Wednesday, 9th October 2024

ಮೊದಲ ಮಳೆ ಏನೋ ಹೇಳ್ತಿದೆ, ಕೇಳಿಸ್ಕೊಂಡ್ರಾ ?

ಸುಪ್ತ ಸಾಗರ

rkbhadti@gmail.com

ದೇಶದ ತುಂಬೆಲ್ಲ ಹೀಗೆ ಚಿತ್ತಾರ ಬಡಿಸಿ ಬದುಕಿಗೆ ಬಣ್ಣತುಂಬಿ, ಬುವಿಗೆ ಹಸಿರನ್ನಿಟ್ಟು ಹೋಗುವ ನಮ್ಮ ಮಾನ್ಸೂನ್ ನಮಗೆ ಮಾತ್ರವಲ್ಲ ವಿಶ್ವದ ಎಲ್ಲರ ಪಾಲಿಗೂ ಕುತೂಹಲದ ಕಣಜ. ಈ ಪರಿಯ ಕೌತಕವನ್ನು ಕಣ್ಣಾರೆ ಕಂಡು ಮನವ ತಣಿಸಿಕೊಳ್ಳಲು ಇಲ್ಲಿಗೆ ಪ್ರವಾಸ ಬಂದ ವರೆಷ್ಟೋ ಮಂದಿ. ಆ ಪೈಕಿ ಅತ್ಯಂತ ಗಮನ ಸೆಳೆಯುವ, ಮತ್ತೆ ಮತ್ತೆ ಓದಿಸುವ ಕೃತಿಯೊಂದರ ಹೂರಣ ಇಲ್ಲಿದೆ.

ರಸ್ತೆ ಬದಿಯ, ಉದ್ಯಾನವನಗಳ ಗುಲ್‌ಮೊಹರ್ ನ ಬಣ್ಣ ಮಾಸಿದೆ ಎನ್ನುವುದ ಕ್ಕಿಂತಲೂ ಅದು ಪ್ರತಿಫಲನಗೊಳ್ಳುತ್ತಿದ್ದ ಮಣ್ಣು ಮೆಲ್ಲಗೆ ತನ್ನ ಕೆಂಪನ್ನು ಕಳಕೊಳ್ಳು ತ್ತಿದೆ. ಆಗಸದ ಮುಖವೂ ಕಪ್ಪಿಡತೊಡಗಿದೆ. ಈವರೆಗೆ ಭೂ ಕನ್ಯೆಯ ನೆನೆಕೆ ಬಂದಾಗಲೆಲ್ಲ ಮುಖ ಕೆಂಪೇರಿಸಿ ಕೊಂಡು ನಿಲ್ಲುತ್ತಿದ್ದ ಮೇಘ, ಕೊನೆಗೂ ಹಿಂಜರಿಕೆಯ ಬಿಟ್ಟು ರೇಜಿಗೆಯಿಲ್ಲದೇ ಸುರಿಯಲು ಸಿದ್ಧಗೊಂಡಿದ್ದಾನೆ.

ಮುಗಿಲು ಅಳಲಾರಂಭಿಸುತ್ತಿದ್ದಂತೆ ದೂರದ ಬಯಲ ಕುಂಟಾಪಿಯನ್ನೋ, ಲಗೋರಿಯ ತೊಡಗಿಸಿಕೊಂಡಿದ್ದ ಚಿಣ್ಣರ ಗುಂಪು ಹೊಸ ತೊಂದು ಹರ್ಷದೊಂದಿಗೆ ಹುಯ್ಯೋ, ಹುಯ್ಯೋ ಮಳೆರಾಯ…’ಎಂದು ರಾಗಬದ್ಧವಾಗಿ ಹಾಡಿಕೊಳ್ಳಲು ಶುರುವಿಟ್ಟು ಕೊಂಡಿದ್ದು ಬೀಸುವ ತಂಗಾಳಿಯಲ್ಲಿ ತೇಲಿ ಬರುತ್ತಿದೆ. ಗುಡ್ಡದ ಗಂಡು ನವಿಲುಗಳು ‘ಕಿಯ್ಯಾಂವ್, ಕಿಯ್ಯಾಂವ್…’ ನಾದ ಹೊಮ್ಮಿಸುತ್ತ ಸಂಗಾತಿಯನ್ನು ಆಕರ್ಷಿಸಲು ಗರಿ ಹರಡಿ ಕುಣಿಯಲಾರಂಭಿಸಿವೆ. ಅಲ್ಲಿ ತಟಪಟ ಸದ್ದಿನೊಂದಿಗೆ ಬಿದ್ದ ನಾಲ್ಕಾರು ಹನಿಗಳು ಹುಡಿ ಮಣ್ಣಿನೊಂದಿಗೆ ಕೇಳಿಗಿಳಿದು ಬೆವತಿದ್ದನ್ನು ಸಾಬೀತುಪಡಿಸುತ್ತಿವೆ ಮಣ್ಣಿನ ವಿಚಿತ್ರ ಮೈಗಂಧ. ರೈತಾಪಿಗಳಿಗಿನ್ನೆಲ್ಲಿಯ ವ್ಯವಧಾನ.

