Wednesday, 11th December 2024

ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್‌ನ ಉಪಯೋಗ

ವೈದ್ಯ ವೈವಿಧ್ಯ

drhsmohan@gmail.com

ಕಣ್ಣಿನ ಪೊರೆ ಶಸ್ತ್ರಕ್ರಿಯೆಯಲ್ಲಿ ಫೆಮಟೋಸೆಕೆಂಡ್ ಲೇಸರ್ ಅನ್ನು ಉಪಯೋಗಿಸಲಾಗುತ್ತದೆ. ಸಹಜ ಶಸ್ತ್ರಕ್ರಿಯೆಯಿಂದ ಕಣ್ಣಿನ ಪೊರೆ ಶಸಕ್ರಿಯೆ ಕೈಗೊಂಡ ಎಷ್ಟೋ ತಿಂಗಳು, ವರ್ಷಗಳ ನಂತರ ಉಂಟಾಗಬಹುದಾದ ಸೆಕೆಂಡರಿ ಪೊರೆಯನ್ನು ಚಿಕಿತ್ಸೆ ಮಾಡಲು ಎನ್ ಡಿ ಯಾಗ್ ಲೇಸರ್ ಉಪಯೋಗಿಸಲಾಗುತ್ತದೆ.

ಕಣ್ಣಿನ ಚಿಕಿತ್ಸೆಯಲ್ಲಿ ಹಲವು ಬಗೆಯ ಲೇಸರ್‌ಗಳು ಉಪಯೋಗವಾಗುತ್ತವೆ.LASER ಎಂದರೆ Light
Amplification by Stimulated Emission of Radiation. ಅಂದರೆ, ಪ್ರಚೋದಿತ ವಿಕಿರಣತೆಯ ಬಿಡುಗಡೆಯಿಂದ ಬೆಳಕಿನ ಹೆಚ್ಚಳ ಎಂದರ್ಥ. ಸ್ಥೂಲವಾಗಿ ಹೇಳುವುದಾದರೆ ಅದು ಭಾರಿ ಪ್ರಮಾಣದ ಶಕ್ತಿಯನ್ನು ಒಳಗೊಂಡ ಬೆಳಕಿನ ಮೂಲ (ಆಕರ). ಇದು ಕಣ್ಣಿನ ಚಿಕಿತ್ಸೆಯಲ್ಲಿ ಸುಮಾರು ೫೦ ವರ್ಷಗಳಿಗಿಂತ ಹೆಚ್ಚು ಸಮಯದಿಂದ ಬಳಕೆಯಲ್ಲಿದೆ. ವೈದ್ಯಕೀಯವಾಗಿ ಮೊಟ್ಟಮೊದಲ ಲೇಸರ್ ಉಪಯೋಗವಾಗಿದ್ದು ಕಣ್ಣಿನ ಅಕ್ಷಿಪಟಲದ ಕಾಯಿಲೆಗಳ ಚಿಕಿತ್ಸೆಯಲ್ಲಿ. ಆದರೆ ಈಗ ಪ್ರಸ್ತುತ ಹಲವು ವಿಧದ ಲೇಸರ್‌ಗಳು ಕಣ್ಣಿನ ಬೇರೆ ಬೇರೆ ರೀತಿಯ ಚಿಕಿತ್ಸೆಯಲ್ಲಿ ಉಪಯೋಗವಾಗುತ್ತಿವೆ.

