Wednesday, 11th December 2024

ಭಾರತದ ಪ್ರಪ್ರಥಮ, ಮೊದಲ ಮಹಿಳೆ ಯಾರು ಗೊತ್ತಾ ?

ಇದೇ ಅಂತರಂಗ ಸುದ್ದಿ

vbhat@me.com

ಈ ಪ್ರಶ್ನೆಗೆ ಎಷ್ಟು ಮಂದಿ ಸರಿ ಉತ್ತರ ಹೇಳಬಹುದು ಗೊತ್ತಿಲ್ಲ. ಇದೇನು ಪ್ರಪ್ರಥಮ ಮತ್ತು ಮೊದಲ ಅಂದರೇನು ಎಂದು ಕೇಳಬಹುದು. ಈ ಪ್ರಪ್ರಥಮ ಮೊದಲ ಮಹಿಳೆ (First Lady ಅಥವಾ First Lady Citizen) ಹನ್ನೆರಡು ವರ್ಷಗಳ ಕಾಲ ರಾಷ್ಟ್ರಪತಿ ಭವನದಲ್ಲಿದ್ದರು. ಅಂದರೆ ಇವರು ಭಾರತದ ಪ್ರಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ ಅವರ ಧರ್ಮಪತ್ನಿ. ೧೯೫೦ ರಿಂದ ೧೯೬೨ ರವರೆಗೆ ರಾಜವಂಶಿ ದೇವಿ ರಾಷ್ಟ್ರಪತಿ ಭವನದಲ್ಲಿದ್ದರೂ ಸಾರ್ವಜನಿಕ ವಾಗಿ ಕಾಣಿಸಿಕೊಂಡಿದ್ದು ಅಪರೂಪ. ವಿದೇಶಿ ಗಣ್ಯರು ಬಂದಾಗಲೂ ಅವರು ಕಾಣಿಸಿಕೊಂಡವರಲ್ಲ. ಇವರ ಹೆಸರು ರಾಜವಂಶಿದೇವಿ.

ರಾಷ್ಟ್ರಪತಿ ಭವನದ ಹಳೆಯ ಫೋಟೋ ಸಂಗ್ರಹವನ್ನು ತಡಕಾಡಿದರೆ, ಹೆಚ್ಚೆಂದರೆ ರಾಜವಂಶಿದೇವಿಯವರ ಒಂದು ಡಜನ್ ಫೋಟೋ ಸಿಗಬಹುದು, ಅಷ್ಟೇ. ಅತಿ ಮಹತ್ವದ ಸಂದರ್ಭ, ಔತಣಕೂಟಗಳಿಗೂ ಅವರು ಬರುತ್ತಿರಲಿಲ್ಲ. ಅದರಲ್ಲೂ ರಾಷ್ಟ್ರಪತಿಯವರ ಜತೆ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲೇ ಇಲ್ಲ. ಡಾ.ಪ್ರಸಾದ ಮದುವೆಯಾದಾಗ ಅವರಿಗೆ ಹನ್ನೆರಡು ವರ್ಷ.

ವಿದೇಶಿ ಗಣ್ಯರ ಜತೆಗಿನ ಫೋಟೋಗಳಲ್ಲಿ ಡಾ.ಪ್ರಸಾದ ಅವರೊಬ್ಬರನ್ನೇ ಕಾಣಬಹುದು. ವಿದೇಶಿ ಗಣ್ಯರು ಸಪತ್ನಿಕರಾಗಿ ಬಂದಾಗಲೂ, ಡಾ.ಪ್ರಸಾದ ಔತಣ ಕೂಟಗಳಲ್ಲಿ ಒಬ್ಬರೇ ಇರುತ್ತಿದ್ದರು. ಡಾ.ಪ್ರಸಾದ ಮತ್ತು ರಾಜವಂಶಿ ದೇವಿ ಅಕ್ಕ – ಪಕ್ಕ ಕುಳಿತಿರುವ ಕೆಲವೇ ಕೆಲವು ಫೋಟೋಗಳಿವೆ. ಆದರೆ ಅವು ರಾಷ್ಟ್ರಪತಿ ಆಗುವುದಕ್ಕಿಂತ ಮೊದಲಿನವು. ಡಾ.ಪ್ರಸಾದ ರಾಷ್ಟ್ರಪತಿಯಾಗಿದ್ದಾಗ, ಎಲ್ಲಿಗೂ ಪತ್ನಿಯನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ೧೯೬೨ರಲ್ಲಿ ಅವರು ರಾಷ್ಟ್ರಪತಿ ಸ್ಥಾನದಿಂದ ನಿವೃತ್ತಿ ಘೋಷಿಸಿದ ನಂತರ, ಪಾಟ್ನಾಕ್ಕೆ ಹೋಗಿ, ಅಲ್ಲಿನ ಬಿಹಾರ ವಿದ್ಯಾಪೀಠ ಕ್ಯಾಂಪಸ್ಸಿನಲ್ಲಿ ನೆಲೆಸಿದರು. ಅದಾಗಿ ನಾಲ್ಕು ತಿಂಗಳಿಗೆ ಅವರ ಪತ್ನಿ ತೀರಿಹೋದರು. ಅದಾಗಿ ಐದು ತಿಂಗಳಿಗೆ ಅವರೂ ನಿಧನರಾದರು.

