Friday, 13th December 2024

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಂಶವಾಹೀ ರಾಜಕಾರಣ

ಅಭಿವ್ಯಕ್ತಿ

ಗಣೇಶ್ ಭಟ್ ವಾರಣಾಸಿ

ದೇಶದ ಸಾಮಾನ್ಯ ಪ್ರಜೆಯೊಬ್ಬನೂ ದೇಶದ ಪ್ರಧಾನಿ ಪದವಿಗೂ ತಲುಪಬಹುದು ಎಂಬುದನ್ನು ದೇಶದ ಪ್ರಜಾಪ್ರಭುತ್ವ
ವ್ಯವಸ್ಥೆ ನಿರೂಪಿಸಿದೆ.

ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಾಪಿಸಿಕೊಂಡಿರುವ ವಂಶವಾದವು, ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಂಟಿದ ಶಾಪವಾಗಿದೆ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ಮೇಲೆ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಪ್ರಥಮ ಪ್ರಧಾನಿ ಯಾಗಿ ನಿಯುಕ್ತಗೊಂಡರು.

1951-52ರಲ್ಲಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 364 ಲೋಕಸಭಾ ಸೀಟುಗಳನ್ನು ಗೆದ್ದು ಪಂಡಿತ್ ನೆಹರು ಅವರು ಪುನಃ ಪ್ರಧಾನಿಯಾಗಿ ಆಯ್ಕೆಯಾದರು. 1957 ಹಾಗೂ 1962ರಲ್ಲಿಯೂ ಪುನರಾಯ್ಕೆಯಾದ ನೆಹರೂ 1964ನೇ
ಇಸವಿಯವರೆಗೆ ಪ್ರಧಾನಿಯಾಗಿ ಮುಂದುವರಿದರು. ನೆಹರೂ ಸಾವಿನ ನಂತರ ಮುಂದಿನ ಎರಡು ವರ್ಷಗಳವರೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿ ಆರಿಸಲ್ಪಟ್ಟರೂ ಶಾಸ್ತ್ರಿ ಅವರ ನಿಗೂಢ ಸಾವಿನ ನಂತರ 1966ರಲ್ಲಿ ನೆಹರೂ ಪುತ್ರಿ ಇಂದಿರಾ ಪ್ರಧಾನ ಮಂತ್ರಿಯಾಗಿ ನಿಯುಕ್ತರಾದರು.

ಈ ಮೊದಲು 1959 ನೇ ಇಸವಿಯಲ್ಲಿ ಇಂದಿರಾ ಅವರನ್ನು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿಯೂ ಆರಿಸಲಾಗಿತ್ತು. ನೆಹರು ಪುತ್ರಿ ಎನ್ನುವ ನೆಲೆಯಲ್ಲೇ ಇಂದಿರಾಗೆ ಕಾಂಗ್ರೆೆಸ್‌ನ ಅಧ್ಯಕ್ಷ ಪಟ್ಟ ಹಾಗೂ ನಂತರ ಪ್ರಧಾನಿ ಪಟ್ಟ ದೊರಕಿತು. ಭಾರತ ದಲ್ಲಿ ವಂಶಪಾರಂಪರ್ಯ ರಾಜಕಾರಣದ ಅಧ್ಯಾಯ ಆರಂಭವಾದದ್ದು ಹೀಗೆ. ಇಂದಿರಾ ಗಾಂಧಿಯವರ ಅಧಿಕಾರದ ಬಹುತೇಕ ಅವಧಿಯುದ್ದಕ್ಕೂ ಅವರ ಪುತ್ರ ಸಂಜಯ ಗಾಂಧಿಯವರ ಆಟಾಟೋಪ ನಡೆಯುತ್ತಿತ್ತು.

