Wednesday, 11th December 2024

ನಮ್ಮಲ್ಲಿ ಸ್ಥೂಲಕಾಯವು ಜಾಸ್ತಿಯಾಗುತ್ತಿದೆಯೇ ?

ವೈದ್ಯ ವೈವಿಧ್ಯ

drhsmohan@gmail.com

ಸರಕಾರವು ಸೋಂಕು ರೋಗಗಳನ್ನು ನಿಯಂತ್ರಿಸುವುದರ ತನ್ನ ಪರಿಶ್ರಮ ಹಾಕುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ತಡೆಯುವಲ್ಲಿ ತೀವ್ರ ಕ್ರಮ ಕೈಗೊಳ್ಳುತ್ತಿರುವಾಗ ಅವರಲ್ಲಿ ಈ ರೀತಿಯ ಜೀವನ ಶೈಲಿಯ ಕಾಯಿಲೆಗಳಿಗೆ ಗಮನಕೊಡಲು ಸೂಕ್ತ ಹಣಕಾಸಿನ ಕೊರತೆ ಇದೆ.

ಸ್ಥೂಲಕಾಯದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲ ಕಡೆ ಜಾಸ್ತಿಯಾಗುತ್ತಿದೆ. ಅದರಲ್ಲಿಯೂ ಭಾರತದಂತಹ ದೇಶದಲ್ಲಿ ಅದು ವಿಪರೀತ ಹೆಚ್ಚಾಗುತ್ತಿದೆ ಎಂದು ಇತ್ತೀಚಿನ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಸಾಮಾನ್ಯ ಜನರು ತಮ್ಮ ತೂಕವನ್ನು ವಿಪರೀತವಾಗಿ ಹೆಚ್ಚಿಸಿಕೊಳ್ಳು ತ್ತಿರುವುದು ತೀರಾ ಕಳವಳಕಾರಿ. ಇದನ್ನು ಒಂದು ಆರೋಗ್ಯದ ತುರ್ತುಸ್ಥಿತಿ ಎಂದು ಪರಿಗಣಿಸಿ ತೀವ್ರವಾಗಿ ಗಮನಹರಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.

ಒಂದು ಕಾಲದಲ್ಲಿ ಈ ಸ್ಥೂಲಕಾಯ ಅಥವಾ ಬೊಜ್ಜು (ಒಬಿಸಿಟಿ) ಪಶ್ಚಿಮದ ಶ್ರೀಮಂತ ದೇಶಗಳಲ್ಲಿ ಮಾತ್ರ ಕಂಡುಬರುತ್ತದೆ ಎಂದು ತಿಳಿಯಲಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಈಗ ಅದು ಕೆಳ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿರುವ ದೇಶಗಳಲ್ಲೂ ಸಹಿತ ತೀವ್ರ ರೀತಿಯ ಸಮಸ್ಯೆಯಾಗುತ್ತಿದೆ. ಆಹಾರದ ಕೊರತೆ, ಕೃಷರಾದ, ತೀರಾ ಕಡಿಮೆ ತೂಕದ ಜನತೆಯನ್ನು ಹೊಂದಿದ ದೇಶ ಎಂದು ಭಾರತಕ್ಕೆ ಹೆಸರಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಸ್ಥಾನದಿಂದ ಪಲ್ಲಟಗೊಂಡು ಸ್ಥೂಲಕಾಯ ಜಾಸ್ತಿ ಇರುವ ಪ್ರಜೆಗಳನ್ನು ಹೊಂದಿರುವ ಪ್ರಪಂಚದ ಮೊದಲ 5 ದೇಶಗಳ ಪಟ್ಟಿಯಲ್ಲಿ ಭಾರತವೂ ಬರುತ್ತದೆ ಎಂಬುದು ಚಿಂತೆಗೆ ಎಡೆಮಾಡಿಕೊಡುವ ವಿಚಾರವೇ ಹೌದು. 2016 ರ ಒಂದು ಅಂಕಿ ಸಂಖ್ಯೆಯ ಪ್ರಕಾರ ಭಾರತದಲ್ಲಿ 135 ಮಿಲಿಯನ್‌ಗಿಂತ ಅಧಿಕ ಜನರು ತೂಕ ಜಾಸ್ತಿ ಹೊಂದಿದವರು ಇದ್ದಾರೆ. ಈ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇನ್ನೂ ಜಾಸ್ತಿಯಾಗಿದೆ ಎನ್ನಲಾಗಿದೆ.

