Wednesday, 9th October 2024

ಆರ್ಥಿಕತೆಗೆ ಆಹಾರ, ಸಾಮಾಜಿಕ ಭದ್ರತೆಯ ಬಲ

ಅಭಿಮತ

ಚಂದ್ರಶೇಖರ ಬೇರಿಕೆ

chandrashekherberike@gmail.com

ದೇಶದ ಆರ್ಥಿಕತೆಯ ಕೈಗಳು ಎಂದೆನಿಸಿಕೊಂಡಿರುವ ಅಸಂಘಟಿತ ವಲಯದ ಕಾರ್ಮಿಕರ ಬವಣೆ ಇಂದು ನಿನ್ನೆಯದಲ್ಲ. ಜೀವನ ಕಷ್ಟಗಳು ಬಳುವಳಿಯ ರೂಪದಲ್ಲಿ ಆ ವರ್ಗವನ್ನು ಹಿಂಬಾಲಿಸಿಕೊಂಡೇ ಬಂದಿದೆಯಾದರೂ ಅದೊಂದು ಧ್ವನಿ ಕಳೆದುಕೊಂಡ ವರ್ಗವಾಗಿಯೇ ಉಳಿದುಕೊಂಡಿದೆ. ಅಂತೆಯೇ ಈ ವರ್ಗವು ರಾಷ್ಟ್ರ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರೂ ದುರ್ಬಲ ಸಾಮಾಜಿಕ ಹಾಗೂ ಅಸ್ಥಿರ ಆರ್ಥಿಕ ಸ್ಥಿತಿಗತಿಯ ತಮ್ಮ ಬದುಕನ್ನು ಕಟ್ಟಿಕೊಳ್ಳ ಬೇಕಾದ ಅನಿವಾರ್ಯತೆಯಿದೆ. ಈ ಅಸಂಘಟಿತ ಎಂಬ ಪದನಾಮವು ಆ ವರ್ಗದ ಸ್ಥಿತಿಗತಿಗಳಿಗೆ ಅನ್ವರ್ಥಕವಾಗಿದೆ ಎಂದರೆ ತಪ್ಪಾಗಲಾರದು.

ಈ ಅಸಂಘಟಿತ ವಲಯದಲ್ಲಿಯೇ ಅತಿ ದೊಡ್ಡ ವರ್ಗವೆಂದರೆ ವಲಸೆ ಕಾರ್ಮಿಕರ ವರ್ಗ. ಈ ವರ್ಗವು ಯಾವ ಬಗೆಯ ಸಮಸ್ಯೆಗಳನ್ನು ಅನುಭವಿಸುತ್ತಿದೆ ಎಂಬುದು ಬಹುತೇಕ ಜನರಿಗೆ ಅರಿವಿಗೆ ಬಂದಿರುವುದು ಬಹುಶಃ ಕರೋನಾ ಒಂದನೇ ಅಲೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಿಕೆಯಾದ ಸಂದರ್ಭದಲ್ಲಿ. ಅಸಂಖ್ಯಾತ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳುವ ಧಾವಂತದಲ್ಲಿ ತಮ್ಮ ಪರಿಕರಗಳು, ಪಾತ್ರೆ ಪಡಗ, ಬಟ್ಟೆ ಬರೆಗಳೊಂದಿಗೆ ಕೆಲಸದ ಸ್ಥಳಗಳಿಂದ ಮೈಲುಗಟ್ಟಲೆ ನಡೆದುಕೊಂಡು ಬಸ್ ನಿಲ್ದಾಣ, ರೈಲು ನಿಲ್ದಾಣಗಳಿಗೆ ಲಗ್ಗೆಯಿಟ್ಟಾಗಲೇ ಅವರ ಪರಿಸ್ಥಿತಿಯ ಭೀಕರತೆ ನಮ್ಮ ಅರಿವಿಗೆ ಬಂದಿರು ವುದು.

