ರಮಾನಂದ ಶರ್ಮಾ
ವಾರಸುದಾರರು ಇಲ್ಲದ ಠೇವಣಿ ಬಗೆಗೆ ತಮ್ಮ ಅಂತರಿಕ ನಿಯಮಾವಳಿ ಪ್ರಕಾರ ಬ್ಯಾಂಕುಗಳು ಪ್ರತಿವರ್ಷ ಠೇವಣಿದಾರರಿಗೆ ಪತ್ರ ಮುಖೇನ ಸಂಪರ್ಕಸಿ ಖಾತೆಯನ್ನು ಅಪರೇಟ್ ಮಾಡುವಂತೆ ಕೋರುತ್ತಾರೆ ಮತ್ತು ತಮ್ಮ ಕಾರ್ಯಾಲಯಗಳ ಗಮನಕ್ಕೂ ತರುತ್ತವೆ. ಬ್ಯಾಂಕುಗಳ ಮುಖ್ಯಕಾರ್ಯಾಲಯಗಳು ಮಾಹಿತಿಯನ್ನು ಸಂಬಂಧಪಟ್ಟ ರಿಸರ್ವ ಬ್ಯಾಂಕ್‌ಗೆ ಸಲ್ಲಿಸುತ್ತವೆ.
ದೇಶದ ೧೨ ಸರಕಾರಿ ಬ್ಯಾಂಕುಗಳ ೮.೧೦ ಕೋಟಿ ಖಾತೆಗಳಲ್ಲಿ ಸುಮಾರು ೩೫ ಸಾವಿರ ಕೋಟಿ ಠೇವಣಿ ‘ಅನ್ ಕ್ಲೇಮ್ಡ್ ಡಿಪಾಸಿಟ್’ ಅಂದರೆ ವಾರಸುದಾರ ರಿಲ್ಲದ, ಹಕ್ಕುದಾರರಿಲ್ಲದೇ ಇದೆಯಂತೆ. ಐದು ದೊಡ್ಡ ಬ್ಯಾಂಕುಗಳಲ್ಲಿ ೭.೨೩ ಕೋಟಿ ಇಂಥ ಖಾತೆಗಳಿದ್ದು, ಅವುಗಳಲ್ಲಿ ಸುಮಾರು ೨೬೦೫೯ ಕೋಟಿ ರು. ಠೇವಣಿ ಇದೆ. ಈ ಬಗೆಗೆ ಸಂಸತ್ತಿನಲ್ಲಿ ಹಲವಾರು ಸಂಸದರು ಪ್ರಸ್ತಾಪ ಮಾಡಿದ್ದು ಸರಕಾರ ಮತ್ತು ಬಾಂಕುಗಳನ್ನು ತರಾಟೆಗೆ ತೆಗದು ಕೊಂಡಿದ್ದಾರೆ.