ಆರೋಗ್ಯ ಮತ್ತು ಸಾಮಾಜಿಕ ವಿಷಯಗಳನ್ನೊಳಗೊಂಡ ಸರಕಾರದ ಇತ್ತೀಚೆಗಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಸ್ಥೂಲ ಕಾಯವನ್ನು ಸೂಚಿಸುವ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಶೇಕಡ 23 ಪುರುಷರಲ್ಲಿ ಮತ್ತು ಶೇಕಡ 24 ಮಹಿಳೆಯರಲ್ಲಿ 25 ಕ್ಕಿಂತ ಜಾಸ್ತಿ ಇತ್ತು. 2015 -16ರ ಅಂಕಿ ಸಂಖ್ಯೆಗೆ ಹೋಲಿಸಿದರೆ ಇದು ಶೇಕಡಾ 4 ಜಾಸ್ತಿ ಎನ್ನಲಾಗಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ಶೇಕಡಾ 3.4 ರಷ್ಟು ಸ್ಥೂಲಕಾಯದವರಿದ್ದಾರೆ (ಇದು 2015-16ರಲ್ಲಿ ಶೇಕಡ 2.1 ಇತ್ತು) ಎಂಬುದು ಮತ್ತಷ್ಟು ಆತಂಕಕ್ಕೀಡುಮಾಡುವ ವಿಷಯ.

ನಾವೆಲ್ಲ ಈಗ ಸ್ಥೂಲಕಾಯದ ಸಾಂಕ್ರಾಮಿಕದಲ್ಲಿ ಇದ್ದೇವೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ತೀವ್ರ ರೀತಿಯ ಸಾಂಕ್ರಾ ಮಿಕ ಆಗುವ ದಿನಗಳು ದೂರವಿಲ್ಲ ಎಂದು ಭಾರತದ ಒಬಿಸಿಟಿ ಫೌಂಡೇಶನ್‌ನ ಸ್ಥಾಪಕ ಚೆನ್ನೈನ ಸರ್ಜನ್ ಡಾ. ರವೀಂದ್ರನ್ ಕುಮೆರನ್ ಅಭಿಪ್ರಾಯ ಪಡುತ್ತಾರೆ. ಹೆಚ್ಚು ದೇಹ ಶ್ರಮವಿಲ್ಲದ ಜೀವನಶೈಲಿ ಹಾಗೂ ಕೊಬ್ಬಿನ ಅಂಶ ಜಾಸ್ತಿ ಇರುವ ಆಹಾರಗಳು ಕಡಿಮೆ ಬೆಲೆಗೆ ದೊರಕುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅವರ ಅಭಿಪ್ರಾಯ. ಅದರಲ್ಲಿಯೂ ಈ ಮೇಲಿನ ಅಂಶಗಳು ನಮ್ಮ ದೇಶದ ನಗರ ಪ್ರದೇಶದಲ್ಲಿ ಇರುವವರಿಗೆ ಹೆಚ್ಚು ಅನ್ವಯವಾಗುತ್ತದೆ ಎಂಬುದು ಅವರ ಅನಿಸಿಕೆ.

