Saturday, 14th December 2024

ಅಕ್ಷರ ಸಂಡಿಗೆ ಇಂದಿನ ಸಂಡೆಗೆ; ಥ್ಯಾಂಕ್ಸ್ ಡುಂಡಿಗೆ !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅರಳಿನ ಸಂಡಿಗೆ, ಅವಲಕ್ಕಿ ಸಂಡಿಗೆ, ಈರುಳ್ಳಿ ಸಂಡಿಗೆ, ಸಬ್ಬಕ್ಕಿ ಸಂಡಿಗೆ, ರಾಗಿ ಸಂಡಿಗೆ, ಅಕ್ಕಿ ಫೇಣಿ ಸಂಡಿಗೆ, ಬಾಳೆಕಾಯಿ ಸಂಡಿಗೆ, ಬೂದುಗುಂಬಳ ಸಂಡಿಗೆ… ಎಷ್ಟು ವೆರೈಟಿ ಬೇಕು ನಿಮಗೆ? ಆಗಲೇ ಬಾಯಿಯಲ್ಲಿ ನೀರೂರತೊಡಗಿತೇ? ಅಷ್ಟು ಸಾಲದಿದ್ದರೆ ಹಲಸಿನ ಸಂಡಿಗೆ, ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೋಳೆಗಳ ಸಂಡಿಗೆಯನ್ನೂ ಸೇರಿಸಿಕೊಳ್ಳಿ.

ಈಗಿನ್ನು ಸಂಡಿಗೆ ಸೀಸನ್, ಎರಡು ರೀತಿಗಳಲ್ಲಿ: ಬೇಸಗೆಕಾಲ ಆದ್ದರಿಂದ ಸಂಡಿಗೆ ತಯಾರಿಯ ಭರಾಟೆಯೂ ಹೌದು; ಮದುವೆ ಮುಂಜಿ ಮತ್ತಿತರ ಸಮಾರಂಭಗಳ ದಟ್ಟಣೆಯೂ ಹೌದು. ಮೃಷ್ಟಾನ್ನ ಭೋಜನದ ಭಾಗವಾಗಿ ಹಪ್ಪಳ ಸಂಡಿಗೆ ಇರಲೇ ಬೇಕು. ಆಮೇಲೆ ಮಳೆಗಾಲ ಆರಂಭವಾದ ಮೇಲಂತೂ ಧೋ ಎಂದು ಮಳೆ ಸುರಿಯುವಾಗ ಚಪ್ಪರಿಸಲು ಹಪ್ಪಳ-ಸಂಡಿಗೆ ನೆನಪಾಗಲೇಬೇಕು.

ಅದಿರಲಿ, ಈಗ ಏಕಾಏಕಿಯಾಗಿ ಸಂಡಿಗೆ ಏಕೆ ನೆನಪಾಯ್ತು, ಮತ್ತು ಇಂದಿನ ಅಂಕಣಕ್ಕೆ ವಿಷಯವಾಗಿ ಹೇಗೆ ಆಯ್ಕೆಯಾಯ್ತು ಎಂಬ ಸ್ವಾರಸ್ಯವನ್ನು ನಿಮಗೆ ತಿಳಿಸುತ್ತೇನೆ. ಎರಡು ವಾರಗಳ ಹಿಂದೆ ‘ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿದ್ದು ಸ್ಮೃತಿಯಲ್ಲೋ ಸಾಂಬಾರಿನಲ್ಲಿ?’ ಶೀರ್ಷಿಕೆಯ ಅಂಕಣಬರಹ, ಅದರಲ್ಲಿ ‘ನೆನೆ’ ಪದದ ಬಗೆಗೊಂದು ಸೋದಾಹರಣ ಲಹರಿ ಹರಿಸಿದ್ದೆನಷ್ಟೆ? ಅದನ್ನೋದಿ ಪ್ರತಿಕ್ರಿಯಿಸಿದ್ದ ಹಲವರಲ್ಲಿ ಹನಿಗವನ ಬ್ರಹ್ಮ, ನನ್ನ ಹಿರಿಯ ಹಿತೈಷಿ ಡುಂಡಿರಾಜ್ ಹಟ್ಟಿಕುದ್ರು ಸಹ ಒಬ್ಬರು.

ಅವರು ಬೇರೆ ಲೇಖನಗಳಿಗೂ ಆಗೊಮ್ಮೆ ಈಗೊಮ್ಮೆ ಪ್ರೋತ್ಸಾಹದ ಪ್ರತಿಕ್ರಿಯೆ ಬರೆಯುವವರೇ. ಆದರೆ ಮೊನ್ನೆಯ ಪ್ರತಿಕ್ರಿಯೆ ನಿಜಾರ್ಥದಲ್ಲಿ ರಚನಾತ್ಮಕವೇ ಆಗಿತ್ತು. ತತ್ಪರಿಣಾಮವಾಗಿ ಈ ಲೇಖನದ ರಚನೆಯೂ ಆಯ್ತು. ವಾಟ್ಸಪ್‌ನಲ್ಲಿ ನಮ್ಮಿಬ್ಬರೊಳಗೆ ಆವತ್ತು ನಡೆದ ಆ ಸಂಭಾಷಣೆಯನ್ನು ಯಥಾವತ್ತಾಗಿ ಕೊಡುತ್ತಿದ್ದೇನೆ: ಡುಂ: ‘ನೆನೆ ನೆನೆ ಆ ದಿನವ| ಗಂಟಲು ಕೂಡಾ| ನೆನೆಯದ ದಿನವ’ – ಗುಂಡು ಕಡಿಮೆಯಾದಾಗ ಕಿ.ರಂ. ಹೇಳಿದ್ದು! ನನ್ನಲ್ಲೂ ಒಂದಿಷ್ಟು ನೆನೆಗವನಗಳಿವೆ.

