Wednesday, 6th November 2024

ಹೊಲದ ಬದುಗಳಿಗೆ ಕಲ್ಲು ಎಸೆಯಿರಿ ಎಂದಿದ್ದೆ

ಮಿಶ್ರಾ ಕೃಷಿ

ಕವಿತಾ ಮಿಶ್ರಾ

mishraformkvt@gmail.com

ಸರಕಾರದ ನೀತಿಗಳು, ಕೃಷಿ ಮತ್ತು ಜನರ ಬದುಕು, ಅಲ್ಲಿನ ಶಿಕ್ಷಣ ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡಿದ್ದೆ. ಸರಕಾರಿ ಕಾರ್ಯಕ್ರಮ ಗಳಿಗೆ ಹೋಗುವ ಮುನ್ನ ಹೆಚ್ಚಿನ ಅಧ್ಯಯನವನ್ನು ಮಾಡಿಕೊಂಡು ಹೋಗುವುದು ಅನಿವಾರ್ಯ. ಪ್ರತಿಯೊಬ್ಬರೂ ಇದನ್ನು ಮಾಡಬೇಕು.

ಜಗತ್ತು ಅದೆಷ್ಟು ಸುಂದರ! ಪ್ರತಿ ಊರಿಗೂ ಒಂದೊಂದು ವಿಶೇಷ ಹೆಸರು, ಪ್ರತಿ ಊರಿನ ಜನರ ಉಡುಗೆ ತೊಡುಗೆ, ಆಹಾರ ಪದ್ಧತಿ, ಅಲ್ಲಿನ ಕೃಷಿ ಬೆಳೆ,
ನಾಗರೀಕತೆ, ಆಹಾ… ಅದನ್ನ ವರ್ಣಿಸೋಕೆ ಹೋದ್ರೆ ತರ್ಕಕ್ಕೇ ನಾಚಿಕೆಯಾಗಿಬಿಡಬಹುದು.

ಅದರಲ್ಲೂ ಗಂಧದ ನಾಡು ಕರ್ನಾಟಕ ದೇಶಸುಂದರಿ. ಊಹುಂ ಇವಳು ಜಗತ್ಸುಂದರಿ.. ಇಲ್ಲ ಇವಳು ತ್ರಿಲೋಕ ಸುಂದರಿಯೇ ಆಗಿರಬಹುದು. ಧಾರವಾಡದಲ್ಲಿ ನಿಂತು ಕಲ್ಲೆಸೆದರೆ ಆ ಕಲ್ಲು ಯಾವುದೋ ಒಬ್ಬ ಸಾಹಿತಿಯ ಮನೆಯ ಮೇಲೋ ಅಥವಾ ಯಾವುದೋ ಕಲಾಕಾರನ ಮನೆಯ ಮೇಲೋ ಬೀಳುತ್ತೆ ಅಂತ ನಮ್ಮ ಹಿರಿಯರು ಹೇಳುತ್ತಿದ್ದರು. ಹಾಗಾಗಿ ಧಾರವಾಡವನ್ನ ವಿದ್ಯಾಕಾಶಿ ಅಂತಲೇ ಹೇಳೋದು ವಾಡಿಕೆ. ವಿಶಾಲವಾದ ರಸ್ತೆಗಳು, ಧೋತಿ-ಟೋಪಿ, ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಮರಗಳು, ಶಕೆಯಲ್ಲಿಯೂ ಕೆಲವೊಮ್ಮೆ ತುಂತುರು ಮಳೆ ತರಿಸಿ ಎಂತಹಾ ಭಾವನೆಯನ್ನೂ ಮತ್ತೆ ಪುಟಿದೇಳಿಸುವ ಅದ್ಭುತ ಭಾವ, ಮನಸ್ಸಿನ ತುಮುಲಗಳನ್ನು ಅರ್ಥ ಮಾಡಿಕೊಳ್ಳುವ ಜನತೆ, ಬಾಯಲ್ಲಿ ಎಲೆ ಅಡಿಕೆ, ಕೈಯಲ್ಲೊಂದು ಕೊಡೆ ಹಿಡಿದು ನಡೆದುಕೊಂಡು ಹೋಗುವ ಜವಾರಿ ಜನರ ನಾಡು ನನ್ನೂರು ಧಾರವಾಡ.

