Saturday, 14th December 2024

ಆತಂಕವಾದಿಗಳಾದ ಆಂದೋಲನ ಜೀವಿಗಳು

ವಿಶ್ಲೇಷಣೆ

ಪ್ರಕಾಶ್ ಶೇಷರಾಘವಾಚಾರ‍್

ವಾಸ್ತವವಾಗಿ ಲೋಕಸಭೆಯಲ್ಲಿ ನಡೆದ ಅಟ್ಟಹಾಸವು ಮೋದಿ ಸರಕಾರದ ವಿರುದ್ದದ ಟೂಲ್‌ಕಿಟ್‌ನ ಭಾಗವಾಗಿದೆ. ದೇಶದಲ್ಲಿ ರಾಷ್ಟ್ರೀಯತೆಯು ಬಲವಾಗಿ ನೆಲೆಯೂರುತ್ತಿರುವ ಸಂಗತಿಯಿಂದ ವಿಚಲಿತರಾಗಿರುವ ಎಡಪಂಥೀಯ ವಿಚಾರವಾದಿಗಳು ಕಂಗೆಟ್ಟು ಈ ದಾಳಿಯನ್ನು ರೂಪಿಸಿದ್ದಾರೆ ಎನ್ನುವ ಸುದ್ದಿಯನ್ನು ತಳ್ಳಿಹಾಕಲಾಗದು.

೨೦೦೧ರ ಡಿಸೆಂಬರ್ ೧೩ರಂದು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ, ಪ್ರಜಾಪ್ರಭುತ್ವದ ಮಂದಿರವಾದ ಸಂಸತ್ ಭವನದ ಮೇಲೆ ಭಯೋತ್ಪಾದಕರ ದಾಳಿ ನಡೆಯಿತು. ಭಾರತವನ್ನು ಅಸ್ಥಿರಗೊಳಿಸಲು ನೆರೆಯ ಪಾಕಿಸ್ತಾನದಿಂದ ಪ್ರೇರಿತರಾದ ಉಗ್ರರು ಈ ದುಷ್ಕೃತ್ಯವನ್ನು ಕೈಗೊಂಡಿದ್ದರು. ೨೨ ವರ್ಷದ
ತರುವಾಯ, ೨೦೨೩ರ ಡಿಸೆಂಬರ್ ೧೩ರಂದು ಮತ್ತೊಮ್ಮೆ ಸಂಸತ್ತಿನ ಭದ್ರತೆಯನ್ನು ಭೇದಿಸಿ ಇಬ್ಬರು ಸಂದರ್ಶಕರ ಗ್ಯಾಲರಿಯಿಂದ ೧೫ ಅಡಿ ಎತ್ತರದಿಂದ ಸದನದೊಳಗೆ ಜಿಗಿದು ಕಲರ್ ಬಾಂಬಿನ ಹೊಗೆಯನ್ನು ಹೊರಬಿಟ್ಟು ಅಲ್ಲೋಲ-ಕಲ್ಲೋಲ ಸೃಷ್ಟಿಸುತ್ತಾರೆ.

ಸಂಸತ್ತಿನ ಹೊರಗಡೆ ಇಬ್ಬರು ಘೋಷಣೆಯನ್ನು ಕೂಗಿಕೊಂಡು ಬಣ್ಣದ ಹೊಗೆಯನ್ನು ಅಲ್ಲಿಯೂ ಹೊರಬಿಟ್ಟು ಭದ್ರತಾ ಸಿಬ್ಬಂದಿಯನ್ನು ತಬ್ಬಿಬ್ಬು ಪಡಿಸುತ್ತಾರೆ. ಸಂಸತ್ ಭವನದ ಸುರಕ್ಷತೆಯಲ್ಲಿನ ಭಾರಿ ಲೋಪ ಬಟಾಬಯಲಾಗುತ್ತದೆ. ಅಚಾನಕ್ ಆಗಿ ನಡೆದ ಈ ಅನಾಹುತದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ, ಮಾರ್ಷಲ್‌ಗಳು ಮತ್ತು ಸಂಸತ್ ಸದಸ್ಯರು ಅನುಸರಿಸಬೇಕಾಗಿದ್ದ ಭದ್ರತಾ ಶಿಷ್ಟಾಚಾರದಲ್ಲಿನ ಅಗಾಧ ಕೊರತೆಯೂ ಎದ್ದು ಕಾಣುತ್ತಿತ್ತು.