ನನಗೆ ತುಂಬಾ ಇಷ್ಟವಾಗುವುದು ದಿ. ಜರಗನಹಳ್ಳಿಯವರ ಈ ನೆನೆಗವನ: ‘ನೆನೆಯುವುದೆ| ನನ್ನ ಪಾಡಾಗಿದೆ| ನನಗೆ ಬೇಕಾದ್ದು| ಕೊಡೆ!’ ನಾನು: ಇದು ಬಹುವಿಧ ಶ್ಲೇಷೆ! ‘ಕೊಡೆ’ಯನ್ನು ಛತ್ರಿ ಅಂತಷ್ಟೇ ಅಲ್ಲ, ‘ನೀನು ಕೊಡುತ್ತಿಲ್ಲ, ನಾನು ಕೊಡಲಾರೆ’ ಎಂದು ಕೂಡ
ಅರ್ಥೈಸಬಹುದು! ಡುಂ: ಅದು ನಲ್ಲೆಯ ಬಳಿ ನಲ್ಲನ ಆಗ್ರಹವೂ ಹೌದು! ನಾನು: ನನ್ನ ಸಮಕಾಲೀನ ಓದು ಏನೇನೂ ಸಾಲದು,
ಆದ್ದರಿಂದ ನನಗೆ ಅಂಕಣಬರಹದಲ್ಲಿ ಈ ಕವನಗಳನ್ನು ಉಲ್ಲೇಖಿಸುವುದಾಗಲಿಲ್ಲ, ಬಾಲ್ಯದಲ್ಲಿ ಕಲಿತ ಭಜನೆಗಳನ್ನಷ್ಟೇ ಅವಲಂಬಿಸ ಬೇಕಾಯ್ತು.

ಡುಂ: ಅದೇ ಉತ್ತಮ. ಜನರಿಗೆ ಅವೇ ಹೆಚ್ಚು ಪರಿಚಿತ. ನಾನು: ಅದೂ ಹೌದೆನ್ನಿ. ಆದರೂ ನೀವು ಕೋಟಿಸಿದ ಉದಾಹರಣೆಗಳು ನನ್ನ ಲೇಖನದ ತಿರುಳಿಗೆ ಪರ್ಫೆಕ್ಟಾಗಿ ಹೊಂದಿಕೊಳ್ಳುತ್ತಿದ್ದವು! ಡುಂ: ಅದೇನೆ ಇರಲಿ, ಒಂದು ಪದದಿಂದ ಅಂಕಣದ ತುಂಬಾ ಹಪ್ಪಳ ಸಂಡಿಗೆ ಒಣಗಿಸಬಲ್ಲ ನಿಮ್ಮ ಜಾಣ್ಮೆ ಮೆಚ್ಚಲೇಬೇಕು! ನಾನು: ಹಾಗೆ ನನ್ನಲ್ಲಿ ಹೇಳುವುದೂ ಅಪಾಯವೇ! ಮುಂದಿನ ವಾರ ಅಂಕಣದಲ್ಲಿ ಹಪ್ಪಳ ಸಂಡಿಗೆಗಳೇ ರಾರಾಜಿಸಿಯಾವು! ಡುಂ: ಅಂಕಣ-ಅಂಗಳ-ಹಪ್ಪಳ-ಸಂಡಿಗೆ ಮುಂದಿನ ಸಂಡೆಗೆ! ನಾನು: ನೋಡಿ! ನೀವು ಅಲ್ಲೇ ಒಂದು ಹನಿ ಉದುರಿಸಿದ್ರಿ. ಸಂಡಿಗೆ ‘ನೆನೆ’ಯುವಷ್ಟು!

ಡುಂ: (ನಗುಮುಖ) ಇದು, ಈ ಅಂಕಣಬರಹ ಹುಟ್ಟಿದ ಸಮಯ! (‘ಹಾಡು ಹುಟ್ಟಿದ ಸಮಯ’ ಅಂತ ಮಣಿಕಾಂತ್ ಬರೆಯುತ್ತಿದ್ದ ಪ್ರಖ್ಯಾತ
ಅಂಕಣವನ್ನು ನೆನಪಿಸಿಕೊಳ್ಳಿ). ಸರಿ, ಸಂಡಿಗೆ ಟಾಪಿಕ್ ಏನೋ ಆಯ್ದುಕೊಂಡಾಯ್ತು, ಆದರೆ ಅಂಕಣ ತುಂಬುವುದಕ್ಕೆ ಸರಕು? ನಾನು ಸಂಡಿಗೆ ಚಪ್ಪರಿಸುವುದನ್ನಷ್ಟೇ ಬಲ್ಲೆನೇ ಹೊರತು ಸಂಡಿಗೆ ತಯಾರಿಯಲ್ಲಿ ನನ್ನದು ಸೊನ್ನೆ ಪರಿಣತಿ. ಮಾತ್ರವಲ್ಲ ಈಗ ಯುಟ್ಯೂಬ್ ವಾಹಿನಿಗಳಲ್ಲಿ ಸಂಡಿಗೆ ತಯಾರಿಯ ವಿಡಿಯೊಗಳು ನಿಮಗೆ ದಂಡಿಯಾಗಿ ಸಿಗುತ್ತವೆ.