ಪ್ರಬಲವಾದ ಬೆಳಕಿನ ಕಿರಣಗಳು ಕಣ್ಣನ್ನು ಹಾನಿಗೊಳಿಸುತ್ತವೆ ಎಂಬ ಅಂಶ ಬಹಳ ಹಿಂದಿನಿಂದಲೂ ತಿಳಿದಿತ್ತು. ಹಾಗಾಗಿಯೇ ಸೊಕ್ರೇಟ್ಸ್ ನಂಥ ವಿಜ್ಞಾನಿ ‘ನೇರವಾಗಿ, ಬರಿಗಣ್ಣಿನಿಂದ ಸೂರ್ಯಗ್ರಹಣವನ್ನು ನೋಡಬಾರದು’ ಎಂದು ತಿಳಿಸಿದ್ದ. ಮೆಯರ್-ಶ್ವಿಕೆರಾಥ್ ಎನ್ನುವವರು ಬೆಳಕನ್ನು ಮೊಟ್ಟಮೊದಲು ಕಣ್ಣಿನ ಚಿಕಿತ್ಸೆಗೆ ಬಳಸಿದರು. ಕಣ್ಣಿನ ಅಕ್ಷಿಪಟಲದಲ್ಲಿನ ಮೆಲನೋಮ ಚಿಕಿತ್ಸೆಗೆ ಇವರು ಅಕ್ಷಿಪಟಲದ ಮೇಲೆ ಬೆಳಕನ್ನು ಕ್ರೋಡೀಕರಿಸಿದರು. ೧೯೪೦ರ ದಶಕದಲ್ಲಿ ಮಾರನ್ ಸಲಾಸ್ ಎನ್ನುವವರು ಕಣ್ಣಿನ ಅಕ್ಷಿಪಟಲದಲ್ಲಿ ಪೋಟೋಕೊಯಾಗುಲೇಶನ್ ಚಿಕಿತ್ಸೆಯನ್ನು ಕೈಗೊಂಡರು. ಆದರೆ ಈ ತರಹದ ಚಿಕಿತ್ಸೆಗೆ ಸೂರ್ಯನ ಬೆಳಕನ್ನು ಉಪಯೋಗಿಸಲು ಇರುವ ಮಿತಿಗಳನ್ನು ಇವರೆಲ್ಲಾ ಗಮನಿಸಿದರು.

ಇದರಿಂದ ಸೂರ್ಯನ ಬೆಳಕು ಅಲ್ಲದ ಬೆಳಕುಗಳಾದ ಕಾರ್ಬನ್ ಆರ್ಕ್, ಕ್ಸಿನಾನ್ ಆರ್ಕ್ ಪೋಟೋಕೊಯಾಗುಲೇಶನ್- ಇವು ಸ್ವಲ್ಪಮಟ್ಟಿಗೆ ಪ್ರಚಲಿತಕ್ಕೆ ಬಂದವು. ಇವೆಲ್ಲವುಗಳ ಉಪಯೋಗದ ನಂತರ ಇವುಗಳಿಗಿಂತ ಲೇಸರ್ ಹೆಚ್ಚು ಉತ್ತಮ ಎಂಬ ಭಾವನೆ ಬಂದು ಅದು ಬೆಳವಣಿಗೆ ಹೊಂದುತ್ತಾ ಬಂದಿತು. ಇದು
ಶಾಖದ ರೇಡಿಯೇಶನ್ ಮತ್ತು ಬೆಳಕಿನ ರೇಡಿಯೇಶನ್‌ಗಿಂತ ಉತ್ತಮ ಎಂದು ತಿಳಿದು ಬಂದಿತು. ಇದಕ್ಕೆ ಮುಖ್ಯ ಕಾರಣ ಲೇಸರ್ ನಲ್ಲಿಯ ಫೋಟಾನ್‌ಗಳು ಕೋಹರೆಂಟ್ ಅಂದರೆ ಒಂದೇ ರೀತಿಯ ಫೇಸ್‌ನಲ್ಲಿವೆ. ಹಾಗೆಯೇ ವೇವ್‌ಲೆಂಗ್ತ್ ಬಹಳ ನ್ಯಾರೋ ರೇಂಜ್ ಹೊಂದಿದೆ. ಇದರಲ್ಲಿನ ಸ್ಪೇಶಿಯಲ್ ಮತ್ತು ಟೆಂಪೊರಲ್‌ನ ಕೊಹರೆನ್ಸ್ ಗಳು ನಿರ್ದಿಷ್ಟ ಅಂಗಾಂಶಕ್ಕೇ ಗುರಿಯಾಗಿ ಚಿಕಿತ್ಸೆ ಮಾಡುವುದು ಸುಲಭ ಮಾಡುತ್ತದೆ.

