Wednesday, 18th September 2024

ಸಹಜ ಕೃಷಿಯಲ್ಲಿ ಸಂತೃಪ್ತಿ ಕಂಡಿರುವ ಕೃಷಿಕ

ಸುಪ್ತ ಸಾಗರ

rkbhadti@gmail.com

ಸಹಜ ಕೃಷಿಯೆಂದರೆ ಬದುಕೂ ಸಹಜವಾಗಬೇಕು. ಕೃಷಿಕನು ಪರಿಸರದಲ್ಲಿನ ಲಭ್ಯ ಸಂಪನ್ಮೂಲವನ್ನೇ ಬಳಸಿ ಕೃಷಿ ಮಾಡಲು, ಬದುಕಲು ಕಲಿತಾಗ ಮಾತ್ರವೇ ಪರಿಪೂರ್ಣವಾಗಲು ಸಾಧ್ಯ. ಸಹಜವೆಂದರೆ ವಿಷಮುಕ್ತ. ಹೀಗಾಗಿ ನಮ್ಮ ಬದುಕೂ ವಿಷಮುಕ್ತವಾಗಬೇಕು. ಅದು ದೃಢ ನಿರ್ಧಾರದಿಂದ ಮಾತ್ರ ಸಾಧ್ಯ. ಅಂಥ ನಿರ್ಧಾರಕ್ಕೆ ರೈತರು ಬರಬೇಕು.

‘ಕೃಷಿಯಲ್ಲಿ ಯಶಸ್ಸು ಗಳಿಸಬೇಕೆಂದಿದ್ದರೆ ನೀವು ಮೊದಲು ಮಾಡಬೇಕಿರುವ ಕೆಲಸವೆಂದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದನ್ನು ನಿಲ್ಲಿಸಬೇಕು’ ಹಾಗೆಂದು ಆತ ಕೇವಲ ಭಾಷಣ ಬಿಗಿಯುವುದಿಲ್ಲ. ಸ್ವತಃ ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ, ಮಾದರಿಯಾಗಿzರೆ. ತಪ್ಪು ತಿಳಿಯಬೇಡಿ, ಅವರು ಮಕ್ಕಳನ್ನು ಶಾಲೆ ಬಿಡಿಸಿದ್ದರಿಂದಲೇ ಯಶಸ್ವಿಯಾದದ್ದಲ್ಲ. ಶಾಲೆಯ ಹೊರಗೆ, ನಿಸರ್ಗದ ಜತೆಗೆ, ನಿಸರ್ಗದೊಂದಿಗೇ ಬೆರೆತು ತಾವೂ ಕಲಿತು, ಮಕ್ಕಳನ್ನೂ ಕಲಿಯಲು ಬಿಟ್ಟಿದ್ದರಿಂದದಕ್ಕಿದ ಯಶಸ್ಸದು.

ಬಹುಶಃ ಇಂದು ಅವರು ಕೃಷಿಯಲ್ಲಿ ಯಶಸ್ಸು ಗಳಿಸದೇ ಹೋಗಿದ್ದರೆ ‘ಈತನಿಗೇನೋ ತಲೆ ಕೆಟ್ಟಿರಬೇಕು’ ಎಂದು ಎಲ್ಲರೂ ಹೀಗಳೆಯುತ್ತಿದ್ದರೇನೋ. ಈಗಲೂ ಅವರ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲದವರು, ಪೂರ್ವಗ್ರಹಪೀಡಿತ ಸ್ಥಳೀಯರು ಅವರನ್ನು ಹಾಗೆಯೇ ಭಾವಿಸಿ ನಿರ್ಲಕ್ಷಿಸಿzರೆ. ಆ ಬಗ್ಗೆ ಅವರೇನೂ ಹೆಚ್ಚಿಗೆ ತಲೆಕೆಡಿಸಿಕೊಳ್ಳಲು ಹೋಗಿಲ್ಲ. ತಮ್ಮ ಪಾಡಿಗೆ ತಾವು ನಂಬಿದ ಸಿದ್ಧಾಂತವನ್ನು ಆಧರಿಸಿ ಕೃಷಿ ಪ್ರಯೋಗಗಳನ್ನು ನಡೆಸುತ್ತ,ಇಂದು ಸಹಜ ಕೃಷಿ ಪದ್ಧತಿಯಲ್ಲಿ ದೇಶ-ವಿದೇಶಗಳ ಅಧ್ಯಯನಾಕಾಂಕ್ಷಿಗಳಿಗೆ, ಆಸಕ್ತ ಕೃಷಿಕರಿಗೆ ಮಾದರಿಯಾಗಿ ನಿಂತಿದ್ದಾರೆ.