ಮೂಲತಃ ಕೃಷಿ ಹಿನ್ನೆಲೆಯನ್ನು ಹೊಂದಿದ ಕೃಷಿ ಕುಟುಂಬ. ಅಜ್ಜ ಎಸ್.ವಿ ಅಗ್ನಿಹೋತ್ರಿ. ಧಾರವಾಡ ವಿಧಾನ ಸಭಾ ಕ್ಷೇತ್ರದಿಂದ ಅದಾಗಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆಗಿನ ದಿನಗಳಲ್ಲಿ ಮನೆ ಯೆಂದರೆ ಈಗಿನಂತೆ ಕೇವಲ ಅಪ್ಪ ಅಮ್ಮ ಸಂಗಡ ಒಬ್ಬರು ಅಥವಾ ಇಬ್ಬರು ಮಕ್ಕಳು ಇರುತ್ತಿರಲಿಲ್ಲ. ಆಗಿನ ಸಂಭ್ರಮವೇ ಬೇರೆ. ನಮ್ಮ ಮನೆಯಲ್ಲಿ ಸುಮಾರು 30 ಸದಸ್ಯರಿದ್ದರೂ ಯಾವತ್ತೂ ಅಲ್ಲಿ ಬೇಧಭಾವ ವಾಗುತ್ತಿರಲಿಲ್ಲ. ಯಾವತ್ತೂ ಮನಸ್ತಾಪ ಗಳಿಗೆ ಆಸ್ಪದವಿರಲಿಲ್ಲ. ಆ ಮನೆಯ ಸೊಸೆಯಂದಿರು ಹಲವಾರು ರಾಜ್ಯಗಳಿಂದ ಬಂದವರಾದ್ದರಿಂದ ಅದೊಂದು ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ತಾಣ ವಾಗಿತ್ತು.

ಕನ್ನಡ, ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಭಾಷೆಗಳು ಮನೆಯಲ್ಲಿ ಝೇಂಕಾರಗೊಳ್ಳುತ್ತಿತ್ತು. ಅಜ್ಜ ಮಹಾರಾಷ್ಟ್ರದವರಾದ್ದರಿಂದ ಮರಾಠಿ ಭಾಷೆಯ ಸೊಗಡೂ ಅಲ್ಲಿತ್ತು. ಎಲ್ಲೋ ಒಂದೆಡೆ ನಾನು ಬಹುಭಾಷೆ ಯನ್ನು ಮಾತನಾಡುವುದಕ್ಕೂ ಕಾರಣ ಇದೇ ಇರ ಬಹುದು. ಎಷ್ಟೋ ಮನೆಗಳಲ್ಲಿ ಒಬ್ಬರ ಮುಖವನ್ನು ಒಬ್ಬರು
ನೋಡದ ವಾತಾವರಣ ಸೃಷ್ಟಿಯಾಗಿರುತ್ತೆ ಆದ್ರೆ ನಮ್ಮ ಕುಟುಂಬ ಮಾತ್ರ ಯಾವತ್ತೂ ಅಂತಹ ಘಟನೆಗೆ ಮುಖ ಮಾಡಲಿಲ್ಲ. ಒಬ್ಬರ ಬೆನ್ನನ್ನೂ ಒಬ್ಬರು ನೋಡ ಲಿಲ್ಲ. ಹಲವು ತಜ್ಞರ ಪ್ರಕಾರ ಮನೆಯಲ್ಲಿ ಯಾವ ಭಾಷೆಯನ್ನು ಮಾತನಾಡುತ್ತಾರೋ ಅದೇ ಭಾಷೆಯನ್ನು ಮಗು ಕಲಿಯುತ್ತೆ, ನನ್ನ ಬಾಳಿನಲ್ಲಿ ಅದು ನಿಜವಿರ ಬಹುದು.