ಲೇಸರ್‌ನಿಂದ ಉಂಟಾಗುವ ಅಂಗಾಂಶದ ಪ್ರತಿಕ್ರಿಯೆಗಳು:
೧. ಫೋಟೋಥರ್ಮಲ್- ಇದರಲ್ಲಿ ಫೋಟೋಕೊಯಾಗುಲೇಶನ್ ಮತ್ತು ಫೋಟೋವೇಪರೈಸೇಶನ್ ಹೀಗೆ ೨ ರೀತಿಯಿವೆ.

ಫೋಟೋಕೊಯಾಗುಲೇಶನ್: ಇದರಲ್ಲಿ ಯಾವ ಅಂಗಾಂಶಕ್ಕೆ ಗುರಿ ಇಡಲಾಗುತ್ತದೆಯೋ ಆ ಅಂಗಾಂಶ ಲೇಸರ್ ಬೀಮ್ ಅನ್ನು ಹೀರುತ್ತದೆ. ಇದರ ಶಾಖದ ಪರಿಣಾಮವಾಗಿ ಹೆಚ್ಚು ಪ್ರೋಟೀನ್‌ಗಳು ಡೀನೇಚರ್‌ಗೊಳ್ಳುತ್ತವೆ. ಉದಾ: ಆರ್ಗಾನ್, ಕ್ರಿಪ್ಟಾನ್, ಡಯೋಡ್ (೮೧೦) ಮತ್ತು ಫ್ರೀಕ್ವೆನ್ಸಿ ದುಪ್ಪಟ್ಟು ಮಾಡಿದ
ಎನ್ ಡಿ ಯಾಗ್ ಲೇಸರ್. ಕಣ್ಣಿನ ಚಿಕಿತ್ಸೆಯಲ್ಲಿ ಹೆಚ್ಚಾಗಿ ಈ ಎಲ್ಲಾ ಲೇಸರ್‌ಗಳು ಉಪಯೋಗವಾಗುತ್ತವೆ.

ಫೋಟೋವೇಪರೈಸೇಶನ್: ಇದರಲ್ಲಿ ಜೀವಕೋಶದ ಒಳಗಿನ ಮತ್ತು ಹೊರಗಿನ ನೀರಿನ ಅಂಶದ ವೇಪರೈಸೇಶನ್ ಆಗುತ್ತದೆ. ಇದು ಶಸ್ತ್ರಕ್ರಿಯೆಯಲ್ಲಿ ನಿರ್ದಿಷ್ಟವಾದ ಉಪಯೋಗವನ್ನು ಹೊಂದಿದೆ. ಏಕೆಂದರೆ ಚಿಕಿತ್ಸೆ ಮಾಡುವ ಸ್ಥಳದ ಆಚೀಚಿನ ರಕ್ತನಾಳಗಳು ಸಹಿತ ಚಿಕಿತ್ಸೆಗೆ ಒಳಪಡುತ್ತವೆ. ಧನಾತ್ಮಕ ಅಂಶ ಎಂದರೆ ರಕ್ತವು ಸೋರಿಕೆಯಾಗುವುದಿಲ್ಲ. ಉದಾ: ಇನ್ ಫ್ರಾರೆಡ್ ಒಳಗೊಂಡ ಕಾರ್ಬನ್ ಡಯಾಕ್ಸೈಡ್ ಲೇಸರ್. ಫೋಟೋ ಕೆಮಿಕಲ್ ವಿಧಾನದಲ್ಲಿ ಎರಡು ಬಗೆಗಳಿವೆ. ಅವೆಂದರೆ, ಫೋಟೋ ರೇಡಿಯೇಶನ್ ಮತ್ತು ಫೋಟೋ ಅಬ್ಲೇಶನ್.