ಇನ್ನು ಕೆಲವು ಮಹಿಳಾ ಕಾರ್ಮಿಕರು ಚಿಕ್ಕ ಮಕ್ಕಳನ್ನು ಕಂಕುಳಲ್ಲಿ ಕೂರಿಸಿಕೊಂಡು ತೆರಳುತ್ತಿದ್ದ ದೃಶ್ಯ ಮಾನ ವೀಯ ಮನಸ್ಸುಗಳ ಹೃದಯವನ್ನು ಭಾರ ಗೊಳಿಸಿರುವುದೂ ಹೌದು. ಹಠಾತ್ ಲಾಕ್‌ಡೌನ್ ಸಂದರ್ಭದಲ್ಲಿ ಉಂಟಾದ ಅಡಚಣೆಗಳು, ಆಹಾರದ ಲಭ್ಯತೆ ಬಗೆಗಿನ ಗೊಂದಲಗಳು ಕಾರ್ಮಿಕ ವರ್ಗದಲ್ಲಿ ಒಂದು ಬಗೆಯ ಅಸ್ಥಿರತೆಯನ್ನು ಸೃಷ್ಟಿಸಿತ್ತು. ಈ ಎಲ್ಲಾ ಅವ್ಯವಸ್ಥೆಗಳ ಬಗ್ಗೆ ನ್ಯಾಯಾಲಯಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿ, ಸಂವಿಧಾನದ 21ನೇ ಪರಿಚ್ಛೇದದಿಂದ ಖಾತರಿಪಡಿಸಲಾಗಿರುವ ಜೀವಿಸುವ ಹಕ್ಕು ಪ್ರತಿಯೊಬ್ಬ ಮನುಷ್ಯನಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ನೀಡುತ್ತದೆ. ಜೀವನದ ಕನಿಷ್ಠ ಅಗತ್ಯತೆಗಳು, ಬಡವರಿಗೆ ಆಹಾರ ಭದ್ರತೆಯನ್ನು ಒದಗಿಸುವುದು ಎಲ್ಲಾ ರಾಜ್ಯ ಸರಕಾರಗಳ ಕರ್ತವ್ಯವಾಗಿದೆ’ ಎಂದೂ ತಿಳಿಸಿತ್ತು.

ಅಸಂಘಟಿತ ವಲಯದ ಈ ವಲಸೆ ಕಾರ್ಮಿಕರ ಜೀವನ ಕಥೆಯೇ ಹಾಗಿದೆ. ಹೊಟ್ಟೆಪಾಡಿಗಾಗಿ ತಮ್ಮ ಊರಿಂದ ನೂರಾರು, ಸಾವಿರಾರು ಮೈಲುಗಟ್ಟಲೆ ದೂರ ದೂರಿಗೆ ಹೋಗಿ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ. ಕೆಲಸದ ಸ್ಥಳಗಳಲ್ಲಿ ಸದಾ ಡೇರೆಗಳಲ್ಲಿ, ಗುಡಿಸಲುಗಳಲ್ಲಿ ವಾಸ. ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆಗಳ ಜತೆಗೆ ವಸತಿ, ಆರೋಗ್ಯ, ಶಿಕ್ಷಣ ಮುಂತಾದ ಕಲ್ಯಾಣ ಕಾರ್ಯಕ್ರಮಗಳು ಈ ವರ್ಗಗಳಿಗೆ ಸರಿಯಾಗಿ ತಲುಪುವುದೇ ಇಲ್ಲ. ಸದಾ ಅಪಾಯಕಾರಿ ಪರಿಸ್ಥಿತಿಯ ದುಡಿಯುವ ಈ ವರ್ಗವು ಉತ್ತಮ ಜೀವನ ಮಟ್ಟವನ್ನು ಹೊಂದುವ ಹಕ್ಕಿನಿಂದ ಮತ್ತು ಗೌರವಯುತ ಸಾಮಾಜಿಕ ಸ್ಥಿತಿಗತಿಗಳಿಂದ ವಂಚಿತವಾ ಗಿರುವುದು ವ್ಯವಸ್ಥೆ ಯ ಲೋಪಗಳಿಂದಲೇ ಹೊರತು ಅನ್ಯ ಕಾರಣಗಳಿಂದಲ್ಲ.

