Wednesday, 11th December 2024

ಹಣದ ಹಿಂದೆ ಓಡುವವರು ರೈತನ ಹಿಂದೆ ಬರಲೇಬೇಕು !

ಮಿಶ್ರಾ ಕೃಷಿ

ಕವಿತಾ ಮಿಶ್ರಾ

mishraformkvt@gmail.com

ಮೊದಲ ಬಾರಿಗೆ ಒಲ್ಲದ ಮನಸ್ಸಿನಿಂದ ಬಂದರೂ ಇಂದು ಕೃಷಿ ಬಿಟ್ಟು ಹೋಗಲು ಮನಸು ಬರುತ್ತಿಲ್ಲ. ರಾಯಚೂರಿನಲ್ಲಿ ಮುಂದಿನ ಮೂರು ವರ್ಷದಲ್ಲಿ ಕೃಷಿ ಯಲ್ಲಿ ಅದ್ಭುತ ಅನ್ವೇಷಣೆಯೊಂದಿಗೆ ಮರು ಭೇಟಿಯಾಗುತ್ತೇನೆ. ಕೆಲವೇ ತಿಂಗಳುಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರುವ ಸಂಪೂರ್ಣ ತಯಾರಿ ಯಲ್ಲಿದ್ದೇನೆ.

ಸಮಯ ಯಾರಿಗೂ, ಯಾವತ್ತೂ ಕಾದಿಲ್ಲ. ಕಾಯುವುದೂ ಇಲ್ಲ. ಇಂಥ ಸಾರ್ವತ್ರಿಕ ಸತ್ಯದ ಅರಿವು ನಮಗೆ ಇರಬೇಕಾಗುತ್ತದೆ. ಅದೊಂದು ಸುಂದರ ಕಾಲವಿತ್ತು. ಕೃಷಿ ಹಿನ್ನೆಲೆಯಿಂದ ಬಂದ ಮಕ್ಕಳು ಮೆಟ್ರಿಕ್ ಶಿಕ್ಷಣ ಮುಗಿಸಿದ್ದರೂ ಸರಕಾರೀ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಕಾರಣ ಅದು ಇನೊಬ್ಬರ ಕೆಳಗೆ ಮಾಡುವ ಕೆಲಸ! ಅಲ್ಲಿ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಾರೆ ಅನ್ನುವ ಮನೋಧೋರಣೆ ಹೆಚ್ಚಿನವರಲ್ಲಿ ಇರುತ್ತಿತ್ತು. ಹಾಗಾಗಿ ತಮ್ಮದೇ ಸ್ವಂತ ಹೊಲಗಳಲ್ಲಿ ಕೃಷಿ ಮಾಡಿ ಜೀವನ ವನ್ನು ಸಾಗಿಸುತ್ತಿದ್ದರು. ಈ ಭೂಮಿ ನಮ್ಮದು ಎನ್ನುವ ಭಾವನಾತ್ಮಕ ಜಗತ್ತು ಅಂದಿನವರದ್ದಾಗಿತ್ತು. ಈ ರೀತಿ ಅನ್ನುವುದರಲ್ಲಿ ನಿಸ್ಸಂಶಯ. ಆದರೆ ಈಗ? ದೇಶ ಅದೆಷ್ಟೇ ಅಭಿವೃದ್ಧಿಯನ್ನು ಹೊಂದುತ್ತಿರಬಹುದು, ಆದರೆ ಜನರ ಜೀವನ!? ನೀವೇ ಒಮ್ಮೆ ಬೆಂಗಳೂರಿನಂತಹಾ ಪಟ್ಟಣಗಳ ಬೀದಿಯ ಪಕ್ಕದಲ್ಲಿ ನಿಂತು ನೋಡಿ, ಎರಡು ದಿನಗಳ ಕಾಲ ಮೂಗಿನಿಂದ ವಾಸನೆ ಹೋಗುವುದಿಲ್ಲ.

