Wednesday, 11th December 2024

ನೆರೆ ನೀರು ತುಂಬಿದ ರಸ್ತೆ ದಾಟಿ ಶಾಲೆಯತ್ತ ನಡಿಗೆ

ಶಶಾಂಕಣ

shashidhara.halady@gmail.com

ಮಳೆ, ನೆರೆ, ಪ್ರವಾಹದ ಸುದ್ದಿಗಳು ಮಾಧ್ಯಮಗಳನ್ನು ಆವರಿಸಿವೆ. ತಡವಾಗಿಯಾದರೂ, ಈಗ ಬೀಳುತ್ತಿರುವ ಮಳೆಯು ಎಲ್ಲೆಡೆ ನೀರನ್ನು ತುಂಬಿಸಿ ಬಿಟ್ಟಿದೆ! ಕೆಲವು ಕಡೆ ಅಗತ್ಯಕ್ಕಿಂತ ಹೆಚ್ಚು ಮಳೆ ಸುರಿಯುತ್ತಿದೆ; ದರೆ ಕುಸಿತ, ನೆಲ ಕೊರೆತ ಸಾಮಾನ್ಯ ಎನಿಸಿದೆ; ಅತ್ತ ಬೆಳಗಾವಿ, ವಿಜಯಪುರದ ಕಡೆ ಸರಿಯಾಗಿ ಮಳೆ ಆಗಿಲ್ಲ ಎಂಬ ವರದಿಯೂ ಬಂದಿದೆ. ಈ ರೀತಿ ಒಂದೆಡೆ ವಿಪರೀತ ಮಳೆ, ಇನ್ನೊಂದು ಕಡೆ ಬರ, ಅಕಾಲಿಕ ಮಳೆ, ಒಮ್ಮೆಗೇ ಅಗತ್ಯಕ್ಕಿಂತ ಹೆಚ್ಚು ಮಳೆ – ಇವೆಲ್ಲವೂ ‘ಗ್ಲೋಬಲ್ ವಾರ್ಮಿಂಗ್’ ಪರಿಣಾಮದಿಂದಾಗಿ ಎನ್ನುತ್ತಾರೆ ತಜ್ಞರು.

ಆಗಸವನ್ನು ಕಪ್ಪನೆಯ ಮೋಡ ಕವುಚಿಕೊಂಡು, ಹಗಲಿಡೀ ಬಿಸಿಲಿನ ಸುಳಿವೇ ಇಲ್ಲದೇ, ಆಗಾಗ ಮಳೆ ಸುರಿಯುತ್ತಾ, ಮನೆಯೊಳಗೆಲ್ಲಾ ಥಂಡಿ ತುಂಬಿಕೊಂಡಾಗ, ನಮ್ಮೂರಿನ ಮಳೆಯ ನೆನಪಾಗುತ್ತದೆ; ಬಾಲ್ಯದಲ್ಲಿ ಮಳೆ ಬೀಳುವಾಗ ಛತ್ರಿ ಹಿಡಿದು ಓಡಾಡಿದ ದಿನಗಳ ನೆನಪಾಗುತ್ತದೆ. ನಮ್ಮೂರಿನಲ್ಲಿ ಎಡೆಬಿಡದೇ ನಾಲ್ಕಾರು ದಿನ ಮಳೆ ಸುರಿಯುವುದು ತೀರಾ ಸಾಮಾನ್ಯ.

ಹವಾ ಮುನ್ಸೂಚನೆಯು ಈಗಿನಷ್ಟು ನಿಖರವಾಗಿರದಿದ್ದ ನನ್ನ ಬಾಲ್ಯದಲ್ಲಿ, ವಿಪರೀತ ಮಳೆ ಸುರಿಯುತ್ತಿದ್ದರೂ, ಯಾವುದೇ ‘ಅಲರ್ಟ್’ಗಳ ತಲೆಬಿಸಿ ಇಲ್ಲದೇ ನಾವೆಲ್ಲಾ ಶಾಲೆಗೆ ಹೋಗುವುದು ಮಾಮೂಲು ವಿಚಾರ; ವಿಪರೀತ ಮಳೆಗಾಗಿ ಶಾಲೆಗೆ ರಜಾ ಕೊಡುವ ಪರಿಪಾಠ ಆಗಲೂ ಇತ್ತು; ಆದರೆ, ನೆರೆ ಬಂದು ಎಲ್ಲಾ ಕಡೆ ನೀರು ತುಂಬಿದ ನಂತರವಷ್ಟೇ ಶಾಲೆಗೆ ರಜಾ ಘೋಷಣೆಯಾಗುತ್ತಿತ್ತು! ಅಂತಹ ದಿನಗಳಲ್ಲಿ, ಮಳೆಯಲ್ಲೇ ಶಾಲೆಗೆ ಹೋಗಿ, ವಾಪಸು ಬರುವಾಗ ನೆರೆಯನ್ನು ನೋಡುತ್ತಾ ಬರುವ ಅವಕಾಶ.