ಫೋಟೋ ರೇಡಿಯೇಶನ್: ಇದರಲ್ಲಿ ಫೋಟೋ ಸೆನ್ಸಿಟೈಸಿಂಗ್ ವಸ್ತುವನ್ನು ರಕ್ತನಾಳಕ್ಕೆ ಇಂಜೆಕ್ಷನ್ ಮೂಲಕ ಚುಚ್ಚಲಾಗುತ್ತದೆ. ನಂತರ ನಿರ್ದಿಷ್ಟ ಅಂಗಾಂಶ ವನ್ನು ಲೇಸರ್ ಕಿರಣಕ್ಕೆ ಒಳಪಡಿಸಲಾಗುತ್ತದೆ. ಇದರಿಂದ ಸೈಟೋಟಾಕ್ಸಿಕ್ ಫ್ರೀ ರಾಡಿಕಲ್ಸ್ ಉತ್ಪನ್ನವಾಗುತ್ತವೆ. ಹಾಗಾಗಿ ಅಂತಿಮವಾಗಿ ಫೋಟೋ ಡೈನಾಮಿಕ್ ಥೆರಪಿಯ ಮೂಲಕ ಚಿಕಿತ್ಸೆ ಮಾಡಿದ ಹಾಗಾಗುತ್ತದೆ.

ಫೋಟೋಅಬ್ಲೇಶನ್: ಇಲ್ಲಿ ಬೆಳಕು ಅಲ್ಟ್ರಾವ ಯಲೆಟ್ ವೇವ್ ಲೆಂಗ್ತ್‌ನಲ್ಲಿ (೩೫೦ ಎನ್‌ಎಂಗಿಂತ ಕಮ್ಮಿ) ಉಪಯೋಗವಾಗುತ್ತದೆ. ಇದರ ಪರಿಣಾಮವಾಗಿ ಲಾಂಗ್ ಬೈಟ್ ಟಿಷ್ಯೂ ಪಾಲಿಮರ್ ಗಳು ಸಣ್ಣ ಸಣ್ಣ ತುಣುಕುಗಳಾಗಿ ಪರಿವರ್ತನೆ ಹೊಂದುತ್ತವೆ. ಉದಾ: ಎಕ್ಸೈಮರ್ ಲೇಸರ್.

ಫೋಟೋ ಡಿಸ್‌ರಪ್ಶನ್: ಇದರಲ್ಲಿ ಯಾವ ಅಂಗಾಂಶಕ್ಕೆ ಲೇಸರ್ ಕೊಡಲಾಗುತ್ತದೆಯೋ ಅದರಲ್ಲಿನ ಎಲೆಕ್ಟ್ರಾನ್‌ಗಳು ಬೇರೆ ಬೇರೆಯಾಗುತ್ತವೆ. ಇದು ಒಂದು ರೀತಿಯ ಶಾಕ್ ವೇವ್ ಉಂಟುಮಾಡುತ್ತದೆ. ಉದಾ: ಎನ್ ಡಿ ಯಾಗ್ ಲೇಸರ್ ಕಣ್ಣಿನ ಚಿಕಿತ್ಸೆಯಲ್ಲಿ ಲೇಸರ್‌ಗಳು: ಕಾಯಿಲೆ ಪತ್ತೆಹಚ್ಚಲು ಹಾಗೂ ಕಣ್ಣಿನ ಹಲವು
ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಹೀಗೆ ಎರಡು ವಿಧದಲ್ಲಿ ಕಣ್ಣಿನಲ್ಲಿ ಲೇಸರ್‌ಗಳನ್ನು ಉಪಯೋಗಿಸುತ್ತೇವೆ.