ಇಂದು ನಾವು ಪಟ್ಟಣಗಳಲ್ಲಿ ನಿಂತು ವಾಸನೆ ಅಂತ ಹೆಳುತ್ತಿರುವ ಪ್ರದೇಶಗಳೂ ಹಿಂದೊಂದು ಕಾಲದಲ್ಲಿ ಸಮೃದ್ಧ ಕೃಷಿ ಭೂಮಿಯಾಗಿತ್ತು ಅನ್ನುವ ಸತ್ಯವನ್ನು ನಾವು ಮರೆಯುತ್ತ ಬಂದಿದ್ದೇವೆ. ಈಗಿನ ಜನರಿಗೆ ಹೊಟ್ಟೆಗೆ ಅನ್ನ ಎಲ್ಲಿಂದ ಬರುತ್ತಿದೆ! ಅನ್ನುವ ಅರಿವೂ ಬೇಕಂತಿಲ್ಲ… ಬೇಕಿರುವುದು ಕೇವಲ ಹಣ… ಅದೇ
ಹಣ ಕೃಷಿಯಲ್ಲಿ ಸಂಪಾದಿಸಬಹುದು ಎನ್ನುವ ಸತ್ಯವನ್ನು ಕೆಲವರು ಮರೆಯುತ್ತಿರುವುದು ವಿಪರ್ಯಾಸ.

ಆ ಯುವಕನಿಗೆ ಮದುವೆಯಾಗುವವವರೆಗೆ ಅವನ ತಂದೆ- ತಾಯಂದಿರು ಮುದ್ದು ಮಾಡಿ, ಎಲ್ಲ ಪಾಲಕರಂತೆ ತಮ್ಮ ಸರ್ವಸ್ವವೇ ಆತನೆಂದು ತಿಳಿದು ಸಲಹಿ ಉತ್ತಮ ವಿದ್ಯೆಯನ್ನೂ ಕೊಡಿಸಿದ್ದರು. ಕಾಲಚಕ್ರ ತಿರುಗುತ್ತಿರುವಂತೆ ಆತನಿಗೆ ಒಳ್ಳೆಯ ಕೆಲಸವೂ ದೊರೆತು ಷಹರಕ್ಕೆ ಹೋಗಿ ಹೆಂಡತಿಯೊಂದಿಗೆ ತನ್ನ ಜೀವನವನ್ನು ಪ್ರಾರಂಭಿಸಿದ್ದ. ಆತನ ತಾಯಿ ಕಾರಣಾಂತರದಿಂದ ಮರಣ ಹೊಂದಿದ್ದಳು. ಆ ಹಳ್ಳಿಯಲ್ಲೀಗ ಬಡ ತಂದೆ ಮಾತ್ರ. ಏನು ಮಾಡಿಯಾನು ವಯಸ್ಸಾದ ತಂದೆ? ಮಗರಾಯ ತನ್ನ ತಂದೆಗೆ ಕರೆ ಮಾಡಿ, ‘ಅಪ್ಪಾ, ಮನೆಯಲ್ಲಿ ಹೇಗಿದ್ದರೂ ನೀನೊಬ್ಬನೇ ಇದ್ದೀಯ, ನಿನಗೂ ಅಲ್ಲಿ ಕಷ್ಟವಾಗುತ್ತಿದೆ.

ಒಂದು ಕೆಲಸ ಮಾಡು, ಜಮೀನನ್ನು ಯಾರಿಗಾದರೂ ಮಾರಿ ನೀನೂ ನಮ್ಮ ಜತೆ ಇದ್ದುಬಿಡು’ ಅಂತ ಹೇಳುತ್ತಾನೆ. ಇದನ್ನು ಕೇಳಿದ ತಂದೆ ಜಮೀನನ್ನು ಮಾರಿ ಮಗನಿದ್ದಲ್ಲಿ ಹೋದ. ಆದರೆ ಆದದ್ದೇ ಬೇರೆ, ಮಗರಾಯ ಜಮೀನನ್ನು ಮಾರಿದ್ದ ಹಣವನ್ನು ತನ್ನಲ್ಲಿ ಇರಿಸಿಕೊಂಡು ತಂದೆಯನ್ನು ಓಡಿಸಿಬಿಟ್ಟ. ಈಗ ಜಮೀನು
ಮಾರಿದ್ದ ಆ ತಂದೆ ಬೇರೆಯವರ ಜಮೀನಿಗೆ ಕೂಲಿಗೆ ಹೋಗುತ್ತಿರುವುದು ಸಂಕಟವನ್ನುಂಟು ಮಾಡುತ್ತದೆ.