ಘಟನೆಯು ನಡೆದ ತರುವಾಯ ಈ ಪಿತೂರಿಯ ಹಿನ್ನೆಲೆಯು ಬಯಲಾಗತೊಡಗಿದೆ. ಸಂಸತ್ ಕಲಾಪ ವೀಕ್ಷಿಸುವ ನೆಪದಲ್ಲಿ ಪ್ರವೇಶಿಸಿದ ಮನೋರಂಜನ್ ಮೈಸೂರು ನಿವಾಸಿ. ಈತ ಕಳೆದ ಮೂರು ತಿಂಗಳಿನಿಂದ ಸಂಸದರ ಕಚೇರಿಯ ಸಿಬ್ಬಂದಿ ಹಿಂದೆ ಬಿದ್ದು ಪಾಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮನೋರಂಜನ್ ಮತ್ತು ಅವನ ಸಂಗಡಿಗರು ಈ ಷಡ್ಯಂತ್ರವನ್ನು ರೂಪಿಸಿದ್ದು ಮೈಸೂರು ನಗರದಲ್ಲಿ ಎಂಬುದು ಹೊರಬಂದಿರುವ ಮತ್ತೊಂದು ಸಂಗತಿ.

ಈ ದುಷ್ಕೃತ್ಯದ ಪ್ರಮುಖ ರೂವಾರಿಯು ಪಶ್ಚಿಮ ಬಂಗಾಳದ ಲಲಿತ್ ಝಾ ಎಂದು ಹೇಳಲಾಗುತ್ತಿದೆ. ಇವರ ಗುಂಪಿನ ಮತ್ತೊಬ್ಬ ಸದಸ್ಯೆ ನೀಲಮ್ ವರ್ಮಾ ಸಕ್ರಿಯ ಆಂದೋಲನ ಜೀವಿ. ಈಕೆ ದೆಹಲಿಯಲ್ಲಿ ಮೋದಿ ಸರಕಾರದ ವಿರುದ್ಧ ನಡೆದಿರುವ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದವಳು. ಈ ಪಿತೂರಿಯಲ್ಲಿ ಭಾಗಿಯಾಗಿರುವ ಆರು ಜನರು ಈಗಾಗಲೇ ಕಠಿಣವಾದ ಯುಎಪಿಎ ಕಾಯಿದೆಯಡಿಯಲ್ಲಿ ಬಂಧಿತರಾಗಿದ್ದಾರೆ.

ಮುಂದಿನ ದಿನಗಳಲ್ಲಿ ಇವರ ಷಡ್ಯಂತ್ರದ ಆಳ-ಅಗಲ ಮತ್ತು ಇದರ ಹಿಂದೆ ಇರುವ ಕಾಣದ ಶಕ್ತಿಗಳ ವಿವರಗಳು ಹೊರಬರುವುದು ನಿಶ್ಚಿತ. ನಾವು ನಿರುದ್ಯೋಗದಿಂದ ಬೇಸತ್ತು ಈ ಅನಿವಾರ್ಯ ಕೆಲಸಕ್ಕೆ ಕೈಹಾಕಿದೆವು ಎಂದು ಇವರೆಲ್ಲ ವಿಷಯಾಂತರ ಮಾಡಲು ಯತ್ನಿಸುತ್ತಿದ್ದಾರೆ. ನೂತನ ಪಾರ್ಲಿಮೆಂಟ್ ಒಳಗಡೆ ಹೋಗಿ ಸದನದೊಳಗೆ ಧುಮುಕಿ ಸ್ಮೋಕ್ ಬಾಂಬ್ ಸಿಡಿಸುವುದು ನಿರುದ್ಯೋಗಿಗಳಿಗೆ ಹೊಳೆಯುವುದಿಲ್ಲ ಇದು ಕೇವಲ ದೇಶವಿರೋಧಿ ಶಕ್ತಿಗಳಿಗೆ ಮಾತ್ರ ಹೊಳೆಯಲು ಸಾಧ್ಯ. ಎಡಪಂಥೀಯ ವಿಚಾರಧಾರೆಯೆಡೆಗೆ ಒಲವಿರುವ ಈ ಆರು ಜನರು ತಾವು ಮಾಡಿರುವ ದೇಶವಿರೋಧಿ ಪಿತೂರಿಗೆ ಭಗತ್‌ಸಿಂಗ್ ಹೆಸರನ್ನು ಬಳಸಿಕೊಂಡಿರುವುದು ದುರ್ದೈವ.

ಸಂಸತ್ತಿನಲ್ಲಿ ನಡೆಸಿದ ದಾಂಧಲೆಗೆ ಮುನ್ನ ಈ ತಂಡ ಸಾಕಷ್ಟು ಸಿದ್ದತೆ ಮಾಡಿಕೊಂಡಿದೆ. ಪಾರ್ಲಿಮೆಂಟ್‌ಗೆ ಹೋಗಲು ಕಾಂಗ್ರೆಸ್ ಅಥವಾ ಇತರ ಪಕ್ಷಗಳವರಿಂದ ಲೋಕಸಭೆ ಕಲಾಪ ವೀಕ್ಷಣೆಯ ಪಾಸ್ ಪಡೆದಿಲ್ಲ. ಮನೋರಂಜನ್ ಮೈಸೂರಿನವನಾದ ಕಾರಣ, ಬಿಜೆಪಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರ ಪರಿಚಯವನ್ನು ಸುಲಭವಾಗಿ ದುರುಪಯೋಗ ಪಡಿಸಿಕೊಂಡು ಪಾಸ್ ಪಡೆದಿದ್ದಾನೆ. ತಮ್ಮ ಕ್ಷೇತ್ರದವನು ಎಂಬ ನಂಬಿಕೆಯ ಮೇಲೆ ಕಚೇರಿಯವರು ಪಾಸ್
ಕೊಟ್ಟಿದ್ದಾರೆ.

ಉದ್ದೇಶಪೂರ್ವಕವಾಗಿ ಡಿಸೆಂಬರ್ ೧೩ರ ದಿನಾಂಕವನ್ನು ತಮ್ಮ ದುಷ್ಟ ಯೋಜನೆ ಕಾರ್ಯಗತಗೊಳಿಸಲು ಇವರು ಆಯ್ಕೆ ಮಾಡಿಕೊಳ್ಳುತ್ತಾರೆ. ೨೨ ವರ್ಷದ ಕೆಳಗೆ ಭಯೋತ್ಪಾದಕರಿಂದ ಪಾರ್ಲಿಮೆಂಟ್ ಮೇಲೆ ನಡೆದಿದ್ದ ದಾಳಿಯ ರೀತಿ ತಾವು ಮಾಡುವ ಕೃತ್ಯವು ಸದಾ ನೆನಪಿನಲ್ಲಿ ಉಳಿಯಬೇಕು ಎಂದು ಅದೇ
ದಿನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ತಂಡದಲ್ಲಿ ಒಂದೇ ವರ್ಗಕ್ಕೆ ಸೇರಿದವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇತರ ಸಮುದಾಯವನ್ನು ಆಯ್ಕೆ ಮಾಡಿಕೊಂಡರೆ ತಮ್ಮ ಅಜೆಂಡಾ ಗುರಿಯು ದಾರಿ ತಪ್ಪಿ ತಮ್ಮ ಉದ್ದೇಶವು ವಿಫಲವಾಗುತ್ತದೆ ಎಂದು ಇವರು ಚೆನ್ನಾಗಿ ಅರಿತಿದ್ದರು. ಮೋದಿ ಸರಕಾರಕ್ಕೆ ಮಸಿ ಬಳಿಯುವ, ಅಂತಾರಾಷ್ಟ್ರೀಯ ಸ್ತರದಲ್ಲಿ ಭಾರತಕ್ಕೆ ಹಾಗೂ ಮೋದಿಯವರಿಗೆ ಮುಜುಗರ ಉಂಟುಮಾಡುವ ದುರುದ್ದೇಶವು ಇವರ ಕಾರ್ಯಾಚರಣೆಯ ಭಾಗವಾಗಿತ್ತೆಂದರೆ ತಪ್ಪಾಗುವುದಿಲ್ಲ.

ಕಳೆದ ಹಲವಾರು ವರ್ಷಗಳಿಂದ ಮೋದಿ ಸರಕಾರದ ವಿರುದ್ಧ ನಡೆಸಿದ ಅನೇಕ ಅಪಪ್ರಚಾರಗಳು ಕೈಗೂಡಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅನೇಕ ವಿಷಯಗಳು
ತಿರುಗುಬಾಣವಾಗಿ ಮೋದಿಯವರ ಜನಪ್ರಿಯತೆಯು ಮತ್ತಷ್ಟು ಹೆಚ್ಚಾಯಿತು. ಕಳೆದ ಹತ್ತು ವರ್ಷದಿಂದ ನರೇಂದ್ರ ಮೋದಿಯವರ ವಿರುದ್ಧ ನಿರಂತರವಾಗಿ ದ್ವೇಷ ಹರಡುತ್ತಿರುವ ಹಾಗೂ ವಿಷಕಾರುತ್ತಿರುವ ವರ್ಗದವರು ಮೋದಿಯವರನ್ನು ಸಣ್ಣವರನ್ನಾಗಿ ಮಾಡಲು ಎಂಥ ಹುಚ್ಚಾಟಕ್ಕೂ ಸಿದ್ಧ ಎಂಬುದನ್ನು ದೇಶಕ್ಕೆ
ಮತ್ತೊಮ್ಮೆ ತೋರಿಸಿದ್ದಾರೆ.

ವಾಸ್ತವವಾಗಿ ಸಂಸತ್ತಿನ ಮೇಲೆ ನಡೆದ ದಾಳಿಯು ರಾಜಕೀಯ ದಾಳವಾಗಬಾರದಿತ್ತು. ದೇಶದ ಪ್ರಜಾಪ್ರಭುತ್ವಕ್ಕೆ ಒಡ್ಡಿದ ಸವಾಲು ಎಂದು ಇದನ್ನು ವಿರೋಧ ಪಕ್ಷಗಳು ಪರಿಗಣಿಸಬೇಕಿತ್ತು. ಆದರೆ ೨೦೧೪ರಿಂದ ದೇಶದ ಹಿತವನ್ನು ಹಿನ್ನೆಲೆಗೆ ಸರಿಸಿ ಮೋದಿಯವರ ಭರ್ತ್ಸನೆಯಲ್ಲಿ ಮತ್ತು ಅವರ ವರ್ಚಸ್ಸನ್ನು ಕುಗ್ಗಿಸಲು ಪ್ರತಿಯೊಂದು ವಿಷಯವೂ ರಾಜಕೀಯ ಅಜೆಂಡಾದ ಭಾಗವಾದ ಹಾಗೆ ಈ ಪ್ರಕರಣವು ಅದರಿಂದ ಹೊರತಾಗಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಽಯವರು
ಪಾರ್ಲಿಮೆಂಟಿನ ದಾಳಿಯು ನಿರುದ್ಯೋಗ ಮತ್ತು ಬೆಲೆಯೇರಿಕೆಯ ಕಾರಣಕ್ಕೆ ನಡೆದಿದ್ದು ಎಂದು ಹೇಳಿ ಈ ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು ಆಘಾತಕಾರಿ ಹಾಗೂ ಬೇಜವಾಬ್ದಾರಿ ನಿಲುವಾಗಿದೆ. ಸ್ವತಃ ತಂದೆ ಮತ್ತು ಅಜ್ಜಿಯು ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವುದು ಅವರು ಮರೆತಂತೆ
ಕಾಣುತ್ತದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ರಾಹುಲ್‌ರವರಿಗೆ ಪ್ರಬುದ್ಧತೆ  ಲ್ಲ ಎಂದು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ರಾಹುಲ್ ಸ್ವತಃ ದೃಢಪಡಿಸಿದ್ದಾರಷ್ಟೇ.

