Friday, 13th December 2024

ಐದನೇ ಮೈಸೂರು ಯುದ್ದ, ನಡೆದದ್ದು ಅವರವರದೇ ಮಧ್ಯ !

ಅಭಿಪ್ರಾಯ

ಡಾ.ಪ್ರತಾಪ್ ಕೊಡಂಚ

ಇದ್ಯಾವ ಯುದ್ಧ? ನಾವೆಲ್ಲೂ ಓದಿಲ್ಲವಲ್ಲ? ಎಂದು ಬೆಚ್ಚಿ ಬೀಳಬೇಡಿ. ನಾನಿಲ್ಲಿ ತೆರೆದಿಡುವ ಯುದ್ಧ ಹಳೆಯದಲ್ಲ. ಕರೋನಾ ಕಾಲಘಟ್ಟದಲ್ಲಿ ನಿರ್ಭಿತರಾಗಿ ಸೆಣೆಸಿ, ತಮಗಾಗದವರನ್ನು ಹಣಿದು, ಬೀಗಿದ ಪಕ್ಷಾ ತೀತ ಜನನಾಯಕರ ವೀರಗಾಥೆ. ಕತ್ತಿ, ಗುರಾಣಿ, ತುಪಾಕಿಗಳಿಲ್ಲದೇ, ದಿನಕ್ಕೊಂದು ಪತ್ರಿಕಾಗೋಷ್ಠಿಯೋ, ಫೇಸ್
ಬುಕ್ ಲೈವ್ ಮಾಡಿಕೊಂಡೇ ಗುರಿ ಮುಟ್ಟಿದ ಮೈಸೂರು ಗುರಿಕಾರರುಗಳ ಕತೆ.

ಪಕ್ಷಭೇಧ ಮರೆತು, ಗಮ್ಯದತ್ತ ಮುನ್ನುಗ್ಗಿ, ತಂತಮ್ಮ ಸಂಚಿ ಕಾಪಿಟ್ಟು ಕಾಪಾಡಿಕೊಂಡ ಕತೆ. ತಮ್ಮೆಲ್ಲ ಅಸ್ತ್ರ ಪ್ರಯೋಗದ ನಂತರವೂ ಸೋಲೊಪ್ಪದ
ಎದುರಾಳಿಯನ್ನು ಸೆಣೆಸಲು, ಅವರದೇ ಪಾಳಯದಲ್ಲಿ ಎದುರಾಳಿ ಸೃಷ್ಟಿಸಿ, ತಾವು ಬದಿ ಸರಿದಂತೆ ಮಾಡಿ ಜಯಂಗೈದ ನಾಯಕವೆರೇಣ್ಯರ ಕತೆ! ನಾನಿಲ್ಲಿ ಯಾರ ಪರವೂ, ವಿರೋಧವೂ ಇಲ್ಲ. ನಾನಿವರಾರಿಗೂ ಆಪ್ತನೂ ಅಲ್ಲ. ಒಂದು ಪಾಳೆಯದವರನ್ನಷ್ಟೇ ದೂಷಿಸಿ, ಇನ್ನೊಂದು ಪಾಳಯದವರನ್ನು ವೈಭವೀ  ಕರಿಸುವ ಹುನ್ನಾರವೂ ನನದಲ್ಲ, ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಮಹಿಳಾ ಐಎಎಸ್ ಅಽಕಾರಿಗಳ ನಡುವಿನ ಜಟಾಪಟಿ, ಕಿರಿಕಿರಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲವೆಂದು ಒಬ್ಬರು ಶಸ್ತ್ರತ್ಯಾಗಕ್ಕೆ ಸಿದ್ಧರಾಗಿದ್ದ ಪ್ರಹಸನ, ಕೇಳಿಯೇ ಇದ್ದೀರಿ. ಪಕ್ಷವೊಂದರೊಳಗೆ ಒಬ್ಬರನ್ನು ಒಬ್ಬರು ಕಾಲೆಳೆದು ಬಡಿದಾಡುವ ದಿನಗಳಲ್ಲಿ, ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ನೇತಾರರು ಪಕ್ಷಭೇದ ಮರೆತು ಒಡಹುಟ್ಟಿ ದವರಂತೆ ಸೆಣೆಸಿ ಗೆದ್ದ ಇನ್ನೊಂದು ಉದಾಹರಣೆ ನನಗಂತೂ ಕಾಣಿಸುತ್ತಿಲ್ಲ.