ಒಬ್ಬ ವ್ಯಕ್ತಿಯ ಎತ್ತರ, ತೂಕವನ್ನು ಗಣನೆಗೆ ತೆಗೆದುಕೊಂಡು ಬಿಎಂಐ ಅನ್ನು ಲೆಕ್ಕ ಹಾಕಲಾಗುತ್ತದೆ. ಇದರ ಆಧಾರದ ಮೇಲೆ ಸರಿಯಾದ ತೂಕವಿರುವವರು, ಹೆಚ್ಚು ತೂಕವಿರುವವರು, ಸ್ಥೂಲಕಾಯದವರು ಹಾಗೂ ಅಸಾಮಾನ್ಯ ಸ್ಥೂಲಕಾಯದವರು – ಎಂದು ಜನರನ್ನು ವರ್ಗೀಕರಿಸುವ ವಿಧಾನ ಜಗತ್ತಿನಾದ್ಯಂತ ಒಪ್ಪಿತವಾದ ಪದ್ಧತಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಬಿಎಂಐ ಒಬ್ಬ ವ್ಯಕ್ತಿಯಲ್ಲಿ 25 ಕ್ಕಿಂತ ಜಾಸ್ತಿ ಇದ್ದರೆ ಆತ ಸ್ಥೂಲಕಾಯದ ಗುಂಪಿಗೆ ಸೇರಿಸಲ್ಪಡುತ್ತಾನೆ. ಆದರೆ ಮೊದಲು ಪ್ರಸ್ತಾಪಿಸಿದ ಡಾ.ಕುಮೆರನ್ ಮತ್ತು ಇತರ ತಜ್ಞರ ಪ್ರಕಾರ ದಕ್ಷಿಣ ಏಷ್ಯಾದ ಜನತೆಗೆ ಈ ಅಂಕಿ ಎರಡು ಅಂಕಿ ಕಡಿಮೆ ಮಾಡಬೇಕು.

ಇವರಲ್ಲಿ ಮಧ್ಯ ಭಾಗದ ಬೊಜ್ಜು ಅಂದರೆ ಹೊಟ್ಟೆಯ ಭಾಗದ ಬೊಜ್ಜು ಜಾಸ್ತಿ ಇರುತ್ತದೆ. ಇದು ದೇಹದ ಇತರ ಭಾಗದ ಬೊಜ್ಜಿಗಿಂತ ಹೆಚ್ಚು ಅಪಾಯಕರ. ಹಾಗಾಗಿ ನಮ್ಮ ದೇಶದಲ್ಲಿ ಲೆಕ್ಕದ ಪ್ರಕಾರ 23ಕ್ಕಿಂತ ಹೆಚ್ಚಿನವರು ಸ್ಥೂಲಕಾಯದವರು. ಹಾಗಾದಾಗ ನಮ್ಮ ದೇಶದ ಪಟ್ಟಣ ವಾಸಿಗಳಲ್ಲಿ ಅರ್ಧದಷ್ಟು ಜನರು ಹೆಚ್ಚು ತೂಕವಿರುವ ವರ್ಗಕ್ಕೆ ಸೇರುತ್ತಾರೆ ಎಂದು ಡಾ. ಕುಮೆರನ್‌ರ ಅಭಿಮತ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆಚ್ಚು ಕೊಬ್ಬು ಹೊಂದಿರುವವರಲ್ಲಿ ಹಲವು ರೀತಿಯ ರೋಗಗಳು – ಮುಖ್ಯವಾಗಿ ಹತ್ತಕ್ಕೂ ಹೆಚ್ಚು ವಿಧದ ಕ್ಯಾನ್ಸರ್,
ಟೈಪ್ ೨ ಡಯಾಬಿಟಿಸ್, ನಾನಾ ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳಿಗೆ ಒಳಗಾಗುತ್ತಾರೆ.

