Friday, 13th December 2024

ತಾರತಮ್ಯ ಧೋರಣೆಗೆ ರೈತನ ಬದುಕು ಅತಂತ್ರ !

ಗಂಟಾಘೋಷ

ಗುರುರಾಜ್ ಗಂಟಿಹೊಳಿ

ಕರ್ನಾಟಕದ ಜೀವನದಿ ಎಂದು ಕರೆಯಲ್ಪಡುವ ಕಾವೇರಿ ನಿಜಕ್ಕೂ ಕನ್ನಡ ಜನತೆಯ ಪಾಲಿನ ಗಂಗಾಮಾತೆ. ಆದರೆ ಕೊಳಕು ರಾಜಕೀಯದ ಕೆಸರೆರಚಾಟದಿಂದಾಗಿ ಕಾವೇರಿ ವಿಷಯದಲ್ಲಿ ಕನ್ನಡಿಗರಿಗೆ ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಿದೆ. ಕೊಡಗು
ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಉಗಮಗೊಳ್ಳುವ ಕಾವೇರಿ, ಮೈಸೂರು ಜಿಲ್ಲೆ ಮುಖಾಂತರ ತಮಿಳುನಾಡಿಗೆ ಸಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಕಾವೇರಿ ನದಿನೀರಿನ ವಿವಾದ ನಿನ್ನೆ ಮೊನ್ನೆಯದಲ್ಲ; ನೂರಾರು ವರ್ಷಗಳ ಹಿಂದೆ ಇದು ಆರಂಭವಾಗಿ ಒಂದು ಮುಗಿಯದ ಹೋರಾಟವಾಗಿ ಕನ್ನಡಿಗರ ಜ್ವಲಂತ ಸಮಸ್ಯೆ ಯಾಗಿಯೇ ಉಳಿದುಬಿಟ್ಟಿದೆ. ತಮಿಳುನಾಡಿನ ಜನರು ಇಂದಿಗೂ ‘ಕಾವೇರಿ ನೀರು ನಮ್ಮದು’ ಎನ್ನುವ ವಾದ ಮಂಡಿಸುತ್ತ ಅದನ್ನು ತಮ್ಮಲ್ಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾವೇರಿ ಹೋರಾಟ ಹುಟ್ಟಿದ ಬಗೆ

೧೯೨೪ರಲ್ಲಿ ಹಲವು ಷರತ್ತುಗಳ ನಡುವೆ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಂದ ಸಿಕ್ಕಿ, ೧೯೩೧ರಲ್ಲಿ ಇದರ ನಿರ್ಮಾಣ ಪೂರ್ಣವಾಯಿತು. ೧೯೭೨ರ ವೇಳೆಗೆ ಕೇಂದ್ರದಿಂದ ಸತ್ಯಶೋಧನಾ ಸಮಿತಿ ರಚನೆಯಾಗಿ ವರದಿ ಸಲ್ಲಿಕೆ ಕಾರ್ಯ ಪ್ರಾರಂಭ ವಾಯಿತು. ಕರ್ನಾಟಕವು ಕಾವೇರಿ ನೀರನ್ನು ತಮಿಳುನಾಡಿಗೆ ಅತಿಹೆಚ್ಚು ಪ್ರಮಾಣದಲ್ಲಿ ನೀಡಬೇಕು ಎನ್ನುವ ಸ್ವಾರ್ಥಕ್ಕೆ ಬಿದ್ದ ತಮಿಳಿಗರು ಸಮಿತಿಯ ವರದಿಯನ್ನು ತಿರಸ್ಕರಿಸಿದರು.

ತದನಂತರ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಕೇಂದ್ರದಿಂದ ಚಿತ್ರಘೋಷ್ ಮುಖರ್ಜಿ ನೇತೃತ್ವದಲ್ಲಿ ಕಾವೇರಿ ನ್ಯಾಯ ಮಂಡಳಿ ರಚನೆಯಾಯಿತು. ೧೯೯೧ರಲ್ಲಿ ನ್ಯಾಯಮಂಡಳಿಯಿಂದ ಮಧ್ಯಂತರ ತೀರ್ಪು ಪ್ರಕಟವಾಗಿ ಕೊನೆಗೂ ತಮಿಳುನಾಡಿಗೆ ೨೦೫ ಟಿಎಂಸಿ ನೀರು ಬಿಡುವಂತೆ ಆದೇಶಿಸಲಾಯಿತು. ಈ ವೇಳೆ ದಿಟ್ಟ ಹೋರಾಟ ಮಾಡಿದ ಅಂದಿನ ಮುಖ್ಯಮಂತ್ರಿ ಎಸ್.
ಬಂಗಾರಪ್ಪ, ಈ ಆದೇಶ ಹೊರಬೀಳುತ್ತಿದ್ದಂತೆ ಸುಗ್ರೀವಾಜ್ಞೆ ಹೊರಡಿಸಿದರು.

