಇದು ಕಲಿಕೆಯ ಒಂದು ಮಾರ್ಗವೂ ಹೌದು- ತಪ್ಪು ಮಾಡಿ ಅದರಿಂದ ಕಲಿಯುವುದು, ಬದುಕನ್ನು ನಮ್ಮದೇ ರೀತಿಯಲ್ಲಿ ಅರ್ಥೈಸಿಕೊಂಡು ಮಾಗುವುದು, ಮಾಗುತ್ತಾ ಬೆಳೆಯುವುದು. ಬೇರೆಯವರ ಆಣತಿ, ನಿರ್ದೇಶನಕ್ಕೆ ನಾವು ಕಾಯುತ್ತಾ ಕುಳಿತರೆ ನಮ್ಮ ಬದುಕು ಹಾಗೆಂದರೇನು? ನಮಗೆ ತಿಳಿಯುವುದೇ ಇಲ್ಲ.
ಬದುಕು ಎಂದಿಗೂ ನಿಶ್ಚಿತವಲ್ಲ. ಅದರೊಳಗೆ ನಮ್ಮ ಅನೇಕ ಗೊಂದಲಗಳಿರುತ್ತವೆ. ಇರಲಿ, ಅವುಗಳ ಮಧ್ಯೆ ನಮ್ಮ ದಾರಿ ಹುಡುಕಬೇಕು. ಬೇರೆಯವರ ಮಾತುಗಳನ್ನು ಕೇಳುತ್ತ ಅವರ ಆಣತಿಯಂತೆ ನಡೆಯುವುದು ಸುಲಭ; ಆದರೆ ಅವರು ಬೇಡದ ವಿಚಾರಗಳನ್ನು ನಮ್ಮೆಡೆಗೆ ತುರುಕಿ ನಮ್ಮನ್ನೇ
ನಿಯಂತ್ರಿಸತೊಡಗುತ್ತಾರೆ. ಅದಕ್ಕೇ ಹೇಳಿದ್ದು- ನಿಮ್ಮೊಳಗಿನ ನಿಮ್ಮನ್ನು ನೀವು ಭೇಟಿಯಾಗಲೇಬೇಕು. ಆಗಲೇ ಅದಮ್ಯ ಅನುಭವ-ಅನುಭಾವ ಸಾಧ್ಯ.
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಮುಂದೇನಾಗುವುದೋ ಎಂಬುದು ನಮಗಾರಿಗೂ ಗೊತ್ತಿಲ್ಲ.
ಅದು ಎಂದಿಗೂ ನಮಗೆ ಗೊತ್ತಾಗದೆ ಇರುವುದೇ ಬದುಕಿನ ಅತ್ಯಂತ ಸುಂದರ ವಿಚಾರ. ಮುಂದೇನಾಗುವುದು ನಮಗೆ ತಿಳಿದುಬಿಟ್ಟಿದ್ದರೆ ಈ ಬದುಕಿಗೆ ಇಷ್ಟೊಂದು ಮೌಲ್ಯವಿರುತ್ತಿರಲಿಲ್ಲ. ಎಲ್ಲವೂ ನಮಗೆ ಬೇಕಾದ ರೀತಿಯಲ್ಲಿದ್ದು ಎಲ್ಲವೂ ನಿಶ್ಚಿತವಾಗಿದ್ದಿದ್ದರೆ ನಮ್ಮನ್ನು ಮನುಷ್ಯರು ಎನ್ನಲಾಗು ತ್ತಿರಲಿಲ್ಲ; ನಾವೆಲ್ಲ ಯಂತ್ರಗಳೆನಿಸುತ್ತಿದ್ದೆವು. ಯಂತ್ರಗಳಿಗಷ್ಟೇ ತಾನೇ ನಿಶ್ಚಿತತೆ, ಸುರಕ್ಷತೆ, ವಾರಂಟಿ? ಮನುಷ್ಯ ಎಂದಿಗೂ ಬದುಕುವುದು ಸ್ವಾತಂತ್ರ್ಯ ದಲ್ಲಿ. ನಿಜವಾದ ಬುದ್ಧಿವಂತ ಮನುಷ್ಯ ಎಂದಿಗೂ ಸ್ವಲ್ಪ ಹಿಂಜರಿಕೆಯಲ್ಲೇ ಇರುತ್ತಾನೆ, ಏಕೆಂದರೆ ಒರಗಲು ಆತನಿಗೆ ಯಾವುದೇ ಸಿದ್ಧಾಂತವಿರುವು ದಿಲ್ಲ.