ನೊಗ ಹೆಗಲೇರಿಸುವ ಮುನ್ನ, ರಂಟೆ ಹೊಡೆಯುವ ಮುನ್ನ ಹತ್ಯಾರಗಳನ್ನು ಸಜ್ಜುಗೊಳಿಸಿಕೊಳ್ಳುವ ಆತುರ. ಗಳಯಗಳನ್ನು ಹೂಟಿಗೆ ಹುರಿಗೊಳಿಸಲು ಪಣತದ ಮನೆಯಲ್ಲಿ ಬೇಯಿಸುತ್ತಿರುವ ಹಸಿ ಹುರುಳಿಕಾಳುಗಳು, ನಿಗಿನಿಗಿ ಕೆಂಡದ ಮೇಲಿನ ತಪ್ಪಲೆಯಲ್ಲಿ ಮರಳುವ
ನೀರಿನೊಂದಿಗೆ ಬೇಯುತ್ತಿರುವ ಘಮವೂ ಮಣ್ಣಿನ ವಾಸನೆಯೊಂದಿಗೇ ಬೆರೆತು ವಿಚಿತ್ರ ಉನ್ಮಾದವನ್ನು ತರುತ್ತಿದೆ. ಇಸಲು ಬಾರಿಸಿ ಜಾನುವಾರುಗಳ ಮೈ ತೊಯ್ದೀತು, ಜಗುಲಿ, ಅಂಗಳಗಳು ಕೊಚ್ಚಿ ಹೋದೀತೆಂಬ ಮುಂಜಾಗ್ರತೆಗೆ ನಿಂತ ಹಳ್ಳಿಯ ಯುವಕರು ಸೋಗೆ- ಸೊಪ್ಪುಗಳ ತಂದು ತಡಿಕೆ ಬಿಗಿದು ಆಷಾಡಕ್ಕೆ ಮುನ್ನ ಬಂದ ನವವಧುವಿನ ಜತೆಗೆ ಬೆಚ್ಚಗಿನ ಕನಸಿಗೆ ಜಾರಿದ್ದಾರೆ.

ಭಪ್ಪರೆ ಬಿಸಿಲಿಗೆ ಒಣಗಿ ಕಟಿಯಾದ ಹಪ್ಪಳ, ಸಂಡಿಗೆಗಳು ತನ್ನೊಡಲಲ್ಲಿ ಹುದುಗಿ ಕುಳಿತ ಜೀರಿಗೆ, ಮಣಸಿನ ಪರಿಮಳವನ್ನು ಗಮ್ಮನೆ ಬೀರುತ್ತಾ ನಾಲಗೆಯನ್ನು ಕೆಣಕುತ್ತಿವೆ. ಬಸಿರು ಹೊತ್ತ ಹೆಮ್ಮಕ್ಕಳು ಮಿಡಿಮಾವಿನ, ಅಪ್ಪೆ- ಕೊಸಗಾಯಿಗಳ ಹುಳಿ- ಖಾರ ನೆನೆದೇ ಬಾಯಲ್ಲಿ ಚಿಲ್ಲನೆ ನೀರು ಚಿಮ್ಮಿಸಿಕೊಳ್ಳುತ್ತಿದ್ದಾರೆ. ಹೌದು, ಪ್ರಕೃತಿಯ ಮ್ಯಾಜಿಕ್ ಎಂದರೇ ಮತ್ತದೇ ಮತ್ತೇರಿಸುವ ಮಾನ್ಸೂನ್! ಡಿಸೆಂಬರ್‌ನ ಚಳಿಯನ್ನು ತಣಿಸಲು ಬರುವ ಹಳೆ ಮಳೆ, ಜನವರಿಗೆ ಸುರಿಯುವ ಸಂಜೆ ಮಳೆ, ಫೆಬ್ರವರಿಯಲ್ಲಿ ಇಣುಕಿ ಬೇಸಿಗೆಯನ್ನು ಬರಮಾಡಿಕೊಳ್ಳುವ ಹುಸಿ ಮಳೆ, ಮಾರ್ಚ್ – ಏಪ್ರಿಲ್ ನಲ್ಲಿ ಕಳ್ಳಾಟವಾಡಿ ಹೋಗಿ ಧಗೆ ಏರಿಸುವ ಕದಿರು ಮಳೆ, ಮೇನಲ್ಲಿ ದರಗೆಲೆ ಗಳನ್ನೆಲ್ಲ ಹಾರಿಸಿಕೊಂಡು ಹೋಗಿ ಸುಂಟರಗಾಳಿ ಸೃಷ್ಟಿಸಿ ನೆಲವ ಗುಡಿಸುವ ಗಾಳಿಮಳೆಯ ಬಳಿಕ ಕಾಲಿಡುತ್ತದೆ ಮುಂಗಾರು ಮಳೆ.

