Friday, 13th December 2024

ಬಣ್ಣ…ನಮ್ಮ ಒಲವಿನ ಬಣ್ಣ…

ವಿದೇಶ ವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್

ಪ್ರತಿಯೊಂದು ದೇಶದ ಧ್ವಜದಲ್ಲೂ ಬಣ್ಣವಿದೆ. ಆ ಬಾವುಟದಲ್ಲಿರುವ ಪ್ರತಿಯೊಂದು ವರ್ಣಕ್ಕೂ ಒಂದೊಂದು ಸಂಕೇತವಿದೆ. ಒಂದು ರಾಷ್ಟ್ರ ಧ್ವಜಕ್ಕೆ ಘನತೆಯನ್ನು ತಂದುಕೊಡುವುದು ಅದರಲ್ಲಿರುವ ಬಣ್ಣ. ಧ್ವಜದಲ್ಲಿರುವ ಬಣ್ಣ ಇಡೀ ವಿಶ್ವಕ್ಕೇ ಆ ದೇಶದ ಸಂದೇಶವನ್ನು ಸಾರಿ ಹೇಳುತ್ತದೆ.

Dream in colours never seen before, be creative – ಈ ಹಿಂದೆ ಯಾವತ್ತೂ ನೋಡದ ಬಣ್ಣಗಳಲ್ಲಿ ಕನಸನ್ನು ಕಾಣಿ, ಸೃಜನ ಶೀಲರಾಗಿ ಎಂಬ ಮಾತಿದೆ. ಬಣ್ಣದ ಮಹತ್ವ, ತಾಕತ್ತು ತಿಳಿಸಿಕೊಡಲು ಬಹುಶಃ ಇದೊಂದು ಮಾತು ಸಾಕು ಎನಿಸುತ್ತದೆ. ಬಣ್ಣ ಪ್ರಕೃತಿಯ ಉಲ್ಲಾಸದ ನಗು. ಆತ್ಮದ ಮೇಲೆ ನೇರವಾಗಿ ಪ್ರಭಾವ ಬೀರುವ ಶಕ್ತಿ ಬಣ್ಣಕ್ಕಿದೆ. ಬಣ್ಣವಿಲ್ಲದ ಬದುಕನ್ನು ಊಹಿಸಲೂ ಸಾಧ್ಯವಿಲ್ಲ. ಬಣ್ಣಗಳು ಭಾವನೆಗಳ ಮೇಲೆ ಪ್ರಭಾವ ಬೀರಬಲ್ಲ ಸಾಮರ್ಥ್ಯ ಹೊಂದಿವೆ.

ಅನೇಕ ಸಂದರ್ಭಗಳಲ್ಲಿ ಮಾರುದ್ದ ಮಾತಿನಲ್ಲಿ ಹೇಳಬೇಕಾದದ್ದನ್ನು ಒಂದು ಬಣ್ಣ ಹೇಳುತ್ತದೆ. ಉದಾಹರಣೆಗೆ, ಸಂಕೇತ ದೀಪಗಳು. ಕೆಂಪು ಎಂದರೆ ನಿಲ್ಲಿ, ಹಳದಿ ಎಂದರೆ ಎಚ್ಚರಿಕೆ ಅಥವಾ ಜಾಗೃತೆ, ಹಸಿರು ಎಂದರೆ ಹೋಗಿ ಎಂದು ಗಂಟಲು ಹರಿಯುವಂತೆ ಹೇಳಬೇಕಾದದ್ದನ್ನು ಬಣ್ಣಗಳು ಸಂಕೇತದ ಮುಖಾಂತರ ತಿಳಿಸಿ ಕೊಡುತ್ತವೆ. ಒಂದು ಕಾರ್ಯ ನಿಷಿದ್ಧ ಎಂಬುದನ್ನು ವಸ್ತುವಿನ ಚಿತ್ರದ ಮೇಲಿರುವ ಕೆಂಪು ವರ್ತುಲ, ನಡುವಿನ ಒಂದು ಗೀಟು ತಿಳಿಸುತ್ತದೆ.

