ಪ್ರಸ್ತುತ
ನಂ.ಶ್ರೀಕಂಠ ಕುಮಾರ್
ಅಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ. ಧರ್ಮಾಸಕ್ತರು ಈ ದಿನದಂದು ಸೂರ್ಯೋ ದಯವಾಗುವುದಕ್ಕಿಂತ ಮುಂಚೆ ಅಭ್ಯಂಗ ಸ್ನಾನ ಮಾಡುವುದು ಪ್ರತೀತಿ. ನಂತರ ಅಪಮೃತ್ಯು ಬಾರದಂತೆ ಮತರ್ಪಣವನ್ನೂ ಸಹ ನೀಡಲಾಗುವುದು.ಕಾಲಾನುಕ್ರಮವಾಗಿ ಚತುರ್ದಶಿಯಂದು ದೀಪಗಳನ್ನು ಬೆಳಗುವುದು ಸಂಪ್ರದಾಯವಾಗಿ ಇಂದಿಗೆ ದೀಪಾವಳಿಯಾಗಿದೆ.
ಸನಾತನ ಧರ್ಮಾನುಷ್ಠಾನದಲ್ಲಿ ಹಬ್ಬ ಹರಿದಿನಗಳ ಆಚರಣೆಯು ಪ್ರಮುಖವಾಗಿ ಒಂದು ಭಾಗ. ಉತ್ತರಾಯಣ ಪುಣ್ಯಕಾಲ
ಬಂತೆಂದರೆ ಹಬ್ಬಗಳ ಸಾಲು ಸಾಲು. ಗ್ರಾಮೀಣ ಜಾತ್ರೆಗಳು, ರಥೋತ್ಸವಗಳು, ಸಂಕ್ರಾಂತಿ, ಶಿವರಾತ್ರಿ, ಚಾಂದ್ರಮಾನ ಯುಗಾದಿ, ಶ್ರೀರಾಮ ನವಮಿ, ಸ್ವರ್ಣಗೌರೀ ವ್ರತ, ಗಣೇಶ ಚತುರ್ಥೀ ಹಾಗೂ ಶರನ್ನವರಾತ್ರಿ ಸಂಭ್ರಮ ಮತ್ತು ಸಡಗರದ ಆಚರಣೆ.
ಆನಂತರವೇ ನರಕಚತುರ್ದಶಿ ಹಾಗೂ ಬಲಿಪಾಡ್ಯಮಿ ಹಬ್ಬದ ಆಚರಣೆ ಮಕ್ಕಳಿಗೆ ಪಟಾಕಿ ಸಿಡಿಮದ್ದು ಸದ್ದಿನ ಸಡಗರದ ಮೂರು ದಿನಗಳು. ಆಶ್ವಯುಜ ಮಾಸದಲ್ಲಿನ ಈ ಆಚರಣೆ ಕುಟುಂಬದ ಎಲ್ಲರೂ ಆಚರಿಸಿ, ಸಂತೋಷ ಪಡುವ ಒಂದು ಸಂಭ್ರಮದ ಹಬ್ಬ. ಆಶ್ವಯುಜ ಕೃಷ್ಣ ಚತುರ್ದಶೀ ದಿನ ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡಿದ ಎಂಬುದು ಪ್ರತೀತಿ. ಭೂದೇವಿಯ ಪುತ್ರನಾದ ಅಸುರನು ಶ್ರೀ ಮಹಾವಿಷ್ಣುವು ವರಹಾವತಾರವನ್ನು ಧರಿಸಿದಾಗ ಆತನ ಮೈಬೆವರು ಭೂಮಿಯ ಮೇಲೆ ಬಿದ್ದು ಈತನು ಮಗನಾಗಿ ಹುಟ್ಟಿದನು. ಇದರಿಂದಾಗಿ ಈತನಿಗೆ ಭೌಮಾಸುರನೆಂದೂ ಸಹ ಕರೆಯುತ್ತಾರೆ. ಭೂದೇವಿಯು ವರಾಹಸ್ವಾಮಿಯನ್ನು ಪ್ರಾರ್ಥಿಸಲು ಆತನು ತನ್ನ ದಾಡೆಯನ್ನು ಆಕೆಯ ಕೈಗಿತ್ತು ಇದು ಅಮೋಘವಾದ ವೈಷ್ಣವಾಸ್ತ್ರ ಎಂದಿದ್ದನು. ಭೂದೇವಿಯು ಆ ಅಸ್ತ್ರವನ್ನು ತನ್ನ ಮಗನ ಕೈಗಿತ್ತಳು.