ಕೋವಿಡ್-19 ರ ಸಂದರ್ಭದಲ್ಲಿ ಕಠಿಣ ಲಾಕ್‌ಡೌನ್ ವಿಧಿಸಲ್ಪಟ್ಟಾಗ ಕಾರ್ಮಿಕರು ಸಾಮೂಹಿಕ ನಿರ್ಗಮನಕ್ಕೆ ಮುಂದಾದರು. ಇದರಿಂದಾಗಿ ಕರೋನಾ ಸಾಂಕ್ರಾಮಿಕ ವೇಗವಾಗಿ ಪಸರಿಸಿದ್ದರಿಂದ ಸಾವಿರಾರು ವಲಸೆ ಕಾರ್ಮಿಕರು ಜೀವ ಕಳೆದುಕೊಳ್ಳುವಂತಾಯಿತು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಯಾವುದೇ ವಲಸೆ ಕಾರ್ಮಿಕರ ರಿಜಿಸ್ಟರ್ ಅನ್ನು ಸರಕಾರದ ವತಿಯಿಂದ ನಿರ್ವಹಿಸಲಾಗಿಲ್ಲ’ ಎಂದು ಸ್ಪಷ್ಟಪಡಿಸಿತ್ತು.
ಅಂದರೆ ಈವರೆಗೆ ವಲಸೆ ಕಾರ್ಮಿಕರದ್ದಾಗಲೀ ಅಥವಾ ಒಟ್ಟಾರೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಂಬಂಧಪಟ್ಟ ಯಾವುದೇ ದತ್ತಾಂಶಗಳು ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಬಳಿಯಾಗಲೀ ಇರಲಿಲ್ಲ.

