Friday, 13th December 2024

ಇವರೆಲ್ಲ ಮಾರಾಟಕ್ಕಿಟ್ಟಿದ್ದು ಒಂದೇ ಸುಳ್ಳನ್ನು !

ವಿದೇಶವಾಸಿ

dhyapaa@gmail.com

ಯಾವುದು ಸರಿ? ಎಲ್ಲಿಯವರೆಗೆ ಮಾರುವವರು ಇರುತ್ತಾರೆ ಅಲ್ಲಿಯವರೆಗೆ ಸುಳ್ಳನ್ನೂ ಕೊಂಡುಕೊಳ್ಳುವವರು ಇರುತ್ತಾರೆ ಎನ್ನುವುದೋ ಅಥವಾ ಎಲ್ಲಿಯವರೆಗೆ ಕೊಂಡುಕೊಳ್ಳುವವರು ಇರುತ್ತಾರೋ ಅಲ್ಲಿಯವರೆಗೆ ಸುಳ್ಳನ್ನೂ ರಾಜಾರೋಷವಾಗಿ ಮಾರಬಹುದು ಎಂಬುದೋ? ಎರಡೂ ಸತ್ಯ. ಆದರೆ ಸತ್ಯವನ್ನು ಮಾರುವುದು ಕಷ್ಟ, ಸುಳ್ಳನ್ನು ಮಾರುವುದೇ ಸುಲಭ. ಸತ್ಯಕ್ಕೆ ಸತ್ವ ಪರೀಕ್ಷೆಯ ಸವಾಲುಗಳು ಹೆಚ್ಚು. ಸುಳ್ಳಿಗೆ ಹಾಗಲ್ಲ, ಅಮಾಯಕರನ್ನು, ಅವಶ್ಯಕತೆ ಇರುವವ ರನ್ನು ನಂಬಿಸಿದರೆ ಸಾಕು. ಅದು ಸುಲಭದ ಕೆಲಸ. ಅದಕ್ಕೇ ಸುಳ್ಳು ಮಸಾಲೆ ಮಂಡಕ್ಕಿಯಂತೆ ಮಾರಾಟವಾದರೆ, ಸತ್ಯ ಮೊಸರಲ್ಲಿ ಬಿದ್ದ ವಡೆಯಂತೆ ತಣ್ಣಗೆ
ಕುಳಿತಿರುತ್ತದೆ.

ಸುಳ್ಳಿಗೆ ಯಾವ ಜವಾಬ್ದಾರಿಯೂ ಇಲ್ಲ, ಅದಕ್ಕೆ ಹೆಚ್ಚಿನ ಬೆಲೆಯೂ ಇಲ್ಲ, ಅದು ಬಹುಕಾಲ ಬದುಕುವುದೂ ಇಲ್ಲ. ಆಜನ್ಮ ಪರ್ಯಂತ ಬದುಕುವುದಿದ್ದರೆ ಅದು ಸತ್ಯ ಮಾತ್ರ. ಆದರೆ, ಮನುಷ್ಯನ ಬದುಕೇ ಕೆಲವು ವರ್ಷಗಳಿಗೆ ಸೀಮಿತವಾಗಿರುವಾಗ, ಇರುವಷ್ಟು ದಿನ ಖುಷಿಯಾಗಿ ಇರೋಣ ಎಂಬ ಕಾರಣಕ್ಕೆ ಅರಿತೋ, ಅರಿಯದೆಯೋ ಸುಳ್ಳನ್ನು ಅಪ್ಪಿಕೊಳ್ಳುವವರಿಗೆ ಬರವಿಲ್ಲ. ಅದನ್ನು ನಗದೀಕರಿಸಿಕೊಳ್ಳುವವರಿಗೂ ಕೊರತೆಯಿಲ್ಲ. ಇದು ವ್ಯಾಪಾರಕ್ಕೂ ಹೊರತಲ್ಲ. ಹಾಗೆ ನೋಡಿದರೆ ಸಂಸಾರ, ಸ್ನೇಹ, ಸಂಬಂಧ, ಸಮಾಜ ಸಾಹಿತ್ಯ, ಕಲೆ ಇತ್ಯಾದಿಗಳಿಗಿಂತ ಸುಳ್ಳು ಹೆಚ್ಚು ಖರ್ಚಾಗುವುದು ವ್ಯಾಪಾರದಲ್ಲಿ. ‘ಯುನಿಲಿವರ್’ ಎಂದರೆ ಕೆಲವರಿಗೆ ಥಟ್ಟನೆ ತಿಳಿಯಲಿಕ್ಕಿಲ್ಲ.

