Friday, 13th December 2024

ಅಭಿಮಾನಿಗಳ ಉನ್ಮಾದಕ್ಕಿಂತ ಫುಟ್ಬಾಲ್‌ ಎಂಬ ಕ್ರೀಡೆಯೇ ನಿಗೂಢ !

ನೂರೆಂಟು ವಿಶ್ವ

vbhat@me.com

ಫುಟ್ಬಾಲ್ ಒಂದು ರೀತಿಯಲ್ಲಿ ಅಡಿಕ್ಷನ್! ಅದು ಯಾವ ಮಾದಕ ಪದಾರ್ಥಗಳ ವ್ಯಸನಕ್ಕಿಂತ ಕಮ್ಮಿಯದ್ದಲ್ಲ. ಅಡಿಕ್ಷನ್ ವಿಷಯದಲ್ಲಿ ಕ್ರಿಕೆಟ್ ಮತ್ತು ಫುಟ್ಬಾಲ್ ಮಧ್ಯೆ ಯಾವುದು ಹೆಚ್ಚು ಎಂದು ಹೇಳುವುದು ಕಷ್ಟ. ಕಾರಣ ಆಯಾ ಆಟವನ್ನು ಇಷ್ಟ ಪಡುವವರಿಗೆ ಅವರವರು ಇಷ್ಟಪಡುವ ಆತ ಇಷ್ಟವೇ. ಆದರೂ ಫುಟ್ಬಾಲ್ ಅಭಿಮಾನಿಗಳದ್ದು ಒಂದು ತೂಕ ಜಾಸ್ತಿ ಎಂದು ಎರಡೂ ‘ಅತಿರೇಕ’ಗಳನ್ನು ಬಲ್ಲವರ ಅಂಬೋಣ.

ನಾನು ಹೇಳಿಕೊಳ್ಳುವಂಥ ಫುಟ್ಬಾಲ್‌ನ ಉತ್ಕಟ ಅಭಿಮಾನಿ (ಡೈಹಾರ್ಡ್ ಫ್ಯಾನ್) ಅಲ್ಲ. ಇಂದಿಗೂ ನನ್ನ ಮನಸ್ಸಿನ ದೇಹದೊಳಗೆ ಅಥವಾ ದೇಹದ ಮನಸ್ಸಿನೊಳಗೆ ಹರಿಯುತ್ತಿರುವುದು ಕ್ರಿಕೆಟ್ಟೇ. ಅದರ ಮುಂದೆ ಊಟ, ನಿದ್ದೆ ತೃಣಕ್ಕೆ ಸಮಾನ. ಬಾಲ್ಯದಿಂದಲೂ ಕ್ರಿಕೆಟ್ ಸಂಗಾತಿ. ಇಷ್ಟು ವರ್ಷಗಳ ಸಾಂಗತ್ಯದಿಂದ ಈಗ ಒಂಥರ ಬಾಳ ಸಂಗಾತಿಯೂ ಹೌದು.

ಈ ಕ್ರಿಕೆಟ್ ಅವೆಷ್ಟು ತಾಸುಗಳ ನಿದ್ದೆಯನ್ನು ಕೆಡಿಸಿದೆಯೋ, ಯೋಚನೆಯನ್ನು ಸುರಿದಿದೆಯೋ, ವಾದ-ವಿವಾದಕ್ಕೆ ಕಾರಣ ವಾಗಿದೆಯೋ? ಆಟವೊಂದೇ ಅಲ್ಲ, ಆಟಗಾರರೂ ಅಂಗೈ ಮೇಲಿನ ಗೆರೆಗಳಷ್ಟೇ ಪರಿಚಿತ. ಭಾರತದವರಿರಲಿ, ದೂರದ ವೆಸ್ಟ್ ಇಂಡೀಸ್ ತಂಡದ ಆಟಗಾರರಾದ ರಿಚರ್ಡ್ಸ್, ಗ್ರೀನಿಡ್ಜ್, ಸೋಬರ್ಸ್, ಲಾಯ್ಡ, ಹೋಲ್ಡಿಂಗ್, ಕಾಳೀಚರಣ, ಗಿಬ್ಸ, ಬಾಯ್ಸ, ಫಾಸ್ಟರ್, ಮರ್ರೆ, ರಾಬರ್ಟ್ಸ್, ಫ್ರೆಡೆರಿಕ್ಸ್, ಜೂಲಿಯನ್, ಮಾಲ್ಕಮ್ ಮಾರ್ಷಲ, ಕಾಲಿನ್ ಕ್ರಾಫ್ಟ್, ವಾಲ್ಶ, ಹೂಪರ್, ಇಯಾನ್ ಬಿಷಪ್, ಲಾರಾ, ಜಿಮ್ಮಿ ಆಡಮ್ಸ, ಡ್ಯಾರೆನ್ ಗಂಗಾ, ಪೆಡ್ರೋ ಕೊಲಿನ್ಸ್, ಕ್ರಿಸ್ ಗೇಯ್ಲ… ಮುಂತಾದವರೆಲ್ಲ ಕುಟುಂಬದ ನೆಂಟರಿಷ್ಟರಂತೆ ಆಪ್ತ. ಅವರ ಹೆಂಡರ, ಮೂರನೇ ಹೆಂಡಿರಿಂದ ಮಕ್ಕಳು-ಮೊಮ್ಮಕ್ಕಳೆಲ್ಲ ಗೊತ್ತು.