ತಂತ್ರಜ್ಞಾನದಲ್ಲಿ ದಾಪುಗಾಲಿಡುತ್ತಿರುವ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನೂ ಆಚರಿಸಿಕೊಂಡಿರುವ ನಮ್ಮ ದೇಶದಲ್ಲಿ ಆರ್ಥಿಕತೆಯ ತಳಹದಿ ಎಂದೆನಿಸಿಕೊಂಡಿರುವ ಅಸಂಘಟಿತ ಕಾರ್ಮಿಕರ ಕನಿಷ್ಠ ಮಾಹಿತಿಯೇ ಲಭ್ಯವಿಲ್ಲದಿರುವುದು ಆಶ್ಚರ್ಯವೇ ಸರಿ. ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯವೂ ತೀವ್ರ
ಅಸಮಧಾನವನ್ನು ವ್ಯಕ್ತಪಡಿಸಿತ್ತು. ಯಾವುದೇ ಸರಕಾರಿ ಬೆಂಬಲವಿಲ್ಲದೆ ಪ್ರತಿ ದಿನವೂ ದುಡಿಯುತ್ತಿರುವ ಕಾರ್ಮಿಕ ವರ್ಗದ ವಿಸ್ಕೃತ ಮಾಹಿತಿಯನ್ನು ಕ್ರೋಢೀ ಕರಿಸಿಡುವುದು ತುಂಬಾ ಅತ್ಯಗತ್ಯವಾಗಿದೆ. ಈ ಅನೌಪಚಾರಿಕ ಕಾರ್ಮಿಕರಿಗೆ ನ್ಯಾಯ ಒದಗಿಸುವಲ್ಲಿ ಮತ್ತು ಅವರ ಘನತೆಯನ್ನು ಪುನಃ ಸ್ಥಾಪಿಸುವಲ್ಲಿ ಈ ಡೇಟಾಬೇಸ್ ಪರಿಣಾಮಕಾರಿಯಾಗಲಿದೆ.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಭಾರತ ಸರಕಾರ ಇತ್ತೀಚೆಗೆ ಒಂದರ ನಂತರ ಒಂದರಂತೆ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವುಗಳೆಂದರೆ ಒಂದು ದೇಶ, ಒಂದು ಪಡಿತರ’ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ನೋಂದಣಿಗೆ ಇ-ಶ್ರಮ್ ತಂತ್ರಾಶ’. ಈ ಎರಡು ಯೋಜನೆಗಳ ನೇರ ಮತ್ತು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಅಸಂಘಟಿತ ವಲಯದ ಕಾರ್ಮಿಕರೇ ಆಗಿದ್ದಾರೆ ಎಂಬುದು ವಿಶೇಷ. ಒಂದು ದೇಶ, ಒಂದು ಪಡಿತರ ಯೋಜನೆಯ ಬಗ್ಗೆ ಭಾರತ ಸರ್ಕಾರ ಬಹಳ ಹಿಂದೆಯೇ ಚಿಂತಿಸಿತ್ತು. ದೇಶದಲ್ಲಿ ಒಂದನೇ ಅಲೆಯ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಎದುರಿಸಿದ ಸಂಕಷ್ಟದ ಹಿನ್ನೆಲೆಯಲ್ಲಿ ಈ ಯೋಜನೆಯ ಮಹತ್ವ ಇನ್ನಷ್ಟು ಹೆಚ್ಚಾಯಿತು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಬಲಪಡಿಸಲು
ಸರ್ವೋಚ್ಛ ನ್ಯಾಯಾಲಯವೂ ನಿರ್ದೇಶನ ನೀಡಿತ್ತು. ಈ ಹಿಂದಿನ ಪಡಿತರ ವ್ಯವಸ್ಥೆಯಲ್ಲಿ ಫಲಾನುಭವಿಗಳು ಪಡಿತರ ಯೋಜನೆಯಲ್ಲಿ ನೋಂದಾಯಿಸಿಕೊಂಡ ಸ್ಥಳದಿಂದ ಕಾರಣಾಂತರಗಳಿಂದ ಅಥವಾ ಕಾರ್ಯನಿಮಿತ್ತ ಹೊರಗಿದ್ದರೆ ಅವರು ತಮ್ಮ ಪಾಲಿನ ಪಡಿತರವನ್ನು ಬೇರೊಂದು ಕಡೆಯಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ.

ಆದರೆ ಭಾರತ ಸರಕಾರ ಈಗ ಜಾರಿಗೆ ತಂದಿರುವ ಈ ಹೊಸ ಪಡಿತರ ವ್ಯವಸ್ಥೆಯಲ್ಲಿ ಫಲಾನುಭವಿಗಳು ಭಾರತದ ಯಾವುದೇ ಪ್ರದೇಶದಲ್ಲಿದ್ದರೂ ಅಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ರಡಿ ಆಹಾರ ಧಾನ್ಯಗಳ ವಿತರಣೆಗಾಗಿನ ಅಡೆತಡೆಗಳನ್ನು ನಿವಾರಿಸಿ ವಲಸಿಗರಿಗೆ ಆಹಾರ ಭದ್ರತೆಯನ್ನು ಖಾತ್ರಿ ಪಡಿಸಲು ಒಂದು ದೇಶ, ಒಂದು ಪಡಿತರ ಯೋಜನೆಯು ಬಹಳ ಸಹಕಾರಿಯಾಗಲಿದೆ. ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಮತ್ತು ದೇಶದ ಎಲ್ಲಾ ಬಡವರ್ಗದವರಿಗೂ ಉಚಿತ ಪಡಿತರ ನೀಡುವುದೇ ಇದರ ಉದ್ದೇಶ. ಈ ಯೋಜನೆಯು ದೇಶಾದ್ಯಂತ ವಲಸಿಗ ಕಾರ್ಮಿಕರಿಗೆ ಬಹಳ ಪ್ರಯೋಜನಕಾರಿ ಎನಿಸಿದೆ.