ಹೌದು, ದಾವಣಗೆರೆ ಜಿಯ ಮಲ್ಲನಾಯಕನಹಳ್ಳಿಯ ಪ್ರಗತಿಪರ ರೈತ ರಾಘವ್ ಎಲ್ಲರಿಗಿಂತಲೂ ಭಿನ್ನ, ಅಂತೆಯೇ ಅವರ ಕೃಷಿ ಪದ್ಧತಿ, ನಂಬಿಕೆಗಳು, ಜೀವನ ಮೌಲ್ಯಗಳು ಎಲ್ಲವೂ ಭಿನ್ನವೇ! ‘ನೆಮ್ಮದಿಯ ಬದುಕಿಗೆ ಶೇ.೫ರಷ್ಟೂ ಪ್ರಯೋಜನಕ್ಕೆ ಬಾರದ ಆಧುನಿಕ ಸೋಕಾಲ್ಡ ಶಿಕ್ಷಣ ನಮಗೆ ಬೇಕಾದರೂ ಯಾಕೆ?’ ಹಾಗೆಂದು ನೇರ ಪ್ರಶ್ನೆಯನ್ನು ಎಸೆಯುತ್ತಾರವರು.

‘ನಿಸರ್ಗದ ಯಾವ ಪ್ರಾಣಿ ಪಕ್ಷಿಗಳೂ ಶಾಲೆಗೆ ಹೋಗುವುದಿಲ್ಲ. ಅವೆಲ್ಲ ನೆಮ್ಮದಿಯಾಗಿ ಬದುಕುತ್ತಿಲ್ಲವೇ? ನಾವು ಮನುಷ್ಯರೂ ಪ್ರಾಣಿಗಳೇ. ನಾವೂ ನಿಸರ್ಗದಿಂದಲೇ ಕಲಿಯಬೇಕು. ಅಲ್ಲಿನ ಕಲಿಕೆಗೆ ಮಿತಿ ಎಂಬುದೇ ಇಲ್ಲ. ನಾವು ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ, ಬುದ್ಧಿವಂತರು ಎಂಬ ಅಹಮಿಕೆಯಿಂದ ನಮ್ಮ ಕಲಿಕೆಯನ್ನು ಮಿತಿಗೊಳಿಸಿಕೊಂಡಿದ್ದರಿಂದಲೇ ಇಂದು ನಮ್ಮಿಂದ ಇಷ್ಟೆಲ್ಲ ವಿನಾಶಗಳು ಸಂಭವಿಸುತ್ತಿರುವುದು. ಇಂದು ಪರಿಸರದಲ್ಲಿ ಆದ ಎಲ್ಲ ಹಾನಿಗೂ ಮನುಷ್ಯನೇ ನೇರಹೊಣೆಯೇ ಹೊರತು, ಬೇರಾವ ಪ್ರಾಣಿ-ಪಕ್ಷಿಗಳೂ ಅಲ್ಲ. ಅವು ನಿಸರ್ಗದೊಂದಿಗೆ ಅಂದು- ಇಂದು-ಮುಂದೂ ಹೊಂದಿಕೊಂಡೇ ಬದುಕುತ್ತಿವೆ/ ಬದುಕುತ್ತವೆ. ಹಾಗೆ ನೋಡಿದರೆ ಅವೆಲ್ಲವುಗಳಿಗಿಂತ ಮನುಷ್ಯ ಕೀಳುಮಟ್ಟದಲ್ಲಿದ್ದಾನೆ.