ಕೆಲವರು ಬ್ಯಾಂಕುಗಳೇ ಈ ಠೇವಣಿಯನ್ನು ಉಳಿಸಿಕೊಂಡಿದ್ದು, ನಿಜವಾದ ವಾರಸುದಾರಿಗೆ, ಹಕ್ಕುದಾರರಿಗೆ ಹಿಂತಿರುಗಿಸುವ ಪ್ರಯತ್ನ ಮಾಡುತ್ತಿಲ್ಲ ಎನ್ನುವ ಧಾಟಿಯಲ್ಲಿ ಬ್ಯಾಂಕುಗಳನ್ನು ತೀವ್ರ ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸತ್ಯಾಸತ್ಯತೆಗಳು ಏನೇ ಇರಲಿ, ಮೇಲುನೋಟಕ್ಕೆ ಬ್ಯಾಂಕುಗಳೇ ತಪ್ಪಿತಸ್ಥರಾಗಿ ಕಾಣುತ್ತಿದ್ದು, ಜನ ಸಾಮಾನ್ಯರ ಅಕ್ರೋಶವೂ ಬ್ಯಾಂಕುಗಳ ಮೇಲೆ ಇರುವುದರಿಂದ ಹಣಕಾಸು ಮಂತ್ರಾಲಯ ಈ
ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಹೀಗಾಗಿ ಮೊದಲ ಹೆಜ್ಜೆಯಾಗಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಜೂನ್ ೧ರಿಂದ ‘೧೦೦ ದಿನ, ೧೦೦ ಪಾವತಿ’ ಹೆಸರಿನಲ್ಲಿ ಅಭಿಯಾನ ಹಮ್ಮಿಕೊಂಡಿದ್ದು, ಇಂಥ ಠೇವಣಿಯ ವಾರಸುದಾರರು, ಹಕ್ಕುದಾರರ ಅಥವಾ ನಾಮಿನಿ ಗಳನ್ನು ಹುಡುಕಿ ಅವರ ಠೇವಣಿಯನ್ನು ಹಿಂತಿರುಗಿಸಲು ಸಜ್ಜಾಗಿದೆ. ಇದು ೨೦೧೪-೧೫ರಲ್ಲಿ ೭೮೭೫ ಕೋಟಿ ಇದ್ದದ್ದು, ೨೦೨೧-೨೨ರಲ್ಲಿ ೪೮೨೬೩ ಕೋಟಿಗೆ ಏರಿ ೨೦೨೨- ೨೩ಯಲ್ಲಿ ೩೫ ಸಾವಿರ ಕೋಟಿಗೆ ಇಳಿದಿದೆ. ಇಂಥ ಠೇವಣಿಯ ಮೊತ್ತ ಸ್ವಲ್ಪ ಕಡಿಮೆಯಾದರೂ, ನಿರೀಕ್ಷೆಯಷ್ಟು ಇಳಿದಿಲ್ಲ ಎನ್ನುವ ಅಭಿಪ್ರಾಯ ಇದೆ.
ಇಂಥ ಠೇವಣಿ ಬಗೆಗೆ ಸಾಕಷ್ಟು ಚರ್ಚೆಗಳು ಆಗುತ್ತವೆ. ಆದರೆ, ಇದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವಾಗುತ್ತಿಲ್ಲ. ವಿಪರ್ಯಾಸವೆಂದರೆ ಇಂತಹ ಹಕ್ಕುದಾರರು ಮತ್ತು ವಾರಸುದಾರರು ಬ್ಯಾಂಕುಗಳನ್ನು ಪ್ರಶ್ನಿಸಿದಂತೆ ಕಾಣುವುದಿಲ್ಲ. ಮೊದಲು ಸಂಬಂಧಪಟ್ಟ
ಬ್ಯಾಂಕುಗಳನ್ನು ವಿಚಾರಿಸಿ, ಪರಿಹಾರ ದೊರಕದಿದ್ದಾಗ ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಈ ಅಕ್ರೋಶಕ್ಕೆ ತೂಕ ಕಾಣುತ್ತಿತ್ತೇನೋ?
ನಿಯಮಾವಳಿ ಪ್ರಕಾರ ಬ್ಯಾಂಕುಗಳು ಯಾವುದೇ ಖಾತೆಯನ್ನೂ ಖಾತೇದಾರನ ಗಮನಕ್ಕೆ ತಾರದೇ, ಒಪ್ಪಿಗೆ ಪಡೆಯದೇ ಖಾತೆಗಳನ್ನು ಮುಚ್ಚು
ವಂತಿಲ್ಲ. ಅಂತೆಯೇ ಖಾತೆಗಳು ನಿಷ್ಕ್ರಿಯವಾದರೂ, ಬ್ಯಾಂಕುಗಳಲ್ಲಿ ಹಾಗೆಯೇ ಇರುತ್ತವೆ.