ಆಷಾಢ ಮಾಸದ, ಮಳೆಗಾಲದ ಒಂದು ದಿನ ನಮ್ಮ ದಿನಚರಿ ಸರಿಸುಮಾರು ಹೀಗಿರುತ್ತಿತ್ತು. ಬೆಳಗ್ಗೆ ೬.೩೦ರಿಂದ ೭.೦೦ ಗಂಟೆಯ ಸಮಯದಲ್ಲಿ
ನಿದ್ದೆಯಿಂದೆದ್ದು, ‘ನಂಜನಗೂಡು ದಂತಧಾವನ ಚೂರ್ಣ’ವನ್ನು ಒಂದು ಚಿಟಿಕೆ ಎತ್ತಿಕೊಂಡು, ಹಲ್ಲುಜ್ಜುವ ಕೆಲಸ. ಕೆಲವರ ಮನೆಯಲ್ಲಿ ಹಣ
ಕೊಟ್ಟು ಹಲ್ಲುಪುಡಿಯನ್ನು ಖರೀದಿಸಿ ತರುವ ಪರಿಪಾಠ ಇರಲಿಲ್ಲ; ಅಂತಹವರ ಮನೆಯ ಮಕ್ಕಳು, ದೊಡ್ಡವರು ಎಲ್ಲರೂ ಮನೆ ಮುಂದಿನ ಮಾವಿನ
ಮರದಿಂದ ಒಂದು ಎಲೆಯನ್ನು ಕಿತ್ತು, ಅದನ್ನು ಸೀಳಿ, ಎರಡು ಭಾಗ ಮಾಡಿ, ಒಂದು ಭಾಗವನ್ನು ಮಡಿಕೆಮಡಿಕೆಯಾಗಿ ಸುತ್ತಿ, ಅದರಿಂದಲೇ ಹಲ್ಲು
ಜ್ಜುವ ಕ್ರಮ.

Read E-Paper click here

ಎಲೆಯನ್ನು ಎರಡು ಭಾಗವಾಗಿ ಸೀಳಿದ ನಂತರ ಇರುವ ಸಣ್ಣ ಕಡ್ಡಿಯಂತಹ ರಚನೆಯಿಂದ ನಾಲಗೆ ಚೊಕ್ಕಮಾಡುತ್ತಿದ್ದರು! ಮಾವಿನ ಎಲೆ ಸಿಗದಿದ್ದರೆ ಗೋವೆ ಮರದ ಎಲೆಯಾದರೂ ಆದೀತು; ಆ ಎಲೆಗಳ ರಸವು ನಾಲಗೆ, ಹಲ್ಲು, ನಿಜಗಳಿಗೆ ತಗುಲಿ, ಹೆಚ್ಚು ಚೊಕ್ಕಟವಾಗುತ್ತದೆ ಎಂಬ
ಭಾವ! ಕ್ರಮೇಣ ಟೂತ್‌ಬ್ರಶ್ ಎಂಬ ಸಾಧನ ನಮ್ಮ ಮನೆಯನ್ನು ಪ್ರವೇಶಿಸಿದರೂ, ಅದರಿಂದ ನಾವೆಲ್ಲಾ ಹಲ್ಲುಜ್ಜುವ ಶೈಲಿಯನ್ನು ಕಂಡು ನಮ್ಮ ಅಮ್ಮಮ್ಮ ಗೊಣಗುತ್ತಿದ್ದರು – ‘ಆ ರೀತಿ ಬ್ರಶ್ ಹಾಕಿ ಹಲ್ಲನ್ನು ಗಸ ಗಸ ಒತ್ತಿ ತಿಕ್ಕಿದರೆ, ಹಲ್ಲು, ನಿಜ ಆಮೇಲೆ ಹಾಳಾತ್ ಕಾಣಿ’ ಎಂದು ಕನಿಕರದಿಂದ
ಹೇಳುತ್ತಿದ್ದರು.