ಚಿಕ್ಕವಳಿದ್ದಾಗ ಶಾಲೆಗೆ ರಜಾ ದಿನವಿದ್ದರೆ ಚಿಕ್ಕಪ್ಪ ಪ್ರತಾಪ್ ಅಗ್ನಿಹೋತ್ರಿಯ ಜತೆ ಹೊಲಗಳಿಗೆ ಹೋಗುವುದು ನನ್ನ ಅಭ್ಯಾಸ. ಅರೆಮಲೆನಾಡಾದ್ದರಿಂದ ನಮ್ಮ ಪ್ರಮುಖ ಬೆಳೆ ಆಲೂಗಡ್ಡೆ, ಮೆಣಸಿನಕಾಯಿ, ಕಡಲೆ ಮತ್ತು ಶೇಂಗಾವಾಗಿತ್ತು. ನನಗೇನು ಚಿಕ್ಕವಳಿದ್ದಾಗಿನಿಂದಲೇ ಕೃಷಿಯ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದಿಲ್ಲ, ಆದ್ರೆ ಕೃಷಿಕ ಕುಟುಂಬಗಳು ಎದುರಿಸುವ ಕಷ್ಟ ನಷ್ಟಗಳು, ಆಗುತ್ತಿದ್ದ ತೊಂದರೆಗಳ ಬಗ್ಗೆ ಆಗಾಗ ಮನೆಯಲ್ಲಿ ಚರ್ಚೆಗಳು ನಡೆಯುತ್ತಿದ್ದ ಪರಿಣಾಮ ರೈತಾಪಿ
ಕುಟುಂಬದ ತೊಂದರೆಗಳ ಅರಿವು ನನಗಿತ್ತು.

ನಮ್ಮ ಮನೆಯಲ್ಲಿ ಎಲ್ಲಾ ಮಕ್ಕಳೂ ಆಂಗ್ಲಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ರೆ ನಾನು ಮಾತ್ರ ಪ್ರೆಸೆಂಟೇಶನ್ ಹೆಸರಿನ ಕನ್ನಡ ಮಾಧ್ಯಮಕ್ಕೆ ದಾಖಲಾಗಿದ್ದೆ. ಎಲ್ಲರ ಜೀವನದಲ್ಲೂ ಒಬ್ಬರು ನೆಚ್ಚಿನ ಶಿಕ್ಷಕರು ಇದ್ದೇ ಇರುತ್ತಾರೆ. ಅಲ್ಲಿ ನನ್ನ ಮೆಚ್ಚಿನ ಶಿಕ್ಷಕಿಯಾಗಿದ್ದವರು ಸವರಿನ್, ಮಕ್ಕಳ ಭವಿಷ್ಯವನ್ನು ರೂಪಿಸುವ ಅದ್ಭುತ ಕಲೆಯಿದ್ದ ಶಿಕ್ಷಕಿ ಆಕೆ. ನನ್ನ ಜೀವನದ ಮಹಾನ್ ಗುರು ಅಂತ ಹೇಳಿದ್ರೂ ಬಹುಷಃ ತಪ್ಪಾಗಲಾರದೇನೋ!.ಇಂದು ನಾನು ಈ ಸ್ಥಾನದಲ್ಲಿದ್ದೀನಿ ಅಂದ್ರೆ ಅದಕ್ಕೆ ಕಾರಣ ಸವರಿನ್. ಆ ಗುರುವಿನ ಪ್ರೇರಣೆಗೆ ನನ್ನದೊಂದು ಸಲಾಂ!.

ಆಂಧ್ರ ಪ್ರದೇಶದ ನೂಜಿವೀಡು ಒಂದು ಸುಂದರವಾದ ಪ್ರದೇಶ. ಅಲ್ಲಿ ಸುಮಾರು 40 ಕಿಲೋಮೀಟರ್ ಅಂತರದಲ್ಲಿ ವಿಜಯವಾಡ. ಇವೆರಡು ಪ್ರದೇಶದ ಮಧ್ಯೆ ಸ್ಯಾಂಡಲ್ ವ್ಯಾಲಿ. ಸುಮಾರು 100 ಎಕರೆ ಪ್ರದೇಶದಲ್ಲಿ ಶ್ರೀಗಂಧವನ್ನು ಬೆಳೇಸಬೇಕೆಂದು ನಿರ್ಧಾರ ಮಾಡಿ ಹನ್ನರಡು ಅಡಿ ಅಂತರದಲ್ಲಿ ಶ್ರೀಗಂಧದ
ಗಿಡಗಳನ್ನು ನೆಡಲು ಆ ಜಾಗದ ಮಾಲೀಕರಾದ ಸಾಯಿರಾಂ ಅವರಿಗೆ ಮಾಹಿತಿ ನೀಡಿದ್ದೆ.