ಈಗಾಗಲೇ ಈ ಯೋಜನೆಯನ್ನು ಹೆಚ್ಚಿನ ರಾಜ್ಯ ಸರಕಾರಗಳು ಅನುಷ್ಠಾನಗೊಳಿಸಿವೆ. ಈ ಯೋಜನೆ ಎಲ್ಲಾ ನಾಗರಿಕರ ಹಿತದೃಷ್ಟಿಯನ್ನಿಟ್ಟುಕೊಂಡು ಜಾರಿ ಗೊಳಿಸಲಾಗಿದೆಯಾದರೂ ಅದರಿಂದ ಹೆಚ್ಚಿನ ಲಾಭ ಆಗುವುದು ಅಸಂಘಟಿತ ವಲಯದ ವಲಸೆ ಕಾರ್ಮಿಕರಿಗೆ ಎನ್ನುವುದನ್ನು ಗಮನಿಸಬೇಕಾಗಿದೆ. ಹಾಗೆಯೇ ವಲಸಿಗರಿಗೆ ಆಹಾರ ಭದ್ರತೆಯನ್ನು ವಿಸ್ತರಿಸುವ ಪ್ರಮುಖ ಕಲ್ಯಾಣ ಕ್ರಮಗಳಲ್ಲಿ ಒಂದು ದೇಶ, ಒಂದು ಪಡಿತರ ಯೋಜನೆ ನಿರ್ಣಾಯಕ ಪಾತ್ರ ವಹಿಸಲಿದೆ.

ಇ-ಶ್ರಮ್ ತಂತ್ರಾಂಶ ಅಸಂಘಟಿತ ವಲಯದ ಕಾರ್ಮಿಕರ ಕುರಿತ ಸಮಗ್ರ ಮಾಹಿತಿ ಸಂಗ್ರಹದ ಮೂಲಕ ಈ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿನ ಮತ್ತೊಂದು ಯೋಜನೆಯಾಗಿದೆ. ಈ ವಲಯದ ಕಾರ್ಮಿಕರ ಕುರಿತ ಸಮಗ್ರ ಮಾಹಿತಿ ಸಂಗ್ರಹಕ್ಕಾಗಿ ಈ ಯೋಜನೆಯನ್ನು ಭಾರತ ಸರಕಾರವು ಆಗ 26, 2021ರಿಂದ ಜಾರಿಗೊಳಿಸಿರುತ್ತದೆ. ದೇಶದ ಆರ್ಥಿಕತೆಯ ಪಿರಮಿಡ್ಡಿನ ಬುನಾದಿಯಾಗಿರುವ ಅಸಂಘಟಿತ ಕಾರ್ಮಿಕರೇ ದೇಶದ ಆಸ್ತಿ. ದೇಶದಲ್ಲಿ ಸರಿ
ಸುಮಾರು 38 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ.