ಉದಾಹರಣೆಗೆ, ಉಗುಳಬಾರದು, ಕಸ ಎಸೆಯಬಾರದು, ತಿರುಗಬಾರದು ಇತ್ಯಾದಿ. ಮನುಷ್ಯ ಹುಟ್ಟಿಕೊಳ್ಳುವ ಮೊದಲೇ ಬಣ್ಣಗಳು ಹುಟ್ಟಿಕೊಂಡಿವೆ. ಗಿಡ-ಮರ, ಫಲ-ಪುಷ್ಪ, ಕಲ್ಲು-ಮಣ್ಣು, ಕ್ರಿಮಿ-ಕೀಟ, ಮೇಘ, ಹಿಮ ಎಲ್ಲವೂ ಮಾನವ ಭೂಮಿಗೆ ಬರುವುದಕ್ಕಿಂತ ಮೊದಲೇ ಇದ್ದವು. ಸೂರ್ಯೋದಯ, ಸೂರ್ಯಾಸ್ತಗಳು ಬಾನಿಗೆ ಬಣ್ಣ ಬಳಿಯುತ್ತಿದ್ದವು.

ಹುಣ್ಣಿಮೆಯ ಚಂದಿರ ಭೂ ಮಾತೆಗೆ ಬೆಳದಿಂಗಳ ತಂಪು ವರ್ಣ ಲೇಪಿಸುತ್ತಿದ್ದ. ಇಂದಿಗೂ ಕಾಣುತ್ತಿರುವ ನಕ್ಷತ್ರಗಳು ಆಕಾಶದಲ್ಲಿ ಅಂದೂ
ಬೆಳ್ಳಿಯಂತೆ ಮೀನುಗುತ್ತಿದ್ದವು. ನೀಲಿ ಮತ್ತು ಕೆಂಪು ಅಂಚಿ ನ ಬಿಳಿ ಬಣ್ಣದ ಸಿಡಿಲು ಆಗಲೂ ಭುವಿಗೆ ಅಪ್ಪಳಿಸುತ್ತಿತ್ತು. ನೆರಗು ಪಂಡಿತರ ಪ್ರಕಾರ ನಮ್ಮ ನಿತ್ಯ ಬದುಕಿನಲ್ಲಿ ಅವಿಭಾಜ್ಯವಾಗಿ ಬೆರೆತು ಹೋಗಿರುವ ಒಟ್ಟೂ ಬಣ್ಣಗಳ ಸಂಖ್ಯೆ ಒಂದು ಕೋಟಿಗೂ ಹೆಚ್ಚು ಎಂದರೆ ಆಶ್ಚರ್ಯ ಪಡಬೇಡಿ. ಈ ವರ್ಣಗಳನ್ನು ಪ್ರಮುಖವಾಗಿ ಪ್ರೈಮರಿ, ಸೆಕಂಡರಿ, ಟೆರ್ಶಿಯರಿ ಮತ್ತು ಕ್ವಾಟರ್ನರಿ.. ಹೀಗೆ ನಾಲ್ಕು ವರ್ಗಗಳಲ್ಲಿ
ವಿಂಗಡಿಸಲಾಗಿದೆ.