ಬ್ಯಾಂಕುಗಳಲ್ಲಿ ಇಂಥ ಠೇವಣಿಯಲ್ಲಿ ಸ್ವಲ್ಪ ಮಟ್ಟಿಗೆ ಸರಕಾರದ ಪಾತ್ರವೂ ಇದೆ ಎನ್ನುವ ಸತ್ಯ ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಳ್ಳುವವರಿಗೆ
ತಿಳಿದಿರುವುದಿಲ್ಲ. ಸರಾರ ಯಾವುದೇ ಸಹಾಯ ಧನ ನೀಡಿದರೂ, ಅದು ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಲು ಮಾನ್ಯವಾಗಿ ಬ್ಯಾಂಕ್ ಖಾತೆಗಳ ಮೂಲಕವೇ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ಈ ಕಾರಣಕ್ಕೇ ಖಾತೆಗಳು ತೆರೆಯಲ್ಪಡುತ್ತದೆ. ಸಹಾಯಧನ ಖಾತೆಗೆ ಜಮಾ ಅಗುತ್ತಿರು ವಂತೆ ಬಹುತೇಕ ಫಲಾನುಭವಿಗಳು ಕಡ್ಡಾಯ ಕನಿಷ್ಠ ಬ್ಯಾಲೆನ್ಸ್ ಇಟ್ಟು, ಪೂರ್ಣ ಹಣವನ್ನು ಬಳಸಿಕೊಳ್ಳುತ್ತಾರೆ. ನಂತರ ಈ ಖಾತೆಗಳನ್ನು ಬಳಸದೇ ಅವು ನಿಷ್ಕ್ರಿಯವಾಗುತ್ತವೆ.
ಇನ್ನು ಕೆಲವುವೇಳೆ, ಎಷ್ಟೋ ಗ್ರಾಹಕರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಥವಾ ಇನ್ನೊಂದು ಊರಿಗೆ ವರ್ಗಾವರ್ಗಿ ಅಥವಾ ಬೇರೆ
ಕಾರಣಗಳಿಗೆ ಹೋಗುವಾಗ ತಮ್ಮ ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಾಡದೇ ಅಥವಾ ವರ್ಗಾಯಿಸದೇ ಕನಿಷ್ಠ ಬ್ಯಾಲೆನ್ಸ ಇಟ್ಟು ಹೋಗುತ್ತಿದ್ದಾರೆ. ಕಾಲಕ್ರಮೇಣ ಅವುಗಳಲ್ಲಿ ಅಪರೇಷನ್ ಇಲ್ಲದೇ ಅವು ನಿಷ್ಕ್ರಿಯ ವಾಗುತ್ತವೆ. ಕಾಲಘಟ್ಟದಲ್ಲಿ ಜನ ಅವುಗಳನ್ನು ಮರೆಯುತ್ತಾರೆ. ಕೆಲವರು ಹಲವು ಬ್ಯಾಂಕುಗಳಲ್ಲಿ, ಹಲವು ಖಾತೆಗಳನ್ನು ಬೇರೆ-ಬೇರೆ ಉದ್ದೇಶಕ್ಕೆ ತೆರೆಯುತ್ತಾರೆ ಮತ್ತು ಉದ್ದೇಶ ಫಲಿಸಿದ ಮೇಲೆ ಆ ಖಾತೆಯನ್ನು ಮರೆಯುತ್ತಾರೆ. ಆ ಖಾತೆಗಳಲ್ಲಿ ಸಾಮಾನ್ಯವಾಗಿ ಕಾಟಾಚಾರದ ಅಥವಾ ಕನಿಷ್ಠ ಬ್ಯಾಲೆನ್ಸ್ ಮಾತ್ರ ಇರುತ್ತದೆ.