೧೯೯೨ರ ಸಂದರ್ಭದಲ್ಲಿ ತಮಿಳುನಾಡಿನಲ್ಲೂ ಸಾಕಷ್ಟು ಹೋರಾಟಗಳು ನಡೆದು, ಅಣ್ಣಾದೊರೈ ಹಾಗೂ ಎಂಜಿಆರ್ ಸಮಾಧಿ ಗಳ ನಡುವೆ ಜಯಲಲಿತಾ ಕುಳಿತು ೪ ದಿನ ಉಪವಾಸವನ್ನೂ ಮಾಡಿದ್ದರು. ಹಿಂದೆಲ್ಲಾ ಕರ್ನಾಟಕ ಮತ್ತು ತಮಿಳು ನಾಡು ರಾಜ್ಯಗಳು ನಿರಂತರ ಹೋರಾಟ ಮಾಡುತ್ತಿದ್ದವು, ತನ್ಮೂಲಕ ಉಭಯ ರಾಜ್ಯಗಳಲ್ಲೂ ಸಾಕಷ್ಟು ಪ್ರತಿಭಟನೆ, ದಂಗೆಗಳು ಆಗುತ್ತಿದ್ದವು. ನೀರು ಬಿಡಬೇಕೆಂಬ ಆದೇಶವನ್ನು ಖಂಡಿಸಿ ರಾಜ್ಯದೆಲ್ಲೆಡೆ ತೀವ್ರಹೋರಾಟ ನಡೆಯಿತು.

೧೯೯೫ರಲ್ಲಿ ಕರ್ನಾಟಕದಲ್ಲಿ ಬರಗಾಲ ಅಪ್ಪಳಿಸಿದಾಗಲೂ ತಮಿಳುನಾಡಿಗೆ ೧೧ ಟಿಎಂಸಿ ನೀರು ಬಿಡಲು ಆದೇಶಿಸಲಾಗಿತ್ತು.
ಮತ್ತೆ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಕನ್ನಡಿಗರಿಂದ ವ್ಯಾಪಕ ಖಂಡನೆ ವ್ಯಕ್ತವಾಯಿತು. ನಂತರ ಈ ಪ್ರತಿಭಟನೆ ಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸಭೆ ನಡೆದು, ತಮಿಳು ನಾಡಿಗೆ ೬ ಟಿಎಂಸಿ ಮಾತ್ರ ನೀರು ಬಿಡಲು ತೀರ್ಮಾನಿಸಲಾಯಿತು. ನಂತರ ಕನ್ನಡಿಗರು ಕೊಂಚ ಸಮಾಧಾನಗೊಂಡರು. ೧೯೯೭ರಲ್ಲಿ ಕಾವೇರಿ ನದಿ ಪ್ರಾಧಿಕಾರ ಸ್ಥಾಪನೆಗೊಂಡಿತು.