ಕನಿಷ್ಠ ಕೃತಜ್ಞತೆಯನ್ನೂ ಕಲಿಸದ ಇಂಥ ಶಿಕ್ಷಣದಿಂದ ಸಾಧಿಸುತ್ತಿರುವುದಾದರೂ ಏನನ್ನು? ನನ್ನ ಇಬ್ಬರು ಮಕ್ಕಳೂ (೧೪ ವರ್ಷದ ಮಗಳು, ೧೧ ವರ್ಷದ ಮಗ) ಶಾಲೆಗೆ ಹೋಗಿಯೇ ಇಲ್ಲ. ಬದುಕಿಗೆ ಬೇಕಾದ eನವನ್ನು ನಿಸರ್ಗದಿಂದಲೇ ಪಡೆಯುತ್ತಿದ್ದಾರೆ. ವ್ಯಾವಹಾರಿಕ eನವನ್ನು ಹೆತ್ತವರಾದ ನಾವು ಮನೆಯ ಕಲಿಸುತ್ತೇವೆ. ಪ್ರತಿಯೊಬ್ಬರೂ ಅವರವರ ಆಸಕ್ತಿ ಹಾಗೂ ಅಗತ್ಯವನ್ನು ಅವಲಂಬಿಸಿ ಬೇಕಾದದ್ದನ್ನು ನಿಸರ್ಗ ಪಾಠಶಾಲೆಯಲ್ಲಿ ಕಲಿಯುವಂತಾಗಬೇಕು. ಕೃಷಿಕನ ಮಕ್ಕಳು ಕಲಿಯಬೇಕಾದದ್ದು ಹೊಲದಲ್ಲಿ ಮಣ್ಣಿನಲ್ಲಿ, ನಿಸರ್ಗದ ಮಡಿಲಲ್ಲಿಯೇ ಹೊರತು ಶಾಲೆಯಲ್ಲಲ್ಲ.

ಇಂದಿನ ಸರಾಸರಿ (೬೦ ವರ್ಷ ಎಂದುಕೊಂಡರೆ) ಆಯುಷ್ಯದ ಅತ್ಯಂತ ಮೌಲ್ಯಯುತ, ಸಬಲ ಅರ್ಧಭಾಗವನ್ನು ಶಿಕ್ಷಣದ ಹೆಸರಿನಲ್ಲಿ ನಾವು ವ್ಯರ್ಥ ಮಾಡುತ್ತಿದ್ದೇವೆ. ಹಾಗೂ ಅಷ್ಟೆಲ್ಲ ಹಣ-ಸಮಯ-ಶ್ರಮ ವ್ಯಯಿಸಿ ಎಲ್ಲ ರೀತಿಯ ಕಲಿಕೆ ಮುಗಿಸಿದ ವ್ಯಕ್ತಿಗೆ ನಂತರವೂ ಬದುಕಿನ ಭದ್ರತೆ, ನೆಮ್ಮದಿಯ ಜೀವನ ದಕ್ಕಿಸಿಕೊಳ್ಳಲು ಆಗುವುದಿಲ್ಲ ಎಂದಾದ ಮೇಲೆ ಅಂಥ ಶಿಕ್ಷಣ ಕೃಷಿಕನ ಮಕ್ಕಳಿಗೆ ಯಾವ ಪುರುಷಾರ್ಥಕ್ಕೆ? ಇದು ಅರ್ಥ ಆಗಬೇಕಾದರೆ ಐಐಎಂ,
ಐಐಟಿ ಮುಗಿಸಿ ಕೃಷಿಗೆ ಮರಳಿದ ಸಾಕಷ್ಟು ಮಂದಿ ನಮ್ಮ ನಡುವೆ ಇzರಲ್ಲ, ಅವರನ್ನೊಮ್ಮೆ ಕೇಳಿ ನೋಡಿ, ವಾಸ್ತವ ಅರಿವಾಗುತ್ತೆ’ ಎನ್ನುತ್ತಾರವರು.