ಹಾಗಾಗಿಯೇ ನಾನಿದಕ್ಕೆ ಹೆಸರಿಸಿದ್ದು, ಐದನೇ ಮೈಸೂರು ಮಹಾಯುದ್ಧವೆಂದು! ಮೈಸೂರು, ಕರ್ನಾಟಕದ ಪಾಲಿಗೆ ಇದಾಗಲೇ ಮುಗಿದ ಅಧ್ಯಾಯವಾಗಿದ್ದರೂ,
ನನಗನ್ನಿಸುವಂತೆ ಇದು ದಾಖಲಾರ್ಹ. ಹೊರಗಿನಿಂದ ನಿಂತು ನೋಡುವ ಶ್ರೀಸಾಮಾನ್ಯನಿಗೆ ಹುಟ್ಟುಹಾಕಿದ ಪ್ರಶ್ನೆಗಳನ್ನು ತೆರೆದಿಡುವ ಕಿರು ಪ್ರಯತ್ನ ನನ್ನದು.
ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲಾಧಿಕಾರಿಯಾಗುತ್ತಲೇ ಅವರನ್ನು ಸಾರಾ (?) ಸಗಟಾಗಿ ತಳ್ಳಿ ಹಾಕುವ ಪ್ರಯತ್ನ ಶಾಸಕರೊಬ್ಬರು ಮಾಡುತ್ತಲೇ ಇದ್ದರು. ಅವರಿಬ್ಬರ ನಡುವೆ ಅದೇನಿತ್ತೋ ದೇವರೇ ಬಲ್ಲ. ಜಿಲ್ಲಾಧಿಕಾರಿ ಅಸಮರ್ಥರು. ಜನಸೇವೆ ಮಾಡುತ್ತಿಲ್ಲ ಎಂಬುದೇ ವಿಷಯವಾಗಿದ್ದರೆ, ಅವರು ಮೈಸೂರಿಗೆ ಕಾಲಿಡುತ್ತಲೇ ಬುಸುಗುಡುವಿಕೆ ಇರುತ್ತಿರಲಿಲ್ಲ ಎನಿಸುತ್ತೆ. ಒಂದು ಸರಕಾರಿ ಸಭೆಯಲ್ಲಂತೂ, ಮಾಸ್ಕ್ ಹಾಕಿಯೇ ಉತ್ತರಿಸುತ್ತಿದ್ದ ಜಿಲ್ಲಾಧಿಕಾರಿ ಗಳಿಗೆ, ಮಾ ತೆಗೆದು ಉತ್ತರಿಸಿ, ಇಲ್ಲವೇ ಸಭೆಯಿಂದ ಹೊರ ನಡೆಯಿರೆಂದು ಗುಡುಗಿದ್ದರು.

ನಾನು ಜನಪ್ರತಿನಿಧಿ, ಮಾಜಿ ಮಂತ್ರಿ, ಅಧಿಕಾರಿಗಳು ದರ್ಪ, ಅವಿಧೇಯತೆ ತೋರಿದರೆ ಸಹಿಸುವುದಿಲ್ಲವೆಂಬ ದರ್ಪ ತೋರಿಸಿದ್ದರು. ಕರೋನಾ ಕಾಲಘಟ್ಟದಲ್ಲಿ, ಮಾ, ಸಾಮಾಜಿಕ ಅಂತರ, ಶುಚಿತ್ವದ ನಿಯಮ ಪಾಲಿಸಬೇಕೆಂದು ಸರಕಾರಗಳೇ ಜಾಹೀರಾತು ಕೊಟ್ಟು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಾಗ, ಅದನ್ನೇ ಪಾಲಿಸಿದ ಅಽಕಾರಿಗಳ ನಡೆ ಅವಿಧೇಯತೆಯೆಂದ ಜನಪ್ರತಿನಿಽಗಳ ನಡೆ ಆಶ್ಚರ್ಯಕರವೇನಲ್ಲ ಬಿಡಿ. ಕರೋನಾ ಕಾಲದ, ವಿಧಾನಸೌಧದಲ್ಲಿ ಒಬ್ಬರನ್ನೊಬ್ಬರು ಎಳೆದಾಡಿ, ಒಬ್ಬರನ್ನು ಪೀಠದಿಂದ ಎಬ್ಬಿಸಿ, ಇನ್ನೊಬ್ಬರ ಪೀಠಾರೋಹಣ ಮಾಡಿಸಿ, ಸದನದ ಉಪಸಭಾಪತಿಗಳೊಬ್ಬರ ಆತ್ಮಹತ್ಯೆ ಮಾಡಿಸಿದ ಸದನ ಸಹಪಾಠಿಗಳ ನಡುವೆ ಇದ್ದು ಬಂದವರಲ್ಲವೇ ಇವರು? ಇವರೆಲ್ಲ ಮುಖಗವಸು ಬಿಡಿ, ಮುಖಮುಚ್ಚಿಕೊಂಡೂ ಅಭ್ಯಾಸವಿಲ್ಲದ ಸಭಾಸದರು!
ನಿಷ್ಠುರವಾದಿ ಅಧಿಕಾರಿಗಳನ್ನು ನೇಮಿಸಿದಾಗೆಲ್ಲ, ಶ್ರೀಸಾಮಾನ್ಯ ಅಂದ್ಕೊಳ್ತಾ ಇದ್ದಿದ್ದು, ವಿರೋಽ ಪಾಳಯಕ್ಕೆ ಬಿಗಿಹಿಡಿಯಲೇ ಸರಕಾರ ದಿಟ್ಟ, ಧೀಮಂತ ಅಧಿಕಾರಿಯನ್ನು ತಂದಿರಬೇಕೆಂದು.