ಇನ್ನು ಭಾರತದ ಆಟಗಾರರ, ಕುಂಡಲಿ, ಗೋತ್ರ, ರಾಶಿ, ನಕ್ಷತ್ರಗಳನ್ನೊಳಗೊಂಡ ಜಾತಕಗಳೆಲ್ಲ ಗೊತ್ತು. ೧೯೭೫ ಮತ್ತು ೧೯೭೯ರಲ್ಲಿ ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕ ನಾದ ಬೌಲರ್ ಯಾರು ಅಂತ ಕೇಳಿದರೆ, ಶ್ರೀನಿವಾಸರಾಘ ವನ್ ವೆಂಕಟರಾಘವನ್ ಎಂದು ನಿದ್ದೆಣ್ಣಿನಲ್ಲಿ ಕೇಳಿದರೂ ಹೇಳುತ್ತೇನೆ. ಅಷ್ಟರಮಟ್ಟಿಗೆ ಕ್ರಿಕೆಟ್ ಉಸಿರು ಮತ್ತು ಚಿಂತನೆಯಲ್ಲಿ ಹಾಸುಹೊಕ್ಕು.

ಈಗಲೂ ಆಸ್ಟ್ರೇಲಿಯದ, ಇಂಗ್ಲೆಂಡಿನ ಕೌಂಟಿ ಮ್ಯಾಚ್ ನಡೆದರೆ, ಟಿವಿ ಮುಂದೆ ಹಾಜರ್. ಇನ್ನು, ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಬೆಂಗಳೂರಿನಲ್ಲಿ ನಡೆದ ಯಾವುದೇ ಮ್ಯಾಚನ್ನೂ ಬಿಟ್ಟವನಲ್ಲ. ಕಳೆದ ವರ್ಷ ಆಸ್ಟ್ರೇಲಿಯಾ-ನ್ಯೂಜಿಲೆಂಡ್
ನಡುವಿನ ಟಿ೨೦ ಫೈನಲ್ ಮ್ಯಾಚ್ ನೋಡಲು ದುಬೈಗೆ ಹೋಗಿ ಬಂದಿz. ಹ್ಯಾಂಗಿದ್ದವ, ಹ್ಯಾಂಗಾಗೋದ ಎನ್ನುವಂತೆ, ಅಪ್ಪಟ ಮತ್ತು ಕಟ್ಟಾ ಕ್ರಿಕೆಟ್ ಅಭಿಮಾನಿ ಹಠಾತ್ ಫುಟ್ಬಾಲ್ ಅಭಿಮಾನಿಯಾಗಿ ಪರಿವರ್ತನೆಯಾಗಿದ್ದು ಹೇಗೆ? ನನಗೆ ಮೊದಲಿನಿಂದಲೂ ುಟ್ಬಾಲ್ ಬಗ್ಗೆ ಏನೋ ಒಂಥರಾ ಆಸಕ್ತಿ.