ಪ್ರತಾಪ್ ಸಿಂಹರವರು ಪಾಸ್ ನೀಡಿದರು ಎಂದು ಅವರ ವಿರುದ್ಧ ಪ್ರತಿಭಟನೆ ಕೈಗೊಂಡ, ಅವರಿಗೆ ಮುಸ್ಲಿಂ ವೇಷ ಹಾಕಿದ ಫ್ಲೆಕ್ಸ್ ಹಾಕಿ ದೇಶದ್ರೋಹಿ ಎಂದು ಪಟ್ಟಕಟ್ಟಿದ ಕಾಂಗ್ರೆಸ್ ಮುಖಂಡರ ವರ್ತನೆಯು ರಾಜಕೀಯ ಘನತೆಯನ್ನು ಮೀರಿತ್ತು. ರಾಜಕೀಯವಾಗಿ ಅವರನ್ನು ಎದುರಿಸಲು ಅಸಮರ್ಥವಾಗಿರುವ
ಕಾಂಗ್ರೆಸ್, ಪಾಸ್ ಕೊಟ್ಟ ವಿಷಯವನ್ನು ಮುಂದಿಟ್ಟುಕೊಂಡು ಅವರ ಮೇಲೆ ನಡೆಸುತ್ತಿರುವ ರಾಜಕೀಯ ಪ್ರೇರಿತ ದಾಳಿಯು, ತನ್ನ ಬೇಳೆ ಬೇಯಿಸಿಕೊಳ್ಳಲು ಅದು ಮಾಡಿದ ವ್ಯರ್ಥ ಪ್ರಯತ್ನವಾಗಿದೆ. ಮೌವಾ ಮೋಯಿತ್ರ ರವರು ಹೊರಗಿನವರಿಗೆ ಪಾಸ್‌ವರ್ಡ್ ಕೊಟ್ಟ ಕಾರಣಕ್ಕೆ ಅವರ ಸದಸ್ಯತ್ವವನ್ನು ರದ್ದು ಮಾಡಲಾಯಿತು.

ಆದರೆ ಪಾಸ್ ಕೊಟ್ಟ ಪ್ರತಾಪ್ ಸಿಂಹರವರ ಮೇಲೆ ಕ್ರಮ ಏಕಿಲ್ಲ ಎಂದು ವಿರೋಧ ಪಕ್ಷಗಳು ತರ್ಕರಹಿತ ವಾದ ಮಾಡುತ್ತಿವೆ. ಪ್ರತಿಯೊಬ್ಬ ಸಂಸದ ತನ್ನ ಕ್ಷೇತ್ರದವರಿಗೆ ಪಾಸ್ ನೀಡುತ್ತಾರೆ. ಹಿಂದೆಯೂ ನಡೆದ ಭದ್ರತಾ ಲೋಪದ ವೇಳೆ ಕಾಂಗ್ರೆಸ್ ಸದಸ್ಯರೇ ಪಾಸ್ ನೀಡಿದ್ದರು. ಹಾಗೆಂದು ಅವರ ವಿರುದ್ಧ ಕ್ರಮ ಜರುಗಿಸಲಿಲ್ಲ. ಪಾಸ್ ಕೊಡುವುದಕ್ಕೂ, ಪಾಸ್‌ವರ್ಡ್ ಕೊಡುವುದಕ್ಕೂ ವ್ಯತ್ಯಾಸ ತಿಳಿಯದಷ್ಟು ಅಮಾಯಕತನವೇನೂ ಇವರಿಗಿಲ್ಲ.

ಪ್ರತಾಪ್ ಸಿಂಹ ಒಬ್ಬರು ಅಪ್ಪಟ್ಟ ರಾಷ್ಟ್ರೀಯವಾದಿ. ಅವರ ವಿಶ್ವಾಸ ಗಳಿಸಿ ಪಾಸ್ ಪಡೆದವನು ಅದನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಸಂಸದರು
ಪಾಸ್ ಕೊಟ್ಟ ಕೂಡಲೇ ಸಂಸತ್ತು ಪ್ರವೇಶಿಸಲು ಸಾಧ್ಯವಿಲ್ಲ. ಮೂರು ನಾಲ್ಕು ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ. ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಪ್ರತಾಪ ಸಿಂಹರನ್ನು ಹೊಣೆ ಮಾಡಲಾಗದು. ಈ ಹಿಂದೆಯೂ ಅನೇಕ ಬಾರಿ ಪಾರ್ಲಿಮಂಟಿನ ಭದ್ರತೆಯಲ್ಲಿ ಲೋಪವಾಗಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ. ಸಂದರ್ಶಕರ ಗ್ಯಾಲರಿಯಿಂದ ಧುಮುಕಿ ಪ್ರತಿಭಟನೆ ಮಾಡಿರುವುದು ಇದು ಮೊದಲ ಬಾರಿಯೇನೂ ಅಲ್ಲ. ೧೯೯೪ರಲ್ಲಿ ಪ್ರೇಮ್‌ಪಾಲ್ ಸಿಂಗ್
ಸಾಮ್ರಾಟ್ ಎಂಬುವನು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಧುಮುಕಿ ಘೋಷಣೆ ಕೂಗಿದ್ದ.

೧೯೮೩ರಲ್ಲಿ ಉತ್ತರ ಪ್ರದೇಶದ ಸಂದರ್ಶಕನೊಬ್ಬ ಘೋಷಣೆ ಕೂಗಿ ಚಪ್ಪಲಿಯನ್ನು ಸದನದೊಳಗೆ ಎಸೆದಿದ್ದ. ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಮಸೂದೆ ಮಂಡಿಸಿದಾಗ ಕಾಂಗ್ರೆಸ್‌ನ ವಿಜಯವಾಡ ಎಂಪಿ ಲಗಾಡಪತಿ ರಾಜಗೋಪಾಲ್ ಪೆಪ್ಪರ್ ಸ್ಪ್ರೇಯನ್ನು ಸದನದೊಳಗೆ ತೂರಿ, ಮೂವರು ಸದಸ್ಯರು ಆಸ್ಪತ್ರೆ ಸೇರುವಂತೆ ಮಾಡಿದ್ದರು. ಕರ್ನಾಟಕ ವಿಧಾನಸಭೆಯ ಹೊಸ ಸರಕಾರದ ಮೊದಲ ಅಧಿವೇಶನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನು ಸದನದೊಳಗೆ ಪ್ರವೇಶಿಸಿ
ಕಲಾಪದಲ್ಲಿ ಭಾಗಿಯಾಗಿದ್ದ. ಸದನದೊಳಗೆ ಭಿತ್ತಿಪತ್ರ ತರುವುದು ನಿಷಿದ್ಧ ಎಂದು ತಿಳಿದಿದ್ದರೂ ಭಿತ್ತಿಪತ್ರ ತಂದ ಸದಸ್ಯರನ್ನು ಸಭಾಧ್ಯಕ್ಷರು ಅಮಾನತು ಮಾಡುತ್ತಾರೆ. ಅವರ ಅಮಾನತಿಗೂ ಭದ್ರತಾ ವೈ-ಲ್ಯದ ವಿಷಯಕ್ಕೂ ಸಂಬಂಧವಿಲ್ಲ ಎಂದು ಸಭಾಧ್ಯಕ್ಷ ಓಂ ಬಿರ್ಲಾರವರ ಸ್ಪಷ್ಟನೆ ಬಂದಿದೆ.