ಮುಂದೆ ನರಕನು ಪ್ರಾಗ್ಜೋತಿಷ ನಗರದಲ್ಲಿ ರಾಜ್ಯಭಾರ ಮಾಡುತ್ತಾ ಮಾನವರಿಗೆ ಮತ್ತು ದೇವತೆಗಳಿಗೆ ಪೀಡೆಯನ್ನು ನೀಡುತ್ತಾ ಲೋಕಕಂಠಕನಾಗಿದ್ದನು. ಇವನು ಅದಿತಿ ದೇವಿಯ ಕಿವಿಯ ರತ್ನಕುಂಡಲಗಳನ್ನು, ವರುಣನ ಶ್ವೇತಚ್ಛತ್ರವನ್ನು, ಮೇರು ಪರ್ವತ ಭಾಗವಾದ ಮಹಾಮಣಿ ಎಂಬ ಶಿಖರವನ್ನು ವೈಜಯಂತಿ ಮಾಲೆಯನ್ನು ಅಪಹರಿಸಿದನು. ಮುಂದೆ ದೇವೇಂದ್ರನು ನರಕನ ದುಶ್ಚೇಷ್ಟೆೆಗಳನ್ನು ಸಹಿಸಲಾಗದೆ ಶ್ರೀಕೃಷ್ಣನಿಗೆ ದೂರಲು, ಆತನು ಭೂದೇವಿಯ ಅಂಶಭೂತೆಯಾದ ಸತ್ಯಭಾಮೆಯನ್ನು ತನ್ನೊಡನೆ ಕರೆದುಕೊಂಡು ಗರುಡಾರೂಢನಾಗಿ ಪ್ರಾಗ್ಜೋತಿಷಪುರಕ್ಕೆ ಬಂದನು.
ಅಲ್ಲಿ ಪುರವನ್ನು ರಕ್ಷಿಸುತ್ತಿರುವ ಗಿರಿದುರ್ಗ, ಜಲದುರ್ಗ, ಅಗ್ನಿದುರ್ಗ, ಶಸ್ತ್ರ ದುರ್ಗ ಮತ್ತು ವಾಯು ದುರ್ಗಗಳೆಂಬ ಐದು ಬಗೆಯ
ದುರ್ಗಗಳನ್ನು ಬೇಧಿಸಿದನು. ಅಲ್ಲಿ ಹಯಗ್ರೀವ, ನಿಕುಂಬ, ಪಂಚಜನ ಮತ್ತು ಮುರಾಸುರನೆಂಬ ನಾಲ್ಕು ಜನ ರಾಕ್ಷಸರು ನರಕನ ರಾಜ್ಯದ ನಾಲ್ಕು ಎಲ್ಲೆಗಳನ್ನು ಕಾಯುತ್ತಿದ್ದರು. ಮುರಾಸುರನಿಂದ ನಿರ್ಮಿತವಾದ ಸಾವಿರಾರು ಪಾಶಗಳನ್ನು ತನ್ನ ಖಡ್ಗದಿಂದ ಕತ್ತರಿಸಿದನು. ಈ ಪಾಶಗಳು ನಗರದ ಸಮೀಪಕ್ಕೆ ಬಂದ ಶತ್ರುಗಳ ಮೈಗೆ ಬಲವಾಗಿ ಸುತ್ತಿಕೊಂಡು ಅವರನ್ನು ಕೆಡವಿ ಕೊಲ್ಲು ತ್ತಿದ್ದವು.