ಲಕ್ಸ್ ಸಾಬೂನು, ಲಿಪ್ಟನ್ ಚಹಾ, ವಾಲ್ಸ ಐಸ್ ಕ್ರೀಮ್ ಎಂದರೆ ಪಟ್ಟನೆ ಅರ್ಥವಾಗುತ್ತದೆ. ಅವೆಲ್ಲ ಯುನಿಲಿವರ್ ಸಂಸ್ಥೆಯ ಉತ್ಪನ್ನಗಳು. ನೋರ್ ಸೂಪಿನಿಂದ
ಮ್ಯಾಗ್ನಮ್ ಐಸ್ ಕ್ರೀಮ್‌ವರೆಗೆ, ಸನ್ ಸಿಲ್ಕ್ ಶಾಂಪೂವಿನಿಂದ ರೆಕ್ಸೋನಾ ದುರ್ಗಂಧಹರ (ಡಿಯೋಡರೆಂಟ್) ದವರೆಗೆ, ಲೈಪ್‌ಬಾಯ್ ಸಾಬೂನಿನಿಂದ
ಹಿಡಿದು ಓಮೊ ಮಾರ್ಜಕ (ಡಿಟರ್ ಜೆಂಟ್) ಪುಡಿಯವರೆಗೆ ಯುನಿಲಿವರ್ ಸಂಸ್ಥೆಯ ಕೊಡುಗೆಗಳೇ. ವ್ಯಾಸಲೀನ್, ಪೆಪ್ಸೊಡೆಂಟ್, ಕ್ಲೋಸ್‌ಅಪ್, ಹಾರ್ಲಿಕ್ಸ್,
ಬ್ರುಕ್ಬಾಂಡ್, ಪಾಂಡ್ಸ್ ಪೌಡರ್ ಇತ್ಯಾದಿಗಳೆಲ್ಲ ಯುನಿಲಿವರ್‌ನ ಉತ್ಪಾದನೆಗಳೇ. ಸಂಸ್ಥೆ ಬೇರೆ ಬೇರೆ ವಿಭಾಗಗಳಲ್ಲಿ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಬಗೆಯ ವಸ್ತುಗಳನ್ನು ಉತ್ಪಾದಿಸುತ್ತದೆ. ಪ್ರಪಂಚದಾದ್ಯಂತ ಸುಮಾರು ನೂರ ತೊಂಬತ್ತು ದೇಶಗಳಲ್ಲಿ ಈ ಸಂಸ್ಥೆಯ ಉತ್ಪನ್ನಗಳು ಇಂದು ಲಭ್ಯವಿದೆ.
ಸುಮಾರು ಎಪ್ಪತ್ತು ಬಿಲಿಯನ್ ಯೂರೋ ಮೌಲ್ಯದ ಆಸ್ಥಿ ಹೊಂದಿರುವ ಸಂಸ್ಥೆಗೆ ಪ್ರತಿವರ್ಷ ಐವತ್ತು ಬಿಲಿಯನ್ ಯೂರೋ ಆದಾಯವಿದ್ದು, ಇದರ ಜತೆಗೆ, ವಿಶ್ವದಾದ್ಯಂತ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನೂ ಸಂಸ್ಥೆ ಒದಗಿಸಿಕೊಟ್ಟಿದೆ.