ಆಧುನಿಕ ಶಿಕ್ಷಣದ ಅಪಸವ್ಯದ ಕುರಿತು ಪುಟ್ಟ ಭಾಷಣ ವನ್ನೇ ಮಾಡುವ ರಾಘವ, ಕೃಷಿಯಷ್ಟೇ ‘ಸಹಜ’ವಾದರೆ ಸಾಲದು, ಕೃಷಿಕನ ಬದುಕೂ ‘ಸಹಜ’ ವಾಗಬೇಕು ಎಂಬ ಪ್ರತಿಪಾದನೆಯೊಂದಿಗೆ ಬದುಕಿನಗಬೇಕಿರುವ ಬದಲಾವಣೆಯನ್ನು ಕೃಷಿಯೊಂದಿಗೆ ಜೋಡಿಸುತ್ತಾರೆ. ಆ ಮೂಲಕ ತಮ್ಮ ೨೫ ವರ್ಷಗಳ ಸಹಜ ಕೃಷಿ ಪಯಣದ ಯಶೋಗಾಥೆಯನ್ನು ಬಿಚ್ಚಿಡುತ್ತಾರೆ. ಆಡಂಬರವನ್ನು ಹರವಿಕೊಂಡು, ಇಲ್ಲದ್ದನ್ನು ಬೆನ್ನು ಹತ್ತಿ ಓಡುವ ಮನೋಭಾವವೇ ಕೃಷಿಯನ್ನು ಸೋಲಿಸುತ್ತಿದೆ. ಕೃಷಿಯಲ್ಲಿ ‘ಲಾಭ’ ಅನ್ನುವ ಪದಕ್ಕೆ ‘ಆದಾಯ’ ಎನ್ನುವ ತಪ್ಪು ಕಲ್ಪನೆಯನ್ನು ಮೂಡಿಸಲಾಗುತ್ತಿದೆ. ವಿಶ್ವವಿದ್ಯಾಲಯ ಗಳು, ಸರಕಾರಿ ಇಲಾಖೆಗಳು, ವಿಜ್ಞಾನಿಗಳುಎಲ್ಲರೂ ರೈತ ಸಮುದಾಯದ ಮನಸ್ಸಿನಲ್ಲಿ ಬಿತ್ತುತ್ತಿರುವುದು ಇಳುವರಿ, ಆದಾಯದ
ಗುರಿಯನ್ನು ಮಾತ್ರವೇ. ಯಾರಿಗೂ ಕೃಷಿ, ಕೃಷಿಕನ ಸ್ವಾವಲಂಬನೆ ಬೇಕಾಗಿಯೇ ಇಲ್ಲ.

ಸಹಜ ಕೃಷಿಯೆಂದರೆ ಬದುಕೂ ಸಹಜವಾಗಬೇಕು. ಪರಿಸರದಲ್ಲಿ ಲಭ್ಯ ಸಂಪನ್ಮೂಲವನ್ನೇ ಬಳಸಿ ಕೃಷಿ ಮಾಡಲು, ಕೃಷಿಕ ಬದುಕಲು ಕಲಿತಾಗ ಮಾತ್ರವೇ ಪರಿಪೂರ್ಣವಾಗಲು ಸಾಧ್ಯ. ಸಹಜವೆಂದರೆ ವಿಷಮುಕ್ತ. ಹೀಗಾಗಿ ನಮ್ಮ ಬದುಕೂ ವಿಷಮುಕ್ತವಾಗಬೇಕು. ಅದು ದೃಢ ನಿರ್ಧಾರದಿಂದ ಮಾತ್ರ ಸಾಧ್ಯ. ಅಂಥ ನಿರ್ಧಾರಕ್ಕೆ ರೈತರು ಬರಬೇಕು ಎನ್ನುತ್ತಾರೆ ರಾಘವ್.

‘ಗುಡ್ಡ-ಬೆಟ್ಟ-ಕಾಡು ಪ್ರದೇಶದಲ್ಲಿ ಸೊಂಪಾಗಿ ಬೆಳೆವ ಗಿಡ-ಮರಗಳಿಗೆ ನೀರು-ಗೊಬ್ಬರ ಯಾರಾದ್ರೂ ಹಾಕ್ತಾರಾ? ಸಹಜವಾಗಿ ಬೆಳೆವ ಅದರಲ್ಲಿ
ಸಿಗುವ ಹಣ್ಣು-ಹಂಪಲು-ಬೆಳೆ ರುಚಿ ಮತ್ತು ಆರೋಗ್ಯ ಕಾರಿಯಾಗಿಲ್ಲವೇ? ಇನ್ನೂ ಹೇಳಬೇಕೆಂದರೆ ಈ ಭೂಮಂಡಲದ ಎಲ್ಲ ಪಶು-ಪಕ್ಷಿಗಳೂ ಮಾಡುವುದು ಕೇವಲ ಬೀಜ ಪ್ರಸರಣವನ್ನಷ್ಟೇ. ಹಾಗೆ ತಿಂದು ಬಿಸಾಡಿದ ಬೀಜಗಳು ಬಿದ್ದ ಮೊಳೆತು, ಹುಸಲುಸಾಗಿ ಬೆಳೆದು ಅದೇ ಪಕ್ಷಿಗಳಿಗೆ
ಫಲ ನೀಡುವುದಿಲ್ಲವೇ? ಅದನ್ನೇ ಸಹಜ ಕೃಷಿಯಲ್ಲಿ ಮಾಡಬೇಕಾದುದು.