ಅವನ ಶಂಖ ಧ್ವನಿಯಿಂದ ಅಲ್ಲಿನ ಯಂತ್ರಗಳ ಕಟ್ಟುಗಳೆಲ್ಲಾ ಸಡಿಲವಾದವು. ಈ ಶಂಖ ಧ್ವನಿಯನ್ನು ಕೇಳಿ ಜಲಶಯ್ಯೆಯಲ್ಲಿ ಮಲಗಿದ್ದ ಐದು ತಲೆಯುಳ್ಳ ಮುರಾಸುರನು ಎದ್ದು ಶ್ರೀಕೃಷ್ಣನನ್ನು ಎದುರಿಸಿ ಆತನ ಚಕ್ರಾಯುಧದಿಂದ ಹತನಾದನು. ಚತುರ್ದಶಿಯಂದು ನರಕಾಸುರನನ್ನು ವಧಿಸಿ ಅವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ನಂದನು ಅಭ್ಯಂಗಸ್ನಾನ ಮಾಡಿಸಿದನು.
ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಅಂದಿನಿಂದ ಅಶ್ವಯುಜ ಕೃಷ್ಣ ಚತುರ್ದಶಿ ಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತಿದೆ. ಧರ್ಮಾಸಕ್ತರು ಈ ದಿನದಂದು ಸೂರ್ಯೋದಯವಾಗು ವುದಕ್ಕಿಂತ ಮುಂಚೆ ಅಭ್ಯಂಗ ಸ್ನಾನ ಮಾಡುವುದು ಪ್ರತೀತಿ. ಅಭ್ಯಂಗ ಸ್ನಾನದ ನಂತರ ಅಪಮೃತ್ಯು ಬಾರದಂತೆ ಯಮ ತರ್ಪಣವನ್ನೂ ಸಹ ನೀಡಲಾಗುವುದು.
ಸ್ನಾನದ ನಂತರ ಹಣೆಗೆ ಹಚ್ಚಿಕೊಳ್ಳುವ ತಿಲಕವು ದುಷ್ಟ ಸಂಹಾರ ಮತ್ತು ಧರ್ಮದ ವಿಜಯದ ಸಂಕೇತವಾಗಿದೆ. ಹಾಗೂ ಕಾಲಾನುಕ್ರಮವಾಗಿ ಚತುರ್ದಶಿಯಂದು ದೀಪಗಳನ್ನು ಬೆಳಗುವುದು ಸಂಪ್ರದಾಯವಾಗಿ ಇಂದಿಗೆ ದೀಪಾವಳಿಯಾಗಿದೆ.
ಕಾರ್ತಿಕ ಮಾಸ ಶುಕ್ಲ ಪಕ್ಷ ಪಾಡ್ಯ ಮೊದಲ ದಿವಸ ಬಲಿಪಾಡ್ಯಮಿಯಂದು ದೀಪಾವಳಿ ಆಚರಿಸಲಾಗುತ್ತದೆ. ಬಲಿಯು ಒಬ್ಬ ಅಸುರ ಚಕ್ರವರ್ತಿ, ರೋಚನನ ಮಗನಾಗಿ ಜನ್ಮ ತಾಳುತ್ತಾನೆ. ಮುಂದೆ ಬಲಿ ರಾಜನಾಗಿ ಆಡಳಿತವನ್ನು ನಡೆಸುತ್ತಾನೆ.
ಪ್ರಹ್ಲಾದನು ಬಲಿಯ ಅಜ್ಜ. ಬಲಿಗೆ ಬಾಣಾಸುರ ಹಾಗೂ ಧೃತರಾಷ್ಟ್ರರೆಂಬ ಇಬ್ಬರು ಮಕ್ಕಳು. ಸುದೇಷ್ಣೆೆ ಬಲಿರಾಜನ ಪತ್ನಿ. ಈತನಿಗೆ ಮಹಾಬಲಿ ಹಾಗೂ ಇಂದ್ರಸೇನನೆಂಬ ಹೆಸರೂ ಇದೆ.