ಅಶ್ವಿನಿಯಿಂದಾರಂಭಿಸಿ ರೋಹಿಣಿಯವರೆಗೆ ಸುರಿಯುವುದೆಲ್ಲ ಬೇಸಿಗೆಯ ಮಳೆಗಳೇ. ಮೃಗಶಿರಕ್ಕೆ ಮಳೆ ಹತ್ತಿಕೊಳ್ಳುವುದು. ಅಲ್ಲಿಂದಲೇ ಮಳೆಗಾಲದ ರೇಜಿಗೆ, ಕಿಚಪಿಚಗಳಿಗೆಲ್ಲ ನಮ್ಮ ಮುನ್ನುಡಿ ಬರೆಯಲಾರಂಭಿಸುವುದು. ಬಿಸಿಲು ಮಳೆಗಳನ್ನೆಲ್ಲ ದಾಟಿ ಸೋನೆ ಸುರಿಯುವ ಮುನ್ನ ಒನಕೆ ಮಳೆಗೆ ಆಷಾಡ ವೇದಿಕೆಯಾಗುತ್ತದೆ. ಬೆಳಗಿನ ಜಾವದ ಏರು ಚಂಡೆ ಮದ್ದಲೆಯೊಂದಿಗೆ ಯಕ್ಷಗಾನದ ತಾಲೀಮಿಗೆ ನಿಂತ ಪುಂಡು ಹುಡುಗನ ರೀತಿಯಲ್ಲಿ ಹುಚ್ಚೆದ್ದು ಸುರಿಯುತ್ತದೆ ನಮ್ಮಲ್ಲಿ ಆಗಸದ ಕಣ್ಣಿರು. ಅದೇ ವರುಷದ ವರ್ಷಾಘಾತ….

ದೇಶದ ತುಂಬೆಲ್ಲ ಹೀಗೆ ಚಿತ್ತಾರ ಬಡಿಸಿ ಬದುಕಿಗೆ ಬಣ್ಣತುಂಬಿ, ಬುವಿಗೆ ಹಸಿರನ್ನಿಟ್ಟು ಹೋಗುವ ನಮ್ಮ ಮಾನ್ಸೂನ್ ನಮಗೆ ಮಾತ್ರವಲ್ಲ ವಿಶ್ವದ ಎಲ್ಲರ ಪಾಲಿಗೂ ಕುತೂಹಲದ ಕಣಜ. ಈ ಪರಿಯ ಕೌತಕವನ್ನು ಕಣ್ಣಾರೆ ಕಂಡು ಮನವ ತಣಿಸಿಕೊಳ್ಳಲು ಇಲ್ಲಿಗೆ ಪ್ರವಾಸ ಬಂದವರೆಷ್ಟೋ ಮಂದಿ. ಇತಿಹಾಸ ಕಾಲದಿಂದಲೂ ವಿದೇಶಿ ಪ್ರವಾಸಿಗರನ್ನು ಹಿಡಿದಿಟ್ಟುಕೊಂಡ ಮಾನ್ಸೂನ್ ನಮ್ಮ ಪಾಲಿಗೆ ಮಾತ್ರ ಬಕ್ಕ ಬೇಜಾರಿನ ಸಂಗತಿಯಾಗೇ ಉಳಿದುಬಿಟ್ಟಿದೆ. ಹಿತ್ತಲಗಿಡ ಮದ್ದಲ್ಲ ಬಿಡಿ. ಹಾಗೆ ಪ್ರವಾಸ ಬಂದ ಅದೆಷ್ಟೋ ಮಂದಿ ಇಲ್ಲಿನ ಮಳೆ
ವೈಭವವನ್ನು ತಮ್ಮ ಹೊತ್ತಗೆಗಳಲ್ಲಿ ದಾಖಲಿಸಿದ್ದೂ ಉಂಟು. ಆ ಪರಂಪರೆಗೆ ಆಧುನಿಕ ಯುಗದಲ್ಲೂ ತುಂಡರಿಸಿಲ್ಲ.