ಇಲ್ಲಿ ಉತ್ತುವುದೂ ಇಲ್ಲ, ಬಿತ್ತುವುದೂ ಇಲ್ಲ, ಬೆಳೆಯುವುದೂ ಇಲ್ಲ. ಇನಿದ್ದರೂ ಬೀಜ ಪ್ರಸರಣವನ್ನಷ್ಟೇ. ಅದನ್ನು ಇಂಗ್ಲಿಷ್‌ನಲ್ಲಿ ಬ್ರಾಡ್‌ಕಾಸ್ಟಿಂಗ್ ಎನ್ನುತ್ತಾರೆ. ಅಂದರೆ ಬೀಜವನ್ನು ಉಗ್ಗುವುದು. ನಾವು ಎಚ್ಚರವಹಿಸಬೇಕಾದ ಒಂದೇ ಒಂದು ಸಂಗತಿಯೆಂದರೆ ಹಾಗೆ ನಾವು ಉಗ್ಗುವ ಮುನ್ನ ಆ ಭೂಮಿ ಎಷ್ಟು ಆರೋಗ್ಯ ಕಾರಿಯಾಗಿದೆ ಎಂಬುದನ್ನು ಕಂಡುಕೊಳ್ಳುವುದು. ಒಂದೊಮ್ಮೆ ಯೋಗ್ಯ ಸ್ಥಿತಿಯಲ್ಲಿ ಅದಿಲ್ಲದಿದ್ದರೆ, ನಾವು ಮಾಡಬೇಕಾದುದೇನೂ ಇಲ್ಲ. ಪ್ರಕೃತಿಯನ್ನುಅದರಪಾಡಿಗೆ ಅದನ್ನು ಬಿಟ್ಟರೆ, ಕೆಲವೇ ವರ್ಷಗಳಲ್ಲಿ ತನ್ನಿಂದ ತಾನೇ ಅದು ನೀರು, ಮಣ್ಣು ಸೇರಿದಂತೆ ತನ್ನೆಲ್ಲ ಅಂಗಾಂಗಗಳನ್ನೂ ಕರೆಕ್ಷನ್ ಮಾಡಿಕೊಳ್ಳುತ್ತೆ.

