ಕನ್ನಡ ಡಿಂಡಿಮ
ಪ್ರಸಾದ್ ಜಿ.ಎಂ
ಮೈಸೂರು ರಾಜ್ಯ ಎಂದು ಒಂದು ಕಾಲಕ್ಕೆ ಕರೆಯಲ್ಪಡುತ್ತಿದ್ದ ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ವಾಗಿ ೫೦ ವರ್ಷಗಳಾಗಿವೆ. ಈ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಮತ್ತು ವರ್ಷಪೂರ್ತಿ ಆಚರಿಸಲು ಕರ್ನಾಟಕ ಸರಕಾರ ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಿದೆ. ಈ ಸಂದರ್ಭದಲ್ಲಿ ಒಂದಷ್ಟು ಆತ್ಮಾವಲೋಕನಕ್ಕೂ ನಾವು ಮುಂದಾಗಬೇಕು.
ಏಕೆಂದರೆ, ಅನ್ಯಭಾಷಿಕರ ಪ್ರಭಾವ, ಇಂಗ್ಲಿಷ್ ಮೇಲಿನ ವ್ಯಾಮೋಹ, ಇಚ್ಛಾಶಕ್ತಿಯ ಕೊರತೆ ಹಾಗೂ ಕೆಲ ಕನ್ನಡಿಗರದೇ ನಿರ್ಲಕ್ಷ್ಯದಿಂದಾಗಿ ಕರ್ನಾಟಕ-ಕನ್ನಡ-ಕನ್ನಡಿಗರಿಗೆ ಹಲವು ನೆಲೆ ಗಟ್ಟಿನಲ್ಲಿ ಸಮಸ್ಯೆಗಳು ಎದುರಾಗಿವೆ.
‘ಮಾಹಿತಿ ತಂತ್ರಜ್ಞಾನ ನಗರಿ’ ಎನಿಸಿಕೊಂಡಾಗಿನಿಂದ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿದೆ. ದೇಶದ ಯಾವುದೇ ಭಾಗದಿಂದ ಬದುಕು ಕಟ್ಟಿ ಕೊಳ್ಳಲು ತನ್ನಲ್ಲಿಗೆ ಬರುವ ಎಲ್ಲರಿಗೂ ಬೆಂಗಳೂರು ಆಶ್ರಯ ಕೊಡುತ್ತಿದೆ. ಆದರೆ ಅದೇ ಜನರು, ಹೀಗೆ ಜೀವನೋಪಾಯ ಮತ್ತು ಆಶ್ರಯವನ್ನು ಕಲ್ಪಿಸಿದ ಈ ನೆಲ ಹಾಗೂ ಭಾಷೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಹೊರಗಿನಿಂದ ಬಂದವರು ಸ್ಥಳೀಯರೊಂದಿಗೆ ಸಾಧ್ಯವಾದಷ್ಟರ ಮಟ್ಟಿಗೆ ಈ ನೆಲದ ಭಾಷೆಯಲ್ಲಿ ವ್ಯವಹರಿಸಬೇಕು, ಕ್ರಮೇಣ ಭಾಷೆಯನ್ನು ಸಮರ್ಥವಾಗಿ ಕಲಿಯಬೇಕು. ನೆರೆಯ ತಮಿಳುನಾಡು ಅಥವಾ ಕೇರಳಕ್ಕೆ ನಾವು ತೆರಳಿದರೆ ಇಂಥದೇ ಪರಿಸ್ಥಿತಿಯಿದೆ. ಆದರೆ ಹೊರಗಿನಿಂದ ಬಂದವರೊಂದಿಗೆ ನಾವು ಕಷ್ಟಪಟ್ಟಾದರೂ ಅವರ ಭಾಷೆಯಲ್ಲೇ ಸಂವಹನ ನಡೆಸುತ್ತೇವೆ. ಕನ್ನಡಿಗರು ವಿಶಾಲ ಹೃದಯದವರು ಎಂಬುದು ಈ ಕಾರಣಕ್ಕೇ ಇರಬೇಕು! ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಬಹಳಷ್ಟು ಅಂಗಡಿ-ಮುಂಗಟ್ಟುಗಳ ನಾಮಫಲಕ ಕನ್ನಡದಲ್ಲಿ ಇರುವುದಿಲ್ಲ, ವಾಣಿಜ್ಯೋದ್ದಿಮೆಗಳಲ್ಲೂ ಕನ್ನಡದಲ್ಲಿ ವ್ಯವಹರಿಸುವುದು ದುಸ್ತರವೇ.
ಹೀಗಾದಲ್ಲಿ ಕನ್ನಡ ಉಳಿಯುವುದಾದರೂ ಹೇಗೆ? ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಾಜ್ಯಗಳ ರಚನೆಯಾದವು. ರಾಜ್ಯಗಳ ಪುನರ್‌ವಿಂಗಡಣೆಯಾದಾಗಿನಿಂದ ಹುಟ್ಟಿಕೊಂಡ ಬೆಳಗಾವಿ ಗಡಿ ಸಮಸ್ಯೆಯು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಇಂದಿಗೂ
ಜೀವಂತವಾಗಿದೆ. ಈ ಸಮಸ್ಯೆ ಒಮ್ಮೊಮ್ಮೆ ತೀವ್ರಸ್ವರೂಪ ಪಡೆದು ಅನಾಹುತಗಳಾಗುವುದನ್ನೂ ಕಂಡಿದ್ದೇವೆ. ಉಭಯ ರಾಜ್ಯಗಳ ಜನಪ್ರತಿನಿಧಿಗಳು ಒಂದೆಡೆ ಕಲೆತು ಈ ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯನ್ನು ತೋರಬೇಕು. ಇದು ಕಾವೇರಿ ನದಿನೀರು ಹಂಚಿಕೆಯ ವಿಷಯದಲ್ಲೂ ಅನ್ವಯವಾಗುವ ಮಾತು.
ಏಕೆಂದರೆ, ವಾಡಿಕೆಯಷ್ಟು ಮಳೆಯಾಗದೆ ಕರ್ನಾಟಕದ ಕೃಷಿಕರಿಗೇ ನೀರು ಒದಗಿಸಲು ತತ್ವಾರವಾಗಿದ್ದಾಗಲೂ ಅದ್ಯಾವಾಗಲೋ ರೂಪುಗೊಂಡಿದ್ದ ಸೂತ್ರದಂತೆ ಕಡ್ಡಾಯವಾಗಿ ತಮಿಳುನಾಡಿಗೆ ನೀರು ಹರಿಸಬೇಕಾಗಿ ಬರುವುದರಿಂದ ಉಭಯ ರಾಜ್ಯಗಳ ನಡುವಿನ ನೀರಿಗಾಗಿನ ಜಗಳವು ಭಾರತ-ಪಾಕಿಸ್ತಾನದ ನಡುವಿನ ದ್ವೇಷದಂತೆ ಭುಗಿಲೇಳುತ್ತದೆ. ಆದರೆ ಪ್ರತಿಬಾರಿಯೂ ಈ ಜಲಯುದ್ಧದಲ್ಲಿ ಹಿನ್ನಡೆಯಾಗುವುದು ಕರ್ನಾಟಕಕ್ಕೇ!
ಮೊದಲೇ ಉಲ್ಲೇಖಿಸಿದಂತೆ, ಇಂಗ್ಲಿಷ್ ಬಗೆಗಿನ ಅಂಧವ್ಯಾಮೋಹದಿಂದಲೂ ಕನ್ನಡಕ್ಕೆ ಅಪಾಯ ಎದುರಾಗಿದೆ. ಕನ್ನಡದಲ್ಲಿ ಮಾತಾಡಿದರೆ ಎಲ್ಲಿ ಅವಮಾನ, ಮುಜುಗರವಾಗುತ್ತದೋ ಎಂಬ ಮನಃಸ್ಥಿತಿಯಿಂದಾಗಿ ಕನ್ನಡ ಮಾತಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಸಾಲದೆಂಬಂತೆ ಕನ್ನಡದ ಸೊಗಡಿನ ನಡುವೆ ಇಂಗ್ಲಿಷ್ ಪದಗಳನ್ನು ತುರುಕುವಿಕೆ; ‘ಏನು ಊಟ ಮಾಡಿದೆ?’ ಎಂದು ಕೇಳಿದರೆ, ‘ಕರ್ಡ್ ರೈಸ್ ತಿಂದೆ, ಫ್ರುಟ್ಸ್ ಸಲಾಡ್ ಸೇವಿಸು ತ್ತಿರುವೆ’ ಎಂಬ ಉತ್ತರ ಸಿಗುತ್ತದೆಯೇ ಹೊರತು, ‘ಮೊಸರನ್ನ ತಿಂದೆ, ಹಣ್ಣಿನ ರಸಾಯನ ಸೇವಿಸುತ್ತಿರುವೆ’ ಎಂಬುದಲ್ಲ.