ಡಾ.ಪ್ರಸಾದ ರಾಷ್ಟ್ರಪತಿ ಹುದ್ದೆಯಲ್ಲಿದ್ದಾಗ, ಅವರ ಮಗನಿಗೆ ಮಗು ಹುಟ್ಟಿತು. ಅಂದರೆ, ಡಾ.ಪ್ರಸಾದ ಅಜ್ಜ ಆದರು. ಆಗ ಅವರಿಗೆ ಸಾಂಪ್ರದಾಯಿಕವಾಗಿ, ಪ್ರಮುಖ ದೇಶವೊಂದರ ರಾಷ್ಟ್ರಾಧ್ಯಕ್ಷರು ಟೆಲಿಗ್ರಾಮ್ ಮೂಲಕ ಶುಭಾಶಯ ಕಳಿಸಿದರು. ಈ ವಿಷಯ ರಾಜವಂಶಿದೇವಿಯವರಿಗೂ ಗೊತ್ತಾಯಿತು. ಅದಕ್ಕೆ ಅವರು, ‘ನೀವು ತಾತ ಆದ್ರೆ ಅವರಿಗೇಕೆ ಸಂತಸವಾಗ ಬೇಕು? ಅಷ್ಟಕ್ಕೇ ಯಾಕೆ ಟೆಲಿಗ್ರಾಮ್ ಕಳಿಸಬೇಕು?’ ಎಂದು ಕೇಳಿದ್ದರಂತೆ.

ಡಾ.ಎಸ್.ರಾಧಾಕೃಷ್ಣ ಅವರು ಎರಡನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸುವುದಕ್ಕಿಂತ ಆರು ವರ್ಷಗಳ ಮೊದಲೇ ಅವರ ಪತ್ನಿ ಶಿವಕಮು ನಿಧನರಾಗಿ ದ್ದರು. ಹೀಗಾಗಿ ೧೯೬೨ ರಿಂದ ೧೯೬೭ರವರೆಗೆ ‘ಮೊದಲ ಮಹಿಳೆ’ಯೇ ಇರಲಿಲ್ಲ. ಜಾಕಿರ್ ಹುಸೇನ್ ಅವರ ಪತ್ನಿ ಶಾಹ್ ಜಹಾನ್ ಬೇಗಂ, ವಿ.ವಿ.ಗಿರಿ ಅವರ ಪತ್ನಿ ಸರಸ್ವತಿಬಾಯಿ, ಹಂಗಾಮಿ ರಾಷ್ಟ್ರಪತಿ ಮೊಹಮ್ಮದ್ ಹಿದಾಯತುಹ್ ಅವರ ಪತ್ನಿ ಪುಷ್ಪಾ ಶಾಹ್, ಫಕ್ರುದ್ದೀನ್ ಅಲಿ ಅಹಮದ್ ಅವರ ಪತ್ನಿ ಬೇಗಂ ಅಬಿದಾ ಅಹಮದ್, ಮತ್ತೊಬ್ಬ ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ಪತ್ನಿ ಸಂಗಮ್ಮ ಜತ್ತಿ, ನೀಲಂ ಸಂಜೀವ ರೆಡ್ಡಿ ಅವರ ಪತ್ನಿ ನೀಲಂ ನಾಗರತ್ನಮ್ಮ ರೆಡ್ಡಿ, ಜೈಲ್ ಸಿಂಗ್ ಅವರ ಪತ್ನಿ ಪರ್ದನ್ ಕೌರ್, ಶಂಕರ ದಯಾಳ್ ಶರ್ಮ ಅವರ ಪತ್ನಿ ವಿಮಲಾ ಶರ್ಮ, ಪ್ರಣಬ್ ಮುಖರ್ಜಿ ಅವರ ಪತ್ನಿ ಸುವ್ರಾ ಮುಖರ್ಜಿ… ಇವರೆಲ್ಲ ಹೆಚ್ಚಾಗಿ ಕಾಣಿಸಿಕೊಂಡವರೇ ಅಲ್ಲ.

ತಮ್ಮ ಪತಿಯೊಂದಿಗೆ ರಾಷ್ಟ್ರಪತಿ ಭವನದಲ್ಲಿ ಇವರ ಫೋಟೋ ಸಿಗುವುದಿಲ್ಲ. ರಾಷ್ಟ್ರಪತಿಗಳ ಪತ್ನಿಯರ ಪೈಕಿ ಹೆಚ್ಚಾಗಿ ಕಾಣಿಸಿಕೊಂಡವರೆಂದರೆ ಕೆ.ಆರ್. ನಾರಾಯಣನ್ ಅವರ ಪತ್ನಿ ಉಷಾ ನಾರಾಯಣನ್. ಅವರು ಪ್ರಪ್ರಥಮ ವಿದೇಶಿ ಸಂಜಾತ ಮೊದಲ ಮಹಿಳೆ. (ಅವರು ಹುಟ್ಟಿದ್ದು ಅಂದಿನ ಬರ್ಮಾದಲ್ಲಿ. ಮದುವೆ
ಗಿಂತ ಮುಂಚಿನ ಹೆಸರು ಟಿಂಟ್ ಟಿಂಟ್) ಆರ್.ವೆಂಕಟರಾಮನ್ ಪತ್ನಿ ಜಾನಕಿ ವೆಂಕಟರಾಮನ್ ಆಗಾಗ ಪತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಪತಿಯ ವಿದೇಶ ಪ್ರವಾಸದಲ್ಲಿ ಜತೆಯಾಗುತ್ತಿದ್ದರು.

ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಅರ್ಥಾತ್ ಮೊದಲ ಪುರುಷ ದೇವಿಸಿಂಗ್ ಶೇಖಾವತ್, ಎಡೆ ಕಾಣಿಸಿಕೊಳ್ಳುತ್ತಿದ್ದರು. ದೇಶ – ವಿದೇಶ ಪ್ರವಾಸದ ಗಳಲ್ಲಿ ಪತ್ನಿಯೊಂದಿಗೆ ಹೋಗುತ್ತಿದ್ದರು. ಹಾಗೆ ನೋಡಿದರೆ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರೇ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅವರ ಪತ್ನಿ ಸವಿತಾ ಕೋವಿಂದ ಅವರಿಗೆ ಕಾಣಿಸಿಕೊಳ್ಳಬೇಕೆಂಬ ಆಸೆಯಿದ್ದರೂ ಅದು ನೆರವೇರಿರಲಿಕ್ಕಿಲ್ಲ!

ಪದ ಒಂದು, ಅರ್ಥ ಹಲವು ಇಂಗ್ಲಿಷ್ ವಿಚಿತ್ರ ಭಾಷೆ. ಸಾಮಾನ್ಯವಾಗಿ ಒಂದು ಪದಕ್ಕೆ ಒಂದೇ ಅರ್ಥವಿರಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಎರಡು
ಮೂರು ಅರ್ಥಗಳಿರುವುದುಂಟು. ಆಯಾ ಸನ್ನಿವೇಶದಲ್ಲಿ ಬಳಸಿ ದಂತೆ ಅದರ ಅರ್ಥ ಬದಲಾಗುತ್ತದೆ. ಉದಾಹರಣೆಗೆ, ಹಿಂದಿಯ ‘ಕಲ್’ ಎಂಬ ಪದ. ಅದರ ಅರ್ಥ ನಿನ್ನೆ ಮತ್ತು ನಾಳೆ. ನಾವು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಅದರ ಅರ್ಥ ತೆರೆದು ಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಒಂದು ಪದ ಐದರಿಂದ ಹತ್ತು ಬೇರೆ ಬೇರೆ ಅರ್ಥ ಅಥವಾ ಹೆಚ್ಚು – ಕಮ್ಮಿ ಸನಿಹದ ಅರ್ಥಗಳನ್ನು ಹೊಂದುವುದುಂಟು.

ಆದರೆ ಇಂಗ್ಲಿಷಿನ set ಎಂಬ ಪದ ನಿಜಕ್ಕೂ ವಿಚಿತ್ರ. ಆಕ್ಸ್ ಫರ್ಡ್ ಡಿಕ್ಷನರಿಯಲಿ ಈ ಪದಕ್ಕೆ ೪೩೦ ಅರ್ಥಗಳನ್ನು ನೀಡಲಾಗಿದೆ. ಅಂದರೆ ಈ ಪದದ ಅರ್ಥ ಅದರ ಬಳಕೆ ಮತ್ತು ಸಂದರ್ಭವನ್ನು ಅವಲಂಬಿಸಿದೆ. ಇದು ಒಂದು ಭಾಷೆಯ ಮಿತಿಯೂ ಹೌದು, ವೈಶಿಷ್ಟ್ಯವೂ ಹೌದು. ನಾನು ಇಲ್ಲಿಯ ತನಕ ಅದೇ (set) ಅತಿ ಹೆಚ್ಚು ಅರ್ಥಗಳಿರುವ ಏಕೈಕ ಪದ ಎಂದು ತಿಳಿದಿz. ಆದರೆ ಈ ಪದವನ್ನು ಮೀರಿಸುವ ಮತ್ತೊಂದು ಪದವಿದೆ. ಅದು run.ಇದಕ್ಕೆ 645 ಪ್ರತ್ಯೇಕ ಅರ್ಥಗಳಿವೆ. ಮೂರು ಅಕ್ಷರಗಳ ಈ ಪದ ಅರ್ಥಗಳನ್ನು ಹೊತ್ತು ಓಡು (run) ತ್ತಲೇ ಇದೆ. ಕನ್ನಡದಲ್ಲೂ ಒಂದು ಗಾದೆಯಿದೆ – ‘ಕನ್ನಡ ಭಾಷೆಗೆ ಹನ್ನೆರಡು ಅರ್ಥ.’