ಅವನೆಂದೂ ವಿಚಾರಗಳನ್ನು ನೋಡಿಯೇ ಅವುಗಳಿಗೆ ಪ್ರತಿಕ್ರಿಯಿಸಬೇಕು. ಚೀನಾದ ತತ್ವಜ್ಞಾನಿ ಲಾವ್ ಸೂ ಬದುಕಿನ ಬಹಳ ಅದ್ಭುತವಾದ ಸೂತ್ರ ವೊಂದನ್ನು ನೀಡುತ್ತಾರೆ- ‘ನಾನು ಹಿಂಜರಿಯುತ್ತೇನೆ ಹಾಗೂ ಬದುಕಲ್ಲಿ ಪಥ ಬದಲಾಯಿಸುತ್ತಾ ನಡೆಯುತ್ತೇನೆ. ಏಕೆಂದರೆ ಬದುಕಲ್ಲಿ ಮುಂದೇ ನಾಗುವುದೋ ನನಗೆ ತಿಳಿದಿಲ್ಲ ಮತ್ತು ನನಗೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಪ್ರತಿ ನಿಮಿಷಗಳನ್ನು ಆ ಕ್ಷಣವೇ ನಾನು ನಿರ್ಧರಿಸುತ್ತೇನೆ,
ಮುಂಚೆಯೇ ನಿರ್ಧರಿಸಲಾಗುವುದಿಲ್ಲ. ಆ ಕ್ಷಣ ಬಂದಾಗಷ್ಟೇ ನಿರ್ಧರಿಸುತ್ತೇನೆ!’ ಲಾವ್ ಸೂ ಮಾತುಗಳಲ್ಲಿ ಸ್ಪಷ್ಟವಾಗುವುದಿಷ್ಟೇ-ಯಾವುದೇ ವ್ಯಕ್ತಿ ತನ್ನ ಬದುಕಿನ ಬಗ್ಗೆ ತಿಳಿದು ಕೊಳ್ಳಬೇಕಾದರೆ ಮೊದಲು ಅವನು ಜವಾಬ್ದಾರನಾಗಿರಬೇಕು.
ನಮ್ಮೆಲ್ಲರಲ್ಲಿ ಕಾಣೆಯಾಗಿರುವುದೇ ಈ ಜವಾಬ್ದಾರಿ. ಇದನ್ನು ಕಟ್ಟುಪಾಡಾಗಿಯು, ಕರ್ತವ್ಯವನ್ನಾಗಿಸಿಕೊಳ್ಳಬಾರದು; ಬದಲಿಗೆ ಪ್ರತಿಕ್ರಿಯಿಸುವ ಮನಸ್ಥಿತಿಯಾಗಿಸಿಕೊಳ್ಳಬೇಕು. ಬದುಕನ್ನರಿಯಲು ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುವುದರಷ್ಟು ಸುಲಭ ಮಾರ್ಗ ಇನ್ನೊಂದಿಲ್ಲ. ಶತಮಾನ ಗಳಿಂದ ನಮ್ಮ ಮನಸ್ಥಿತಿಯನ್ನು ಷರತ್ತುಬದ್ಧಗೊಳಿಸಲಾಗಿದೆ. ಯಂತ್ರಗಳಂತೆ ಹೀಗೇ ಬದುಕಬೇಕು, ಹೀಗೇ ಯೋಚಿಸಬೇಕು, ಹೀಗೇ ನಡೆದು