ಆನಂತರ ಅಲ್ಲಿ ಬೆಳೆದದ್ದರಲ್ಲಿ ನಮಗೆ ಬೇಕಾದಷ್ಟನ್ನು ಮಾತ್ರವೇ ಬಳಸಿ ಉಳಿದದ್ದನ್ನು ಅಲ್ಲಿಯೇ ಬಿಡಲು ಕಲಿಯಬೇಕು. ಎಲ್ಲವೂ ತನ್ನದೇ ಎಂಬ ಅಧಿಕಾರಯುತ ಮನೋಭಾವ, ಎಲ್ಲವನ್ನೂ ಬಾಚಿಕೊಳ್ಳುವ ಹಪಾಹಪಿತನವೇ ರೈತರನ್ನು ಅತೃಪ್ತಿಗೆ ದೂಡುತ್ತಿದೆ. ಕೃಷಿಕ ಸೋಲುವಂತೆ ಮಾಡುತ್ತಿದೆ’ ಇಂದಿನ ಕೃಷಿಯ ವಾಸ್ತವವನ್ನು ಸುಂದರವಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ ರಾಘವ್. ಹೌದು, ಇದು ಮೂಲಭೂತ ಪ್ರಶ್ನೆ. ನಮ್ಮ ರೈತರ ವರ್ಷದ ಶ್ರಮವೆಲ್ಲ ‘ಮಣ್ಣು’ ಪಾಲಾಗುತ್ತಿರುವುದೇಕೆ? ಏಷ್ಟೇ ದುಡಿದರೂ ಕೈ ಹತ್ತದಿರುವುದಕ್ಕೆ ಕಾರಣ ಏನು? ಯಾವುದೇ ಗೊಬ್ಬರ ಸುರಿದರೂ, ಎಷ್ಟು ನೀರು ಹಾಕಿದರೂ, ಎಂಥದ್ದೇ ಬೀಜ ತಂದು ಹಾಕಿದರೂ ಇಳುವರಿ ಮಾತ್ರ ನಿರೀಕ್ಷಿಸಿದಷ್ಟು ಬರುವುದಿಲ್ಲ. ಇದಕ್ಕೆ ಪರಿಹಾರ ಏನು? ರಾಘವರ ವಿವರಣೆ ಕುತೂಹಲಕಾರಿ: ‘ಕೃಷಿಯನ್ನು ಲಾಭ ದಾಯಕವಾಗಿ ಮಾಡುವಲ್ಲಿ ಮಣ್ಣಿನ ಉತ್ಪಾದಕತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮಣ್ಣಿನ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣ, ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಮಣ್ಣು ಎಂದರೆ, ಭೂಮಿಯ ಮೇಲ್ಭಾಗದಲ್ಲಿ ನಡೆಯುವ ಪ್ರಕೃತಿಯ ವ್ಯಾಪಾರಕ್ಕೆ ಒಳಪಟ್ಟು ಸೃಷ್ಟಿಯಾಗಿರುವ ತೆಳುವಾದ ಹಾಸಿಗೆ. ಇದರಲ್ಲಿ ಖನಿಜಾಂಶಗಳು ಹಾಗೂ
ಪೋಷಕಾಂಶಗಳು ಸಮ್ಮಿಳಿತಗೊಂಡು ಹಲವು ಸೇಂದ್ರೀಯ ದ್ರವ್ಯಗಳಿಂದ ಹದವಾದ ಪಾಕ ಸಿದ್ಧವಾಗುತ್ತದೆ. ಸಸ್ಯ ವರ್ಗದ ಬೆಳವಣಿಗೆಗೆ ಇದೇ ಮೂಲಾಧಾರ. ಅಂದರೆ ಸಸ್ಯಗಳ ಬೇರುಗಳು ಬೆಳೆಯಲು ಮಣ್ಣೇ ಆಧಾರವನ್ನೊದಗಿಸುವಂಥದ್ದು. ಮಾತ್ರವಲ್ಲ, ಸಸ್ಯಗಳ ಬೆಳವಣಿಗೆಗೆ ಅತ್ಯ
ವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು ಸಹ ಮಣ್ಣೇ. ಹೌದಲ್ಲವೇ?’.

ಅತ್ಯಂತ ಸರಳ ಆದರೆ ಗಮನಾರ್ಹ ತಾಂತ್ರಿಕ ಸಂಗತಿಯೊಂದನ್ನು ಅವರು ವಿವರಿಸುತ್ತಾರೆ: ‘ಭೂಮಿಯ ಮೇಲಿನ ಒಂದು ಸೆಂ.ಮೀ.ನಷ್ಟು ಮಣ್ಣು ಸಹಜ ರೀತಿಯಲ್ಲಿ ಸೃಷ್ಟಿಯಾಗಲು ಕನಿಷ್ಠವೆಂದರೂ ೨ ಸಾವಿರ ವರ್ಷಗಳು ಬೇಕು. ಅಂಥ ಮಣ್ಣಿನ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖ ಸಂಗತಿ. ನಮ್ಮ ಮಣ್ಣಲ್ಲಿ ಜೀವಾಣುಗಳಿರಬೇಕೆಂದಲ್ಲಿ, ಮಣ್ಣಿಗೆ ನೇರವಾಗಿ ಬಿಸಿಲು ಬೀಳದಂತೆ ತಡೆಯಬೇಕು. ಮಣ್ಣಲ್ಲಿರುವ ಜೀವಾಣುಗಳಿಗೂ ನಮ್ಮಂತೆಯೇ ಹಸಿವು-
ಬಾಯಾರಿಕೆ ಆಗುವುದರಿಂದ, ಮಣ್ಣಿಗೆ ಸಾವಯವ ಅಂಶ ವನ್ನು ಸತತವಾಗಿ ಕೊಡುತ್ತಿರಬೇಕು. ಮಣ್ಣು ಫಲವತ್ತಾಗಿರುವಂತಾಗಲು, ಆ ಮಣ್ಣಲ್ಲಿ ವಿವಿಧ ಬಗೆಯ ಗಿಡ- ಮರಗಳನ್ನು ಬೆಳೆಸಬೇಕು. ಹೀಗಾದಾಗ ಮಾತ್ರವೇ ಎಲ್ಲ ಸಸ್ಯ ಪೋಷಕಾಂಶಗಳು ಮಣ್ಣಿನಲ್ಲಿ ಕಳಿತು, ಕರಗಿ ಮಣ್ಣು ಫಲವತ್ತಾಗಲು ಸಾಧ್ಯ.