ಕಷ್ಟಗಳ ಸರಮಾಲೆಯೇ ನಿಮ್ಮದಾದರೂ ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳು ಹೇಳುತ್ತಾ ರೆಂದೋ ಅಥವಾ ಇನ್ನು ಯರೋ ಹೇಳುತ್ತಾರೆಂದೋ ನಿಮ್ಮ ಜಮೀನನ್ನು ಮಾರುವ ಕಾರ್ಯಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳಬೇಡಿ. ಇಂದು ನಿಮ್ಮ ಒಂದು ಎಕರೆ ಕೃಷಿ ಭೂಮಿಗೆ ಒಂದು ಕೋಟಿಯೂ ಸಿಕ್ಕು ಆ ಭೂಮಿಯ ಮೇಲೆ ಅಪಾರ್ಟ್‌ಮೆಂಟುಗಳು ಏಳಬಹುದು. ನೆನಪಿಡಿ, ಮುಂದೊಂದು ದಿನ ಮತ್ತೆ ಊಟಕ್ಕೆ ಹಾಹಾಕಾರ ಎದ್ದಾಗ ಜನರು ಹುಡುಕುವುದು ಕೃಷಿ ಭೂಮಿಯನ್ನೇ… ಇಂದು ದುಡ್ಡಿನ ಹಿಂದೆ ಓಡುತ್ತಿರುವವರು ಮುಂದೆ ಊಟಕ್ಕಾಗಿ ರೈತನ ಹಿಂದೆ ಓಡಿ ಬರುತ್ತಾರೆ. ಆಗ ಹಸಿದವರಿಗೆ ಅನ್ನ ಹಾಕುವವರು ನಾವೇ ಆಗಿರುತ್ತೇವೆ
ಅನ್ನುವುದನ್ನು ರೈತರು ಅರಿಯಬೇಕಿದೆ.

ಒಂದು ಸಂತೋಷದ ವಿಚಾರವೆಂದರೆ ಈಗಿನ ಯುವಕರಿಗೆ ಕೃಷಿಯ ಬಗ್ಗೆ ಆಸಕ್ತಿ ಮೂಡುತ್ತಿದೆ ಮತ್ತು ಕೃಷಿಯಲ್ಲಿಯೇ ಅನೇಕ ಆಷ್ಕಾರಗಳನ್ನು ಮಾಡುತ್ತಿದ್ದಾರೆ.
‘ಕೋಟಿ ವಿದ್ಯೆಗಿಂತಲೂ ಮೇಟಿ ವಿದ್ಯೆ ಮೇಲು’ ಎನ್ನುವ ಗಾದೆ ಮಾತನ್ನು ನಾವು ಚಿಕ್ಕವರಿದ್ದಾಗ ಶಾಲೆಗಳಲ್ಲಿ ಹೇಳುತ್ತಿದ್ದವು. ಆಗ ನಮಗದು ಕೇವಲ ಒಂದು ಗಾದೆ ಮಾತಾಗಿತ್ತು. ಆದರೆ ಅದರ ಅರ್ಥ ತಿಳಿದಿರಲಿಲ್ಲ. ನಾನು ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ನಂತರವೇ ಆ ಗಾದೆ ಮಾತಿನ ಅರ್ಥ ಅರಿವಿಗೆ ಬಂತು. ನಂತರ ಅದೇ ಗಾದೆ ಮಾತನ್ನು ಸಂಸ್ಕರಿಸಿ ‘ಮೇಟಿ ವಿದ್ಯೆಗಾಗಿ ಕೋಟಿ ವಿದ್ಯೆ ಬೇಕು’ ಎನ್ನುವ ಸತ್ಯ ಅರಿವಿಗೆ ಬಂದಿತ್ತು. ಸುಸ್ಥಿರ ಹಾಗೂ ಸುಧಾರಿತ ಕೃಷಿಗಾಗಿ ವಿದ್ಯೆ ಬೇಕೇ ಬೇಕು. ಬಹುತೇಕ ರೈತರು ಈಗ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಿ ಕೃಷಿಯನ್ನು ಮಾಡಿಸುತ್ತಿದ್ದಾರೆ.