ಕಳೆದ ವರ್ಷ ಜಗತ್ತಿನಾದ್ಯಂತ 2.8 ಮಿಲಿಯನ್ ಜನರು ಈ ಸ್ಥೂಲಕಾಯದ ಕಾರಣದಿಂದ ಮರಣ ಹೊಂದಿದ್ದರು. ಅಗತ್ಯಕ್ಕಿಂತ ಹೆಚ್ಚಾಗಿ ಇರುವ ಪ್ರತಿ 10 ಕೆ ಜಿ ತೂಕವು ವ್ಯಕ್ತಿಯ ಆಯಸ್ಸಿನಲ್ಲಿ ಮೂರು ವರ್ಷ ಕಡಿಮೆ ಮಾಡುತ್ತದೆ ಎಂದು ತಜ್ಞರ ಅಭಿಪ್ರಾಯ. ಸ್ಥೂಲಕಾಯ ಕಡಿಮೆ ಮಾಡುವ ಶಸ್ತ್ರಕ್ರಿಯೆ – ಬ್ಯಾರಿಯಾಟ್ರಿಕ್ ಸರ್ಜರಿಯಲ್ಲಿ ಕಳೆದ 20 ವರ್ಷಗಳಿಂದ ಅಪಾರ ಅನುಭವ ಪಡೆದ ಡಾ.ಚೌಬೆ
ಭಾರತ ದಲ್ಲಿ ಈ ಶಸಶಸ್ತ್ರಕ್ರಿಯೆಯ ಪ್ರವರ್ತಕರು. ಅವರು ತೀರಾ ಅಗತ್ಯವಿರುವಾಗ ಮಾತ್ರ ಮತ್ತು ತುಂಬಾ ಅಪಾಯಕಾರಿ ರೀತಿಯಲ್ಲಿರುವ ಸ್ಥೂಲಕಾಯದ ವ್ಯಕ್ತಿಗಳಲ್ಲಿ ಮಾತ್ರ ಈ ಚಿಕಿತ್ಸೆ ಮಾಡುತ್ತಾರೆ.

ಅವರ ಪ್ರಕಾರ ಸ್ಥೂಲಕಾಯ ಉಂಟುಮಾಡುವ ದೈಹಿಕ ಕಾಯಿಲೆಗಳ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿದೆ. ಆದರೆ, ಅದು ಉಂಟುಮಾಡುವ ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಹೆಚ್ಚಿನವರು ಗಮನ ಕೊಡುವುದಿಲ್ಲ. ಅವರು 1000 ಸ್ಥೂಲಕಾಯದ ವ್ಯಕ್ತಿಗಳಲ್ಲಿ ಸಮೀಕ್ಷೆ ನಡೆಸಿದರು. ಆಗ ಅವರಿಗೆ ಇದು ಆ ವ್ಯಕ್ತಿಗಳ ಲೈಂಗಿಕ ಆರೋಗ್ಯ ಮತ್ತು ಮಾನಸಿಕ ಪರಿಣಾಮಗಳ ಬಗೆಗೆ ಮನದಟ್ಟಾಯಿತು. ಹಾಗೆಯೇ ಅಂತಹ ವ್ಯಕ್ತಿಗಳಲ್ಲಿ ಆತ್ಮ ವಿಶ್ವಾಸ ಕಡಿಮೆ ಇರುತ್ತದೆ. ಕೆಲವೊಮ್ಮೆ ವೈವಾಹಿಕ ಜೀವನದ ಮೇಲೂ ತೀವ್ರತರ ದುಷ್ಪರಿಣಾಮ
ಬೀರುತ್ತದೆ ಎಂದು ಅವರ ಅಭಿಪ್ರಾಯ. ಅವರು ಈ ಬಗೆಗೆ ಜನಪ್ರಿಯ ನಟ ಸಿzರ್ಥ ಮುಖರ್ಜಿ ಅವರ ಉದಾಹರಣೆ ಕೊಡುತ್ತಾರೆ.