ಕಾಯಿಲೆ ಪತ್ತೆಹಚ್ಚಲು: ಕಣ್ಣಿನ ದೃಷ್ಟಿನರ ಆಪ್ಟಿಕ್ ನರದ ಎವಾಲ್ಯುಯೇಶನ್‌ಗೆ ಕಾನ್ ಫೋಕಲ್ ಸ್ಕ್ಯಾನಿಂಗ್ ಲೇಸರ್ ಆಫ್ತಲ್ಮೋಸ್ಕೋಪ್ ಉಪಯೋಗಿಸ ಲಾಗುತ್ತದೆ. ಹಾಗೆಯೇ ಆಪ್ಟಿಕಲ್ ಕೊಹರೆನ್ಸ್ ಟೋಮೋಗ್ರಫಿ (ಓ ಸಿ ಟಿ)- ಇದನ್ನು ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾ ಹಾಗೂ ಅಕ್ಷಿಪಟಲದ ಹಲವು ಕಾಯಿಲೆಗಳನ್ನು ಪತ್ತೆಹಚ್ಚಲು ಉಪಯೋಗಿಸಲಾಗುತ್ತದೆ.

ಚಿಕಿತ್ಸೆಯಲ್ಲಿ ಲೇಸರ್‌ನ ಉಪಯೋಗ: ೧. ದೃಷ್ಟಿದೋಷ ಇದ್ದಾಗ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಇಲ್ಲದೆ ದೃಷ್ಟಿ ಸರಿಯಾಗಿ ಕಾಣಲು ಉಪಯೋಗಿಸುವ ಲೇಸರ್‌ಗಳು ಈ ವಿಧದ್ದು. ಉದಾ: ಲ್ಯಾಸಿಕ್, ಎಪಿಲ್ಯಾಸಿಕ್, ಲೇಸಕ್, ಪಿಆರ್‌ಕೆ ಮತ್ತಿತರ ಚಿಕಿತ್ಸೆಗಳು.

೨. ಗ್ಲೊಕೊಮಾ: ಇದರಲ್ಲಿ ಯಾಗ್ ಲೇಸರ್ ಉಪಯೋಗಿಸಿ ಲೇಸರ್ ಐರಿಡಾಟಮಿ, ಐರಿಡೊ ಪ್ಲಾಸ್ಟಿ, ಪ್ಯುಪಿಲೋಪ್ಲಾಸ್ಟಿ, ಟ್ರಬಕ್ಯುಲೋಪ್ಲಾಸ್ಟಿ- ಈ ತರಹದ ಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತದೆ.

೩. ಕಣ್ಣಿನ ಪೊರೆ ಶಸ್ತ್ರಕ್ರಿಯೆಯಲ್ಲಿ ಫೆಮಟೋ ಸೆಕೆಂಡ್ ಲೇಸರ್ ಅನ್ನು ಉಪಯೋಗಿಸಲಾಗುತ್ತದೆ. ಸಹಜ ಶಸ್ತ್ರ ಕ್ರಿಯೆಯಿಂದ ಕಣ್ಣಿನ ಪೊರೆ ಶಸ್ತ್ರಕ್ರಿಯೆ ಕೈಗೊಂಡ ಎಷ್ಟೋ ತಿಂಗಳು, ವರ್ಷಗಳ ನಂತರ ಉಂಟಾಗಬಹುದಾದ ಸೆಕೆಂಡರಿ ಪೊರೆಯನ್ನು ಚಿಕಿತ್ಸೆ ಮಾಡಲು ಎನ್ ಡಿ ಯಾಗ್ ಲೇಸರ್ ಉಪಯೋಗಿಸಲಾಗುತ್ತದೆ.