ಆದರೆ ಕ್ರಿಕೆಟ್ ಹುಚ್ಚು ಬೇರೆ ಕ್ರೀಡೆಯತ್ತ ದೃಷ್ಟಿ ನೀಡದಂತೆ ಕಟ್ಟಿ ಹಾಕಿತ್ತು. ಈ ಮಧ್ಯೆ, ಸುಮಾರು ಒಂಬತ್ತು ವರ್ಷಗಳ ಹಿಂದೆ, ಇಂಡಿಯನ್ ಸೂಪರ್ ಲೀಗ್ ನಿಮಿತ್ತ ಜೆಎಸ್‌ಡಬ್ಲ್ಯೂ (ಜಿಂದಾಲ್ ಸ್ಟೀಲ್ ವರ್ಕ್ಸ್) ಕಂಪನಿ ಬೆಂಗಳೂರು ಎಫ್ಸಿ ಎಂಬ ತಂಡ ಕಟ್ಟಿದಾಗ, ನಿಧಾನವಾಗಿ ಫುಟ್ಬಾಲ್ ಮೇಲೆ ಕಳ್ಳ ದೃಷ್ಟಿ ಬಿತ್ತು. ಆಗ ಅದರ ಚುಬುಕು, ಚೆಲುವಿನ ಆಕರ್ಷಣೆಯಿಂದ ತಪ್ಪಿಸಿ
ಕೊಳ್ಳಲು ಆಗದಿದ್ದುದು ನಿಜ.

ಅಂದಿನಿಂದ ಫುಟ್ಬಾಲ್ ಜಗತ್ತಿನ ಖ್ಯಾತನಾಮ ಆಟಗಾರರು ಎಲ್ಲಿಯೇ ಆಡಲಿ, ರಾತ್ರಿಯೆಲ್ಲ ಟಿವಿ ಮುಂದೆ, ಹಾಸಿಗೆಯಲ್ಲಿ ಮೊಬೈಲ್ ಹಿಡಿದು ಫುಟ್ಬಾಲ್ ಮ್ಯಾಚ್ ನೋಡುವುದು ಅಭ್ಯಾಸವಾಯಿತು. ನನ್ನ ಪಾಲಿಗೆ ಕ್ರಿಕೆಟ್, ರಾಜಾರೋಷವಾಗಿ
ಸಿಗರೇಟು ಸೇದಿದಂತಾದರೆ, ಫುಟ್ಬಾಲ್ ಕದ್ದು ಬಂಗಿ ಎಳೆದಂತಾಯಿತು. ಅದು ನಂತರ, ‘ಎಲ್ಲ ಬಿಟ್ಟ ಬಂಗಿ ನೆಟ್ಟ’ ಆಯಿತು!
ಜಗತ್ತಿನ ಸುಮಾರು ಇನ್ನೂರಕ್ಕೂ ಹೆಚ್ಚು ದೇಶಗಳಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆಯಾದರೆ, ಸುಮಾರು ೧೬೦ ದೇಶಗಳಲ್ಲಿ ಇದೇ ರಾಷ್ಟ್ರೀಯ ಕ್ರೀಡೆ. ಆ ಎಲ್ಲ ದೇಶಗಳ ಯಾವುದೇ ಭಾಗದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆದರೆ, ಅದು ರಾಷ್ಟ್ರೀಯ ಸುದ್ದಿಯೇ. ಆ ದೇಶಗಳಲ್ಲಿ ಅಂದು ನೂತನ ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸಿದರೆ, ಆ ಸುದ್ದಿ ಮುಖಪುಟ ಲೀಡ್ ಸುದ್ದಿ ಆಗಿಯೇ ಬಿಡುತ್ತದೆ ಎಂಬ ಗ್ಯಾರಂಟಿ ಇಲ್ಲ.