ಆದರೆ ನಾವು, ಕೃಷಿಗೆ ಭೂಮಿಯನ್ನು ಸಿದ್ಧಪಡಿಸುವ ಭರದಲ್ಲಿ ಪದೇ ಪದೆ ಭೂಮಿಯನ್ನು ಉಳುಮೆ ಮಾಡಿ, ಮಣ್ಣಿನಿಂದ ಸಸ್ಯತ್ಯಾಜ್ಯವನ್ನು ಬೇರ್ಪ
ಡಿಸಿಬಿಡುತ್ತಿದ್ದೇವೆ. ಜತೆಗೆ ಬೆಳೆಗಳಿಗೆ ತೊಂದರೆ ಎಂದು ಭಾವಿಸಿ, ‘ವ್ಯರ್ಥ’ವೆಂಬ ಪಟ್ಟ ಕಟ್ಟಿ ಕಳೆಗಳೆಂಬ ಹೆಸರಿನಲ್ಲಿ ಸಸ್ಯ ವೈವಿಧ್ಯವನ್ನು ಕಿತ್ತು ನಾಶ ಪಡಿಸುತ್ತೇವೆ. ಮಣ್ಣಿನ ಆರೋಗ್ಯ ರಕ್ಷಣೆಯ ಅತಿಮುಖ್ಯ ಸಂಗತಿಯೆಂದರೆ ಉಳುಮೆಯನ್ನುಆದಷ್ಟೂ ಕಡಿಮೆ ಮಾಡಬೇಕು. ಏಕೆಂದರೆ, ಉಳುಮೆ ಮಾಡಿದಾಗ, ಜೀವಾಣುಗಳ ಓಡಾಟದಿಂದ ಮಣ್ಣಲ್ಲಿ ಸೃಷ್ಟಿಯಾಗುವ ಸಣ್ಣ ಸಣ್ಣ ಸುರಂಗಗಳು- ರಂಧ್ರಗಳು ಒಡೆದು ಮಣ್ಣು ಗಟ್ಟಿಯಾಗುತ್ತದೆ.

ಇಂಥ ಮಣ್ಣಲ್ಲಿ ಗಾಳಿಯಾಡುವುದು ಮತ್ತು ನೀರು ಇಂಗುವುದು ಕಷ್ಟವೇ. ಒಂದು ಎಕರೆಯಷ್ಟು ಫಲವತ್ತು ಮಣ್ಣಲ್ಲಿ ೧೫ ಟನ್ನುಗಳಷ್ಟು ತೂಕದ ಮಣ್ಣುಜೀವಿಗಳಿರುತ್ತವೆ. ಈ ತೂಕ ಸರಿಸುಮಾರು ೨೦ ಹಸುಗಳ ತೂಕಕ್ಕೆ ಸಮ. ಅಂದರೆ ಕಲ್ಪಿಸಿಕೊಳ್ಳಿ, ನಮ್ಮ ಒಂದು ಹಸ್ತಕ್ಷೇಪದಿಂದ ಅದೆಷ್ಟು
ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತಿದ್ದೇವೆ ಎಂಬುದನ್ನು!’. ಹೀಗೆ ಪಕ್ಕಾ ವಿಜ್ಞಾನಿಯಂತೆ ಪಾಠ ಮಾಡುತ್ತಾರೆ ರಾಘವ್. ಇಂದು ಸಹಜ ಕೃಷಿಯಲ್ಲಿ ಪಳಗಿ, ಸುಖ-ಸಂತೃಪ್ತಿಯ ಜೀವನವನ್ನಷ್ಟೇ ಅಲ್ಲ, ‘ಸಹಜ ಜೀವನ’ ಮಾಡುತ್ತಿರುವ ರಾಘವ್, ನಿಸರ್ಗದಲ್ಲಿ ಸಹಜವಾಗಿ ಸಿಗುವ ವಸ್ತುಗಳಿಂದಲೇ
ಮನೆಯನ್ನೂ ನಿರ್ಮಿಸಿಕೊಂಡಿzರೆ. ಸಿಮೆಂಟ್, ಇಟ್ಟಿಗೆ, ಕಬ್ಬಿಣ ಹೀಗೆ ಯಾವುದೇ ಆಧುನಿಕ ಸಾಮಗ್ರಿಗಳ ಬಳಕೆಯಿಲ್ಲದೇ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸುತ್ತಮುತ್ತಲ ಕಲ್ಲು ಮಣ್ಣುಗಳಿಂದಲೇ ಮಾದರಿ, ಸುಂದರ ಕಟ್ಟಡ ರೂಪಿಸಿದ್ದಾರೆ.