ಯುನಿಲಿವರ್ ಹುಟ್ಟಿಕೊಂಡದ್ದು ಇಂದಿಗೆ ಸುಮಾರು ತೊಂಬತ್ತೆರಡು ವರ್ಷಗಳ ಹಿಂದೆ, ೧೯೨೯ರಲ್ಲಿ. ಅಡುಗೆ ಉತ್ಪನ್ನಗಳನ್ನು ತಯಾರಿಸುತ್ತಿದ್ದ ನೆದರ್‌ಲ್ಯಾಂಡ್‌ನ ಮಾರ್ಜರೀನ್ ಯೂನಿ ಮತ್ತು ಸಾಬೂನು ತಯಾರಿಸುತ್ತಿದ್ದ ಬ್ರಿಟಿಷ್ ಸಂಸ್ಥೆ, ಲಿವರ್ ಬ್ರದರ್ಸ್ ಸೇರಿ ಇಂಗ್ಲೆಂಡಿನಲ್ಲಿ ಆರಂಭಿಸಿದ ಕಂಪನಿ
ಯುನಿಲಿವರ್. ದಶಕದ ಒಳಗೆ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಕ್ಕೂ ತನ್ನ ವ್ಯಾಪ್ತಿಯನ್ನು ಹಬ್ಬಿಸಿಕೊಂಡಿತು. ೧೯೩೦ರ ದಶಕದಲ್ಲಿ ಸಂಸ್ಥೆ ಭಾರತಕ್ಕೂ ಕಾಲಿಟ್ಟಿತು. ಹಿಂದೂಸ್ಥಾನ ವನಸ್ಪತಿ ಮ್ಯಾನು ಫ್ಯಾಕ್ಚರಿಂಗ್ ಕಂಪನಿ ಎಂಬ ಹೆಸರಿನಲ್ಲಿ ನೊಂದಾಯಿಸಿಕೊಂಡು, ಡಾಲ್ಡಾ ಉತ್ಪಾದಿಸಲು ಆರಂಭಿಸಿತು. ಆರಂಭವಾದ ೨೫ ವರ್ಷದ ನಂತರ ‘ಹಿಂದೂಸ್ಥಾನ ಲಿವರ್ ಲಿಮಿಟೆಡ್’ ಎಂದು, ಅದಾಗಿ ಸುಮಾರು ಐವತ್ತು ವರ್ಷದ ನಂತರ ’ಹಿಂದೂಸ್ಥಾನ ಯೂನಿಲಿವರ್ ಲಿಮಿಟೆಡ್’ ಎಂದೂ ಮರು ನಾಮಕರಣ ಮಾಡಿಕೊಂಡಿತು.

ಇಂದು ಭಾರತದಲ್ಲಿಯೇ ಸುಮಾರು ಇಪ್ಪತ್ತೊಂದು ಸಾವಿರಕ್ಕೂ ಹೆಚ್ಚು ಜನ ಈ ಸಂಸ್ಥೆಗಾಗಿ ದುಡಿಯುತ್ತಿದ್ದಾರೆ. ಸಂಸ್ಥೆ ಪ್ರತಿ ವರ್ಷ ನಲವತ್ತು ಸಾವಿರ ಕೋಟಿ ರುಪಾಯಿಯ ಆದಾಯಗಳಿಸುತ್ತಿದೆ. ಭಾರತೀ ಯರು ಬಳಸುವ ಸಾಬೂನು, ಡಿಟರ್‌ಜೆಂಟ್, ಚಹಾಗಳಲ್ಲಿ ಯುನಿಲಿವರ್ ವಸ್ತು ಗಳ ದೊಡ್ಡ ಪಾಲಿದೆ. ಶೇ.೬೦ರಷ್ಟು ಭಾರತೀಯರು ಯುನಿಲಿ ವನರ್ ಈ ಮೂರು ವಿಭಾಗದ ವಸ್ತುಗಳನ್ನು ಬಳಸುತ್ತಾರೆ. ಭಾರತದ ಜನಸಂಖ್ಯೆಯ ಶೇಕಡಾ ತೊಂಬತ್ತೆಂಟರಷ್ಟು ಮಂದಿ ಜೀವನದಲ್ಲಿ
ಒಮ್ಮೆ ಯಾದರೂ ಯುನಿಲಿವರ್ ಸಂಸ್ಥೆಯ ಒಂದಿಂದು ವಸ್ತುವನ್ನು ಬಳಸುತ್ತಾರೆ ಎಂಬ ಮಾತಿದೆ. ಇರಲಿ, ಅದೆಲ್ಲದೂ ಒಳ್ಳೆಯದೇ.

ಆದರೆ, ಇಷ್ಟೊಂದು ಒಳ್ಳೆಯ ಉತ್ಪನ್ನಗಳನ್ನು ಕೊಟ್ಟ ಸಂಸ್ಥೆ ಸೌಂದ ರ್ಯವರ್ಧಕದ ಹೆಸರಿನಲ್ಲಿ ಕೆಲವು ವಸ್ತು ಗಳನ್ನು ಮಾರುಕಟ್ಟೆಗೆ ತಂದದ್ದಕ್ಕೆ ಕಾರಣ ಹಣದ
ಹೊರತು ಇನ್ನೇನೂ ಕಾರಣ ಕಾಣುವುದಿಲ್ಲ. ೧೯೭೫ರ ವೇಳೆಗೆ ಸಂಸ್ಥೆಯ ‘ಫೇರ್ ಎಂಡ್ ಲವ್ಲಿ’ ಉತ್ಪನ್ನಗಳು ಭಾರತದ ಅಂಗಡಿಯ ಮುಂಗಟ್ಟನ್ನು ತಟ್ಟಿದವು. ಭಾರತದಲ್ಲಿ ಸಂಸ್ಥೆಯ ಉತ್ಪನ್ನಗಳನ್ನು ಬಹುತೇಕ ಪುರುಷರೇ ಖರೀದಿಸುತ್ತಿದ್ದು, ಮಹಿಳೆ ಯರು ಯುನಿಲಿವರ್ ಉತ್ಪನ್ನಗಳ ಕಡೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಮಹಿಳೆಯರು ಆಗಲೇ ಸೌಂದರ್ಯವರ್ಧಕ ಉತ್ಪನ್ನದ ಕಡೆಗೆ ಆಕರ್ಷಿತರಾಗಿದ್ದನ್ನು ಸಂಸ್ಥೆಗಮನಿಸಿತ್ತು. ಭಾರತದ ಮಹಿಳೆಯರನ್ನು ತಾನು ಉತ್ಪಾದಿಸುವ ವಸ್ತುವಿನೆಡೆಗೆ ಸೆಳೆಯುವುದಕ್ಕೆ ಆ ಕಾಲದಲ್ಲಿ ಇದಕ್ಕಿಂತ ಒಳ್ಳೆಯ ಉಪಾಯ ಇರಲಿಲ್ಲ.