ಅಲ್ಲಿನ ದೇಶವಾಸಿಗಳ ಮಟ್ಟಿಗೆ ಅಧ್ಯಕ್ಷನ ಅಧಿಕಾರ ಸ್ವೀಕಾರಕ್ಕಿಂತ ಫುಟ್ಬಾಲ್ ಮ್ಯಾಚಿನ ಫಲಿತಾಂಶವೇ ಮುಖ್ಯವಾಗುತ್ತದೆ. ಅಧ್ಯಕ್ಷ ಬರುತ್ತಾನೆ ಮತ್ತು ಹೋಗುತ್ತಾನೆ. ಆದರೆ ಅವರ ಪಾಲಿಗೆ ಫುಟ್ಬಾಲ್ ಮಾತ್ರ ಯಾವತ್ತೂ ನೆಲೆಸಿರುತ್ತದೆ. ಒಂದು ದೇಶದ ಜಿಡಿಪಿ ಅಳೆಯಲು ಆ ದೇಶದ ಫುಟ್ಬಾಲ್ ಕೂಡ ಮಾನದಂಡವಾಗುತ್ತಿರುವುದು ವಿಚಿತ್ರವಾದರೂ ಸತ್ಯ. ಆರ್ಥಿಕವಾಗಿ
ಬಲಾಢ್ಯವಲ್ಲದ ಯೂರೋಪಿನ ಎಷ್ಟೋ ದೇಶಗಳು ಇಂದು ಜಗತ್ತಿನ ಕಣ್ಣಿನಲ್ಲಿ ಅಭಿಮಾನಕ್ಕೆ ಕಾರಣವಾಗಿದ್ದರೆ, ಅದಕ್ಕೆ ಆ
ದೇಶಗಳು ಫುಟ್ಬಾಲ್‌ನಲ್ಲಿ ಗಳಿಸಿರುವ ಮೇಲುಗೈಯೇ ನಿದರ್ಶನ.  ಈ ಎಲ್ಲ ದೇಶಗಳಲ್ಲಿ ಫುಟ್ಬಾಲ್ ಕೇವಲ ಒಂದು ಆಟವಲ್ಲ. ಅದೊಂದು ಧರ್ಮ ಮತ್ತು ಜೀವನಧರ್ಮ. ಅಲ್ಲಿ ಫುಟ್ಬಾಲ್ ಉಸಿರಾಡದೇ, ಸೇವಿಸದೇ, ಜೀವಿಸದೇ ಇರಲು ಸಾಧ್ಯವೇ ಇಲ್ಲ.

ಕೆಲವು ದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ  ಯುರೋಪಿನಲ್ಲಿ, ತಾನು ಯಾವ ದೇಶದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕಿಂತ, ತಾನು ಯಾವ ಫುಟ್ಬಾಲ್ ಕ್ಲಬ್ ಬೆಂಬಲಿಗ ಎಂಬುದನ್ನು ಹೇಳಿಕೊಳ್ಳುವ ಮೂಲಕ ತಮ್ಮ ಅಸ್ಮಿತೆ ಯನ್ನು ಪ್ರದರ್ಶಿಸುವ ಪರಿಪಾಠ ಜಾಸ್ತಿಯಾಗಿದೆ.

ಫುಟ್ಬಾಲ್ ಒಂದು ರೀತಿಯಲ್ಲಿ ಅಡಿಕ್ಷನ್! ಅದು ಯಾವ ಮಾದಕ ಪದಾರ್ಥಗಳ ವ್ಯಸನಕ್ಕಿಂತ ಕಮ್ಮಿಯದ್ದಲ್ಲ. ಅಡಿಕ್ಷನ್ ವಿಷಯದಲ್ಲಿ ಕ್ರಿಕೆಟ್ ಮತ್ತು -ಟ್ಬಾಲ್ ಮಧ್ಯೆ ಯಾವುದು ಹೆಚ್ಚು ಮತ್ತು ಯಾವುದು ಕಮ್ಮಿ ಎಂದು ಹೇಳುವುದು ಕಷ್ಟ. ಕಾರಣ ಆಯಾ ಆಟವನ್ನು ಇಷ್ಟಪಡುವವರಿಗೆ ಅವರವರು ಇಷ್ಟಪಡುವ ಆತ ಇಷ್ಟವೇ. ಆದರೂ ಫುಟ್ಬಾಲ್ ಅಭಿಮಾನಿಗಳದ್ದು ಒಂದು ತೂಕ ಜಾಸ್ತಿ ಎಂದು ಎರಡೂ ‘ಅತಿರೇಕ’ಗಳನ್ನು ಬಲ್ಲವರ ಅಂಬೋಣ. ಕಾರಣ ಅರ್ಜೆಂಟಿನಾದಲ್ಲಿ ಫುಟ್ಬಾಲ್ ಮ್ಯಾಚ್ ನಡೆಯುತ್ತಿದ್ದರೆ, ಆಫ್ರಿಕಾದ ಸೆನೆಗಲ್‌ನಲ್ಲಿರುವ ಬಡ ದೇಶವೊಂದರ ಅಭಿಮಾನಿ ಸ್ಟೇಡಿಯಂನಲ್ಲಿ ಕುಳಿತು ನೋಡುತ್ತಿರುತ್ತಾನೆ.
ಆತನಿಗೆ ವಾಪಸ್ ಹೋದರೆ, ಮನೆ-ಮಠ ಸಹ ಇರುವುದಿಲ್ಲ.