೪. ಕಣ್ಣಿನ ಹಿಂಭಾಗದ ಕಾಯಿಲೆಗಳು: ಮುಖ್ಯವಾಗಿ ಡಯಾಬಿಟಿಸ್‌ನಿಂದ ಕಣ್ಣಿನಲ್ಲಿ ಉಂಟಾಗುವ ರೆಟನೋಪತಿ ಚಿಕಿತ್ಸೆಯಲ್ಲಿ ಆರ್ಗಾನ್ ಲೇಸರ್ ಮತ್ತು ಡಯೋಡ್ ಲೇಸರ್ ಗಳನ್ನು ಉಪಯೋಗಿಸಲಾಗುತ್ತದೆ. ಈ ಚಿಕಿತ್ಸೆಯ ಮುಖ್ಯ ಉದ್ದೇಶ ಎಂದರೆ ಅಕ್ಷಿಪಟಲದ ರೆಟಿನೋಪತಿಗೆ ಒಳಗಾದ ಅಕ್ಷಿಪಟಲದಲ್ಲಿ ಕಾಯಿಲೆಯಿಂದ ಹಾಳಾದ ಅಕ್ಷಿಪಟಲವನ್ನು ಲೇಸರ್ ಹಾಯಿಸಿ ಸುಟ್ಟು ಆರೋಗ್ಯವಂತ ಅಕ್ಷಿಪಟಲಕ್ಕೆ ಹೆಚ್ಚಿನ ಆಮ್ಲಜನಕ ದೊರೆಯುವಂತೆ ಮಾಡುವುದು. ಹಾಗೆಯೇ ಹೊಸ ರಕ್ತನಾಳಗಳು ಹುಟ್ಟಿಕೊಳ್ಳಲು ಕಾರಣವಾ ಗುವ ಅಂಶಗಳನ್ನು ದೂರೀಕರಿಸುವುದು. ಅಕ್ಷಿ ಪಟಲದ ಕಾಯಿಲೆಗಳಾದ ಅಕ್ಷಿಪಟಲದ ಅಭಿದ
ಮನಿಯ ಮುಚ್ಚುವಿಕೆ, ಸಿಕಲ್ ಸೆಲ್ ರೆಟಿನೋಪತಿ ಈ ರೀತಿಯ ಕಾಯಿಲೆಗಳಲ್ಲೂ ಉಪಯೋಗವಾಗುತ್ತದೆ.

೫. ಅಕ್ಷಿಪಟಲದ ಬ್ರೇಕ್‌ಗಳು ಮತ್ತು ಅಕ್ಷಿಪಟಲದ ಸರಿದುಕೊಳ್ಳುವಿಕೆ (Retinal detachment) ಈ ತರಹದ ಕಾಯಿಲೆಗಳಲ್ಲೂ ಈ ಆರ್ಗಾನ್, ಕ್ರಿಪ್ಟಾನ್ ಮತ್ತು ಡಯೋಡ್ ಲೇಸರ್‌ಗಳು ಉಪಯೋಗವಾಗುತ್ತವೆ. ೬. ಕೊರಾಯಿಡ್ ಕಾಯಿಲೆಗಳಾದ ಕೊರಾ ಯಿಡ್ ನಿಯೋವ್ಯಾಸ್ಕುಲರೈಸೇಶನ್‌ಗಳಲ್ಲೂ ಉಪಯೋಗ ವಾಗುತ್ತದೆ.

೭. ಕಣ್ಣಿನೊಳಗಿನ ಟ್ಯೂಮರ್‌ಗಳ ಚಿಕಿತ್ಸೆಯಲ್ಲಿ: ರೆಟಿನೋಬ್ಲಾಸ್ಟೋಮಾ, ಮೆಲನೋಮ, ಆಂಜಿಯೋಮ ಇವುಗಳನ್ನು ಆರ್ಗಾನ್ ಮತ್ತು ಕ್ರಿಪ್ಟಾನ್ ಲೇಸರ್‌ ಗಳಿಂದ ಚಿಕಿತ್ಸೆ ಮಾಡಬಹುದು.

೮. ಮ್ಯಾಕ್ಯುಲಾರ್ ಎಡೀಮ: ಕಣ್ಣಿನ ಅಕ್ಷಿ ಪಟಲದ ಮಧ್ಯಭಾಗ ಮ್ಯಾಕ್ಯುಲದಲ್ಲಿ ಬೀಗಿನ ಅಂಶ ಕಂಡುಬಂದಾಗ ಇದರಿಂದ ಚಿಕಿತ್ಸೆ ಮಾಡಬಹುದು.