ಕೆಲವು ಪ್ರಸಂಗಗಳಲ್ಲಿ ಖಾತೆದಾರರು ನಿಧನ ಹೊಂದಿದಾಗ ಅವರ ಬ್ಯಾಂಕ್ ಖಾತೆಗಳ ಬಗೆಗೆ ಯಾರಿಗೂ ಮಾಹಿತಿ ಇರುವುದಿಲ್ಲ. ಕೆಲವು ಪ್ರಸಂಗಗಳಲ್ಲಿ ನ್ಯಾಯಾಲಯದ ಅದೇಶದ ಮೇರೆಗೆ ಅಪರೇಷನ್ ನಿಂತಿರುತ್ತದೆ. ಖಾತೆಯಲ್ಲಿನ ಬ್ಯಾಲೆನ್ಸ್ ಯಾರಿಗೆ ಸೇರಿದ್ದು ಎನ್ನುವುದರ ಬಗೆಗೆ ವಿವಾದ ಇದ್ದು, ಅದು ಬಗೆಹರಿಯುವ ತನಕ ಖಾತೆ ನಿಷ್ಕ್ರಿಯವಾಗಿರುತ್ತದೆ. ಜಂಟಿ ಖಾತೆಗಳಲ್ಲಿ ಒಮ್ಮೊಮ್ಮೆ ಜಟಾಪಟಿ ಇರುತ್ತಿದ್ದು, ಅಪರೇಷನ್ ತೊಡಕಾಗಿ, ಅದು ನಿರ್ಧಾರವಾಗುವ ತನಕ ಅದನ್ನು ನಿಷ್ಕ್ರಿಯ ಮಾಡುತ್ತಾರೆ. ಕೆಲವರು ಸುಮ್ಮನೇ ತಮ್ಮ ಬ್ಯಾಂಕ್ ಖಾತೆ ಇರುವುದನ್ನು ಮರೆತು ಬಿಡುವುದೂ ಉಂಟು.
ಇನ್ನೂ ಕೆಲವು ಬಾರಿ ಖಾತೆದಾರರು, ಠೇವಣಿಧಾರರು ಬಹುಕಾಲ ವಿದೇಶಕ್ಕೆ ಹೋಗುತ್ತಿದ್ದು, ಖಾತೆಯನ್ನುಅಪರೇಟ್ ಮಾಡಲಾಗದೇ, ಅದು ನಿಷ್ಕ್ರಿಯ ವಾಗುತ್ತದೆ. ಇಂಥವೆಲ್ಲ ಖಾತೆಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಬಹುತೇಕ ಖಾತೆಗಳಲ್ಲಿ ಕನಿಷ್ಠ ಅಥವಾ ಕಾಟಾಚಾರದ ಬ್ಯಾಲೆನ್ಸ್ ಇರುತ್ತದೆ.
ದೊಡ್ಡ ಮಟ್ಟದ ಮೊತ್ತ ಅಪರೂಪ ಎನ್ನಲಾಗುತ್ತದೆ. ದೊಡ್ಡ ಬ್ಯಾಲೆನ್ಸ ಇದ್ದರೆ, ಬಹುಶಃ ಯಾರೂ ತಮ್ಮ ಠೇವಣಿ ಬಗೆಗೆ ಲಕ್ಷಕೊಡದೇ ಇರುವುದಿಲ್ಲ
ಎನ್ನುವುದು ಅನುಭವಿ ಬ್ಯಾಂಕರುಗಳ ಆಭಿಮತ.
ವಾರಸುದಾರರಿಲ್ಲದ ಒಟ್ಟೂ ಖಾತೆಗಳು ಮತ್ತು ಅವುಗಳಲ್ಲಿರುವ ಒಟ್ಟೂ ಮೊತ್ತವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಸತ್ಯದ ಅರಿವು ಅಗುತ್ತದೆ.
ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ೧೦ ವರ್ಷಗಳ ಕಾಲ ನಿರ್ವಹಿಸದಿದ್ದರೆ, ರೆಕರಿಂಗ್ ಮತ್ತು ಫಿಕ್ಸಡ್ ಡಿಪಾಸಿಟ್‌ಗಳು ಪಕ್ವವಾಗಿ ೧೦ ವರ್ಷ ಗಳವರೆಗೂ ಠೇವಣಿದಾರರು ಹಿಂತಿರುಗಿ ಪಡೆಯಲು ಮುಂದೆ ಬರದಿದ್ದರೆ ಬ್ಯಾಂಕುಗಳು ಇವುಗಳನ್ನು ‘ಅನ್‌ಕ್ಲೈಮ್ಡ್ ಡಿಪಾಸಿಟ್’ ಎಂದು ಪರಿಗಣಿಸುತ್ತವೆ. ಒಮ್ಮೆ ಹೀಗೆ ಹೆಸರಿಸಿದ ತಕ್ಷಣ ಆ ಖಾತೆಯಲ್ಲಿ ಅಪರೇಷನ್ ನಿಲ್ಲುತ್ತದೆ. ಯಾವುದೇ ಅಪರೇಷನ್ ಇದ್ದರೂ ಅದು ಮೇಲಧಿಕಾರಿಗಳ ಒಪ್ಪಿಗೆಯ ನಂತರವೇ ಅಗಬೇಕು ಮತ್ತು ಈ ಖಾತೆಗಳಿಗೆ ನೀಡಿದ ಏಟಿಎಮ್ ಮತ್ತು ಡೆಬಿಟ್ ಕಾರ್ಡ್‌ಗಳು ಅಮಾನತಿನಲ್ಲಿ ಇರುತ್ತವೆ. ಈ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ನಿಯಮಾವಳಿಯೂ ಅನ್ವಯವಾಗುವುದಿಲ್ಲ.
ವಾರಸುದಾರರು ಇಲ್ಲದ ಠೇವಣಿ ಬಗೆಗೆ ತಮ್ಮ ಅಂತರಿಕ ನಿಯಮಾವಳಿ ಪ್ರಕಾರ ಬ್ಯಾಂಕುಗಳು ಪ್ರತಿವರ್ಷ ಇಂಥ ಠೇವಣಿದಾರರಿಗೆ ಪತ್ರ ಮುಖೇನ ಸಂಪರ್ಕಸಿ ಖಾತೆಯನ್ನು ಅಪರೇಟ್ ಮಾಡುವಂತೆ ಕೋರುತ್ತಾರೆ ಮತ್ತು ತಮ್ಮ ಮುಖ್ಯ ಕಾರ್ಯಾಲಯಗಳ ಗಮನಕ್ಕೂ ತರುತ್ತವೆ. ಬ್ಯಾಂಕುಗಳ ಮುಖ್ಯಕಾರ್ಯಾಲಯಗಳು ಈ ನಿಟ್ಟಿನಲ್ಲಿ ಮಾಹಿತಿಯನ್ನು ಸಂಬಂಧಪಟ್ಟ ರಿಸರ್ವ ಬ್ಯಾಂಕ್‌ಗೆ ಸಲ್ಲಿಸುತ್ತವೆ. ದುರ್ದೈವದಿಂದ ಠೇವಣಿದಾರರ ವಿಳಾಸ ಬದಲಾವಣೆ, ಅಪೂರ್ಣ ವಿಳಾಸದಿಂದಾಗಿ ಇವುಗಳ ಉದ್ದೇಶ ಈಡೇರುತ್ತಿಲ್ಲ ಮತ್ತು ಇಂಥ ಪತ್ರಗಳಿಗೆ ಸಂಬಂಧಪಟ್ಟವರು ಸ್ಪಂದಿಸದಿರುವ ಪ್ರಮೇಯಗಳೇ ಹೆಚ್ಚು ಎಂದು ಬ್ಯಾಂಕರುಗಳು ಹೇಳುತ್ತಾರೆ.