‘ನಂಜನಗೂಡು ದಂತಧಾವನ ಚೂರ್ಣ’ದಿಂದ ಹಲ್ಲುಜ್ಜಿದ ನಂತರದ ಮುಖ್ಯ ಕೆಲಸವೆಂದರೆ, ಸ್ನಾನ ಮಾಡಿ, ಗಂಜಿಯೂಟ ಮಾಡಿ, ಅದೇ ಗಂಜಿ ಯನ್ನು ಉಗ್ಗಕ್ಕೆ ಹಾಕಿಕೊಂಡು, ಶಾಲೆಯತ್ತ ನಡಿಗೆ! ನಾವೆಲ್ಲಾ ಬೆಳಗ್ಗೆ ಸುಮಾರು ೮.೩೦ಕ್ಕೆ ಶಾಲೆಗೆ ಹೊರಡಬೇಕಿತ್ತು; ಮೂರು ಕಿ.ಮೀ. ನಡಿಗೆಯ ದಾರಿ. ‘ಮಕ್ಕಳೇ, ಬೇಗ ಹೊರಡಿ, ಮಳೆ ಜೊಂಯ್ ಅಂತ ಸುರೀತಿತ್ತ.. ಬೇಗ ಶಾಲೆ ಸೇರ‍್ಕಣಿ’ ಎಂದು ಕಾಳಜಿಯಿಂದ ಮನೆಯವರು ನಮ್ಮನ್ನು ಹೊರಡಿಸುತ್ತಿದ್ದರು. ನಮ್ಮ ಮನೆಯಿಂದ ಹಾಲಾಡಿ ಶಾಲೆಗೆ ಸುಮಾರು ಮೂರು ಕಿ.ಮೀ. ದೂರ. ಅದನ್ನು ಕ್ರಮಿಸಲು ಮೂರು ಬೇರೆ
ಬೇರೆ ದಾರಿಗಳಿದ್ದರೂ, ಮಳೆಗಾಲದಲ್ಲಿ, ತುಸು ಬಳಸು ಎನ್ನಬಹುದಾದ ಆದರೆ ಕಡಿಮೆ ರಿಸ್ಕ್ ಇರುವ ಪೇಟೆಯ ಹಾದಿಯೇ ಪ್ರಶಸ್ತ. ಒಂದು ಕೈಯಲ್ಲಿ
ಬಿಡಿಸಿದ ಕೊಡೆ, ಇನ್ನೊಂದು ಕೈಯಲ್ಲಿ ಬುತ್ತಿ ಪಾತ್ರೆ, ಬಗಲಲ್ಲಿ ಪುಸ್ತಕ ತುಂಬಿದ ಚೀಲವನ್ನು ನೇತುಹಾಕಿ ಕೊಂಡು ನಮ್ಮ ಸವಾರಿ ಬೈಲುದಾರಿಯನ್ನು
ಹಿಡಿಯಿತು ಎಂದರೆ, ಅದೊಂದು ಪುಟ್ಟ ಮೆರವಣಿಗೆ. ಸುತ್ತ ಮುತ್ತಲಿನ ಮೂರು ನಾಲ್ಕು ಮನೆಗಳಿಂದ ಮಕ್ಕಳು ಕೊಡೆ ಹಿಡಿದು ಬರುತ್ತಿದ್ದರು.

ಮಳೆಗಾಲದಲ್ಲಂತೂ ಎಲ್ಲರೂ ಒಟ್ಟಿಗೇ ಹೋಗು ಪರಿಪಾಠ. ಮೊದಲಿಗೆ ಮನೆಯೆದುರಿನ ಬೈಲು ದಾರಿಯಲ್ಲಿ ಮುಕ್ಕಾಲು ಕಿ.ಮೀ. ನಡಿಗೆ. ಹಸಿರು
ತುಂಬಿದ ಗದ್ದೆಗಳ ನಡುವಿನ ಅಂಚಿನ ಮೇಲೆ, ನಾವು ನಾಲ್ಕಾರು ಮಕ್ಕಳು ಕಪ್ಪು ಕೊಡೆಯನ್ನು ಬಿಡಿಸಿ ಹಿಡಿದು, ಮೋಡಕವಿದ ಆಗಸದಿಂದ ಬೀಳುವ ಸಟಿಕ ಶುದ್ಧ ಮಳೆನೀರಿನ ಅಡಿಯಲ್ಲೇ ನಡೆಯುತ್ತಾ ಹೊರಟೆವೆಂದರೆ, ಅದು ಮೆರವಣಿಗೆಯಲ್ಲದೇ ಮತ್ತೇನು? ಗದ್ದೆಬೈಲಿನ ಉತ್ತರ ತುದಿಯಲ್ಲಿ ರಭಸದಿಂದ ಹರಿಯುವ ದೊಡ್ಡ ತೋಡು. ಅದನ್ನು ದಾಟಲು ಮರದ ಹಲಗೆಗಳಿಂದ ನಿರ್ಮಿಸಲಾಗಿದ್ದ ಸಾರ.