ಲ್ಯಾಸಿಕ್ ಸರ್ಜರಿ ಅಥವಾ ಚಿಕಿತ್ಸೆಯ ಬಗ್ಗೆ ಸ್ವಲ್ಪ ಗಮನ ಹರಿಸೋಣ. ಕನ್ನಡಕ ಅಥವಾ ಸ್ಪರ್ಶ ಮಸೂರ ಇಲ್ಲದೆ ಸ್ಪಷ್ಟವಾಗಿ ನೋಡಬೇಕೆಂಬ ದೃಷ್ಟಿದೋಷ ಇದ್ದವರ ಕನಸನ್ನು ನನಸಾಗಿಸಿದೆ ಈ ಚಿಕಿತ್ಸೆ. LASIK ಎಂದರೆ Laser assisted in-situ keratomileusis ಅಂದರೆ ಒಂದು ರೀತಿಯ ಲೇಸರ್ ಉಪಯೋಗಿಸಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯದ ಮೇಲೆ ಚಿಕಿತ್ಸೆ ಮಾಡಲಾಗುತ್ತದೆ. ಈ ಚಿಕಿತ್ಸೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ದೃಷ್ಟಿದೋಷದ ಬಗ್ಗೆ ಸ್ವಲ್ಪ ವಿವರವಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ.

ಕಣ್ಣು ಪೊಳ್ಳಾದ ಒಂದು ಚೆಂಡಿನಂತೆ ಎಂದು ತಿಳಿಯಿರಿ. ಅದರ ಒಳಭಾಗ ಬೆಳಕನ್ನು ಗ್ರಹಿಸುವ ಅಕ್ಷಿಪಟಲ. ಹೊರಗಡೆಯಿಂದ ಬರುವ ಬೆಳಕನ್ನು ಕೇಂದ್ರೀ ಕರಿಸಲು ಮುಂಭಾಗದಲ್ಲಿ ಕಪ್ಪಾಗಿ ಕಾಣಿಸುವ ಪಾರದರ್ಶಕ ಪಟಲ ಕಾರ್ನಿಯ ಹಾಗೂ ಒಳಭಾಗದಲ್ಲಿ ಪಾರದರ್ಶಕ ಮಸೂರವಿದೆ. ದೃಷ್ಟಿದೋಷವಿಲ್ಲದ ಕಣ್ಣಿನಲ್ಲಿ
ಹೊರಗಿನ ಬೆಳಕು ಈ ಎರಡು ಪಾರದರ್ಶಕ ಮಾಧ್ಯಮಗಳನ್ನು ದಾಟಿ ಅಕ್ಷಿಪಟಲದ ಮೇಲೆ ಬಿಂಬ ಕೇಂದ್ರೀಕೃತಗೊಂಡು ಮಿದುಳಿನಲ್ಲಿ ನರ ಸಂವೇದನೆ ಉಂಟು ಮಾಡಿ ನಮಗೆ ವಸ್ತುವಿನ ಅಥವಾ ಆಕೃತಿಯ ಚಿತ್ರ ಮೂಡುತ್ತದೆ. ಕಣ್ಣು ಗುಡ್ಡೆಯ ಉದ್ದದಲ್ಲಿ ಹುಟ್ಟುವಾಗಲೇ ಇರುವ ವ್ಯತ್ಯಾಸದಿಂದ ದೃಷ್ಟಿದೋಷ ಉಂಟಾಗು ತ್ತದೆ.