ಕಾರಣ ಆತ ಮನೆ ಮಾರಿ ಬಂದ ಹಣದಲ್ಲಿ ಅರ್ಜೆಂಟಿನಾಕ್ಕೆ ಮ್ಯಾಚ್ ನೋಡಲು ಬಂದಿರುತ್ತಾನೆ. ಇದೇ ಕಾರಣಕ್ಕೆ ಹೆಂಡತಿ ಯನ್ನು ಬಿಟ್ಟವರು, ನೌಕರಿ ಬಿಟ್ಟವರೂ ಸಿಗುತ್ತಾರೆ. ಇವರು ಮನೆ-ಮನೆಯೊಡತಿಯನ್ನು ಬಿಟ್ಟಿರಬಲ್ಲರು. ಆದರೆ ಫುಟ್ಬಾಲ್ ಅನ್ನು ಉಹುಂ.. ಯಾವ ಕಾರಣಕ್ಕೂ ಬಿಟ್ಟಿರಲಾರರು.

ನಾನು ಮೊನ್ನೆ ಕತಾರಿನ ಅಲ್ ಬಾಯ್ತ ಸ್ಟೇಡಿಯಂನಲ್ಲಿ ಅಮೆರಿಕ – ಇಂಗ್ಲೆಂಡ್ ನಡುವಿನ ಫುಟ್ಬಾಲ್ ಪಂದ್ಯ ನೋಡುವಾಗ, ನನ್ನ ಪಕ್ಕದಲ್ಲಿ ಹಾಂಗ್‌ಕಾಂಗ್ ದೇಶದ ಪ್ರಜೆಯೊಬ್ಬ ಕುಳಿತಿದ್ದ. ಆತ ಆ ಎರಡೂ ದೇಶಗಳ ನಾಗರಿಕನೇನಲ್ಲ; ನನ್ನ ಹಾಗೆಯೇ. ಆದರೆ ಆತ ಮೂವತ್ತೆಂಟು ದಿನ ರಜೆ ಹಾಕಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು, ಎಲ್ಲ ದಿನಗಳ ಪಂದ್ಯಗಳನ್ನು ನೋಡಲು ಆಗಮಿಸಿದ್ದ. ಅದಕ್ಕಾಗಿ ಆತ ನಾಲ್ಕು ವರ್ಷಗಳ ಕಾಲ ರಜೆಗಳನ್ನೇ ತೆಗೆದುಕೊಳ್ಳದೇ, ಅವೆಲ್ಲವುಗಳನ್ನೂ
ಕೂಡಿಟ್ಟುಕೊಂಡಿದ್ದ.

ಆತನ ಫುಟ್ಬಾಲ್ ಪ್ರೇಮವನ್ನು ಕಂಡು ಆತನ ಬಾಸ್, ಕಂಪನಿ ವತಿಯಿಂದ ಸ್ವಲ್ಪ ಹಣವನ್ನೂ ಮಂಜೂರು ಮಾಡಿದ್ದ. ವಾಪಸ್ ಹೋಗುವ ಹೊತ್ತಿಗೆ ಆತನ ಪತ್ನಿ ತವರಿಗೆ ಹೋಗಿರುತ್ತಾಳೋ, ಬೇರೊಬ್ಬನೊಂದಿಗೆ ಓಡಿಹೋಗುತ್ತಾಳೋ, ಡೈವೋರ್ಸ್ ಪತ್ರಕ್ಕೆ ಸಹಿ ಹಾಕಿರುತ್ತಾಳೋ, ಅವ್ಯಾವವೂ ಆತನಿಗೆ ಸಂಬಂಧವಿಲ್ಲ. ಆತ ಕೇವಲ ಆಟವನ್ನು ನೋಡುತ್ತಿರಲಿಲ್ಲ. ಆಟಗಾರರ
ಚಲನೆಯನ್ನು ದಾಖಲಿಸುತ್ತಿದ್ದ. ಅದನ್ನು ತಿಳಿದುಕೊಳ್ಳುವ ಆಸಕ್ತಿ ನನಗಿತ್ತಾದರೂ, ಮಧ್ಯ ಮಧ್ಯ ಬಾಯಿ ಹಾಕಿ ಆತನಿಂದ ಉಗಿಸಿಕೊಳ್ಳುವುದು ಬೇಡವೆಂದು ಸುಮ್ಮನಾದೆ.