ಪ್ರೈಮರಿಯ ಮೂರು ಪ್ರಮುಖ ಬಣ್ಣಗಳೆಂದರೆ, ಕೆಂಪು, ಹಳದಿ ಮತ್ತು ನೀಲಿ. ಪೇಂಟಿಂಗ್, ಪ್ರಿಂಟಿಂಗ್ ವಿಷಯದಲ್ಲಿ ಇದು ನಿಜವಾದರೂ, ಉಳಿದ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲ. ಭೌತಶಾಸ ಮತ್ತು ಬೆಳಕಿನ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಕೆಂಪು, ಹಸಿರು ಮತ್ತು ನೀಲಿ
ಪ್ರಾಥಮಿಕ ಬಣ್ಣ. ಅದರೊಳಗೆ ಎಡಿಟಿವ್ ಮತ್ತು ಸಬ್‌ಸ್ಟ್ರಾಕ್ಟಿವ್ ಬಣ್ಣಗಳು ಎಂಬ ಎರಡು ಬಗೆ. ಸೆಕೆಂಡರಿಯಲ್ಲಿ ಹನ್ನೊಂದು, ಟೆರ್ಶಿಯರಿ ಯಲ್ಲಿ ಹದಿನೆಂಟು, ಕ್ವಾಟರ್ನರಿಯಲ್ಲಿ ಮೂವತ್ತೆರಡು ಬಣ್ಣಗಳನ್ನು ಹೆಸರಿಸಲಾಗಿದೆ. ಇವೆಲ್ಲ ಪ್ರಮುಖ ಬಣ್ಣಗಳಾದರೆ ಪ್ರತಿಯೊಂದು ಬಣ್ಣ ದಲ್ಲೂ ಕಡು, ಮಬ್ಬು, ತಿಳಿ, ಹೊಳಪು ಹೀಗೆ ಲಕ್ಷಾಂತರ ಛಾಯೆಗಳಿವೆ. ಅವೆಲ್ಲವನ್ನೂ ಸೇರಿಸಿದರೆ ಕೋಟಿ ದಾಟುತ್ತದಂತೆ! ಇದನ್ನೆಲ್ಲ ವಿಸ್ತರಿಸುತ್ತ ಹೋದರೆ, ಅದೇ ಒಂದು ವಿಜ್ಞಾನ.

ಪ್ರತಿಯೊಂದು ಬಣ್ಣಕ್ಕೂ ಒಂದೊಂದು ಗುಣ ಧರ್ಮವಿದೆ. ನಾವು ಹೆಚ್ಚು ನೋಡುವುದು ಬಿಳಿಯ ಬಣ್ಣವನ್ನು. ಬಹುತೇಕ ಮನೆಯ ಒಳಗಿನ ಗೋಡೆ, ಓದುವ, ಬರೆಯುವ ಪುಸ್ತಕದ ಹಾಳೆಗಳು, ಕುಡಿಯುವ ಹಾಲು, ಮಜ್ಜಿಗೆ ಇತ್ಯಾದಿಗಳೆಲ್ಲ ಬಿಳಿಯ ಬಣ್ಣ. ಆದರೆ ಎಷ್ಟೋ ಜನ ಬಿಳಿಯನ್ನು ಬಣ್ಣದ ಲೆಕ್ಕದಲ್ಲಿ ಹಿಡಿಯುವುದಿಲ್ಲ. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಹಾಡಿದರೂ, ಬಿಳಿಯೂ ಒಂದು ಬಣ್ಣವೇ ಎಂದು ಕೇಳುವವರೂ ಇದ್ದಾರೆ.

ಇರಲ್ವಂತೆ, ಬಿಳಿಯ ಬಣ್ಣ ಗೌರವ, ಸ್ವಚ್ಛತೆ, ಪರಿಶುದ್ಧತೆ, ಶಾಂತಿ, ನಮೃತೆ, ಸರಳತೆ ಇತ್ಯಾದಿಗಳ ಸಂಕೇತ. ಆರೋಗ್ಯ ಕ್ಷೇತ್ರದಲ್ಲಿ ರುವವರ ಅಚ್ಚುಮೆಚ್ಚಿನ ಬಣ್ಣ ಬಿಳಿ. ಕಪ್ಪು ಬಣ್ಣ ದುಃಖ, ಭಯ, ಆತಂಕ, ಸಾವು, ಶೋಕ, ಅಗಲುವಿಕೆ, ರಾತ್ರಿ, ಭೂಗತ, ಶೋಕ ಇತ್ಯಾದಿ ಗಳ ಪ್ರತೀಕ. ಹಾಗಂತ ಕಪ್ಪು ಬಣ್ಣವೆಂದರೆ ಎಲ್ಲವೂ ಋಣಾತ್ಮಕ ಎಂದೇನೂ ಅಲ್ಲ. ಶಕ್ತಿ, ಅಧುನಿಕತೆ, ತಂತ್ರಜ್ಞಾನ, ಔಪಚಾರಿಕತೆ
ಇತ್ಯಾದಿಗಳಲ್ಲೂ ಇದನ್ನು ಬಳಸುವುದಿದೆ. ಕೆಂಪು ಬಣ್ಣವೆಂದರೆ ಪ್ರೀತಿ, ಉತ್ಸಾಹ, ಆಕ್ರಮಣಕಾರಿ, ಶಾಖ, ಬೆಂಕಿ, ಅಪಾಯ, ಹಿಂಸೆ, ಇತ್ಯಾದಿ. ಥಟ್ಟನೆ ಜನರ ಗಮನ ಸೆಳೆಯುವ ಗುಣ ಈ ಬಣ್ಣಕ್ಕಿದೆ.

