ಅಭಿಲಾಷೆ
ಭಾರತಿ ಎ.ಕೊಪ್ಪ
ಕೋವಿಡ್‌ನ ಮೂರನೆಯ ಅಲೆಯ ತೀವ್ರತೆಯನ್ನು ಕಡಿಮೆ ಮಾಡಲು ಜನ ಸೇರುವಿಕೆಗೆ ನಿರ್ಬಂಧವಿರುವುದರಿಂದ, ನಾಡಿನ ಎಲ್ಲಾ ಜಾತ್ರೆಗಳು ತುಸು ಮಂಕಾ ಗಿದೆ. ಆದರೆ ಎಲ್ಲರಲ್ಲೂ ಉತ್ಸಾಹ ತುಂಬುವ ಜಾತ್ರೆಯ ನೆನಪುಗಳನ್ನು ಮಾಡಿಕೊಂಡು ಸಂತಸಪಡಲು ಯಾರ ಅಪ್ಪಣೆಯೂ ಬೇಡ!
ಹೊಸ ಕ್ಯಾಲೆಂಡರ್ ಬಂದು ಅದಾಗಲೇ ಒಂದು ತಿಂಗಳು ಕಳೆಯಿತು. ಹೊಸ ವರ್ಷದ ಆಗಮನದೊಂದಿಗೆ, ಮಕರ ಸಂಕ್ರಮಣದ ಉತ್ತರಾಯಣ ಪುಣ್ಯಕಾಲದ ನಂತರ ಬಹುತೇಕ ದೇವಾಲಯಗಳಲ್ಲಿ ಒಂದರ ಮೇಲೊಂದು ಜಾತ್ರೆಗಳು ಆರಂಭವಾಗುತ್ತವೆ. ಅದು ದಕ್ಷಿಣ ಕರ್ನಾಟಕವಿರಲಿ, ಉತ್ತರ ಕರ್ನಾಟಕವಿರಲಿ, ಈಗ ಜಾತ್ರೆಗಳ ಸುಗ್ಗಿ. ಈಗ ಆರಂಭವಾಗುವ ಜಾತ್ರೆಗಳ ಸರಣಿಯು, ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುತ್ತದೆ, ಜನರಲ್ಲಿ ಉತ್ಸಾಹ ತುಂಬುತ್ತದೆ. ಜಾತ್ರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ.
ಹಿರಿಯರಿಗೆ ಬಾಲ್ಯದ ಸವಿನೆನಪುಗಳ ಬುತ್ತಿ ತೆರೆಯುವ ಸುಸಂದರ್ಭ ಇದ್ದಂತೆ. ಈ ವರ್ಷ ಕರೋನಾ ವಿಧಿಸಿದ ನಿರ್ಬಂಧ ಮತ್ತು ಸಂಕಷ್ಟಗಳಿಂದಾಗಿ ಜಾತ್ರೆಗಳ ಸಂತಸ ಬಹಳಷ್ಟು ಕುಂದಿದ್ದು ನಿಜವಾದರೂ, ಜಾತ್ರೆಯ ನೆನಪುಗಳು ಮನಸ್ಸಿನಲ್ಲಿ ಮೂಡಿಸುವ ಮೆರವಣಿಗೆಗೆ, ಉಲ್ಲಾಸದ ಅಲೆಗಳಿಗೆ ಮಿತಿಯೆಲ್ಲಿ! ಉತ್ತರ ಕರ್ನಾಟಕದ ಬಹು ಪ್ರಸಿದ್ಧ ಜಾತ್ರೆಗಳು ಸಹ ಈ ಕಾಲದಲ್ಲೇ ನಡೆಯುತ್ತಿವೆ. ಕೆಲವು ಜಾತ್ರೆಗಳು ಒಂದು ತಿಂಗಳ ಕಾಲ ನಡೆಯುವುದು ವಿಶೇಷ. ಬಾದಾಮಿಯ ನಶಂಕರಿಯ ಜಾತ್ರೆ ಅಂತಹದ್ದೊಂದು. ಆದರೆ ಈವರ್ಷ ಕೋವಿಡ್ ವಿಽಸಿದ ನಿರ್ಬಂಧದಿಂದಾಗಿ, ಅಲ್ಲಿ ಸೇರುವ ಜನ ಕಡಿಮೆಯಾಗಿದೆ ಎಂದು ಮಾಧ್ಯಮಗಳೂ ವರದಿ ಮಾಡಿವೆ.
ನಮ್ಮೂರು ಅಂದರೆ ಕರಾವಳಿಯಲ್ಲೂ ಈಗ ಜಾತ್ರೆಗಳ ಸಡಗರ. ಪ್ರತಿ ವರ್ಷ ಜನವರಿ 16 ಬಂತೆಂದರೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಜಾತ್ರೆಯ ಸಂಭ್ರಮ. ಶಾಲಾ ದಿನಗಳಲ್ಲಿ ಈ ಜಾತ್ರೆ ಬರುತ್ತಿದ್ದ ದ್ದರಿಂದ ಶಾಲೆಗೆ ಒಂದು ದಿನ ಸ್ಥಳೀಯ ರಜೆ ಕೂಡಾ ಸಿಗುತ್ತದೆ ಎಂಬ ಸಂತಸ ಬೇರೆ. ಶಂಕರನಾರಾಯಣದ ಕಾಲೇಜು ಓದುತ್ತಿದ್ದ ಸಮಯದಲ್ಲಂತೂ ಜಾತ್ರೆ ಬಂತೆಂದರೆ ಐಸ್ ಕ್ರೀಂ ತಿನ್ನುವ ಭರಾಟೆಯ ಹಬ್ಬ ಬಂದಂತೆ. ಶಂಕರನಾರಾಯಣದಲ್ಲಿ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿಯೇ ರಥವನ್ನು ಎಳೆಯುತ್ತಿದ್ದರು. ರಥ ಎಳೆಯು ವವರ ಉತ್ಸಾಹ, ಭಕ್ತಿ ಒಂದೆಯಾದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ರಥೋತ್ಸವದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಪರಿಯ ಸಂತೋಷ ಹೇಳತೀರದು.
ರಸ್ತೆಯ ಎರಡೂ ಬದಿಗಳಲ್ಲಿ ತರೇಹೇವಾರಿ ಆಟಿಕೆಗಳು, ಸೌಂದರ್ಯ ಸಾಧನಗಳು, ಬಳೆಗಳು, ತಿಂಡಿ ತಿನಿಸುಗಳ ಅಂಗಡಿಗಳು ಮಕ್ಕಳನ್ನು ಸೆಳೆಯುತ್ತಿದ್ದವು. ನಾವಂತೂ ಬೆಳಿಗ್ಗೆಯಿಂದ ಸಂಜೆಯವರೆಗೆ ಆ ಅಂಗಡಿಗಳಿಗೆ ಅದಷ್ಟು ಗಿರಕಿ ಹೊಡೆಯುತ್ತಿದ್ದೆವೋ ಲೆಕ್ಕವಿಲ್ಲ!ಆ ಸಮಯದಲ್ಲಿ ಸಾಕಷ್ಟು ಚಳಿಯೂ ಇರುತ್ತದೆ. ಚಳಿಗಾಲವನ್ನು ಕೂಡ ಲೆಕ್ಕಿಸದೇ ತಿಂದ ಐಸ್ ಕ್ರೀಂ ಗಳು ಜಾತ್ರೆಯ ಓಡಾಟದ ಸುಸ್ತು ಅರಿವಿಗೆ ಬಾರದಂತೆ ಮಾಡುತ್ತಿದ್ದವು. ಇಡೀ ದಿನ ಜಾತ್ರೆಯನ್ನು ಸುತ್ತಿದ ಮೇಲೆ ಸಂಜೆ ಮನೆಗೆ ಏನಾದರೂ ತೆಗೆದುಕೊಂಡು ಹೋಗಬೇಕಲ್ಲ! ಓರಗೆಯ ಪುಟಾಣಿಗಳಿಗೆ ನೀಡಲು, ನಮಗೂ ಮನೆಯಲ್ಲಿ ಬಾಯಿ ಚಪ್ಪರಿಸಲು ಸಕ್ಕರೆ
ಕಡ್ಡಿ, ಮಂಡಕ್ಕಿ ತೆಗೆದುಕೊಂಡು ಮನೆಯಿಂದ ತಂದ ಹಣವನ್ನು ಬಹುತೇಕ ಖರ್ಚು ಮಾಡಿಕೊಂಡು ಮನೆಗೆ ತೆರಳಿದರೆ ಮಾತ್ರ ಜಾತ್ರೆ ಮುಗಿದಂತೆ!
ಮಕ್ಕಳಿಗೆ ಫೆಬ್ರವರಿ-ಮಾರ್ಚ್‌ನಲ್ಲಿ ಪರೀಕ್ಷಾ ತಯಾರಿ ಜೋರಾಗಿಯೇ ನಡೆಯುತ್ತಿತ್ತು. ಪರೀಕ್ಷೆ ಮುಗಿಯುತ್ತಿದ್ದಂತೆ ಎಪ್ರಿಲ್ ತಿಂಗಳು ಬಂದಾಗ ಮತ್ತೊಮ್ಮೆ ಹಲವು ಊರುಗಳಲ್ಲಿ ಜಾತ್ರೆಗಳು! ಮಲೆನಾಡಿನ ಅಂಚಿನಲ್ಲಿರುವ, ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ದೊಡ್ಡ ಜಾತ್ರೆಯಾದ ಕಮಲಶಿಲೆ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರೆಯ ಉತ್ಸಾಹ ಬೇರೊಂದೇ ರೀತಿಯದು!
ಸಾಮಾನ್ಯವಾಗಿ ಎಪ್ರಿಲ್ ತಿಂಗಳಲ್ಲಿ ಕಮಲಶಿಲೆ ಜಾತ್ರೆ ನಡೆಯುವುದರಿಂದ ಬಿಸಿಲಿನ ಝಳದಲ್ಲಿ ಜಾತ್ರೆಯನ್ನು ಸುತ್ತುವ ಪರಿ ಇನ್ನೂ ವಿಶೇಷವಾದುದು. ಆರು ದಿನಗಳ ಕಾಲ ನಡೆಯುವ ಬ್ರಾಹ್ಮೀ ದುರ್ಗಾಪರಮೇಶ್ವರಿ ಜಾತ್ರೆಗೆ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿ ಆಗಲೇ ಬೇಕಿತ್ತು! ಕೆಲವೊಮ್ಮೆ ಎಪ್ರಿಲ್ 10 ನೇ ತಾರೀಖಿನಂದು ಪರೀಕ್ಷಾ ಫಲಿತಾಂಶದ ದಿನದಂದೇ ರಥೋತ್ಸವ ಬಂದದ್ದೂ ಇದೆ! ಉತ್ತೀರ್ಣರಾದವರಿಗೆ ಜಾತ್ರೆ ಸಂತಸವನ್ನು ಈ ಫಲಿತಾಂಶ ದ್ವಿಗುಣಗೊಳಿಸಿ ದ್ದಂತೂ ನಿಜ. ಜಾತ್ರೆಯ ಆಟಿಕೆಗಳು, ಬಗೆ ಬಗೆಯ ಆಕರ್ಷಕ ಅಂಗಡಿಗಳು ಸಡಗರ ನೀಡಿ ಮನಸ್ಸನ್ನು ಮುದಗೊಳಿಸುತ್ತಿದ್ದವು. ಅಂತೂ ಪರೀಕ್ಷಾ ಫಲಿತಾಂಶದ ಸಿಹಿ-ಕಹಿ ಎರಡನ್ನೂ ಸಮತೋಲನ ಮಾಡಲು ಜಾತ್ರೆಯ ಸಡಗರ ಇಂಬು ನೀಡುತ್ತಿತ್ತು ಎಂದರೆ ತಪ್ಪಾಗಲಾರದು.
ಆರು ದಿನಗಳ ಕಾಲ ನಡೆಯುತ್ತಿದ್ದ ಕಮಲಶಿಲೆ ಜಾತ್ರೆಯಲ್ಲಿ ಮೊದಲ ಮೂರು ದಿನ ಸಂಜೆಯ ವೇಳೆ ದೇವರ ಉತ್ಸವ ಮೂರ್ತಿಗೆ ನಿರ್ದಿಷ್ಟ ಮನೆಗಳ ಆತಿಥ್ಯದಲ್ಲಿ
ವಸಂತ ಮಂಟಪದಲ್ಲಿ ಪೂಜೆ ನಡೆಯುತ್ತಿತ್ತು. ಭಕ್ತಿ ಭಾವದ ಪೂಜೆಯ ಜೊತೆಗೆ ನಂತರ ಪನಿವಾರ ಕೂಡ ನಡೆಯುತ್ತಿತ್ತು. ಈ ವಸಂತ ಪೂಜೆಯಲ್ಲಿ ಎಪ್ರಿಲ್ ರಜೆ ಕಳೆಯಲೆಂದು ಬೇರೆ ಊರಿನಿಂದ ನಮ್ಮೂರಿಗೆ ಅಜ್ಜಿಯ ಮನೆ, ಬಂಧುಗಳ ಮನೆಗೆ ಆಗಮಿಸುವ ಅಪರೂಪದ ಸ್ನೇಹಿತರ ಭೇಟಿಗೂ ಅವಕಾಶ ಸಿಗುತ್ತಿತ್ತು. ದೇವಿಯ ಉತ್ಸವ ಮೂರ್ತಿ ಸಾಗುವಾಗ ವಿವಿಧ ವಾದ್ಯ ಘೋಷಗಳ ಮುಂದೆ ನಡೆಯುವ ತಟ್ಟಿರಾಯ ಎಂಬ ಬಿದಿರಿನ ಗೊಂಬೆ ಎಳೆಯ ಪ್ರಮುಖ ಮಕ್ಕಳ
ಆಕರ್ಷಣೆಯಾಗಿತ್ತು. ಮೊದಲು ಕರಾವಳಿಯಲ್ಲಿ ಹೆಚ್ಚು ಪ್ರಚಲಿತವಿದ್ದ ತಟ್ಟಿರಾಯ ಗೊಂಬೆಗಳು ಈಗ ನಾಡಿನಾದ್ಯಂತ ಜನಪ್ರಿಯವಾಗಿರುವುದು ವಿಶೇಷ
ಎನಿಸುತ್ತದೆ.
ತಟ್ಟಿರಾಯನ ಬೆತ್ತದ ದೇಹದೊಳಗೆ ಒಬ್ಬ ವ್ಯಕ್ತಿ ನಿಂತು, ಕುಣಿಯುತ್ತಿರುತ್ತಾನೆ ಎಂಬ ವಿಚಾರ ಎಷ್ಟೋ ಮಕ್ಕಳಿಗೆ ಗೊತ್ತೇ ಇರುವುದಿಲ್ಲ. ಆದರೆ ತಟ್ಟಿರಾಯ
ಕುಣಿತವು ಮಕ್ಕಳ ಮನದಲ್ಲಿ ಮೂಡಿಸುವ ಬೆರಗಿಗೆ ಮಾತ್ರ ಸೀಮೆಯೇ ಇಲ್ಲ! ನಮ್ಮೂರು ಕಮಲಶಿಲೆ ಜಾತ್ರೆಯ ನಾಲ್ಕನೇ ದಿನದ ರಥೋತ್ಸವ ಮತ್ತು 5 ನೇ ದಿನದ ಓಕುಳಿ (ತೆಪ್ಪೋತ್ಸವ) ಕ್ಕೆ ಜನಸಾಗರವೇ ಸೇರುತ್ತಿತ್ತು. ವರ್ಷಪೂರ್ತಿ ಬೇರೆ ಯಾವುದೇ ಈಗಿನಂತಹ ಎಕ್ಸಿಬಿಷನ್ ಗಳು ಇಲ್ಲದ ಅಂದಿನ ನಮ್ಮ
ಬಾಲ್ಯದ ದಿನಗಳಲ್ಲಿ ತಿರುಗುವ ಕುದುರೆಯಾಟ, ಬಣ್ಣಬಣ್ಣದ ಬಲೂನುಗಳು ಗಿರಕಿ ಹೊಡೆಯುವ ತೊಟ್ಟಿಲು ಆಟ, ವಿವಿಧ ಆಟಿಕೆಗಳು ಮನಸೂರೆಗೊಳ್ಳುತ್ತಿದ್ದವು. ಕೆಲವು ಬಲೂನ್‌ಗಳಂತೂ ಖರೀದಿಸಿ ಕೆಲವೇ ನಿಮಿಷಗಳಲ್ಲಿ -ಟ್ ಎಂದು ಒಡೆದಾಗ, ಅಮ್ಮನ ಬಳಿ ಹಠ ಮಾಡಿ ಇನ್ನೊಂದು ಬಲೂನು ಖರೀದಿಸಿದಾಗಲೇ ಸಮಾಧಾನ!
ಯುವಕರಿಗಂತೂ ಜೋರಾಗಿ ಕಿರುಚುತ್ತಾ, ಕೂಗುತ್ತಾ ಸ್ನೇಹಿತರ ಜೊತೆ ಜಾತ್ರೆಯ ಗಿರಕಿ ಹೊಡೆಯುವ ತೊಟ್ಟಿಲು ಆಡುವ ಮಜವಂತೂ ಹೇಳತೀರದು. ಬಣ್ಣ ಬಣ್ಣದ ತೊಟ್ಟಿಲುಗಳಲ್ಲಿ ಕುಳಿತು ನೆಲದಿಂದ ಕೆಲವೇ ಅಡಿಗಳ ಮೇಲಿನ ತನಕ ಹೋಗುವಾಗ, ಆಗಸಕ್ಕೇ ಹಾರಿದ ಅನುಭವ! ಕೇವಲ ೫೦ ಪೈಸೆಗೆ ಆಗ ಸಿಗುತ್ತಿದ್ದ ಬೆಲ್ಲದ ಕ್ಯಾಂಡಿ ಬೇಸಿಗೆಯ ಜಾತ್ರೆಯಲ್ಲಿ ಓಡಾಟಕ್ಕೆ ಸಂಜೀವಿನಿ ಇದ್ದಂತೆ. ಅಂತೆಯೇ ಗೋಲಿ ಸೋಡ ಹೊಸ ಚೈತನ್ಯದ ಟಾನಿಕ್ ಇದ್ದಂತೆ. ರಥೋತ್ಸವ ದಿನ ರಾತ್ರಿ ನಡೆಯುವ ಕಮಲಶಿಲೆ ಮೇಳದ ಯಕ್ಷಗಾನ ಕೂಡ ಜಾತ್ರೆಯ ಅವಿಭಾಜ್ಯ ಅಂಗವಾಗಿತ್ತು. ‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬಂತೆ ದಿನ ಪೂರ್ತಿ ಬಿಸಿಲಿನಲ್ಲಿ ಜಾತ್ರೆಯಲ್ಲಿ ಸುತ್ತಾಡಿದ ಕಾರಣಕ್ಕೆ ರಾತ್ರಿ ಯಕ್ಷಗಾನ ನೋಡುತ್ತಾ ಕುಳಿತಾಗ ಆ ಚಂಡೆಯ ಸದ್ದಿನ ನಡುವೆಯೂ ಒಳ್ಳೆಯ ನಿದ್ದೆಗೆ ಜಾರು ವಂತಾಗುತ್ತಿತು. ಇಂದಿಗೂ, ರಾತ್ರಿ ಪೂರ್ತಿ ನಡೆಯುವ ಯಕ್ಷಗಾನದ ಮೈದಾನದ ಒಂದು ಮೂಲೆಯಲ್ಲಿ ಕೆಲವರು ಚಾಪೆ ಹಾಕಿಕೊಂಡು ಮಲಗುವ ಪರಿಯನ್ನು ನೋಡಿಯೇ ನಂಬಬೇಕು!
ಇಂದಿನ ಮಕ್ಕಳು ಆಧುನಿಕ ಯುಗದ ಭರಾಟೆಯಲ್ಲಿ ಎಕ್ಸಿಬಿಷನ್, ವಂಡರ್ ಲಾ ಮುಂತಾದ ಅದ್ದೂರಿ ಆಕರ್ಷಣೆಯ ಸೌಲಭ್ಯಗಳಲ್ಲಿ, ಬಗೆಬಗೆಯ ಆಟಗಳನ್ನು
ಆಡುವ ಅವಕಾಶ ಪಡೆದಿzರೆ. ಅವರಿಗೆ ಈ ಗ್ರಾಮೀಣ ಜಾತ್ರೆಗಳ ತೊಟ್ಟಿಲು ಆಟ, ಕುದುರೆ ಆಟ, ಬಲೂನಿನ ಆಟ ಅಷ್ಟಾಗಿ ರುಚಿಸದೋ ಏನೊ! ಆದರೂ ಗ್ರಾಮೀಣ ಭಾಗದ ಜಾತ್ರೆಗಳು ಇಂದಿಗೂ ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದಿವೆ.
ಪ್ರಾತಿನಿಧಿಕವಾಗಿ ನಮ್ಮೂರಿನ ಹಳ್ಳಿಗಳ ಜಾತ್ರೆಯ ವಿಚಾರ ಹೇಳಿದೆ. ಬಯಲು ಸೀಮೆಯ ಹಳ್ಳಗಳ ಜಾತ್ರೆಯ ಮಜವೇ ಬೇರೆ! ಸಂಜೆ ಪಾನಕದ ಗಾಡಿಗಳು ಮತ್ತು ಟ್ರಾಕ್ಟರುಗಳು ಬಂದು, ಜಾತ್ರೆ ನೋಡಲು ಬಂದವರಿಗೆಲ್ಲಾ ಬೆಲ್ಲದ ಪಾನಕ ಮತ್ತು ಶರಬತ್ತು ನಿಡುವ ದೃಶ್ಯ ಬಯಲು ಸೀಮೆ ಜಾತ್ರೆಗಳ ವಿಶೇಷ. ವೀರ ಗಾಸೆ, ಡೋಲು ಕುಣಿತ, ಪಟ ಕುಣಿತ, ಕೀಲು ಕುದುರೆ, ತಲೆಯ ಮೇಲೆ ಮಡಕೆ ಇಟ್ಟು ಬ್ಯಾಲೆನ್ಸ್ ಮಾಡುತ್ತಾ ನರ್ತಿಸುವುದು ಮೊದಲಾದ ಜನಪದ ಕ್ರೀಡೆಗಳು ಬಯಲು ಸೀಮೆಯ ಜಾತ್ರೆಗಳಲ್ಲಿ ಜಾಸ್ತಿ.
ಕಳೆದೆರಡು ವರ್ಷಗಳಿಂದ ಕರೋನ ತಂದಿಟ್ಟ ಲಾಕ್ ಡೌನ್ ಮತ್ತು ಅದರ ಕಠಿಣ ನಿಯಮಗಳು ಜಾತ್ರೆಗಳ ವೈಬವಕ್ಕೆ ಮಂಕು ಕವಿದಿವೆ. ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಗಳು ಮಾತ್ರ ಅಲ್ಲಲ್ಲಿ ಲಾಕ್ ಡೌನ್ ತೆರವು ಬಳಿಕ ನಡೆದಿವೆ. ಈ ವರ್ಷವೂ ಕರೋನ ಮೂರನೇ ಅಲೆಯ ಮುಂಜಾಗ್ರತೆ ಅನುಸರಿಸಬೇಕಾದ ಅನಿವಾರ್ಯತೆಯಲ್ಲಿ ಜಾತ್ರೆಗಳು ಮೊದಲಿನ ವೈಭವದಲ್ಲಿ ನಡೆಯುವುದು ಅಸಾಧ್ಯವೇ ಸರಿ. ಆದರೂ ಬಾಲ್ಯದ ಮರೆಯಲಾಗದ ಅನುಭವಗಳಿಗೆ ಇನ್ನಷ್ಟು ಪುಷ್ಠಿ ನೀಡುವ, ಹಳೆಯ ಸ್ನೇಹಿತರು, ಬಂಧುಗಳ ಭೇಟಿಗೆ ಅವಕಾಶ ನೀಡುವ ನಮ್ಮೂರ ಜಾತ್ರೆ ಒಂದು ಅಪೂರ್ವ ವೇದಿಕೆಯೇ ಸರಿ.
ಔದ್ಯೋಗಿಕ ನೆಲೆಯಲ್ಲಿ ಯಾವುದೇ ಊರಿನಲ್ಲಿದ್ದರೂ, ಮದುವೆಯಾಗಿ ಪತಿಯ ಮನೆ ಸೇರಿದ್ದರೂ, ವರ್ಷಕ್ಕೊಮ್ಮೆ ಊರಿನ ಜಾತ್ರೆಗೆ ಬಂದು, ಜಾತ್ರೆಯ ಮೈದಾನದಲ್ಲಿ ಸುತ್ತಾಡಿ, ಬಂಧು-ಬಾಂಧವರನ್ನು ಭೇಟಿ ಮಾಡುವ ಸಂದರ್ಭವು ಮನಸ್ಸಿಗೆ ಹೊಸ ಚೈತನ್ಯ ನೀಡುವ ಟಾನಿಕ್ ಎಂದರೆ ಅತಿಶಯೋಕ್ತಿಯಾಗ ಲಾರದು.