ನೆಹರು ಆಟೋಗ್ರಾಫ್ ಹಾಕಿದ್ದು…
ಇದನ್ನು ಎಲ್ಲೋ ಓದಿದ್ದೋ, ಕೇಳಿದ್ದೋ ನೆನಪು. ಭಾರತದ ಪ್ರಪ್ರಥಮ ಪ್ರಧಾನಿ ನೆಹರು ಅದೆಷ್ಟು ಕುಶಾಗ್ರಮತಿಗಳಾಗಿದ್ದರು ಎಂಬುದಕ್ಕೆ ಈ ಪ್ರಸಂಗ ಒಂದು ನಿದರ್ಶನ. ಒಮ್ಮೆ ಅವರು ಭಾಷಣ ಮುಗಿಸಿ ಬರುತ್ತಿzಗ ಯುವಕನೊಬ್ಬ ಓಡೋಡುತ್ತಾ ಬಂದು ಆಟೋಗ್ರಾಫ್ ಮೇಲೆ ಹಸ್ತಾಕ್ಷರ ಹಾಕುವಂತೆ ವಿನಂತಿಸಿ
ಕೊಂಡ. ಇಂಥ ಕೋರಿಕೆ ಬಂದಾಗ, ಸಮಯ, ಸಂದರ್ಭ ನೋಡಿ ಕೊಂಡು ನೆಹರು ಯಾರಿಗೂ ಇಲ್ಲ ಎನ್ನುತ್ತಿರಲಿಲ್ಲ. ಅವರು ಆಯುವಕನ ವಿನಂತಿ ಪೂರೈಸಿ ದರು. ಪಂಡಿತಜೀ, ಸಹಿ ಹಾಕಿದಿರಿ, ಆದರೆ ಡೇಟ್ ಹಾಕಲೇ ಇಲ್ಲವಲ್ಲ?’ ಎಂದ ಆ ಯುವಕ.

ನೆಹರು ತಕ್ಷಣ ಅವನ ಕೋರಿಕೆಯನ್ನು ನೆರವೇರಿಸಿದರು. ತನ್ನ ಆಟೋಗ್ರಾಫ್ ಪುಸ್ತಕ ನೋಡಿದ ಆ ಯುವಕ ತಟ್ಟನೆ, ‘ಪಂಡಿತಜೀ, ಇದೇನು ಹಿಂದಿಯಲ್ಲಿ ಸಹಿ ಹಾಕಿ, ಇಂಗ್ಲಿಷಿನಲ್ಲಿ ಡೇಟ್ ಬರೆದಿದ್ದೀರಲ್ಲ?’ ಎಂದು ಕೇಳಿದ. ಅದಕ್ಕೆ ನೆಹರು, ನೀನು ಹಸ್ತಾಕ್ಷರ ಹಾಕು ಎಂದೇ. ಹಸ್ತಾಕ್ಷರ ಹಿಂದಿ ಪದವಲ್ಲವೇ? ಹೀಗಾಗಿ ಹಿಂದಿ ಯಲ್ಲಿ ಸಹಿ ಹಾಕಿದೆ. ನಂತರ ಡೇಟ್ ಹಾಕಿ ಎಂದೇ. ಡೇಟ್ ಇಂಗ್ಲಿಷ್ ಪದವಲ್ಲವೇ? ಹೀಗಾಗಿ ಇಂಗ್ಲಿಷಿನಲ್ಲಿ ಡೇಟ್ ಬರೆದೆ. ನೀನು ಏನನ್ನು ಕೇಳಿದ್ದೀಯೋ ಅದನ್ನೇ ಮಾಡಿ, ನಿನ್ನ ಕೋರಿಕೆ ನೆರವೇರಿಸಿದ್ದೇನೆ’ ಎಂದರು ನೆಹರು. ಆ ಯುವಕನಿಗೆ ಅತೀವ್ರ ಖುಷಿ ಆಯಿತು.

ನಿರ್ಧಾರಕ್ಕೆ ಬೇಕಾದ ಸಮಯವೆಷ್ಟು?
ಜಗತ್ತಿನ ಅತಿ ಶ್ರೀ ಮಂತ ವ್ಯಕ್ತಿಗಳಲ್ಲಿ ಒಬ್ಬನಾಗಿರುವ ವಾರನ್ ಬಫೆಟ್ ಅವರ ಜೀವನಕತೆಯನ್ನು ಓದುತ್ತಿದ್ದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬಫೆಟ್ ತೆಗೆದುಕೊಳ್ಳುತ್ತಿದ್ದ ಅತಿ ದೀರ್ಘ ಸಮಯ ಅಂದರೆ ಅರ್ಧ ಗಂಟೆ. ಅಷ್ಟು ಸಮಯದಲ್ಲಿ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದರೆ ಬಫೆಟ್ ನಿರ್ಧಾರ ‘ಬೇಡ’ ಅಥವಾ ನಕಾರಾತ್ಮಕ ಎಂದೇ. ಇವಳನ್ನು ಮದುವೆ ಆಗಬೇಕಾ, ಬೇಡವಾ ಎಂದು ನಿರ್ಧರಿಸಲು ಇಪ್ಪತ್ತು ನಿಮಿಷ ತೆಗೆದುಕೊಂಡಿರಿ ಅಂತಾದರೆ ಅದು ಸುದೀರ್ಘ ಸಮಯವಂತೆ. ಆ ನಿರ್ಧಾರಕ್ಕೆ ಬರಲು ಎರಡು ನಿಮಿಷ ಸಾಕಂತೆ. ಬದುಕಿನಲ್ಲಿ ಈ ನಿರ್ಧಾರವನ್ನು ತೆಗೆದು ಕೊಳ್ಳಲು ಅಷ್ಟು ಕಡಿಮೆ ಸಮಯ ಸಾಕಾದರೆ, ಯಾವ ಬಣ್ಣದ ಕಾರನ್ನು ಖರೀದಿಸಬೇಕು ಎಂಬುದಕ್ಕೆ ಎರಡು ದಿನ, ಯಾವ ಕಾರು, ಮೊಬೈಲನ್ನು ಖರೀದಿಸಬೇಕೆಂದು ತೀರ್ಮಾನಿಸಲು ಒಂದು ವಾರ ಸಮಯ ತೆಗೆದುಕೊಳ್ಳಬೇಕಾ? ಹಾಗಂತ ಬಫೆಟ್ ಕೇಳುತ್ತಾನೆ.