ಆದ್ದರಿಂದ ಸಾಕಷ್ಟು ಕಂಪನಿಗಳ ಲಾಂಛನದಲ್ಲಿ, ನಾಮಫಲಕಗಳಲ್ಲಿ ಈ ಬಣ್ಣ ಕಾಣಿಸುತ್ತದೆ. ಈ ಬಣ್ಣ ಕೋಪ ಅಥವಾ ಆಕ್ರಮಣ ಶೀಲತೆಯ ಪ್ರತೀಕವೂ ಹೌದು. ಮಾಲೀಕರು ಅಪಾಯಕ್ಕೆ ತೆರೆದುಕೊಂಡಿರುತ್ತಾರೆ ಎನ್ನುವ ಕಾರಣಕ್ಕೋ ಏನೋ, ಕೆಲವು ದೇಶಗಳಲ್ಲಿ ಕಾರು ವಿಮಾ ಕಂಪನಿಗಳು ಕೆಂಪು ಕಾರಿಗೆ ಹೆಚ್ಚಿನ ವಿಮಾಶುಲ್ಕ ವಿಧಿಸಿದ ದಾಖಲೆಗಳೂ ಇವೆ.

ಹಳದಿ ಬಣ್ಣ, ಆದರ್ಶ, ಭರವಸೆ, ತತ್ವಶಾಸ್ತ್ರ, ಸ್ನೇಹ, ಸಂತೋಷ ಇತ್ಯಾದಿಗಳನ್ನು ಸೂಚಿಸುತ್ತದೆ. ಬಂಗಾರದ ಬಣ್ಣವೂ ಹಳದಿಯಾದದ್ದ ರಿಂದ ಇದು ವೈಭವ, ಆಡಂಬರ, ಶ್ರೀಮಂತಿಕೆಯ ಸೂಚಕವೂ ಹೌದು. ಪ್ರತಿನಿತ್ಯ ಸೂರ್ಯೋದಯದ ಸಂದರ್ಭ ದಲ್ಲಿ ಆಗುವ ಹಳದಿ ಬಣ್ಣ, ಆಶಾವಾದದ ಪ್ರತೀಕವೂ ಹೌದು. ನೀಲಿ ಬಣ್ಣವೆಂದರೆ ತಂಪು, ಸ್ಥಿರತೆ, ಸಾಮರಸ್ಯ, ಏಕತೆ, ನಂಬಿಕೆ, ಸತ್ಯ, ವಿಶ್ವಾಸ, ಭದ್ರತೆ, ನಿಷ್ಠೆ, ಆಕಾಶ, ಕಡಲು, ನೀರು, ಆಳ, ಅಗಾಧತೆಯ ಸೂಚಕ. ಅದೇ ಸ್ವಲ್ಪ ಗಾಢ ನೀಲಿಯಾದರೆ, ಗಾಂಭೀರ್ಯ, ಜ್ಞಾನ, ಸಮಗ್ರತೆ, ಶಕ್ತಿಯ ಪ್ರತೀಕ. ನೇರಳೆ ಬಣ್ಣ ಆಧ್ಯಾತ್ಮ, ಉದಾತ್ತ ಮನೋಭಾವ, ಗೌರವಗಳ ಸೂಚಕವೂ ಹೌದು, ದುರಹಂಕಾರ, ಕ್ರೌರ್ಯ, ಶೋಕದ ಸಂಕೇತವೂ ಹೌದು.