ಕೊಳ್ಳಬೇಕು ಹೀಗೆ ಮ್ಯಾಪ್ ತರಹ ನಮ್ಮ ಬದುಕನ್ನು ವಿನ್ಯಾಸ ಗೊಳಿಸಲಾಗಿದೆ. ಬದುಕು ಅನಂತ, ಅದಕ್ಕೆ ಯಾವುದೇ ರೂಟ್ ಮ್ಯಾಪ್‌ಗಳು ಬೇಕಿಲ್ಲ. ಅದೊಂದು ಅರಿವು. ಬದುಕಿನ ದಾರಿ ರೈಲ್ವೆ ಪಥವಲ್ಲ, ಸದಾ ಟ್ರ್ಯಾಕುಗಳ ಮೇಲೆ ಸುಲಭವಾಗಿ ಹರಿಯುವುದಕ್ಕೆ. ಅದು ಅಂಕುಡೊಂಕಿನ ಹಾದಿ. ಆ ಹಾದಿ
ಯಲ್ಲಿ ಪಯಣಿಸಿದಾಗಷ್ಟೇ ಅದರ ಸುಂದರತೆ, ವೈಭವ, ಅದರ ಸಂಗೀತ ನಮಗೆ ಕಾಣಸಿಗುವುದು. ಬದುಕು ಅದೆಂದಿಗೂ ಒಂದು ಆಶ್ಚರ್ಯ!ನಾವು ಬರಿಯೇ ಭದ್ರತೆ, ನಿಶ್ಚಿತತೆಯನ್ನಷ್ಟೇ ನೋಡಿದರೆ ಅಲ್ಲೇನೂ ಅಚ್ಚರಿ ಉಳಿಯುವುದಿಲ್ಲ.
ಬದುಕಲು ಕಲಿಯುವುದು ಹೇಗೆ? ಎಂಬುದರತ್ತ ನಾವೆಲ್ಲ ಇಂದು ಆಕರ್ಷಿತರಾಗುತ್ತಿದ್ದೇವೆ. ಇನ್ನೊಬ್ಬರ ಉಪದೇಶ ನಮ್ಮ ಬದುಕನ್ನು ಗೈಡ್ ಮಾಡುತ್ತಾ ಹೋದರೆ ಸ್ಥಿರವಾಗಿರುವುದಕ್ಕೆ ನಾವು ಅಂಟಿಕೊಂಡುಬಿಡುತ್ತೇವೆ. ಈ ಸ್ಥಿರತೆ ನಮ್ಮದೇ ಬದುಕಿನ ಬಗ್ಗೆ ನಮ್ಮದೇ ಆಸಕ್ತಿಯನ್ನು ಕಳೆದುಬಿಡುತ್ತದೆ. ಬರೀ ಶಿಸ್ತನ್ನಷ್ಟೇ ನಮ್ಮ ಮೇಲೆ ಹೇರುತ್ತಾ ಹೋಗುತ್ತದೆ. ಬದುಕು ಅದು ಅತ್ಯಮೂಲ್ಯ. ಅಲ್ಲಿ ತಪ್ಪುಗಳನ್ನು ಮಾಡುತ್ತಾ ಮುಂದುವರಿಯಬೇಕು. ಆದರೆ ಒಂದು ವಿಷಯ- ಒಂದೇ ತಪ್ಪನ್ನು ಮತ್ತೆ ಮತ್ತೆ ಮಾಡಬಾರದು. ಹೊಸ ತಪ್ಪುಗಳು ಹೊಸ ಕಲಿಕೆಗಳಿಗೆ ಅವಕಾಶ ವನ್ನೀಯುತ್ತವೆ. ಚಂದ್ರನನ್ನು ತಂಬಿಗೆಯಲ್ಲಿ ತುಂಬಿಸಿ ನೋಡುವುದಲ್ಲ ಬದುಕು, ಕುತ್ತಿಗೆ ಚಾಚಿ ಆಕಾಶದ ತುಂಬಾ ಚಂದ್ರನನ್ನು ಬಾಚಿ ಅಪ್ಪಿಕೊಳ್ಳುವುದು ಬದುಕು.