ಬಹುಶಃ ಇಂದಿರಾ ನಂತರ ಸಂಜಯ ಗಾಂಧಿಯೇ ಪ್ರಧಾನಿಯಾಗುತ್ತಿದ್ದರೋ ಏನೋ! ಆದರೆ ವಿಧಿಯಾಟವೇ ಬೇರೆ. ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿ ಅವರ ಸಾವು ಸಂಭವಿಸಿತು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಇಂದಿರಾ ಗಾಂಧಿಯ ಇನ್ನೋರ್ವ ಪುತ್ರ ರಾಜೀವ್ ಗಾಂಧಿ ಇವರಿಗೆ ರಾಜಕೀಯದಲ್ಲಿ ಏನೇನೂ ಅನುಭವವಿರ ದಿದ್ದರೂ ಅವರನ್ನು ಪ್ರಧಾನಿಯನ್ನಾಗಿ ಮಾಡಲಾಯಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವೂ ರಾಜೀವ್ ಕೈಗೇ ಬಂತು.

ರಾಜೀವ್ ಹತ್ಯೆಯ ನಂತರ ಕೆಲವು ವರ್ಷಗಳ ಕಾಲ ಸೋನಿಯಾ ಗಾಂಧಿ ರಾಜಕೀಯದಿಂದ ದೂರವಿದ್ದರೂ ವಂಶಾಡಳಿತ ರಾಜಕೀಯಕ್ಕೆ ಕಟ್ಟು ಬಿದ್ದಿದ್ದ ಕಾಂಗ್ರೆಸ್ ಸೋನಿಯಾ ಗಾಂಧಿಯವರನ್ನು 1998ರಲ್ಲಿ ಪಕ್ಷಾಧ್ಯಕ್ಷೆಯನ್ನಾಗಿಸಿ ಪಟ್ಟದಲ್ಲಿ ಕೂರಿಸಿತು. 2004 ಹಾಗೂ 2009 ರಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಡಾ.ಮನಮೋಹನ್ ಸಿಂಗ್ ಪ್ರಧಾನಿಯಾದರೂ ಅಧಿಕಾರದ ಹಿಡಿತ ಸೋನಿಯಾ ಗಾಂಧಿಯರ ಕೈಯಲ್ಲೇ ಉಳಿದು ಅವರ ಅಣತಿಯಂತೆಯೇ ಸರಕಾರ ನಡೆಯಿತು.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಇತ್ತೀಚೆಗಿನ ಪುಸ್ತಕ ‘ಎ ಪ್ರಾಮ್ಡ್‌ ಲ್ಯಾಂಡ್’ನಲ್ಲಿ ಸೋನಿಯಾ ಗಾಂಧಿ ಅವರು ಮನಮೋಹನ್ ಸಿಂಗ್ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಯಾವುದೇ ರೀತಿಯ ಬೆಂಬಲಿಗರು ಮತ್ತು ಹಿಡಿತ ಇಲ್ಲದಿ ರುವುದರಿಂದ ಅವರನ್ನು ಪ್ರಧಾನಿಯಾಗಿಸಿ, ತನ್ನ ಮಗ ರಾಹುಲ್ ಗಾಂಧಿಯ ರಾಜಕೀಯ ಭವಿಷ್ಯಕ್ಕೆ ತೊಂದರೆ ಇಲ್ಲವೆಂದು ಭಾವಿಸಿ ಅವರನ್ನು ಪ್ರಧಾನಿಯಾಗಿಸಿದರು ಎಂದು ಹೇಳಿದ್ದಾರೆ.

2013 ರಲ್ಲಿ ವರೆಗೆ ಸೋನಿಯಾ ಪುತ್ರ ರಾಹುಲ್ ಗಾಂಧಿ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ನೇಮಕ ಹೊಂದಿ ನಂತರ 2017ರಲ್ಲಿ ಕಾಂಗ್ರೆಸ್ ಪಕ್ಷದ ಪೂರ್ಣಾವಧಿ ಅಧ್ಯಕ್ಷರಾದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತೀವ್ರವಾಗಿ  ಸೋಲ ನ್ನುಂಡ ಕಾರಣ ರಾಹುಲ್ ಪಕ್ಷದ ಅಧ್ಯಕ್ಷ ಪವಿಗೆ ರಾಜೀನಾಮೆ ಕೊಟ್ಟಿದ್ದರಿಂದ ಪಕ್ಷಕ್ಕೆ ನೆಹರೂ-ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗೆ ಅಧ್ಯಕ್ಷ ಪದವಿಯನ್ನು ಕೊಡಲಾಗದೆ ಕೊನೆಗೆ ಸೋನಿಯಾ ಗಾಂಧಿಯನ್ನೇ ಪಕ್ಷದ ಹಂಗಾಮಿ  ಅಧ್ಯಕ್ಷರನ್ನಾಗಿ ಮುಂದು ವರಿಸಿತು.