ಒಮ್ಮೆ ರಾವಣನು ದಿಗ್ವಿಜಯಕ್ಕಾಗಿ ಪಾತಾಳ ಲೋಕವನ್ನು ಸೇರಿ ಬಲಿ ಚಕ್ರವರ್ತಿಯ ಅರಮನೆಗೆ ಹೋದನು. ಅಲ್ಲಿ ಬಾಗಿಲಲ್ಲಿ ನಿಂತಿದ್ದ ವಾಮನಾವತಾರಿಯೊಡನೆ ಈ ಲೋಕಕ್ಕೆ ರಾಜನಾರೆಂದು ಕೇಳಲು ಅವನು ಉತ್ತರವನ್ನು ಕೊಡದಿದುದರಿಂದ ಅರಮನೆಯೊಳಗೆ ಪ್ರವೇಶಿಸಿದನು. ಆಗ ಬಲಿ ಚಕ್ರವರ್ತಿಯು ಸ್ತ್ರೀಯರೊಡನೆ ದ್ಯೂತವಾಡುತ್ತಿದ್ದನು. ರಾವಣನು ಅವನ
ಸಮೀಪದಲ್ಲಿ ನಿಂತು ಬಲಿಯ ವೈಭೋಗಗಳನ್ನೆಲ್ಲಾ ನೋಡುತ್ತಿದ್ದನು. ಆಗ ಬಲಿ ಚಕ್ರವರ್ತಿಯ ಕೈಯಲ್ಲಿನ ದಾಳವು ದೂರ ಸಿಡಿಯಲು ಬಲಿಯು ಅದನ್ನು ತರುವಂತೆ ರಾವಣನಿಗೆ ಆಜ್ಞೆ ಮಾಡಿದನು.
ರಾವಣನಿಗೆ ತನ್ನ ಇಪ್ಪತ್ತು ತೋಳುಗಳಿಂದಲೂ ಆ ದಾಳವನ್ನು ಎತ್ತಲಾಗಲಿಲ್ಲ. ಅದು ಆತನ ಬೆರಳ ಮೇಲೆ ಬೀಳಲು ರಾವಣನು ಆ ವೇದನೆಯನ್ನು ಸಹಿಸಲಾಗದೆ ರೋಧಿಸತೊಡಗಿದನು. ಬಲಿ ಚಕ್ರವರ್ತಿಯ ದಾಸಿಯು ಬಂದು ರಾವಣನ ಬೆರಳುಗಳ ಮೇಲಿ ನಿಂದ ದಾಳವನ್ನು ತೆಗೆದಳು. ಒಮ್ಮೆ ಪ್ರಹ್ಲಾದ ಮುಂದೆ ಬಲಿಯು ಶ್ರೀಮಹಾ ವಿಷ್ಣುವನ್ನು ನಿಂದಿಸಿದುದರಿಂದ ಕೋಪಗೊಂಡ ಪ್ರಹ್ಲಾದನು ನೀನು ರಾಜಭ್ರಷ್ಟನಾಗಿ ಅಧಃಪತನವನ್ನು ಹೊಂದು ಎಂದು ಶಾಪವಿತ್ತನು. ಮೊದಲೊಮ್ಮೆ ಬಲಿಯು ಇಂದ್ರನಿಂದ ಹತನಾಗಿ ಶುಕ್ರಾಚಾರ್ಯರ ಮೃತ ಸಂಜೀವಿನಿ ವಿದ್ಯೆೆಯ ಪ್ರಭಾವದಿಂದ ಪುನಃ ಬದುಕಿ ಬಳಿಕ ವಿಶ್ವಜಿತ್ತೆಂಬ ಯಾಗವನ್ನು ಮಾಡಿ ಅಗ್ನಿ ದೇವನಿಂದ ಕುದುರೆ, ರಥ, ಧ್ವಜಗಳನ್ನು ಹಾಗೂ ಪ್ರಹ್ಲಾದನಿಂದ ದಿವ್ಯ ಧನಸ್ಸನ್ನು, ಅಕ್ಷಯ ಬತ್ತಳಿಕೆಯನ್ನೂ ಪಡೆದು ಯುದ್ಧದಲ್ಲಿ ಇಂದ್ರನನ್ನು ಗೆದ್ದು ಇಂದ್ರ ಲೋಕವನ್ನು ವಶಪಡಿಸಿಕೊಂಡನು.