ನಾನೇನಿದೆ ಹೊಸದಾಗಿ ಹೇಳುವಂಥದ್ದು? ಆದ್ದರಿಂದ ನೀವಿಲ್ಲಿ ಹೊಸರುಚಿಯೇನನ್ನಾದರೂ, ಹೊಸ ನಮೂನೆಯ ಸಂಡಿಗೆ ತಯಾರಿಯೇ ನನ್ನಾದರೂ, ನಿರೀಕ್ಷಿಸಬೇಡಿ. ಬದಲಿಗೆ ‘ಅಕ್ಷರ ಸಂಡಿಗೆ’ ಎಂಬ ಈ ಕಾನ್ಸೆಪ್ಟನ್ನು ಒಪ್ಪಿಸಿಕೊಳ್ಳಿ. ಕನ್ನಡ ಸಾಹಿತ್ಯದಲ್ಲಿ ಸಂಡಿಗೆಯ ಉಲ್ಲೇಖ ಎಲ್ಲೆಲ್ಲಿ ಆಗಿದೆ ಎಂದು ಪಟ್ಟಿಮಾಡುವ, ಅದರಲ್ಲೇ ಸ್ವಾರಸ್ಯವನ್ನು ಕಂಡುಕೊಳ್ಳುವ, ಒಂದು ಚಿಕ್ಕ ಪ್ರಯತ್ನವಿದು. ಮಗ್ರವಲ್ಲ, ಇಲ್ಲಿರುವುದೆಲ್ಲವೂ ಸ್ವಾಧ್ಯಯನದಿಂದ ದಕ್ಕಿದ್ದಲ್ಲ.

ಅಲ್ಲಿಇಲ್ಲಿ ಓದಿದ್ದೊಂದಿಷ್ಟು, ನೆನಪಿಗೆ ಬಂದದ್ದೊಂದಿಷ್ಟು, ಗೂಗಲೇಶ್ವರನ ವರಪ್ರಸಾದ ಮತ್ತೊಂದಿಷ್ಟು. ಒಟ್ಟಿನಲ್ಲಿ ಸಂಡಿಗೆಯಷ್ಟೇ ರುಚಿಕರವಾಗಿರುತ್ತದೆಂಬ ಆಶಯ ನನ್ನದು. ತಲೆಬರಹದಲ್ಲೂ ಸೂಚ್ಯವಾಗಿ ಅದನ್ನೇ ಹೇಳಿದ್ದು. ಮೊದಲನೆಯದಾಗಿ, ಸಂಡಿಗೆ ಪದಕ್ಕೆ ಕಿಟೆಲ್ ಕೋಶದಲ್ಲಿ ಏನು ಅರ್ಥ ಕೊಟ್ಟಿದ್ದಾರೆಂದು ನೋಡೋಣ. ಅಲ್ಲಿ ಸಂಡಿಗೆ ಎಂಬ ಎಂಟ್ರಿ ಇಲ್ಲ, ಅಲ್ಲಿರುವುದು ‘ಸಣ್ಡಿಗೆ’! ಅದೇ ಸರಿಯಾದ ರೂಪ. ಹಿಂದೆಲ್ಲ ಅನುಸ್ವಾರದ ಬದಲಿಗೆ ಆಯಾ ಅನುನಾಸಿಕ ಅಕ್ಷರಗಳ  ಬಳಸುತ್ತಿದ್ದದ್ದು.

ಸಣ್ಡಿಗೆ = A condiment or seasoning of grain or pulse made with chilies, salt etc., dried and fried in oil or ghee. ಇದು ಕಿಟೆಲ್ ಕೊಟ್ಟಿರುವ ವಿವರಣೆ. ನಿಘಂಟು ತಯಾರಿಯ ವೇಳೆ ಕಿಟೆಲ್‌ಗೆ ಯಾವ ನಮೂನೆಯ ಸಂಡಿಗೆಗಳ ರುಚಿ
ಪರಿಚಯವಾಗಿರಬಹುದು ಎಂದು ನನಗೊಂದು ಕುತೂಹಲ. ಸಣ್ಡಿಗೆ ಪದ ‘ಷಣ್ಡಕ’ ಸಂಸ್ಕೃತ ಪದದ ತದ್ಭವ ಎಂದು ತಿಳಿಸುತ್ತಿದೆ ಕಿಟೆಲ್ ಕೋಶ. ಪರಂತು ಈ ಲೇಖನದಲ್ಲಿ ನಾವು ಸಂಸ್ಕೃತ ಷಣ್ಡಕದ ಗೊಡವೆಗೆ ಹೋಗದೆ ಕನ್ನಡದ ಸಣ್ಡಿಗೆಯನ್ನಷ್ಟೇ ಸವಿಯೋಣ. ಕಿಟೆಲ್ ಕೋಶದಲ್ಲಿ ಸಾಮಾನ್ಯವಾಗಿ ಪದದ ಅರ್ಥವನ್ನಷ್ಟೇ ಅಲ್ಲದೆ ಆ ಪದ ಬಳಕೆಯಾಗಿರುವ ಗಾದೆ ನುಡಿಗಟ್ಟುಗಳೇ ನಾದರೂ ಇದ್ದರೆ ಅವು ಗಳನ್ನೂ ದಾಖಲಿಸಿದ್ದಿರುತ್ತದೆ.