ಅದೆಂಥ ಜಟಿಲ ಸಂಗತಿಯೇ ಇರಬಹುದು, ನಿರ್ಧಾರಕ್ಕೆ ಬರಲು ಐದು ನಿಮಿಷ ಸಾಕು, ಆದರೆ ನಾವು ಬೇಕೆಂದೇ ಅನಿರ್ದಿಷ್ಟ ಅವಧಿ ತೆಗೆದುಕೊಳ್ಳುತ್ತೇವೆ. ಕೆಲವು ಸಲ ವಿನಾಕಾರಣ ಮುಂದೂಡುತ್ತೇವೆ. ನಿರ್ಧಾರ ತೆಗೆದುಕೊಳ್ಳಲು ತೊಳಲಾಡುತ್ತೇವೆ. ಕೊನೆಗೂ, ಬೇಕು ಅಥವಾ ಬೇಡ ಎಂದು ನಿರ್ಧರಿಸಲು ಸಾಧ್ಯವಾಗದೇ ಸುಮ್ಮನಿದ್ದುಬಿಡುತ್ತೇವೆ. ಇಂಥ ಸ್ಥಿತಿಯಲ್ಲಿರು ವುದು ವೈಯಕ್ತಿಕ ಸೋಲು. ಇದು ಬಫೆಟ್‌ನ ಖಚಿತ ನಿಲುವು.

ಒಮ್ಮೆ ಬಫೆಟ್ ಗೆ ಒಂದು ಫ್ಯಾಕ್ಸ್ ಬಂತು ಫಾರೆಸ್ಟ್ ರಿವರ್ ಇನ್ ಕಾರ್ಪೊರೇಟೆಡ್ ಕಂಪನಿಯ ಸಲಹೆಗಾರನ ಫ್ಯಾಕ್ಸ್ ಸಂದೇಶವದು. ‘ಈ ಕಂಪನಿ ಮಾರಾಟ ಕ್ಕಿದೆ. ಎಂಟು ನೂರು ದಶಲಕ್ಷ ಡಾಲರಿಗೆ ಖರೀದಿಸಬಹುದು’ ಎಂದು ಸಲಹೆಗಾರ ತಿಳಿಸಿದ್ದ. ಜತೆಗೆ ಆ ಕಂಪನಿಯ ಕಿರು ಪರಿಚಯ ಬರೆದಿದ್ದ. ಆ ಹೆಸರಿನ ಕಂಪನಿಯೊಂದು ಇದೆ, ಅದು ಆ ಬಿಜಿನೆಸ್ ಮಾಡುತ್ತಿದೆ ಎಂಬುದು ಸಹ ಬಫೆಟ್‌ಗೆ ಗೊತ್ತಿರಲಿಲ್ಲ.

ಆದರೆ ಆ ಫ್ಯಾಕ್ಸ್ ಸಂದೇಶದಲ್ಲಿದ್ದ ಒಂದು ಸಂಗತಿ ಅವರಿಗೆ ಹಿಡಿಸಿತು. ಅದರಲ್ಲಿ ಒಂದೆಡೆ ‘ಕಂಪನಿಯು ದೊಡ್ಡ ಪ್ರಮಾಣದ ಮಾರುಕಟ್ಟೆ ಹೊಂದಿದೆ ಮತ್ತು ಸ್ವಲ್ಪ ಆರ್ಥಿಕ ಹೊರೆ ಹೊಂದಿದೆ.’ ಎಂದು ಬರೆದಿತ್ತು. ಈ ಎರಡು ಸಾಲುಗಳನ್ನು ಓದಿ ಮುಗಿಸುವುದರೊಳಗೆ ಆ ಕಂಪನಿಯನ್ನು ಖರೀದಿಸಲೇಬೇಕು ಎಂಬ ನಿರ್ಧಾರಕ್ಕೆ
ಬಫೆಟ್ ಬಂದಿದ್ದ. ಮರುದಿನವೇ ಫಾರೆಸ್ಟ್ ರಿವರ್ ಸ್ಥಾಪಕ, ಮಾಲೀಕ ಪೀಟರ್ ಕಚೇರಿಯಲ್ಲಿ ಕುಳಿತಿದ್ದ. ಬಫೆಟ್ ಒಂದು ಮೊತ್ತ ಸೂಚಿಸಿದ. ಆ ಮಾಲೀಕನ ಮುಖದಲ್ಲಿ ಸಮ್ಮತಿ ಕಾಣಲಿಲ್ಲ. ಬಫೆಟ್ ಎರಡನೇ ಮೊತ್ತ ಹೇಳಿದ. ಡೀಲ್ ಕುದುರಿತು. ಬಫೆಟ್ ತಕ್ಷಣ ಎದ್ದು ನಿಂತು ಪೀಟರ್ ಕೈಕುಲುಕಿ ಅಭಿನಂದಿಸಿದ. ಮುಂದಿನ ಕ್ರಮಗಳನ್ನು ನನ್ನ ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂದು ಅಲ್ಲಿಂದ ಎದ್ದು ಬಂದ. ಕೇವಲ ಇಪ್ಪತ್ತು ನಿಮಿಷಗಳಲ್ಲಿ ಮಾತುಕತೆ, ಡೀಲು ಮುಗಿದು ಹೋಯಿತು. ಬಫೆಟ್ ನ ಮಾತು, ನಡೆವಳಿಕೆ, ನಿರ್ಧಾರ ತೆಗೆದುಕೊಳ್ಳುವ ರೀತಿ, ಕಾರ್ಯವೈಖರಿ ಕಂಡು ಪೀಟರ್ ಮೂಕ ವಿಸ್ಮಿತನಾದ.

