Wednesday, 18th September 2024

ಜಾರ್ಜ್ ಫರ್ನಾಂಡಿಸ್ ಎಂಬ ಮಹಾನಾಯಕ

ಸಂಸ್ಮರಣೆ

ಜಯಪ್ರಕಾಶ್ ಪುತ್ತೂರು

ಬೆಂಗಳೂರಿನ ವೈಮಾನಿಕ ಅಭಿವೃದ್ಧಿ ಸಂಸ್ಥೆಯು ದೇಶದ ಪ್ರತಿಷ್ಠಿತ ಯುದ್ಧ ವಿಮಾನಗಳನ್ನು ವಿನ್ಯಾಸಗೊಳಿಸಿತ್ತು. ಅಭಿವೃದ್ಧಿ ಸಂಬಂಧಿತ ಸಂಶೋಧನೆ ನಡೆಸುವ ಗುರುತರ ಉದ್ದೇಶ ಹೊಂದಿದ್ದ ಈ ಸಂಸ್ಥೆಗೆ ರಕ್ಷಣಾ ಇಲಾಖೆಯಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಧಿಕಾರವಿತ್ತು. ಹೀಗಾಗಿ ಭಾರತದ ಪ್ರಪ್ರಥಮ ಲಘು ಯುದ್ಧವಿಮಾನದ (ಎಲ್‌ಸಿಎ) ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ದೇಶ-ವಿದೇಶಗಳ ಹಲವಾರು ಗಣ್ಯರು ಸಂಸ್ಥೆಯನ್ನು ಸಂದರ್ಶಿಸುವುದಿತ್ತು.

ದೇಶದ ರಕ್ಷಣಾ ಸಚಿವರ ನೇರ ಉಸ್ತುವಾರಿಯಿದ್ದ ಈ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಾನು, ಅತಿಗಣ್ಯ
ವ್ಯಕ್ತಿಗಳ ಭೇಟಿಯ ವೇಳೆ ಅನುಸರಿಸಬೇಕಾದ ಶಿಷ್ಟಾಚಾರ, ಅವರ ಬೇಕು-ಬೇಡಗಳಂಥ ಸೂಕ್ಷ್ಮ ವಿಚಾರಗಳನ್ನೂ ಗಮನದಲ್ಲಿರಿಸಿಕೊಂಡು ಸಮನ್ವಯಾ
ಧಿಕಾರಿಯಾಗಿಯೂ ಕೆಲಸ ಮಾಡಬೇಕಿತ್ತು. ಮುಂದೆ ಡಿಆರ್‌ಡಿಒದ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ನಂತರವೂ ಈ ಜವಾಬ್ದಾರಿ ನನಗೇ ಲಭಿಸುತ್ತಿತ್ತು. ಡಾ. ಎಪಿಜೆ ಅಬ್ದುಲ್ ಕಲಾಂ ಮಾತ್ರ ವಲ್ಲದೆ, ದೇಶದ ನಾಲ್ವರು ರಕ್ಷಣಾ ಸಚಿವರು, ಬೇರೆ ರಾಷ್ಟ್ರಗಳ ದಂಡನಾಯಕರುಗಳು ಹೀಗೆ ಈ ಅವಧಿಯಲ್ಲಿ ನಾನು ಒಡನಾಡಿದ ಮಹಾರಥಿಗಳ ಪಟ್ಟಿ ಸಾಕಷ್ಟು ದೊಡ್ಡದಿದೆ.