ಯಾವುದೋ ಸಿದ್ಧಾಂತ ದಲ್ಲೋ, ತತ್ವದಲ್ಲೋ ಬದುಕಿನ ಅರ್ಥವನ್ನು ಹುಡುಕಿದರೆ ಹೀಗೆ ತಂಬಿಗೆಯಲ್ಲಿ ಕಂಡ ಚಂದ್ರಬಿಂಬಕ್ಕಷ್ಟೇ ಸೀಮಿತವಾಗಿ
ಬಿಡುತ್ತದೆ ಬದುಕು. ಇಬ್ಬರ ನಡುವಿನ ಬದುಕು ಎಂದಿಗೂ ಸಮಾನಾಂತರವಾಗಿರುವುದಿಲ್ಲ. ಹಾಗಾಗಿ ಇನ್ನೊಬ್ಬರ ಬದುಕನ್ನು ಇಣುಕಿ ನೋಡಬಾರದು. ಆಗ ಅದು ಅವರ ದೃಷ್ಟಿಕೋನದಲ್ಲಷ್ಟೇ ಕಾಣುತ್ತಾ ಹೋಗುತ್ತದೆ. ನಮ್ಮ ರೀತಿಯಲ್ಲಿ ನಾವು ಬದುಕನ್ನು ಅರ್ಥೈಸುವುದರಲ್ಲಿ ಸೋಲುತ್ತೇವೆ. ಬದುಕನ್ನು ಅರ್ಥೈಸುವುದು ನಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿರ ಬೇಕು, ಇನ್ಯಾರದ್ದೋ ಭಾಷೆ ಅದರಲ್ಲಿ ಅಡಗಿರಬಾರದು.
ತುಂಬಾ ಜನ ಬೇರೆಯವರ ಭಾಷೆಗೆ ಧ್ವನಿಯಾಗುತ್ತಾರೆ. ಬದುಕಿನ ಜತೆಯ ಮಾತಿಗೆ ಭಾಷೆಯ ಅಗತ್ಯವಿಲ್ಲ, ಮೌನದ ಸಾಂಗತ್ಯವೇ ಸಾಕು. ಈ ಮೌನವೇ ಧ್ಯಾನ. ಇಲ್ಲಿ ನೀವು ಮತ್ತು ಬದುಕಿನ ವಾಸ್ತವಗಳಷ್ಟೇ, ಇನ್ಯಾವುದೋ ಪರಿಕಲ್ಪನೆಗಳ ಸದ್ದಿಲ್ಲ. ನೀವು ಏನನ್ನಾದರೂ ಪ್ರೀತಿಸಿದರೆ, ಬೇರೆಯವರು
ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಿದ್ದಾರೆ ಎಂದು ನೋಡಲು ಹೋಗುವುದು ನಿಮ್ಮ ನಿಜ ಪ್ರೀತಿಗೆ ದೊಡ್ಡ ಅಡ್ಡಿ. ಅಲ್ಲಿಯವರೆಗೂ ನೀವು ಪ್ರೀತಿಯ ಬಗ್ಗೆ ಕಲಿತ ಎಲ್ಲ ವಿಷಯಗಳನ್ನು ಮರೆತುಬಿಡಿ, ಜಸ್ಟ್ ಪ್ರೀತಿಸಿ. ಆಗ ಪ್ರೀತಿ ತನ್ನಷ್ಟಕ್ಕೆ ತಾನೇ ನಿಮ್ಮನ್ನು ಮುನ್ನಡೆಸುತ್ತದೆ. ಇನ್ನೊಬ್ಬರು ಪ್ರೀತಿಯ ಬಗ್ಗೆ ಏನು
ಹೇಳಿದ್ದಾರೆ ಎನ್ನುವುದಕ್ಕಿಂತ ನಮ್ಮ ಪರಿಧಿಯೊಳಗೆ ನಮಗೆ ಪ್ರೀತಿ ಅರ್ಥವಾಗಬೇಕು.