ಹಿಂದೆ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿತ್ತು. ಅಲ್ಲಿ ವ್ಯಾಸಂಗ ಮಾಡಿ ಉತ್ತಮ ಅಂಕ ಗಳಿಸಿ, ತಾವು ಆಯ್ದುಕೊಂಡ ಕಾರ್ಯಕ್ಷೇತ್ರ ದಲ್ಲಿ ಉನ್ನತ ಸ್ಥಾನಕ್ಕೇರಿದವರು ಹಲವು ಜನರಿದ್ದಾರೆ. ಆದರೆ ಕಾಲ ಬದಲಾದಂತೆ, ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿರುವ ಅವರ ಪೋಷಕರು, ದುಬಾರಿ ಶುಲ್ಕ ತೆತ್ತಾದರೂ ಅವರನ್ನು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈ ಬೆಳವಣಿಗೆಯಲ್ಲಿ ಸರಕಾರದ ಜಾಣಕುರುಡೂ ಇದೆ. ಸರಕಾರಿ ಶಾಲೆಗಳಿಗೆ ಸರಿಯಾದ ಅನುದಾನ, ಮೂಲಭೂತ ಸೌಲಭ್ಯ, ಸಮರ್ಥ ಶಿಕ್ಷಕರನ್ನು ಒದಗಿಸಲಾಗದ ಸರಕಾರದ ಅಸೀಮ ನಿರ್ಲಕ್ಷ್ಯದಿಂದಾಗಿ ಗ್ರಾಮೀಣ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಈ ಸಮಸ್ಯೆಗೆ ಇವು ಪರಿಹಾರವಾಗಬಲ್ಲವು: ಶಿಕ್ಷಣದ ಭಾಷೆಯನ್ನು ಆಯ್ಕೆಮಾಡುವ ಸ್ವಾತಂತ್ರ್ಯವನ್ನು ನ್ಯಾಯಾಲಯ ಜನರಿಗೆ ನೀಡಿದೆ. ಈ ಹಂತದಲ್ಲಿ ಪೋಷಕರ ಪಾತ್ರ ಬಹುಮುಖ್ಯವಾದುದು. ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವುದಕ್ಕೆ ಅವರು ಪ್ರೋತ್ಸಾಹಿಸಬೇಕು. ಕನ್ನಡ ನಮ್ಮ
ಮಾತೃಭಾಷೆ; ತಾಯಿಬೇರು ಬಿಟ್ಟು ಬೇರೆ ಮರವನ್ನು ಅಪ್ಪಿಕೊಳ್ಳಲಾಗುತ್ತದೆಯೇ? ಶಿಕ್ಷಣದಲ್ಲಿ ಕಲಿಕೆಯ ಭಾಷೆಯಾಗಿ ಕನ್ನಡವನ್ನು ಉಳಿಸಿಕೊಂಡು ಹೋಗುವ ಕೆಲಸವು ರಾಜ್ಯ ಸರಕಾರದಿಂದ ತುರ್ತಾಗಿ ಆಗಬೇಕು. ಮಾತೃಭಾಷೆಯ ಮೂಲಕ ಮಕ್ಕಳು ಶಿಕ್ಷಣ ಪಡೆಯುವುದನ್ನು ‘ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦’ ಪ್ರೋತ್ಸಾಹಿಸುತ್ತದೆ.