ಅಲೆಗ್ಸಾಂಡರ್ ಫ್ರೇಟರ್ ಈ ಪರಂಪರೆಯ ಮತ್ತೊಂದು ಹೆಸರು. ‘ಚೇಸಿಂಗ್ ದಿ ಮಾನ್ಸೂನ್ (chasing the monsoon) ಭಾರತದ ಮುಂಗಾರನ್ನು ಹಿಡಿದಿಟ್ಟ ಆತನ ಗದ್ಯ ಕಾವ್ಯ. ಲಂಡನ್‌ನ ‘Observe’ ಪತ್ರಿಕೆಯಲ್ಲಿ ವೃತ್ತಿ. ಪ್ರವಾಸ ವೃತ್ತಿಯೂ ಹೌದು, ಪ್ರವೃತ್ತಿಯೂ ಹೌದು. ಸರಿಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ (1987) ಮಳೆಗಾಲವನ್ನು ಇಡೀಯಾಗಿ ಭಾರತದಲ್ಲಿ ಅನುಭವಿಸಿದ ಫ್ರೇಟರ್, ಇಲ್ಲಿನ ಪ್ರತಿಯೊಂದು ಸಂಗತಿಗಳನ್ನೂ ತನ್ನ ಮನಃಪಟಲದ ಕ್ಯಾಮೆರಾದಲ್ಲಿ ಅತ್ಯದ್ಭುತವಾಗಿ ಸೆರೆಹಿಡಿದು, ಹೊತ್ತಗೆಯ ವಿಶಾಲ
ಕ್ಯಾನ್ವಾಸ್‌ನ ಮೇಲೆ ಅಷ್ಟೇ ಸಮರ್ಥವಾಗಿ ಚಿತ್ರಿಸಿಟ್ಟಿದ್ದಾನೆ. ಹಾಗೆ ನೋಡಿದರೆ ಇದೊಂದು ‘ಆಧುನಿಕ ತೀರ್ಥಯಾತ್ರೆ’. ಹಾಗಂತ ಅವನೇ ಕರಕೊಂಡಿದ್ದಾನೆ.

ಮುಂಗಾರಿನ ಹೊಸ್ತಿಲ್ಲಿ ಪ್ರತಿ ಬಾರಿಯೂ ನನ್ನ ಕೈಗೆ ಅಚಾನಕ್ ಆಗಿ ಬರುವ ‘ಚೇಸಿಂಗ್ ದಿ ಮಾನ್ಸೂನ್’ ಎಂದಿನಂತೆಯೇ ಈ ಬಾರಿಯೂ ನನ್ನನ್ನು ಪರಿಪೂರ್ಣ ಖುಷಿಯಲ್ಲಿ ನೆನಸಿಬಿಟ್ಟಿದೆ. ಪುಸ್ತಕ ಕೈಗೆತ್ತಿಕೊಳ್ಳುವ ಪ್ರತಿಯೊಬ್ಬರೂ ಅನುಭೂತಿಯೂ ಇದೇ ಆಗಿರುವುದರಲ್ಲಿ
ಅನುಮಾನವೇ ಇಲ್ಲ. ಅದು ಕೃತಿಯ ಹೆಗ್ಗಳಿಕೆ. ಅತ್ಯಂತ ಸರಳ ಭಾಷೆಯಲ್ಲಿ ನಮ್ಮ ಮುಂಗಾರು ದಿನಗಳ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ವಿವರಿಸುತ್ತ ಹೋಗುತ್ತಾನೆ ಫ್ರೇಟರ್.

ದಿನವೂ ಬರೆದಿಟ್ಟ ದಿನಚರಿಯ ಪುಟಗಳಂತೆ ಭಾಸವಾಗುವ ಪುಸ್ತಕ ಅದನ್ನೂ ಮೀರಿದ ಮೌಲ್ಯವನ್ನು ಕಟ್ಟಿಕೊಡುತ್ತದೆ. ಪ್ರತಿ ವರ್ಷ ನಮ್ಮಲ್ಲಿ ಮುಂಗಾರು ಎಲ್ಲಿಂದ ಆರಂಭವಾಗುತ್ತದೆ, ಎಲ್ಲಿ ಹಾದು ಹೋಗುತ್ತದೆ. ಎಲ್ಲಿ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ವಿಷದ ವಾದೊಂದು ಅಧ್ಯಯನದೊಂದಿಗೆ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದ ಫ್ರೇಟರ್, ನಂತರ ತನ್ನ ಪ್ರವಾಸಿ ಮಾರ್ಗದರ್ಶಿಯನ್ನು ಅದಕ್ಕನು ಗುಣವಾಗಿಯೇ ರೂಪಿಸಿಕೊಳ್ಳುತ್ತಾನೆ.