‘ಸಣ್ಡಿಗೆ ಹುರಿಯಬೇಕಾದರೆ ಮಣ್ಡೆ ಕೆಳಗೆ ಮಾಡಬೇಕೇ?’ ಅಂತ ಒಂದು ಗಾದೆ ಇದೆಯಂತೆ. ಯಾವ ಸಂದರ್ಭದಲ್ಲಿ ಬಳಸುವುದೆಂದು
ನನಗೆ ಗೊತ್ತಿಲ್ಲ. ‘ಮನೇ ತಿಮ್ಬುವವನಿಗೆ ಕದ ಹಪ್ಪಳ ಸಣ್ಡಿಗೆ’ ಅಂತ ಇನ್ನೊಂದು ಗಾದೆ. ಮನೆಯನ್ನೇ ತಿನ್ನುವುದಾದರೆ ಮನೆಯ ಕಿಟಿಕಿಬಾಗಿಲುಗಳು ಸಂಡಿಗೆ ಇದ್ದಂತೆ ಎಂದು ಇದರ ಇಂಗಿತವಿರಬಹುದು.

ಮನೆಯ ಬಾಗಿಲುಗಳೇ ಸಂಡಿಗೆ ಎಂದಾಗ ನೆನಪಾಯ್ತು, ಮನೆ ಬಾಗಿಲಿಗೇ ಸಂಡಿಗೆ ತಂದುಕೊಡುವ ಒಂದು ವಿನೂತನ ವ್ಯವಸ್ಥೆ. ನಾನಿದರ ಬಗ್ಗೆ ಓದಿದ್ದು ನಾಲ್ಕೈದು ವರ್ಷಗಳ ಹಿಂದೆ, ಉದಯವಾಣಿಯಲ್ಲಿ. ಆಗಿನ್ನೂ ಕೋವಿಡಾಯನ ಆರಂಭವಾಗಿರಲಿಲ್ಲ. ಬೆಂಗ ಳೂರಿನಲ್ಲಿ ಐಟಿ ಉದ್ಯೋಗಿಗಳಾದ ನಾಲ್ವರು- ರಂಜನ್, ಭೂಷಣ್, ರವಿ, ಮತ್ತು ಸಂಧ್ಯಾ- ಕೂಡಿಕೊಂಡು ಆರಂಭಿಸಿದ ಒಂದು ಉಪ-ಉದ್ಯಮ. sandigeatdoors.com ಎಂಬ ಜಾಲತಾಣ ಸ್ಥಾಪಿಸಿ ಅಲ್ಲಿ ಸಂಡಿಗೆ ಆರ್ಡರ್ ಪಡೆಯುವುದು. ಬೆಂಗಳೂರು ನಗರದ ವ್ಯಾಪ್ತಿ ಯೊಳಗೆ ಗರಿಗರಿ ಸಂಡಿಗೆ ಡೋರ್ ಡೆಲಿವರಿ. ‘ಆಷಾಢದ ಗಾಳಿ ಮೈ ಸೋಕುತ್ತಿದೆ.

ಈ ಗಾಳಿಯೊಂದಿಗೆ ಮಳೆಯೂ ಜತೆಗೂಡಿದರೆ ಮೈ ತಣ್ಣಗಾಗಿ ನಡುಕ ಹುಟ್ಟುವುದರಲ್ಲಿ ಅನುಮಾನವೇ ಇಲ್ಲ. ಕೂಲ್ ಸಿಟಿ ಖ್ಯಾತಿಯ ಬೆಂಗಳೂರು ಮತ್ತಷ್ಟು ಕೋಲ್ಡ್ ಆಗಿ ಏನಾದರೂ ಕುರುಕಲು ತಿಂಡಿಯನ್ನು ಮೆಲ್ಲಬೇಕೆಂಬ ಆಸೆಯೂ ಆ ಕ್ಷಣವೇ ಹುಟ್ಟುತ್ತದೆ. ಬೆಂಗಳೂರಿ ಗರ ಈ ಬಾಯಿರುಚಿಯನ್ನು ತಣಿಸಲೆಂದೇ ಐಟಿ ಹುಡುಗರು ಸಂಡಿಗೆ ತಯಾರಿಸಿದ್ದಾರೆ. ಹಾಗೆ ಸಂಡಿಗೆ ತಯಾರಿಸಿ, ಅವರೇನೂ ಸುಮ್ಮನೆ ಕೂರುವುದಿಲ್ಲ.