ಇದರಲ್ಲಿ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಹಾಲು ವಿತರಕರು, ಟ್ರಕ್ ಚಾಲಕರು, ಮೀನುಗಾರರು,
ಕೃಷಿ ಕಾರ್ಮಿಕರು, ಗಿಗ್ ಮತ್ತು ಪ್ಲಾಟ್ ಫಾರ್ಮ್ ಕಾರ್ಮಿಕರು ಮತ್ತು ಇದೇ ರೀತಿಯ ಇತರ ಕಾರ್ಮಿಕರು ಈ ಅಸಂಘಟಿತ ವಲಯದಲ್ಲಿದ್ದಾರೆ. ಅಸಂಘಟಿತ ವಲಯದಲ್ಲಿ ದುಡಿಯುವ ವರ್ಗಗಳನ್ನು ಒಂದೇ ವೇದಿಕೆಯಡಿ ತರುವುದು ಮತ್ತು ಈ ವರ್ಗದ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಕಲ್ಯಾಣ ಯೋಜನೆಗಳ ಹಲವಾರು ಪ್ರಯೋಜನಗಳನ್ನು ದೊರಕಿಸಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯೂ ಸಹ ಸರ್ವೋಚ್ಛ ನ್ಯಾಯಾ ಲಯದ ಆದೇಶಕ್ಕೆ ಅನುಸಾರವಾಗಿ ಅಸಂಘಟಿತ ಮತ್ತು ವಲಸೆ ಕಾರ್ಮಿಕರ ಹಿತರಕ್ಷಣೆಗಾಗಿ ಭಾರತ ಸರಕಾರವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ಮೂಲಕ ಜಾರಿಗೊಳಿಸಿರುವುದಾಗಿದೆ.

ಈ ತಂತ್ರಾಂಶದೊಂದಿಗೆ ಭಾರತ ಸರಕಾರವು ಈ ವರ್ಗದ ಕಾರ್ಮಿಕರ ಸಾಮಾಜಿಕ ಕಲ್ಯಾಣ ಮತ್ತು ಭದ್ರತಾ ಯೋಜನೆಗಳನ್ನು ರಾಜ್ಯಗಳು ಮತ್ತು ಕಾರ್ಮಿಕ
ಸಂಘಗಳೊಂದಿಗೆ ಪಾಲುದಾರಿಕೆಯನ್ನು ಬೆಸೆಯುವ ಗುರಿಯನ್ನು ಹೊಂದಿದೆ. ಕಾರ್ಮಿಕರು ತಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಬಳಸಿಕೊಂಡು ತಂತ್ರಾಂಶದಲ್ಲಿ ಸ್ವಯಂ ನೋಂದಣಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅಥವಾ ಜಿಲ್ಲೆಗಳು ಅಥವಾ ಉಪ ಜಿಲ್ಲೆಗಳಲ್ಲಿರುವ ರಾಜ್ಯ ಸರಕಾರದ ಕ್ಷೇತ್ರ ಕಚೇರಿಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಗೆ ಕಾರ್ಮಿಕ ಸಂಘಟನೆಗಳೂ ಸಾಥ್ ನೀಡಲಿದೆ.

ಅಸಂಘಟಿತ ವಲಯದಲ್ಲಿರುವ 16 ವರ್ಷದಿಂದ 60 ವರ್ಷದವರೆಗಿನ ಕಾರ್ಮಿಕರು ಇದರಡಿ ನೋಂದಾಯಿಸಿಕೊಳ್ಳಬಹುದು ಮತ್ತು ನೋಂದಾಯಿತರಿಗೆ  ಅಂಕಿಯನ್ನು ಹೊಂದಿರುವ ವಿಶಿಷ್ಟ ಇ-ಶ್ರಮ್ ಕಾರ್ಡ್ ಅನ್ನು ನೀಡಲಾಗುತ್ತದೆ. ದೇಶಾದ್ಯಂತ ಅಸಂಘಟಿತ ವಲಯದ 38 ಕೋಟಿ ಕಾರ್ಮಿಕರ ಪೈಕಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿzರೆ. ರಾಜ್ಯದಲ್ಲಿ ಸರಿ ಸುಮಾರು 50 ಲಕ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿದ್ದಾರೆ. ಒಟ್ಟಾರೆ ಅಸಂಘಟಿತ ವಲಯದ ೧.೮ ಕೋಟಿ ಕಾರ್ಮಿಕರನ್ನು ನೋಂದಾಯಿಸಲು ಕರ್ನಾಟಕ ರಾಜ್ಯಕ್ಕೆ ಗುರಿಯನ್ನು ನೀಡಲಾಗಿದೆ. ಈ ಯೋಜನೆಯ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆಯಲ್ಲಿ ಅಪಘಾತ ವಿಮೆಯನ್ನು ಕಲ್ಪಿಸಲಾಗುತ್ತದೆ.