ಮಗುವಿನ ಮುಗ್ಧತೆ, ಸಂಶೋಧಕನ ಆಸಕ್ತಿ, ಯುವ ಮನಸ್ಸಿನ ಕುತೂಹಲ, ವಯಸ್ಕನ ಪ್ರೌಢತೆ, ವೃದ್ಧನ ಪ್ರಾಜ್ಞತೆಗಳೊಂದಿಗೆ
ಭಾರತದುದ್ದಕ್ಕೂ ಪಯಣಿಸುವ ಫ್ರೇಟರ್ ಎಲ್ಲವನ್ನೂ ನಮ್ಮ ಹುಚ್ಚು ಮಳೆಯ ರೀತಿಯ ಹಸಿಹಸಿಯಾಗಿ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಸ್ವಭಾವತಃ ಹಾಸ್ಯ ಪ್ರವೃತ್ತಿಯ ಆತ ಬರಹಗಳಿಗೂ ಇದೇ ಲೇಪನವನ್ನು ಕೊಟ್ಟು ಮಾನ್ಸೂನ್ ಆರ್ದ್ರತೆ ಆರದಂತೆ ಎಚ್ಚರವಹಿಸಿದ್ದಾನೆ.
ಆ ವರ್ಷ ಮುಂಗಾರು ಆರಂಭಕ್ಕೆ (ಜೂನ್ 5) ಮುನ್ನ ಪ್ರವಾಸಕ್ಕಡಿಯಿಡುವ ಸತತ ಹತ್ತುದಿನ ಮಳೆಯ ಹನಿಗಳೊಂದಿಗೆ ಒಂದಾಗಿ ಹೋಗಿರುತ್ತಾನೆ. ಹಾದಿಯುದ್ದಕ್ಕೂ ಸಿಗುವ ವೈವಿಧ್ಯಮಯ ವ್ಯಕ್ತಿಗಳು, ಅವರ ಜೀವನ ಶೈಲಿ, ಇಲ್ಲಿನ ಜಾನಪದ, ನಂಬಿಕೆಗಳು, ಆಚರಣೆ, ಪಾರಂಪರಿಕ ವೇದ- ಕಾವ್ಯಗಳಲ್ಲಿನ ಮಳೆಯ ಉಲ್ಲೇ ಮತ್ತು ವರ್ಣನೆ, ಕೃಷಿ ಕಾಯಕ ಇತ್ಯಾದಿ ಇತ್ಯಾದಿಗಳನ್ನೆಲ್ಲ ವಿಮರ್ಶಾತ್ಮಕ ಕಣ್ಣಿನಲ್ಲಿ ವೀಕ್ಷಿಸುತ್ತಾನೆ.

ಹೀಗಾಗಿಯೇ ನಮಗೆ ಕಾಣದ್ದು, ಕಂಡೂ ಮಹತ್ವದ್ದೇನಿಸದ್ದು, ಮಹತ್ವ ಪಡೆದುಕೊಂಡದ್ದು, ಮಹತ್ವ ಕಳಕೊಂಡದ್ದು ಎಲ್ಲವೂ ವಿಚಕ್ಷಣಾ ಬರಹದ ತೆಕ್ಕೆಗೆ ಬೀಳುತ್ತ ಹೋಗುತ್ತವೆ. ಹೊತ್ತಗೆ ಆರಂಭವಾಗುವುದೇ ಮಳೆಯ ಮಾತಿನಿಂದ. ನಾನು ಹುಟ್ಟಿದ ಗಳಿಗೆಯ ಮೊದಲ ಶಬ್ದ ಕೇಳಿದ್ದೇ ಮಳೆ ಹನಿಗಳ ‘ತಟಪಟ’ ಎಂತಲೇ ಮಳೆಯೊಂದಿಗಿನ ತನ್ನ ಅವಿನಾಭಾವ ಸಂಬಂಧವನ್ನು ಘೋಷಿಸಿಕೊಳ್ಳುತ್ತಾನೆ.

ಆತ ಹುಟ್ಟಿದ್ದೇ ಪೆಸಿಫಿಕ್ ಸಾಗರದ ನಡುವಿನ ಒಂದು ಪುಟ್ಟ ನಡುಗಡ್ಡೆಯಲ್ಲಿ. ಹೀಗಾಗಿ ಅಲ್ಲಿನ ಅಲೆಗಳ ಭೋರ್ಗರೆತ, ಅವುಗಳನ್ನೂ ಸೋಲಿಸುವಂತೆ ಅಲೆಗಳ ಮೇಲೆರಗಿ ಜೀ… ಗುಡುವ ಧಾರಾಕಾರ ಮಳೆಹನಿಗಳು, ಸುಯ್ಯನೆ ಮಳೆಯೊಂದಿಗೆ ಸುಳಿದಾಡಿ ಸಂಗೀತ ಸೃಷ್ಟಿಸುವ ತಂಗಾಳಿ, ಬದುಕನ್ನೇ ಭೋರಲಾಗಿಸುವ ಪ್ರಚಂಡ ಮಾರುತ, ಸೂರಿನ ಅಲಗುಗಳಿಗೆ ತಾಗಿ ಕೆಳ ಬೀಳುವ ಮಳೆ ಹನಿಗಳು
ಸೃಷ್ಟಿಸುವ ಅಲರು, ತೊಟ್ಟಿಕ್ಕಿ ತೂಗುವ ಹನಿ, ತುಂತುರು ಸೇಚನದ ಮಾದಕತೆ ಎಲ್ಲವೂ ಇವನ ಬರಹಗಳಿಗೆ ವಸ್ತುವಾಗಿವೆ. ಮಳ ಹನಿಯೇ ತನಗೆ ಸರ್ವಜ್ಞಾನ ಸಂಪನ್ನತೆಯನ್ನೂ ಗಳಿಸಿಕೊಟ್ಟಿತು.