ಶಿಕ್ಷಣದೊಂದಿಗೆ ರೈತನಾದವನು ಸ್ವಾವಲಂಬಿಯಾಗಿರುತ್ತಾನೆ. ಸ್ವತಂತ್ರವಾಗಿ ಕಾರ್ಯ ನಿರ್ವಸುತ್ತಾನೆ. ಹಲವು ಹೊಸ ಹೊಸ ತಾಂತ್ರಿಕತೆಯನ್ನು ಅಳವಡಿಸಿ ಕೊಳ್ಳುತ್ತಾನೆ. ಇಳುವರಿಯಲ್ಲಿ ಬಹಳಷ್ಟು ಸುಧಾರಣೆ ಕಂಡುಕೊಳ್ಳುತ್ತಾನೆ. ಇಂತಹಾ ಹಲವು ಉದಾಹರಣೆಗಳನ್ನು ದೇಶದ ತುಂಬಾ ಸಂಚರಿಸುವಾಗ
ಕಂಡುಕೊಂಡಿದ್ದೇನೆ. ಮಧ್ಯ ಪ್ರದೇಶದ ಝಾನ್ಸಿಯಲ್ಲಿ ಮೋಹನ್ ಲಾಲ್ ಹೆಸರಿನ ರೈತ ಒಂದೇ ಒಂದು ದೇಶೀ ಹಸುನಿಂದ ನಾಲ್ಕು ಎಕರೆಯಲ್ಲಿ ತರಕಾರಿ ಬೆಳೆಯುತ್ತಿದ್ದ. ಶಿವಪುರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಆತ ತನ್ನ ತೋಟದ ಮುಂದೆ ಕಬ್ಬಿನ ಹಾಲನ್ನು ಮಾರುತ್ತಿದ್ದ. ಕಬ್ಬುಗಳನ್ನು ಅರ್ಧ ಎಕರೆ ಪ್ರದೇಶ
ದಲ್ಲಿ ತಾನೇ ಬೆಳೆಯುತ್ತಿದ್ದ. ಅದನ್ನೇ ಮೌಲ್ಯವರ್ಧನೆ ಮಾಡಿ ಕಬ್ಬಿನಿಂದ ಹಾಲನ್ನು ಬೇರ್ಪಡಿಸಿ ಮಾರುತ್ತಿದ್ದ.

ಇಡೀ ತೋಟಕ್ಕೆ ಒಂದೇ ಹಸುವಿನ ಸಗಣಿ- ಗಂಜಲಗಳನ್ನು ಸಂಗ್ರಹಿಸಿ, ಕಾಲುವೆ ಮೂಲಕ ಜಮೀನಿಗೆ ಹಾಯಿಸುತ್ತಿದ್ದ. ಇದನ್ನು ಗಮನಿಸಿದ ನಾನು ‘ಬರೀ ಸಗಣಿ ನೀರನ್ನು ಹಾಯಿಸುವುದರಿಂದ ಜಮೀನಿಗೆ ಪೌಷ್ಟಿಕಾಂಶಗಳು ಅಷ್ಟೊಂದಾಗಿ ಸಿಗಲಾರದು, ಅದರ ಬದಲು ಜೀವಾಮೃತ ತಯಾರಿಸಿ ಕಾಲುವೆಯ ಮೂಲಕ ಜಮೀನಿಗೆ ಹಾಯಿಸಿ’ ಎಂದು ತಿಳಿಸಿದ್ದೆ. ಜೀವಾಮೃತ ತಯಾರಿಕೆಯ ಪದ್ಧತಿಯನ್ನು ಅವನಿಗೆ ಒಂದು ಪುಸ್ತಕದಲ್ಲಿ ಬರೆದುಕೊಟ್ಟಿದ್ದೆ. ಎರಡು ತಿಂಗಳ ನಂತರ ಆತ ಕರೆ ಮಾಡಿ, ‘ದೀದೀ, ಆಪ್ ಕಾ ಜೀವಾಮೃತ್ ಚಮತ್ಕಾರಕ್ ಹೈ’ ಎಂದು ತಿಳಿಸಿದ್ದ. ನಿಜಕ್ಕೂ ಅದು ಅದ್ಭುತ ಬದಲಾವಣೆಯನ್ನು ತಂದಿರಬೇಕು. ನಂತರ ಅವನಿಗೆ ‘ಏಕ್ ಬಲ್ತಾ ಹೈ, ಸೌ ಸುನತಾ, ಓರ್ ಕುಚ್ ಲೋಗ್ ಕರ್ತಾ ಹೈ’ ಎಂದು ಹೇಳಿದ್ದೆ. (ಒಬ್ಬರು ಹೇಳಿದ್ದನ್ನು ನೂರು ಜನ ಕೇಳುತ್ತಾರೆ, ಕೆಲವೇ ಜನರು ಅದನ್ನು ಅನುಷ್ಠಾನಕ್ಕೆ ತರುತ್ತಾರೆ.) ಸಲಹೆಯನ್ನು ಕೇಳಿದ್ದ ಅವನಿಗೆ ಒಂದೇ ಹಸುವಿನ ಸಗಣಿಯನ್ನು ವೈಜನಿಕವಾಗಿ ನಾಲ್ಕು ಎಕರೆಗೆ ದ್ರವ ರೂಪದ
ಗೊಬ್ಬರವಾಗಿ ಖರ್ಚಿಲ್ಲದೇ ಬೆಳೆ ತೆಗೆಯುವಂತಾಗಿತ್ತು.