ಐದು ದಶಕಗಳ ಕಾಲ ಕಟ್ಟಿದ ಕಂಪನಿಯನ್ನು ಇಷ್ಟು ಸಲೀಸಾಗಿ ಮಾರಾಟ ಮಾಡಬಹುದು ಎಂದು ಅವನು ಕನಸು- ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಇಡೀ ವ್ಯವಹಾರದ ಬಗ್ಗೆ ಪೀಟರ್ ಹೇಳಿದ್ದು – ‘ಡ್ರೈವಿಂಗ್ ಲೈಸೆನ್ಸನ್ನು ನವೀಕರಿಸುವುದಕ್ಕಿಂತ ಸುಲಭವಾಗಿ ಕಂಪನಿಯನ್ನು ಮಾರಬಹುದು ಅಥವಾ
ಖರೀದಿಸಬಹುದು ಎಂಬುದು ನನಗೆ ಗೊತ್ತಿರಲಿಲ್ಲ.’

ಬರೆದಿದ್ದೇ ಬೇರೆ, ಅರ್ಥವೇ ಬೇರೆ

ಅಹಮದಾಬಾದಿನ ವಿ.ರಂಗನಾಥನ್ ಅವರು ಹೊಸ ವರ್ಷದ ಮುನ್ನಾ ದಿನ ವಡಸರ್‌ದಲ್ಲಿರುವ ಇಂಡಿಯನ್ ಏರ್ ಫೋರ್ಸ್ ಕ್ಯಾಂಪ್‌ಗೆ ಸ್ಕ್ವಾಡ್ರನ್ ಲೀಡರ್ ಆದ ತಮ್ಮ ಅಳಿಯನ ಜತೆಗೆ ಹೋಗಿದ್ದರಂತೆ. ಅಲ್ಲಿನ ಮುಖ್ಯ ದ್ವಾರದಲ್ಲಿ ನೇತು ಹಾಕಿದ್ದ ಒಂದು ಫಲಕವನ್ನು ನೋಡಿ ಒಂದು ಕ್ಷಣ ಆಶ್ಚರ್ಯಚಕಿತರಾಗಿ ನಿಂತರಂತೆ.
-ಲಕದಲ್ಲಿ ಬರೆದಿತ್ತು Trespassers will be shot. Survivors will be shot again. ಈ ಫಲಕ ನೋಡಿ ಫಕ್ಕನೆ ನಕ್ಕ ರಂಗನಾಥನ್, ಅಲ್ಲಿಯೇ ಇದ್ದ ಸೆಕ್ಯೂರಿಟಿ ಗಾರ್ಡ್‌ಗೆ ಈ ಫಲಕದಲ್ಲಿ ಬರೆದಿರುವ ಸಾಲಿನ ಅರ್ಥ ಕೇಳಿದರಂತೆ. ಅದಕ್ಕೆ ಆತ ಹೇಳಿದ್ದು – ‘ಅತಿಕ್ರಮಣ ಮಾಡಿ ಯಾರಾದರೂ ಒಳಗೆ ಬಂದರೆ ಅಥವಾ ಒಳ ನುಸುಳಿ ಬಂದರೆ ಅವರ ಮೇಲೆ ಗುಂಡು ಹಾರಿಸಲಾಗುವುದು. ಒಂದು ವೇಳೆ ಗುಂಡು ಹಾರಿಸಿದ್ದು ತಗುಲದಿದ್ದರೆ ಮತ್ತೊಮ್ಮೆ ಗುಂಡು ಹಾರಿಸ ಲಾಗುವುದು ಎಂದರ್ಥ.’ ರಂಗನಾಥನ್ ಮತ್ತೊಮ್ಮೆ ಇಂಗ್ಲಿಷಿನಲ್ಲಿ ಬರೆದಿದ್ದನ್ನು ಓದಿ, ಜೋರಾಗಿ ನಕ್ಕರಂತೆ.