ಕೇಸರಿ ಎಂದರೆ ಶಕ್ತಿ, ಸಮತೋಲನ, ಉತ್ಸಾಹ, ರೋಮಾಂಚನ, ಗಮನ ಸೆಳೆಯುವ ಗುಣ ಧರ್ಮ, ಉಷ್ಣತೆ ಇತ್ಯಾದಿ. ಹಸಿರು ಎಂದರೆ
ಪ್ರಕೃತಿ, ಪರಿಸರ, ಅದೃಷ್ಟ, ಆರೋಗ್ಯಕರ, ಫಲವತ್ತತೆ, ಚೈತನ್ಯ, ಉದಾರತೆ, ಸೇವಾ ಮನೋಭಾವ. ಕಂದು ಬಣ್ಣವೆಂದರೆ ಭೂಮಿ,
ಸ್ಥಿರತೆ, ವಿಶ್ವಾಸಾರ್ಹತೆ, ಸರಳತೆ. ಬೂದು ಬಣ್ಣ ಭದ್ರತೆ, ಬುದ್ಧಿವಂತಿಕೆ, ಘನತೆಯ ಪ್ರತೀಕ. ಗುಲಾಬಿ ಬಣ್ಣವೆಂದರೆ ಪ್ರೀತಿ, ಪ್ರಣಯ,
ಮೃದುತ್ವ, ಸ್ವೀಕಾರದ ಸಂಕೇತ. ಅದಕ್ಕೇ ಗುಲಾಬಿ ಎಂದರೆ ಸೀ ಸಾಮ್ರಾಜ್ಯಕ್ಕೆ ಸಮೀಪ. ಮಹಿಳೆಯರ ದಿನಾಚರಣೆ, ತಾಯಂದಿರ ದಿನಾಚರಣೆಗಳಲ್ಲಿ ಈ ವರ್ಣದ್ದೇ ಪಾರುಪತ್ಯ.

ಎಲ್ಲರಿಗೂ ಎಲ್ಲ ಬಣ್ಣಗಳೂ ಇಷ್ಟವಾಗಬೇಕೆಂದಿಲ್ಲ. ಎಲ್ಲವನ್ನೂ ತ್ಯಜಿಸಿದ ಸನ್ಯಾಸಿಯೇ ಆದರೂ ಕೇಸರಿ ಅಥವಾ ಬಿಳಿ ಬಣ್ಣವನ್ನು ಇಷ್ಟಪಡುತ್ತಾನೆ. ಬಣ್ಣಗಳು ಮನುಷ್ಯನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ, ಭಾವನೆಗಳೊಂದಿಗೆ ಮಿಶ್ರಿತವಾಗಿ ಬೆಸೆದು ಕೊಳ್ಳುತ್ತವೆ. ಇತ್ತೀಚೆಗಂತೂ ಬಣ್ಣಗಳನ್ನು ಚಿಕಿತ್ಸೆಗಳಲ್ಲಿಯೂ (ಕ್ರೋಮೋಥೆರಪಿ) ಬಳಸಿಕೊಳ್ಳಲಾಗುತ್ತಿದೆ. ಮೆದುಳು ಅಸ್ವಸ್ಥತೆ ಹೊಂದಿರುವ ಅಥವಾ ಭಾವನಾತ್ಮಕವಾಗಿ ತೊಂದರೆಗೆ ಒಳಗಾದ ಜನರ ಮೇಲೆ ಬಣ್ಣಗಳು ಭಾರೀ ಪರಿಣಾಮ ಬೀರುತ್ತವೆ ಎಂದು ಕಂಡುಹಿಡಿಯಲಾಗಿದೆ. ನೀಲ ವರ್ಣ ಜನರನ್ನು ಶಾಂತಗೊಳಿಸುವಲ್ಲಿ, ರಕ್ತದ ಒತ್ತಡ ಕಡಿಮೆ ಮಾಡುವಲ್ಲಿ, ಉಸಿರಾಟದ ತೊಂದರೆ ಸರಿಪಡಿಸುವಲ್ಲಿ ಪರಿಣಾಮಕಾರಿ.