ಇದಕ್ಕೆ ಪುಷ್ಟಿ ಕೊಡುವಂತೆ ಮೈಸೂರಿನ ಸಂಸದರೂ, ಆಡಳಿತ ಪಕ್ಷದ ಮುಖಂಡರು, ಉಸ್ತುವಾರಿ ಸಚಿವರುಗಳು ಮೈಸೂರಿನ ಜಿಲ್ಲಾಧಿಕಾರಿಗಳ ಮೇಲೆ ಸಂಪೂರ್ಣ ವಿಶ್ವಾಸವಿರುವವರಂತೆ ನಡೆದುಕೊಂಡಿದ್ದರು. ಜಿಲ್ಲಾಧಿಕಾರಿಗಳನ್ನು ಸಮರ್ಥಿಸುವ ವಿಶೇಷ ಪಾತ್ರದಲ್ಲಿ, ಗೌರವಪೂರ್ವಕವಾಗಿ ಕಾಣಿಸಿಕೊಂಡಿದ್ದರು. ಬಹುತೇಕರದ್ದು, ಶತ್ರುವಿನ ಶತ್ರುಗಳ ಜತೆಗಿನ ಮಿತ್ರತ್ವ ಎಂಬುದರ ಸುಳಿವು ಅಲ್ಲಲ್ಲಿ ಕಂಡಿತ್ತು. ಆದರೆ ಅದಾಗಲೇ ಕರೋನಾ ನಿಯಂತ್ರಣ ತಪ್ಪಿದಂತಿದ್ದ ಮೈಸೂರಿನಲ್ಲಿ ಆಡಳಿತದ ಗಮನ ಕರೋನಾ ನಿಯಂತ್ರಣದತ್ತ ಹರಿಸಿ (ದಂತೆ?) ಸುಮ್ಮನಾದರು.

ಕರೋನಾ ಎರಡನೇ ಅಲೆಗೆ ರಾಜ್ಯ ಕಂಡು ಕೇಳರಿಯದಂತೆ ತತ್ತರಿಸಿತ್ತು. ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಅಮಾನುಷ ಘಟನೆಯೂ ನಡೆಯಿತು. ಆಗಲೇ ಎರಡನೇ ಸುತ್ತಿನ ಜಟ್ಟಿ ಕಾಳಗ ಆರಂಭವಾಗಿದ್ದು. ವೈಫಲ್ಯವನ್ನು ಮೈಸೂರು ಜಿಲ್ಲಾಧಿಕಾರಿಗಳ ಕೊರಳಿಗೆ ಕಟ್ಟಿ, ಬೇಳೆ ಬೇಯಿಸಿಕೊಳ್ಳುವ ಹಸಿದ ರಾಜಕಾರಣಿಗಳ ನೆರಳು ಕಾಣಿಸಿತ್ತು. ಮೈಸೂರು ಕಡೆಯಿಂದ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿ ಕೊಂಡರು.