ನಿತ್ಯ ೧.೨೫ ಟಿಎಂಸಿ ನೀರು ನೀಡಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಬರಗಾಲವಿದ್ದ ಪರಿಣಾಮ ರಾಜ್ಯದಲ್ಲಿ ಪ್ರತಿಭಟನೆ ಮತ್ತೆ
ಕಾವು ಪಡೆಯಿತು. ೨೦೦೨ರಲ್ಲಿ ಇದೇ ಹೋರಾಟದಲ್ಲಿ ಮೈಸೂರು ಜಿಲ್ಲೆ ಬೀಚನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಗುರು ಸ್ವಾಮಿ ಕಬಿನಿಗೆ ಹಾರಿ ಪ್ರಾಣ ಬಿಟ್ಟರು. ೨೦೦೭ರಲ್ಲಿ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪನ್ನು ಪ್ರಕಟಸಿ, ತಮಿಳುನಾಡಿಗೆ ೪೧೯ ಟಿಎಂಸಿ ನೀರುಬಿಡಲು ಆದೇಶಿಸಿತು. ೨೦೧೨ರಲ್ಲಿ, ನಿತ್ಯ ೯ ಸಾವಿರ ಕ್ಯುಸೆಕ್ ನೀರು ಬಿಡಬೇಕೆಂಬ ಕಾವೇರಿ ನದಿ ಪ್ರಾಧಿಕಾರದ ಆದೇಶಕ್ಕೆ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸಿತು. ನಾವೇ ಬರಗಾಲದಿಂದ ತತ್ತರಿಸಿ ಹೋಗಿದ್ದೇವೆ, ಇಲ್ಲಿ ಜನರಿಗೆ
ನೀರಿಲ್ಲದೆ ತೊಂದರೆಯಾಗುತ್ತಿದೆ.

ಹಾಗಾಗಿ ನೀರು ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿತು. ನಂತರ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋದಾಗ,
ನ್ಯಾಯಾಲಯ ತಮಿಳುನಾಡಿನ ಪರ ತೀರ್ಪನ್ನು ಎತ್ತಿಹಿಡಿಯಿತು. ನ್ಯಾಯಾಲಯದ ಆದೇಶಕ್ಕೆ ಮಣಿದ ಕರ್ನಾಟಕ ನೀರು ಹರಿಸಲು ಒಪ್ಪಿಗೆ ನೀಡಿತು. ಕಾವೇರಿ ವಿವಾದದಲ್ಲಿ ಪ್ರತಿ ಬಾರಿಯೂ ಕರ್ನಾಟಕಕ್ಕೆ ಹಿನ್ನಡೆಯಾಗುತ್ತಿದ್ದು, ಕರುನಾಡಿನ ಜನತೆ ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಬಂದಿದೆ. ಒಂದೆಡೆ ತೀವ್ರ ಬರಗಾಲ, ಮತ್ತೊಂದೆಡೆ ಮುಂಗಾರು ಸರಿಯಾಗಿ ಬೀಳದ
ಪರಿಣಾಮ ರಾಜ್ಯವು ಸಾಕಷ್ಟು ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇನ್ನು ಬೇಸಿಗೆ ಕಾಲದಲ್ಲಂತೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ.

ತಮಿಳುನಾಡಿಗೆ ನೀರು ಬಿಡಬೇಕು ಎಂಬ ಕಾವೇರಿ ಜಲ ನಿಯಂತ್ರಣ ಸಮಿತಿಯ ಮಧ್ಯಂತರ ಆದೇಶವನ್ನು ವಿರೋಧಿಸಿ ಮಂಡ್ಯ ಜಿಲ್ಲೆಯ ಜನರು ಈಗಾಗಲೇ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ಡಿಎಂಕೆ ಒತ್ತಡಕ್ಕೆ ಮಣಿದ ಕಾಂಗ್ರೆಸ್

ಗ್ಯಾರಂಟಿಯನ್ನು ಈಡೇರಿ ಸುವುದು ಮಾತ್ರ ತನ್ನ ಗುರಿ ಎನ್ನುವಂತೆ ರಾಜ್ಯ ಸರಕಾರ ಆಡಳಿತ ನಡೆಸುತ್ತಿದೆ. ರಾಜ್ಯವು ಬರಗಾಲದ ಪರಿಸ್ಥಿತಿ ಅನುಭವಿಸು ತ್ತಿದ್ದು ಕೆಲವು ಕಡೆ ಈಗಾಗಲೇ ನೀರಿನ ಅಭಾವ ಕಾಣಿಸುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳು ನಾಡಿನ ಡಿಎಂಕೆಯ ಒತ್ತಡಕ್ಕೆ ಮಣಿದು ನೀರು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ಸರಕಾರ, ಕರ್ನಾಟಕದ ರೈತರ ಮೇಲೆ ದೌರ್ಜನ್ಯ ನಡೆಸಲು ಹೊರಟಿದೆಯಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.