ಹೀಗಾಗಿ ಮಳೆ ಹನಿಗಳೇ ತನ್ನ ಗುರು. ಮಳೆಗೆ ಸಂಬಂಧಿಸಿದ ಪ್ರತಿಯೊಂದು ಪದವನ್ನೂ ಆ ಕಾರಣಕ್ಕಾಗಿಯೇ ಅತ್ಯಂತ ಜತನದಿಂದ ಮನದೊಳಕ್ಕೆ ಸುರುವಿಕೊಂಡಿದ್ದಾಗಿ ಹೇಳುವ ಫ್ರೇಟರ್ ಆ ಶಬ್ದ ಕಣಜಕ್ಕೆ ಭಾರತದ ಮಾನ್ಸೂನ್ ಅವಧಿಯಲ್ಲಿ ಇನ್ನಷ್ಟನ್ನು ಸೇರಿಸಿ ಕೊಂಡು ಶ್ರೀಮಂತನಾಗುತ್ತಾನೆ. ‘ಪಂಚ್’ ಮತ್ತು ‘ನೂಯಾರ್ಕ್’ ನಿಯತಕಾಲಿಕೆಗಳಿಗೆ ನಿರಂತರ ಬರೆಯುತ್ತಿದ್ದ ಫ್ರೇಟರ್ನ ಇನ್ನೊಂದು ಮಹತ್ವಪೂರ್ಣ ಕೃತಿ ‘ಬಿಯಾಂಡ್ ದಿ ಬ್ಲೂ ಹೊರೈಜನ್’ (Beyand the Blue Horizon).

ಇಂಗ್ಲೆಂಡ್‌ನಲ್ಲಿ ಇದು ಅತಿ ಹೆಚ್ಚು ಮಾರಾಟದ ದಾಖಲೆಯನ್ನು ಹೊಂದಿದೆ. ಬಿಬಿಸಿಯಲ್ಲಿ ಪ್ರವಾಸಕಥನದ ಕರ್ತೃವಾಗಿ ಇಂಡಿಯನ್ ಮಾನ್ಸೂನ್ ಬಗ್ಗೆ ಸಾಕ್ಷ್ಯ ಚಿತ್ರವನ್ನೂ ನಿರ್ಮಿಸಿ ಪ್ರಸಿದ್ಧನಾಗಿದ್ದಾನೆ. ಭಾರತೀಯ ನೆಲೆಯಲ್ಲಿ ಅಧ್ಯಯನ ಕೈಗೊಳ್ಳುವ ದೃಷ್ಟಿಯಿಂದಲೇ
ಸಂಸ್ಕೃತ ಅಧ್ಯಯನವನ್ನೂ ಕೈಗೊಂಡಿದ್ದು ಆತನ ಕಾರ್ಯಶ್ರದ್ಧೆಯ ದ್ಯೋತಕ. ಉಷ್ಣ ಮತ್ತು ಸಮಶೀತೋಷ್ಣವಲಯಗಳನ್ನು
ಬೇರ್ಪಡಿಸುವ ಮಕರ ಸಂಕ್ರಾಂತಿವೃತ್ತವು ಈ ದೇಶದ ಮಧ್ಯಭಾಗದಿಂದ ಹಾದುಹೋಗುತ್ತದಾದರೂ, ಬಹುತೇಕ ಭಾರತದ ವಾಯುಗುಣ ಉಷ್ಣವಲಯದ ಮಾನ್ಸೂನ್ ಹೊಂದಿದೆ ಎಂಬುದು ಈತನ ವೈಜ್ಞಾನಿಕ ದಾಖಲಾತಿ.

ಭಾರತದ ವಾರ್ಷಿಕ ವಾಯುಗುಣ ನಾಲ್ಕು ಋತುಗಳಾಗಿ ವಿಂಗಡಣೆಗೊಂಡಿದೆ. ಚಳಿಗಾಲ, ಬೇಸಿಗೆ, ನೈಋತ್ಯ ಮಾನ್ಸೂನ್ ಅಥವಾ ಮಳೆಗಾಲ ಹಾಗೂ ಈಶಾನ್ಯ ಮಾನ್ಸೂನ್ ಅಥವಾ ನಿರ್ಗಮನ ಮಾನ್ಸೂನ್ ಕಾಲ. ಈ ಎರಡೂ ಮಾನ್ಸೂನ್‌ಗಳೂ ಭಾರತದ ಎರಡು
ಭುಜಗಳಂತೆ ಎಂದು ವ್ಯಾಖ್ಯಾನಿಸುವ ಫ್ರೇಟರ್ನನ್ನು ಇವೆರಡರಲ್ಲಿ ಬಹುವಾಗಿ ಹಿಡಿದಿಟ್ಟದ್ದು ನೈಋತ್ಯ ಮಾನ್ಸೂನ್. ಕೋಪೆನ್ ಪದ್ಧತಿಯ ಪ್ರಕಾರ ಭಾರತದ ವಾಯುಗುಣವನ್ನು ಆರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು. ಉಷ್ಣವಲಯದ ತೇವಾಂಶಭರಿತ ವಾಯುಗುಣ, ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣ, ಉಷ್ಣವಲಯದ ಅರೆ ಶುಷ್ಕ ವಾಯುಗುಣ, ಮರುಭೂಮಿ ವಾಯುಗುಣ, ಉಪ ಉಷ್ಣವಲಯದ ಮಳೆಬೀಳುವ ವಾಯುಗುಣ ಹಾಗೂ ಆಲ್ಪೈನ್ (ಪರ್ವತ ಮಾದರಿ) ವಾಯುಗುಣ. ಬಹುತೇಕ ಉಷ್ಣವಲಯದ ಪ್ರದೇಶಗಳಂತೆ ಭಾರತದ ವಾಯುಗುಣವೂ ಕೂಡ ಅತ್ಯಂತ ಅಸ್ಥಿರವಾಗಿದ್ದು, ಆಗಾಗ್ಗೆ ಬರ, ಪ್ರವಾಹ, ಚಂಡಮಾರುತ ದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುತ್ತವೆ. ಈ ಎಲ್ಲವೂ ಆತನ ಕೃತಿಯಲ್ಲಿ ದಾಖಲಾಗಿದೆ.