ಅವರದ್ದೇನಿದ್ದರೂ ಸ್ವರಕ್ಷಣೆಯ ನಡೆ ಹೊರತು ಜನ ರಕ್ಷಣೆಯ ಗುರಿಯಿರಲಿಲ್ಲವೆನಿಸುತ್ತೆ. ಚಾಮರಾಜನಗರದಲ್ಲಿ ನಡೆದದ್ದು, ಯಾರೂ ಸಮರ್ಥಿಸಿಕೊಳ್ಳಲಾಗದ ದುರಂತ. ಈ ತನಕ ಕಾರಣವೇನು? ಹೊಣೆಗಾರರು ಯಾರು? ಎಂಬುದರ ಸ್ಪಷ್ಟತೆ ಸರಕಾರವಾಗಲಿ, ಅಽಕಾರಿಗಳ ಮೇಲೆ ಮುಗಿಬಿದ್ದ ರಾಜಕಾರಣಿಗಳಾಗಲಿ ಕೊಡಲೇ ಇಲ್ಲ. ಹಲವಾರು ಆಡಿಯೊ ತುಣುಕುಗಳು ಹರಿದಾಡಿದರೂ, ಎಡವಿzಲ್ಲಿ? ಯಾರು ಜವಾಬ್ದಾರರು? ಎಂಬುದು ಮಲೆಮಹದೇಶ್ವರನ ಹೊರತು ಪಡಿಸಿ ಬೇರಾರಿಗೂ ಈ ತನಕ ತಿಳಿದಿರಲಿಕ್ಕಿಲ್ಲ! ಆಮೇಲೆ ಹುಟ್ಟಿಕೊಂಡಿದ್ದು, ಜಿಽಕಾರಿಗಳ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣವಾಗುತ್ತಿದೆಯೆಂಬ ಆರೋಪ.

ಪುರಾತತ್ವ ಇಲಾಖೆಯ ಅನುಮತಿ ಇಲ್ಲದೇ, ಸಾಂಸ್ಕೃತಿಕ ನಗರಿಯ ಪುರಾತನ ಕಟ್ಟಡವೊಂದನ್ನು ಕೆಡಿಸುತ್ತಿದ್ದಾರೆ, ಕರೋನಾ ಕಾಲದಲ್ಲಿ ಈ ದುಂದುವೆಚ್ಚ ತರವಲ್ಲವೆಂಬ ಕಳಕಳಿ. ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧದ ರಾತ್ರೋರಾತ್ರಿ ಗೋಡೆ ಒಡೆದು ತಮ್ಮ ಕೋಣೆಗಳನ್ನು ಮಂತ್ರಿಗಳು ವಿಸ್ತರಿಸಿಕೊಂಡಾಗ, ಇವರಾರಿಗೂ ಸರಕಾರಿ ದುಡ್ಡಿನ ದುರ್ಬಳಕೆ, ಪುರಾತತ್ವ ಇಲಾಖೆಯ ಅಸ್ತಿತ್ವ ನೆನಪಾಗಿರಲಿಕ್ಕಿಲ್ಲ! ರೋಹಿಣಿಯವರು ಮೈಸೂರಿಗೆ ಬಂದ ಮೇಲೆ ಕೇಳಿಕೊಂಡು ಮಂಜೂರು ಮಾಡಿಸಿಕೊಂಡ ಯೋಜನೆ ಇದಾಗಿತ್ತೇ ? ಹಾಗಿದ್ದರೆ, ಏಳೆಂಟು ತಿಂಗಳಿನ ಪ್ರಸ್ತಾಪ ಸಲ್ಲಿಸಿ, ಮಂಜೂರಾಗಿ, ಕೆಲಸ ಆರಂಭಿಸಿ, ಮುಗಿಸಿಯೂ ಬಿಟ್ಟ ಪ್ರಪ್ರಥಮ ಸರಕಾರಿ ಈಜುಕೊಳ ಇದಿರಬೇಕು!