ಅದನ್ನು ದಾಟಿ, ಹಾಡಿ ಗುಡ್ಡೆಗಳ ನಡುವಿನಲ್ಲಿ ಒಂದು ಕಿ.ಮೀ. ನಡಿಗೆ; ಅಷ್ಟರಲ್ಲಿ ಹಾಲಾಡಿಯ ಮೂಡುಪೇಟೆಯ ಡಾಮಾರು ರಸ್ತೆ ಸಿಗುತ್ತದೆ.
ಅದರ ಮೇಲೆ ಪಶ್ಚಿಮಾಭಿಮುಖವಾಗಿ ಒಂದು ಕಿ.ಮೀ. ಸಾಗಿದರೆ ನಮ್ಮ ಶಾಲೆ. ಮಳೆಯ ಜತೆಯೇ ಗಾಳಿಯೂ ಇದ್ದ ದಿನ, ನಮ್ಮ ಕೊಡೆಯು ಹಾರಿ
ಹೋಗುವ ಸಂದರ್ಭವೇನಾದರೂ ಇದ್ದರೆ, ಅದು ಈ ಕೊನೆಯ ಒಂದು ಕಿ.ಮೀ. ರಸ್ತೆ ದಾರಿಯಲ್ಲಿ ಮಾತ್ರ. ಆ ಭಾಗದ ರಸ್ತೆಯು ಗದ್ದೆ ಬೈಲಿನ ನಡುವೆ
ಸಾಗಿದ್ದು, ಅನತಿ ದೂರದಲ್ಲಿ ದೊಡ್ಡ ಹೊಳೆ ಹರಿಯುತ್ತಿತ್ತು. ಆ ದೊಡ್ಡ ಹೊಳೆಗೆ ಒಂದು ಉಪನದಿ; ಈ ಉಪನದಿಯನ್ನು ‘ಸಣ್ಣ ಹೊಳೆ’ ಎಂದೇ ಕರೆಯುವ ರೂಢಿ.

ಅದನ್ನು ದಾಟಲು ಸಣ್ಣ ಸೇತುವೆ; ದೊಡ್ಡ ಹೊಳೆ ತುಂಬಿದರೆ, ಈ ಸಣ್ಣಹೊಳೆಗೆ ನೀರು ಏರಿಕೊಂಡು ಬರುತ್ತದೆ. ಅನತಿದೂರದಲ್ಲಿ ಅವೆರಡೂ ಸಂಗಮವಾಗುವ ಆ ಸ್ಥಳದಲ್ಲಿ ವಿಶಾಲವಾದ, ಬೆಳಾರ ಎನಿಸುವ ಗದ್ದೆಬೈಲಿನ ಜಾಗ; ಆದ್ದರಿಂದ ಲೇಅಲ್ಲಿ ಬೀಸುವ ಗಾಳಿಯ ವೇಗ ಜಾಸ್ತಿ. ಅದರಲ್ಲೂ
ಸಣ್ಣಹೊಳೆಯನ್ನು ದಾಟುವ ಸಣ್ಣ ಸೇತುವೆಯ ಸುತ್ತಮುತ್ತಲಂತೂ, ಬಿಡಿಸಿದ ಕೊಡೆಯನ್ನು ಗಟ್ಟಿಯಾಗಿ ಹಿಡಿದು ನಾವೆಲ್ಲಾ ಪುಟಪುಟನೆ ಹೆಜ್ಜೆ
ಹಾಕುತ್ತಿದ್ದೆವು. ಕೆಲವು ಮಕ್ಕಳು ಹಿಡಿದಿರುವ ಕೊಡೆಗಳು ಆ ಜಾಗದಲ್ಲಿ ರಿವರ್ಸ್ ಆಗುವುದು ಸಾಮಾನ್ಯ; ಒಮ್ಮೆ ನಮ್ಮ ಜತೆ ನಡೆದುಬರುತ್ತಿದ್ದ
ಶಿವರಾಮ ಹಿಡಿದಿದ್ದ ಹಿತ್ತಾಳೆ ಬುತ್ತಿಪಾತ್ರೆಯ ಮುಚ್ಚಳವು, ಇದೇ ಸಣ್ಣ ಸೇತುವೆ ಹತ್ತಿರ ಬೀಸಿದ ಗಾಳಿಗೆ ಹಾರಿ ಹೋಗಿತ್ತು!