ಓಶೋ ಹೇಳಿದ ಒಂದು ಪ್ರಸಂಗವಿಲ್ಲಿ ನೆನಪಾಗುತ್ತಿದೆ. ಜೈನ ಸಾಧುವೊಬ್ಬರು ಧ್ಯಾನದ ಬಗ್ಗೆ ಬರೆದ ಪುಸ್ತಕವೊಂದು ಓಶೋ ಅವರಿಗೆ ಓದಲು ಸಿಕ್ಕಿತ್ತಂತೆ. ಧ್ಯಾನದ ಬಗ್ಗೆ ಅದ್ಭುತವಾಗಿ ಬರೆದಿದ್ದರಂತೆ ಜೈನ ಸಾಧು. ಪುಸ್ತಕವನ್ನು ಓಶೋ ತುಂಬಾ ಇಷ್ಟಪಟ್ಟಿದ್ದರು, ಅದರಲ್ಲಿನ ಒಂದು ಸಂಗತಿ ಯನ್ನು ಹೊರತುಪಡಿಸಿ. ಅದೇನೆಂದರೆ ಧ್ಯಾನದ ಬಗ್ಗೆ ಅಪೂರ್ವವಾಗಿ ಬರೆದಿದ್ದ ಜೈನ ಸಾಧು ತಮ್ಮ ಬದುಕಲ್ಲಿ ಒಮ್ಮೆಯೂ ಧ್ಯಾನವನ್ನು ಮಾಡಿರಲಿಲ್ಲವಂತೆ. ಆದರೂ ಪುಸ್ತಕದ ಇತರೆ ಸಂಗತಿಗಳು ಓಶೋಗೆ ತುಂಬಾ ಮೆಚ್ಚುಗೆ ಯಾಗಿದ್ದವು. ಇದಾಗಿ ಹತ್ತಾರು ವರ್ಷಗಳೇ ಕಳೆದಿರಬಹುದು.
ರಾಜಸ್ಥಾನದ ಒಂದು ಹಳ್ಳಿಯಲ್ಲಿ ಸಂಚರಿಸುವಾಗ ಜೈನ ಸಾಧು ಓಶೋರನ್ನು ಭೇಟಿಯಾಗುತ್ತಾರೆ. ಆಗ ಅವರ ಧ್ಯಾನದ ಕುರಿತಾದ ಪುಸ್ತಕವನ್ನು ನೆನಪಿಸಿ ಕೊಂಡ ಓಶೋ, ‘ಪುಸ್ತಕ ಬಹಳ ಅದ್ಭುತವಾಗಿದೆ, ಆದರೆ ಧ್ಯಾನದ ಬಗ್ಗೆ ಅಷ್ಟು ಅಪರೂಪವಾಗಿ ಬರೆದ ನೀವು ಒಮ್ಮೆಯೂ ಧ್ಯಾನ ಮಾಡಿಲ್ಲವೆನ್ನುತ್ತೀರಿ. ನಿಜ ಹೇಳಿ, ನೀವು ಒಮ್ಮೆಯೂ ಧ್ಯಾನ ಮಾಡಿಲ್ಲವೇ?’ ಎಂದು ಕೇಳುತ್ತಾರೆ. ಜತೆಯಲ್ಲಿ ತಮ್ಮ ಶಿಷ್ಯರೂ ಇದ್ದಿದ್ದರಿಂದ ಸ್ವಲ್ಪ ಮುಜುಗರಗೊಂಡ ಜೈನ ಸಾಧು ನಿಧಾನವಾಗಿ ಒಪ್ಪಿಕೊಳ್ಳುತ್ತಾ ಹೋಗುತ್ತಾರೆ: ‘ಇದುವರೆಗೂ ನಾನು ಯಾರೊಂದಿಗೂ ಹಂಚಿಕೊಳ್ಳದ ವಿಷಯವಿದು.