ಈ ಪೈಕಿ ನನಗೊದಗಿದ ವಿಶೇಷ ಭಾಗ್ಯವೆಂದರೆ, ರಾಷ್ಟ್ರ ಕಂಡ ಧೀಮಂತ ಮುತ್ಸದ್ದಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರ ಜಾರ್ಜ್ ಫೆರ್ನಾಂಡಿಸ್ ಅವರೊಂದಿಗೆ ಒಡನಾಡುವ ಅವಕಾಶ ಒಲಿದಿದ್ದು. ನೇರನಿಲುವು, ನರೆತ ತಲೆಗೂದಲು, ಮಗುವಿನಂಥ ಮುಗ್ಧನಗುವಿನ ಜತೆಗೆ, ಸರಳತೆಯ ಪ್ರತೀಕವಾದ ಜುಬ್ಬಾ-ಪೈಜಾಮ ಧರಿಸುತ್ತಿದ್ದ ಜಾರ್ಜ್ ಅವರ ವ್ಯಕ್ತಿತ್ವಕ್ಕೆ ಮಾರುಹೋಗದವರೇ ಇಲ್ಲ. ಸದಾ ಇಕಾನಮಿ ದರ್ಜೆಯ ಟಿಕೆಟ್‌ನಲ್ಲಿ ಸಂಗಡಿಗರೊಂದಿಗೆ ಸಂಚರಿಸುತ್ತಿದ್ದ ಅವರು ವಿಮಾನದಿಂದ ಇಳಿಯುವ ವೇಳೆ, ಬಿಸಿನೆಸ್ ಕ್ಲಾಸ್‌ಗೆ ಒಗ್ಗಿಕೊಂಡಿದ್ದ ಅಧಿಕಾರಿಗಳು ಅಲ್ಲಿಂದಲೇ ಹಿಂದೆ ತಿರುಗಿ ಬಂದು ಜಾರ್ಜ್ ಅವರು ಇಳಿಯುವವರೆಗೆ ಕಾದು ನಿಲ್ಲುತ್ತಿದ್ದ ಸಂದರ್ಭಗಳಿದ್ದವು.

ನೋಡಲು ಒರಟಾಗಿ ಕಂಡರೂ ಅವರು ನಿಜಕ್ಕೂ ಮೃದುಹೃದಯಿ. ಒಡನಾಟ ಬೆಳೆದಂತೆ ಜಾರ್ಜ್ ಅವರ ಸರಳತೆ- ಸ್ನೇಹಪರತೆಗಳಿಗೆ ನಾನು ಮಾರುಹೋಗಿದ್ದೆ. ಎಲ್ಲಿ ನೋಡಿದರೂ ಮುಗುಳ್ನಗುತ್ತಾ ‘ದಾನೆ ಭಟ್ಟರೆ?’ (ಏನು ಭಟ್ಟರೆ?’) ಎಂದು ತುಳು ಭಾಷೆಯಲ್ಲಿ ನನ್ನೊಂದಿಗೆ ಸಂಭಾಷಿಸುತ್ತಿದ್ದ ಪರಿಯನ್ನು ನಾನೆಂದಿಗೂ ಮರೆಯಲಾರೆ. ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿನ ನಮ್ಮ ರಾಡಾರ್ ವಿನ್ಯಾಸ ಮತ್ತು ಸಂಶೋಧನಾ ಕೇಂದ್ರಕ್ಕೆ (ಎಲ್‌ಆರ್‌ಡಿಇ) ಒಮ್ಮೆ ಅವರು ಭೇಟಿ ನೀಡುವುದಿತ್ತು. ಹೀಗಾಗಿ ಸನಿಹದ ನಮ್ಮ ವಿಐಪಿ ಅತಿಥಿ ಗೃಹದಲ್ಲಿ ಹಿಂದಿನ ರಾತ್ರಿಯೇ ಬಂದು ತಂಗಿದ್ದ ಜಾರ್ಜ್, ಮರುದಿನ ಮುಂಜಾನೆಯ ಉಪಾಹಾರ ಸೇವನೆಯ ನಂತರ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅವರ ಭದ್ರತೆಗೆ ಮೀಸಲಾಗಿದ್ದ ಹಲವು ವಾಹನಗಳು ಮುಖ್ಯದ್ವಾರದಲ್ಲಿ ಸಾಲುಗಟ್ಟಿ ನಿಂತಿದ್ದವು. ಹೊರಬಂದ ಜಾರ್ಜ್ ಅಲ್ಲಿಯೇ -ಲ್ ಹಿಡಿದು ನಿಂತಿದ್ದ ನನ್ನನ್ನು ‘ಪ್ರಯೋಗಾಲಯ ಇಲ್ಲಿಂದ ಎಷ್ಟು ದೂರ?’ ಎಂದು ಕೇಳಿದರು.