ಅಷ್ಟೊಂದು ಬಿರುಸಾದ ಗಾಳಿ ಆದಿನ! ಗಾಳಿಯ ರಭಸಕ್ಕೆ ಸಿಡಿದು ಹಾರಿದ ಆ ಮುಚ್ಚಳವು ಹೋಗಿ ಬಿದ್ದಿದ್ದಾದರೂ ಎಲ್ಲಿಗೆ? ನೆರೆಯ ಕೆಂಪನೆಯ ನೀರಿನಿಂದ ತುಂಬಿದ್ದ, ಇಳಿಜಾರಿನ ಒಂದು ಜಾಗಕ್ಕೆ. ತುಸು ತಗ್ಗಿನ ಜಾಗಕ್ಕೆ ಹೋಗಿ ಬಿದ್ದಿದ್ದ ಆ ಮುಚ್ಚಳವು, ಕೆಂಪನೆಯ ನೆರೆ ನೀರಿನಿಂದಾಗಿ ಎಲ್ಲಿ ಬಿತ್ತೆಂದೇ ಕಾಣಿಸುತ್ತಿರಲಿಲ್ಲ. ಎರಡು ದಿನಗಳ ನಂತರ, ನೆರೆ ನೀರಿನ ಮಟ್ಟ ಕೆಳಗೆ ಹೋದ ನಂತರ, ಆ ಮುಚ್ಚಳವು ಒಂದು ಹುಲ್ಲುಗಿಡದ ಬೇರಿನ ನಡುವೆ ಸಿಕ್ಕಿಕೊಂಡಿದ್ದು ಕಾಣಿಸಿತು!

ನಾವು ಪ್ರೀತಿಯಿಂದ ಪ್ರತಿದಿನ ಹೋಗುತ್ತಿದ್ದ ಆ ಹಿರಿಯ ಪ್ರಾಥಮಿಕ ಶಾಲೆಯ ದಾರಿಯಲ್ಲಿ, ಮಳೆಗಾಲದ ಬೇರೆ ಬೇರೆ ದಿನಗಳಲ್ಲಿ, ವಿವಿಧ ಮಟ್ಟದಲ್ಲಿ
ಕಾಣುತ್ತಿದ್ದ ನೆರೆಯ ಕಥೆಯೇ ರೋಚಕ. ದೊಡ್ಡಹೊಳೆಯನ್ನು ನಾವು ದಾಟಬೇಕಾಗಿರಲಿಲ್ಲ. ದೊಡ್ಡಹೊಳೆಯ ಉಪನದಿಯನ್ನು ಪುಟ್ಟ ಸೇತುವೆಯ ಸಹಾಯದಿಂದ ದಾಟಿ, ಸುಮಾರು ನಾನ್ನೂರು ಅಡಿ ನಡೆದರೆ ಶಾಲೆ. ಆ ಸಣ್ಣ ಸೇತುವೆಗೂ, ದೊಡ್ಡ ಹೊಳೆಗೂ ಸುಮಾರು ಇನ್ನೂರು ಅಡಿ ಅಂತರ. ದೊಡ್ಡ ಹೊಳೆಯಲ್ಲಿ ನೆರೆ ಬಂದಾಗಲೆಲ್ಲಾ, ಅದರ ನೀರು ಒತ್ತಿಕೊಂಡು ಬಂದು ಸಣ್ಣೆ ಹೊಳೆಯನ್ನೂ, ಅದರ ಸುತ್ತಲಿನ ಗದ್ದೆಬಯಲನ್ನೂ
ತುಂಬುತ್ತಿತ್ತು.

ಪಶ್ಚಿಮಘಟ್ಟಗಳ ನಡುವೆ ಜನಿಸಿ, ಹರಿದು ಬರುವ ಆ ದೊಡ್ಡ ಹೊಳೆಯು, ಘಾಟಿಯಲ್ಲಿ ಬಿದ್ದ ಮಳೆನೀರನ್ನೆಲ್ಲಾ ತುಂಬಿಕೊಂಡು, ಒಮ್ಮೊಮ್ಮೆ ರಭಸದಿಂದ ಹರಿದುಬರುತ್ತಿತ್ತು. ಘಾಟಿಯಲ್ಲಿ ಜಾಸ್ತಿ ಮಳೆಯಾಗಿ, ನೆರೆ ಏರಿದರೆ, ಆ ನೀರು ಸಣ್ಣಹೊಳೆಯನ್ನು ತುಂಬಿಕೊಂಡು, ನಾವು ಶಾಲೆಗೆ ಸಾಗುವ ಸಣ್ಣಸೇತುವೆಯನ್ನು ಮುಳುಗಿಸುತ್ತಿತ್ತು. ಪ್ರತಿ ಮಳೆಗಾಲದಲ್ಲಿ ನಾಲ್ಕಾರು ದಿನ ಈ ರೀತಿ, ಮೇಲೇರಿ ಬರುವ ನೆರೆ ಸಾಮಾನ್ಯ.
ಸಣ್ಣ ಸೇತುವೆಯ ಮೇಲೆ ನೀರು ತುಂಬಿ ಬಂತೆಂದರೆ, ಅಲ್ಲಿ ಸಾಗುವ ಸುಮಾರು ನೂರು ಅಡಿಯುದ್ದದ ರಸ್ತೆಯ ಮೇಲೂ ಕೆಂಪನೆಯ ನೀರು! ಘಟ್ಟ ಪ್ರದೇಶದಿಂದ ರಭಸವಾಗಿ ಹರಿದುಬರುತ್ತಿದ್ದ ಆ ನೀರು ಕೆಂಪು ರಾಡಿ; ಆ ಪ್ರದೇಶದಲ್ಲಿ ನಡೆಯುತ್ತಿದ್ದ ಮರಗಳ ಕಡಿತ, ಭೂ ಸವಕಳಿಯ ಪ್ರಭಾವದಿಂದ ಆ ಬಣ್ಣ.