ಹಿಂದೆ ಮಂಜೂರಾಗಿದ್ದರೆ, ಹುಯಿಲೆಬ್ಬಿಸಿದವರಿಗೆ, ಜಿಲ್ಲಾಧಿಕಾರಿಗಳ ನಿವಾಸ ಪಾರಂಪರಿಕ ಕಟ್ಟಡ ಎಂಬುದರ ಅರಿವಿರಲಿಲ್ಲವೇ? ಕರೋನಾ ಕಾಲದಲ್ಲಿ ಸರಕಾರಿ ಹಣದ ದುಂದುವೆಚ್ಚ ಬೇಡಿತ್ತು ಎಂಬುದು ಹೌದಾದರೂ, ಆ ಯೋಜನೆ ನಿಲ್ಲಿಸಿ, ಅದಕ್ಕೆ ಮಂಜೂರಾಗಿದ್ದ ಹಣ ಕರೋನಾ ನಿಯಂತ್ರಣಕ್ಕೆ ಬಳಸಿಕೊಳ್ಳುವ ಅವಕಾಶ ವಿತ್ತೇ? ಶಾಸಕರ ಕ್ಷೇತ್ರ ಅನುದಾನದಿಂದ ಲಸಿಕೆ ತರಿಸಿಕೊಡುತ್ತೇವೆಂದು ಬೊಬ್ಬಿರಿದು, ತಣ್ಣಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಪಡೆದ ಕಾಂಗ್ರೆಸ್ ಶಾಸಕರ ಯೋಜನೆಯಂತೆ, ಇನ್ನೊಂದು ಪ್ರಚಾರ ತಂತ್ರ ಇದಾಗುತ್ತಿತ್ತಷ್ಟೇ!

ಏನೇ ಆದರೂ, ಅಲ್ಲಾಧಿಕಾರದಲ್ಲಿದ್ದಾಗ ಹೊಸ ಕಾರು, ಸೋಫಾ, ಖುರ್ಚಿ, ಕಚೇರಿ ಪರಿಕರಗಳನ್ನು ತುಂಬಿಸಿಕೊಂಡು, ಅವಧಿಯ ನಂತರ ಕೆಲವನ್ನು ಹೊತ್ತೊ ಯ್ಯುವ ಹಲವರಂತೆ, ಈಜುಕೊಳವನ್ನು ತೆಗೆದುಕೊಂಡು ಹೋಗಲಂತೂ ಆಗುತ್ತಿರಲಿಲ್ಲವಲ್ಲ. ಅದೆಲ್ಲ ಬಿಡಿ, ಕರೋನಾ ಕಾಲದಲ್ಲಿ ದುಂದುವೆಚ್ಚ ಎನ್ನುವ ನಾಯಕ ರಲ್ಲಿ, ಎಷ್ಟು ಜನ ತಮ್ಮ ಸ್ವಂತ ಜೀವನದ ಐಷಾರಾಮಿ, ದುಂದುವೆಚ್ಚ ನಿಲ್ಲಿಸಿದ ಉದಾಹರಣೆ ಕೊಡಬಲ್ಲರೇ? ಅಲ್ಲಿಗೇ ಈಜುಕೊಳದ ಪ್ರಶ್ನೆ ನಿಜವಾದ ವಿಷಯವಾಗಿರಲಿಲ್ಲ ಎಂದೆನಿಸುವುದಿಲ್ಲವೇ? ಆಮೇಲೆ ಬಂದಿದ್ದು, ಕರೋನಾ ನಿರ್ವಹಣೆಯಲ್ಲಿ ಸರಕಾರ ನೀಡಿದ ಅನುದಾನದ ಲೆಕ್ಕ ನೀಡಿ ಎನ್ನುವ ಕೂಗು.

ಜಿಲ್ಲಾಧಿಕಾರಿಗಳಂತೂ ೨೪ ಗಂಟೆಗಳ, ಬಳಕೆಯನ್ನು ವಿವರಿಸಿದ್ದರು. ಆಶ್ಚರ್ಯವೆಂದರೆ ಲೆಕ್ಕ ಕೇಳಿದ ಪುಣ್ಯಾತ್ಮರಾರು, ಲೆಕ್ಕ ಸರಿಯಿಲ್ಲವೆಂದು ತಕರಾರು
ಎತ್ತಲೇ ಇಲ್ಲ! ಬದಲಿಗೆ ಎಲ್ಲರೂ ನೆಗೆದಿದ್ದು ಜಿಲ್ಲಾಧಿಕಾರಿಗಳು ಸಮರ್ಥವಾಗಿ ಕರೋನಾ ನಿಯಂತ್ರಣದಲ್ಲಿ ತೊಡಗಿಲ್ಲವೆಂಬ ಹೊಸ ಆರೋಪದತ್ತ. ಹಾಗಾಗಿ ಇವರೆಲ್ಲರ ಪ್ರಯತ್ನ ಆರೋಪ ಹೊರಿಸುವ ಅವಕಾಶದ ಹುಡುಕಾಟವೇ ಹೊರತು, ಇನ್ನಾವುದಲ್ಲ ಎಂಬುದಂತೂ ಸ್ಪಷ್ಟ. ಇದೆಲ್ಲದರ ನಡುವೆ ಲೆಕ್ಕ ಸರಿಯಿದೆಯೇ? ಎಂಬದು ಪ್ರಶ್ನೆಯಾಗಿಯೇ ಉಳಿದಿದೆ. ಉತ್ತರ, ತಾಯಿ ಚಾಮುಂಡೇಶ್ವರಿಗೆ ಗೊತ್ತಿರಬೇಕೆನಿಸುತ್ತೆ.