ಜನಪ್ರಿಯ ಚಲನಚಿತ್ರ ನಟ 56 ವರ್ಷದ ಇವರು 2015ರಲ್ಲಿ ತೂಕ ಇಳಿಸುವ ಶಸ್ತ್ರಕ್ರಿಯೆ – ಬ್ಯಾರಿಯಾಟ್ರಿಕ್ ಸರ್ಜರಿ ಮಾಡಿಸಿ ಕೊಂಡರು. ಮೊದಲು ಅವರೊಂದು ಉತ್ತಮ ಅಥ್ಲೀಟ್ ಆಗಿದ್ದರು. ಕೆಲವು ವರ್ಷಗಳ ಮೊದಲು ಅವರು 80-85 ಕೆ ಜಿ ತೂಕವಿದ್ದರು. ಅವರಿಗೆ ಒಂದು ಅನಿರೀಕ್ಷಿತ ಅಪಘಾತವಾಗಿ ಅವರ ಅಥ್ಲೀಟ್ ಜೀವನ ಕೊನೆಗೊಂಡಿತು. ನಂತರ ಅವರು ತುಂಬಾ ಜಿಡ್ಡು ಪದಾರ್ಥ, ಖಾರದ ಆಹಾರ, ವಿಪರೀತ ಮದ್ಯಪಾನ – ಈ ಎಲ್ಲ ದುಶ್ಚಟಗಳ ದಾಸರಾಗಿ ಅವರ ತೂಕ ಜಾಸ್ತಿಯಾಗುತ್ತ ಹೋಯಿತು. ಕೊನೆ ಯಲ್ಲಿ ತೂಕ 188 ಕೆ ಜಿಯಾಗಿ ವಿಪರೀತ ತೂಕದ ವ್ಯಕ್ತಿ ಆದರು.

ನಿರೀಕ್ಷೆಯಂತೆ ಆಗ ಹಲವಾರು ಕಾಯಿಲೆಗಳು ಬಂದವು. ಡಯಾಬಿಟಿಸ್, ವಿಪರೀತ ಕೊಲೆಸ್ಟರಾಲ್ ಮಟ್ಟ ಮತ್ತು ಥೈರಾಯಿಡ್ ಸಮಸ್ಯೆ ಳು ಕಾಣಿಸಿಕೊಂಡವು. ನಂತರ ಒಮ್ಮೆಲೇ ಅವರಿಗೆ ಉಸಿರಾಡಲು ತೀವ್ರ ರೀತಿಯ ಕಷ್ಟವಾಗತೊಡಗಿತು. ಮಲಗಿದರೆ ಉಸಿರಾಡಲು ಸಾಧ್ಯವಾಗದೆ ಕುಳಿತೇ ನಿದ್ದೆ ಮಾಡಬೇಕಾದ ಪರಿಸ್ಥಿತಿ ಬಂದಿತು. ಮೊದಲು ತಿಳಿಸಿದ ಡಾ.ಚೌಬೆಯವರಲ್ಲಿ ಬ್ಯಾರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡ ನಂತರ ಅವರ ಜೀವನ ಸ್ವಲ್ಪ ಉತ್ತಮಗೊಂಡು ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ತೂಕ 96 ಕೆ.ಜಿ.ಗೆ ಇಳಿದಿದೆ, ಬೈಕ್ ಚಲಾಯಿಸಬಲ್ಲರು, ಸ್ಟೇಜ್ ಮೇಲೆ ನಟಿಸಬಲ್ಲರು.