ರಸ್ತೆಯ ಮೇಲೆ ಒಂದು ಅಥವಾ ಎರಡು ಅಡಿ ನೀರು ನಿಂತರೆ, ಕೆಳಗಿನ ಡಾಮಾರು ಕಾಣದಷ್ಟು ರಾಡಿ. ಪ್ರತಿದಿನ ನಡೆಯುತ್ತಿದ್ದ ಅಂದಾಜಿನ ಮೇಲೆ, ನಾವೆಲ್ಲಾ ಆರಾಮಾಗಿ ಆ ನೀರಿನ ನಡುವೆ ಕಾಲಾಡಿಸುತ್ತಾ ನಡೆದು, ಸಣ್ಣ ಸೇತುವೆಯನ್ನು ದಾಟಿ, ಶಾಲೆ ತಲುಪುತ್ತಿದ್ದೆವು. ಈ ನೀರು ದೊಡ್ಡ ಹೊಳೆಯ ಪ್ರವಾಹದ ಸೆಳೆತದಿಂದ ದೂರವಾಗಿರುವ, ಹಿನ್ನೀರಿನಂತಹ ಜಾಗದಲ್ಲಿ ತುಂಬಿರುತ್ತಿದ್ದುದರಿಂದಾಗಿ, ನೀರಿನ ಸೆಳೆತ, ರಭಸ ಇರಲಿಲ್ಲ; ನಿಂತ ನೀರಿನ ರೀತಿ ಕೆಂಪಗೆ ತುಂಬಿಕೊಂಡಿರುವ ಆ ನೆರೆಯ ನೋಟವೇ ವಿಹಂಗಮ. ಆ ಸುತ್ತಲೂ ಸುಮಾರು ಒಂದು ಚದರ ಕಿ.ಮೀ. ಪ್ರದೇಶದಲ್ಲಿ ಮಲೆತು ನಿಂತ ಕೆಂಪನೆಯ ನೆರೆ ನೀರಿನ ನಡುವೆ, ನಡೆದು ಸಾಗುವುದೆಂದರೆ ಅದೊಂದು ರೋಚಕ ಅನುಭವ!

ಒಂದು ಬೆಳಗ್ಗೆ, ಸುರಿಯುವ ಮಳೆಯಲ್ಲೇ, ಕೊಡೆ ಹಿಡಿದು ಶಾಲೆಗೆ ಹೊರಟೆವು. ಹೊಳೆಯಲ್ಲಿ ನೆರೆ ಬಂದಿದ್ದು, ಸುತ್ತಲಿನ ಗದ್ದೆ ಬಯಲಿನ ಮೇಲೆ
ಕೆಂಪನೆಯ ನೀರು ತುಂಬಿದ್ದರೂ, ಸಣ್ಣ ಸೇತುವೆ ಇನ್ನೂ ಮುಳುಗಿರಲಿಲ್ಲ; ನೀರಿಗೂ ಸೇತುವೆಗೂ ನಾಲ್ಕಾರು ಅಡಿ ಅಂತರವಿತ್ತು. ಆ ದಿನವಿಡೀ
ಮಳೆಯ ನರ್ತನ. ಮಧ್ಯಾಹ್ನ ಊಟವಾದ ನಂತರ, ‘ಈ ದಿನ ಶಾಲೆಗೆ ರಜೆ’ ಎಂದು ಘೋಷಿಸಿದರು. ತಾಲೂಕು ಕೇಂದ್ರದಲ್ಲಿ ರಜಾ ಕುರಿತು ಬೆಳಗ್ಗೆ
ತೆಗೆದುಕೊಂಡ ನಿರ್ಣಯವು, ನಮ್ಮೂರನ್ನು ತಲುಪುವಾಗ ಮಧ್ಯಾಹ್ನವಾಗಿತ್ತು.