ಈ ನಡುವೆ ಗಾಂಧಿ ಕುಟುಂಬದ ಇನ್ನೊಂದು ಕುಡಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಕಾಂಗ್ರೆಸ್ ಪಕ್ಷದ ಜನರಲ್
ಸೆಕ್ರೆಟರಿಯಾಗಿ ಹಾಗೂ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಆರಿಸಲಾಗಿದೆ. ಕಾಂಗ್ರೆಸ್ ಪಕ್ಷದ ರ್ಯಾಲಿಗಳಲ್ಲಿ ಪ್ರಿಯಾಂಕಾ ಮಕ್ಕಳಾದ ಮಿರಾಯಾ ವಾದ್ರಾ ಹಾಗೂ ರೈಹಾನ್ ವಾದ್ರಾರನ್ನೂ ಪರಿಚಯಿಸಲಾಗುತ್ತಿದೆ. ಇದು ದೇಶವನ್ನು ದೀರ್ಘ ಕಾಲ ಆಳಿದ ಪ್ರಮುಖ ರಾಷ್ಟೀಯ ಪಕ್ಷವಾದ ಕಾಂಗ್ರೆಸ್ ಪಕ್ಷದೊಳಗಿನ ವಂಶಾಡಳಿತ ವ್ಯವಸ್ಥೆಯ ಕಿರು ಪರಿಚಯ.

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ದೇಶದ ಇತರ ಹಲವು ಪ್ರಾಾದೇಶಿಕ ಪಕ್ಷಗಳೂ ವಂಶಾಡಳಿತ ವ್ಯವಸ್ಥೆಗೆ ಜೋತು ಬಿದ್ದಿವೆ. ಉತ್ತರ ಪ್ರದೇಶ ರಾಜಕೀಯ ವ್ಯವಸ್ಥೆೆಯಲ್ಲಿ ದೀರ್ಘಕಾಲ ರಾಜಕಾರಣ ಮಾಡಿದ್ದ ಮುಲಾಯಂ ಸಿಂಗ್
ಯಾದವರ ರಾಜಕೀಯ ಉತ್ತರಾಧಿಕಾರಿಯಾಗಿ ಆರಿಸಲ್ಪಟ್ಟದ್ದು ಅವರ ಪುತ್ರ ಅಖಿಲೇಶ್ ಯಾದವ್. ಒಂದು ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದ ಅಖಿಲೇಶ್ ಪ್ರಸ್ತುತ ಸಮಾಜವಾದಿ ಪಕ್ಷದ ಸಂಪೂರ್ಣ ಹಿಡಿತವನ್ನು ತಮ್ಮ ಕೈಯಲ್ಲಿಟ್ಟು ಕೊಂಡಿದ್ದಾರೆ. ಬಿಹಾರದ ಲಾಲೂ ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಜೈಲಿಗೆ ಹೋಗಬೇಕಾಗಿ ಬಂದ ಸಂದರ್ಭದಲ್ಲಿ ಪತ್ನಿ ರಾಬ್ರೀ ದೇವಿಯನ್ನು ಮುಖ್ಯಮಂತ್ರಿ ಪೀಠದಲ್ಲಿ ಕೂರಿಸಿ ಜೈಲಿಂದಲೇ ಅಧಿಕಾರ ನಡೆಸಿದರು.