ಮನೆಯಲ್ಲಿನ ಪರಿಸರಕ್ಕೆ ಹಾನಿಮಾಡುವಂಥ ಯಾವುದೇ ವಸ್ತುಗಳೂ ಇಲ್ಲ. ಯಾವುದೇ ಆಧುನಿಕತೆಗೆ ಮಾರುಹೋಗಿಲ್ಲ. ಟಿವಿ, ಫ್ರಿಜ್, ಪೆಟ್ರೋಲ್ ಸುಡುವ ಅನಗತ್ಯ ವಾಹನ ಇದಾವುದೂ ಇಲ್ಲ. ಶುದ್ಧ ಸರಳ ಖಾದಿಬಟ್ಟೆ, ಅದರಲ್ಲೂ ಮಿತವ್ಯಯ. ಮನೆಯಲ್ಲಿ ಯಾರಿಗೇ ಅನಾರೋಗ್ಯವಾದರೆ, ತಮ್ಮ ಬೆಳೆದ ಆಯುರ್ವೇದೀಯ ಔಷಧ ಸಸ್ಯಗಳಿಂದಲೇ ಮನೆ ಚಿಕಿತ್ಸೆ. ಈ ಬಗ್ಗೆಯೂ ಅಧ್ಯಯನ. ಮನೆಗೆ-ಕೃಷಿಗೆ ಹೆಚ್ಚುವರಿಯಾಗಿ ಒಂದೇ ಒಂದು ವಸ್ತು ವನ್ನೂ ಖರೀದಿಸದ ಸರಳ ಜೀವನದ ಬದ್ಧತೆ ಅವರದ್ದು. ಕೃಷಿಗೆ ಪೂರಕವಾಗಿ ಎಲ್ಲ ತರಹದ ಪ್ರಾಣಿ-ಪಕ್ಷಿಗಳನ್ನು (ನಾಯಿ, ಕೋಳಿ, ಬೆಕ್ಕು, ಟರ್ಕಿ, ಬಾತುಕೋಳಿ, ಕುದುರೆ, ಹಲವಾರು ಬಗೆಯ ಪಕ್ಷಿಗಳು) ಸಾಕಿದ್ದಾರೆ. ಅವೆಲ್ಲಕ್ಕೂ ಮನೆಯಲ್ಲಿ ತಮ್ಮಂತೆಯೇ ಸ್ವಾತಂತ್ರ್ಯ. ಹೇಳುವುದನ್ನೇ ಮಾಡಿ ತೋರಿಸಿ, ತಾವೇ ಅಳವಡಿಸಿಕೊಂಡು ಬದುಕಿ ಆದರ್ಶಪ್ರಾಯರಾಗಿದ್ದಾರೆ.

ಸಹಜ ಕೃಷಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವವರು ರಾಘವ್ ಅವರನ್ನು ದೂರವಾಣಿ ಸಂಖ್ಯೆ ೯೯೪೪೮೯೨೩೭೭೩ರಲ್ಲಿ ಸಂಜೆ ೬-೮ರವರೆಗೆ ಸಂಪರ್ಕಿಸಬಹುದು. ಅವರದೇ ವೆಬ್‌ಸೈಟ/ಫೇಸ್‌ಬುಕ್ ಪುಟ ZಜಿhZಠಿeಜಿhZಕ್ಕೂ ಭೇಟಿ ನೀಡಬಹುದು.

Leave a Reply

Your email address will not be published. Required fields are marked *