ಈರುಳ್ಳಿ ಹೆಚ್ಚಲು ಸಲಹೆ
ಸಲಹೆಯನ್ನು ಸರಿಯಾಗಿ ನೀಡಬೇಕು. ಇಲ್ಲದಿದ್ದರೆ ಏನೋ ಯಡವಟ್ಟಾಗುತ್ತದೆ. ಒಮ್ಮೆ ಒಬ್ಬ ಈರುಳ್ಳಿಯನ್ನು ಹೆಚ್ಚುತ್ತಿದ್ದ (ಕತ್ತರಿಸುತ್ತಿದ್ದ)ನಂತೆ. ಕಣ್ಣಿನಿಂದ ದಳದಳ ನೀರು ಸುರಿಯುತ್ತಿತ್ತು. ಅದರಿಂದ ಆತನಿಗೆ ಈರುಳ್ಳಿ ಕತ್ತರಿಸಲು ಆಗಲಿಲ್ಲ. ತುಸು ಹೊತ್ತು ಬಿಟ್ಟು ಪುನಃ ಈರುಳ್ಳಿ ಕತ್ತರಿಸಲಾರಂಭಿಸಿದ. ಆಗ ಮತ್ತೆ
ಕಣ್ಣೀರಧಾರೆ. ಇದನ್ನು ಗಮನಿಸಿದ ಸ್ನೇಹಿತ, ಆತನಿಗೆ ಏನೋ ಸಲಹೆ ನೀಡಬೇಕೆಂದು ಅಂದುಕೊಂಡನಂತೆ. ‘ನನ್ನ ಕಷ್ಟ ನನಗೆ, ನಿನ್ನ ಮಾತು ಯಾರಿಗೆ ಬೇಕು?’ ಎಂದು ಜೋರಾಗಿ ಕಿರುಚಿದಾಗ, ಸಲಹೆ ನೀಡಲು ಹೋದ ಸ್ನೇಹಿತ ಸುಮ್ಮನಾದ. ಆನಂತರ ಈರುಳ್ಳಿ ಹೆಚ್ಚುತ್ತಿದ್ದವನಿಗೆ ವಾಟ್ಸಪ್‌ನಲ್ಲಿ ಸಲಹೆ ಕಳುಹಿಸಿದ-
‘ನೀರಲ್ಲಿ ಮುಳುಗಿ ಈರುಳ್ಳಿ ಹೆಚ್ಚಿದರೆ ಕಣ್ಣೀರು ಬರುವುಡಿದಿಲ್ಲ’ ತಕ್ಷಣ ಅತ್ತ ಕಡೆಯಿಂದ ಮೆಸೇಜ್ ಬಂತು-‘ನೀರಲ್ಲಿ ಮುಳುಗಿ ಹೆಚ್ಚಿದರೆ ಉಸಿರುಕಟ್ಟಿ ಹೋಗುವು ದಿಲ್ಲವೇ?’ ಆತ ಅಸಲಿಗೆ ಹೇಳಿದ್ದು, ಈರುಳ್ಳಿಯನ್ನು ನೀರಿನಲ್ಲಿ ಮುಳುಗಿಸ ಬೇಕೆಂದೇ ಹೊರತು, ನೀರಿನಲ್ಲಿ ಮುಳುಗಿ ಹೆಚ್ಚ ಬೇಕೆಂದಲ್ಲ!

ಡಿಕ್ಷನರಿ ಮತ್ತು ಡಾ.ಜಾನ್ಸನ್
‘ರೀಡರ್ಸ್ ಡೈಜೆಸ್ಟ್ ಆಸ್ಟ್ರೇಲಿಯಾ’ ಪತ್ರಿಕೆ ಮಾರ್ಚ್ ತಿಂಗಳಲ್ಲಿ Fascinating Facts About Dictionaries ಎಂಬ ಲೇಖನವನ್ನು ಪ್ರಕಟಿಸಿತ್ತು. ಆದರೆ ಆ ಲೇಖನದಲ್ಲೂ ‘ಇಂಗ್ಲಿಷ್ ಭಾಷೆಯ ಪದಕೋಶ ಬ್ರಹ್ಮ’ ಎಂಬ ಅಭಿಧಾನಕ್ಕೆ ಪಾತ್ರನಾಗಿರುವ ಡಾ.ಸಾಮ್ಯುಯಲ್ ಜಾನ್ಸನ್ ಬಗ್ಗೆ ಉಲ್ಲೇಖವೇ ಇರಲಿಲ್ಲ. ಇದನ್ನು ಗಮನಿಸಿದ ಓದುಗರೊಬ್ಬರು, ಜೂನ್ ಸಂಚಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಒಂಬತ್ತು ವರ್ಷಗಳ ಸತತ ಪರಿಶ್ರಮದಿಂದ ಡಾ.ಜಾನ್ಸನ್, ೧೭೫೫ರಲ್ಲಿ ಸಮಗ್ರ ಇಂಗ್ಲಿಷ್ ಭಾಷೆಯ ಪ್ರಪ್ರಥಮ ಪದಕೋಶ ವನ್ನು ಸಿದ್ಧಪಡಿಸಿದ. ಅದಾಗಿ ೧೭೩ ವರ್ಷಗಳ ನಂತರ ಆಕ್ಸ್ ಫರ್ಡ್ ಇಂಗ್ಲಿಷ್ ಪದಕೋಶ ಸಿದ್ಧವಾಯಿತು. ಅಲ್ಲಿಯವರೆಗೆ ಡಾ.ಜಾನ್ಸನ್ ಬರೆದ ಪದಕೋಶವೇ ಮೂಲ ವಾಗಿತ್ತು. ಆಕ್ಸ್ ಫರ್ಡ್ ಡಿಕ್ಷನ ರಿಗೂ, ಡಾ.ಜಾನ್ಸನ್ ಪದ ಕೋಶವೇ ಪ್ರೇರಣೆ. ಹೀಗಿರುವಾಗ ಡಿಕ್ಷನರಿಗಳ ಬಗ್ಗೆ ಬರೆದ ಲೇಖನದಲ್ಲಿ ಡಾ.ಜಾನ್ಸನ್ ಹೆಸರನ್ನೇ ಪ್ರಸ್ತಾಪಿಸದಿದ್ದರೆ ಹೇಗೆ ಎಂದು ಆ ಓದುಗರು ಪ್ರಶ್ನಿಸಿದ್ದರು. ಅವರ ವಾದ ಸಮಂಜಸವೇ ಆಗಿದೆ.