‘೨-೩ ಫರ್ಲಾಂಗ್ ಒಳಗಿದೆ, ಅಷ್ಟೇ’ ಎಂದುತ್ತರಿಸಿದ ನಾನು ಸಮಯ ನಿರ್ವಹಣೆಗಷ್ಟೇ ಹೀಗೆ ಕೇಳಿದ್ದಾರೆ ಎಂದುಕೊಂಡಿದ್ದೆ. ಆದರೆ ಜಾರ್ಜ್ ಕೈಯಲ್ಲಿ -ಲು ಹಿಡಿದುಕೊಂಡವರೇ, ‘ನಾವು ನಡೆದುಕೊಂಡೇ ಹೋಗಲಾಗದೇ?’ ಎನ್ನುತ್ತಾ ನನ್ನ ಹೆಗಲ ಮೇಲೆ ಕೈಹಾಕಿ ಹೊರಟೇಬಿಟ್ಟರು. ಅವರ ಭದ್ರತೆಗಾಗಿ
ಸಾಲುಗಟ್ಟಿ ನಿಂತಿದ್ದ ಕಾರುಗಳ ಪಕ್ಕದಲ್ಲೇ ನಾವು ಸಾಗುವಾಗ, ಸೇನಾಽಕಾರಿಗಳು, ಇತರ ಅಧಿಕಾರಿ ಗಳು ಸೇರಿದಂತೆ ಸುಮಾರು ೨೦-೩೦ ಮಂದಿ
ಕಾಲ್ನಡಿಗೆಯಲ್ಲೇ ಅವರನ್ನು ಹಿಂಬಾಲಿಸಿದರು. ಅವರ ಹಿಂದೆ ಭದ್ರತಾ ವಾಹನಗಳ ಸಾಲು! ದಾರಿಯುದ್ದಕ್ಕೂ ನಿಂತಿದ್ದ ಪೊಲೀಸ್ ಸಿಬ್ಬಂದಿ ಮತ್ತು
ಸಾರ್ವಜನಿಕರು ಈ ದೃಶ್ಯವನ್ನು ಬೆಕ್ಕಸ ಬೆರಗಾಗಿ ನೋಡುತ್ತಿರುವಂತೆಯೇ ನಾವೆಲ್ಲ ಎಲ್‌ಆರ್‌ಡಿಇ ನೆಲೆಯನ್ನು ತಲುಪಿದ್ದೆವು!

ಇನ್ನೊಮ್ಮೆ, ನಮ್ಮ ಎಲ್‌ಸಿಎ ವಿಮಾನದ ಅಭಿವೃದ್ಧಿ ಹಾಗೂ ಪ್ರಥಮ ಹಾರಾಟದ ತಯಾರಿಯ ಕುರಿತು ಜಾರ್ಜ್ ಒಂದು ದಿನದ ಪರಾಮರ್ಶೆಗಾಗಿ
ಬರುವವರಿದ್ದರು. ನಮ್ಮ ಕಾರ್ಯಕ್ರಮ ನಿರ್ದೇಶಕರಾದ ಡಾ. ಕೋಟಾ ಹರಿನಾರಾಯಣ ಅವರು ಎಲ್ಲ ಪೂರ್ವತಯಾರಿಯ ಕುರಿತು ಚರ್ಚಿಸುತ್ತಾ,
‘ಜಯಪ್ರಕಾಶ್, ಸಚಿವರು ನಿಮ್ಮ ಮಂಗಳೂರಿನವರು. ಹೀಗಾಗಿ ಅವರಿಗೆ ಖುಷಿಕೊಡುವ ಖಾದ್ಯಗಳ ಬಗ್ಗೆ ಗಮನಹರಿಸಿ ಮೆನು ನೀಡುವ ಕಾರ್ಯ
ನಿಮ್ಮದು’ ಎಂದರು. ಅಷ್ಟೊತ್ತಿಗಾಗಲೇ ಈ ಭೇಟಿಯ ವಿವಿಧ ಹಂತದ ಕಾರ್ಯಗಳಲ್ಲಿ ಸಕ್ರಿಯ ನಾಗಿದ್ದ ನನಗೆ ಇದು ಹೊಸ ಸವಾಲಾಗಿ ಹೆಗಲೇರಿತು.