ಗೋಜಲುಗಳ ನಡುವೆ ಸಿಡಿದಿದ್ದು, ನಗರ ಪಾಲಿಕೆ ಆಯುಕ್ತರ ರಾಜೀನಾಮೆಯ ಪ್ರಹಸನ. ಮೈಸೂರು ನಗರ ಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್,
ಹಠಾತ್ತನೇ ಸುದ್ದಿಗೋಷ್ಠಿ ಕರೆದು ಜಿಽಕಾರಿಗಳಡಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಕಿರುಕುಳ ತಡೆಯಲಾಗುತ್ತಿಲ್ಲ, ಸೇವೆಗೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಕ್ರಮಬದ್ದವಾಗಿ ಅವರೇನೂ ರಾಜೀನಾಮೆ ಸಲ್ಲಿಸಿರಲಿಲ್ಲವೆನ್ನಿ! ಜಿಲ್ಲಾಧಿಕಾರಿಗಳ ಪ್ರಕಾರ ಕಂಪನಿಗಳ ದೇಣಿಗೆಯ ಮಾಹಿತಿ ಕೇಳಿದ್ದಕ್ಕೆ ಆಯುಕ್ತರು
ನೊಂದಿದ್ದಾರೆಂದು. ಅಖಾಡಕ್ಕೆ ಧುಮುಕಿದ್ದು ಇನ್ನೊಬ್ಬ ಮಹಿಳಾ ಐಎಎಸ್ ಎಂಬುದು ವಿಶೇಷ. ಸಿ.ಎಸ್.ಆರ್ ನಿಧಿ ಬಳಕೆ ಸಮರ್ಪಕವಾಗಿತ್ತೇ?, ಸರಿಯಾದ ಲೆಕ್ಕ ಸಿಕ್ಕಿತೇ? ಮಹಿಷಾಸುರನೇ ಬಲ್ಲ!

ಕೊನೆಯಲ್ಲಿ ರಾಜ್ಯ ಸರಕಾರ, ಮುಖ್ಯ ಕಾರ್ಯದರ್ಶಿಗಳು ವಿಚಾರಣೆ ನಡೆಸಿ(ದಂತೆ ನಟಿಸಿ!) ದರೆನ್ನಿ! ಸ್ವಾಮಿಗಳ ಸಮಕ್ಷಮದಲ್ಲಿ ಮಾತುಕತೆ ನಡೆಸಿ, ಅವರಿಬ್ಬ ರನ್ನೂ ವರ್ಗಾವಣೆ ಮಾಡಲಾಯಿತು. ನಾನಂದುಕೊಂಡ ಗುರಿ ಸಾಧಿಸಿದೆ ಎಂಬರ್ಥದ ಹೇಳಿಕೆ, ವರ್ಗಾವಣೆಗೊಂಡ ಆಯುಕ್ತರಿಂದ ಬಂತು! ರಾಜಕೀಯ ನಾಯಕರ ಕೈಗೊಂಬೆ ತಾವೆಂದು ತಮಗರಿವಿಲ್ಲದಂತೆಯೇ ಹೇಳಿಕೊಂಡರೆ? ಮಲ್ಲ ಯುದ್ಧ ಆರಂಭಿಸಿದ್ದ, ತಮ್ಮದೂ ಒಂದಿರ್ಲಿ ಎಂದು ಅಲ್ಲಲಿ ಗುದ್ದಿದ್ದ
ಶಾಸಕರು, ಸಂಸದರು, ಮಂತ್ರಿಗಳು ಮಾತ್ರ ತಟಸ್ಥ ಪಾತ್ರ ಯಶಸ್ವಿಯಾಗಿ ನಿರ್ವಹಿಸಿದರು.