ಸಾಮಾನ್ಯವಾಗಿ ಈ ಪ್ರದೇಶಕ್ಕೆ ನಾಲ್ಕು ವರ್ಷಗಳಿಗೊಮ್ಮೆ ಭೇಟಿ ನೀಡಿ ಮಾರ್ಗದರ್ಶನ ಮಾಡಿ ಬರುತ್ತಿದ್ದೇನೆ. ಪೃಕೃತಿಯ ಮಡಿಲಿನಲ್ಲಿ ಮನಮೋಹಕವಾಗಿ ಕಾಣುವ ಈ ಪ್ರದೇಶದಲ್ಲಿ ವಾಸ ಮಾಡುವುದೇ ಒಂದು ಆನಂದ. ಎಲ್ಲಾ ಚಿಂತೆಗಳನ್ನೂ ಮರೆತು ಹಾಯಾಗಿ ವಿಶ್ರಾಂತಿ ಮಾಡುವುದಕ್ಕೂ ಇದೊಂದು ಸುಂದರ ತಾಣ. ಈ ಭಾಗದಲ್ಲಿ ನಿವೇಶನಗಳನ್ನು ಖರೀದಿಸುವವರಿಗೆ 14ರಿಂದ 16 ಶ್ರೀಗಂಧದ ಮರಗಳ ಲಾಭವಿರುತ್ತೆ. ನಿವೇಶನವನ್ನು ಖರೀದಿಸಿದ 15 ವರ್ಷಕ್ಕೆ ಕೇವಲ ಶ್ರೀಗಂಧದಿಂದ 5 ರಿಂದ 16 ಲಕ್ಷದ ಆದಾಯ ಫಲಾನುಭವಿಗಳದ್ದಾಗಿರುತ್ತೆ. ಹಾಗಂತ ಈ ಭಾಗದಲ್ಲಿ ಶ್ರೀಗಂದ ಇದೆ ಅಂತ ಹೆಚ್ಚಿನ ಹಣವೇನೂ ಇಲ್ಲ. ಶ್ರೀಗಂಧ ವನ್ನು ಬೆಳೆಸುವ ಒಂದು ಶುದ್ಧ ಉದ್ದೇಶವಷ್ಟೆ.

ಭೂಲೋಕದ ಸ್ವರ್ಗ ಅಂತ ಜಮ್ಮು ಕಾಶ್ಮೀರವನ್ನು ಕರೆದರೂ ಯಾವುದೇ ಉತ್ಪ್ರೇಕ್ಷಿಯಿಲ್ಲ. ಗಗನಚುಂಬಿ ಪರ್ವತಗಳು, ಸುಂದರವಾಗಿ ಕಾಣುವ ಹಿಮಾಚ್ಛಾದಿತ
ಪ್ರದೇಶಗಳು, ಕಣಿವೆಗಳ ನಡುವೆ ಧುಮ್ಮಿಕ್ಕಿ ಹರಿವ ಝರಿಗಳು, ವಿಶಾಲವಾದ ದಾಲ್ ಸರೋವರ ಕಣ್ಣುಗಳಿಗೆ ಹಬ್ಬವನ್ನೆ ಉಂಟುಮಾಡುತ್ತೆ. ಲೋಕಸಭಾಧ್ಯಕ್ಷರ ಕಾರ್ಯಲಯ ನವದೆಹಲಿಯಿಂದ ಡಾ.ಸೀಮಾ ಕೌಲ್ ಸಿಂಗ್ ಹೆಸರಿನ ಐ.ಎ.ಎಸ್ ಅಧಿಕಾರಿ ಅ.31ರಂದು, ಲೀಡರ್‌ಶಿಪ್ ಆಫ್ ಪಂಚಾಯತ್ : ಸೋಶಿಯಲ್ ಚೇಂಜ್, ಎಕಾನಾಮಿಕ್ ಡೆವೆಲಪ್ ಮೆಂಂಟ್ ಎಂಡ್ ಡೆವೆಲಪ್‌ಮೆಂಟ್ ಆಫ್ ವುಮನ್‘ ಕಾರ್ಯಕ್ರಮವನ್ನು ಶ್ರೀನಗರದಲ್ಲಿ ಆಯೋಜಿಸಿ, ‘ತಮ್ಮನ್ನು ಮಧ್ಯ ಲೋಕಸಭಾ ಅಧ್ಯಕ್ಷರು ಆಯ್ಕೆ ಮಾಡಿದ್ದು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ದೇಶಿಸಿದ್ದಾರೆಂದು ತಿಳಿಸಿದ್ದರು.