ಒಮ್ಮೆ ಒಂದು ಖಾತೆಯನ್ನು ಅನ್‌ಕ್ಲೇಮ್ಡ್ ಎಂದು ವರ್ಗಾಯಿಸಿದ ಮೇಲೆ, ಪುನಃ ಅದನ್ನು ಯಾವುದೇ ಶುಲ್ಕ ಇಲ್ಲದೇ ಸಕ್ರಿಯಗೊಳಿಸಬಹುದು. ಇದಕ್ಕೆ ಯಾವುದೇ ಕಾನೂನಿನ ನಿರ್ಬಂಧ ಅಥವಾ ಸಮಯ ಪರಿಮಿತಿಯ ಕಟ್ಟಳೆ ಇರುವುದಿಲ್ಲ. ಇದಕ್ಕೆ ಖಾತೆದಾರ ಕೆವೈಸಿ ನಾರ್ಮ್ಸ್ ಪ್ರಕಾರ ಬ್ಯಾಂಕಿನವರು ಕೇಳುವ ಕೆಲವು ದಾಖಲೆ ಗಳನ್ನು ನೀಡಬೇಕಾಗುತ್ತದೆ ಮತ್ತು ಈವರೆಗೆ ಖಾತೆಯನ್ನು ಅಪರೇಟ್ ಮಾಡದಿರುವ ಬಗೆಗೆ ಬ್ಯಾಂಕಿನವರಿಗೆ ಮನದಟ್ಟು ಮಾಡಿಕೊಡಬೇಕಾಗುತ್ತದೆ.
ಸಕ್ರಿಯ ಮಾಡುವ ಪ್ರಕ್ರಿಯೆ ನಡೆದ ತಕ್ಷಣ, ಖಾತೆಯನ್ನು ಚಾಲೂ ಸ್ಥಿತಿಗೆ ತರಲಾಗುತ್ತದೆ. ಖಾತೆದಾರನು ನೀಡುವ ದಾಖಲೆಗಳು ಮತ್ತು ಅವನು ಕೊಡುವ ಕಾರಣಗಳು ಸಮರ್ಪಕವಾಗಿದ್ದರೆ ಮಾತ್ರ ಬ್ಯಾಂಕುಗಳು ಅಂಥ ಖಾತೆಯನ್ನು ಸಕ್ರಿಯಗೊಳಿಸುತ್ತವೆ. ಖಾತೆಗಳನ್ನು ಸಕ್ರಿಯಗೊಳಿಸಿದ ನಂತರವೇ ಸಂಬಂಧಪಟ್ಟ ಖಾತೆದಾರರು ತಮ್ಮ ಠೇವಣಿಯನ್ನು ಮರಳಿ ಪಡೆಯಬಹುದು. ಈ ಖಾತೆಗಳು ವಂಚನೆಗೆ ಸುಲಭವಾಗಿ ತುತ್ತಾಗುವ ಸಾದ್ಯತೆ ಇರುವು ದರಿಂದ ಈ ಖಾತೆಗಳನ್ನು ಸಕ್ರಿಯ ಮಾಡುವ, ಅಥವಾ ಮುಚ್ಚುವ ಮಾಡುವ ಪ್ರಕ್ರಿಯೆಯನ್ನು ಬ್ಯಾಂಕುಗಳು ಭಾರೀ ಎಚ್ಚರದಿಂದ ಮಾಡುತ್ತವೆ. ಇಂಥ ಖಾತೆಗಳಲ್ಲಿನ ಬ್ಯಾಲೆನ್ಸ್ ದುರುಪಯೋಗವಾಗಬಾರದು ಎನ್ನುವುದು ಬ್ಯಾಂಕುಗಳ ಉದ್ದೇಶ. ಯಾವುದೇ ಕಾರಣಕ್ಕೂ ಬ್ಯಾಂಕುಗಳಲ್ಲಿ ಅನ್‌ಕ್ಲೈಮ್ಡ್ ಡಿಪಾಸಿಟ್‌ಗಳು ದುರುಪಯೋಗವಾಗುವುದಿಲ್ಲ.