ಹುಟ್ಟುವಾಗಲೇ ಕಪ್ಪಾಗಿದ್ದವರು ಬೆಳ್ಳಗಾಗುತ್ತಾರೆ ಎಂದರೆ ತಮಾಷೆಯಾ!? ಅದೂ ಕೆಲವೇ ವಾರದಲ್ಲಿ, ಕೆಲವೇ ರುಪಾಯಿಯಲ್ಲಿ, ಕೆಲವೇ ಗ್ರಾಂ ಕ್ರೀಂ
ಹಚ್ಚಿಕೊಳ್ಳುವುದರಿಂದ! ಸಂಸ್ಥೆಯ ವ್ಯಾಪಾರಿ ಬುದ್ಧಿ ಕೆಲಸಮಾಡಿತ್ತು. ಕಪ್ಪಗಿದ್ದವರು ಬೆಳ್ಳಗಾಗಲು, ಬೆಳ್ಳಗಿದ್ದವರು ಇನ್ನಷ್ಟು ಬೆಳ್ಳಗಾಗಲು ಇದನ್ನು ಖರೀದಿ
ಸಿದ್ದೇ ಖರೀದಿಸಿದ್ದು! ಅದರಲ್ಲೂ, ಬೆಳ್ಳಗಿಲ್ಲ ದಿದ್ದರೆ ಹೆಣ್ಣು ಮಕ್ಕಳ ಮದುವೆಯಾಗುವುದಿಲ್ಲ, ಕಪ್ಪಗಿದ್ದರೆ ಕೆಲಸ ಸಿಗುವುದಿಲ್ಲ, ಆದ್ದರಿಂದ ‘ಫೇರ್ ಎಂಡ್ ಲವ್ಲಿ’ ಬಳಸಿ, ಬೆಳ್ಳಗಾಗಿ ಎನ್ನುವ ಜಾಹೀರಾತುಗಳನ್ನು ಕಂಡನಂತರವಂತೂ ಕೇಳುವುದೇ ಬೇಡ!

ಹಾಗಂತ ಭಾರತದಲ್ಲಿ ಇದಕ್ಕೂ ಮೊದಲು ಈ ರೀತಿಯ ಉತ್ಪನ್ನ ಬರಲಿಲ್ಲ ಎಂದೇನಿಲ್ಲ. ೧೯೧೯ರಲ್ಲಿ ಮುಂಬೈನ ಪತಂಗ್ವಾಲಾ ಹೆಸರಿನ ಸಂಸ್ಥೆ ‘ಅ-ನ್
ಸ್ನೋ’ ಹೆಸರಿನ ಸೌಂದರ್ಯವರ್ಧಕ ಉತ್ಪನ್ನವನ್ನು ತಯಾರಿಸಿತ್ತು. ಅದರ ಪ್ಯಾಕೆಟ್ ಮೇಲೆ ‘ದೇವರಿಂದಲೇ ಬಂದ ಉಡುಗೊರೆ’ ಎಂಬ ಅರ್ಥದಲ್ಲಿ, ಅ
ಎಜ್ಛಿಠಿ ಟಞ ಎಟb ಎಂದು ಮುದ್ರಿಸಲಾಗುತ್ತಿತ್ತು. ಆ ಕಾಲದಲ್ಲಿ ಜನ ನಂಬಲಿಲ್ಲವೋ, ಬೆಳ್ಳಗಾಗುವುದರ ಬಗ್ಗೆ ಆಸಕ್ತಿ ಇರಲಿಲ್ಲವೋ, ಗೊತ್ತಿಲ್ಲ, ಅ-ನ್ ಸ್ನೋ
ಹಿಮದಂತೆ ಕರಗಿಹೋಯಿತು. ಭಾರತದ ಜನಸಂಖ್ಯೆಯ ಶೇಕಡಾ ಎಂಬತ್ತರಷ್ಟು ಜನರದ್ದು ಕಪ್ಪು ಅಥವಾ ಗೋಧಿ ಬಣ್ಣ. ಕೆಲಸ ನೀಡುವವರೂ ಅವರೇ, ಕೆಲಸ ಮಾಡುವವರೂ ಅವರೇ, ಮಾದುವೆ ಆಗುವವರೂ ಅದೇ ಬಣ್ಣದವರು, ಮಾಡಿಕೊಳ್ಳುವವರೂ ಅದೇ ಬಣ್ಣದವರು ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಲೇ ಇಲ್ಲ.

ವಿಶ್ವಸುಂದರಿ ಐಶ್ವರ್ಯ ರೈಯಂಥವರನ್ನು ಜಾಹೀರಾತಿಗೆ ಬಳಸಿ ಜನರನ್ನು ಮರುಳುಮಾಡುವಲ್ಲಿ ಯುನಿಲಿವರ್ ಯಶಸ್ವಿಯಾಗಿತ್ತು. ದಕ್ಷಿಣ ಏಷ್ಯಾದ ಉಳಿದ ದೇಶಗಳಲ್ಲೂ ಇದೇ ತಂತ್ರ ಬಳಸಿ, ಅಲ್ಲಿಯ ಪ್ರಸಿದ್ಧ ತಾರೆಯರನ್ನು ಸಂಸ್ಥೆ ಜಾಹೀರಾತಿಗೆ ಬಳಸಿಕೊಂಡಿತು. ನೋಡುನೋಡುತ್ತಾ ಉಳಿದ ಉತ್ಪನ್ನಗಳಿಗಿಂತ ಸೌಂದರ್ಯ ವರ್ಧಕಗಳಿಗೆ ಹೆಚ್ಚಿನ ಬೇಡಿಕೆ ಆರಂಭವಾಯಿತು. ಆಗಲೇ ಮಾರುಕಟ್ಟೆಗೆ ಇನ್ನೊಂದು ಸಂಸ್ಥೆಯ ಪ್ರವೇಶವಾಗಿತ್ತು. ಅದು ಇಮಾಮಿ!

ಇಬ್ಬರು ಸ್ನೇಹಿತರಿದ್ದರು. ಇಬ್ಬರೂ ವ್ಯಾಪಾರ ಮತ್ತು ನಕಲು ಮಾಡುವುದರಲ್ಲಿ ಆಸಕ್ತರಾಗಿದ್ದರು. ಕಾಕತಾಳೀಯವೋ ಎಂಬಂತೆ, ಇಬ್ಬರ ಹೆಸರೂ ನಕಲಿನಂತೆಯೇ ಇತ್ತು. ಒಬ್ಬ ರಾಧೇ ಶ್ಯಾಮ್ ಅಗರ್ವಾಲ, ಇನ್ನೊಬ್ಬ ರಾಧೇ ಶ್ಯಾಮ್ ಗೋಯಂಕ. ಇಬ್ಬರೂ ತಮ್ಮ ಬಳಿ ಇರುವ ಹಣದಿಂದ ಬೇರೆ ಬೇರೆ
ಉದ್ಯಮ ಆರಂಭಿಸಿ, ಕೆಲವು ಬಾರಿ ಕೈ ಸುಟ್ಟುಕೊಂಡಿದ್ದರು. ಬದಲಾವಣೆಗೆ ಎಂಬಂತೆ ಇಬ್ಬರೂ ಬಿರ್ಲಾ ಗ್ರೂಪ್‌ನಲ್ಲಿ ನೌಕರಿಗೆ ಸೇರಿಕೊಂಡರು. ಕೈಯಲ್ಲಿ ಸ್ವಲ್ಪ ಹಣ ಸಂಗ್ರಹವಾ ದೊಡನೆ ಪುನಃ ವ್ಯಾಪಾರ ಆರಂಭಿಸಿದರು. ಆಗ ಹುಟ್ಟಿಕೊಂಡ ಸಂಸ್ಥೆಯೇ ‘ಇಮಾಮಿ’. ಈ ಬಾರಿ ಹೊಸ ಉದ್ದಿಮೆ ಆರಂಭಿಸುವಾಗ
ಅವರು ಒಂದು ಅಂಶವನ್ನು ಗಮನಿಸಿದ್ದರು. ಅದೇ ನೆಂದರೆ, ಆಗ ಭಾರತದ ಮಾರುಕಟ್ಟೆಯಲ್ಲಿ ವಿದೇಶಿ ಉತ್ಪನ್ನಗಳೇ ಹೆಚ್ಚು ಇರುತ್ತಿತ್ತು ಮತ್ತು ಅವುಗಳ
ಪ್ಯಾಕಿಂಗ್ ವಿಶೇಷವಾಗಿರುತ್ತಿತ್ತು. ಭಾರತೀಯ ವಸ್ತು ಗಳ ಪ್ಯಾಕಿಂಗ್‌ಗಿಂತ ವಿದೇಶಿ ವಸ್ತುಗಳ ಪ್ಯಾಕಿಂಗ್ ಗುಣಮಟ್ಟದಲ್ಲಿ ಚೆನ್ನಾಗಿದ್ದು, ಗ್ರಾಹಕರನ್ನು ಹೆಚ್ಚು
ಆಕರ್ಷಿಸುತ್ತಿತ್ತು. ಅದಕ್ಕಾಗಿ ಅವರು ಇಮಾಮಿಯ ಪ್ಯಾಕಿಂಗ್ ಕಡೆ ಹೆಚ್ಚಿನ ಗಮನ ಹರಿಸಿದರು.

ವಿದೇಶದಿಂದ ಆಮದಾಗುತ್ತಿದ್ದ ವಸ್ತುಗಳಿಗೆ ನಿರ್ಮಾಣ ವೆಚ್ಚ, ತೆರಿಗೆ ಸೇರಿಕೊಂಡು ಮಾರಾಟದ ಬೆಲೆ ಹೆಚ್ಚಾಗುತ್ತಿತ್ತು. ಇವೆರಡರಲ್ಲೂ ಉಳಿತಾಯ ವಾಗುತ್ತಿದ್ದುದರಿಂದ ಇಮಾಮಿ ತನ್ನ ಉತ್ಪನ್ನಗಳನ್ನು ಕಮ್ಮಿ ಬೆಲೆಗೆ ಮಾರಾಟ ಮಾಡುತಿತ್ತು. ಜತೆಗೆ, ವಿತರಕರಿಗೆ, ಅಂಗಡಿಯವರಿಗೆ ಹೆಚ್ಚಿನ ಲಾಭಾಂಶ
ಕೊಡುತ್ತಿತ್ತು. ಇದರಿಂದ ಭಾರತದ ಮಾರುಕಟ್ಟೆ ಯಲ್ಲಿ ಬೇಗ ಪಸರಿಸಿದ್ದಲ್ಲದೇ, ವಿದೇಶಿ ಕಂಪನಿಗಳಿಗೆ ಪೆಟ್ಟುಕೊಡಲು ಸಿದ್ಧವಾಗಿ ನಿಂತಿತ್ತು. ಇದು
ಯುನಿಲಿವರ್‌ಗೆ ದೊಡ್ಡ ತಲೆನೋವಾಯಿತು.

ಯುನಿಲಿವನರ್ ವ್ಯಾಸಲಿನ್‌ಗೆ ಸಮನಾಗಿ ಇಮಾಮಿ ವ್ಯಾಸೊಕೇರ್ ತಯಾರಿಸುತ್ತಿತ್ತು. ಪಾಂq ಕೋಲ್ಡ ಕ್ರೀಮ್‌ಗೆ ಪರ್ಯಾಯವಾಗಿ ಮಲಾಯಿ ಕೇರ‍್ಸ್ ಕ್ರೀಮ, ಸ್ಟೇ ಫ್ರೀಗೆ ಬದಲಾಗಿ ಸ್ಯಾನಿಟರಿ ಪ್ಯಾಡ್ ತಯಾರಿಸುತ್ತಿತ್ತು. ಯುನಿಲಿವರ್ ಇದನ್ನೆಲ್ಲ ಸಹಿಸಿಕೊಳ್ಳುವ ಹೊತ್ತಿಗೆ ಇನ್ನೊಂದು ಪೆಟ್ಟು ಕೊಟ್ಟಿತ್ತು ಇಮಾಮಿ. ಅದುವರೆಗೆ ಹಸಿರು ತಗಡಿನಂತಹ ಟ್ಯೂಬ್‌ನಲ್ಲಿ ಬರುತ್ತಿದ್ದ ಬೊರೊಲಿನ್ ಕ್ರೀಮನ್ನು ಬೊರೊ ಪ್ಲಸ್ ಹೆಸರಿನಲ್ಲಿ ಫೇರ್ ಎಂಡ್ ಲವ್ಲಿಗೆ ಸ್ಪರ್ಧಿಯಾಗಿ ಮಾರುಕಟ್ಟೆಗೆ ತಂದಿತ್ತು. ಯುನಿಲಿವರ್ ಸೌಂದರ್ಯ ವರ್ಧಕಗಳ ಮಾರಾಟ ದಿಂದ ಬರುವ ಆದಾಯದಲ್ಲಿ ಶೇ.೬೫ ರಷ್ಟು ಫೇರ್ ಎಂಡ್ ಲವ್ಲಿಯಿಂದ ಬರುತ್ತಿತ್ತು. ಅದರಲ್ಲಿ ಶೇಕಡಾ ಮೂವತ್ತರಷ್ಟನ್ನು ಬಾಚಿಕೊಂಡ ಇಮಾಮಿ ಒಂದು ಹೆಜ್ಜೆ ಮುಂದೆ ಹೋಗಿ ಗಂಡಸರನ್ನೂ ಬೆಳ್ಳಗಾಗಿಸುವ ’ಫೇರ್ ಎಂಡ್ ಹ್ಯಾಂಡ್ಸಮ್’ ಕ್ರೀಮನ್ನು
ಮಾರುಕಟ್ಟೆಗೆ ತಂದಿತು. ಹೌದು ಮತ್ತೆ, ಗಂಡಸರಿಗೆ ಬೆಳ್ಳಗಾಗುವ ಹಕ್ಕಿಲ್ಲವೆ, ಅಥವಾ ಮನಸ್ಸಿಲ್ಲವೆ! ಅದರ ಜಾಹೀ ರಾತಿಗೆ ಬಾಲಿವುಡ್ ಸುಪರ್ ಸ್ಟಾರ್ ಶಾರುಖ್ ಖಾನ್‌ನನ್ನು ಬಳಸಿಕೊಂಡಿತು! ಯುನಿಲಿವರ್ ಕೂಡ ಗಂಡಸರಿಗಾಗಿ ‘ಗ್ಲೋ ಎಂಡ್ ಹ್ಯಾಂಡ್ಸಮ’ ಮಾರುಕಟ್ಟೆಗೆ ತಂದಿತು. ಈ ನಡುವೆ ‘ಬ್ಲ್ಯಾಕ್ ಲೈ ಮ್ಯಾಟರ್’ ಅಭಿಯಾನ ಆರಂಭವಾಯಿತು. ೨೦೧೪ ರಲ್ಲಿ ಭಾರತದ ಜಾಹೀರಾತುಗಳ ಮಾನದಂಡ ಮತ್ತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಸೌಂದರ್ಯವರ್ಧಕಗಳ ಜಾಹೀರಾತಿಗೆ ಹೊಸ ಮಾರ್ಗಸೂಚಿ ಯನ್ನು ಜಾರಿಗೊಳಿಸಿತು. ಕಂಪನಿಗಳು ತಮ್ಮ ಜಾಹೀರಾತಿನಲ್ಲಿ ಕಪ್ಪು ತ್ವಚೆಯವರು ಖಿನ್ನತೆಗೆ ಒಳಗಾದವರಂತೆ ಅಥವಾ ಜೀವನದಲ್ಲಿ ವಿಫಲರಾದವರಂತೆ ತೋರಿಸುವುದನ್ನು ನಿಷೇಧಿಸಿತು.

ಆಗ ಫೇರ್ ಎಂಡ್ ಲವ್ಲಿ ಗ್ಲೋ ಎಂಡ್ ಲವಿ ಆಗಿ ಬದಲಾಯಿತು. ಅಲ್ಲಿಗೆ, ಹಳೆ ಹೆಂಡವನ್ನು ಹೊಸ ಬಾಟಲಿ ಯಲ್ಲಿ ತುಂಬಿದಂ ತಾಯಿತೇ ವಿನಃ ಹೆಚ್ಚಿನದ್ದೇನೂ
ಆಗಲಿಲ್ಲ. ಇದು ಸೌಂದರ್ಯವರ್ಧಕ ಮಾರುವ ಎರಡು ಪ್ರಮುಖ ಪಾತ್ರಧಾರಿಗಳ ಕಥೆ ಅಷ್ಟೆ. ಈ ನಾಟಕದಲ್ಲಿ ಇನ್ನೂ ಸಾಕಷ್ಟು ಸಹಕಲಾವಿದರಿದ್ದಾರೆ. ಉತ್ಪಾದನೆ ಆರಂಭಿಸಿದಂದಿನಿಂದ ಇಲ್ಲಿಯವರೆಗೆ ಇಮಾಮಿಯ ಫೇರ್ ಎಂಡ್ ಹ್ಯಾಂಡ್ಸಮ್ ಒಂದೇ ಮುನ್ನೂರು ಕೋಟಿಯಷ್ಟು ವ್ಯಾಪಾರವಾಗಿದೆ
ಯಂತೆ. ವಾರದಿಂದ ವಾರಕ್ಕೆ ನಿಮ್ಮ ತ್ವಚೆಯಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆ ಎಂದು ಪ್ಯಾಕೆಟ್ ಮೇಲೆ ಮುದ್ರಿಸುವ ಕಂಪನಿಗಳು ತಮ್ಮ
ಉತ್ಪನ್ನಗಳನ್ನು ಬಳಸಿ ಇದುವರೆಗೆ ಬೆಳ್ಳಗಾದವರ ಲೆಕ್ಕ ಕೊಟ್ಟಿಲ್ಲ. ಜೂಹಿ ಚಾವ್ಲಾ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಮ, ಶಾಹಿದ್ ಕಪೂರ್ರ‍ನ್ನು ಜಾಹೀರಾತಿನಲ್ಲಿ ತೋರಿಸಿದರೇ ವಿನಃ ಸದಾಶಿವ ಅಮ್ರಪೂರ್ಕರ್, ನಾನಾ ಪಾಟೆಕರ್‌ರನ್ನು ತೋರಿಸಲಿಲ್ಲ.

ಹಾಗಾದರೆ ಈ ರೀತಿಯ ಕ್ರೀಮ್‌ಗಳನ್ನು ಮಾರುವುದು ತಪ್ಪೆ, ಅಥವಾ ಬಳಸುವುದೇ ತಪ್ಪೆ? ತಜ್ಞರ ಪ್ರಕಾರ, ವ್ಯಕ್ತಿಯ ನೈಸರ್ಗಿಕ ತ್ವಚೆಯ ಬಣ್ಣ
ಬದಲಾಯಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಇವುಗಳು ನಮ್ಮ ಚರ್ಮವನ್ನು ಸೂರ್ಯನಿಂದ ಕಾಯ್ದುಕೊಳ್ಳಲು ಸ್ವಲ್ಪ ಮಟ್ಟಿಗೆ ಸಹಕರಿಸಬಹುದು.
ಆದರೆ ಇವುಗಳ ಅತಿಯಾದ ಬಳಕೆಯಿಂದ ಹಾನಿಯೇ ಹೆಚ್ಚು. ಇದರಲ್ಲಿರುವ ಪಾದರಸ, ಕ್ರೋಮಿಯಮ, ನಿಕೆಲ, ಸೀಸದಂತಹ ವಸ್ತುಗಳು ಹಾನಿಕಾರಕ. ಇದನ್ನು ಬಳಸುವುದರಿಂದ ಕೆಲವರಲ್ಲಿ ಮೊಡವೆ, ಚರ್ಮದ ದದ್ದು ಕಾಣಿಸಿಕೊಳ್ಳುತ್ತದೆ.

ಕೆಲವು ಸಂಸ್ಥೆಗಳ ಕ್ರೀಮ್‌ಗಳಲ್ಲಿ ಲೋಹ ಮತ್ತು ಸ್ಟೆರಾಯ್ಡ ಪ್ರಮಾಣ ಹೆಚ್ಚಾಗಿದ್ದು, ಕ್ಯಾನ್ಸರ್ ರೋಗಕ್ಕೂ ಇದು ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಕೊನೆಯದಾಗಿ, ಇಂತಹ ಕ್ರೀಮ್ ಬಳಸಿ ಬೆಳ್ಳಗಾಗುವುದಿದ್ದರೆ ಭಾರತ ಬಿಡಿ, ಇಂದು ಆಫ್ರಿಕಾದಲ್ಲೂ ಯಾರೂ ಕಪ್ಪಗೆ ಇರುತ್ತಿರಲಿಲ್ಲ. ಅದು ನಿಜವೇ ಆಗಿದ್ದರೆ ನಮ್ಮ ಮನೆಯ ಎಮ್ಮೆ ಯನ್ನೂ, ಕೋಣವನ್ನೂ ಬೆಳ್ಳಗಾಗಿಸಬಹುದುತ್ತು. ಇದನ್ನು ಅರಿತರೆ ಜಾಣರಾಗುತ್ತೇವೆ, ಇಲ್ಲವಾದರೆ ನಾವೂ ಕೋಣನ ಬದಿಯಲ್ಲಿ ನಿಲ್ಲುತ್ತೇವೆ.