ಅನಗತ್ಯವಾಗಿ ಇಂಗ್ಲಿಷ್ ಮೋಹಕ್ಕೆ ಬಿದ್ದ ನಾವು ಮೂರ್ಖರಂತೆ ಇಂಗ್ಲಿಷ್‌ನಲ್ಲಿ ಸಂವಹನ ನಡೆಸುತ್ತೇವೆ; ಕನ್ನಡಿಗರಾದ ನಾವು, ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಬದುಕಿನ ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಬಳಸಬೇಕು. ತಮ್ಮ ಮಕ್ಕಳು ಇಂಗ್ಲಿಷನ್ನು ಚೆನ್ನಾಗಿ ಕಲಿಯಲಿ, ಮಾತಾಡಲಿ ಎಂಬ ಉದ್ದೇಶದಿಂದ ಎಷ್ಟೋ ಮನೆಗಳಲ್ಲಿ ಪೋಷಕರು ಅವರಿಂದ ಬಲವಂತವಾಗಿ ಇಂಗ್ಲಿಷ್‌ನಲ್ಲೇ ಮಾತನಾಡಿಸುವುದಿದೆ. ಈ ಧೋರಣೆ ತಪ್ಪು. ಇಂಥವರು ಇತರ ಭಾಷೆಯವರನ್ನು ನೋಡಿಯಾದರೂ ತಮ್ಮನ್ನು ತಿದ್ದಿಕೊಳ್ಳಬೇಕು.
ಮೊಬೈಲ್/ಡಿಜಿಟಲ್ ಮಾಧ್ಯಮಗಳ ಹಾವಳಿಯಿಂದಾಗಿ ಕನ್ನಡ ಪುಸ್ತಕ, ದಿನಪತ್ರಿಕೆಗಳನ್ನು ಓದುವ ಅಭ್ಯಾಸ ದೂರವಾಗುತ್ತಿದೆ. ಹೀಗಾದರೆ ಭಾಷೆ/ಪದಗಳ ಮೇಲಿನ ಹಿಡಿತವೂ ಕೈತಪ್ಪುತ್ತದೆ. ಭಾಷೆಯ ಅವನತಿಗೆ ಇದೂ ಒಂದು ಕಾರಣ. ಆದ್ದರಿಂದ ಒಳ್ಳೆಯ ಕೃತಿಗಳನ್ನು ಓದುವ ಅಭ್ಯಾಸದಿಂದಲೂ
ಕನ್ನಡವನ್ನು ಉಳಿಸಬಹುದು. ಸರಕಾರಿ ಶಾಲೆಗಳಿಗೆ ಉಚಿತ ನೀರು ಹಾಗೂ ವಿದ್ಯುತ್ ಸೌಕರ್ಯ ನೀಡುವ ಘೋಷಣೆ ರಾಜ್ಯದ ಮುಖ್ಯಮಂತ್ರಿಗಳಿಂದ
ಹೊಮ್ಮಿದೆ. ಆದರೆ, ಇಂದು ಎಷ್ಟೋ ಸರಕಾರಿ ಶಾಲೆಗಳಿಗೆ ಒಳ್ಳೆಯ ಕಟ್ಟಡ, ಮೂಲಭೂತ ಸೌಕರ್ಯ, ನುರಿತ ಬೋಧಕರಿಲ್ಲ.
ಗ್ರಾಮೀಣ ಭಾಗದಲ್ಲಿನ ಮಕ್ಕಳು ತಾವಿರುವ ನೆಲೆಯಿಂದ ಶಾಲೆಯನ್ನು ತಲುಪುವುದಕ್ಕೇ ಹರಸಾಹಸ ಪಡಬೇಕು. ಈ ಎಲ್ಲಾ ಸಮಸ್ಯೆಗಳ ನಿವಾರಣೆ ಯೆಡೆಗೆ ಸರಕಾರ ಗಮನಹರಿಸಿದರೆ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ನಮ್ಮ ತಾಯಿಯನ್ನು ಪ್ರೀತ್ಯಾದರಗಳಿಂದ ಕಾಣುವಂತೆಯೇ ಕನ್ನಡ ನಾಡು-ನುಡಿಯನ್ನೂ ಕಾಣಬೇಕು. ನಮ್ಮೆಲ್ಲರ ಕನ್ನಡಪ್ರೇಮ ಬರೀ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷದ ಎಲ್ಲಾ
ದಿನಗಳಲ್ಲೂ ಅರಳುವಂತಾಗಲಿ. ಅನಂತ ಕಾಲ ಕಳೆದರೂ, ಕನ್ನಡ ಇರಲಿ ಜೀವಂತ.
(ಲೇಖಕರು ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ
ಪ್ರೂಫ್ ರೀಡರ್)