ತುಂಬಾ ಸ್ಥೂಲಕಾಯದ ದೇಹವಿದ್ದಾಗ ಅವರಿಗೆ ಮಹಡಿಯ ಮೆಟ್ಟಿಲುಗಳನ್ನು ಹತಲೂ ಸಾಧ್ಯವಾಗುತ್ತಿರಲಿಲ್ಲ. ಈಗ 17-18 ಕಿ.ಮೀ ದೂರ ನಡೆಯಬಲ್ಲರು. ಯಾವ ತೊಂದರೆಯೂ ಇಲ್ಲದೆ ಇಷ್ಟದ ಸಿಹಿ ತಿನ್ನಬಹುದು. ತಮಗೆ ಬೇಕಾದ ಫ್ಯಾಶನ್‌ನ ಉಡುಗೆ ತೊಡುಗೆ ತೊಡ ಬಲ್ಲರು. ಅವರ ಪ್ರಕಾರ ಕೊಬ್ಬು ಬೆಳೆಸಿ ತೂಕ ಹೆಚ್ಚಿಸಿಕೊಳ್ಳುವುದು ಒಂದು ರೀತಿಯ ಶಾಪ. ಆರಂಭದಲ್ಲಿಯೇ ಅದರ ಬಗ್ಗೆ ಗಮನ ಹರಿಸಿ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ಈಗ ಅವರು ಇತರರಿಗೆ ಸಲಹೆ ಕೊಡುತ್ತಾರೆ. ಸಿದ್ಧಾರ್ಥ ಮುಖರ್ಜಿ ಅಂತಹವರಿಗೆ ಅನಿವಾರ್ಯವಾಗಿ ಬ್ಯಾರಿಯಾಟ್ರಿಕ್ ಸರ್ಜರಿ ನಡೆಸಬೇಕಾಗುತ್ತದೆ.

ಆದರೆ ಮುಖ್ಯವಾಗಿ ವ್ಯಕ್ತಿ ತೂಕ ಜಾಸ್ತಿ ಆಗದಂತೆ ನೋಡಿಕೊಳ್ಳಬೇಕು. ಈ ಸ್ಥೂಲಕಾಯವು ಒಂದು ಕಾಯಿಲೆ ಎಂದು ಗುರುತಿಸಬೇಕು ಎಂಬ ಡಾ.ಚೌಬೆಯವರ ಪ್ರಯತ್ನಕ್ಕೆ ಸರಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ವಿಷಾದ ಭಾವ ಅವರಿಗಿದೆ. ಸರಕಾರವು ಸೋಂಕು ರೋಗಗಳನ್ನು ನಿಯಂತ್ರಿಸುವುದರ ತನ್ನ ಪರಿಶ್ರಮ ಹಾಕುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ತಡೆಯುವಲ್ಲಿ ತೀವ್ರ ಕ್ರಮ ಕೈಗೊಳ್ಳುತ್ತಿರುವಾಗ ಅವರಲ್ಲಿ ಈ ರೀತಿಯ ಜೀವನ ಶೈಲಿಯ ಕಾಯಿಲೆಗಳಿಗೆ ಗಮನಕೊಡಲು ಸೂಕ್ತ ಹಣಕಾಸಿನ ಕೊರತೆ ಇದೆ. ಕೆಲವು ವರ್ಷಗಳ ಮೊದಲು ಅನಾರೋಗ್ಯಕರ ಆಹಾರಗಳು ಮತ್ತು ಪಾನೀಯಗಳ ಬೆಲೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ಪ್ರಸ್ತಾಪ ಇತ್ತು. ಜನರು ಇಂತಹ ಅನಾರೋಗ್ಯಕರ ಆಹಾರವನ್ನು ಸೇವಿಸದೆ ಇರಲಿ ಎಂಬುದು ಅದರ ಉದ್ದೇಶ ವಾಗಿತ್ತು. ಆದರೆ ಇವುಗಳನ್ನು ಮಾರಾಟಮಾಡುವ ಕಂಪನಿಗಳು ಸರಕಾರದ ಅಧಿಕಾರಿಗಳಿಗೆ ಸೂಕ್ತ ಲಂಚ ಕೊಟ್ಟು ಆ ಪ್ರಸ್ತಾಪ ವನ್ನು ರದ್ದುಪಡಿಸಿಕೊಂಡವು. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಯಂತ್ರಿಸುವ ಕಾನೂನಿನ ರೀತಿಯಲ್ಲಿಯೇ ಈ ಜಂಕ್ ಫುಡ್ ಗಳನ್ನು ಮತ್ತು ಪಾನೀಯಗಳ ನಿಯಂತ್ರಣಕ್ಕೂ ಅದೇ ರೀತಿಯ ಕಾನೂನು ತರಬೇಕು ಎಂದು ತಜ್ಞರ ಸಲಹೆ.