ಸಮಗ್ರ ಕೃಷಿ ಪದ್ಧತಿಯಲ್ಲಿ ನಾನು ಇತರೆ ಎಲ್ಲ ಉಪಸುಬುಗಳ ಜತೆಯಲ್ಲಿ ಹನ್ನೆರಡು ಹಸುಗಳನ್ನು ಸಾಕಿದ್ದೆ. ಇದರಲ್ಲಿ ಹೊಂಗೋಲ, ಗೀರ್ ಹಾಗೂ ಉತ್ತರ ಕರ್ನಾಟಕದ ದೇಶೀ ತಳಿಗಳಿದ್ದವು. ತುಂಬಾ ಪ್ರೀತಿಯಿಂದ ಬೆಳೆಸಿದ ಹಸುಗಳು, ನಾವು ಎಷ್ಟೇ ಮುಂಜಗ್ರತೆಯನ್ನು ವಹಿಸಿದರೂ ಕೆಲವು ಬಾರಿ ಖಾಯಿಲೆ ಬಿದ್ದು ಮರಣ ಹೊಂದುತ್ತಿದ್ದವು. ಆಗ ನನಗೆ ತುಂಬಾ ನೋವಾಗುತ್ತಿತ್ತು. ಮನೆಯ ಸದಸ್ಯರನ್ನೇ ಕಳೆದುಕೊಂಡಂತೆ ಅನುಭವವಾಗುತ್ತಿತ್ತು. ಮರಣ ಹೊಂದಿದ ಹಸುಗಳನ್ನು ತೋಟದಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಿದ್ದೆ.

ನನ್ನ ಈ ದೀರ್ಘ ಪಯಣದಲ್ಲಿ ಹಲವು ರೀತಿಯ ಕಷ್ಟಗಳು ಎದುರಾಗಿವೆ. ಮಳೆಗಾಲದ ರಾತ್ರಿ ಸಮಯದಲ್ಲಿ ಏಕಾಏಕಿ ವಿದ್ಯುತ್ ಸ್ಥಗಿತವಾಗಿ ಕತ್ತಲೆಯಲ್ಲಿ ಕಳೆದ ಎಷ್ಟೋ ರಾತ್ರಿಗಳಿವೆ. ಸಾಯಂಕಾಲ ಬರುತ್ತೀನಿ ಅಂತ ಹೋದ ಕೆಲಸಗಾರರು ಎರಡು ದಿನಗಳಾದರೂ ಬಾರದೇ ಇರುವ ಸಂಕಷ್ಟದ ದಿನಗಳನ್ನು ಮರೆಯಲಾರೆ. ಹಲವು ಬಾರಿ ನೀರೆತ್ತುವ ಮೋಟಾರ್ ಹಾಳಾದಾಗ ದನ- ಕರುಗಳಿಗೆ, ಕುರಿಗಳಿಗೆ ನೀರುಣಿಸಲು ಹರಸಾಹಸ ಪಟ್ಟಿದ್ದೂ ಇದೆ. ‘ಯಾಕಪ್ಪಾ ಈ ಕೃಷಿ ಕ್ಷೇತ್ರವನ್ನು
ಆಯ್ಕೆ ಮಾಡಿಕೊಂಡೆ’ ಎಂದೆನಿಸಿದ್ದೂ ಉಂಟು.

ಇಡೀ ತೋಟವನ್ನು ಕಾಯುವ ನೆಚ್ಚಿನ ನಾಯಿ ಸತ್ತಾಗ ಮಗನನ್ನೇ ಕಳೆದುಕೊಂಡ ಅನುಭವಾಗಿತ್ತು. ಎರಡು ದಿನ ಊಟವನ್ನೂ ಮಾಡಿರಲಿಲ್ಲ. ನಾನು
ಸಾಕಿದ್ದ ಎಲ್ಲ ಪ್ರಾಣಿಗಳೂ ನನ್ನ ಜತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದವು. ಮೊದಲ ಬಾರಿ ನನ್ನ ಮಕ್ಕಳೂ ಇಷ್ಟೊಂದು ದುಃಖಿಸಿದ್ದು ನನ್ನ ನಾಯಿ
ಸತ್ತಾಗಲೇ… ಮೊದಲ ಬಾರಿಗೆ ಕೃಷಿ ಮಾಡಲು ಒಲ್ಲದ ಮನಸ್ಸಿನಿಂದ ಬಂದರೂ ಇಂದು ಕೃಷಿಯನ್ನು ಬಿಟ್ಟು ಹೋಗಲು ಮನಸು ಬರುತ್ತಿಲ್ಲ. ಬಿಸಿಲ ನಾಡು
ರಾಯಚೂರಿನಲ್ಲಿ ಮುಂದಿನ ಮೂರು ವರ್ಷದಲ್ಲಿ ಕೃಷಿಯಲ್ಲಿ ಅದ್ಭುತ ಅನ್ವೇಷಣೆಯೊಂದಿಗೆ ಮರು ಭೇಟಿಯಾಗುತ್ತೇನೆ.

ಹಾಗಾಗಿ ಹೊಸ ತಾಂತ್ರಿಕತೆ- ಸ ಬೆಳೆಯೊಂದಿಗೆ, ರೈತನ ಆದಾಯವನ್ನು ದ್ವಿಗುಣಗೊಳಿಸುವ ಪ್ರಯೋಗಕ್ಕೆ ಮುಂದಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರುವ ಸಂಪೂರ್ಣ ತಯಾರಿಯಲ್ಲಿದ್ದೇನೆ. ನನ್ನ ಪ್ರಯತ್ನದಲ್ಲಿ ಯಶಸ್ವಿಯಾಗುವ ಭರವಸೆಯಿದೆ. ಯಶಸ್ವಿಯಾದಾಗ ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೆ ಕಾಯಲೇಬೇಕು.

ನನ್ನ ಸುದೀರ್ಘವಾದ ಕೃಷಿಯ ಪಯಣದಲ್ಲಿ ಹಲವಾರು ಪ್ರಯೋಗಗಳನ್ನು ಮಡಿದ್ದೇನೆ. ಇದರಲ್ಲಿ ಒಂದಿಷ್ಟು ವಿಶ್ವವಿದ್ಯಾಲಯದ ವಿಜನಿಗಳ ಸಹಕಾರ, ಮಾರ್ಗದರ್ಶನವನ್ನು ಪಡೆದರೂ ಒಂದಿ ಷ್ಟನ್ನು ಸ್ವಾನುಭವದಿಂದ ಮಾಡಿದ್ದೇನೆ. ಆದರೆ, ನನ್ನ ಇಡೀ ಪಯಣದಲ್ಲಿ ಕಾಡಿದ್ದು ಕೃಷಿ ಕಾರ್ಮಿಕರ ಸಮಸ್ಯೆ. ಕೃಷಿ ಕಾರ್ಯ ಸರಳವಾಗಿ, ಸುಲಭವಾಗಿ ಮುಂದುವರೆಸಲು ನುರಿತ ಕೆಲಸಗಾರರು ಬೇಕು.

ಜತೆಗೆ ಪ್ರಾಮಾಣಿಕರಾಗಿಬೇಕು. ಇವತ್ತು ರೈತ ನಷ್ಟವನ್ನು ಹೊಂದಲು ಇವರೂ ಒಂದು ರೀತಿಯಲ್ಲಿ ಕಾರಣರೇ… ಅವರಿಗೆ ನೀಡುವ ಕೂಲಿ ಹಣವಲ್ಲ ದೆಯೆ, ಊಟ- ತಿಂಡಿ ಹಾಗೂ ಸಾಯಂಕಾಲ ನಿಭಾಯಿಸುವ ಖರ್ಚುಗಳೂ ಸೇರುತ್ತವೆ. ಇವು ರೈತರಿಗೆ ಹೊರೆಯಾಗಿವೆ. ಈ ಎಲ್ಲ ಸಮಸ್ಯೆಗಳ ನಡುವೆ ಕೃಷಿಯನ್ನು ಲಾಭದತ್ತ ಮುನ್ನೆಡೆಸುವುದು ಸವಾಲಿನ ಕಾರ್ಯವೇ ಆಗಿದೆ. ಅದನ್ನು ಸಮರ್ಪಕವಾಗಿ ನಿರ್ವಹಿಸಲಾರದಾದಾಗ ರೈತ ನಷ್ಟಕ್ಕೀಡಾಗುತ್ತಾನೆ. ಸಾಲಗಾರ ನಾಗುತ್ತಾನೆ. ಮರ್ಯಾದೆಗೆ ಅಂಜಿ ಆತ್ಮ ಹತ್ಯೆಯನ್ನೂ ಮಾಡಿಕೊಳ್ಳುವ ಕೀಳು ನಿರ್ಧಾರವನ್ನು ಮಾಡುತ್ತಾನೆ. ಈ ಎಲ್ಲ ಕಷ್ಟಗಳ ಮಧ್ಯೆ ನಾನು ಕೃಷಿಯನ್ನು
ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ. ಕೃಷಿ ಒಂದು ಕಠಿಣ ತಪಸ್ಸು. ತಕ್ಷಣದಲ್ಲಿಯೇ ಸುಖ ಸಿಗದು.

ಆದರೆ ನನ್ನ ತೋಟ ಇಂದು ನಾ ಕೇಳಿದ್ದನ್ನೆಲ್ಲ ಕೊಟ್ಟಿದೆ. ಹಣ, ಹೆಸರು, ಪ್ರಶಸ್ತಿಗಳನ್ನೆಲ್ಲವನ್ನೂ ನೀಡಿದೆ. ದೇಶದ ಉದ್ದಗಲಕ್ಕೂ ಸಂಚಾರವನ್ನು ಮಾಡಿಸಿದೆ. ಈ ದೇಶದ ಬಹುತೇಕ ರಾಜ್ಯಗಳ ವಿಶ್ವವಿದ್ಯಾಲಯಗಳು ನನ್ನನ್ನು ಕರೆದು ಮಾತನಾಡಿಸಿವೆ. ನಾನಾ ರಾಜ್ಯ ಸರಕಾರಗಳು, ಪ್ರಶಸ್ತಿಗಳ ಜತೆಗೆ ಮಾನ-ಸಮ್ಮಾನ ಗಳನ್ನು ನೀಡಿದೆ. ಪತ್ರಿಕಾ ಮಾಧ್ಯಮ, ಶ್ರವಣ ಮಾಧ್ಯಮ, ದೃಶ್ಯ ಮಾಧ್ಯಮಗಳೂ ನನ್ನ ಸಾಧನೆಯಲ್ಲಿ ಹಲವು ರೀತಿಯಾಗಿ ಸಹಾಯ ಮಾಡಿದೆ. ಈ ದೇಶದಲ್ಲಿ ಇನ್ನೂ ಲಕ್ಷಾಂತರ ಎಕರೆ ಭೂಮಿಯನ್ನು ಉಳುಮೆ ಮಾಡದೇ ಇರುವುದನ್ನು ನೋಡುತ್ತೇವೆ.

ನಮ್ಮ ಯುವಕರು ಅದನ್ನು ಸಾಗುವಳಿ ಮಾಡುವ ಗಟ್ಟಿ ಮನಸ್ಸು ಮಾಡಬೇಕು. ನಗರೀಕರಣದ ಭ್ರಮೆಂದ ಹೊರಬಂದು ಹಳ್ಳಿಗಳ ಅಭಿವೃದ್ಧಿಯತ್ತ  ಗಮನಹರಿಸಬೇಕು. ಕುರಿ, ಹೈನುಗಾರಿಕೆ ಲಾಭದಾಯಕ ಎನ್ನುವ ಸತ್ಯದ ಅರಿವು ಆಗಬೇಕಿದೆ. ಕೃಷಿಯನ್ನೊಂದು ಉದ್ಯಮವನ್ನಾಗಿಸಿಕೊಂಡು ಕೃಷಿಯಲ್ಲಿ
ಕ್ರಾಂತಿಯನ್ನು ಸಾಽಸಿದಾಗ ರೈತರು ಆರ್ಥಿಕ ಪ್ರಗತಿಯನ್ನು ಸಾಽಸುವುದರಲ್ಲಿ ಎರಡು ಮಾತಿಲ್ಲ. ಜೈ ಜವಾನ್, ಜೈ ಕಿಸಾನ್…