ಹಾಗಾಗಿ ಈ ಲ್ಯಾಸಿಕ್ ಚಿಕಿತ್ಸೆಯಲ್ಲಿ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾದ ಮೇಲೆ ಚಿಕಿತ್ಸೆ ಮಾಡಿ ಬೆಳಕು ಕೇಂದ್ರೀಕೃತಗೊಳ್ಳಲು ಇರುವ ಅಸಮತೋಲನ ವನ್ನು ನಿವಾರಿಸಲು ಯತ್ನಿಸಲಾಗುತ್ತದೆ. ಎಕ್ಸೈಮರ್ ಲೇಸರ್ ಎಂಬ ಲೇಸರ್ ಕಿರಣ ಉಪಯೋಗಿಸಿ ಮೊದಲೇ ಕರಾರುವಾಕ್ಕಾಗಿ ಲೆಕ್ಕಾಚಾರ ಹಾಕಿದಷ್ಟು ಲೇಸರ್ ಶಕ್ತಿಯನ್ನು ಕಾರ್ನಿಯಾದ ಮೇಲೆ ಹಾಯಿಸಿ ದೃಷ್ಟಿದೋಷ ಸರಿಪಡಿಸಲಾಗುತ್ತದೆ. ಲ್ಯಾಸಿಕ್ ಚಿಕಿತ್ಸೆಯನ್ನು ಎರಡು ಹಂತದಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಕಣ್ಣಿನ ದೃಷ್ಟಿದೋಷವನ್ನು ಕರಾರುವಾಕ್ಕಾಗಿ ಲೆಕ್ಕ ಹಾಕುವುದು ಹಾಗೂ ಕಣ್ಣಿನಲ್ಲಿ ಇರಬಹುದಾದ ಆಪ್ಟಿಕಲ್ ಅಬರೇಶನ್ ಅಂಶವನ್ನು ಅಳೆಯುವುದು. ಈ ಅಂಶ ವೇವ್ ಫ್ರಂಟ್ ಅಬರೋಮೆಟ್ರಿ ಎಂಬ ಹೊಸ ಸಾಧನದಿಂದ ಅಳೆಯಲ್ಪಡುತ್ತದೆ. ಹೀಗೆ ಲೆಕ್ಕ ಹಾಕಿ ಅಳೆದ ಅಂಶಗಳೆಲ್ಲ ವಿಶೇಷ ಕಂಪ್ಯೂಟರ್ ನಲ್ಲಿ ದಾಖಲಾಗುತ್ತದೆ. ಈ ಅಂಶಗಳು ಎಕ್ಸೈಮರ್ ಲೇಸರ್ ಯಂತ್ರಕ್ಕೆ ವರ್ಗಾವಣೆಯಾಗುತ್ತದೆ. ಎರಡನೆಯ ಹಂತದಲ್ಲಿ ಆಯಾಯ ದೃಷ್ಟಿ ದೋಷಕ್ಕನುಗುಣವಾಗಿ ಅಗತ್ಯವಿರುವ ಲೇಸರ್ ಕಿರಣವನ್ನು ಕಾರ್ನಿಯದ ಮೇಲೆ ಹಾಯಿಸಲಾಗುತ್ತದೆ. ಈ ಚಿಕಿತ್ಸೆ ಕೆಲವೇ ಸೆಕೆಂಡುಗಳಲ್ಲಿ ಮುಗಿದು ಹೋಗುತ್ತದೆ. ಯಾವ ರೀತಿಯ ನೋವು, ವೇದನೆ ಆಗುವುದಿಲ್ಲ.

ಈ ಚಿಕಿತ್ಸೆಯಿಂದ ಸಾಮಾನ್ಯವಾಗಿ — ೬ರಿಂದ +೧೪ ರವರೆಗಿನ ಹೆಚ್ಚಿನ ಎಲ್ಲಾ ರೀತಿಯ ದೃಷ್ಟಿದೋಷಗಳಿಗೂ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳ ಲಾಗುತ್ತದೆ. ೧೮ ವರ್ಷ ದಾಟಿದ ದೃಷ್ಟಿದೋಷ ಬಹಳಷ್ಟು ದಿನಗಳಿಂದ ಒಂದೇ ರೀತಿಯಲ್ಲಿರುವ ಯಾರು ಬೇಕಾದರೂ ಈ ಚಿಕಿತ್ಸೆ ಮಾಡಿಸಿಕೊಳ್ಳಬಹುದು.