ಮರುಭೂಮಿ ದೇಶವಾದ ಕತಾರಿನಲ್ಲಿ ಕಾಲ್ಚೆಂಡಿನ ಕಾಳಗ ನಡೆಯುತ್ತಿದ್ದರೆ, ಅದನ್ನು ನೋಡಲು ಪುಟಗೋಸಿಯಾಕಾರದ ಪ್ಯಾಗೋ ಪ್ಯಾಗೋ ಎಂಬ ದ್ವೀಪ ರಾಷ್ಟ್ರದಿಂದ ಬಂದವನ ಹುಚ್ಚುತನ ನನ್ನಲ್ಲಿ ಮೂಡಿಸಿದ ಬೆರಗು ಇನ್ನೂ ಆರಿಲ್ಲ. ಅದ್ಯಾವ ಪರಿಯ ಫುಟ್ಬಾಲ್ ಗೀಳು ಆತನನ್ನು ಎಲ್ಲಿಂದ ಎಲ್ಲಿಗೋ ತಂದಿದೆಯಲ್ಲ ಎನಿಸಿತು. ಹಾಗೆ ನೋಡಿ ದರೆ, ಅಲ್ಲಿ ಬಂದವರ ಪೈಕಿ ಅಂಥ ಹುಚ್ಚರೇ ಹೆಚ್ಚಿನವರಿದ್ದರು. ಇಂಥ ದೇಶದಿಂದ ಬಂದಿಲ್ಲ ಎನ್ನುವ ಹಾಗಿರಲಿಲ್ಲ.

ಎಲ್ಲ ದೇಶಗಳ ಬಾವುಟ ಹಿಡಿದು, ಅಲ್ಲಿನ ಸಂಸ್ಕೃತಿಯನ್ನು ವೇಷ-ಭೂಷಣಗಳಲ್ಲಿ ಪ್ರತಿಬಿಂಬಿಸುವ ಪೋಷಾಕು ಧರಿಸಿ
ಅಲ್ಲಿ ಹಾಜರಿದ್ದರು. ಇದು ಫುಟ್ಬಾಲ್‌ಗೆ ಮಾತ್ರ ಸಾಧ್ಯ ಎಂಬುದನ್ನು ಅನುಮಾನದಿಂದಲೇ ನಾನು ಒಪ್ಪಿಕೊಂಡಿದ್ದೆ. ಅದರಲ್ಲೂ ತಾವು ಬೆಂಬಲಿಸುವ ಆಟಗಾರರಿಗೆ, ತಂಡಕ್ಕೆ ತೋರುವ ಬೆಂಬಲ, ಸಮರ್ಪಣಾಭಾವವನ್ನು ಪ್ರಾಯಶಃ ಅವರು ತಮಗೂ ತೋರಲಿಕ್ಕಿಲ್ಲವೇನೋ. ತನಗಿಂತ ಮಿಗಿಲಾದ, ತನ್ನತನವನ್ನೂ ಮೀರಿದ ಕಾಳಜಿ ವ್ಯಕ್ತವಾಗುವ, ಸ್ವಂತವನ್ನು ಬಿಟ್ಟು ಫುಟ್ಬಾಲ್ ಮಾತ್ರ ವೈಭವೀಕರಿಸುವ, ಅತಿಶಯ ಎನ್ನಿಸುವಷ್ಟರ ಮಟ್ಟಿಗೆ ಪರಾಕಾಷ್ಠೆಯ ಹಂತ ತಲುಪುವ ಭಾವೋನ್ಮಾದಕ್ಕೆ ನನ್ನಲ್ಲಿ ಹೇಳಲು ಪದಗಳಿಲ್ಲ, ವಿಷಯಗಳೂ ಇಲ್ಲ. ಫುಟ್ಬಾಲ್ ಅಂಥ ಹುಚ್ಚು ಮುಂಡೇದು!