ಪಿ.ಆರ್.ಈ.ಡಿ.ಇ ಸಂಸ್ಥೆಯ ವತಿಯಿಂದ ಶ್ರೀನಗರದಲ್ಲಿ ಚುನಾಯಿತ ಪಂಚಾಯಿತ ಸದಸ್ಯರಿಂದ ಲೋಕಸಭಾ ಸದಸ್ಯರವರೆಗೆ ಅಲ್ಲಿನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಎರಡು ದಿನ ಮುನ್ನವೇ ಆ ಜಾಗಕ್ಕೆ ಹೋಗಿ ನನ್ನ ಸಹಾಯಕನಾಗಿದ್ದ ಜಾನ್ ಮೊಹಮ್ಮದ್‌ರಿಂದ ಅಲ್ಲಿನ ಸ್ಥಿತಿಗತಿ, ಸರಕಾರದ
ನೀತಿಗಳು, ಕೃಷಿ ಮತ್ತು ಜನರ ಬದುಕು, ಅಲ್ಲಿನ ಶಿಕ್ಷಣ ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡಿದ್ದೆ.

ಇಂತಹಾ ಉನ್ನತಮಟ್ಟದ ಸರಕಾರಿ ಕಾರ್ಯಕ್ರಮಗಳಿಗೆ ಹೋಗುವ ಮುನ್ನ ಹೆಚ್ಚಿನ ಅಧ್ಯಯನವನ್ನು ಮಾಡಿಕೊಂಡು ಹೋಗುವುದು ಅನಿವಾರ್ಯ. ಪ್ರತಿ ಯೊಬ್ಬರೂ ಇದನ್ನು ಮಾಡಬೇಕು ಅನ್ನೋದು ನನ್ನ ಸಲಹೆ. ಅದರಂತೆಯೇ ನಾನೂ ಅಧ್ಯಯನವನ್ನು ಮಾಡಿಕೊಂಡಿದ್ದೆ. ಅ.೩೧ರಂದು ಉಪನ್ಯಾಸವನ್ನು
ನೀಡಿದಾಗ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ತುಂಬಾ ಚೆನ್ನಾಗಿ ಮಾತನಾಡಿದ್ದೀರೆಂದು ಹೇಳಿದಾಗ ತುಂಬಾ ಸಂತೋಷವಾಗಿತ್ತು.
ಉಪನ್ಯಾಸವನ್ನು ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಂತೆ ಸುಮಾರು 10ರಿಂದ 15 ಜನರ ಗುಂಪೊಂದು ನನ್ನ ಬಳಿ ಬಂದು, “ ನಮ್ಮ ಆರ್ಥಿಕ ಸಮಸ್ಯೆ ಸುಧಾರಿಸೋದಕ್ಕೆ ಏನು ಮಾಡಬೇಕು”ಅಂತ ಪ್ರಶ್ನಿಸಿದಾಗ, “ಸೈನಿಕರಿಗೆ ಕಲ್ಲು ಎಸೆಯುವ ಕಲ್ಲುಗಳನ್ನು ನಿಮ್ಮ ಹೊಲಗಳ ಬದುಗಳಿಗೆ ಎಸೆಯಿರಿ ಅದರಿಂದ ನಿಮ್ಮ ಬಾಳು ಹಸನಾದೀತು”ಎಂದಿದ್ದೆ.