ಕಾರ್ಮಿಕರು ಅಪಘಾತದಿಂದ ಮರಣ ಹೊಂದಿದರೆ ಅವರ ಅವಲಂಬಿತರಿಗೆ ಅಥವಾ ಶಾಶ್ವತ ಅಂಗವಿಕಲತೆಗೆ ಒಳಗಾದರೆ ಅಂತಹ ಕಾರ್ಮಿಕರಿಗೆ 2 ಲಕ್ಷ
ರುಪಾಯಿಗಳ ಪರಿಹಾರ ಹಾಗೆಯೇ ಭಾಗಶಃ ಅಂಗವಿಕಲತೆಗೆ ಒಳಗಾದರೆ 1 ಲಕ್ಷ ರುಪಾಯಿಗಳ ಪರಿಹಾರ ದೊರೆಯಲಿದೆ. ಇದರ ಹೊರತಾಗಿ ಸಾಮಾಜಿಕ ಭದ್ರತಾ ಸೌಲಭ್ಯಗಳು ಕೂಡಾ ಈ ತಂತ್ರಾಂಶದ ಮೂಲಕವೇ ದೊರೆಯಲಿದೆ. ಈ ಎಲ್ಲಾ ಸೌಲಭ್ಯಗಳನ್ನು ಹಾಗೂ ಯಾವುದಾದರೂ ವಿಪತ್ತು ಎದುರಾದರೆ ಅಂತಹ ಸಂದರ್ಭದಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಆರ್ಥಿಕ ನೆರವುಗಳನ್ನು ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಗಳ ಖಾತೆಗೆ ಜಮೆ
ಮಾಡಲು ಅನುಕೂಲವಾಗಲಿದೆ.

ಭಾರತ ಸರಕಾರವು ಜಾರಿ ಮಾಡಿರುವ ಈ ಎರಡೂ ಯೋಜನೆಗಳು ಸುಧಾರಣಾತ್ಮಕ ಮತ್ತು ಐತಿಹಾಸಿಕ ಹೆಜ್ಜೆಯಾಗಿದ್ದು ಮಹತ್ವಾಕಾಂಕ್ಷೆಯಿಂದ ಕೂಡಿದು ದ್ದಾಗಿದೆ. ಆರ್ಥಿಕತೆಯ ಕೈಗಳು ದೇಶದ ಯಾವುದೇ ಮೂಲೆಯಲ್ಲಿದ್ದರೂ ಅವರಿಗೆ ಆಹಾರ ಮತ್ತು ಸಾಮಾಜಿಕ ಭದ್ರತೆ ಯಂತಹ ಕಲ್ಯಾಣ ಕಾರ್ಯಕ್ರಮಗಳು ಪಾರದರ್ಶಕವಾಗಿ ಕಾಲಕಾಲಕ್ಕೆ ತಲುಪಬೇಕು ಎಂಬುದು ಈ ಯೋಜನೆಗಳ ಮೂಲ ಆಶಯ. ಹಾಗಾಗಿ ಇವುಗಳು ನಿಶ್ಚಿತವಾಗಿ ಉದ್ದೇಶಿತ ಗುರಿಯನ್ನು ಮತ್ತು ಅಭ್ಯುದಯವನ್ನು ಸಾಧಿಸಲು ಸಹಕಾರಿಯಾಗಲಿದೆ. ಬಹುದ್ದೇಶಿತ ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳು ಪ್ರಯೋಜನವನ್ನು ಪಡೆಯುವಂತಾಗಿ ಯೋಜನೆಯು ನಿರೀಕ್ಷಿತ ಯಶಸ್ಸು ಸಾಧಿಸಲು ಎಲ್ಲರೂ ಶ್ರಮಿಸೋಣ.