ರೈತರನ್ನು ಸಂಕಷ್ಟಕ್ಕೆ ತಳ್ಳಿದ ಸರಕಾರ

ಕೆಲ ತಿಂಗಳ ಹಿಂದೆ ಸುರಿದಿದ್ದ ಮಳೆಗೆ ಕಬಿನಿ ಜಲಾಶಯ ತುಂಬಿ ಹರಿಯುತ್ತಿತ್ತು. ಆದರೆ ವರುಣರಾಯ ಮೊದಲ ವಾರವೇ ಕೈಕೊಟ್ಟ ಕಾರಣ ನೀರಿನ ಸಮಸ್ಯೆ ಈಗ ಉಲ್ಬಣಿಸಿದೆ. ಇಂಥ ಸಂದಿಗ್ಧ ಪರಿಸ್ಥಿತಿ ಇರುವಾಗಲೇ ನೀರು ಬಿಡುವಂತೆ ತಮಿಳುನಾಡು ಸರಕಾರ ಆಗ್ರಹಿಸಿತು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಿತು. ಜಲಾಶಯಗಳಿಂದ ನೀರು ಬಿಡುವಂತೆ ಆದೇಶಿಸುವ ಮೂಲಕ ಸಿದ್ದರಾಮಯ್ಯನವರ ಸರಕಾರ ರೈತರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.

ಪ್ರಾಧಿಕಾರದ ಆದೇಶ ಪಾಲನೆಗಾಗಿ ನಿರಂತರ ನೀರು ಹರಿಸುವ ಮೂಲಕ ಜಲಾಶಯದಲ್ಲಿ ಸಂಗ್ರಹವಿದ್ದ ೧೦ ಅಡಿ ನೀರು
ಖಾಲಿಯಾಗಿದ್ದು, ಜಲಾಶಯದ ನೀರಿನ ಮಟ್ಟ ೨,೨೭೩.೮೦ ಅಡಿಯಷ್ಟು ಕುಸಿದಿದೆ. ಕಳೆದ ವರ್ಷ ೨,೨೮೩.೯೭ ಅಡಿ ನೀರು ಸಂಗ್ರಹವಾಗಿತ್ತು. ಕಬಿನಿ ಜಲಾಶಯದ ಮೂಲಕ ಬೆಂಗಳೂರು, ಮೈಸೂರು, ಚಾಮರಾಜನಗರಕ್ಕೆ ದಿನಾಲೂ ಕುಡಿಯುವ ನೀರಿನ
ಪೂರೈಕೆಯಾಗುತ್ತಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ೯ ಅಡಿ ನೀರು ಈಗಾಗಲೇ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ಕಬಿನಿ ಜಲಾಶಯದ ಆಸುಪಾಸಿನ ಜನರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ.

ಕಾವೇರಿ ನೀರಿನ ಹೋರಾಟ ದಿನೇದಿನೆ ತೀವ್ರ ಸ್ವರೂಪವನ್ನು ಪಡೆಯುತ್ತಿದೆ. ಕಾವೇರಿ ಜಲ ನಿಯಂತ್ರಣ ಸಮಿತಿಯು ಆಗಸ್ಟ್ ೨೯ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಕರೆಯಲು ತೀರ್ಮಾನಿಸಿತ್ತು. ಆ ಸಭೆಯಲ್ಲಿ ಪ್ರಾಧಿಕಾರವು ನೀರು ಬಿಡಬೇಕು ಎನ್ನುವ ಆದೇಶವನ್ನು ನೀಡಿತ್ತು. ಆಗಸ್ಟ್ ೨೮ರಂದು ನಡೆದ ಸಭೆಯಲ್ಲಿ ನೀರು ನಿರ್ವಹಣಾ ಪ್ರಾಧಿಕಾರ, ಮುಂಬರುವ ೧೫ ದಿನಗಳ ಕಾಲ ೫,೦೦೦ ಕ್ಯುಸೆಕ್ ನೀರು ಹರಿಸಬೇಕು ಎಂದು ತೀರ್ಮಾನಿಸಿತ್ತು.