ಅದನ್ನು ಮನೆಯ ಬಾಗಿಲಿಗೇ ತಲುಪಿಸುತ್ತಾರೆ!’ ಎಂದು ಉದಯವಾಣಿ ಬರೆದುಕೊಂಡಿತ್ತು. ಪ್ರಸ್ತುತ ಈ ಲೇಖನವನ್ನು ಬರೆಯುವಾಗ ದೃಢೀಕರಣಕ್ಕಾಗಿ ನಾನೊಮ್ಮೆ ಸಂಡಿಗೆ ಎಟ್ ಡೋರ‍್ಸ್ ಡಾಟ್ ಕಾಮ್ ಜಾಲತಾಣಕ್ಕೆ ಭೇಟಿಯಿತ್ತೆ. ಅದಿನ್ನೂ ಜೀವಂತವಾಗಿ ಇದೆ. ಸಂಡಿಗೆಯ ಭರ್ಜರಿ ಯಶಸ್ಸಿನ ಬಳಿಕ ಅಲ್ಲೀಗ ಹಪ್ಪಳ ಚಟ್ನಿಪುಡಿ ಮೆಂತ್ಯದ್ಹಿಟ್ಟು ಚಕ್ಕುಲಿ ಕೋಡುಬಳೆ ತೇಂಗೊಳಲು ಇತ್ಯಾದಿಯೂ ಸಿಗುತ್ತವಂತೆ. ಏನೇ ಇರಲಿ ಸಂಡಿಗೆಯ ಹೆಸರಲ್ಲಿ ಇಂಟರ್‌ನೆಟ್ ಡೊಮೇನ್ ನೋಂದಾಯಿಸಿದ ಆ ಟೆಕ್ಕಿಗಳ ಬಗ್ಗೆ ನನಗೆ ಹೆಮ್ಮೆಯಿದೆ.

ಈಗಿನ್ನು ನಮ್ಮ ಸಂಡಿಗೆ-ಸಾಹಿತ್ಯಮಂಥನ ಮುಂದುವರಿಸೋಣ. ಸಿ.ಆರ್.ಸತ್ಯ ಬರೆದ ‘ಆಚೆಮನೆ ಸುಬ್ಬಮ್ಮಂಗೆ ಇವತ್ತು ಏಕಾದ್ಸಿ ಉಪ್ವಾಸ…’ ಹಾಡನ್ನು ನೆನಪಿಸಿಕೊಳ್ಳಿ. ಅದರಲ್ಲಿ ‘ಮಧ್ಯಾನ್ಹ್ವೆಲ್ಲ ರವೇಉಂಡೆ ಹುರ್ಳೀಕಾಳಿನ ಉಸಲಿ| ಒಂದೊಂದ್ಸಲ ಬಿಸೀ ಸಂಡಿಗೆ
ಒಂದೋಎರಡೋ ಇಡ್ಲಿ||’ ಅಂದಮೇಲೆ ಸಂಡಿಗೆ ಸುಬ್ಬಮ್ಮಂಗೂ ಫೇವರಿಟ್ಟೇ ಅಂತಾಯ್ತು. ಸಂಡಿಗೆ ಯಾರಿಗೆ ಫೇವರಿಟ್ ಅಲ್ಲ ಅಂತಾ ಗ್ಬೇಕೇ! ಡೊಳ್ಳುಹೊಟ್ಟೆ ಗಣಪನಿಗೂ ಸಂಡಿಗೆ ತಿನ್ನಿಸಿದ್ದಾರೆ ಸಾವಿರ ಭಾಮಿನಿಯರ ಸರದಾರ(ಸಾವಿರಕ್ಕೂ ಹೆಚ್ಚು ಭಾಮಿನಿ ಷಟ್ಪದಿ ಗಳನ್ನು ರಚಿಸಿರುವ) ಸನ್ಮಿತ್ರ ತ.ನಾ.ಶಿವಕುಮಾರ. ‘ಹುಳಿಯ ತೊವ್ವೆಯ ಕಲೆಸಿ ಮಜ್ಜಿಗೆ| ಹುಳಿಯ ಜೊತೆಯಲಿ ಸೇರಿಸುತ್ತಲಿ| ಯಿಳಿಸುತಾಗಲೆಯರಳು ಸಂಡಿಗೆ ನೆಂಚಿಕೊಳ್ಳುತಲಿ| ಬಳಿಯಲಿದ್ದಾಕೋಡುಬಳೆಗಳ| ಸೆಳೆದು ಸೊಂಡಿಲಿನಿಂದ ಬೇಗದಿ| ತಳಿತ
ಕೋಸಂಬರಿಯ ಜೊತೆಯಲಿ ತಿನ್ನತೊಡಗಿದನು||’ ಆಹಾ! ರುಚಿಯ ವಿಷಯದಲ್ಲಿ ಗಣೇಶನದೂ ಎಂಥ ಅಭಿರುಚಿ!

ಡುಂಡಿರಾಜ ಎನ್ನುವುದು ಗಣೇಶನದೇ ಒಂದು ಹೆಸರು ಎಂಬುದನ್ನು ಇಲ್ಲಿ ಸ್ಮರಿಸೋಣ. ಇನ್ನೊಂದು ಸಂಡಿಗೆ-ಷಟ್ಪದಿ ನನಗೆ ಸಿಕ್ಕಿದ್ದು ಚೆನ್ನಪ್ಪ ಕವಿ ವಿರಚಿತ ‘ಶರಣ ಲೀಲಾಮೃತ ಅಥವಾ ಬಸವ ಪುರಾಣ’ ಗ್ರಂಥದಲ್ಲಿ. ಇದು ಸುಮಾರು ಕ್ರಿ.ಶ ೧೭೫೦ರಲ್ಲಿ ರಚಿತವಾದ ಗ್ರಂಥವಂತೆ. ರೇಚಣ್ಣನೆಂಬ ಶಿವಶರಣ ನು ರುದ್ರಮುನಿದೇವರಿಗೆ ಅರ್ಪಿಸಿದ ಔತಣದ ಬಣ್ಣನೆ: ‘ಕಡುಬು ಕಜ್ಜಾಯಗಳು ಹೋಳಿಗೆ| ವಡೆಯು ಅತಿರಸ ದೋಸೆ ಗಾರಿಗೆ| ಮಡಿಕೆ ಹೂರಿಗೆ ಚಕ್ಲಿ ಹಪ್ಪಳ ಸಂಡಿಗೆಯು ಭಕ್ಷ್ಯ| ಕೊಡ ಕೊಡದಿ ಪರಮಾನ್ನ ಪಾಯಸ| ಅಡಿಗೆಗಳ ನಿಳುಹಿದರು ಬೇಗದಿ| ಬಿಡದೆ ಪರಿಪರಿ ಶಾಕಪಾಕಾದಿಗಳನಿಳುಹಿದರು|’ ಇದರಿಂದ ನಾವು ತಿಳಿದುಕೊಳ್ಳಬಹುದಾದ್ದೇನೆಂದರೆ ಸಂಡಿಗೆ ಆಧುನಿಕ ತಿಂಡಿ ಅಲ್ಲ.