ಆತಂಕ ಅಥವಾ ಖಿನ್ನತೆಯಿಂದ ಬಳಲುತ್ತಿರುವವರ, ಮಾನಸಿಕವಾಗಿ ಕುಗ್ಗಿದವರ ಚಿಕಿತ್ಸೆಗೆ ಹಸಿರು ಬಣ್ಣವನ್ನು ಬಳಸುತ್ತಾರೆ. ಇಂತಿರ್ಪ ಬಣ್ಣಗಳು ಭಾವನೆಗಳ ಮೇಲೆ ಪ್ರಭಾವ ಬೀರುವುದಲ್ಲದೆ, ಧರ್ಮ ಮತ್ತು ಸಂಸ್ಕೃತಿಗಳಲ್ಲೂ ತಮ್ಮದೇ ಅರ್ಥವನ್ನು ಹೊಂದಿವೆ. ಹಿಂದೂ ಧರ್ಮದಲ್ಲಿ ಕೇಸರಿ ಅತ್ಯಂತ ಪವಿತ್ರವಾದ ಬಣ್ಣ. ಕೇಸರಿ ಮಾನವನಲ್ಲಿರುವ ಕಲ್ಮಶವನ್ನು ಸುಡುವ ಬೆಂಕಿಯ ಪ್ರತೀಕ. ಈ ಧರ್ಮದಲ್ಲಿ ಕೆಲವೊಮ್ಮೆ ಕಡು ಹಳದಿಯನ್ನು ಬಳಸುವುದೂ ಇದೆ. ಇದು ಜ್ಞಾನ ಮತ್ತು ಕಲಿಕೆಯನ್ನು ಪ್ರತಿನಿಧಿಸುತ್ತದೆ.

ಹಸಿರು, ಇಸ್ಲಾಂ ಧರ್ಮದ ಸಾಂಪ್ರದಾಯಿಕ ಬಣ್ಣ. ಸ್ವರ್ಗದಲ್ಲಿ ಹಾಸುವ ರತ್ನಗಂಬಳಿಯಿಂದ ಹಿಡಿದು, ತೊಡುವ ಉಡುಪಿನವರೆಗೆ ಅನೇಕ
ವಸ್ತುಗಳು ಹಸಿರು ಬಣ್ಣದ್ದು ಎಂದು ಧರ್ಮಗ್ರಂಥ ಕುರಾನ್‌ನಲ್ಲಿ ಉಲ್ಲೇಖವಿದೆ. ಅನೇಕ ಕಡೆಗಳಲ್ಲಿ, ಯಾರಾದರೂ ತೀರಿಹೋದ ನಂತರ ಅವರನ್ನು ಮಣ್ಣು ಮಾಡಿ ಮೇಲೆ ಹಸಿರು ಬಟ್ಟೆ ಹೊದೆಸುವ ಸಂಪ್ರದಾಯ ಇನ್ನೂ ಇದ್ದರೆ, ಈ ಲೋಕದಿಂದ ಹೊರಟ ಜೀವ ಹಸಿರು ರತ್ನ ಗಂಬಳಿಯ ಮೇಲೆ ಕಾಲಿಟ್ಟು ಸ್ವರ್ಗ ಸೇರಲಿ ಎಂಬ ಅರ್ಥದಿಂದ.