ಇತ್ತೀಚೆಗೆ ನಾನು ಒಂದು ಪಾಡಕಾಸ್ಟ್ ಕೇಳುತ್ತಿದ್ದೆ. ಅದರಲ್ಲಿ ಡಾ.ಜಾನ್ಸನ್ ಜೀವನ ಮತ್ತು ಆತ ರೂಪಿಸಿದ ಡಿಕ್ಷನರಿಯ ಬಗ್ಗೆ ರೋಚಕ ಕತೆಗಳನ್ನು ಕೇಳಿ, ಅವನ ಬಗ್ಗೆ ಮತ್ತಷ್ಟು ಅಧ್ಯಯನ ಮಾಡುವಂತಾಯಿತು. ಡಾ.ಜಾನ್ಸನ್‌ಗೆ ಪದಗಳ ವ್ಯಾಮೋಹ, ಅದೇ ಸರ್ವಸ್ವವಾಗಿತ್ತು. ಆದರೆ ಆತನಿಗೆ ವ್ಯವಹಾರ ಜ್ಞಾನವೇ
ಇರಲಿಲ್ಲ. ಪರಿಚಯವಾದರೆ ಸಾಕು ಹಣ ಕೇಳುತ್ತಿದ್ದ. ಆದರೆ ವಾಪಸ್ ಕೊಡುತ್ತಿರಲಿಲ್ಲ. ಸಾಲ ವಾಪಸ್ ಮಾಡಲಿಲ್ಲ ಎಂಬ ಕಾರಣಕ್ಕೆ ಎರಡು ಸಲ ಆತನನ್ನು ಅರೆಸ್ಟ್ ಮಾಡಿದ್ದರು. ಯಾರು ಬೇಕಾದರೂ ಅವನನ್ನು ಹಣಕಾಸಿನ ವಿಷಯದಲ್ಲಿ ಮೋಸ ಮಾಡಬಹುದಿತ್ತು. ಆತನಿಗೆ ಆಕ್ಸ್ ಫರ್ಡ್‌ನಲ್ಲಿ ಡಿಗ್ರಿಯನ್ನಾದರೂ
ಮುಗಿಸಬೇಕೆಂಬ ಆಸೆಯಿತ್ತು. ಆದರೆ ಟ್ಯೂಷನ್ ಫೀ ಕಟ್ಟಲು ಆಗದ್ದರಿಂದ ಅರ್ಧಕ್ಕೆ ಬಿಡಬೇಕಾಯಿತು. ಆದರೆ ೧೭೬೫ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜಾನ್ಸನ್‌ಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.

ಜಾನ್ಸನ್‌ಗೆ ಒಬ್ಬ ಆಪ್ತ ಸ್ನೇಹಿತನಿದ್ದ. ಆತನ ಹೆಸರು ಹ್ಯಾರಿ ಪಾರ್ಟರ್. ಆತನಿಗೆ ಜಾನ್ಸನ್ ಕಂಡರೆ ಪ್ರಾಣ. ಅವರಿಬ್ಬರೂ ಸದಾ ಒಟ್ಟಾಗಿ ಇರುತ್ತಿದ್ದರು. ಜಾನ್ಸನ್‌ಗೆ ಆತ ಆಗಾಗ ಹಣಕಾಸಿನ ನೆರವು ನೀಡುತ್ತಿದ್ದ. ಹೀಗಿರುವಾಗ ಒಂದು ದಿನ ಪಾರ್ಟರ್ ಹಠಾತ್ತನೆ ತೀರಿಕೊಂಡ. ಅದಾಗಿ ಕೆಲ ದಿನಗಳಲ್ಲಿ ಜಾನ್ಸನ್ ತನ್ನ ಪರಮಸ್ನೇಹಿತನ ಪತ್ನಿ ಎಲಿಜಬೆತ್ ಅನ್ನು ಮದುವೆಯಾದ. ನಲವತ್ತಾರು ವರ್ಷದ ಅವಳಿಗೆ ಮೂವರು ಮಕ್ಕಳಿದ್ದರು. ಆಗ ಜಾನ್ಸನ್‌ಗೆ ಇಪ್ಪತ್ತೈದು ವರ್ಷ. ಇದು ಎರಡೂ ಕುಟುಂಬಗಳಲ್ಲಿ ರಾದ್ಧಾಂತಕ್ಕೆ ಕಾರಣ ವಾಯಿತು. ಆದರೆ ಆ ಬಗ್ಗೆ ಡಾ.ಜಾನ್ಸನ್ ಹೆಚ್ಚು ತಲೆಕೆಡಿಸಿ ಕೊಳ್ಳಲಿಲ್ಲ. ಹಾಗೆ ನೋಡಿದರೆ ಆತ ಮದುವೆಯಾಗಿದ್ದು ತನ್ನ ಡಿಕ್ಷನರಿಯನ್ನು!