ಶತಮಾನಗಳ ಇತಿಹಾಸವುಳ್ಳದ್ದೇ. 15ನೆಯ ಶತಮಾನದಲ್ಲಿ ಬಾಳಿದ್ದ ಪುರಂದರದಾಸರಿಗೂ ಗೊತ್ತಿತ್ತದ್ದೇ. ‘ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು…’ ಎಂಬ ಕೀರ್ತನೆಯಲ್ಲಿ, ಅನಾರೋಗ್ಯದಿಂದ ಬಳಲುವ ಹೆಂಡತಿಯು ಆರೈಕೆ ಮಾಡುವ ಗಂಡನ ಬಳಿ ಸಲ್ಲಿಸುವ ಕೋರಿಕೆಗಳನ್ನು ಪಟ್ಟಿಮಾಡಿದ್ದಾರೆ. ಒಂದು ಚರಣ ಹೀಗಿದೆ:‘ಹಪ್ಪಳ ಕರಿದಿಡು ಸಂಡಿಗೆ ಹುರಿದಿಡು| ತುಪ್ಪದಿ ನಾಲ್ಕು ಚಕ್ಕುಲಿ ಕರಿದು| ಬಟ್ಟಲೊಳು ತುಪ್ಪ ಕೆನೆಮೊಸರ ಹಾಕಿಡು| ಬಚ್ಚಲಿಗೆ ಬರುತೇನೆ ನೀರ ಹದ ಮಾಡೊ||’ ಹಾಗೆಯೇ ‘ಆರೋಗಣೆಯ
ಮಾಡೇಳಯ್ಯ ಶ್ರೀಮನ್ನಾರಾಯಣ…’ ಎಂಬ ಕೀರ್ತನೆಯಲ್ಲಿ ‘ಹಪ್ಪಳ ಸಂಡಿಗೆ ವಿವಿಧ ಶಾಕಂಗಳು| ತುಪ್ಪ ಸಕ್ಕರೆ ಹಣ್ಣು- ಹಂಪಲವು| ಕರ್ಪೂರ ಕಸ್ತೂರಿ ಬೆರೆಸಿದ ಸೀಕರಣೆ| ಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ…’ ಎಂದು ಬರುತ್ತದೆ.

‘ನಿನ್ನ ನಾಮವೆ ಎನಗೆ ಅಮೃತಾನ್ನವು…’ ಕೀರ್ತನೆಯಲ್ಲಿ ಭಗವಂತನ ಒಂದೊಂದು ನಾಮಕ್ಕೆ ಒಂದೊಂದು ಭಕ್ಷ್ಯ: ‘ನಾರಾಯಣ ನಿನ್ನ
ನಾಮ ನೊರೆಹಾಲು ಸಕ್ಕರೆ| ಶ್ರೀರಾಮನಾಮ ಸರವಳಿಗೆ ಸಜ್ಜಿಗೆ| ಕಾರುಣ್ಯನಿಧಿ ನಾಮ ಕರಿದ ಹಪ್ಪಳ ಸಂಡಿಗೆ| ಪಾರಾಯಣ ನಾಮ ಪರಿಪರಿಯ ಪರಮಾನ್ನ’. ಸಂಡಿಗೆ ಬರುವ ಚರಣವನ್ನಷ್ಟೇ ಇಲ್ಲಿ ಎತ್ತಿಕೊಂಡಿದ್ದೇನೆ. ಇಡೀ ಕೀರ್ತನೆಯನ್ನು ಬರೆದೆನೋ ನಿಮ್ಮ ಬಾಯಿ ಯಲ್ಲಿ ನೀರಿನ ಕನ್ನಂಬಾಡಿ ಕಟ್ಟೆ ಒಡೆಯುವುದು ಗ್ಯಾರಂಟಿ.