ಇಲ್ಲಿಯವರೆಗೂ ನಾನು ಧ್ಯಾನದ ಬಗೆಗಿನ ಎಲ್ಲಾ ಗ್ರಂಥಗಳನ್ನು ಓದಿದ್ದೇನೆ, ಸಾವಿರಾರು ಜನರಿಗೆ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿದ್ದೇನೆ, ಅನೇಕ ಪುಸ್ತಕ ಗಳನ್ನು ಬರೆದಿದ್ದೇನೆ. ೨೦ನೆಯ ವಯಸ್ಸಿಗೆ ಸನ್ಯಾಸದೀಕ್ಷೆ ಪಡೆದೆ. ಮೊದಲ ೩೦ ವರ್ಷಗಳು ಧ್ಯಾನದ ಬಗ್ಗೆ ಓದಿದೆ, ಯೋಚಿಸಿದ ನಂತರದ ೨೦ ವರ್ಷಗಳು ಧ್ಯಾನವನ್ನು ಕಲಿಸಿದೆ, ಅದರ ಬಗ್ಗೆ ಬರೆದೆ. ಆದರೆ ಇದುವರೆಗೂ ಅದರ ಸವಿಯನ್ನು ಆಸ್ವಾದಿಸಲಾಗಲಿಲ್ಲ’.
ಜಗತ್ತಿನಲ್ಲಿ ಲಕ್ಷಾಂತರ ಜನರ ಕಥೆಯೂ ಇದೇ. ಅವರು ಪ್ರೀತಿಯ ಬಗ್ಗೆ ಮಾತನಾಡುತ್ತಾರೆ, ಕವಿತೆ ಬರೆಯುತ್ತಾರೆ. ಆದರೆ ಪ್ರೀತಿಸುವುದೇ ಗೊತ್ತಿರುವು ದಿಲ್ಲ. ಅನುಭವಿಸದೆ ಅನುಭಾವಿಸದೆ ಯಾವುದೇ ವಿಷಯದ ಬಗ್ಗೆ ಮಾತನಾಡುವುದು, ಬರೆಯುವುದು, ಪರಿಕಲ್ಪಿಸುವುದು, ಬೌದ್ಧಿಕ ವಾದ ನಡೆಸುವುದು ಪ್ರಯೋಜನಕ್ಕೆ ಬಾರದ ಸಂಗತಿಯಾಗಿಬಿಡುತ್ತದೆ. ಜನರು ಕಳೆದುಹೋದ ಬದುಕನ್ನು ಹುಡುಕುವುದರಲ್ಲಿ ಕಳೆದು ಹೋಗುತ್ತಾರೆ.
ವಾಸ್ತವವನ್ನು ಧೈರ್ಯದಿಂದ ಅಪ್ಪಿಕೊಳ್ಳುವ, ಮ್ಯಾಪು ಗಳ ಆಚೆ ಬದುಕಿನ ಪಯಣವನ್ನು ನಾವೆಲ್ಲ ಮುಂದು ವರಿಸಬೇಕಿದೆ. ಮಾನಸಿಕತೆಗೋ, ಬೌದ್ಧಿಕತೆಗೋ ಅಂಟಿಕೊಳ್ಳುವುದು ಬದುಕಲ್ಲ. ಅದರಿಂದ ಬಿಡುಗಡೆಗೊಳ್ಳುವ ಪೂರ್ಣ ತೆಯೇ ಬದುಕು. ಅದಕ್ಕೇ ಶರಣರು ಹೇಳಿದ್ದು- ‘ಸ್ಥಾವರಕ್ಕಳಿ
ವುಂಟು ಜಂಗಮಕ್ಕಳಿವಿಲ್ಲ’ ಎಂದು.