ಮಾತ್ರವಲ್ಲ ಇಲ್ಲಿನ ಜಾನಪದೀಯ ಹಾಡುಗಳಿಂದ ಹಿಡಿದು ಮಹಾಕವಿ ಕಾಳೀದಾಸನ ‘ಋತುಸಂಹಾರ’ದವರೆಗೆ ಬಹುತೇಕ ಸಾಹಿತ್ಯ ಪ್ರಕಾರಗಳಲ್ಲಿನ ಮಳೆಯ ವೈಭವ ವರ್ಣನೆಯಲ್ಲಿ ಕೃತಿಯಲ್ಲಿ ಆತ ಉಲ್ಲೇಖಿಸುವುದು ವಿಶೇಷ. ಅವೆಲ್ಲವೂ ಭಾರತದಲ್ಲಿ ಇವತ್ತಿಗೂ
ಪ್ರಚಲಿತವೆಂಬುದು ಆತನ ಸಖೇದಾಶ್ಚರ್ಯಪೂರ್ವಕ ಗ್ರಹಿಕೆ. ಇನ್ನೂ ವಿಶೇಷವೆಂದರೆ ಖತು ಸಂಹಾರವೇ ಇಂಗ್ಲಿಷ್‌ಗೆ ಭಾಷಾಂತರ ಗೊಂಡು ಫ್ರೇಟರ್ನ ಹೆಸರಿನಲ್ಲಿ ಸಾತತ್ಯ ಪಡೆದಿದೆಯೇನೋ ಎಂಬಷ್ಟರಮಟ್ಟಿಗೆ ಇದರಲ್ಲಿ ಹೋಲಿಕೆಗಳಿವೆ.

ಹಾಗೆ ನೋಡಿದರೆ ಋತುಸಂಹಾರ ಒಮದು ರೀತಿಯಲ್ಲಿ ಕತೆಯಿಲ್ಲದ ಕಾವ್ಯ. ಹಾಗೇಯೇ ‘ಚೇಸಿಂಗ್ ದಿ ಮಾನ್ಸೂನ್’ ಸಹ ಕಥೆಯಿಲ್ಲದ ಕಾವ್ಯ. ಕಾಳಿದಾಸ ಬರೆದ ಕಾವ್ಯಗಳಲ್ಲಿ ಮೊದಲನೆಯದು ಅದಾದರೆ, ಫ್ರೇಟರ್ ಕೃತಿಗಳಲ್ಲೂ ಇದೇ ಮೊದಲು. ತು ಸಂಹಾರದಲ್ಲಿ ಒಂದೊಂದು ಋತುವಿಗೆ ಒಂದೊಂದು ಸರ್ಗದಂತೆ ಆರು ಸರ್ಗಗಳಿವೆ. ಒಟ್ಟು ಶ್ಲೋಕಗಳ ಸಂಖ್ಯೆ ೧೧೪. ಇಂದ್ರವಜ್ರ, ವಂಶಸ್ಥ, ವಸಂತತಿಲಕ, ಮಾಲಿನೀ ಮತ್ತು ಶಾರ್ದೂಲವಿಕ್ರೀಡಿತ-ಇವು ಅಲ್ಲಿ ಬಳಸಿರುವ ವೃತ್ತಗಳು.