‘ಹೋ ಇವತ್ತು ರಜಾ’ ಎಂದು ಸಂತಸದಿಂದ ಮಾತನಾಡಿಕೊಳ್ಳುತ್ತಾ, ನಾವೆಲ್ಲಾ ಮನೆಯತ್ತ ಹೊರಟೆವು. ಆದರೆ, ಆಗ ಸಣ್ಣ ಸೇತುವೆ ನೀರಿನಲ್ಲಿ ಮುಳುಗಿ ಹೋಗಿತ್ತು! ಅದರ ಆಚೀಚೆ ಇದ್ದ ಕುಂದಗಳು ಮತ್ತು ಕೈಪಿಡಿ ಮಾತ್ರ ಕಾಣಿಸುತ್ತಿದ್ದವು. ಘಟ್ಟ ಪ್ರದೇಶದಲ್ಲಿ ರಾತ್ರಿಯೆಲ್ಲಾ ಸುರಿದ ಮಳೆಯಿಂದಾಗಿ, ಈಗ ನೆರೆ ಏರಿತ್ತು. ಎಲ್ಲಾ ಮಕ್ಕಳೂ ನಿಧಾನವಾಗಿ, ಆ ಮುಳುಗಿದ ರಸ್ತೆ ಮತ್ತು ಸೇತುವೆಯನ್ನು ದಾಟಿದೆವು; ನೀರು ಕೆಂಪಗಿತ್ತು,
ಆದರೆ ರಭಸ ಇರಲಿಲ್ಲ. ಸೊಂಟದ ತನಕ ನೀರು!

ಧರಿಸಿದ್ದ ಚಡ್ಡಿ ತೊಯ್ದಿತ್ತು. ನೆರೆ ನೀರಿನಿಂದ ಮುಳುಗಿದ್ದ ರಸ್ತೆ ದಾಟಿ, ಮನೆಯ ಹಾದಿ ಹಿಡಿದು, ಮನೆ ಎದುರಿನ ಗದ್ದೆ ಬೈಲಿಗೆ ಬಂದು ನೋಡಿದರೆ, ಆ ಬೈಲಿನುದ್ದಕ್ಕೂ ನೆರೆ ನೀರು! ದಿನವಿಡೀ ಸುರಿದ ಮಳೆಯಿಂದಾಗಿ, ತೋಡಿನಿಂದ ನೀರು ಉಕ್ಕಿ ಗದ್ದೆಗಳನ್ನು ತುಂಬಿತ್ತು; ಸುಮಾರು ನೂರು ಅಡಿ ದೂರದ ಗದ್ದೆಯಂಚಿನ ದಾರಿ ಪೂರ್ತಿ ಮುಳುಗಿಹೋಗಿತ್ತು! ನಾವು ನಾಲ್ಕಾರು ಮಂದಿ ವಿದ್ಯಾರ್ಥಿಗಳು, ಒಬ್ಬರ ಕೈಯನ್ನು ಇನ್ನೊಬ್ಬರು ಹಿಡಿದು, ಆ ಮುಳುಗಿದ ದಾರಿಯಲ್ಲಿ ನಿಧಾನವಾಗಿ ಹೆಜ್ಜೆಯಿಟ್ಟು ನಡೆದೆವು.