ಕೆಲವು ದಿನಗಳ ಹಿಂದಷ್ಟೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ೧೫ ದಿನಗಳ ಕಾಲ ೫,೦೦೦ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶಿಸಿದ ನಂತರ ರಾಜ್ಯ ಸರಕಾರ ಕಾವೇರಿ ತಮಿಳುನಾಡಿಗೆ ನೀರು ಹರಿಸಲು ಮುಂದಾಯಿತು. ಅಷ್ಟೇ ಅಲ್ಲದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಕೂಡ ತಮಿಳುನಾಡು ಪರವಾಗಿದ್ದು, ಅವರ ಮನವೊಲಿಸುವ
ಕೆಲಸಕ್ಕೆ ಮುಂದಾಗಿತ್ತು. ಆದರೆ ಈ ವಾದಕ್ಕೆ ಒಪ್ಪದ ಅಧಿಕಾರಿಗಳು ನೀರು ಬಿಡುವಂತೆ ಪಟ್ಟು ಹಿಡಿದರು.

ಕಾವೇರಿ ಹೋರಾಟದಲ್ಲಿ ಪ್ರತಿಬಾರಿಯೂ ಹಿನ್ನಡೆಯಾಗಿದ್ದು ಕರ್ನಾಟಕಕ್ಕೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ರಾಜ್ಯ ಸರಕಾರ ತನ್ನ ಸ್ವಾರ್ಥ ರಾಜಕಾರಣದಿಂದ ರಾಜ್ಯದ ಜನತೆಯ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಒಂದೆಡೆ ಮುಂಗಾರು ಸರಿಪ್ರಮಾಣದಲ್ಲಿ ಬೀಳದ ಪರಿಣಾಮ ರಾಜ್ಯ ಬರಗಾಲದ ಸ್ಥಿತಿಗೆ ತಲುಪಿದೆ, ಇನ್ನೊಂದೆಡೆ ನೀರಿನ ಪ್ರಮಾಣ ಕಡಿಮೆಯಿರುವ ಕಾರಣ ವಿದ್ಯುತ್ ಉತ್ಪಾದನೆಗೂ ಸಾಕಷ್ಟು ತೊಂದರೆಯಾಗುತ್ತಿದೆ. ಇದರ ನಡುವೆ ಇರುವ ಒಂದಿಷ್ಟು ನೀರನ್ನು ತಮಿಳುನಾಡಿಗೆ
ಬಿಡಬೇಕಾದ ಪರಿಸ್ಥಿತಿ. ಪ್ರತಿಬಾರಿ ಹೇಳಿದ್ದನ್ನೇ ಹೇಳಿ ಸಮಯ ವ್ಯರ್ಥಮಾಡುವ ಕಾಂಗ್ರೆಸಿಗರೇ, ‘ನುಡಿದಂತೆ ನಡೆಯುವ’ ನಿಮ್ಮ ಘೋಷವಾಕ್ಯ ಎಲ್ಲಿ ಹೋಯಿತು? ಪ್ರತಿ ಬಾರಿ ಸುಳ್ಳು ಭರವಸೆ ನೀಡಿ ಮುಗ್ಧಜನರನ್ನು ಮೋಸಗೊಳಿಸುವ ತಂತ್ರ ಇನ್ನು ನಡೆಯುವುದಿಲ್ಲ.

‘ಗ್ಯಾರಂಟಿ’ ಒಂದೇ ಸಾಧನೆಯಾಗುವುದಿಲ್ಲ. ಕರುನಾಡ ಜನತೆಗೂ ನ್ಯಾಯ ಒದಗಿಸಬೇಕಾಗಿರುವುದು ನಿಮ್ಮ ಕರ್ತವ್ಯ. ಒಟ್ಟಾರೆ ರೈತ ಮಾತ್ರ ಆಕಾಶ ನೋಡಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿಗೆ ತಲುಪುವಂತೆ ಮಾಡಬೇಡಿ. ಮುಂಬರುವ ದಿನಗಳು ನಿಜಕ್ಕೂ ಕರ್ನಾಟಕಕ್ಕೆ ಸಾಕಷ್ಟು ಕಷ್ಟದ ದಿನಗಳಾಗುವ ಸಾಧ್ಯತೆಯಿದ್ದು, ಕಾವೇರಿ ವಿಚಾರವಾಗಿ ನಮ್ಮೆಲ್ಲರ ಹೋರಾಟ ರೈತರ
ಪರವಾಗಿರಬೇಕಿದೆ. ನಮ್ಮ ನಾಡಿನ ರೈತರ ಬದುಕು ಉಳಿಸುವ ಪ್ರಯತ್ನ ನಮ್ಮದಾಗಬೇಕಿದೆ.