ಕಾರಣ ಈ ಭೋಜನವು ನಮ್ಮ ಬಹುಮಾನ್ಯರ ಕ್ಯಾಂಟೀನ್‌ನಲ್ಲಿ ನಡೆಯಲಿದ್ದು, ಆಗ ದಕ್ಷಿಣ ಕನ್ನಡ ಜಿಲ್ಲೆಯ ರಾಮಚಂದ್ರ ಭಟ್ಟರು ಅದನ್ನು ನಡೆಸುತ್ತಿದ್ದರು. ‘ಹುಟ್ಟಿದೂರನ್ನು ಬಿಟ್ಟು ದಶಕಗಳೇ ಆಗಿರುವು ದರಿಂದ ಜಾರ್ಜ್ ಅವರೀಗ ಉತ್ತರ ಭಾರತದ ಶೈಲಿಯ ಖಾದ್ಯಗಳಿಗೆ ಅನಿವಾರ್ಯವಾಗಿ ಒಗ್ಗಿಕೊಂಡಿರಬಹುದು. ಹೀಗಾಗಿ ಭೋಜನವನ್ನು ಪಕ್ಕಾದಕ್ಷಿಣ ಕನ್ನಡದ ಶೈಲಿಯಲ್ಲಿ ತಯಾರಿಸಿದರೆ ಅವರಿಗೆ ಖುಷಿಯಾಗಬಹುದು’ ಎಂದು ಭಟ್ಟರೊಂದಿಗೆ ಪ್ರಸ್ತಾಪಿಸಿ, ಶ್ಯಾವಿಗೆ, ಪತ್ರೊಡೆ, ತಂಬುಳಿ, ನೀರು ದೋಸೆ, ಮಾವಿನಕಾಯಿ ಚಟ್ನಿ ಹೀಗೆ ಮೆನುವನ್ನು ಸಿದ್ಧಪಡಿಸಿದೆ.

ನಾವಿಬ್ಬರೂ ಅಪ್ಪಟ ಸಸ್ಯಾಹಾರಿಗಳಾಗಿದ್ದರಿಂದ, ನಾವು ಕೇಳಿದ ಅನುಭವದ ಹಿನ್ನೆಲೆಯಲ್ಲಿ ಮತ್ತೊಂದು ಕಡೆಯಿಂದ ‘ಅಂಜಲ್’ ಮೀನಿನು ಸಾರು, ನಾಟಿಕೋಳಿಯ ಖಾದ್ಯವನ್ನು ತರಿಸಲು ತೀರ್ಮಾನಿಸಿದೆವು. ಬೆಳಗಿನ ವಿಶ್ಲೇಷಣಾ ಸಭೆ ಮುಗಿದು ಊಟದ ಸಮಯವಾದಾಗ, ‘ಸರ್, ನಮ್ಮೂರಿನ ಊಟವನ್ನೇ ಸಿದ್ಧಪಡಿಸಿದ್ದೇವೆ. ಮಾಂಸಾಹಾರದ ಆಯ್ಕೆಯೂ ಇದೆ’ ಎಂದಾಗ, ಜಾರ್ಜ್ ಅವರು ಅಷ್ಟೂ ವಿವರಕ್ಕೆ ಆಸಕ್ತಿಯಿಂದ ಕಿವಿಗೊಟ್ಟು,
‘ಭಟ್ಟರೇ, ನಾನು ಬಹಳ ವರ್ಷದಿಂದ ಸಸ್ಯಾಹಾರಿಯಾಗಿರುವೆ’ ಎಂದರು. ನಾನು ಪಟ್ಟುಬಿಡದೆ, ‘ಸರ್, ಮಂಗಳೂರಿನ ಅಂಜಲ್ ಮೀನಿನ – ಮಾಡಿಸಿದ್ದೇವೆ; ರುಚಿ ನೋಡದಿದ್ದರೆ ಹೇಗೆ?’ ಎಂದೆ. ಅವರಿಗೇನನ್ನಿಸಿತೋ ಏನೋ, ‘ಓಹೋ… ಹಾಗೇ ಆಗಲಿ’ ಎಂದು ತಲೆಯಾಡಿಸಿದರು.

ಬಾಯಿ ಚಪ್ಪರಿಸಿಕೊಂಡು ಊಟಮಾಡಿದ ಜಾರ್ಜ್ ನನ್ನ ಹೆಗಲ ಮೇಲೆ ಕೈಯಿರಿಸಿ, ‘ಭಟ್ಟರೇ, ಎಷ್ಟು ಸೊಗಸಾದ ಊಟ ಹಾಕಿಸಿದಿರಿ; ಇಂಥ
ಊಟವನ್ನು ಸವಿಯದೆ ದಶಕಗಳ ಮೇಲಾಯಿತು’ ಎಂದು ಖುಷಿಪಟ್ಟರು. ಆ ಬಳಿಕ ನಡೆದ ಸಭೆಯು ಸಂಜೆ ೭ ಗಂಟೆಯನ್ನೂ ಮೀರಿತ್ತು. ಕೊನೆಗೆ ಸಂಪ್ರ
ದಾಯದಂತೆ ನಾವು ಸಂದರ್ಶಕರ ಪುಸ್ತಕ ನೀಡಿ ಅಭಿಪ್ರಾಯ ಬರೆಯುವಂತೆ ಕೋರಿದೆವು. ಅಂತೆಯೇ ಅವರು ಬರೆದ ಸಾಲುಗಳ ಭಾವಾರ್ಥ ಹೀಗಿತ್ತು: ‘ಇಂದು ನನಗೆ ಅತ್ಯದ್ಭುತವಾದ ಭೋಜನ ವನ್ನು ನೀಡಿದ್ದಕ್ಕಾಗಿ ನಾನು ಋಣಿಯಾಗಿರುವೆ.

ಇದು ಮಂಗಳೂರಿನಲ್ಲಿ ನಾನು ಕಳೆದ ಬಾಲ್ಯದ ದಿನಗಳನ್ನು ನೆನಪಿಸಿತು’. ಇದೇ ರೀತಿಯಲ್ಲಿ ನಮ್ಮ ಯುದ್ಧವಿಮಾನದ ಕುರಿತಾಗಿಯೂ ಅವರು
ಶ್ಲಾಘನೆಯ ಮಾತುಗಳನ್ನು ಬರೆದಿದ್ದರು. ಇದನ್ನು ಕಂಡು ಡಾ. ಕೋಟಾ ಅವರು ಹುಸಿಕೋಪದಲ್ಲಿ ಪ್ರತಿಕ್ರಿಯಿಸುತ್ತಾ, ‘ಏನಯ್ಯಾ, ನೀನು ಸಜ್ಜು
ಗೊಳಿಸಿದ ಊಟವು ನಮ್ಮ ಯುದ್ಧವಿಮಾನಕ್ಕಿಂತಲೂ ದೊಡ್ಡದಾಯಿತಲ್ಲಾ?’ ಎಂದು ಹೇಳಿ ಮನಸಾರೆ ನಕ್ಕರು.

ಜಾರ್ಜ್ ಅವರು ಕರ್ನಾಟಕದ ಮತ್ತೋರ್ವ ರಾಜಕಾರಣಿ ಜೆ.ಎಚ್. ಪಟೇಲ್ ಅವರ ಆತ್ಮೀಯರು. ಇಬ್ಬರೂ ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಚಳವಳಿಯಿಂದ ಪ್ರಭಾವಿತರಾದವರು, ಇಬ್ಬರೂ ಶಾಂತವೇರಿ ಗೋಪಾಲಗೌಡರ ಶಿಷ್ಯರು. ಜಾರ್ಜ್ ಅವರ ಮತ್ತೊಂದು ಬೆಂಗಳೂರು
-ಭೇಟಿ ವೇಳೆ ನಾನು ಅವರೊಂದಿಗೆ ಸಮನ್ವಯಾಧಿಕಾರಿಯಾಗಿದ್ದೆ. ಆ ಸಮಯದಲ್ಲಿ ಪಟೇಲರು ಅನಾರೋಗ್ಯದಿಂದ ಬಳಲಿ ಬೆಂಡಾಗಿ ಬೆಂಗಳೂರಿನ
ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ವಾಸ್ತವದಲ್ಲಿ ಅವರು ಮರಣಶಯ್ಯೆಯಲ್ಲಿದ್ದರು ಎಂದೇ ಹೇಳಬಹುದಾಗಿತ್ತು. ಇದನ್ನು ಅರಿತಿದ್ದ ನಾನು,
ಜಾರ್ಜ್ ಅವರ ಅಂದಿನ ಪೂರ್ವನಿರ್ಧರಿತ ಕಾರ್ಯಭಾರಗಳು ಒಂದು ಹಂತಕ್ಕೆ ಮುಗಿಯುತ್ತಿದ್ದಂತೆ, ಅವರಿಗೆ ವಿಷಯ ತಿಳಿಸಿದೆ.

ತಕ್ಷಣವೇ ಆತಂಕಿತರಾದ ಅವರು, ‘ಹೌದಾ? ಆ ಆಸ್ಪತ್ರೆ ಎಲ್ಲಿದೆ?’ ಎಂದು ಕೇಳಿದಾಗ, ‘ಇಲ್ಲಿಂದ ೨ ಕಿ.ಮೀ. ವ್ಯಾಪ್ತಿಯೊಳಗಿದೆ’ ಎಂದುತ್ತರಿಸಿದೆ. ತಕ್ಷಣವೇ -ಲ್ ಹಿಡಿದೆತ್ತಿದ ಅವರು, ‘ಭಟ್ಟರೇ, ನಾವು ಅಲ್ಲಿಗೆ ತಕ್ಷಣವೇ ಹೋಗಬೇಕಿದೆ’ ಎಂದು ಆಗ್ರಹಿಸಿದರು. ದೇಶದ ರಕ್ಷಣಾ ಸಚಿವರೆನಿಸಿಕೊಂಡವರು ಹೀಗೆ
‘ಗೊತ್ತುಪಡಿಸಿರದ’ ಪ್ರಯಾಣ ಅಥವಾ ಭೇಟಿ ಯಲ್ಲಿ ತೊಡಗಿಸಿಕೊಳ್ಳುವುದು ಶಿಷ್ಟಾಚಾರಕ್ಕೆ ವಿರುದ್ಧವಾದ ವಿಚಾರ. ಆದರೆ ಅವರು, ‘ಭಟ್ಟರೇ, ಕೂಡಲೇ
ಬೇಕಾದ ವ್ಯವಸ್ಥೆ ಮಾಡಿರಿ’ ಎಂದು ಗರಮ್ಮಾಗಿ ಹೇಳಿದಾಗ ನಾನು ಕೂಡಲೇ ಎಲ್ಲಾ ವಾಹನಗಳನ್ನು ಹೊಂದಿಸಿ ಅಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿ
ಗಳಿಗೂ ಈ ತುರ್ತು ಅವಶ್ಯಕತೆಯನ್ನು ತಿಳಿಸಬೇಕಾಯಿತು.

ನಂತರ ಕಾರಿನಲ್ಲಿ ತೆರಳಲು ಸನ್ನದ್ಧರಾದಾಗ ನನ್ನ ಎದೆಬಡಿತ ಜಾಸ್ತಿಯಾಗಿತ್ತು. ಕಾರಣ ಮಣಿಪಾಲ ಆಸ್ಪತ್ರೆಯ ಅಧಿಕಾರಿಗಳಿಗೆ ನಮ್ಮ ಆಗಮನದ ಕುರಿತು ತಿಳಿಸಿರಲಿಲ್ಲ. ಕೊನೆಗೆ ನನಗೆ ಪರಿಚಯವಿದ್ದ ಅಲ್ಲಿನ ಸಾರ್ವಜನಿಕ ಸಂಪರ್ಕಾಧಿಕಾರಿಯವರಿಗೆ ಫೋನಾಯಿಸಿ ವಿಷಯ ಅರುಹಿದೆ. ಅದಾದ ಐದೇ ನಿಮಿಷದಲ್ಲಿ ನಾವು ಆಸ್ಪತ್ರೆ ತಲುಪಿದ್ದೆವು. ನಮ್ಮನ್ನು ಕಂಡು ಹೌಹಾರಿದ ಅಲ್ಲಿಯ ಹಿರಿಯ ವೈದ್ಯರು, ಭದ್ರತಾಧಿಕಾರಿಗಳು ಸ್ವಾಗತದ ವ್ಯವಸ್ಥೆ ಮಾಡುತ್ತಿದ್ದರೆ, ಜಾರ್ಜ್ ಅವರಿಗೆ ಅದಕ್ಕೆಲ್ಲ ಸಮಯ ವ್ಯಯಿಸುವಷ್ಟು ವ್ಯವಧಾನ ವಿರಲಿಲ್ಲ.

ಸ್ಪೆಷಲ್ ವಾರ್ಡ್‌ನಲ್ಲಿ ಮಲಗಿದ್ದ ಪಟೇಲರತ್ತ ಧಾವಿಸಿದ ಜಾರ್ಜ್, ಅವರ ತಲೆ, ಹಣೆಯ ಮೇಲೆ ಕೈಯಾಡಿಸಿ ಮಾತನಾಡಿಸಿದ ಪರಿ ಎಂಥವರಲ್ಲೂ ದುಃಖ ಉಮ್ಮಳಿಸುವಂತೆ ಮಾಡಿತ್ತು. ಜಾರ್ಜ್‌ರನ್ನು ಕಂಡು ಅಚ್ಚರಿಗೊಂಡ ಪಟೇಲರು ಸಾವರಿಸಿಕೊಂಡು, ‘ಜಾರ್ಜ್ ನನಗೇನೂ ಆಗಿಲ್ಲ, ಹುಷಾರಾಗುತ್ತೇನೆ. ಮುಂದಿನವಾರ ನಾವು ದೆಹಲಿಯಲ್ಲಿ ಸೇರಿ ಜತೆಯಲ್ಲೇ ಊಟ ಮಾಡೋಣ’ ಎಂದರು. ಅಷ್ಟು ಹೊತ್ತಿಗಾಗಲೇ ವಸ್ತುಸ್ಥಿತಿ ಅರಿತಿದ್ದ
ಜಾರ್ಜ್, ‘ಆಗಲಿ ಪಟೇಲರೇ, ನೀವು ಬೇಗ ಚೇತರಿಸಿಕೊಂಡ ಬಳಿಕ ದೆಹಲಿಗೆ ಬನ್ನಿ’ ಎಂದು ಸಮಾಧಾನಕರವಾಗಿ ನುಡಿದರು. ಬಳಿಕ ಪಟೇಲರ
ಕುಟುಂಬಿಕರನ್ನು ಮಾತಾಡಿಸಿ ಧೈರ್ಯ ಹೇಳಿ ಹೊರಟ ಜಾರ್ಜ್‌ರ ಕಣ್ಣುಗಳು ಮಂಜಾಗಿದ್ದುದನ್ನು ಕಂಡು ಮೂಕವಿಸ್ಮಿತನಾಗಿದ್ದೆ.

ಈ ಭೇಟಿಯ ಒಂದು ವಾರದ ನಂತರ ಪಟೇಲರು ಅದೇ ಆಸ್ಪತ್ರೆಯಲ್ಲಿ ನಿಧನರಾದರು. ತಮ್ಮ ಭೇಟಿಯ ದಿನದಿಂದಲೇ ಪಟೇಲರ ಆರೋಗ್ಯದ ಕುರಿತು ಮತ್ತೆ ಮತ್ತೆ ಕೇಳಿ ತಿಳಿದುಕೊಳ್ಳುತ್ತಿದ್ದ ಜಾರ್ಜ್ ಈ ಸುದ್ದಿ ಕೇಳಿ ದೆಹಲಿಯಿಂದ ಧಾವಿಸಿ ಬಂದು ತಮ್ಮ ಆಪ್ತಮಿತ್ರನ ಅಂತಿಮ ದರ್ಶನ ಪಡೆದರು. ಈ ಘಟನೆಯನ್ನು ಹತ್ತಿರದಿಂದ ಕಂಡ ನನಗೆ, ಮಹಾನುಭಾವರೆನಿಸಿಕೊಂಡವರು ಯಾವುದೇ ಅಂತಸ್ತು-ಅಧಿಕಾರದಲ್ಲಿ ಎತ್ತರವಾಗಿ ಕಂಡರೂ, ಭಾವನಾತ್ಮಕವಾಗಿರುವ ಇಂಥ ವೇಳೆಯಲ್ಲಿ ಎಲ್ಲರಂತೆಯೇ ಸರಳವಾಗಿ ವರ್ತಿಸುತ್ತಾರೆ ಎಂಬ ಸಂಗತಿ ಮನದಟ್ಟಾಯಿತು, ಜಾರ್ಜ್ ಅವರ ಕುರಿತು ಹೃದಯತುಂಬಿ ಬಂತು.

(ಲೇಖಕರು ಡಿಆರ್‌ಡಿಒ ಮಾಜಿ ಅಧಿಕಾರಿ)

Leave a Reply

Your email address will not be published. Required fields are marked *