ಕೋವಿಡ್ ಸಮಯದಲ್ಲಿ ಸ್ಥೂಲಕಾಯದ ಮಕ್ಕಳ ಸಂಖ್ಯೆ ಗಮನಾರ್ಹವಾಗಿ ಜಾಸ್ತಿಯಾಗಿದೆ ಎಂದು ಇಂಗ್ಲೆಂಡಿನ ಆರೋಗ್ಯ ವ್ಯವಸ್ಥೆ ಅಭಿಪ್ರಾಯ ಪಡುತ್ತದೆ. 2019-20ರಲ್ಲಿ ಶೇಕಡ 10ರಷ್ಟು ಮಕ್ಕಳು ಸ್ಥೂಲಕಾಯದವರಾದರೆ 20 -21 ರಲ್ಲಿ ಈ ಅಂಕಿ ಶೇಕಡ 14ಕ್ಕಿಂತ ಜಾಸ್ತಿಯಾಗಿದೆ ಎಂದರೆ ಇದರ ಬದಲಾವಣೆ ತುಂಬಾ ಗಮನಾರ್ಹವಾದುದು. ಕಳೆದ ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಈ ಸಂಖ್ಯೆ ಶೇಕಡ 21 ರಿಂದ ಶೇಕಡಾ 25 ಕ್ಕೂ ಜಾಸ್ತಿಯಾಗಿದೆ.

ಇವರಲ್ಲಿ ಸಮಾಜದ ಬಡ ಮಕ್ಕಳು ಬೇರೆಯವರಿಗಿಂತ ಎರಡು ಪಟ್ಟು ಜಾಸ್ತಿ ಇದ್ದಾರೆ ಎಂದು ಸಮೀಕ್ಷೆ ತಿಳಿಸುತ್ತದೆ. ಬಡತನ, ಕೋವಿಡ್ ಸಮಯದ ಲಾಕ್‌ಡೌನ್ ಹಾಗಲ್ಲದೆ ಮಾನಸಿಕ ಒತ್ತಡ – ಇವೆಲ್ಲ ಈ ರೀತಿಯ ಸಂಖ್ಯೆ ಜಾಸ್ತಿ ಯಾಗಲು ಕಾರಣ ಎನ್ನಲಾಗಿದೆ. ಕೋವಿಡ್‌ ಪೂರ್ವದ ಅಂಕಿ ಸಂಖ್ಯೆಗಳಿಗೆ ಹೋಲಿಸಿದರೆ ಒಂದು ವರ್ಷದಲ್ಲಿ ಈ ರೀತಿಯ ಹೆಚ್ಚಳ ತೀರಾ ಗಮನಾರ್ಹ ಎನ್ನಬಹುದು.

ಎಲ್ಲರಿಗೂ ತಿಳಿದಿರುವಂತೆ ದೈಹಿಕ ಆಟ ಶ್ರಮಗಳು ತೀವ್ರ ಕಡಿಮೆ ಯಾಗಿರುವುದು ಹಾಗೂ ಲಾಕ್ ಡೌನ್ ನ ಕಾರಣದಿಂದ ಮಕ್ಕಳ ಆನ್ ಲೈನ್ ಚಟುವಟಿಕೆ ಹೆಚ್ಚಾಗಿರುವುದು, ಹಾಗೆಯೇ ಈ ಅವಧಿಯಲ್ಲಿ ಜಂಕ್ ಆಹಾರಗಳನ್ನು ಮಿತಿಮೀರಿ ಸೇವಿಸುತ್ತಿರುವುದು ಮುಖ್ಯ ಕಾರಣ ಎನ್ನಬಹುದು. ಇಂಗ್ಲೆಂಡಿನಲ್ಲಿ ಮಾತ್ರವಲ್ಲ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಇದೇ ಪರಿಸ್ಥಿತಿ ಇದೆ ಎನ್ನಬಹುದು.