ಪುರಂದರದಾಸರಷ್ಟೇ ಅಲ್ಲ, ಆ ಕಾಲದ ಇತರ ದಾಸರಿಗೂ ಸಂಡಿಗೆ ಗೊತ್ತಿತ್ತು. ವಿಜಯದಾಸರ ‘ಊಟವನು ಮಾಡು ಬಾ ಉದಧಿ ಶಯನಾ…’ ಕೀರ್ತನೆಯ ಮೊದಲ ಚರಣ ಗಮನಿಸಿ: ‘ಕಾಯಿಪಲ್ಲೆ ಒಂದೊಂದು ನೂರು ಪರಿ| ತೋಯ ಸಂಡಿಗೆ ಪಳದೆ ಹುಳಿಸಾರು| ಪಾಯಸ ನೊರೆಹಾಲು ಸಕ್ಕರೆಗೂಡಿಸಿ| ತಾಯಿ ದೇವಕಿಯು ಎಡೆಯ ಮಾಡಿದಳು ತಂದು|’ ಇಂದಿರೇಶರ ‘ತುರುವ ಕಾಯಲು ಕಳುಹಿ ದಳು ತನ್ನ ಬಾಲನ…’ ಕೀರ್ತನೆಯಲ್ಲಿ ‘ಕರೆದು ಪಾಲನು ಕುಡಿಸುತಿಹಳು ನಿಂಬು| ಪರಿಮಳುಪ್ಪಿನಕಾಯ ಬುತ್ತಿ ಕಟ್ಟಿದಳು| ಸುರಭಿಯ ಮೊಸರು ಬೆಣ್ಣೆಯನು ದೋಸೆ| ಸುರುಳಿ ಹೋಳಿಗೆ ಮಂಡಿಗೆಯ ಕಟ್ಟಿದಳು ಸಂಡಿಗೆಯ ಕಟ್ಟಿದಳು|’ ದನ ಕಾಯಲಿಕ್ಕೆ ಹೊರಟ ಕೃಷ್ಣನ ಕೈಯಲ್ಲಿ ಗೋಪಿಯು ಕೊಟ್ಟ ಬುತ್ತಿ ಅದು.

ಇನ್ನು, ಶ್ರಾವಣ ಶುಕ್ರವಾರದಂದು ಲಕ್ಷ್ಮಿಯನ್ನು ಕರೆಯುತ್ತ ಹರಪನಹಳ್ಳಿ ಭೀಮವ್ವ ಬರೆದ ಕೀರ್ತನೆಯಲ್ಲಿ ‘ಭಕ್ಷ್ಯಶಾವಿಗೆ ಪರಮಾನ್ನ
ಚಿತ್ರಾನ್ನ ಸ| ಣ್ಣಕ್ಕಿ ಶಾಲ್ಯಾನ್ನ ಸೂಪಗಳು| ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ| ಹಪ್ಪಳ ಸಂಡಿಗೆ ಆಂಬೊಡೆಗಳು’ ಇವೆಲ್ಲ ಲಕ್ಷ್ಮಿಗೆ ನೈವೇದ್ಯ. ಇನ್ನೊಂದು ಕೀರ್ತನೆಯಲ್ಲಿ ದ್ರೌಪದಿಗೆ ಬಡಿಸಿದ ಭೂಮದೂಟದ ಬಣ್ಣನೆ: ‘ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ| ಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು| ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟಿವಿ ಮಾಲತಿಯು ಗೌಲಿ| ಬಟ್ಟಲೊಳ್ ತಂಬಿಟ್ಟು ಪರಡಿ ಪಾಯಸ ಘೃತ ಸಕ್ಕರೆಯು…’ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ಯಲ್ಲಿ, ಯು.ಆರ್. ಅನಂತಮೂರ್ತಿ ಯವರ ‘ಸಂಸ್ಕಾರ’ದಲ್ಲಿ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ದಲ್ಲಿ… ಯು ನೇಮ್ ಇಟ್ ದೆರ್ ಈಸ್ ಸಂಡಿಗೆ ಇನ್ ಇಟ್ ಎನ್ನುತ್ತದೆ ಗೂಗಲ್.

ನಾನು ಈ ಕೃತಿಗಳನ್ನೆಲ್ಲ ಓದಿದವನಲ್ಲವಾದ್ದರಿಂದ ಸಂಡಿಗೆ ಬಣ್ಣನೆ ಎಲ್ಲಿ ಯಾವಾಗ ಬರುತ್ತದೆ ಎಂದು, ಓದಿಕೊಂಡವನಂತೆ ಪೋಸು
ಕೊಟ್ಟು ಬರೆಯುವುದು ನನಗಿಷ್ಟವಿಲ್ಲ. ಅದಕ್ಕಿಂತ, ಸುಧಾ ಮೂರ್ತಿಯವರ ‘ಸಾಮಾನ್ಯರಲ್ಲಿ ಅಸಾಮಾನ್ಯರು’ ಕೃತಿಯಲ್ಲಿ, ಅಂದರೆ ನಾನೋದಿರುವ ಪುಸ್ತಕದಲ್ಲಿ, ಕಂಡಕ್ಟರ್ ಭೀಮಣ್ಣನ ಆಶುಕವಿತೆಯೊಂದನ್ನು ಕೋಟಿಸುತ್ತೇನೆ: ‘ಹರಕು ಭಕ್ಕರಿ ಲೇಸು| ಮುರುಕು ಹೋಳಿಗೆ ಲೇಸು| ಕುರು ಕುರು ಸಂಡಿಗೆ ಲೇಸೆಂದ ಸರ್ವಜ್ಞ!’ ಹಾಗೆಯೇ, ರತ್ನಸುತ ಎಂಬ ಕಾವ್ಯನಾಮದ ಬ್ಲಾಗಿಗ ಭರತ್ ವೆಂಕಟ ಸ್ವಾಮಿ ಎಂಬುವರ ಬ್ಲಾಗಿನಲ್ಲಿ ನಾನೋದಿದ ಒಂದು ಕವಿತೆಯನ್ನೂ ಕೋಟಿಸುತ್ತೇನೆ.