ಠೇವಣಿದಾರ ಸರಿಯಾದ ದಾಖಲೆಗಳನ್ನು ನೀಡಿ ಯಾವುದೇ ಕಾಲಕ್ಕೂ ತನ್ನ ಠೇವಣಿಯನ್ನು ಹಿಂತಿರುಗಿ ಪಡೆಯಬಹುದು. ಇಂಥ ಠೇವಣಿಗಳು ವಂಚನೆಗೆ
ಈಡಾಗದಂತೆ ನಿಗಾ ವಹಿಸಲು ಸಂಬಂಧಿತ ಶಾಖೆ- ಕಚೇರಿಯಲ್ಲಿ ಇರದೇ, ಮುಖ್ಯಕಾರ್ಯಾಲಯಕ್ಕೆ ಟ್ರಾನ್ಸ ಫರ್ ಅಗುವ ಸಾದ್ಯತೆಗಳು ಹೆಚ್ಚು.
ಅನ್ ಕ್ಲೈಮ್ಡ್ ಠೇವಣಿಗಳು ಎಲ್ಲರೂ ತಿಳಿದಂತೆ ಕೇವಲ ಬ್ಯಾಂಕುಗಳಿಗೆ ಸೀಮಿತವಾಗಿಲ್ಲ. ಸಂಸತ್ತಿನಲ್ಲಿ ನೀಡಿದ ಮಾಹಿತಿ ಪ್ರಕಾರ ಇಂಥ ಖಾತೆಗಳು
ಜೀವವಿಮಾ ಕಂಪನಿಗಳಲ್ಲಿ ೨೪೫೮೬ ಕೋಟಿಗಳು, ಪ್ರೊವಿಡೆಂಟ್ ಫಂಡ್‌ನಲ್ಲಿ ೨೬೯೧೪, ಮ್ಯೂಚುವಲ್ ಫಂಡ್‌ನಲ್ಲಿ ೧೭೮೮೦, ಡಿವಿಡೆಂಡ್ ಖಾತೆ ಯಲ್ಲಿ ೪೧೦೦ ಕೋಟಿಗಳು ಇವೆಯಂತೆ. ಭಾರತೀಯ ಜೀವ ವಿಮಾ ನಿಗಮ ಒಂದರ ೭೦೦೦ ಕೋಟಿ ಇದೆಯಂತೆ. ಪಾಲಿಸಿದಾರರು ಪೂರ್ತಿಯಾಗಿ
ಪ್ರೀಮಿಯಂ ಪಾವತಿಸದೇ ಅರ್ಧಕ್ಕೆ ನಿಲ್ಲಿಸುವುದು ಮತ್ತು ಪಾಲಿಸಿ ಪಕ್ವ ಅದಮೇಲೂ ಮೆಚುರಿಟಿ ಹಣವನ್ನು ಪಡೆಯಲು ಮುಂದೆ ಬರದಿರುವುದು
ಕಾರಣ ಎನ್ನಲಾಗುತ್ತದೆ.
ಇವು ಬ್ಯಾಂಕ್‌ಗಳಲ್ಲಿ ಇರುವ ಅನ್‌ಕ್ಲೈಮ್ಡ್ ಡಿಪಾಸಿಟ್‌ನಷ್ಟು ಸುದ್ದಿ ಮಾಡುತ್ತಿಲ್ಲ. ಈ ವಲಯಗಳಲ್ಲೂ ‘೧೦೦ ದಿನ, ೧೦೦ ಪಾವತಿ’ಯ ಅವಶ್ಯಕತೆ ಇದೆ. ಬ್ಯಾಂಕುಗಳಲ್ಲಿನ ಅನ್‌ಕ್ಲೈಮ್ಡ್ ಠೇವಣಿ ಕೇವಲ ಬ್ಯಾಂಕುಗಳ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿರದೇ, ಅದರಲ್ಲಿ ಸಂಬಂಧಪಟ್ಟ ಗ್ರಾಹಕರ ಪಾಲೂ ಇರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ.