ಕಳಕಳಿ
ಜಿ.ನಾಗೇಂದ್ರ ಕಾವೂರು
ಕೆಲವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿದ್ದಾರೆ. ಕೆಲವು ಸುದ್ದಿಗಳಲ್ಲಿ ಭಾಗಶಃ ವಿಡಿಯೋವನ್ನು ಪ್ರಸಾರ ಮಾಡಿ ಜನರಲ್ಲಿ ತಪ್ಪಭಿಪ್ರಾಯ ಮೂಡಿಸುತ್ತಿದ್ದಾರೆ.
‘ಮುಂದಿನ ಜನ್ಮ ಇದ್ದರೆ, ನಾನು ಮುಸಲ್ಮಾನನಾಗಿ ಜನಿಸಲು ಇಚ್ಛಿಸುತ್ತೇನೆ’ ಎಂದು ಮುಖ್ಯಮಂತ್ರಿಯವರು ಹೇಳಿದ್ದರೆನ್ನಲಾದ ಭಾಷಣದ ವಿಡಿಯೋ
ಮತ್ತು ‘ಕಾಂಗ್ರೆಸ್ ಪಕ್ಷ ಕಳೆದ ೭೦ ವರ್ಷಗಳಿಂದಲೂ ಭಾರತೀಯರಿಗೆ ಮೋಸ ಮಾಡಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣದಲ್ಲಿ ಹೇಳಿದ್ದರೆನ್ನಲಾದ ಒಕ್ಕಣೆಯುಳ್ಳ ವಿಡಿಯೋಗಳು ಇದಕ್ಕೆ ಸಾಕ್ಷಿ. ಈ ಎರಡರಲ್ಲೂ ಇರುವುದು ಅವರ ಸ್ವಂತ ಮಾತುಗಳಾಗಿರದೆ, ‘ಈ ರೀತಿ ಹೇಳಿದ್ದರು’ ಎಂದು ಇತರರು ಹೇಳಿದ್ದನ್ನು ಅವರು ಪುನರುಚ್ಚರಿಸಿದ್ದರು ಎಂಬುದನ್ನು ನಾವು ಗಮನಿಸಬೇಕು.
ಕೆಲ ಕಿಡಿಗೇಡಿಗಳು ತದ್ರೂಪಿಗಳ ವಿಡಿಯೋಗಳನ್ನು ಉಪಯೋಗಿಸಿಕೊಂಡು ಜನರಲ್ಲಿ ಗೊಂದಲ ಮೂಡಿಸುತ್ತಾರೆ. ಪ್ರಧಾನಿ ಮೋದಿ ‘ಗರ್ಬಾ ನೃತ್ಯ’ ಮಾಡುತ್ತಿರುವ ವಿಡಿಯೋ, ಮಹಾತ್ಮ ಗಾಂಽಜಿ ವಿದೇಶಿ ಮಹಿಳೆಯೊಂದಿಗೆ ಕುಣಿಯುತ್ತಿರುವ ವಿಡಿಯೋಗಳು ಇದಕ್ಕೆ ಒಂದೆರಡು ಉದಾಹರಣೆಗಳು. ಅಸಲಿಗೆ ಈ ವಿಡಿಯೋಗಳಲ್ಲಿದ್ದ ಪಾತ್ರಧಾರಿಗಳು ಮೋದಿ ಮತ್ತು ಗಾಂಧಿಯವರ ತದ್ರೂಪಿಗಳೆಂದು ನಂತರದ ದಿನಗಳಲ್ಲಿ ‘ಫ್ಯಾಕ್ಟ್ ಚೆಕ್’ ವರದಿಯಿಂದ ಗೊತ್ತಾಗಿದೆ.
ಇಂಥ ಸುಳ್ಳು ಸುದ್ದಿಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ಜನರಿಗೆ ‘ಸತ್ಯ’ವನ್ನು ತಿಳಿಸುವ ಉದ್ದೇಶದಿಂದ ಅನೇಕ ‘ಫ್ಯಾಕ್ಟ್ ಚೆಕ್’ ಸಂಸ್ಥೆಗಳು, ಏಜೆನ್ಸಿಗಳು, ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇಂಥ ‘ಫ್ಯಾಕ್ಟ್ ಚೆಕ್’ಗಳು ನೀಡುವ ವರದಿಗೆ ಸರಕಾರದ ಮಾನ್ಯತೆ ಇದೆಯೋ ಇಲ್ಲವೋ ಎಂದು ತಿಳಿಯುತ್ತಿಲ್ಲ. ಬಹುತೇಕ ಪ್ರಕರಣಗಳಲ್ಲಿ ಸತ್ಯವೆಂದು ನಂಬಿದ್ದ ಘಟನೆ ‘ಫ್ಯಾಕ್ಟ್ ಚೆಕ್’ ಮೂಲಕ ಸುಳ್ಳೆಂದು ಗೊತ್ತಾಗುತ್ತದೆ. ಆದರೆ, ‘ಮೊದಲ ಅನಿಸಿಕೆ, ಅತ್ಯುತ್ತಮ ಅನಿಸಿಕೆ’ ಎನ್ನುವಂತೆ, ಮೊದಲು ನೋಡಿದ್ದನ್ನು, ಕೇಳಿದ್ದನ್ನು ಸತ್ಯವೆಂದು ನಂಬುವುದು ಜನರ ಮಾನಸಿಕ ದೌರ್ಬಲ್ಯ.
ಇದನ್ನು ದುರುಪಯೋಗಪಡಿಸಿಕೊಳ್ಳುವ ಕೆಲ ‘ಫ್ಯಾಕ್ಟ್ ಚೆಕ್’ ಸಂಸ್ಥೆಗಳು, ಸತ್ಯಾಂಶ ಗೊತ್ತಿದ್ದರೂ ಪ್ರಾರಂಭದಲ್ಲೇ ತಿರುಚಿದ ವರದಿಯನ್ನು ನೀಡುವ ಮೂಲಕ ಜನರ ದಾರಿತಪ್ಪಿಸುತ್ತಿವೆ. ಪ್ರಧಾನಿ ಮೋದಿಯವರ ಭರವಸೆಗಳೆಲ್ಲಾ ಪೊಳ್ಳು ಎಂದು ವಿಪಕ್ಷಗಳು ಸುಳ್ಳು ಹೇಳುತ್ತಾ ಉದ್ದುದ್ದದ ಭಾಷಣದ ಮೂಲಕ ಅವರ ತೇಜೋವಧೆ ಮಾಡುತ್ತಿವೆ. ಮೋದಿ ಹೇಳಿದ್ದರೆನ್ನಲಾದ ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ, ಬುಲೆಟ್ ರೈಲು, ಸ್ವಿಸ್ ಬ್ಯಾಂಕುಗಳ ಭಾರತೀಯರ ಖಾತೆಗಳಲ್ಲಿನ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರು.ಹಾಕುವಿಕೆ ಇವೇ ಮೊದಲಾದವು ಗಳ ಬಗೆಗಿನ ಸತ್ಯಸಂಗತಿಯನ್ನು ಜನರಿಗೆ ತಿಳಿಸುವ ಸಾಹಸವನ್ನು ಯಾವುದೇ ‘ಫ್ಯಾಕ್ಟ್ ಚೆಕ್’ ಸಂಸ್ಥೆ ಮಾಡುತ್ತಿಲ್ಲವೇಕೆ? ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಸುದ್ದಿಯನ್ನು ಹಬ್ಬಿಸಿದವರ ಮೇಲೆ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಲು ‘ಸೈಬರ್ ಕ್ರೈಮ್ ನಿಗ್ರಹ ವ್ಯವಸ್ಥೆ’ ಇದೆ.
ಆದರೆ, ‘ಫ್ಯಾಕ್ಟ್ ಚೆಕ್’ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಅಂಥವರ ಮೇಲೆ ಯಾರು ಕ್ರಮ ಜರುಗಿಸುತ್ತಾರೆ? ಅದೇ ರೀತಿ ಪ್ರಧಾನಿಯ ಕಾರ್ಯ ವೈಖರಿ ಯನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಿ ಸುಳ್ಳು ಸುದ್ದಿ ಹಬ್ಬಿಸುವ ರಾಜಕಾರಣಿಗಳು, ಸಿನಿಮಾ ನಟರು, ಸಮಾಜ ಸೇವಕರು, ತಥಾಕಥಿತ ಬುದ್ಧಿಜೀವಿ ಗಳು ಮೊದಲಾದವರ ಮೇಲೆ ಕ್ರಮ ಜರುಗಿಸಲಾಗುವುದಿಲ್ಲವೇಕೆ? ‘ಫ್ಯಾಕ್ಟ್ ಚೆಕ್’ ಸಂಸ್ಥೆಗಳು ಜನರಿಗೆ ನಿಖರವಾದ ಮಾಹಿತಿಯನ್ನು ನೀಡುವಂತಿರಬೇಕು.
‘ಫ್ಯಾಕ್ಟ್ ಚೆಕ್’ ನೀಡುವ ಯಾವುದೇ ವರದಿಯ ಸತ್ಯಾಸತ್ಯತೆಯನ್ನು ಸರಕಾರ ಪರಿಶೀಲಿಸಿದ ನಂತರವಷ್ಟೇ ಆ ವರದಿಯನ್ನು ಬಿಡುಗಡೆಗೊಳಿಸುವಂತೆ ಮತ್ತು ಯಾರೇ ಸುಳ್ಳು ಸುದ್ದಿಯನ್ನು ಹಬ್ಬಿಸಿದರೂ ಅಂಥವರ ಮೇಲೆ ಕ್ರಮ ಜರುಗಿಸಲು ಅವಕಾಶವಿರುವಂತೆ ಕಾನೂನನ್ನು ರೂಪಿಸಬೇಕಿದೆ.
(ಲೇಖಕರು ಕೆಐಒಸಿಎಲ್ ನಿವೃತ್ತ ಮ್ಯಾನೇಜರ್)