ಹೆಚ್ಚಿನ ಕಾವ್ಯಾಲಂಕಾರಕ್ಕೆ ಒತ್ತು ನೀಡದ ಇಲ್ಲಿನ ಕಾವ್ಯಕಥನ, ಸರಳ ಪದ್ಯಗಳಾಗಿ ಗಮನ ಸೆಳೆಯುತ್ತವೆ. ಅಲ್ಲಿ ಶಾಸ್ತ್ರೀಯತೆಗಿಂತ ಹೆಚ್ಚು ಭಾವನೆಗೆ ಒತ್ತು ನೀಡಲಾಗಿದೆ. ಫ್ರೇಟರ್ನ ಕೃತಿಯೂ ಪಕ್ಕಾ ನೂರಕ್ಕೆ ನೂರು ಹಾಘೆಯೇ. ಅತ್ಯಂತ ಸರಳ ಭಾಷೆ, ಸುಲಭ ನಿರೂಪಣೆಯ ಮೂಲಕ ಲಯಬದ್ಧ ಕಾವ್ಯದ ಅನುಭವವನ್ನು ನೀಡುತ್ತದೆ. ಅಲ್ಲೂ-ಇಲ್ಲೂ ಮಳೆಯ ಋತುಗಳಲ್ಲಿನ ಚೆಲುವಿನ ಬಣ್ಣನೆ ಮಿತಿ ಮೀರುತ್ತದೆ. ಆಗಿನ ಭಾರತದ ನಾನಾ ಭಾಗಗಳ ಸೊಗಸುಗಳನ್ನು ರಸಿಕರಿಗೆ ನೀಡುತ್ತಾರೆ ಇಬ್ಬರೂ. ಋತುಸಂಹಾರ ಇಡೀ ಕಾವ್ಯದಲ್ಲಿ ಪ್ರಿಯ ಪ್ರೇಯಸಿಯರ ದೃಷ್ಟಿ ಇರುವುದಲ್ಲದೆ ಪ್ರತಿಪದ್ಯವೂ ಪ್ರಿಯ ಪ್ರೇಯಸಿಗೆ ಹೇಳಿದಂತೆ ರಚನೆಗೊಂಡಿದೆ.

ಫ್ರೇಟರ್ನ ಕೃತಿಯಲ್ಲಿ ಪ್ರಣಯ-ಪ್ರೀತಿಗಳ ನೇರ ಪ್ರಸ್ತಾಪಗಳಿಲ್ಲದಿದ್ದರೂ ಮಾನ್ಸೂನ್‌ನ ಸನ್ನಿವೇಶದ ಬಣ್ಣನೆ ಎಂಥ ಶುಷ್ಕ ಹೃದಯಿ ಗಳನ್ನೂ ಪ್ರಣಯಕ್ಕೆ ಪ್ರಚೋದಿಸುತ್ತವೆ. ಹೀಗಾಗಿ ಅವೆರಡರ ಹೋಲಿಕೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಮಾತ್ರವಲ್ಲ ತೀರಾ ಆತ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಕಮಲಾದಾಸ್‌ರ ಕವನಗಳಲ್ಲಿನ ಮಳೆಯ ಪ್ರಸ್ತಾಪಗಳ ಬಗ್ಗೆ ಮೆಚ್ಚುಗೆಯ ಮಾತುಗಳ ನ್ನಾಡಿ ನಾಲ್ಕಾರು ಪುಟಗಳ ವಿವರಣೆ ನೀಡುತ್ತಾನೆ ಫ್ರೇಟರ್.

ಆಕೆಯ ಸಂದರ್ಶನದ ಭಾಗವೂ ಕೃತಿಯಲ್ಲಿದೆ. ಮಳೆ ಮಾಹಿತಿಗಳ ಅಧಿಕೃತತೆಗಾಗಿ ಪಿ. ಕೆ.ದಾಸ್ ಸೇರಿದಂತೆ ಹಲವು ವಿಷಯ ತಜ್ಞರನ್ನು ಭೇಟಿ ಮಾಡಿದ್ದರ ಉಲ್ಲೇ ಕೃತಿಯಲ್ಲಿದೆ ಎಂದರೆ ಆತನ ಭದ್ಧತೆಯನ್ನು ಗ್ರಹಿಸಬಹುದು. ಮಾನಸೂನ್ ಬಗೆಗಿನ ಮಸ್ತ್ ಮಾಹಿತಿ, ರಂಜನೆ, ವಿಶಿಷ್ಟ ಶೈಲಿಗಳಿಂದಾಗಿ ಕೃತಿ ಆಪ್ಯಾಯಮಾನವಾಗುತ್ತಾ ಹೋಗುತ್ತದೆ. ಇಡೀ ಕೃತಿ ಮುಗಿಸಿ ಕಣ್ತೆರೆದಾಗ ಎದುರಿನ ಸಂಪಿಗೆ ಮರದ ಎಲೆಗಳ ಮೇಲೆ ಬಿದ್ದು ಕೊಂಕು ತೋರುತ್ತಾ ಹೊಳೆಯುತ್ತಿದ್ದ ಮಳೆ ಹನಿ ಎಂದಿಗಿಂತ ಇಂದು ಹೆಚ್ಚು ಆಪ್ಯಾಯಮಾನ ವಾಗಿ ಕಂಡಿತ್ತು. ಈ ವರ್ಷದ ಮಳೆಗಾಲ ಹಿಂದೆಂದಿಗಿಂತಲೂ ಭಿನ್ನವಾಗಿ ಕಂಡರೆ ಅದು ಫ್ರೇಟರ್ ಬರೆದ ಕಾವ್ಯದ ಫಲ.