ಈತನ ರಾಜ್ಯಭಾರವು ಸುಪ್ರಸಿದ್ಧವಾಗಿತ್ತು. ಸಪ್ತ ಚಿರಂಜೀವಿಗಳಲ್ಲಿ ಈತನೊಬ್ಬನೂ ಎಂಬುದೇ ಈತನ ಬಲವಾದ ಅಸ್ತ್ರ. ಒಮ್ಮೆ ಆಕಾಶದಿಂದ ಒಂದು ಕಿರೀಟವು ಶ್ರೀಕೃಷ್ಣನ ತಲೆಯ ಮೇಲೆ ಬಂದು ಶೋಭಿಸಿತು. ಶ್ರೀಕೃಷ್ಣನು ಯೋಗನಿದ್ರೆಯಲ್ಲಿದ್ದಾಗ ಬಲಿ ಚಕ್ರವರ್ತಿಯು ಈತನ ಕಿರೀಟವನ್ನು ಅಪರಿಸಿ ಪಾತಾಳಕ್ಕೆ ಹೊರಟು ಹೋದನು. ಇದನ್ನು ತಿಳಿದ ಗರುಡನು ಬಲಿಯೊಡನೆ ಯುದ್ಧ ಮಾಡಿ ಗೆದ್ದು ಆ ಕಿರೀಟವನ್ನು ಶ್ರೀಕೃಷ್ಣನ ಶಿರದ ಮೇಲೆ ತಂದಿಟ್ಟನು.
ಬಲಿಯು ನರ್ಮದೆಯ ಉತ್ತರ ತಟದಲ್ಲಿರುವ ಭೃಗು ಕುಚ್ಛದಲ್ಲಿ ಅಶ್ವಮೇಧ ಯಾಗವನ್ನು ಮಾಡಿದನು. ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣುವು ಬಲಿಯ ನಿಗ್ರಹಕ್ಕಾಗಿ ಅದಿತಿಯ ಗರ್ಭದಲ್ಲಿ ವಾಮನ ರೂಪದಿಂದ ಇಂದ್ರನಿಗೆ ತಮ್ಮನಾಗಿ ಉಪೇಂದ್ರನಾಗಿ
ಅವತರಿಸಿ ಬಲಿಯ ಯಾಗಶಾಲೆಗೆ ಬ್ರಹ್ಮಚಾರಿಯ ವೇಷದಲ್ಲಿ ಬಂದು ಮೂರಡಿ ಭೂಮಿಯನ್ನು ಯಾಚಿಸಿದನು. ಬಲಿ ಚಕ್ರವರ್ತಿ ಯು ಪರಮ ಸಂತೋಷದಿಂದ ಮೂರಡಿ ಭೂಮಿಯನ್ನು ದಾನ ಮಾಡಿ ನೀರಿನ ಧಾರೆಯೆರೆಯಲು ವಾಮನ ಮೂರ್ತಿಯ ರೂಪವು ಬೃಹದಾಕಾರವಾಗಿ ಬೆಳೆದು ಜಗತ್ತೆಲ್ಲವನ್ನೂ ವ್ಯಾಪಿಸಿತು.
ಭೂಮಿ ಮತ್ತು ಆಕಾಶಗಳನ್ನು ಎರಡು ಅಡಿಗಳಿಂದ ಅಳೆದು ಮೂರನೇ ಅಡಿಯನ್ನು ಬಲಿಯ ತಲೆಯ ಮೇಲಿಟ್ಟು ಪಾತಾಳಕ್ಕೆ
ತಳ್ಳಿ ಬಲಿಯನ್ನು ನಿಗ್ರಹಿಸಿ ದೇವರಾಜ್ಯವನ್ನು ಇಂದ್ರನಿಗೆ ವಹಿಸಿಕೊಟ್ಟನು. ಬಲಿಯನ್ನು ಪಾತಾಳಕ್ಕೆ ತಳ್ಳುವಾಗ ಪರಮಾತ್ಮನು ಧೀನವಾದ ದಾನ, ಶ್ರೋತ್ರಿಯನಿಲ್ಲದ ಶ್ರಾದ್ಧ, ಶ್ರದ್ಧೆಯಿಲ್ಲದ ಕರ್ಮ, ಅರ್ಜವಿಲ್ಲದ ಹೋಮ, ದಕ್ಷಿಣೆಯಿಲ್ಲದ ಯಾಗ, ಉದಕ ವಿಲ್ಲದ ಪೂಜೆ ಇವುಗಳಿಂದ ಬರುವ ಪುಣ್ಯವು ಆಯಾ ಕರ್ಮಗಳನ್ನು ಮಾಡಿದವರಿಗೆ ಸೇರದೇ ಅವೆಲ್ಲವೂ ನಿನಗೆ ಸಲ್ಲುವವು ಎಂದು ವರವಿತ್ತನು.
ಪ್ರತಿ ಕಾರ್ತಿಕ ಮಾಸ ಶುಕ್ಲ ಪಕ್ಷದ ಪಾಡ್ಯಮಿಯ ದಿವಸ ಭೂಲೋಕಕ್ಕೆ ನೀನು ಬಂದು ಈ ಭೂಲೋಕದಲ್ಲಿನ ಜನರ ಸುಖ, ಸಂತೋಷಗಳನ್ನು, ಭೋಗ ಭಾಗ್ಯಗಳನ್ನು ನೋಡುವಂಥವನಾಗು. ಆ ಸಮಯದಲ್ಲಿ ಭೂಲೋಕದ ಜನರು ಬಲಿ ಚಕ್ರವರ್ತಿ ಯು ಬಂದನೆಂದು ಸಂತೋಷದಿಂದ ನಿನ್ನನ್ನು ಪೂಜಿಸಿ ಬಾಣ ಬಿರುಸುಗಳನ್ನು ಬಿಟ್ಟು, ಮದ್ದು ಗುಂಡುಗಳನ್ನು ಸಿಡಿಸಿ, ದೀಪ ಗಳನ್ನು ಹಚ್ಚಿ ಸಂತೋಷ ಪಡುವಂತಾಗಲಿ. ಇಂದಿನಿಂದ ಈ ಹಬ್ಬಕ್ಕೆ ಬಲಿ ಪಾಡ್ಯಮಿ ಎಂದು ಹೆಸರಾಗಲಿ. ನೀನು ಭೂಲೋಕ ಕ್ಕೆ ಬರುವ ಸಮಯದಲ್ಲಿ ನಾನು ಸೇನಾ ಸಹಿತನಾಗಿ ಪಾತಾಳದಲ್ಲಿನ ನಿನ್ನ ರಾಜ್ಯವನ್ನು ಕಾಯುತ್ತೇನೆ ಎಂದು ವರವಿತ್ತನು. ಹಾಗು ದೀಪಗಳನ್ನು ಹಚ್ಚಿ ಸಂಭ್ರಮಿಸುವುದರಿಂದ ದೀಪಾವಳಿ ಎಂದು ಪ್ರತೀತಿಗೆ ಬಂದಿತು.
ಬಲಿ ಚಕ್ರವರ್ತಿಗೆ ಒಂದು ಕಲ್ಪ ಪ್ರಮಾಣದ ಆಯುಷ್ಯವನ್ನೂ ಮುಂದಿನ ಸಾವರ್ಣಿಕ ಮನ್ವಂತರದಲ್ಲಿ ಇಂದ್ರ ಪದವಿಯನ್ನೂ, ಅಲ್ಲಿಯವರೆಗೂ ಸುತ್ತಲ ಲೋಕದಲ್ಲಿ ಸಕಲ ಭೋಗಗಳನ್ನೂ ಅನುಭವಿಸುವಂತೆ ಅನುಗ್ರಹಿಸಿ ದಾರಿ ತಪ್ಪಿ ನಡೆದರೆ ನಿನ್ನನ್ನು ವರುಣ ಪಾಶಗಳು ಬಂಧಿಸುವವು ಎಂದು ಎಚ್ಚರಿಕೆ ಕೊಟ್ಟು ಅದೃಶ್ಯನಾದನು.
ಚತುರ್ದಶಿ ಯಂದು ನರಕಾಸುರನನ್ನು ವಧಿಸಿ ಅವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ನಂದನು ಅಭ್ಯಂಗಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಅಂದಿನಿಂದ ಅಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತಿದೆ. ಕಾರ್ತಿಕ ಮಾಸ ಶುಕ್ಲ ಪಕ್ಷ
ಪಾಡ್ಯ ಮೊದಲ ದಿವಸ ಬಲಿಪಾಡ್ಯಮಿಯಂದು ದೀಪಾವಳಿ ಆಚರಿಸಲಾಗುತ್ತದೆ.