ಮಂಗಗಳು ಕಾಡಿನಿಂದ ನಾಡಿಗೆ ಬಂದು ಧಾಂಧಲೆಯೆಬ್ಬಿಸಿದ್ದರ ಬಣ್ಣನೆ. ಅದರಲ್ಲಿ ‘ದಿನಸಿ ಅಂಗಡಿ ಡಬ್ಬಿಯೊಳಗೆ| ಒಣ ದ್ರಾಕ್ಷಿ ಮಂಗ ಮಾಯ| ಪುಟ್ಟ ಕಂದನು ಕೈಲಿ ಹಿಡಿದ| ಲಾಲಿಪಪ್ಪಿಗೆ ಪರಚು ಗಾಯ| ಮನೆ ಆಚೆ ಒಣಗಿಸಿಟ್ಟ| ಸಂಡಿಗೆ ಸೀರೆ ಸಹಿತ ಲೂಟಿ| ಕಲ್ಲು
ಹೊಡೆದರೆ ಬೆನ್ನು ಹತ್ತುವ| ಒಂದೊಂದೂ ಭಾರಿ ಘಾಟಿ’ ಚರಣ. ಸಂಡಿಗೆ ಹಾಕಲಿಕ್ಕೆ ಹಳೆಯ ಕಾಟನ್ ಸೀರೆ ಅಥವಾ ಕೌದಿಯಂಥದನ್ನು ಬಳಸುವುದಿದೆ, ಇಲ್ಲಿ ಮಂಗ ಬಂದು ಅದನ್ನೇ ಹೊತ್ತುಕೊಂಡು ಹೋಗುವ ಚಿತ್ರಣ.

ಖುಷಿಯಾಯ್ತು ಇದನ್ನೋದಿ. ಅಂದಹಾಗೆ ಸಂಡಿಗೆ ಹಾಕಲು ಹಳೇ ಸೀರೆ ಬಳಸುವುದು ನಗರ ಪ್ರದೇಶದವರು. ನಮ್ಮ ಹಳ್ಳಿಯಲ್ಲಾದರೆ ಬಾಳೆಎಲೆ, ಅಥವಾ ಅದಕ್ಕಿಂತಲೂ ಬೆಸ್ಟ್ ಅಂದರೆ ಒಂದು ಜಾತಿಯ ಕೆಸುವಿನ ಎಲೆ(ಪತ್ರೊಡೆ ಮಾಡುವಂಥದ್ದಲ್ಲ). ಅದರ ಬೆನ್ನ ಮೇಲಿನ ಗೀರುಗಳ ಮಧ್ಯೆ ಇರುವ ಪಾತಿಗಳು ಸಂಡಿಗೆ ಇಡಲಿಕ್ಕೆ ಪ್ರಕೃತಿನಿರ್ಮಿತ ಎಂಬಂತೆ ಇರುತ್ತವೆ. ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೋಳೆಗಳ ಸಂಡಿಗೆ ನಮ್ಮಮ್ಮ ಹಾಕುತ್ತಿದ್ದದ್ದು ಅಂತಹ ಎಲೆಗೆಳ ಮೇಲೆಯೇ. ಆ ಸಂಡಿಗೆ ಎಣ್ಣೆಯಲ್ಲಿ ಕರಿಯುವುದಕ್ಕಷ್ಟೇ ಅಲ್ಲ, ನೀರಿನಲ್ಲಿ ಸ್ವಲ್ಪಹೊತ್ತು ನೆನೆಸಿಟ್ಟು ಮೆದುಗೊಳಿಸಿದರೆ ರುಚಿರುಚಿಯಾದ ಪಲ್ಯ ಮಾಡಲಿಕ್ಕೂ ಆಗುತ್ತದೆ!

‘ಭೋಜನಕ್ಕೆ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ’ ಎಂಬೊಂದು ಪಟ್ಟಿಯನ್ನೂ ನೋಡಿದೆ ಇಂಟರ್‌ನೆಟ್‌ನಲ್ಲಿ. ಬಡಿಸುವ ಕ್ರಮಾನುಸಾರ ಭಗವಂತನ 24 ನಾಮಗಳು ಯಾವ್ಯಾವ ತಿಂಡಿತಿನಸಿಗೆ ಅನ್ವಯವಾಗುತ್ತವೆ ಎಂಬ ಕೋಷ್ಟಕ. ಅದರ ಪ್ರಕಾರ ಅನ್ನ- ಕೇಶವ; ಪಾಯಸ- ನಾರಾಯಣ; ಸಿಹಿಪದಾರ್ಥ- ಮಾಧವ; ಹಾಲು- ಗೋವಿಂದ; ತುಪ್ಪ- ವಿಷ್ಣು; ಹೋಳಿಗೆ- ಮಧುಸೂದನ; ಬೆಣ್ಣೆ- ತ್ರಿವಿಕ್ರಮ; ಮೊಸರು- ವಾಮನ… ಹೀಗೆ ಮುಂದುವರಿದು ‘ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥ ಗಳು, ಹಪ್ಪಳ ಸಂಡಿಗೆ ಮುಂತಾದುವು- ನರಸಿಂಹ’ ಅಂತೆ. ಲಕ್ಷ್ಮೀನರಸಿಂಹ ನಮ್ಮ ಕುಲದೇವರು ಸಂಡಿಗೆಪ್ರಿಯ ಅಂತಾಯ್ತು!