ನನಗೆ ಸುಲಭಕ್ಕೆ ತಲೆಯೊಳಗೆ ಹೋದರೂ ಮಿದುಳಿನಲ್ಲಿ ಇಳಿಯದ ವಿಷಯವೆಂದರೆ, ಇಂಗ್ಲೆಂಡ್ ಯಾಕೆ ಸೋಲುತ್ತದೆ, ಜರ್ಮನಿ ಮತ್ತು ಬ್ರೆಜಿಲ್ ಗೆಲ್ಲುತ್ತದೆ? ಸ್ಪೇನ್ ವಿಶ್ವವನ್ನೇ ಗೆದ್ದಂತೆ ಯಾಕೆ ಬೀಗುತ್ತದೆ? ಜಗತ್ತಿನ ಪ್ರತಿಷ್ಠಿತ ಮತ್ತು ಶ್ರೀಮಂತ ಫುಟ್ಬಾಲ್ ಕ್ಲಬ್‌ಗಳು ಯೋಗ್ಯರಲ್ಲದ ಆಟಗಾರರನ್ನು ಆಯ್ಕೆ ಮಾಡುತ್ತವೆ? ಜಗತ್ತಿನ ಬಲಾಢ್ಯ ದೇಶವೆನಿಸಿಕೊಂಡ ಅಮೆರಿಕ ಕ್ಕೇಕೆ ಗೆಲುವು ಸುಲಭವಲ್ಲ? ಜಪಾನ್, ಆಸ್ಟ್ರೇಲಿಯಾ ಮತ್ತು ಇಕ್ವೆಡರ್‌ನಂಥ ದೇಶಕ್ಕೂ ಫುಟ್ಬಾಲ್ ವಿಶ್ವಕಪ್ ಬಾಚಬೇಕು ಎಂಬ ಹೆಬ್ಬಾಸೆ ಏಕೆ? ಭಾರತ ಮತ್ತು ಚೀನಾಕ್ಕೆ ಯಾಕೆ ಫುಟ್ಬಾಲ್ ಬಗ್ಗೆ ವೈರಾಗ್ಯ? ಜಗತ್ತಿನ ಎಲ್ಲ ಕ್ರೀಡೆ ಅಥವಾ ಮಹಾನ್ ಇವೆಂಟ್‌ ಗಳನ್ನೂ ಸಂಘಟಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ಕೆಲವು ದೇಶಗಳ ಪೈಕಿ ಒಂದಾಗಿರುವ ಚೀನಾ ಏಕೆ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಸಂಘಟಿಸಲು ಮುಂದೆ ಬಂದಿಲ್ಲ? ನಮ್ಮ ಕರ್ನಾಟಕ ರಾಜ್ಯಕ್ಕಿಂತ ಸುಮಾರು ಇಪ್ಪತ್ತು ಪಟ್ಟು ಕಮ್ಮಿ ಭೂಪ್ರದೇಶ ಹೊಂದಿರುವ ಕತಾರಿನಂಥ ಪುಟ್ಟ ದೇಶಕ್ಕೆ ಫುಟ್ಬಾಲ್ ಮೇಲೆ ಅಷ್ಟೊಂದು ಪ್ರೀತಿ ಏಕೆ? ದೇಶದ ಶಕ್ತಿಶಾಲಿ ದೇಶಗಳಿಗಿಂತ ಕತಾರ್‌ಗೇಕೆ ಈ ತೆವಲು? ೨೨೦ ಶತಕೋಟಿ ಡಾಲರ್ ಹಣ ಖರ್ಚು ಮಾಡಿ ಫಿಫಾ ಫುಟ್ಬಾಲ್ ವಿಶ್ವಕಪ್ ಸಂಘಟಿಸುವ ಕತಾರ್, ಅಷ್ಟು ಹಣವನ್ನು ಹೇಗೆ ವಾಪಸ್ ಪಡೆಯುತ್ತದೆ? ಒಂದು ತಿಂಗಳ ವಿಶ್ವಕಪ್ ಪಂದ್ಯಾವಳಿಯ ನಂತರ ಆ ಸ್ಟೇಡಿಯಂಗಳೇನಾಗುತ್ತವೆ? ಹಾಕಿದ ಹಣ ವಾಪಸ್ ಬರದಿದ್ದರೆ ಏನು ಕತೆ? ಇವೆಲ್ಲ ಸುಲಭಕ್ಕೆ ಅರ್ಥವಾಗುವಂಥದ್ದಲ್ಲ.