ಜಾರಿದರೆ ಡುಬುಕ್ ಎಂದು ಗದ್ದೆಯೊಳಗೆ ಅಥವಾ ಹರಿಯುವ ತೋಡಿನೊಳಗೆ ಬೀಳುವ ಸನ್ನಿವೇಶ. ಮುಂದಿನ ಭಾಗದಲ್ಲಿದ್ದ ಎತ್ತರದ ಗದ್ದೆಯಂಚು ಗಳು ಮುಳುಗಿರಲಿಲ್ಲ. ಆದರೆ ಎಲ್ಲಾ ಕಡೆ ನೀರಿನ ಪ್ರಪಂಚ : ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ನೀರುಕಡುವಿನಿನಲ್ಲಿ ಹರಿಯುವ ನೀರು, ಬೈಲಿನ
ಅಂಚಿನುದ್ದಕ್ಕೂ ಹರಿಯುವ ತೋಡಿನ ತುಂಬಾ ಕೆಂಪನೆಯ ನೀರು, ತೋಡಿನಿಂದ ಗದ್ದೆಗೆ ಸುರಿಯುವ ನೀರು, ಆಗಸದಿಂದ ಪಟಪಟ ಸುರಿಯುವ ಮಳೆ ನೀರು, ಮನೆಯ ಹತ್ತಿರ ಬಂದಾಗ ಮಾಡಿನಿಂದ ಬೀಳುವ ನೀರು, ಎರಡು ಮಾಡುಗಳು ಸಂದಿಸುವ ಜಾಗದಲ್ಲಿರುವ ಹರಣಿಯಿಂದ ಮನೆ
ಮುಂದಿನ ಗದ್ದೆಗೆ ದಬದಬನೆ ಸುರಿವ ನೀರು, ಗದ್ದೆಯಾಚೆ ಇರುವ ಗುಡ್ಡದಿಂದ ಪುಟ್ಟ ಜಲಪಾತದ ರೀತಿ ನೆಗೆದು ಸುರಿವ ನೀರು, ಮನೆ ಅಂಗಳದ
ತುಂಬಾ ನೀರು, ಅಂಗಳದಲ್ಲೇ ಇದ್ದ ಬಗ್ಗುಬಾವಿ ತುಂಬಿ ಹೊರಗೆ ಹರಿವ ನೀರು, ಮನೆ ಹಿಂದಿನ ಸಣ್ಣತೋಡಿನ ತುಂಬಾ ಕೆಂಪನೆಯ ನೆರೆ ನೀರು – ಈ
ರೀತಿ ಆ ಆಷಾಢದ ಒಂದು ದಿನ ನಮ್ಮ ಮನೆ ಸುತ್ತಲೂ ನೀರಿನದೇ ಪ್ರಪಂಚ; ಹಾಗೆಯೇ ಆದಿನ ನಮ್ಮ ಮನದ ತುಂಬಾ ನೀರು ತುಂಬಿದ ಭಾವ.

ಶಾಲೆಯಿಂದ ಮಳೆಯಲ್ಲೇ ನಡೆದು ಮನೆಗೆ ಬಂದು, ಕೊಡೆಯನ್ನು ಮಡಚಿ ಕೊಟ್ಟಿಗೆಯಲ್ಲಿಟ್ಟು, ಕೈಕಾಲು ತೊಳೆದು, ಬಟ್ಟೆಯಿಂದ ವರೆಸಿಕೊಂಡ
ನಂತರ, ಊಟ. ಕೆಲವೊಮ್ಮೆ ಕಾಫಿ; ನಮಗೆಲ್ಲಾ ಆ ಸಂದರ್ಭದಲ್ಲಿ ಕಾಫಿಗಿಂತ ಊಟವೇ ಹೆಚ್ಚು ಇಷ್ಟ. ಬೆಳಗ್ಗೆ ಮೂರು ಕಿ.ಮೀ. ನಡೆದು ಹೋಗಿ, ಸಂಜೆ ಪುನಃ ಮೂರು ಕಿ.ಮೀ. ನಡೆದು ಬಂದು ಮನೆ ಸೇರಿದ ಮಕ್ಕಳಿಗೆ, ಅನ್ನ, ಸಾರು, ಮಜ್ಜಿಗೆಯ ಊಟ ರುಚಿಯೂ ಹೌದು, ಅಗತ್ಯವೂ ಹೌದು. ಆಗೆಲ್ಲಾ ಇಂತಹದೇ ಸರಳ ಆಹಾರ. ಪ್ರತಿದಿನ ಮೂರು ಪ್ಲಸ್ ಮೂರು ಕಿ.ಮೀ. ನಡಿಗೆ – ಮಳೆ ಬರುತ್ತಿದ್ದರೂ, ಒಮ್ಮೊಮ್ಮೆ ನೆಗಡಿ ಕಾಡಿದರೂ, ಹೆಚ್ಚಿನ ಸಮಸ್ಯೆ, ತೊಂದರೆ ಇಲ್ಲದೇ, ಆರೋಗ್ಯವಂತರಾಗಿಯೇ ಶಾಲಾದಿನಗಳನ್ನು ಕಳೆದೆವಲ್ಲಾ, ಅದೇ ನೆಮ್ಮದಿ, ಸಂತಸ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅನಿವಾರ್ಯವಾಗಿ ಮುಕ್ಕಾಲು ಮುಕ್ಕಾಲು ಗಂಟೆ ಮಾಡುತ್ತಿದ್ದ ಈ ನಡಿಗೆಯ ವ್ಯಾಯಾಮವೇ, ಆಗ ನಮ್ಮ ಆರೋಗ್ಯವನ್ನು ಕಾಪಾಡುತ್ತಿತ್ತು ಎಂಬುದು ನನ್ನ ಖಚಿತ ನಂಬಿಕೆ.