ಈಗ ಲಾಲೂ ಪ್ರಸಾದ್ ಯಾದವ್ ಮಗ 31 ವರ್ಷದ ತೇಜಸ್ವೀ ಯಾದವ್ ಲಾಲೂ ಪ್ರಸಾದ್ ಯಾದವರ ಬಿಹಾರ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ. ಇತ್ತೀಚೆಗೆ ನಡೆದ ಬಿಹಾರ ರಾಜ್ಯ ಚುನಾವಣೆಯಲ್ಲಿ ತೇಜಸ್ವೀ ಯಾದವ್ ಅವರ ನೇತೃತ್ವದಲ್ಲೇ ಆರ್‌ಜೆಡಿ ಪಕ್ಷ ಚುನಾವಣೆಯನ್ನು ಎದುರಿಸಿದೆ. ಬಿಹಾರ ರಾಜ್ಯದಲ್ಲಿ ಲೋಕ್ ಜನಶಕ್ತಿ ಪಾರ್ಟಿಯ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್‌ನ ಮಗ ಚಿರಾಗ್ ಪಾಸ್ವಾನ್ ಈಗ ಆ ಪಕ್ಷದ ಮುಖ್ಯಸ್ಥರಾಗಿದ್ದಾರೆ.

ಝಾರ್ಖಂಡ್ ಮುಕ್ತಿ ಮೋರ್ಚಾದ ಸ್ಥಾಪಕ ಶಿಬು ಸೊರೇನ್ ಮಗ ಹೇಮಂತ್ ಸೊರೇನ್ ಈಗ ಆ ಪಕ್ಷದ ಮುಖ್ಯಸ್ಥ ಹಾಗೂ ಝಾರ್ಖಂಡ್ ನ ಮುಖ್ಯಮಂತ್ರಿ ಕೂಡಾ ಆಗಿದ್ದಾರೆ. ಪಂಜಾಬ್‌ನ ಶಿರೋಮಣಿ ಅಕಾಲಿದಳವಿಂದು ಅಕಾಲೀ ದಳ್ ಬಾದಲ್ ಪಕ್ಷವೆನಿಸಿಕೊಂಡಿದೆ. ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರ ಪುತ್ರ ಪ್ರಕಾಶ್ ಸಿಂಗ್ ಬಾದಲ್ ಅವರು ಈಗ ಪಕ್ಷದ ಮುಖ್ಯಸ್ಥರಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್’ನ ಅಧಿಕಾರ ಸ್ಥಾಪಕ ಶೇಕ್ ಅಬ್ದುಲ್ಲಾರಿಂದ ಅವರ ಮಗನಾದ ಫಾರೂಕ್
ಅಬ್ದುಲ್ಲಾರಿಗೆ ಬಂತು. ಈಗ ಫಾರೂಕ್ ಅಬ್ದುಲ್ಲಾರ ಮಗನಾದ ಒಮರ್ ಅಬ್ದುಲ್ಲಾ ನ್ಯಾಷನಲ್ ಕಾನ್ಫರೆನ್ಸ್’ನ ಮುಖ್ಯಸ್ಥ.
ಅದೇ ರೀತಿ ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿಯ ಸ್ಥಾಪಕ ಮುಫ್ತಿ ಮೊಹಮ್ಮದ್ ಸಯೀದ್‌ನ ನಂತರ ಆ ಪಕ್ಷದ ಅಧಿಕಾರ ಮುಫ್ತಿ ಮೊಹಮ್ಮದ್ ಮಗಳಾದ ಮೆಹಬೂಬಾ ಮುಫ್ತಿ ಪಾಲಾಯಿತು. ಮಹಾರಾಷ್ಟ್ರದಲ್ಲಿ ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆಯ ಮಗ ಉದ್ಧವ್ ಠಾಕ್ರೆ ಶಿವಸೇನೆಯ ಮುಖ್ಯಸ್ಥರಾಗಿದ್ದಾರೆ.

ಈಗ ಉದ್ಧವ್ ಮಗ ಆದಿತ್ಯ ಠಾಕ್ರೆಯನ್ನು ಪಕ್ಷದ ನಾಯಕನನ್ನಾಗಿ ಬೆಳೆಯಿಸುವ ಕೆಲಸ ನಡೆಯುತ್ತಿದೆ. ಶರದ ಪವಾರ್‌ನ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಲ್ಲಿ ಪವಾರ್ ಮಗಳಾದ ಸುಪ್ರಿಯಾ ಸುಳೆಯನ್ನು ಎನ್‌ಸಿಪಿ ಯ ರಾಜಕೀಯ ಉತ್ತರಾಧಿಕಾರಿ
ಯನ್ನಾಗಿ ಬೆಳೆಯಿಸಲಾಗುತ್ತಿದೆ. ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕರಾಗಿದ್ದ ಕರುಣಾನಿಧಿ ಕಾಲಾನಂತರ ನಂತರ ಅವರ ಮಗ ಸ್ಟಾಲಿನ್ ಡಿಎಂಕೆಯ ಪರಮೋಚ್ಛ ನಾಯಕನಾಗಿದ್ದಾರೆ. ಒರಿಸ್ಸಾದಲ್ಲಿ ಜನತಾದಳದ ನಾಯಕ ಹಾಗೂ ಮುಖ್ಯಮಂತ್ರಿ ಯಾಗಿದ್ದ ಬಿಜು ಪಟ್ನಾಯಕ್ ಅವರ ಮಗ ನವೀನ್ ಪಟ್ನಾಯಕ್ ಬಿಜು ಜನತಾದಳ ಪಕ್ಷದ ಮೂಲಕ ಒರಿಸ್ಸಾದಲ್ಲಿ ಸತತವಾಗಿ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿಯೂ ಆಗಿದ್ದ ವೈ ಎಸ್ ರಾಜಶೇಖರ ರೆಡ್ಡಿಯವರ ಮಗ ಜಗನ್ಮೋಹನ್ ರೆಡ್ಡಿ ವೈಎಸ್‌ಆರ್ ಕಾಂಗ್ರೆಸ್ ಹೆಸರಿನ ಪಕ್ಷದ ಮೂಲಕ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಚುನಾಯಿತರಾ ಗಿದ್ದಾರೆ.

ಕರ್ನಾಟಕದಲ್ಲಿ ಜಾತ್ಯತೀತ ಜನತಾದಳದಲ್ಲೂ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡರ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ ಇವರಿಗೆ ಪಕ್ಷದ ನಿರ್ಣಾಯಕ ಹುದ್ದಗಳು ದೊರಕಿವೆ. ಈಗ ದೇವೇ ಗೌಡರ ವಂಶದ ಮೂರನೇ ತಲೆಮಾರಿನ ಕುಡಿಗಳಾದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ನಾಯಕರನ್ನಾಗಿ ಬೆಳೆಸುವ ಪ್ರಯತ್ನಗಳು ನಡೆಯುತ್ತಿದೆ. ತೆಲಂಗಾಣದ ಟಿಆರ್‌ಎಸ್‌ನಲ್ಲಿ, ಆಂಧ್ರದ ತೆಲುಗುದೇಶಂನಲ್ಲೂ ಮುಂದಿನ ತಲೆಮಾರಿಗೆ ಅಧಿಕಾರದ ಹಸ್ತಾಂತರದ ಕೆಲಸ ನಡೆಯುತ್ತಿದೆ.

ಮೇಘಾಲಯದ ಎನ್‌ಸಿಪಿ ಸ್ಥಾಪಕರಾದ ಪಿ.ಎ.ಸಂಗ್ಮಾ ಮಗ ಕೊನ್ರಾಡ್ ಸಂಗ್ಮಾ ಮೇಘಾಲಯದ ಮುಖ್ಯಮಂತ್ರಿ ಮೇಲೆ ಹೇಳಿದ ಪಕ್ಷಗಳ ಮೊದಲ ತಲೆಮಾರಿನ ನಾಯಕರು ಅವರ ನಾಯಕತ್ವ ಗುಣದಿಂದ ನಾಯಕರಾಗಿ ಬೆಳೆದರು. ಆದರೆ ಪಕ್ಷಾಧಿಕಾರವನ್ನು ನಾಯಕರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯ ಅಧಿಕಾರವನ್ನು ಕೊಟ್ಟಂತೆ ಹಸ್ತಾಂತರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವೇ ಸರಿ. ಈ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಎನ್ನುವುದು ಇಲ್ಲವಾಗಿದೆ. ಇದರೊಂದಿಗೆ ಪಕ್ಷದ ಪ್ರಮುಖ  ಕುಟುಂಬ ವನ್ನು ಓಲೈಸುವುದರಲ್ಲೇ ಪಕ್ಷದ ಇತರ ನಾಯಕರು ತಮ್ಮ ಜೀವನವನ್ನು ಸವೆಸಬೇಕಾಗುತ್ತದೆ.

ಕುಟುಂಬ ರಾಜಕಾರಣ ವ್ಯವಸ್ಥೆಯಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ದೇಶ ಅಥವಾ ರಾಜ್ಯದ ಹಿತಾಸಕ್ತಿಗಿಂತ ಪ್ರಮುಖ ಕುಟುಂಬದ ಹಿತಾಸಕ್ತಿಯೇ ಪ್ರಮುಖವಾಗುತ್ತದೆ. ನಾಯಕನ ಮಗ ಅಥವಾ ಮಗಳು ಎನ್ನುವ ಕಾರಣದಿಂದ ಅಧಿಕಾರಕ್ಕೆ ಬಂದವರಲ್ಲಿ ನಾಯಕತ್ವದ ಗುಣ ಇರಬೇಕೆಂದಿಲ್ಲ. ಭಾರತದಲ್ಲಿ ವಂಶಾಡಳಿತ ವ್ಯವಸ್ಥೆಯನ್ನು ಮೀರಿದ ರಾಜಕಾರಣವನ್ನು ಮಾಡುತ್ತಿರುವ ಪಕ್ಷಗಳು ಕೆಲವೇ ಕೆಲವು. ಇವುಗಳಲ್ಲಿ ಪ್ರಮುಖವಾದವು ಬಿಜೆಪಿ, ಸಿಪಿಐ, ಸಿಪಿಐಎಂ ಹಾಗೂ ಜನತಾದಳ ಯುನೈಟೆಡ್(ಜೆಡಿಯು).

ಬಿಜೆಪಿಯಲ್ಲಿ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಹುದ್ದೆಗಳು ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ದುಡಿದು ಮೇಲೆ ಬಂದವರಿಗೇ ಲಭಿಸುತ್ತದೆ. ಬಿಜೆಪಿ ತನ್ನ 40 ವರ್ಷಗಳ ಇತಿಹಾಸದಲ್ಲಿ 11 ಮಂದಿ ಅಧ್ಯಕ್ಷರನ್ನು ಕಂಡಿದೆ. ಬಿಜೆಪಿಯ ಮೂಲಕ ಪ್ರಧಾನಿಗಳಾಗಿ ಆಯ್ಕೆಯಾದ ವಾಜಪೇಯಿ ಹಾಗೂ ಮೋದಿ ಅವರಿಗೆ ಯಾವುದೇ ರೀತಿಯ ಪ್ರಭಾವಿ ಕುಟುಂಬದ ಹಿನ್ನೆಲೆಯಿಲ್ಲ. ಜೆಡಿಯುವಿನ ನಿತೀಶ್ ಕುಮಾರ್ ಅವರ ಪುತ್ರ ಪಕ್ಷ ರಾಜಕೀಯದಿಂದ ಬಹಳ ದೂರ ಇದ್ದಾರೆ. ಕಮ್ಯುನಿಸ್ಟ್ ಪಕ್ಷವೂ ಕೇಡರ್ ಅಧಾರಿತ ಪಕ್ಷವೇ. ಹೊಸ ಪಕ್ಷವಾದ ಆಮ್ ಆದ್ಮಿ ಪಾರ್ಟಿಯ ಕಥೆ ಏನಾಗಲಿದೆ ಎಂದು ಕಾಲವೇ ಹೇಳಬೇಕು.