ವರ್ಗಾವಣೆಯ ನಂತರವೂ, ಪಕ್ಷಾತೀತವಾಗಿ ರಾಜಕೀಯ ನಾಯಕರ ಭೂ ವ್ಯವಹಾರದ, ಭೂ ಮಾಫಿಯಾದ ವಾಸನೆ ಬರುತ್ತಿದೆ. ನಿರ್ಗಮಿಸುವ ಮುಂಚೆ ತನಿಖೆಗೆ ಆದೇಶಿಸಿದ ಜಿಲ್ಲಾಧಿಕಾರಿಗಳ ಕ್ರಮವೂ ಚರ್ಚೆಯಾಯಿತು.ಹಲವಾರು ಆಡಿಯೊ ತುಣುಕುಗಳು ಹರಿದಾಡಿದವು. ಸಾರಾ ಮಹೇಶರಂತೂ ಅಗ್ನಿಪರೀಕ್ಷೆಗೆ ಮುಂದಾಗಿ, ತಮ್ಮ ಒಡೆತನದ ಆಸ್ತಿಯೊಂದರ (ಒಂದನ್ನು ಮಾತ್ರ!), ಅಳತೆ ಮಾಡಿಸಿ ತನಗಂಟಿದ ಕಳಂಕದಿಂದ ಕೂಡಲೇ ಮುಕ್ತಮಾಡಿ ಎಂದು ಸತ್ಯಾಗ್ರಹ ಕೂತರು. ಮೂರ್ನಾಲ್ಕು ದಿನದಲ್ಲಿ ಅಳತೆ ಮುಗಿಸಿ, ಸ್ಪಟಿಕದಷ್ಟು ಶುಭ್ರವೆಂದು ವರದಿ ತರಿಸಿಕೊಂಡರು.

ಇಷ್ಟೊಂದು ತ್ವರಿತವಾಗಿ ಮನವಿ ಸ್ವೀಕರಿಸಿ, ಅಳತೆ ಮುಗಿಸಿ, ವರದಿ ಕೊಟ್ಟ ದಾಖಲೆಯಿದಾಗಿರಬೇಕು! ಜಮೀನಿನ ಅಳತೆ, ತಕರಾರುಗಳನ್ನು ಶೀಘ್ರ ಬಗೆಹರಿಸಿ ಕೊಳ್ಳುವ ಬಗೆ ತಿಳಿಸಿಕೊಟ್ಟರೆ, ವರ್ಷಾನುಗಟ್ಟಲೆಯಿಂದ ಬಾಕಿಯಿರುವ ವ್ಯಾಜ್ಯ ಪರಿಹಾರ ಕಂಡು ಲಕ್ಷಾಂತರ ಜನ ಕೃತಾರ್ಥರಾಗುವುದರಲ್ಲಿ ಅನುಮಾನವಿಲ್ಲ! ಇದೆಲ್ಲದರ ನಡುವೆ ತನ್ನ ತಪ್ಪಿದ್ದರೆ ಇವತ್ತೇ ನಿವೃತ್ತಿಯಾಗುತ್ತೇನೆ ಎಂಬ ಸವಕಲು ಅಸ ಬಿಟ್ಟು, ತಾನು ನಿರ್ದೋಷಿಯಾದರೆ ರೋಹಿಣಿಯವರು ಕೆಲಸಕ್ಕೆ ರಾಜೀನಾಮೆ ನೀಡಿ, ಅಡುಗೆ ಮನೆ ಸೇರಬೇಕೆಂಬ ಷರತ್ತು ವಿಧಿಸಿದರು. ತಮ್ಮ ವ್ಯಾಪ್ತಿ ತಮ್ಮ ಪ್ರಾಯಶ್ಚಿತ್ತ ನಿರ್ಧಾರಕ್ಕಷ್ಟೇ ಸೀಮಿತ ಎಂಬುದನ್ನು ಸಾರಾ ಸಗಟಾಗಿ ಮರೆತಿದ್ದರೆನಿಸುತ್ತೆ!

ಹೆಂಗಸರೆಂದರೆ ಅಡುಗೆ ಮನೆಯಾಚೆ ಕಾಣಿಸಬಾರದೆಂಬ ನಿಲುವಿನ ನಾಯಕರು ನಮ್ಮ ನಡುವಿನ್ನೂ ಇದ್ದಾರೆಂಬುದು ಪರಮಾಶ್ಚರ್ಯ! ಇಂತಹ ಹಲವು ಘಟನೆಗಳು ನಡೆದಿವೆ. ಅನುಪಮಾ ಶೆಣೈ ಎಂಬ ದಕ್ಷ ಪೊಲೀಸ್ ಅಽಕಾರಿಗೆ ಮಂತ್ರಿ ಮಹಾಶಯರೊಬ್ಬರು ಸಡ್ಡು ಹೊಡೆದಿದ್ದರು. ಅಷ್ಟೇ ಏಕೆ, ಮೈಸೂರಿನ
ಹಿಂದೆ ರಶ್ಮಿ ಮಹೇಶ್, ಆಗ ಜಿಽಕಾರಿಗಳಾಗಿದ್ದ ಶಿಖಾ ಎಂಬ ನಿಷ್ಠುರವಾದಿ, ಶಿಸ್ತಿನ ಅಧಿಕಾರಿಗಳು ತಮ್ಮ ತಾಳಕ್ಕೆ ಕುಣಿಯಲಿಲ್ಲವೆಂದು ಅವಮಾನಿಸಿ ವರ್ಗಾ ವಣೆಯ ಉಡುಗೊರೆ ನೀಡಿದ್ದರು. ಅದೆಲ್ಲವೂ ರಾಜಕಾರಣಿಗಳು, ಅಧಿಕಾರಿಗಳ ನಡುವಿನ ಗುದ್ದಾಟವಾಗಿತ್ತು. ಮೈಸೂರು ಮಹಾಯುದ್ಧದಲ್ಲಿ ರಾಜಕಾರಣಿ ಗಳು ತೆರೆಮರೆಗೆ ಸರಿದು, ಅಧಿಕಾರಿಯನ್ನೇ ತಮ್ಮ ದಾಳವಾಗಿಸಿದ ಬೆಳವಣಿಗೆ ಆತಂಕಕಾರಿ. ಒಡೆದು ಆಳುವ ನೀತಿ ಐಎಎಸ್ ಶ್ರೇಣಿಯ ಅಽಕಾರಿಗಳ ಮೇಲೂ
ರಾಜಕಾರಣಿಗಳು ಪ್ರಯೋಗಿಸಲು ಸಫಲರಾದರೆ, ಪ್ರಜಾ ಪ್ರಭುತ್ವದ ಅಸ್ತಿತ್ವಕ್ಕೆ ಮಾರಕವೆನಿಸುತ್ತೆ.

ಮೈಸೂರು ಜಿಲ್ಲಾಧಿಕಾರಿಗಳ ನಡೆ ನೈತಿಕ, ಸಾಮಾಜಿಕ ಮಟ್ಟದಲ್ಲಿ ಸರಿಯಿಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದ ಇನ್ನೊಬ್ಬ ನಿಷ್ಠುರವಾದಿ ಐ.ಪಿ.ಎಸ್ ಅಧಿಕಾರಿ ರೂಪಾ, ಕೆಲಸ ಮಾಡುವವರಿಗೆ ಎದರೆನಂತೆ ಎಂದಿದ್ದಾರೆ. ಹೌದು, ಆದರೂ, ಎಲ್ಲ ಪ್ರಕರಣಗಳ ಕೊನೆ ವರ್ಗಾವಣೆಯೇ? ತದ ನಂತರ ಹಣ, ಅಧಿಕಾರ ದುರ್ಬ ಳಕೆಯ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಬಿಡುವುದೇಕೆಂಬುದು ನಿಗೂಢ! ಅಧಿಕಾರಿ ವರ್ಗದಲ್ಲಿ ಆರೋಪ, ಪ್ರತ್ಯಾರೋಪ ಬಂದಕೊಡಲೇ ಕಡ್ಡಾಯದ ರಜೆ, ವರ್ಗಾವಣೆಯ ಪರಿಹಾರ ಕಂಡುಕೊಳ್ಳುವ ಸರಕಾರಗಳು ತಮ್ಮದೇ ಸರಕಾರದ ಮಂತ್ರಿಗಳು ಸರಕಾರದ ಆಡಳಿತ ವೈಖರಿಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ದಾಗಲೂ, ತಾವೂ ನಿವೃತ್ತಿಯಾಗದೇ, ಆರೋಪಿಸಿದವರನ್ನೂ ಕಿತ್ತೆಸೆಯದೇ, ಮೌನ, ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು ಏಕೆಂಬುದು ಪ್ರಶ್ನೆಯಾ ಗಿಯೇ ಉಳಿಯುತ್ತದೆ.