ಕ್ರೈಸ್ತ ಧರ್ಮದಲ್ಲಿ ಕೆಂಪು ಬಣ್ಣ ಏಸುವಿನ ರಕ್ತ, ತ್ಯಾಗದ ಸಂಕೇತವಾದರೆ, ಬಿಳಿ ಬಣ್ಣ ಏಸುವಿನ ದೇಹದ ಸಂಕೇತ. ಕಪ್ಪು ಬಣ್ಣ ಪಾಪದ ಸಂಕೇತ. ಹಿಂದೂ ಹಬ್ಬಗಳಲ್ಲಿ ಕೇಸರಿ, ಮುಸ್ಲಿಮ್ ಹಬ್ಬಗಳಲ್ಲಿ ಹಸಿರು ಬಣ್ಣ ಹೆಚ್ಚು ಬಳಕೆಯಾದರೆ, ಕ್ರಿಸ್ಮಸ್ ಹಬ್ಬದಲ್ಲಿ ಕೆಂಪು, ಬಿಳಿ ಮತ್ತು ಹಸಿರನ್ನು ಹೆಚ್ಚು ಬಳಸಲಾಗುತ್ತದೆ. ಹಾಲೋವಿನ್ ಸಂದರ್ಭದಲ್ಲಿ ಕಪ್ಪು ಮತ್ತು ಕಿತ್ತಳೆ ಬಣ್ಣವನ್ನು ಹೆಚ್ಚು ಬಳಸಲಾಗುತ್ತದೆ. ಈಸ್ಟರ್ ಸಮಯದಲ್ಲಿ ಬಿಳಿ ಮತ್ತು ಬೆಳ್ಳಿಯ ಬಣ್ಣ ಹೆಚ್ಚು ಕಾಣುತ್ತದೆ.

ಹಾಗಾದರೆ, ಹೋಳಿ ಹಬ್ಬದಲ್ಲಿ ಯಾವ ಬಣ್ಣ? ಬಹುತೇಕ ಎಲ್ಲ ಪ್ರಧಾನ ವರ್ಣಗಳನ್ನೂ ಬಳಸುವ, ರಂಗುಗಳೇ ಪ್ರಧಾನವಾದ ಈ ಹಬ್ಬ
ಬಣ್ಣಗಳಿಗೆ ಮೀಸಲು. ಪ್ರತಿಯೊಂದು ದೇಶದ ಧ್ವಜದಲ್ಲೂ ಬಣ್ಣವಿದೆ. ಆ ಬಾವುಟದಲ್ಲಿರುವ ಪ್ರತಿಯೊಂದು ವರ್ಣಕ್ಕೂ ಒಂದೊಂದು ಸಂಕೇತವಿದೆ. ಒಂದು ರಾಷ್ಟ್ರ ಧ್ವಜಕ್ಕೆ ಘನತೆಯನ್ನು ತಂದುಕೊಡುವುದು ಅದರಲ್ಲಿರುವ ಬಣ್ಣ. ಧ್ವಜದಲ್ಲಿರುವ ಬಣ್ಣ ಇಡೀ ವಿಶ್ವಕ್ಕೇ ಆ
ದೇಶದ ಸಂದೇಶವನ್ನು ಸಾರಿ ಹೇಳುತ್ತದೆ. ಆ ಕಾರಣಕ್ಕಾಗಿಯೇ ಒಂದು ರಾಷ್ಟ್ರಧ್ವಜಕ್ಕೆ ಅಷ್ಟು ಮರ್ಯಾದೆ, ಗೌರವ.

ಉಳಿಯುವ ಮನೆಯ ಹೊರಗಿನ ಬಣ್ಣದಿಂದ ಹಿಡಿದು, ತೊಡುವ ಒಳ ಉಡುಪಿನ ಬಣ್ಣದವರೆಗೆ ಕಾಳಜಿ ವಹಿಸುತ್ತಾನೆ ಎಂದರೆ, ಮನುಷ್ಯನ
ಜೀವನದಲ್ಲಿ ಬಣ್ಣಗಳ ಪ್ರಭಾವ ಏನು, ಎಷ್ಟು ಎಂಬುದು ಅರ್ಥವಾಗುತ್ತದೆ. ಕನಸು ಕಂಡರೂ ಬಣ್ಣದ ಕನಸು ಕಾಣಬೇಕು. ಬಣ್ಣವಿಲ್ಲದ ವಸ್ತು
(ಗಾಳಿ, ನೀರು ಹೊರತುಪಡಿಸಿ) ಇಲ್ಲ. ಬಣ್ಣವಿಲ್ಲದೆ ಬದುಕಿಲ್ಲ. ಇಷ್ಟಾಗಿಯೂ, best colour in the whole world is the one that looks good on you ಎಂಬ ಮಾತಿದೆ. ಅಂದಹಾಗೆ, ನಿಮ್ಮ ಇಷ್ಟದ ಬಣ್ಣ ಯಾವುದು?