ಅದೇ ದಿನ ರಾತ್ರಿ ಜಮ್ಮು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹ ರಾಜಭವನಕ್ಕೆ ಡಿನ್ನರ್‌ಗಾಗಿ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆಂದು ತಿಳಿದು, ಆ ಜಾಗಕ್ಕೆ ಹೋದಾಗ ರಾಜ್ಯಪಾಲರು ಆತ್ಮೀಯವಾಗಿ ಮಾತನಾಡಿ, “ನಿಮ್ಮ ಮಾತುಗಳು ಪ್ರೇರಣಾದಾಯಕವಾಗಿದ್ದವು. ತಾವು ಕರ್ನಾಟಕದ ಹೆಮ್ಮೆಯ ಪುತ್ರಿ” ಎಂದಾಹ ಹೃದಯ ತುಂಬಿತ್ತು, ಮಾತು ಮೌನವಾಗಿತ್ತು, ಒಂದು ವಿಶೇಷವಾದ ಅನುಭೂತಿಯ ಪರಿಚಯವಾಗಿತ್ತು ಅನ್ನುವುದರಲ್ಲಿ ನಿಸ್ಸಂಶಯ.

‘ಅದೇನು ಮಣ್ಣಿಗೆ ಸಮ’ ಅಂತ ಅನೇಕರು ಹೇಳುತ್ತಾರೆ ಆದ್ರೆ ಅದೇ ಮಣ್ಣು ಇಂದು ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ ಅಂತ ವಿಚಾರ ಮಾಡುವಾಗ ಹೆಮ್ಮೆಯ ಕದ ತಟ್ಟಿತ್ತು. ಮರುದಿನ ಅಲ್ಲಿಂದ ವಿಮಾನವನ್ನೇರಿ ತ್ರಿಪುರ ಸುಂದರಿ ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದ್ದೆ. ಮಕ್ಕಳು ಮಣ್ಣಿನಕಲ್ಲಿ ಆಟವಾಡುತ್ತಿದ್ದಾರೆ ಅಂದ್ರೆ ಪಾಲಕರೇ ಅವರನ್ನು ಎಳೆದು ತರುತ್ತಾರೆ.

ಅವರಿಗೆ ಮಣ್ಣೆಂದರೆ ಗಲೀಜು, ಮಣ್ಣಿನಿಂದ ರೋಗಗಳು ಬರಬಹುದೆನ್ನುವ ಭಯ. ಇದೇ ಭೂಮಿತಾಯಿಯ ವಕ್ಷಸ್ಥಳದಲ್ಲಿ ಬೆಳೆಯುವ ನಾವು ಆಕೆಯನ್ನೇ ಕೊಳಕು ಅಂತ ಹೇಳುತ್ತೇವೆ! ಅದೆಷ್ಟರಮಟ್ಟಿಗೆ ಸರಿ ಅನ್ನೋದನ್ನ ಇಂದಿನ ಜನತೆ ಅರ್ಥ ಮಾಡಿಕೊಳ್ಳಬೇಕಿದೆ. ಹೌದು… ನಗರ- ಪಟ್ಟಣ ಪ್ರದೇಶಗಳಲ್ಲಿ ನಮ್ಮದೇ ತಪ್ಪಿ ನಿಂದ ಭೂಮಿ ಇಂದು ಮಲಿನವಾಗುತ್ತಿದೆ. ಆದರೆ ಹಳ್ಳಿಗಳಿಗೆ ಹೋದಾಗಲಾದರೂ ಅಲ್ಲಿನ ಮಣ್ಣಿನಲ್ಲಿ ಮಕ್ಕಳನ್ನು ಆಟವಾಡಲು ಬಿಡೋದ್ರಿಂದ ಭೂಮಿ ಮತ್ತು ಮಕ್ಕಳ ಸಂಬಂಧ ಇನ್ನೂ ಹೆಚ್ಚುತ್ತೆ. ಹೋಟೆಲ್‌ಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ವಿಧವಿಧವಾದ ಖಾದ್ಯಗಳು ಇದೇ ಮಣ್ಣಿನ ಫಲದಿಂದ ದೊರೆತದ್ದೆನ್ನುವ ಸತ್ಯದ ಅರಿವು ಬರುತ್ತೆ.