ದೇಶದಲ್ಲಿ ರಾಷ್ಟ್ರೀಯತೆಯು ಬಲವಾಗಿ ನೆಲೆಯೂರುತ್ತಿರುವ ಸಂಗತಿಯಿಂದ ವಿಚಲಿತರಾಗಿರುವ ಎಡಪಂಥೀಯ ವಿಚಾರವಾದಿಗಳು ಕಂಗೆಟ್ಟು ಈ ದಾಳಿಯನ್ನು ರೂಪಿಸಿದ್ದಾರೆ ಎನ್ನುವ ಸುದ್ದಿಯನ್ನು ತಳ್ಳಿಹಾಕಲಾಗದು. ವಾಸ್ತವವಾಗಿ ಲೋಕಸಭೆಯಲ್ಲಿ ನಡೆದ ಅಟ್ಟಹಾಸವು ಮೋದಿ ಸರಕಾರದ ವಿರುದ್ದದ ಟೂಲ್‌ಕಿಟ್‌ನ ಭಾಗವಾಗಿದೆ. ಹಿಂದೆ ನಡೆದ ರೈತ ಚಳವಳಿ, ಸಿಎಎ ವಿರುದ್ಧದ ಹೋರಾಟಗಳು ರಾಜಕೀಯ ಲಾಭ ನೀಡಲು ಸೋತವು. ಈಗ ಪಾರ್ಲಿಮೆಂಟಿನ ಮೇಲೆ ದಾಳಿ
ಮಾಡಿ, ಸರಕಾರಕ್ಕೆ ಕೆಟ್ಟ ಹೆಸರು ತರಲು ನಡೆಸಿದ ಮತ್ತೊಂದು ವಿಫಲ ಯತ್ನ ಇದಾಗಿದೆ. ಈ ಪಿತೂರಿಯ ಹಿಂದೆ ಬಹುದೊಡ್ಡ ಜಾಲವಿದೆ, ಪ್ರತಿಯೊಂದು ಹೆಜ್ಜೆಯನ್ನು ನಿಖರವಾಗಿ ಯೋಜಿಸಿ ತಮ್ಮ ಕಾರ್ಯ ಸಾಽಸಿರುವ ಇವರಿಗೆ ಹಿಂಬದಿಯಲ್ಲಿ ಬೆಂಬಲಿಸಿರುವವರನ್ನು ಪತ್ತೆ ಮಾಡುವುದು ಈಗ ತನಿಖಾ ಸಂಸ್ಥೆಗಳ
ಮುಂದಿರುವ ಸವಾಲು.

ಪ್ರಧಾನಿ ಮೋದಿಯವರು ‘ಇದೊಂದು ಗಂಭೀರವಾದ ಪ್ರಕರಣ, ಇದರ ಬಗ್ಗೆ ಚರ್ಚೆ ಮಾಡುವುದಕ್ಕಿಂತ ವಿಸ್ತೃತವಾದ ತನಿಖೆಯಾಗಬೇಕು’ ಎಂದು ಪ್ರತಿಕ್ರಿಯಿಸಿ ದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಚಿಕಿತ್ಸಕ ಕ್ರಮಗಳನ್ನು ಕೈಗೊಂಡು ಇಡೀ ವ್ಯವಸ್ಥೆಯನ್ನು ದೋಷರಹಿತವಾಗಿ ಮಾಡಲು ಯೋಗ್ಯ ಕ್ರಮ ಖಂಡಿತವಾಗಿ ಜರುಗಲಿದೆ. ದೇಶವು ಸುರಕ್ಷಿತ ಕೈಯಲ್ಲಿ ಇರುವುದರಿಂದ ಇಂಥ ಸವಾಲುಗಳನ್ನು ಎದುರಿಸಲು ಸಶಕ್ತವಾಗಿದೆ. ಇಂಥ ಪ್ರಕರಣಗಳು ಸರಕಾರವನ್ನು ವಿಚಲಿತ ಗೊಳಿಸಲು ಸಾಧ್ಯವಿಲ್ಲ; ಬದಲಿಗೆ ಸರಕಾರವನ್ನು ಮತ್ತಷ್ಟು ಗಟ್ಟಿ ಮಾಡುವುದರಲ್ಲಿ ಯಾವ ಸಂದೇಹವಿಲ್ಲ.

(ಲೇಖಕರು ಬಿಜೆಪಿಯ ಮಾಜಿ
ಮಾಧ್ಯಮ ಸಂಚಾಲಕರು)