ಫುಟ್ಬಾಲ್ ಆಟದ ರೋಚಕತೆ, ಪ್ರೇಕ್ಷಕರ ಉನ್ಮಾದಕ್ಕಿಂತ ಈ ಕ್ರೀಡೆಯಲ್ಲಿರುವ ರಾಜಕೀಯ, ಹಣ, ಸೆಕ್ಸ್, ಕ್ರೈಂ, ಹಗರಣ, ಮೇಲಾಟ, ಕಿತ್ತಾಟ, ಪೈಪೋಟಿ, ಜಾಗತಿಕ ಪಾಲಿಟಿಕ್ಸ್, ಒಂದೆರಡಲ್ಲ. ಇಂದು ಫಿಫಾ ಅಧ್ಯಕ್ಷನಾದವನಿಗೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿದಂತೆ ಪ್ರಭಾವಿ ದೇಶಗಳ ಅಧ್ಯಕ್ಷರು ಡೊಗ್ಗು ಸಲಾಮು ಹಾಕುತ್ತಾರೆ. ಆತ ಈ ಅಧ್ಯಕ್ಷರುಗಳಿಗಿಂತ, ಹೆಚ್ಚು ದೇಶಗಳ ಅಭಿಮಾನಿಗಳ ಮೇಲೆ ಪ್ರಭಾವ ಬೀರುವಷ್ಟು ಉದ್ದನೆಯ ತೋಳನ್ನು ಹೊಂದಿzನೆ.

ಆತನ ಮುಂದೆ ಆತಿಥೇಯ ದೇಶಗಳ ಅಧ್ಯಕ್ಷರು ಮಂಡಿಯೂರುತ್ತಾರೆ. ಈ ಸಲದ ವಿಶ್ವಕಪ್ ಸಂಘಟಿಸಲು ಕತಾರ್ ಎಷ್ಟು ಹರಸಾಹಸ ಮಾಡಿತು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಕತಾರ್ ಬಹಳ ದೊಡ್ಡ ಮೊತ್ತದ ‘ಕಪ್ಪ ಕಾಣಿಕೆ’ ತೆತ್ತು ವಿಶ್ವಕಪ್ ಸಂಘಟಿಸುವ ಅವಕಾಶವನ್ನೇನೋ ಗಿಟ್ಟಿಸಿಕೊಂಡಿತು. ಆದರೆ ಫಿಫಾ ಅಧ್ಯಕ್ಷನ ಕೈಗೊಂಬೆಯಂತೆ ಕುಣಿಯಿತು ಎಂಬುದು ಸಹ ಸುಳ್ಳಲ್ಲ.

ಕಾರಣ ಫಿಫಾ ಅಧ್ಯಕ್ಷನಿಗೆ ಕತಾರಿನಂಥ ಹತ್ತು ದೇಶಗಳ ಅಧ್ಯಕ್ಷರು ಕಾಯುತ್ತಿರುತ್ತಾರೆ ಎಂಬುದು ಅಷ್ಟೇ ಸತ್ಯ. ಕೆಲವರು ಫುಟ್ಬಾಲ್ ನೋಡಿದರೆ ಮತ್ತೆ ಕೆಲವರು ಇನ್ನೇನನ್ನೋ ನೋಡುತ್ತಾರೆ. ಫುಟ್ಬಾಲ್ ಯಾರಿಗೂ ಅರ್ಥವಾಗದ, ಎಲ್ಲರಿಗೂ ಇಷ್ಟಿಷ್ಟೇ ಅರ್ಥವಾಗುವ, ಆದರೆ ಸಂಪೂರ್ಣ ಅರ್ಥವಾಗಿದೆ ಎಂದು ಎಲ್ಲರೂ ಭಾವಿಸುವ, after all, ಒಂದು ಕಾಲ್ಚೆಂಡಿಗಾಗಿ ನಡೆಯುವ ಕಾಳಗ!